ಶನಿವಾರ, ಡಿಸೆಂಬರ್ 5, 2020
25 °C
ಮಿತಿಮೀರಿದ ಉಸುಕು ಗಣಿಗಾರಿಕೆ: ನದಿಗಳು ಬರಡು, ಜನಜೀವನ ಹೈರಾಣ

ವಿಶ್ಲೇಷಣೆ | ಮರಳಿಗೆ ಬದುಕಿನ ಕೊರಳ್!

ಕೇಶವ ಎಚ್. ಕೊರ್ಸೆ Updated:

ಅಕ್ಷರ ಗಾತ್ರ : | |

Prajavani

ಸಹ್ಯಾದ್ರಿ ಶ್ರೇಣಿಯಿಂದ ಇಳಿದು ಉತ್ತರ ಕನ್ನಡದ ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುವ ಶರಾವತಿ ನದಿಯ ರಮ್ಯನೋಟವು ಹೆದ್ದಾರಿಯಲ್ಲಿ ಸಾಗುವವರನ್ನೆಲ್ಲ ಒಮ್ಮೆ ಆಕರ್ಷಿಸದಿರದು. ಆದರೆ, ಈ ಸುಂದರ ನದಿತಪ್ಪಲಿನ ಜನರ ಬದುಕು ಅಂಥ ಸುಖಮಯದ್ದೇನೂ ಅಲ್ಲ. ಈ ನದಿತಟದ ಮೊಲ್ಕೋಡ ಗ್ರಾಮಸ್ಥರು, ತಮ್ಮೂರಲ್ಲಿ ಮರಳು ತೆಗೆಯುವ ದೋಣಿಗಳ ಅನುಮತಿ ರದ್ದುಪಡಿಸ ಬೇಕೆಂದು ಇತ್ತೀಚೆಗಷ್ಟೇ ಸರ್ಕಾರಕ್ಕೆ ಮೊರೆಯಿಟ್ಟಿದ್ದಾರೆ. ಅಲ್ಲಿಂದ ಅನತಿ ದೂರದ ಬಳ್ಕೂರಿನ ಮೀನುಗಾರರಂತೂ ಮೊದಲೆಲ್ಲ ಸುಲಭವಾಗಿ ದೊರಕುತ್ತಿದ್ದ ಪೋಟ್ಲಿ, ತಾರ್ಕ್ಲಿ, ಬಿಳಿಮೀನು, ಕರಿಮೀನು, ಚಿತ್ತಕೂರ್ಲು, ಕರೆಕೊಳಸದಂಥ ಹೊಳೆಮೀನುಗಳೆಲ್ಲ ಈಗ ಕಾಣ ಲೊಲ್ಲವೆಂದು ಗೋಳಿಡುತ್ತಿದ್ದಾರೆ. ನದಿದಂಡೆಯ ಹಸಿರು ಹೊದಿಕೆ ನಾಶ, ನದಿಪಾತ್ರದ ಅತಿಕ್ರಮಣ, ಜಲಮಾಲಿನ್ಯ ಇವೆಲ್ಲವುಗಳ ಜೊತೆ, ಮರಳು ಗಣಿಗಾರಿಕೆಯೂ ಅವರನ್ನು ಈ ಸಂಕಟಕ್ಕೆ ತಳ್ಳುತ್ತಿದೆ. ನೆಲ ಬಗೆದು ಮರಳು ತೆಗೆಯುವುದು ಮಿತಿಮೀರಿದಂತೆಲ್ಲ, ನದಿದಂಡೆ ಮಾಯವಾಗಿ, ಹೊಲಗದ್ದೆಗಳಿಗೆ ಉಪ್ಪುನೀರು ನುಗ್ಗಿ, ಹೊಳೆಯಂಚಿನ ಮನೆ–ಕೊಟ್ಟಿಗೆಗಳ ನೆಲ ಕುಸಿದು, ಸ್ಥಳೀಯರ ಬದುಕು ನರಕವಾಗುತ್ತಿದೆ.

ಮರಳು ಅಗೆಯುವುದು ಹಾಗೂ ಬಳಸುವುದು ಕರಾವಳಿಗೆ ಹೊಸತಲ್ಲ ನಿಜ. ತೊಂಬತ್ತರ ದಶಕದವರೆಗೂ ಇದು ಸ್ಥಳೀಯರಿಗೆ ಉದ್ಯೋಗ ನೀಡುವ ಕಿರು ಉದ್ಯಮ ವಾಗಿತ್ತಷ್ಟೆ. ಇಷ್ಟಕ್ಕೂ, ಉಪ್ಪಿನಂಶ ಹೆಚ್ಚಿರುವ ಕಡಲ ತಡಿಯ ಮರಳಿಗೆ ಒಳನಾಡಿನಲ್ಲಿ ಹೆಚ್ಚು ಬೇಡಿಕೆಯೂ ಇರಲಿಲ್ಲ. ಆದರೆ, ತೊಂಬತ್ತರ ದಶಕದ ಉದಾರೀಕರಣ ನೀತಿಯಿಂದಾಗಿ ಪುಟಿದೆದ್ದ ನಗರೀಕರಣ ಹಾಗೂ ನಿರ್ಮಾಣ ಕಾಮಗಾರಿಗಳು ಎಲ್ಲೆಡೆಯಿಂದ ಮರಳನ್ನು ಬಾಚತೊಡಗಿದವಷ್ಟೇ? ಒಳನಾಡಿನ ಕೃಷ್ಣಾ, ತುಂಗ-ಭದ್ರಾ, ಕಾವೇರಿ ಕಣಿವೆಗಳ ನದಿಪಾತ್ರದಲ್ಲಿ ಸೃಷ್ಟಿಯಾದ ಮರಳುಗಣಿಗಳು ಈಗ ಬರಿದಾಗತೊಡಗಿವೆ. ಹೀಗಾಗಿ, ಸಹ್ಯಾದ್ರಿ ತಪ್ಪಲು ಹಾಗೂ ಕರಾವಳಿಯ ನದಿಯಂಗಳಗಳಲ್ಲೂ ಇತ್ತೀಚಿನ ವರ್ಷಗಳಲ್ಲಿ ಉಸುಕಿನ ಅಗೆತ ವೇಗ ಪಡೆದಿದೆ.

‘ಹೊಳೆಯಲ್ಲಿ ಹೊಯ್ಗೆಯು ಸಹಜವಾಗಿ ಶೇಖರ ವಾಗುವ ಪ್ರಮಾಣಕ್ಕಿಂತ ಹತ್ತಾರು ಪಟ್ಟು ಹೆಚ್ಚು ತೆಗೆಯತೊಡಗಿದರೆ, ಮರಳು ಬರಬೇಕಾದರೂ ಎಲ್ಲಿಂದ?’ ಎಂದು ಕೋಪದಿಂದ ಕೇಳುತ್ತಾರೆ, ಅಘನಾಶಿನಿ ನದಿ ತೀರದ ರೈತರು. ಇದು ಶರಾವತಿ, ಅಘನಾಶಿನಿ ನದಿಗಳ ಕಥೆ ಮಾತ್ರವಲ್ಲ. ರಾಜ್ಯದ 302 ಕಿ.ಮೀ. ಕರಾವಳಿಯುದ್ದಕ್ಕೂ ದಕ್ಷಿಣದ ನೇತ್ರಾವತಿ ತಪ್ಪಲಿನಿಂದ ಉತ್ತರದ ಕಾಳಿನದಿಯವರೆಗೆ ಕಂಡುಬರುತ್ತಿರುವ ಕಟುವಾಸ್ತವ.

ರಾಜ್ಯದಲ್ಲಿ ವಾರ್ಷಿಕ ಸುಮಾರು 5 ಕೋಟಿ ಟನ್ ಮರಳಿನ ಬೇಡಿಕೆಯಿದೆ ಎಂಬುದು ಸರ್ಕಾರದ ಲೆಕ್ಕ. ಅದು ಸುಮಾರು 8 ಕೋಟಿ ಟನ್‌ ಇರಬಹುದೆಂದು ಪರಿಣತರ ಅಂದಾಜು. ಒಟ್ಟಿನಲ್ಲಿ ಅದನ್ನು ಪೂರೈಸ ಬೇಕಾದ ಅನಿವಾರ್ಯವಂತೂ ಸರ್ಕಾರಕ್ಕಿದೆ. ಈ ಪ್ರಯತ್ನದಲ್ಲಿ ಪರಿಸರ ಹಾಗೂ ಜನಜೀವನಕ್ಕೆ ಮಾರಕವಾಗದಂತೆ ಮರಳು ಪೂರೈಸಬೇಕೆನ್ನುವ ತತ್ವ ಕಣ್ಮರೆಯಾಗುತ್ತಿರುವುದು ಮಾತ್ರ ವಿಷಾದದ ಸಂಗತಿ. ಪರಿಸರ ಸ್ನೇಹಿ ಕಟ್ಟಡ ನಿರ್ಮಾಣದ ಚಿಂತನೆ ಆರಂಭವಾಗಿ ದಶಕಗಳೇ ಸಂದಿವೆ. ಮರಳಿಗೆ ಬದಲಾಗಿ ಲೋಹದ ಕುಲುಮೆಗಳ ತ್ಯಾಜ್ಯ, ಹಳೆಕಟ್ಟಡಗಳ ಅವಶೇಷದ ಪುಡಿ, ಕಲ್ಲುಕುಟ್ಟಿ ಉತ್ಪಾದಿಸುವ ಕೃತಕಹರಳಿನ ಮರಳು (ಎಮ್-ಸ್ಯಾಂಡ್) ಕುರಿತಂತೆಲ್ಲ ಸಂಶೋಧನೆಗಳೂ ಆಗಿವೆ. ಆದರೆ, ಸರ್ಕಾರ ಹಾಗೂ ಉದ್ಯಮಗಳಿಗೆ ಮಾತ್ರ ಸುಲಭದಿ ದೊರಕುವ ಅಲ್ಪವೆಚ್ಚದ ಹೊಳೆಹೊಯ್ಗೆಯೇ ಪ್ರೀತಿ! ಹೀಗಾಗಿಯೇ, ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಸಮಿತಿ ರಚಿಸಿ ಮರಳು ಉತ್ಪಾದನೆಗೂ ಸರ್ಕಾರವು ಗುರಿ ನಿಗದಿಪಡಿಸತೊಡಗಿದೆ.

ಮಲೆನಾಡ ಕಣಿವೆಗಳಿಂದ ಹರಿದುಬರುವ ನೀರಿನ ರಭಸಕ್ಕೆ, ಸಿಲಿಕಾನ್ ಸಂಯುಕ್ತವುಳ್ಳ ಶಿಲೆಗಳು ಪುಡಿಯಾಗಿ ನದಿಪಾತ್ರದ ನೈಸರ್ಗಿಕ ಕುಲುಮೆಯಲ್ಲಿ ಮರಳು ರೂಪುಗೊಳ್ಳಲು ದೀರ್ಘಕಾಲವೇ ಬೇಕು. ನದಿಪಾತ್ರದಲ್ಲಿ ಹೀಗೆ ಸಂಗ್ರಹವಾಗುವ ಮರಳು ಅಲ್ಲಿನ ಸೂಕ್ಷ್ಮಪರಿಸರವನ್ನು ನಿರ್ವಹಿಸುವಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ಮಳೆಗಾಲದಲ್ಲಿ ನೆರೆ ನಿಯಂತ್ರಣ, ನೀರಿಂಗಿಸಿ ಅಂತರ್ಜಲ ಹೆಚ್ಚಿಸುವುದು, ಹೊಳೆಯಂಚಿನ ಸಸ್ಯಸಂಕುಲಗಳ ಜೀವನಚಕ್ರವನ್ನು ಪೋಷಿಸುವುದು, ಮಾಲಿನ್ಯ ಹೀರಿ ನೀರನ್ನು ಶುದ್ಧವಾಗಿಸುವುದು, ಮೀನು ಹಾಗೂ ಉಭಯವಾಸಿಗಳಂಥ ಅಸಂಖ್ಯ ಪ್ರಾಣಿವರ್ಗದ ವಂಶಾಭಿವೃದ್ಧಿಗೆ ಸೂಕ್ತ ತಾಣ ಒದಗಿಸುವುದು- ಇವೆಲ್ಲ ನದಿಪಾತ್ರದ ಮರಳುದಿನ್ನೆಯಿಂದ ಮಾತ್ರ ಸಾಧ್ಯ. ಮರಳ ತಡಿಯ ಅಡಿಯಲ್ಲಿ ಗುಪ್ತಗಾಮಿನಿಯೊಂದು ಸದಾ ಹರಿಯುವುದರಿಂದಾಗಿ, ಕಡುಬೇಸಿಗೆಯಲ್ಲೂ ನದಿತಟದ ಮರಳುನೆಲ ಬಗೆದರೆ ನೀರು ದೊರಕುವುದು! ಮರಳಿನ ಈ ರಕ್ಷಾಪೊರೆ ಬರಿದಾದಂತೆಲ್ಲ, ನದಿಗಳು ಜೀವಂತಿಕೆ ಕಳೆದುಕೊಳ್ಳುತ್ತಿವೆ.

ಜಿಲ್ಲಾಧಿಕಾರಿಗಳ ನೇತೃತ್ವದ ಮರಳು ಉಸ್ತುವಾರಿ ಸಮಿತಿಗಳು ಗಣಿಗಾರಿಕೆಯನ್ನು ಪರಿಸರಸ್ನೇಹಿಯಾಗಿಸಲು ಶ್ರಮಿಸುತ್ತಿರುವುದೇನೋ ನಿಜ. ಮರಳುದಿನ್ನೆಗಳ ಸಮೀಕ್ಷೆ, ಅವುಗಳ ಪಾರದರ್ಶಕ ಲಿಲಾವು, ಮರಳಿನ ವ್ಯವಸ್ಥಿತ ಸಾಗಾಟಗಳನ್ನೆಲ್ಲ ಅವು ಗಣಿ ಮತ್ತು ಭೂಗರ್ಭ ಶಾಸ್ತ್ರ ಇಲಾಖೆಯ ಸಹಭಾಗಿತ್ವದಲ್ಲಿ ಕಾರ್ಯಗತಗೊಳಿಸುತ್ತಿವೆ. ಕರಾವಳಿ ಜಿಲ್ಲೆಗಳ ಸಮಿತಿಗಳಂತೂ ಮರಳು ಸಂಗ್ರಹ ದೋಣಿಗಳು ಹಾಗೂ ಸಾಗಣೆ ವಾಹನ ಗಳಿಗೆ ಜಿಪಿಎಸ್ ಅಳವಡಿಕೆ, ಸಾಗಣೆಗೆ ಮಾರ್ಗ ಮತ್ತು ಕಾಲಮಿತಿ ನಿಗದಿ, ಸರ್ಕಾರಿ ದಾಸ್ತಾನು ವ್ಯವಸ್ಥೆ ಇತ್ಯಾದಿಗಳನ್ನೆಲ್ಲ ಕಟ್ಟುನಿಟ್ಟಾಗಿ ಕೈಗೊಳ್ಳುತ್ತಿವೆ. ಆದರೆ, ಅಧಿಕಾರ ರಾಜಕಾರಣ, ಪಕ್ಷ ರಾಜಕೀಯ, ಕಪ್ಪುಹಣ ಇವೆಲ್ಲ ಆಳವಾಗಿ ಬೆಸೆದುಕೊಂಡಿರುವ ಈ ಸಂಕೀರ್ಣ ಉದ್ಯಮವನ್ನು ಜಿಲ್ಲಾಡಳಿತಗಳು ಏಕಾಂಗಿಯಾಗಿ ನಿಯಂತ್ರಿಸಲಾದೀತೇ? ಸಾರ್ವಜನಿಕ ಹಿತದ ನೀತಿ ಯೊಂದನ್ನು ಅನುಷ್ಠಾನಗೊಳಿಸುವ ಬದ್ಧತೆಯಿರುವ ಸರ್ಕಾರವೊಂದರ ಆಸರೆಯಿಲ್ಲದೆ ಈ ಸಮಿತಿಗಳು ಎಷ್ಟು ದೂರ ಸಾಗಿಯಾವು?

ಹಾಗೆಂದೇ, ಯಾವ ನದಿಪಾತ್ರಕ್ಕೆ ತೆರಳಿದರೂ ಮರಳಿನ ಉದ್ಯಮವು ಕಾನೂನು ಮೀರುತ್ತಿರುವುದನ್ನು ನೋಡಬಹುದು. ಹಗಲಲ್ಲಿ ಮಾತ್ರ ಮರಳು ತೆಗೆಯಲು ಅನುಮತಿಯಿದ್ದೆಡೆ, ರಾತ್ರಿಯೂ ಅಗೆಯಲಾಗುತ್ತಿದೆ. ಸಮುದ್ರದಂಚಿನಿಂದ ಒಳಗಿನ 500 ಮೀಟರ್‌ ಸೂಕ್ಷ್ಮಪ್ರದೇಶದಲ್ಲಿ ನಿಷೇಧವಿದ್ದರೂ ಮರಳು ಸಂಗ್ರಹಿಸಲಾಗುತ್ತಿದೆ. ದಿನಕ್ಕೆ ಒಂದು ಘನಮೀಟರಿಗೆ ಅನುಮತಿ ಇದ್ದಲ್ಲಿ, ಅದರ ಮೂರು-ನಾಲ್ಕು ಪಟ್ಟು ಹೆಚ್ಚು ತೆಗೆಯುವ ಸಂದರ್ಭಗಳೇ ಹೆಚ್ಚು. ಸ್ಥಳೀಯರ ಹತ್ತು ಅಡಿ ಉದ್ದದ ಸಣ್ಣ ಡಿಂಗಿದೋಣಿಗಳ ಬದಲು, ಉದ್ಯಮಿಗಳ ಭಾರಿ ಗಾತ್ರದ ಯಾಂತ್ರೀಕೃತ ಬೋಟುಗಳು ನೀರಿಗಿಳಿಯುತ್ತಿವೆ. ಒಂದು ಬಾರಿಗೆ ನೀಡಿದ ಅನುಮತಿಯನ್ನೇ ಬಳಸಿಕೊಂಡು ಮರಳುವಾಹನಗಳು ಹಲವು ಬಾರಿ ಮರಳು ಸಾಗಿಸುವುದಿದೆ. ಸುಮಾರು 4.5 ಟನ್ ತೂಗುವ ಒಂದುನೂರು ಘನ ಅಡಿ ಮರಳನ್ನು ಒಂದು ಯುನಿಟ್ ಎಂದು ಪರಿಗಣಿಸಿ, ಸಾರ್ವಜನಿಕರಿಗೆ ಸುಲಭವಾಗಿ ದೊರಕುವಂತೆ ಜಿಲ್ಲಾ ಸಮಿತಿಗಳು ₹ 5,500ರಿಂದ ₹ 7,500ರವರೆಗೆ ಬೆಲೆ ನಿಗದಿ ಮಾಡಿದರೆ, ಗ್ರಾಹಕರಿಗದು ದೊರಕುವಾಗ ಬೆಲೆ ನಾಲ್ಕಾರು ಪಟ್ಟು ಹೆಚ್ಚಿರುತ್ತದೆ. ಅಡಿಯಿಂದ ಮುಡಿಯವರೆಗೂ ಅಕ್ರಮ ಹಾಗೂ ಮೋಸ!

ಇವೆಲ್ಲವುಗಳ ಪರಿಣಾಮವಾಗಿ, ಮಲೆನಾಡು ಹಾಗೂ ಕರಾವಳಿಯ ನದಿಪಾತ್ರಗಳು ಬರಡಾಗುತ್ತಿವೆ. ಅವುಗಳ ನೀರು ಹಿಡಿದಿಡುವ ಸಾಮರ್ಥ್ಯ ಕುಗ್ಗಿ, ಮಳೆಗಾಲದಲ್ಲಿ ನೆರೆ ಹಾಗೂ ಬೇಸಿಗೆಯ ಬರ ಹೆಚ್ಚುತ್ತಿದೆ. ಎರಡು ದಶಕಗಳ ಹಿಂದಷ್ಟೇ ದೊರಕುತ್ತಿದ್ದ ತೊಂಬತ್ತಕ್ಕೂ ಹೆಚ್ಚಿನ ಮೀನುಪ್ರಭೇದಗಳ ಕಾಲಂಶವೂ ಈಗ ಮೀನುಗಾರರಿಗೆ ಸಿಗದಿರುವುದನ್ನು ಅಧ್ಯಯನಗಳು ದಾಖಲಿಸುತ್ತಿವೆ. ಸಾಗರದ ಉಪ್ಪುನೀರು ಒಳಪ್ರದೇಶಗಳಿಗೆ ನುಗ್ಗಿ, ಕೃಷಿಭೂಮಿಯು ಸಾರ ಕಳೆದುಕೊಳ್ಳುತ್ತಿದೆ. ಮೀನುಗಾರರು ಹಾಗೂ ರೈತರ ಬದುಕು ‘ಅಭಿವೃದ್ಧಿ ಉದ್ಯಮ’ದ ಮರಳಗೋಪುರದಡಿ ನುಜ್ಜಾಗುತ್ತಿದೆ!

ಈಗ ಜಾರಿಯಾಗಲಿರುವ 2020ರ ಮರಳುನೀತಿಯಾದರೂ ಇವನ್ನು ಸರಿಪಡಿಸಬೇಕಿದೆ. ಮರಳುದಿನ್ನೆಯ ಆಯ್ಕೆ ಹಾಗೂ ತೆಗೆಯುವ ಗರಿಷ್ಠ ಪ್ರಮಾಣವನ್ನು ಪರಿಸರ ಸುರಕ್ಷತೆಯ ಆಧಾರದಲ್ಲಿ ನಿರ್ಧರಿಸುವುದು, ಪಾರಂಪರಿಕ ಕಸುಬುದಾರರಿಗೆ ಆದ್ಯತೆ ನೀಡುವುದು, ಮರಳು ಅಗೆತದ ಮಿತಿ ಕಾಯ್ದುಕೊಳ್ಳುವುದು ಮತ್ತು ಅದನ್ನು ಸಾರ್ವಜನಿಕರಿಗೆ ನ್ಯಾಯಬೆಲೆಗೆ ಒದಗಿಸುವುದು– ಇವನ್ನು ಸಾಧಿಸುವುದು ಸರ್ಕಾರದ ಜವಾಬ್ದಾರಿಯಾಗಬೇಕಿದೆ.


ಕೇಶವ ಎಚ್. ಕೊರ್ಸೆ

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.