ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಪ್ರತಿಷ್ಠಾನ, ಪುರಸ್ಕಾರ, ಅಧಿಕಾರಲಾಲಸೆ

ಸಮಾಜದಲ್ಲಿ ಮೌಲ್ಯ ಬಿತ್ತಬೇಕಾದ ಸಾಹಿತಿಗಳೇ ನೈತಿಕ ಹೊಣೆಯಿಂದ ನುಣುಚಿಕೊಂಡರೆ ಹೇಗೆ?
Last Updated 21 ಜನವರಿ 2021, 1:41 IST
ಅಕ್ಷರ ಗಾತ್ರ

‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ/ ಧರೆ ಹತ್ತಿ ಉರಿದಡೆ ನಿಲಲುಬಾರದು/ ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ/ ನಾರಿ ತನ್ನ ಮನೆಯಲ್ಲಿ ಕಳುವಡೆ/ ತಾಯ ಮೊಲೆವಾಲು ನಂಜಾಗಿ ಕೊಲುವಡೆ/ ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ’- ಈ ವಚನವು ಸಾಹಿತ್ಯ, ಸಾಂಸ್ಕೃತಿಕ ರಂಗಕ್ಕೆ ಮಾರ್ಗಸೂಚಿಯಂತಿದೆ. ಬೇಲಿಯೇ ಎದ್ದು ಹೊಲ ಮೇಯ್ದರೆ, ತಾಯ ಎದೆಹಾಲು ವಿಷವಾದರೆ ಹಾಲುಂಡ ಮಗು ಬದುಕಲು ಹೇಗೆ ಸಾಧ್ಯ?! ಈ ಮೌಲ್ಯಗಳನ್ನು ಬಸವಣ್ಣನವರ ವಚನಗಳು ಹೇಳುತ್ತವೆ.

ಸಾಹಿತ್ಯ, ಕಲೆಗಳ ಮೂಲಕ ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತಬೇಕಾದವರೇ ಮೌಲ್ಯಗಳನ್ನು ಗಾಳಿಗೆ ತೂರಿ ಹೊಣೆಯಿಂದ ನುಣುಚಿಕೊಂಡರೆ ಹೇಗೆ? ಬಸವಣ್ಣನವರ ವಚನಗಳು ಇಂತಹ ವರ್ತನೆಗಳನ್ನು ಮಾರ್ಮಿಕವಾಗಿ ಪ್ರಶ್ನಿಸುವಂತಿವೆ.

ವಿಜಯಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಪ್ರಶಸ್ತಿಗಳನ್ನು ಯಾರಿಗೆ ಕೊಡಬೇಕು ಎಂಬುದನ್ನು ಧಾರವಾಡದ ಹಿರಿಯ ಸಾಹಿತಿಯೊಬ್ಬರ ಮನೆಯಲ್ಲಿ ಕುಳಿತು ತೀರ್ಮಾನಿಸಲಾಯಿತು ಎಂಬುದರ ಬಗ್ಗೆ ಸಾಹಿತ್ಯ ವಲಯದಿಂದ ಆಕ್ಷೇಪಗಳು ವ್ಯಕ್ತವಾದವು. ಈ ಕುರಿತು ವರದಿಗಳು ಕೂಡ ಪ್ರಕಟವಾಗಿವೆ. ಈ ರೀತಿ ಆದದ್ದು ನಿಜವೆಂದಾದರೆ, ಶೋಭೆ ತರುವ ಕೆಲಸ ಇದಲ್ಲ. ಹೀಗೆ ಮಾಡಿದ್ದಕ್ಕೆ ಬಂದ ತೀಕ್ಷ್ಣ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಎಗ್ಗಿಲ್ಲದೆ ಹರಿದಾಡಿದವು. ಇವೆಲ್ಲವೂ ಬೇಕಿತ್ತೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡವು. ಸಾಹಿತಿಗಳು, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಕಾಳಜಿಯಿರುವ ಪರಿಚಾರಕರಿಂದ, ಚಿಂತಕರಿಂದ ವ್ಯಕ್ತವಾದ ತೀವ್ರ ಆಕ್ಷೇಪಗಳು ಟ್ರಸ್ಟ್–ಪ್ರತಿಷ್ಠಾನಗಳಲ್ಲಿ ನಡೆಯುವ ಪ್ರಕ್ರಿಯೆಗಳ ಬಗ್ಗೆಯೇ ಅನುಮಾನ ಹುಟ್ಟಿಸುವಂತೆ ಮಾಡಿವೆ. ಅವು ಪಾರದರ್ಶಕವಾಗಿಲ್ಲ, ಸ್ವಜನಪಕ್ಷಪಾತಿಯಾಗಿವೆ ಎಂಬುದನ್ನು ಸಾರಿ ಹೇಳುತ್ತಿವೆ. ಸಾಂಸ್ಕೃತಿಕ ಲೋಕದಲ್ಲಿ ವ್ಯವಸ್ಥೆ ಅಷ್ಟೊಂದು ಹದಗೆಟ್ಟು ಹೋಗಿದೆಯೇ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯವನ್ನು ಸೃಷ್ಟಿಸಿದೆ.

ಸರ್ಕಾರದ ಅಧೀನದಲ್ಲಿರುವ ಹಲವು ಟ್ರಸ್ಟ್ ಮತ್ತು ಪ್ರತಿಷ್ಠಾನಗಳಿಗೆ ಸಾಂಸ್ಕೃತಿಕ ಚಟುವಟಿಕೆ ನಡೆಸಲು 2020–21ನೇ ಸಾಲಿನ ಮೊದಲ ಕಂತಿನ ಅನುದಾನ ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಿದೆ. ಕೋವಿಡ್ ಕಾರಣದಿಂದ ಆರ್ಥಿಕ ಸ್ಥಿತಿ ಮಂದವಾಗಿದೆ. ಆದ್ದರಿಂದ ಅನುದಾನ ಹಂಚಿಕೆಯಲ್ಲಿಯೂ ಕಡಿತ ಸಹಜ. ಹೀಗಾಗಿ ಚಟುವಟಿಕೆಗಳಿಗೆ ಸ್ವಲ್ಪ ಹಿನ್ನಡೆ ಆಗಿರಬಹುದು. ಆದರೆ, ಕೆಲವು ಪ್ರತಿಷ್ಠಾನಗಳು ಅನುದಾನದ ಇತಿಮಿತಿಯಲ್ಲಿ ಅಲ್ಪಸ್ವಲ್ಪ ಚಟುವಟಿಕೆ ಹಮ್ಮಿಕೊಳ್ಳುತ್ತಲೇ ವಾರ್ಷಿಕ ಪುರಸ್ಕಾರಗಳನ್ನು ಪ್ರಕಟಿಸಿವೆ. ಧಾರವಾಡದಲ್ಲಿ ಪಂಡಿತ ಮಲ್ಲಿಕಾರ್ಜುನ ಮನ್ಸೂರ, ಪಂಡಿತ ಬಸವರಾಜ ರಾಜಗುರು, ಚಿತ್ರಕಲಾವಿದ ಹಾಲಭಾವಿ ಹೆಸರಿನ ಟ್ರಸ್ಟ್–ಪ್ರತಿಷ್ಠಾನಗಳ ಚಟುವಟಿಕೆಗಳು ಇನ್ನೂ ಹೆಚ್ಚು ಸೃಜನಾತ್ಮಕವಾಗಬೇಕು ಎಂಬ ನಿರೀಕ್ಷೆ ಸಾಂಸ್ಕೃತಿಕ ಲೋಕದಲ್ಲಿ ಇದೆ. ಅದಕ್ಕೆ ಬೇಕಾದ ಕ್ರಿಯಾಯೋಜನೆ ಸಿದ್ಧಪಡಿಸಿ, ಅದನ್ನು ಅನುಷ್ಠಾನಗೊಳಿಸಿದರೆ ಹೆಚ್ಚು ಅರ್ಥಪೂರ್ಣ ಆದೀತು.

ವಿವಿಧ ಕ್ಷೇತ್ರಗಳ ಸಾಧಕರ ಹೆಸರಿನಲ್ಲಿ ಸ್ಥಾಪನೆಯಾಗಿರುವ ಟ್ರಸ್ಟ್–ಪ್ರತಿಷ್ಠಾನಗಳ ಕಾರ್ಯಚಟುವಟಿಕೆಗಳು ಪ್ರಶಸ್ತಿಗಳ ವಿತರಣೆಗೆ ಸೀಮಿತ ಆಗಬಾರದು. ಅವು ಹೆಚ್ಚು ಅರ್ಥಪೂರ್ಣ ಆಗಬೇಕು. ಪ್ರಶಸ್ತಿ ನೀಡುವ ವಿಚಾರವಾಗಿ ಧಾರವಾಡದಲ್ಲಿ ಸಭೆ ಸೇರಿ, ಆ ಕಾರಣಕ್ಕೆ ವಿವಾದಕ್ಕೆ ಒಳಗಾದ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಬಗ್ಗೆ ತಮಗೆ ತಿಳಿದೇ ಇರಲಿಲ್ಲ ಎಂದು ಜಾಲತಾಣದಲ್ಲಿ ಕೆಲವರು ಹೇಳಿಕೊಂಡಿದ್ದಾರೆ! ಇವುಗಳು ನಿಜಾರ್ಥದಲ್ಲಿ ಅರ್ಥಪೂರ್ಣ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿವೆಯೇ ಅಥವಾ ಆಯಾ ಹೆಸರಿನ ಪುರಸ್ಕಾರಗಳನ್ನು ನೀಡುವುದಕ್ಕೆ ಸೀಮಿತಗೊಂಡಿವೆಯೇ? ಇದೇ ಭಾಗದ ರನ್ನ ಪ್ರತಿಷ್ಠಾನವು ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ರೂಪಿಸಿ, ಅನುಷ್ಠಾನಗೊಳಿಸಿದ್ದನ್ನು ಮರೆಯುವಂತಿಲ್ಲ. ರನ್ನನ ಕಾವ್ಯದ ಓದನ್ನು ಕಾವ್ಯ ಆರಾಧಕರ ಜತೆಗೆ ಕಾಲೇಜು ವಿದ್ಯಾರ್ಥಿಗಳ ಬಳಿಗೂ ಕೊಂಡೊಯ್ಯಿತು. ಗಮಕ ಗಾಯನ ಮತ್ತು ಹಳಗನ್ನಡ ಓದಿನ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ರನ್ನನ ಜೊತೆಗೆ ಕನ್ನಡದ ಪ್ರಾಚೀನ ಕವಿಗಳ ಪರಿಚಯವು ಇದರಿಂದ ಆಗತೊಡಗಿತು. ಆದರೆ, ಇತ್ತೀಚಿನ ದಿನಗಳಲ್ಲಿ ಮೊದಲಿನಂತೆ ಅದರ ಚಟುವಟಿಕೆಗಳು ವಿಸ್ತರಿಸಿದಂತೆ ಕಾಣುತ್ತಿಲ್ಲ.

ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಒಂದು ಕಾಲದಲ್ಲಿ ಹೆಚ್ಚು ಕ್ರಿಯಾಶೀಲವಾಗಿತ್ತು. ಬೇಂದ್ರೆಯವರ ಬದುಕು ಮತ್ತು ಸಾಹಿತ್ಯದ 12 ಪುಸ್ತಕಗಳು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಬಂದವು. ಡಾ. ಎಂ.ಎಂ.ಕಲಬುರ್ಗಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಯುವ ಲೇಖಕರ ಪುರಸ್ಕಾರಗಳು ಮುಂದುವರಿದವು. ಇಲ್ಲಿ ರಾಜ್ಯದಾದ್ಯಂತ ಬೇಂದ್ರೆ ಕಾವ್ಯದ ಪರಿಚಯಾತ್ಮಕ ಕಾರ್ಯಕ್ರಮಗಳು ಪ್ರಮುಖವಾದವು. ಹಲವು ಯೋಜನೆಗಳು ಸಾಕಾರಗೊಂಡವು. ಆದರೆ, ಟ್ರಸ್ಟ್ ಚುಕ್ಕಾಣಿ ಹಿಡಿದವರು ಬದಲಾದಂತೆ ಕಾರ್ಯಕ್ರಮಗಳು ವೈವಿಧ್ಯ ಕಳೆದುಕೊಂಡವು ಎಂಬ ಮಾತಿದೆ. ಬೇಂದ್ರೆಯವರ ಸಾಹಿತ್ಯವನ್ನು ವಿನೂತನ ಪ್ರಯೋಗಗಳಿಂದ ಜನಮಾನಸ
ದಲ್ಲಿ ಪಸರಿಸುವುದು ಮುಖ್ಯ. ಬೇಂದ್ರೆಯವರ ನಾಟಕಗಳು ರಂಗಾಯಣಗಳಲ್ಲಿ ಪ್ರಯೋಗ ಕಾಣುವಂತೆ ಪ್ರತಿಷ್ಠಾನ ಯೋಜನೆ ರೂಪಿಸಬಹುದು.

ಈ ಟ್ರಸ್ಟ್–ಪ್ರತಿಷ್ಠಾನಗಳಿಗೆ ನೇಮಕ ಆಗುವವರ ಕಾಲಾವಧಿ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಪಷ್ಟತೆಯ ಅಭಾವ ಇದ್ದಂತಿದೆ. ಒಂದೋ, ರಾಜಕೀಯ ಪ್ರಭಾವ ಉಳ್ಳವರು ಅಧ್ಯಕ್ಷ ಸ್ಥಾನದಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಇಲ್ಲವಾದಲ್ಲಿ, ಯಾವ ವ್ಯಕ್ತಿಯ ಹೆಸರಿನಲ್ಲಿ ಟ್ರಸ್ಟ್– ಪ್ರತಿಷ್ಠಾನ ಸ್ಥಾಪನೆಯಾಗಿದೆಯೋ ಆ ವ್ಯಕ್ತಿಯ ಸಂಬಂಧಿಕರನ್ನು ಅಧ್ಯಕ್ಷ ಅಥವಾ ಸದಸ್ಯರನ್ನಾಗಿ ನೇಮಿಸಲಾಗುತ್ತಿದೆ. ಇಂತಹ ಟ್ರಸ್ಟ್– ಪ್ರತಿಷ್ಠಾನಗಳಿಗೆ ಪದಾಧಿಕಾರಿಗಳನ್ನಾಗಿ ನೇಮಿಸಲು ಇರುವ ಮಾನದಂಡಗಳೇನು? ಕೆಲವು ಪ್ರತಿಷ್ಠಾನಗಳ ಅಧ್ಯಕ್ಷರು ಸುದೀರ್ಘ ಅವಧಿಗೆ ಈ ಸ್ಥಾನವನ್ನು ಅಪ್ಪಿಕೊಂಡು ಗಟ್ಟಿಯಾಗಿ ಕುಳಿತು ಸ್ಥಾವರಗೊಂಡಿದ್ದುಂಟು. ಕೆಲವು ಪ್ರತಿಷ್ಠಾನಗಳ ಪುರಸ್ಕಾರಗಳಲ್ಲಿ ಸಾಮಾಜಿಕ ನ್ಯಾಯದ ಪಾಲನೆ ಆಗಿಲ್ಲ ಎಂಬ ದೂರು ಬಲವಾಗಿ ಕೇಳಿಬರುತ್ತಿದೆ. ಅವು ಪ್ರಬಲ ಸಮುದಾಯಗಳಿಗೆ ಸೇರಿದವರಿಗೆ ಸಂದಿವೆ ಎಂಬ ಮಾತಿದೆ. ಇಂತಹ ದೂರುಗಳು ಪ್ರತಿಷ್ಠಾನಗಳು ಮತ್ತು ಅವು ಕೊಡಮಾಡುವ ಪುರಸ್ಕಾರಗಳ ಘನತೆಗೆ ಕುಂದು ಉಂಟುಮಾಡುತ್ತವೆ.

ರಚನೆ ಮತ್ತು ನುಡಿಗಳಿಂದ ಸಮಾಜವನ್ನು ತಿದ್ದಿ, ತೀಡುವ ಹೊಣೆಗಾರಿಕೆ ಹೊಂದಿರುವ ಇವರೇ ಈ ರೀತಿ ನೈತಿಕತೆಯನ್ನು ಕಳೆದುಕೊಂಡರೆ ಹೇಗೆ? ನೈತಿಕ ಮೌಲ್ಯಕ್ಕೆ ನೆಲೆ–ಬೆಲೆ ಕೊಟ್ಟು ಮಾದರಿಯಾದವರು ಎಂ.ಎಂ.ಕಲಬುರ್ಗಿ. ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಮೊದಲ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಅವರ ಕಾಲಾವಧಿಯನ್ನು ಸಾಹಿತ್ಯದ ರಚನಾತ್ಮಕ ಕ್ರಿಯೆಯ ಸುವರ್ಣಕಾಲವೆಂದು ಸಾಹಿತ್ಯಪ್ರೇಮಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ. ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದ ಹಿಂದಿನ ಸಾಂಸ್ಕೃತಿಕ ಸಮುಚ್ಚಯದ ಕಟ್ಟಡದಲ್ಲಿ ಈ ಪ್ರತಿಷ್ಠಾನಕ್ಕೆ ಕಚೇರಿ ಪಡೆದುಕೊಂಡು, ಅಲ್ಲೇ ಸಭಾಂಗಣ ಮತ್ತು ಕಟ್ಟೀಮನಿಯವರ ಛಾಯಾಚಿತ್ರಗಳ ಮ್ಯೂಜಿಯಂ ನಿರ್ಮಿಸಿದರು. ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‌ಗೆ ಕಲಬುರ್ಗಿಯವರು ಅದೇ ಕಟ್ಟಡದಲ್ಲಿಯೇ ಕಚೇರಿಗೆ ಸ್ಥಾನ ಕಲ್ಪಿಸಿಕೊಟ್ಟರು. ಕಮ್ಮಟಗಳನ್ನು ಏರ್ಪಡಿಸಿದರು. ಕಟ್ಟೀಮನಿ ಸಮಗ್ರ ಸಂಪುಟಗಳನ್ನು ಹೊರತಂದರು. ವಿಚಾರ ಸಂಕಿರಣಗಳನ್ನು ಅರ್ಥಪೂರ್ಣವಾಗಿ ಆಯೋಜಿಸಿದರು. ಗಡಿಯ ನೆಲದಲ್ಲಿ ಕನ್ನಡ ಸಂಸ್ಕೃತಿಯನ್ನು ಬೆಳಗಿಸಿದರು. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪುರಸ್ಕಾರಗಳನ್ನು ನೀಡಿದರು. ಆಯ್ಕೆ ಪ್ರಕ್ರಿಯೆಗೆ ಪಾರದರ್ಶಕತೆ ತಂದರು. ಆಗ ಅವರ ಉತ್ಸಾಹ ಎಷ್ಟಿತ್ತೆಂದರೆ, ಯುವಕರನ್ನು ನಾಚಿಸುವಂತಿತ್ತು. ಅವರಿರುವ ತನಕ ವಿವಿಧ ಕಾರ್ಯಕ್ರಮಗಳ ಭರಾಟೆ ಕಣ್ಣು ತುಂಬುವಂತಿತ್ತು.

ತಿಂಗಳ ಸಾಹಿತಿ ಜತೆ ಮಾತುಕತೆ ಸೇರಿದಂತೆ ಹಲವು ಯಶಸ್ವಿ ಯೋಜನೆಗಳು ಅವರ ಅವಧಿಯಲ್ಲಿ ಸಾಕಾರಗೊಂಡವು. ಮೂರು ವರ್ಷಗಳು ಕಳೆದುದೇ ಅರಿವಿಗೆ ಬರಲಿಲ್ಲ. ಮೊದಲೇ ಶರಣ ಸಾಹಿತ್ಯದ ಶೋಧಕರು. ಒಬ್ಬ ವ್ಯಕ್ತಿ ಒಂದು ಸ್ಥಾನಕ್ಕೆ ಅಂಟಿಕೊಂಡು ಅಧಿಕ ಕಾಲ ಇರಬಾರದು ಎಂಬುದರಲ್ಲಿ ಅಚಲ ನಂಬಿಕೆ ಹೊಂದಿದವರು. ಸ್ಥಾವರಗೊಳ್ಳಬಾರದೆಂದು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದರು. ಇಂತಹ ಆದರ್ಶ ನಡೆಯು ನಂತರದ ಪೀಳಿಗೆಗೆ ಮಾದರಿ ಆಗಲಿಲ್ಲ ಎಂಬುದು ವಿಷಾದದ ಸಂಗತಿ.

ಲೇಖಕ: ಸಹಾಯಕ ಪ್ರಾಧ್ಯಾಪಕ, ಭಾವುರಾವ ಕಾಕತಕರ ಕಾಲೇಜು, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT