ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಹೋರಾಟಗಳಿಗೆ ದಾರಿದೀಪ ಲೋಹಿಯಾ

ಸಮಾಜವಾದಿ ಚಿಂತಕ, ಹೋರಾಟಗಾರ ರಾಮ್‌ ಮನೋಹರ್‌ ಲೋಹಿಯಾ ಸ್ಮರಣೆ
Last Updated 12 ಅಕ್ಟೋಬರ್ 2020, 5:40 IST
ಅಕ್ಷರ ಗಾತ್ರ

ಅದು 1930ರ ಕಾಲಘಟ್ಟ. ಜಿನೇವಾದಲ್ಲಿ ‘ಲೀಗ್ ಆಫ್ ನೇಷನ್ಸ್’ ಸಭೆ ನಡೆಯುತ್ತಿತ್ತು. ಅದರಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಬಿಕನೇರ್‌ನ ಮಹಾರಾಜ, ಬ್ರಿಟಿಷರ ಆಡಳಿತ ವೈಖರಿಯನ್ನು ಹೊಗಳಿ ಪುಂಖಾನುಪುಂಖವಾಗಿ ವಿವರಿಸುತ್ತಿದ್ದ. ಆಗ ಸಭಾಂಗಣದ ಪ್ರೇಕ್ಷಕರ ಗ್ಯಾಲರಿಯಿಂದ ಶಿಳ್ಳೆಯೊಂದು ಜೋರಾಗಿ ಕೇಳಿಸುತ್ತದೆ. ಇದನ್ನು ಕೇಳಿ ಮಹಾರಾಜ ತನ್ನ ಭಾಷಣವನ್ನು ನಿಲ್ಲಿಸಿ ಅಚ್ಚರಿಯಿಂದ ಅತ್ತ ನೋಡುತ್ತಾನೆ. ಅಲ್ಲಿ ಕನ್ನಡಕ ಧರಿಸಿದ್ದ ಕುಳ್ಳಗಿನ 22ರ ಹರೆಯದ ತರುಣನೊಬ್ಬ ನಸು ನಗುತ್ತ ನಿಂತಿದ್ದ. ಮಹಾರಾಜನ ಭಾಷಣಕ್ಕೆ ಶಿಳ್ಳೆಯ ಮೂಲಕ ವಿರೋಧ ವ್ಯಕ್ತಪಡಿಸಿದ್ದ ಆ ಯುವಕನ ಕಣ್ಣುಗಳಲ್ಲಿ ಆಗಲೇ ಹೋರಾಟದ ಕಿಚ್ಚು ಪ್ರಜ್ವಲಿಸುತ್ತಿತ್ತು. ಯುವಕನನ್ನು ಸಭಾಂಗಣದಿಂದ ಹೊರದಬ್ಬಲಾಯಿತು.

ಆತ ಬೇರೆ ಯಾರೂ ಅಲ್ಲ ಭಾರತದ ರಾಜಕೀಯ ಇತಿಹಾಸದಲ್ಲಿ ಚಿರಸ್ಥಾಯಿಯಾಗಿರುವ ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ನಾಯಕ ರಾಮ್ ಮನೋಹರ್ ಲೋಹಿಯಾ. ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಲೋಹಿಯಾ ಮುಂದೆ ಬಡವರ, ಶ್ರಮಜೀವಿಗಳ ಪರವಾಗಿ ನಡೆದ ಹಲವಾರು ಚಳುವಳಿಗಳ ಮುಂದಾಳತ್ವ ವಹಿಸಿದ್ದರು.

ಅಕ್ಟೋಬರ್ ‪12 ಲೋಹಿಯಾ ಅವರು ಇಹಲೋಕ ತ್ಯಜಿಸಿದ ದಿನ. 1967‬ರಲ್ಲಿ ಲೋಹಿಯಾ ಮರೆಯಾದರೂ ಅವರ ಚಿಂತನೆಗಳು ಇಂದಿಗೂ ಪ್ರಸ್ತುತ.

ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯ ಅಕ್ಬರ್‌ಪುರದಲ್ಲಿ 1910 ಮಾರ್ಚ್ 23ರಂದು ಜನಿಸಿದ ಲೋಹಿಯಾ ಅವರ ತಂದೆ ಹೀರಾಲಾಲ್ ಅವರು ಗಾಂಧಿ ಅನುಯಾಯಿಯಾಗಿದ್ದರು. ಈ ಕಾರಣಕ್ಕೆ ಲೋಹಿಯಾ ಅವರಿಗೆ ಎಳವೆಯಲ್ಲಿಯೇ ಗಾಂಧೀಜಿ ಅವರನ್ನು ಭೇಟಿಯಾಗುವ ಅವಕಾಶ ಲಭಿಸಿತ್ತು. ಕಲ್ಕತ್ತ ವಿಶ್ವವಿದ್ಯಾಲಯದ ಅಧೀನದಲ್ಲಿರುವ ವಿದ್ಯಾಸಾಗರ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ ಲೋಹಿಯಾ ಅವರು ಜರ್ಮನಿಯ ಬರ್ಲಿನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ ಪಡೆಯುತ್ತಾರೆ.

1932ರಲ್ಲಿ ಭಾರತಕ್ಕೆ ಮರಳಿದ ಲೋಹಿಯಾ ಸತ್ಯಾಗ್ರಹಗಳಲ್ಲಿ ಪಾಲ್ಗೊಂಡು ಸೆರೆವಾಸ ಕೂಡ ಅನುಭವಿಸಿದರು. ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯಲ್ಲಿದ್ದರೂ ಜಯಪ್ರಕಾಶ್ ನಾರಾಯಣ್, ಅಚ್ಯುತ ಪಟವರ್ಧನ, ಅಶೋಕ್ ಮೆಹ್ತಾ ಮೊದಲಾದವರೊಂದಿಗೆ ಸೇರಿ ಶ್ರಮಿಕರ ಪರವಾಗಿ ಹೋರಾಟ ನಡೆಸುವ ಸಂಕಲ್ಪದಿಂದ ಬಣ ಕಟ್ಟಿಕೊಂಡರು.‘ಕಾಂಗ್ರೆಸ್ ಸೋಷಿಯಲಿಸ್ಟ್’ ಎಂಬ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು.

1939ರಲ್ಲಿ ಎರಡನೇ ವಿಶ್ವಮಹಾಯುದ್ಧದಲ್ಲಿ ಬ್ರಿಟನ್ ಭಾಗಿಯಾದಾಗ ಅದು ಭಾರತವನ್ನೂ ಬಲವಂತವಾಗಿ ಪಾಲ್ಗೊಳ್ಳುವಂತೆ ಮಾಡಿತ್ತು. ಯುದ್ಧ ವಿರೋಧಿ ನಿಲುವು ಹೊಂದಿದ್ದ ಲೋಹಿಯಾ ಅವರು ಇದನ್ನು ವಿರೋಧಿಸಿ ಪ್ರತಿಭಟನೆಗೆ ಕರೆ ನೀಡಿದರು. ಈ ಕಾರಣಕ್ಕೆ ರಾಜದ್ರೋಹ ಆರೋಪದ ಮೇಲೆ ಸೆರೆವಾಸವನ್ನೂ ಅನುಭವಿಸಿದರು.

ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಭೂಗತ ಚಳುವಳಿಯನ್ನೂ ಲೋಹಿಯಾ ಸಂಘಟಿಸಿದ್ದರು. ಭೂಗತರಾಗಿದ್ದುಕೊಂಡೇ ರಹಸ್ಯವಾಗಿ ಆಕಾಶವಾಣಿ ಕೇಂದ್ರವೊಂದನ್ನು ಸ್ಥಾಪಿಸಿದ್ದರು.

1944ರಲ್ಲಿ ಲೋಹಿಯಾ ಅವರನ್ನು ಮತ್ತೆ ಲಾಹೋರ್‌ನ ಜೈಲಿನಲ್ಲಿರಿಸಲಾಯಿತು. ಅಲ್ಲಿ ಅವರಿಗೆ ಚಿತ್ರಹಿಂಸೆ ನೀಡಲಾಗಿತ್ತು. 1946ರಲ್ಲಿ ಅವರು ಜೈಲಿನಿಂದ ಬಿಡುಗಡೆಗೊಂಡರು. ಅನಂತರ ಪೋರ್ಚುಗೀಸರ ಆಡಳಿತದಲ್ಲಿದ್ದ ಗೋವಾದ ವಿಮೋಚನೆಗಾಗಿ ನಡೆದ ಹೋರಾಟಕ್ಕೂ ಲೋಹಿಯಾ ಅವರೇ ತಳಹದಿ ಹಾಕಿದ್ದರು.

ದೇಶ ವಿಭಜನೆಯಾದಾಗ ಲೋಹಿಯಾ ಬೇಸರಗೊಂಡಿದ್ದರು. ಮುಂದೆ ಕಾಂಗ್ರೆಸ್‌ನಲ್ಲಿದ್ದ ಸಮಾಜವಾದಿ ವಿಭಾಗವು ಪಕ್ಷ ತೊರೆದು ಪ್ರತ್ಯೇಕ ಪಕ್ಷ ಕಟ್ಟಿಕೊಂಡಿತು. ಲೋಹಿಯಾ ಅವರು ಅದರಲ್ಲಿ ಮುಂಚೂಣಿಯಲ್ಲಿದ್ದರು. ಮಧ್ಯಮ ವರ್ಗ, ರೈತರು, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸುವ ಸಲುವಾಗಿ ಈ ಪಕ್ಷವು ರೂಪುಗೊಂಡಿತು.

ಜವಾಹರಲಾಲ್ ನೆಹರೂ ಅವರ ವಿರುದ್ಧದ ಟೀಕಾಕಾರರಲ್ಲಿ ಲೋಹಿಯಾ ಅವರೂ ಒಬ್ಬರಾಗಿದ್ದರು. 1951ರಲ್ಲಿ ಕರ್ನಾಟಕದ ಕಾಗೋಡಿನಲ್ಲಿ ನಡೆದ ರೈತ ಹೋರಾಟದಲ್ಲೂ ಲೋಹಿಯಾ ಅವರು ಪಾಲ್ಗೊಂಡಿದ್ದರು.

ಜಾತಿ ವ್ಯವಸ್ಥೆ, ವಿದೇಶ ನೀತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಹಲವು ಕೃತಿಗಳನ್ನು ಅವರು ರಚಿಸಿದ್ದರು. ಬಡವರಿಗೆ, ಶ್ರಮಿಕರಿಗಾಗಿ ಹೋರಾಟ ನಡೆಸಿರುವ ಅವರು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ. ಲೋಹಿಯಾ ವಾದದಿಂದ ಪ್ರಭಾವಿತರಾಗಿ ರಾಷ್ಟ್ರಮಟ್ಟದಲ್ಲಿ ಹಲವು ರಾಜಕೀಯ ನಾಯಕರು ಮುನ್ನೆಲೆಗೆ ಬಂದಿದ್ದಾರೆ. ಅವರ ಹೋರಾಟವು ಇಂದಿಗೂ ಹಲವರಿಗೆ ದಾರಿದೀಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT