ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Father's Day 2022 | ಭೂಮಿಯಂತಹ ಅಪ್ಪಂದಿರಿಗೆ...

Last Updated 18 ಜೂನ್ 2022, 20:00 IST
ಅಕ್ಷರ ಗಾತ್ರ

‘ನನ್ನ ಮಗಳಿಗಂತೂ ತಲೆ ಬಾಚೋದ್ರಿಂದ ಶಾಲೆಗೆ ಬಿಡೋವರೆಗೂ ಅವರಪ್ಪನೇ ಮಾಡಬೇಕು. ಅಪ್ಪನ ಮಗಳೇ ಆಗಿಬಿಟ್ಟಿದಾಳೆ’ ಸುಮಾ ಗೊಣಗುತ್ತಾಳೆ. ‘ನನ್ನ ಮಗನಿಗೂ ಅಷ್ಟೇ, ಎಲ್ಲದಕ್ಕೂ ಅಪ್ಪ ಅಪ್ಪ ಅಂತಾನೆ. ಅಪ್ಪ ಬರೋವರೆಗೂ ಮಲಗೋದೇ ಇಲ್ಲ’ ಇದು ಸುಷ್ಮಾಳ ಅನಿಸಿಕೆ.

ಇತ್ತೀಚೆಗಷ್ಟೇ, ಒಂದು ವಿಡಿಯೋ ವೈರಲ್ ಆಗಿತ್ತು. ಬೊಂಬೆ ಕೊಡಿಸೋದ್ಯಾರು, ಊಟ ಮಾಡಿಸೋದ್ಯಾರು, ನಿದ್ದೆ ಮಾಡಿಸೋದ್ಯಾರು ಮುಂತಾದ ಎಲ್ಲ ಪ್ರಶ್ನೆಗಳಿಗೆ ಅಮ್ಮ ಎಂದು ಉತ್ತರಿಸುವ ಮಗು, ‘ನಿನಗ್ಯಾರ ಕಂಡರಿಷ್ಟ’ ಎಂದಾಗ ಅಪ್ಪ ಎಂದು ನಗುತ್ತದೆ. ಹೌದು, ಅಮ್ಮ ಜೀವನದಲ್ಲಿ ಬೆರೆತುಹೋದರೆ, ಅಪ್ಪ ಒಂಥರ ಫೇವರಿಟ್, ಇಷ್ಟ. ಅಮ್ಮ ಅಕ್ಕರೆಯಾದರೆ, ಅಪ್ಪ ಶಕ್ತಿ. ಅಪ್ಪತನ್ನ ಮಕ್ಕಳಿಗೆ ಹೀರೋ ಆಗುತ್ತಾನೆ. ಅಪ್ಪನ ಮುದ್ದು, ಕೋಪ, ಶಕ್ತಿ ಮಕ್ಕಳನ್ನುಬೆಕ್ಕಸಬೆರಗಾಗುವಂತೆ ಮಾಡುತ್ತದೆ.

ಸಣ್ಣ ವಿಷಯವಾದರೂ, ‘ನಮ್ಮಪ್ಪಂಗೆ ಹೇಳ್ತೀನಿ ಇರು’ ಅನ್ನೋದು ಮಕ್ಕಳಿಗೆ ಯುದ್ಧ ಗೆದ್ದಷ್ಟು ನೆಮ್ಮದಿ ತರೋದು. ಪುಟ್ಟ ಸಿಂಬಾನ ಹಿಂದೆ ಮುಫಾಸಾ ನಿಂತ ಧೈರ್ಯ ಅಪ್ಪ-ಮಗುವಿನ ಬಂಧಕ್ಕೆ ಒಂದು ಮುದ್ದಾದ ಉದಾಹರಣೆ. ಮೊದಲ ದಿನಗಳಲ್ಲಿ ಅಮ್ಮನೇ ಎಲ್ಲದಕ್ಕೂ ಬೇಕಾದರೂ ನಂತರದ ಹೆಜ್ಜೆಯೂರುವ ದಿನಗಳಲ್ಲಿ ಅಪ್ಪನ ಅಗತ್ಯ ಬಹಳಷ್ಟು. ಬೀಳದಂತೆ ಹಿಡಿಯುವುದು ಅಮ್ಮ, ಆದರೆ, ಬಿದ್ದರೂ ಎದ್ದು ನಿಲ್ಲಲು ಕಲಿಸುವುದು ಅಪ್ಪ. ಅಪ್ಪನ ಹೆಗಲಿನ ಮಹತ್ವ ತಿಳಿಯುವುದು ಬೆಳೆಯುವ ವಯಸ್ಸಿನಲ್ಲೇ. ಬೆಳೆದು ದೊಡ್ಡವರಾಗಿ ಕೆಲಸ ಹಿಡಿದು ಸಂಸಾರ ನಿಭಾಯಿಸುವ ಹೊತ್ತಿನಲ್ಲಿ ಅಪ್ಪನ ಮಾತು, ಮೌನ, ಕಿರಿಕಿರಿ, ಸಿಡುಕು, ಹತಾಶೆ ಎಲ್ಲ ಅರ್ಥವಾಗುತ್ತ ಹೋಗುತ್ತದೆ.

ಮಕ್ಕಳನ್ನು ತಮ್ಮ ಕಾಲಮೇಲೆ ತಾವು ನಿಲ್ಲುವಂತೆ ಮಾಡುವುದರಲ್ಲಿ ಅಪ್ಪನ ಪಾತ್ರ ಅಸೀಮ. ಇತ್ತೀಚಿನ ದಿನಗಳಲ್ಲಿ ಮಗನಿಗಿಂತ ಒಂದು ಹಿಡಿ ಹೆಚ್ಚೇ ಮಗಳನ್ನು ಮುದ್ದು ಮಾಡುವ ಅಪ್ಪ, ಅವಳನ್ನು ಸ್ವಾವಲಂಬಿ ಮಾಡುವಲ್ಲಿ ಹೆಚ್ಚಿನ ಆಸ್ಥೆ ತೋರುವುದನ್ನೂ ಕಾಣಬಹುದು. ಬೆಳೆಯುತ್ತಾ ಅಮ್ಮ ಗೊಣಗುವುದನ್ನು ಕಾಣುವ ಮಗಳಿಗೆ ಅಪ್ಪ ಹಾರುವುದನ್ನು ಕಲಿಸತೊಡಗುತ್ತಾನೆ. ಈಜು ಕಲಿಸುವುದು, ಸೈಕಲ್ ಕಲಿಸುವುದು, ಸ್ಕೂಟರ್–ಕಾರು ಕಲಿಸುವುದು, ಮಗಳಿಗಿಷ್ಟವಾದ ಶಿಕ್ಷಣ ಕೊಡಿಸಿ ಆಕೆಯನ್ನು ಸಬಲಳಾಗಿ ಮಾಡುವ ಅಪ್ಪ. ಮಗಳು ಮೊದಲ ಸಂಬಳದಲ್ಲಿ ಒಂದು ಶರ್ಟ್ ತೆಗೆದುಕೊಟ್ಟರೂ ಅದರಲ್ಲಿ ಸಾರ್ಥಕತೆ ಕಾಣುತ್ತಾನೆ. ತನ್ನ ಮಗಳೂ ಎಲ್ಲಿ ಹೋದರೂ ರಾಜಕುಮಾರಿಯಾಗಿಯೇ ಇರಬೇಕೆನ್ನುವ ಅಪ್ಪ ಮದುವೆಯ ನಂತರವೂ ಸಾಮಾನ್ಯವಾಗಿ ಅಮ್ಮಂದಿರು ಬಳಸುವ ‘ಹೊಂದಿಕೊಂಡು ಹೋಗು’ ಎನ್ನುವ ಪದ ಬಳಸದೇ, ‘ನಾನಿದೀನಿ ಬಾಮ್ಮ ನೀನು’ ಅನ್ನುತ್ತಾನೆ.

ಒಂದು ವಾಷಿಂಗ್ ಪೌಡರ್‌ನ ಜಾಹೀರಾತಿನಲ್ಲಿ ಅಪ್ಪ ತನ್ನ ಮಗಳು ಕೆಲಸ-ಮನೆ ಎರಡನ್ನೂ ನಿಭಾಯಿಸಿಕೊಂಡು ಹೋಗುತ್ತಿರುವುದನ್ನೂ ನೋಡಿ ಎಲ್ಲ ಭಾರವನ್ನೂ ಮಗಳು=ಅಳಿಯ ಸಮನಾಗಿ ಹಂಚಿಕೊಂಡಿದ್ದಾರೆ ಎಂದು ಯೋಚಿಸುತ್ತಾ, ತನ್ನ ಪತ್ನಿಗೂ ತಾನು ಸಹಾಯ ಮಾಡುತ್ತೇನೆ ಎಂದು ಪತ್ರ ಬರೆಯುತ್ತಾನೆ. ಹಲವಾರು ಹೃದಯಗಳಲ್ಲಿ ಮೆಲ್ಲಗೆ ಅಲೆಗಳನ್ನೆಬ್ಬಿಸಿದ ಜಾಹೀರಾತು ಇದು. ಮಗಳು ಸದಾ ರಾಣಿಯಂತೆ ಖುಷಿಯಾಗಿರಲಿ ಎಂದು ಬಯಸುವ ತಂದೆ, ಮಗನಿಗೆ ಕಷ್ಟಕ್ಕೆ ಸಹಿಸಿಕೊಂಡು ಗಟ್ಟಿಯಾಗಿ ನಿಲ್ಲುವುದನ್ನು, ಮುನ್ನುಗ್ಗುವುದನ್ನು ಹೇಳಿಕೊಡುತ್ತಾನೆ.

ಅಪ್ಪನ ಎಲ್ಲ ಭಾವನೆಗಳೂ ಮೌನದಲ್ಲೇ ಅಡಗಿರೋದು. ನೀ ಯೋಚಿಸಬೇಡಮ್ಮ, ನಾನಿದೀನಿ ಅನ್ನುವ ಎರಡು ಪದದಲ್ಲಿ ಅಪ್ಪನ ಕಷ್ಟ, ಶ್ರಮ, ನೋವು, ಹತಾಶೆ, ಅಸಹಾಯಕತೆ ಎಲ್ಲ ಅಡಗಿ ಕಲ್ಲಾಗಿಬಿಡುತ್ತದೆ. ಭೂಮಿಯಂತಹ, ಆಕಾಶದಂತಹ, ಅಮ್ಮನಂಥ, ಅಪ್ಪನಂಥ ಅಪ್ಪಂದಿರಿರುವಾಗಷ್ಟೇ ಮಕ್ಕಳು ಬದುಕನ್ನು ನಿರಾಳವಾಗಿ ಜೀವಿಸಲು ಸಾಧ್ಯವಾಗೋದು.

ನನ್ನಪ್ಪ ಆಕಾಶವಲ್ಲ ಭೂಮಿ. ಫಲವತ್ತಾದ ನೂರಾರು ಮೌಲ್ಯಗಳ ಬಿತ್ತಿಬೆಳೆಸಿದ ಭೂಮಿ ತನ್ನ ಮೌಲ್ಯಗಳು ನಮಗೆ ಅರ್ಥವಾಗದೇನೋ ಎಂಬ ಆತಂಕಕ್ಕೆ ಆಗಾಗ ತೇವಗೊಂಡು ಮೆತ್ತಗಾಗಲಾರದೇ, ಕಲ್ಲಾಗಲಾರದೇ ಗೊಂದಲಗೊಂಡ ಜವುಗು ಭೂಮಿ. ತನ್ನ ಬೆಳೆ ಆಲದ ಮರವಾಗದೇ ಕಳ್ಳಿಗಿಡವಾಗುವ ಭಯದಲ್ಲಿ ನಡುಗಿದ ಬಿರುಕು ಭೂಮಿ. ನೆಟ್ಟ ಗಿಡ ಫಲವತ್ತಾಗಿ ಹಸಿರಾಗಿ ನೆರಳು ನೀಡುವ ಭರವಸೆ ಮೂಡಿಸಿಕೊಂಡ ಆರ್ದ್ರ ಭೂಮಿ ನನ್ನಪ್ಪ ಆಕಾಶವಲ್ಲ; ಸಸಿ ಬೆಳೆಸಿ, ಹಸಿರಾಗಿಸಿ, ನೆರಳಲ್ಲಿ ಬಿಸಿಲಲ್ಲಿ ನಿರಾಳವಾಗಿರುವ ಭೂಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT