ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಪರಿಸರ ಸಂರಕ್ಷಣೆ: ಶಿಕ್ಷಣವೊಂದೇ ಸಾಕೇ?

ಪರಿಸರ ಸಂರಕ್ಷಣೆಯ ಪಾಠಕ್ಕೂ ಹೊರಪ್ರಪಂಚದ ಬದುಕಿಗೂ ನಡುವಿನ ಕಂದಕ ಕಿರಿದುಗೊಳಿಸಬೇಕಿದೆ
Last Updated 11 ಜೂನ್ 2021, 19:30 IST
ಅಕ್ಷರ ಗಾತ್ರ

ಪರಿಸರ ಮಾಲಿನ್ಯ, ಕಣ್ಮರೆಯಾಗುತ್ತಿರುವ ಅರಣ್ಯ, ವನ್ಯಜೀವಿಗಳು, ಕ್ಷೀಣಿಸುತ್ತಿರುವ ನಿಸರ್ಗ ಸಂಪನ್ಮೂಲಗಳು, ಬಡವಾಗುತ್ತಿರುವ ಜೀವವೈವಿಧ್ಯ, ನಗರಗಳಲ್ಲಿ ತ್ಯಾಜ್ಯ ವಸ್ತುಗಳ ನಿರ್ವಹಣೆ, ಸಂಚಾರ ದಟ್ಟಣೆ, ಆರೋಗ್ಯದ ತೊಂದರೆಯಂತಹ ಹಲವಾರು ಸಮಸ್ಯೆಗಳನ್ನು ಪರಿಹರಿಸುವ ಸರಳ ಮಾರ್ಗ ನಿಮಗೆ ಗೊತ್ತೇ? ಈ ವಿಷಯಗಳನ್ನು ಪ್ರಾರಂಭದಿಂದಲೇ ಶಾಲಾ ಶಿಕ್ಷಣದಲ್ಲಿ ಸೇರಿಸಿದರೆ ಸಾಕು, ಅವುಗಳ ಬಗ್ಗೆ ತಿಳಿದ ಮಕ್ಕಳು ಮುಂದೆ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆ ಎಂಬ ತೀರಾ ಸರಳೀಕೃತವಾದ ಅಭಿಪ್ರಾಯ ನಮ್ಮಲ್ಲಿ ಸಾರ್ವತ್ರಿಕವಾಗಿದೆ.

ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಎಲ್ಲ ಸಭೆ, ಸಮಾ ರಂಭ, ವಿಚಾರ ಸಂಕಿರಣ, ವಿದ್ವತ್ ಗೋಷ್ಠಿ, ಶಿಕ್ಷಣಕ್ಕೆ ಸಂಬಂಧಿಸಿದ ವರದಿಗಳಲ್ಲಿ ಈ ಅಭಿಪ್ರಾಯ ಮತ್ತೆ ಮತ್ತೆ ವ್ಯಕ್ತವಾಗುತ್ತ ಬಂದಿದೆ. ಹಾಗಾದರೆ ನಮ್ಮ ಶಿಕ್ಷಣಕ್ಕೆ ನಿಜವಾಗಿಯೂ ಅಂಥ ವಿಶಿಷ್ಟ ಸಾಮರ್ಥ್ಯವಿದೆಯೇ?

ಪರಿಸರಕ್ಕೆ ಸಂಬಂಧಿಸಿದ ಶಿಕ್ಷಣ ನಮಗೆ ಹೊಸದೇ ನಲ್ಲ. 1983-84ರಲ್ಲಿ ಕರ್ನಾಟಕ ಸರ್ಕಾರ ಹೊರತಂದ ಮೊದಲ ‘ಕರ್ನಾಟಕ ಪರಿಸರ ಪರಿಸ್ಥಿತಿ’ ವರದಿಯಲ್ಲಿ, ಆ ಕಾಲಘಟ್ಟದಲ್ಲೇ ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದ ಪಠ್ಯಪುಸ್ತಕಗಳಲ್ಲಿ ಪರಿಸರ ಅಧ್ಯಯನಕ್ಕೆ ಸಂಬಂಧಿಸಿದ ಬಹುತೇಕ ಮೂಲಭೂತ ಪರಿಕಲ್ಪನೆಗಳನ್ನು ಅಳವಡಿಸಿರು ವುದರ ಜೊತೆಗೆ, ಅವುಗಳನ್ನು ಬೋಧಿಸಲು ಶಿಕ್ಷಕರ ಕೈಪಿಡಿಗಳನ್ನು ಸಿದ್ಧಪಡಿಸಿರುವುದು ಕಂಡುಬರುತ್ತದೆ. ಈ ಪ್ರಯತ್ನಗಳಿಗೆ ಮತ್ತಷ್ಟು ಬಲ ಬಂದದ್ದು 1986ರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ನಂತರ. ಈ ನೀತಿಯನ್ನು ಆಧರಿಸಿದ ಸುಧಾರಣೆಗಳು ಪಠ್ಯ ಮತ್ತು ಪಾಠಕ್ರಮಗಳ ಮೂಲಕ ನಮ್ಮ ಶಾಲೆಗಳನ್ನು ಪ್ರವೇಶಿಸಿದ್ದು 1990ರ ಸುಮಾರಿಗೆ. ಆದರೆ ಹೆಚ್ಚು ಕಡಿಮೆ ಅದೇ ಸಮಯದಲ್ಲಿ ನಮ್ಮ ದೇಶದಲ್ಲಿ ಜಾಗತೀಕರಣ ಮತ್ತು ಉದಾರೀಕರಣದ ಪ್ರಕ್ರಿಯೆಗಳೂ ಪ್ರಾರಂಭವಾದವು. ಶಾಲೆಯ ಒಳಗೆ ಶಿಕ್ಷಕರು ಮತ್ತು ಪಠ್ಯಪುಸ್ತಕಗಳು ಹೊಸ ಉತ್ಸಾಹದಿಂದ ಪ್ರಕೃತಿ ಸಂಪನ್ಮೂಲಗಳ ಮಿತಬಳಕೆ, ಪುನರ್ಬಳಕೆ, ಸಂರಕ್ಷಣೆಯ ತತ್ವಗಳನ್ನು ಮಕ್ಕಳಿಗೆ ಪರಿಚಯಿಸುತ್ತಿದ್ದರೆ, ಶಾಲೆಯ ಹೊರಗಿನ ಪ್ರಪಂಚದಲ್ಲಿ ಭೋಗವಸ್ತುಗಳ ಬೆನ್ನುಹತ್ತಿ ಓಡುವ ಕೊಳ್ಳುಬಾಕತನದ ಹೊಸ ಜೀವನಶೈಲಿಗೆ ಸರ್ಕಾರದ ನೀತಿ, ನಿಲುವುಗಳೇ ಪ್ರೋತ್ಸಾಹ ನೀಡುತ್ತಿದ್ದವು.

ಪರಿಸರ ಮತ್ತು ಪರಿಸರ ಸಂರಕ್ಷಣೆಯ ಅರಿವಿಗೆ ಸಂಬಂಧಿಸಿದಂತೆ ಶಾಲೆಯ ಕಲಿಕೆಗೂ ದಿನನಿತ್ಯದ ಬದುಕಿಗೂ ಸಂಬಂಧವೇ ಇಲ್ಲದಂತಹ ವೈರುಧ್ಯದ ಪರಿಸ್ಥಿತಿ ಮತ್ತಷ್ಟು ತೀವ್ರವಾಗಲು ಪ್ರಾರಂಭವಾದದ್ದು ಆ ಸಮಯದಲ್ಲೇ. ಪರಿಸರದ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮೆಲ್ಲ ಪಠ್ಯಪುಸ್ತಕಗಳೂ ‘ಮಾಹಿತಿ ಕೊರತೆ’ಯ ಮಾದರಿಯನ್ನು (ಇನ್‍ಫರ್ಮೇಶನ್ ಡಿಫಿಸಿಟ್ ಮಾಡೆಲ್) ಅನುಸರಿಸುತ್ತವೆ. ‘ಶಾಲಾ ಮತ್ತು ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಮಹತ್ವ, ಅಗತ್ಯ, ವಿಧಾನಗಳ ಬಗ್ಗೆ ಮಾಹಿತಿಯ ಕೊರತೆ ಇದೆ. ಆ ಕೊರತೆಯನ್ನು ಪಠ್ಯಪುಸ್ತಕಗಳು ಮತ್ತು ತರಗತಿಯ ಬೋಧನೆಯ ಮೂಲಕ ತುಂಬಿದರೆ, ವಿದ್ಯಾರ್ಥಿಗಳು ಆ ವಿಷಯಗಳನ್ನು ಗ್ರಹಿಸಿ, ಪರಿಸರದ ಬಗೆಗಿನ ತಮ್ಮ ಯೋಚನೆ, ಧೋರಣೆ, ನಡವಳಿಕೆಗಳಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗುತ್ತಾರೆ’ ಎಂಬುದೇ ಈ ಮಾದರಿಯ ತತ್ವ ಮತ್ತು ನಿರೀಕ್ಷೆ. ಆದರೆ ಕೇವಲ ಮಾಹಿತಿ ನೀಡುವ ಶಿಕ್ಷಣದಿಂದ ಇಂಥ ಬದಲಾವಣೆ ಸಾಧ್ಯವಿಲ್ಲವೆಂಬುದನ್ನು ಅನೇಕ ಅಧ್ಯಯನಗಳು ಸ್ಪಷ್ಟವಾಗಿ ತೋರಿಸಿಕೊಟ್ಟಿವೆ.

ಶಾಲೆಯಲ್ಲಿನ ಕಲಿಕೆ ಮತ್ತು ಹೊರ ಪ್ರಪಂಚದ ಬದುಕಿನ ನಡುವಿನ ಈ ಕಂದಕವನ್ನು ಕಿರಿದುಗೊಳಿಸಿ, ಸಂಬಂಧಗಳನ್ನು ಕಲ್ಪಿಸುವ ಗಂಭೀರ ಪ್ರಯತ್ನವನ್ನು, ‘ನ್ಯಾಷನಲ್ ಕರಿಕ್ಯುಲಮ್ ಫ್ರೇಮ್‍ವರ್ಕ್’ 2005ರಲ್ಲಿ ಪ್ರಾರಂಭಿಸಿತು. ಕುತೂಹಲ, ಆಸಕ್ತಿಗಳು ತುಂಬಿ ತುಳುಕಿ ಸುತ್ತಮತ್ತಲಿನ ಪರಿಸರವನ್ನು ಪರಿಶೋಧಿಸುವ ಪ್ರವೃತ್ತಿ ಸಹಜವಾಗಿಯೇ ಇರುವ ಮಕ್ಕಳ ಆಸಕ್ತಿ, ಉತ್ಸಾಹಗಳನ್ನು ಪೋಷಿಸಿ ಬೆಳೆಸುವಂತಹ, ಸರಳವಾಗಿ ಬದಲಿಸ ಬಹುದಾದ ದಿನಚರಿಯನ್ನು ಶಾಲೆಗಳಲ್ಲಿ ತರುವಂತೆ ಸೂಚಿಸಿತು. ಸಲಹೆಯೇನೋ ಬಹು ಚಂದ. ಆದರೆ ಅದನ್ನು ಕಾರ್ಯರೂಪಕ್ಕೆ ತರುವುದು ಹೇಗೆ?

ಶಿಕ್ಷಣ, ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಮಂಡಳಿ (ಎನ್‍ಸಿಇಆರ್‌ಟಿ) ಈ ಸವಾಲನ್ನು ಅಂಗೀಕರಿಸಿ, ಶಾಲೆಯಲ್ಲಿನ ಪರಿಸರ ಪಾಠ ಮತ್ತು ಬದುಕಿನ ಪರಿಸರಗಳ ನಡುವೆ ಸಂಬಂಧ ಕಲ್ಪಿಸಲು ‘ಪ್ರಾಜೆಕ್ಟ್’ ಮಾದರಿಯ ಕಲಿಕೆಯನ್ನು ಬಳಕೆಗೆ ತಂದಿತು. ಶಾಲೆಯ ಹೊರಗಿನ ಪ್ರಪಂಚದ ಪರಿಸರ ಸಮಸ್ಯೆಗಳನ್ನು ಮಕ್ಕಳಿಗೆ ಪರಿಚಯಿಸಿ, ಅವುಗಳನ್ನು ಪರಿಹರಿಸುವ ದಿಕ್ಕಿನಲ್ಲಿ ಮಕ್ಕಳೇ ಸ್ವತಂತ್ರವಾಗಿ ಚಿಂತಿಸಿ, ಪರಿಹಾರವನ್ನು ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ಅವರಲ್ಲಿ ಬೆಳೆಸು ವುದು ಯೋಜನೆಯ ಉದ್ದೇಶವಾಗಿತ್ತು. ಇದಕ್ಕಾಗಿ 2009ರಲ್ಲಿ 6ರಿಂದ 10ನೆಯ ತರಗತಿಯ ವಿದ್ಯಾರ್ಥಿ ಗಳಿಗಾಗಿ 5 ಪ್ರತ್ಯೇಕ ಮಾರ್ಗದರ್ಶಿ ಕೈಪಿಡಿಗಳನ್ನು ಹೊರ ತರಲಾಯಿತು. ಆಯಾ ಹಂತದ ವಿದ್ಯಾರ್ಥಿಗಳ ಅರಿವಿನ ಮಟ್ಟಕ್ಕೆ ಅನುಗುಣವಾಗಿ ಪ್ರತೀ ಹಂತದಲ್ಲೂ 20 ಯೋಜನೆಗಳನ್ನು ಗುರುತಿಸಲಾಗಿತ್ತು. ನಾವಿಂದು ಎದುರಿ ಸುತ್ತಿರುವ ಬದುಕಿನ ಎಲ್ಲ ನೈಜ ಪರಿಸರ ಸಮಸ್ಯೆಗಳೂ ಈ ಯೋಜನೆಗಳಲ್ಲಿದ್ದವು. ವಿದ್ಯಾರ್ಥಿಗಳ ಸಣ್ಣ ಸಣ್ಣ ತಂಡಗಳು ಯಾವುದಾದರೊಂದು ಸಮಸ್ಯೆಯನ್ನು ಆರಿಸಿಕೊಂಡು, ಕೈಪಿಡಿಯ ಮಾರ್ಗದರ್ಶನದಿಂದ ಅಧ್ಯಯನ ನಡೆಸಬೇಕಿತ್ತು. ಹೀಗೆ ನಡೆಸಿದ ಅಧ್ಯಯನದ ಅಂತಿಮ ವರದಿಯನ್ನು ಸಾರ್ವಜನಿಕವಾಗಿ ಲಭ್ಯವಿರುವ ಜಾಲತಾಣದಲ್ಲಿ ದೊರಕುವಂತೆ ಹಾಕಬೇಕಿತ್ತು. ಇದರಿಂದ ದೇಶದ ವಿವಿಧ ಭಾಗಗಳಲ್ಲಿ, ಅಲ್ಲಿನ ಸ್ಥಳೀಯ ಪರಿಸರ ಸಮಸ್ಯೆಗಳು ಮತ್ತು ಅವುಗಳ ಪರಿಹಾರ ಮಾರ್ಗಗಳ ದೇಶವ್ಯಾಪಿ ಆಧಾರ ದತ್ತಾಂಶವನ್ನು ಸಿದ್ಧಪಡಿಸುವುದು ಯೋಜನೆಯ ಉದ್ದೇಶವಾಗಿತ್ತು.

ಈ ಇಡೀ ಯೋಜನೆಯ ಯಶಸ್ಸು ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಮುಖ್ಯಸ್ಥರು, ಆಡಳಿತ ಮಂಡಳಿ, ಪೋಷಕರು ಹಾಗೂ ನಾಗರಿಕ ಸಮಾಜದ ಆಸಕ್ತಿ, ಪ್ರೋತ್ಸಾಹಗಳ ಮೇಲೆ ಅವಲಂಬಿತವಾಗಿತ್ತು. ಅನೇಕ ಶಾಲೆಗಳು ಆಸ್ಥೆಯಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಿದವು. ಆದರೆ ತರಗತಿಯ ಪಾಠಗಳ ನಡುವೆಯೇ ವರ್ಷವಿಡೀ ಈ ಪ್ರಾಜೆಕ್ಟ್ ಮಾಡಿದರೂ ಅಂತಹ ಉಪಯುಕ್ತ ಕೆಲಸಕ್ಕೆ ಯಾವ ಅಂಕವೂ ದೊರೆಯುತ್ತಿರಲಿಲ್ಲ. ಹೀಗಾಗಿ ಶಾಲೆಯ ಕಲಿಕೆ-ಬದುಕಿನ ಗ್ರಹಿಕೆಗಳ ನಡುವೆ ಸಂಬಂಧವನ್ನು ಕಲ್ಪಿಸುವ ಸಾಮರ್ಥ್ಯ ಇದ್ದ ಈ ಯೋಜನೆ ಕ್ರಮೇಣ ಕೇವಲ ಒಂದು ಕಾಟಾಚಾರವಾಯಿತು. ಆದರೆ ಈ ಯಾವ ವ್ಯವಸ್ಥಿತ ವಿಧಾನಗಳಿಗೂ ಒಳಗಾಗದೇ, ಶಿಕ್ಷಕರು ಮತ್ತು ವಿದ್ಯಾರ್ಥಿ ಗಳು, ಪರಿಸರ ಪ್ರೀತಿ, ಕಾಳಜಿ, ಆಸಕ್ತಿಗಳಿಂದ ಪರಿಸರ ಸಂರಕ್ಷಣೆಯ ಕೆಲಸ ಮಾಡಿದ ಅನೇಕ ನಿದರ್ಶನಗಳು ದೊರೆಯುತ್ತವೆ. ನಮ್ಮ ರಾಜ್ಯದಲ್ಲಿ ಇಂತಹ ಅನೇಕ ಹಸಿರು ಶಾಲೆಗಳ ಅನುಕರಣೀಯ ಚಟುವಟಿಕೆಗಳನ್ನು ಸುಮಾರು ಎರಡು ದಶಕಗಳಷ್ಟು ಹಿಂದೆಯೇ, ‘ಕರ್ನಾಟಕ ದರ್ಶನ’ದ ಮೂಲಕ ಪರಿಚಯ ಮಾಡಿಕೊಟ್ಟ ಅಗ್ಗಳಿಕೆ ‘ಪ್ರಜಾವಾಣಿ’ಗೆ ಸಲ್ಲುತ್ತದೆ.

ಡಾ. ಎಚ್.ಆರ್.ಕೃಷ್ಣಮೂರ್ತಿ
ಡಾ. ಎಚ್.ಆರ್.ಕೃಷ್ಣಮೂರ್ತಿ

ಎನ್‍ಸಿಇಆರ್‌ಟಿ ಸಂಸ್ಥೆಯ ಪ್ರಾಜೆಕ್ಟ್ ಮಾರ್ಗ ನಿರೀಕ್ಷಿತ ಫಲವನ್ನು ನೀಡದಿದ್ದಾಗ, ‘ನ್ಯಾಷನಲ್ ಫೋಕಸ್ ಗ್ರೂಪ್ ಆನ್ ಹ್ಯಾಬಿಟಾಟ್ ಆ್ಯಂಡ್ ಲರ್ನಿಂಗ್’ ಈ ಹಿಂದೆ ಸೂಚಿಸಿದ್ದ ಮತ್ತೊಂದು ಕಾರ್ಯತಂತ್ರ ಮುನ್ನೆಲೆಗೆ ಬಂದಿತು. ಪಠ್ಯಪುಸ್ತಕಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ವೈಜ್ಞಾನಿಕ ಮಾಹಿತಿಗಳನ್ನು ನೀಡುವ ಜೊತೆಗೆ, ಪ್ರಕೃತಿಗೆ ಸಮೀಪವಾಗಿ, ಅದರೊಡನೆ ಹೊಂದಿಕೊಂಡು ಬದುಕುತ್ತಿರುವ‘ಬರಿಕಾಲಿನ ಪರಿಸರ ತಜ್ಞರ’ ಪರಿಸರ ಸಂಬಂಧಿ ಜ್ಞಾನ, ಜಾಣ್ಮೆ, ಸಂರಕ್ಷಣಾ ಪ್ರಯತ್ನಗಳನ್ನು ಪರಿಚಯಿಸಿ, ಮಕ್ಕಳಿಗೆ ಜೀವಂತ ನಿದರ್ಶನಗಳ ‘ರೋಲ್ ಮಾಡೆಲ್’ಗಳಿಂದ ಪ್ರೇರಣೆ ದೊರೆಯಬೇಕೆಂದು ಸೂಚಿಸಿತು. ಇದು ಸಾಧ್ಯವಾಗಿದ್ದರೆ, ನಮ್ಮ ರಾಜ್ಯದಲ್ಲೇ ನೆಲ, ಜಲ, ಅರಣ್ಯ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಸದ್ದಿಲ್ಲದೇ ಶ್ರಮಿಸುತ್ತಿರುವ ನೂರಾರು ಪರಿಸರ ಸೇನಾನಿಗಳು ಮತ್ತು ಅವರ ವಿಶಿಷ್ಟ ಪ್ರಯತ್ನಗಳು ಮಕ್ಕಳಿಗೆ ಪ್ರೇರಣೆಯಾಗುತ್ತಿದ್ದವು. ಆದರೆ ಪಠ್ಯಪುಸ್ತಕಗಳ ಹಿಂದಿನ ಪಟ್ಟಭದ್ರ ವ್ಯವಸ್ಥೆಯಲ್ಲಿ ಇದು ಸಾಧ್ಯವಾಗಿಲ್ಲ.

ಪರಿಸರ ಪ್ರಜ್ಞೆ ರೂಪಿಸುವಲ್ಲಿ ಶಾಲಾ ಶಿಕ್ಷಣ ಮುಖ್ಯ ಪಾತ್ರ ವಹಿಸುತ್ತದೆ, ನಿಜ. ಆದರೆ ಪರಿಸರ ಸಂರಕ್ಷಣೆಯ ಪರಿಕಲ್ಪನೆಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಿದ ಮಾತ್ರಕ್ಕೆ ಪರಿಸರದ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂಬುದು ಅಪ್ರಿಯವಾದರೂ ಸತ್ಯ. ಸರ್ಕಾರ, ಕಾನೂನು ಕಟ್ಟಲೆ ಗಳು, ಕಾನೂನುಗಳನ್ನು ಜಾರಿಗೊಳಿಸುವ ವ್ಯವಸ್ಥೆ, ಸಾರ್ವ ಜನಿಕರ ಧೋರಣೆ, ಸಂಪನ್ಮೂಲಗಳನ್ನು ಬಳಸುವ ಉದ್ಯಮ, ಕೈಗಾರಿಕೆಗಳ ಜವಾಬ್ದಾರಿಯುತವಾದ ನಡವಳಿಕೆ ಮುಂತಾದವುಗಳೆಲ್ಲವೂ ಒಟ್ಟಾಗಿ ಸೇರಿದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT