ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಸಮುದಾಯದ ಏಳಿಗೆ: ನುಡಿಯ ನೆಲೆಗಟ್ಟು

ಕಲಿಕೆ, ದುಡಿಮೆಯ ಸುತ್ತಲಿನ ನಮ್ಮ ಕೊರತೆಗಳನ್ನು ತುಂಬಿಕೊಳ್ಳುವುದು ಹೇಗೆ?
Last Updated 21 ಅಕ್ಟೋಬರ್ 2020, 20:41 IST
ಅಕ್ಷರ ಗಾತ್ರ

ಬೆನೆಡಿಕ್ಟ್ ಆ್ಯಂಡರ್ಸನ್ ಅನ್ನುವ ರಾಜಕೀಯ ತಜ್ಞ ‘ಇಮ್ಯಾಜಿನ್ಡ್ ಕಮ್ಯುನಿಟೀಸ್’ ಅನ್ನುವ ಪುಸ್ತಕವನ್ನು 1983ರಲ್ಲಿ ಬರೆದ. ರಾಷ್ಟ್ರೀಯತೆಯ ಮೂಲವನ್ನು ಅರಸುವ ಈ ಹೊತ್ತಗೆಯಲ್ಲಿ ಆತನ ವಾದ ಇಷ್ಟೇ: ‘ದೇಶವೆನ್ನುವುದು ಒಂದು ಕಲ್ಪಿತ ಸಮುದಾಯ’. ಎಷ್ಟು ಪುಟ್ಟ ದೇಶವಾದರೂ ಅದರ ಎಲ್ಲ ಸದಸ್ಯರು ಉಳಿದ ಸದಸ್ಯರನ್ನು ವೈಯಕ್ತಿಕವಾಗಿ ಬಲ್ಲವರಾಗಿರಲು ಸಾಧ್ಯವಿಲ್ಲ. ಅಷ್ಟಾಗಿಯೂ ಒಬ್ಬ ಸದಸ್ಯ ಆ ದೇಶದ ಇನ್ನಾವುದೋ ಮೂಲೆಯ ಇನ್ನೊಬ್ಬನನ್ನು ನಮ್ಮವನು ಅಂದುಕೊಳ್ಳಬೇಕು ಅಂದರೆ ಅದು ಕಲ್ಪಿಸಿಕೊಳ್ಳುವಿಕೆಯಿಂದ ಮಾತ್ರ ಸಾಧ್ಯ ಅನ್ನುವುದು ಆತನ ವಾದ.

ಬೌದ್ಧಿಕ ವರ್ಗ ಇಂತಹದ್ದೊಂದು ಕಲ್ಪನೆಯನ್ನು ಬಿತ್ತಿ, ಅದಕ್ಕೆ ಪೂರಕವಾದ ಕತೆ-ಉಪಕತೆಗಳನ್ನು ಹೆಕ್ಕಿ ತಂದು ಈ ಕಲ್ಪನೆಯನ್ನು ಗಟ್ಟಿಗೊಳಿಸುತ್ತ ಹೋದಂತೆ ಜನಸಾಮಾನ್ಯರಲ್ಲಿ ಇದು ಆಳವಾಗಿ ಬೇರೂರುತ್ತದೆ. ಸುಮ್ಮನೆ ಯೋಚಿಸಿ ನೋಡಿ, ಮಣಿಪುರದ ಒಬ್ಬ ವ್ಯಕ್ತಿಯನ್ನೋ, ರಾಜಸ್ಥಾನದ ಒಬ್ಬ ವ್ಯಕ್ತಿಯನ್ನೋ ನಮ್ಮ ತಂದೆ-ತಾತ-ಮುತ್ತಾತನ ಕಾಲದಲ್ಲಿ ಯಾರೂ ಒಮ್ಮೆಯೂ ಭೇಟಿಯಾಗಿರುವ ಸಾಧ್ಯತೆ ಬಹುತೇಕ ಇಲ್ಲ. ಅಷ್ಟಾಗಿಯೂ ಇವತ್ತು ಅವರು ನಮ್ಮವರು ಅಂದುಕೊಳ್ಳುವ ಹಾಗೆ ಮಾಡುವುದು ಈ ಇಮ್ಯಾಜಿನ್ಡ್ ಕಮ್ಯುನಿಟಿ ಅನ್ನುವ ಕಲ್ಪನೆಯೇ.

ಈ ಕಲ್ಪನೆ ಬರೀ ದೇಶ ಅನ್ನುವ ನೆಲೆಗೆ ಸೀಮಿತ ವಾಗಿರಬೇಕಿಲ್ಲ. ಜಗತ್ತಿನ ಮುಸ್ಲಿಮರೆಲ್ಲ ಒಂದು, ಹಿಂದೂಗಳೆಲ್ಲ ಒಂದು, ಕ್ರೈಸ್ತರೆಲ್ಲ ಒಂದು, ತಮಿಳರೆಲ್ಲ ಒಂದು, ಕನ್ನಡಿಗರೆಲ್ಲ ಒಂದು, ಕಾರ್ಮಿಕರೆಲ್ಲ ಒಂದು, ದಲಿತರೆಲ್ಲ ಒಂದು, ಲಿಂಗಾಯತರೆಲ್ಲ ಒಂದು... ಹೀಗೆ ಧರ್ಮ, ಜಾತಿ, ಭಾಷೆಯ ನೆಲೆಯಲ್ಲೂ ಹಲವು ಕಲ್ಪಿತ ಸಮುದಾಯಗಳನ್ನು ಕಟ್ಟಬಹುದು. ಈಗ ಕೇಳಿಕೊಳ್ಳಬೇಕಾದ ಪ್ರಶ್ನೆ ಏನೆಂದರೆ, ಎಲ್ಲವೂ ಕಲ್ಪಿತ ಸಮುದಾಯ ಗಳೇ ಆದರೆ ಯಾವ ಒಂದು ಕಲ್ಪಿತ ಸಮುದಾಯದ ಪರಿ ಕಲ್ಪನೆ ಹೆಚ್ಚು ಜನರಿಗೆ ಒಳಿತು ತರಬಲ್ಲದು ಅನ್ನುವುದು.

ಪ್ರಪಂಚದ ಸುತ್ತ ಒಮ್ಮೆ ಕಣ್ಣು ಹಾಯಿಸಿ. ಹಲವು ಮುಂದುವರಿದ ನಾಡುಗಳಲ್ಲಿ ಅಲ್ಲಿನ ಜನರ ಬದುಕು ಮತ್ತು ಬಿಡುಗಡೆಯ ಎಲ್ಲ ಸಾಧ್ಯತೆಗಳನ್ನು ಅದ್ಭುತವಾಗಿ ಹೇಗೆ ಕಟ್ಟಲಾಗಿದೆ ಮತ್ತು ಅದಕ್ಕೆ ಯಾವ ‘ಕಲ್ಪಿತ ಸಮುದಾಯ’ದ ನೆಲೆಯನ್ನು ಬಳಸಲಾಗಿದೆ ಅಂತ ನೋಡಿದಾಗ ಅದು ಧರ್ಮ, ಜಾತಿ, ವರ್ಗ ಇತ್ಯಾದಿಗಳಿಗಿಂತ ಹೆಚ್ಚಾಗಿ ‘ಭಾಷೆ’ಯ ಸುತ್ತಲಿನ ಪರಿಕಲ್ಪನೆ ಎಂದು ಕಾಣಿಸುತ್ತದೆ. ಭಾಷೆಯೇ ಯಾಕಾಗಬೇಕು ಅನ್ನುವ ಪ್ರಶ್ನೆ ಕೇಳಿಕೊಂಡರೆ ಅಲ್ಲಿ ಉತ್ತರ ಸರಳವಿದೆ. ಭಾಷೆಯ ಮೂಲಕವೇ ಜನಸಮುದಾಯಕ್ಕೆ ಕಲಿಕೆ, ಆಡಳಿತ, ದುಡಿಮೆಯ ಏರ್ಪಾಡುಗಳನ್ನು ಹೆಚ್ಚು ಸಮರ್ಥವಾಗಿ, ಸಮಾನವಾಗಿ, ಹೆಚ್ಚು ಜನಕ್ಕೆ ತಲುಪಲಾಗುವಂತೆ ಕಟ್ಟಲು ಸಾಧ್ಯ.

ಇನ್ನೇನು, ಒಂದು ವಾರ ಉರುಳಿದರೆ ಕರ್ನಾಟಕ ರಾಜ್ಯೋತ್ಸವದ ದಿನ. ಸ್ವಾತಂತ್ರ್ಯದ ನಂತರ ಕನ್ನಡಿಗರೆಲ್ಲ ಒಂದು ರಾಜಕೀಯದ ಆಳ್ವಿಕೆಯಡಿ ಬಂದರೂ 65 ವರ್ಷಗಳಲ್ಲಿ ಅಂದುಕೊಂಡಷ್ಟು ಪ್ರಗತಿಯಾಗಿಲ್ಲ ಎಂದು ಕಾಣುತ್ತೇವೆ. ನುಡಿಯ ಸುತ್ತಲಿನ ಪರಿಕಲ್ಪನೆಯಲ್ಲಿ ಅರಳಿದ ರಾಜ್ಯವೊಂದು ಯಾಕೆ ಅಂತಹುದೇ ನೆಲೆಗಟ್ಟಿನ ಅನೇಕ ನಾಡುಗಳ ಹೋಲಿಕೆಯಲ್ಲಿ ಮುಂದುವರಿಯಲಿಲ್ಲ ಎಂದು ನೋಡಿದಾಗ ಮೂರು ವಿಷಯಗಳಲ್ಲಿ ಕೊರತೆಗಳು ಕಾಣುತ್ತವೆ.

ಮೊದಲನೆಯದ್ದು: ಕನ್ನಡಿಗರಲ್ಲಿನ ಉದ್ಯಮಶೀಲತೆಯ ಕೊರತೆ. ಸ್ವಾತಂತ್ರ್ಯ ಬರುವ ಹೊತ್ತಿನಲ್ಲಿ ಕುವೆಂಪು ಒಂದು ಕಡೆ ಹೇಳುತ್ತಾರೆ: ‘ಕನ್ನಡದ ನೆಲದೊಗ್ಗಟ್ಟಿಗಾಗಿ ಕರ್ನಾಟಕ ಏಕೀಕರಣದ ರಾಜಕೀಯ ಚಳವಳಿ ನಡೆಯುತ್ತಿದೆ. ಕನ್ನಡದ ನಡೆಯ ಮತ್ತು ನುಡಿಯ ಒಗ್ಗಟ್ಟಿಗಾಗಿ ಸಾಹಿತ್ಯದ ಸಾಂಸ್ಕೃತಿಕ ಚಳವಳಿ ಮುಂಬರಿಯುತ್ತಿದೆ. ಕನ್ನಡ ನಾಡಿನ ಸಿರಿಯ ಏಳ್ಗೆಗಾಗಿ ಆರ್ಥಿಕ ಚಳವಳಿ ಇನ್ನೂ ಸಾಕಷ್ಟು ನಡೆದಿಲ್ಲ; ಇನ್ನೂ ಸ್ಪಷ್ಟವಾಗಿ ರೂಪುಗೊಂಡಿಲ್ಲ. ಆದರೆ ಅದೂ ಇಂದೋ ನಾಳೆಯೋ ರೂಪುಗೊಳ್ಳಲೇಬೇಕಾಗಿದೆ. ಕನ್ನಡ ನಾಡಿ ನಲ್ಲಿ ಕನ್ನಡಿಗರ ಬ್ಯಾಂಕುಗಳೂ ಕನ್ನಡಿಗರ ಜೀವವಿಮಾ ಕಂಪನಿಗಳೂ ಕನ್ನಡಿಗರ ಕಾರ್ಖಾನೆಗಳೂ ಕನ್ನಡಿಗರ ಕೈಗಾರಿಕೆಗಳೂ ಮತ್ತು ಕನ್ನಡಿಗರ ವ್ಯಾಪಾರಸಂಸ್ಥೆಗಳೂ ಹುಟ್ಟಿ ಬೆಳೆದು ಕರ್ನಾಟಕದ ಸಂಪದಭ್ಯುದಯದ ಮಟ್ಟವನ್ನು ಮೇಲ್ಗೊಳಿಸಬೇಕಾದರೆ, ನಮ್ಮವರು ಕಣ್ಣುಮುಚ್ಚಿಕೊಂಡು ಹೊರನಾಡಿಗರ ಕೈ ಬಾಯಿ ತುಂಬುವ ತಮ್ಮ ದಾನಶೌರ್ಯದ ವಿಚಾರದಲ್ಲಿ ಇನ್ನೂ ಸ್ವಲ್ಪ ಹೆಚ್ಚಿನ ವಿವೇಚನೆಯಿಂದ ವರ್ತಿಸಬೇಕಾಗಿರುವ ಕಾಲ ಈಗಲೀಗ ಬಂದಿದೆ’.

ವಿಪರ್ಯಾಸವೆಂದರೆ, ಅವರು ಹಾಗೆ ಹೇಳಿ ಅರವತ್ತು ವರ್ಷಗಳೇ ಆದರೂ ಈ ದಿಸೆಯಲ್ಲಿ ಕನ್ನಡಿಗರು ಸಾಧಿಸಿದ ಪ್ರಗತಿ ಅತ್ಯಲ್ಪ. ಸ್ವಾತಂತ್ರ್ಯ ನಂತರ ಬಂದ ಬಹುತೇಕ ಸರ್ಕಾರಗಳೂ ‘ಕನ್ನಡಿಗರ ಉದ್ಯಮಶೀಲತೆ’ ಹೆಚ್ಚಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡದ ಪರಿಣಾಮವಾಗಿ ಇಂದು ಕನ್ನಡಿಗರು ಬಹುತೇಕ ವ್ಯಾಪಾರಗಳನ್ನು ಹೊರಗಿನವರಿಗೆ ಬಿಟ್ಟು ಕೊಟ್ಟು, ಅವರ ವ್ಯಾಪಾರಕ್ಕೆ ಕೇವಲ ಗ್ರಾಹಕರಾಗಿ ನಿಂತಿದ್ದೇವೆ.

ಎರಡನೆಯದ್ದು: ಕಲಿಕೆಯಲ್ಲಿ ಕುಗ್ಗುತ್ತಿರುವ ಕನ್ನಡದ ಪಾತ್ರ. ಒಂದು ಕಾಲಕ್ಕೆ ಹಡಗು ಹತ್ತಿ ಏಷ್ಯಾ, ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕದ ಪ್ರದೇಶಗಳನ್ನು ಸೂರೆ ಹೊಡೆಯುತ್ತ ಕಳ್ಳತನವನ್ನೇ ಕಸುಬಾಗಿಸಿಕೊಂಡಿದ್ದ ಪಶ್ಚಿಮದ ನಾಡುಗಳು ಹದಿನೇಳು-ಹದಿನೆಂಟರ ಶತಮಾನದ ಈಚೆ ವಿಜ್ಞಾನ ಮತ್ತು ತಂತ್ರಜ್ಞಾನದ ಕಲಿಕೆಗೆ ಮತ್ತು ಆ ಕಲಿಕೆ ಅತೀ ಹೆಚ್ಚು ಜನರನ್ನು ತಲುಪುವಂತೆ ತಮ್ಮ ನುಡಿಗಳನ್ನು ಸಜ್ಜುಗೊಳಿಸಲು ನೀಡಿದ ಗಮನವೇ ಇಂದು ಆ ನಾಡುಗಳನ್ನು ಜಗತ್ತಿನ ಅತ್ಯಂತ ಮುಂದುವರಿದ ನಾಡುಗಳ ಸಾಲಿನಲ್ಲಿ ನಿಲ್ಲಿಸಲು ಕಾರಣವಾಗಿದ್ದು. ಇಂದು ಜಾಗತೀಕರಣದ ರೂಪದಲ್ಲಿ ನಡೆಯುತ್ತಿರುವ ವ್ಯಾಪಾರ-ವಹಿವಾಟಿನಲ್ಲೂ ವಿಜ್ಞಾನ-ತಂತ್ರಜ್ಞಾನದ ಆವಿಷ್ಕಾರಗಳಲ್ಲಿ ಯಾರು ಮುಂಚೂಣಿಯಲ್ಲಿದ್ದಾರೋ ಅವರಿಗೇ ಹೆಚ್ಚು ಲಾಭವಾಗುತ್ತಿದೆ. ಜ್ಞಾನ-ತಂತ್ರಜ್ಞಾನದ ತಿಳಿವಳಿಕೆ ಹೆಚ್ಚು ವ್ಯಾಪಕವಾಗಿ, ಹೆಚ್ಚು ಜನರು ಅದರಲ್ಲಿ ತಮ್ಮ ಕೊಡುಗೆಯನ್ನು ನೀಡುತ್ತ, ಅದರಿಂದ ಆರ್ಥಿಕ ಲಾಭ ಹೊಂದಬೇಕು ಅಂದರೆ ಕಲಿಕೆ ಮುಖ್ಯವಾಗುತ್ತದೆ. ಇಂತಹ ಕಲಿಕೆ ಕನ್ನಡಿಗರೆಲ್ಲರಿಗೂ ದೊರೆಯಬೇಕು ಅಂದರೆ ಅದಕ್ಕಿರುವ ದಾರಿ ಕನ್ನಡದಲ್ಲಿ ಇದನ್ನೆಲ್ಲ ಸಾಧ್ಯವಾಗಿಸುವುದಾಗಿದೆ.

ಉದ್ಯಮಶೀಲತೆಯಲ್ಲಿ ಹಿಂದಿರುವ ಕನ್ನಡಿಗರು ಈಗ ಅತೀ ಹೆಚ್ಚು ಬಂಡವಾಳ ಬೇಡುವ ಯಾವುದೇ ಉದ್ಯಮಕ್ಕೂ ಕೈಹಾಕಿ ಗೆಲ್ಲುವುದು ಕಷ್ಟಸಾಧ್ಯ. ಹೆಚ್ಚು ಬಂಡವಾಳ ಬೇಡದ, ಜ್ಞಾನದ ಬಲದಿಂದ ಸಾಧ್ಯವಾಗಿಸಿಕೊಳ್ಳುವ ಉದ್ಯಮದ ಅವಕಾಶವೊಂದೇ ಇಂದು ನಮ್ಮೆದುರಿಗಿರುವ ಆಯ್ಕೆ. ಇದನ್ನು ಹೆಚ್ಚು ಸಮರ್ಥವಾಗಿ ಕೈಗೂಡಿಸಿಕೊಳ್ಳಲು, ಕಲಿಕೆಯಲ್ಲಿ ಕುಸಿಯುತ್ತಿರುವ ಕನ್ನಡದ ಪಾತ್ರವನ್ನು ನಿಲ್ಲಿಸಿ, ಅದಕ್ಕೆ ಬಲ ತುಂಬುವ ಯೋಜನೆಗಳ ತುರ್ತಿದೆ.

ಮೂರನೆಯದ್ದು: ಕರ್ನಾಟಕ ಕೇಂದ್ರಿತವಾದ ರಾಜಕಾರಣದ ಅಗತ್ಯ. ಕರ್ನಾಟಕದ ರಾಜಕಾರಣವು ಕರ್ನಾಟಕ ಕೇಂದ್ರಿತವಾದ ನೆರೆಟಿವ್‌ಗಳತ್ತ ಸಾಗದೇ ಜಾತಿಯತ್ತ, ಧರ್ಮದತ್ತ ಸರಿದಷ್ಟೂ ನಮ್ಮ ರಾಜಕಾರಣ ನಮ್ಮ ಏಳಿಗೆಯ ಸುತ್ತ ರೂಪುಗೊಳ್ಳುವುದಿಲ್ಲ. ಇದರ ಪರಿಣಾಮವನ್ನು ನಾವು ಈಗಾಗಲೇ ನೋಡುತ್ತಿದ್ದೇವೆ. ಜಿಎಸ್‌ಟಿಯಂತಹ ತೆರಿಗೆಯು ರಾಜ್ಯಗಳ ಸ್ವಾಯತ್ತತೆಗೆ ದೊಡ್ಡ ಏಟು ಕೊಡುತ್ತದೆ ಅನ್ನುವ ಆತಂಕವನ್ನು ಕಡೆಗಣಿಸಿ ಜಿಎಸ್‌ಟಿಗೆ ಸಹಿ ಹಾಕಿದೆವು. ಆದರೆ ಈಗ ಸಂವಿಧಾನಬದ್ಧವಾಗಿ ಸಿಗಬೇಕಾದ ಪರಿಹಾರದ ಹಣವನ್ನೂ ಸಾಲದ ರೂಪದಲ್ಲಿ ಪಡೆದುಕೊಂಡು ರಾಜ್ಯ ನಡೆಸಬೇಕಾದ ಹಣಕಾಸಿನ ದುರ್ಗತಿ ನಮಗೊದಗಿದೆ.

ಎರಡು ವರ್ಷಗಳಿಂದ ಸತತ ನೆರೆಗೆ ಸಿಲುಕಿ ಕೋಟಿಗಟ್ಟಲೆ ಜನರ ಬದುಕು ಮುಳುಗಡೆಯಾಗಿದ್ದರೂ ನೆರೆ ಪರಿಹಾರ ಬರಬೇಕಾದಷ್ಟು ಬರಲಿಲ್ಲ ಎಂಬ ಕೊರಗಿದೆ. ಕೊರೊನಾ ನೀಡಿದ ಹೊಡೆತಕ್ಕೆ ಸದ್ಯಕ್ಕೆ ಸರ್ಕಾರಿ ನೌಕರರಿಗೆ ಸಂಬಳ ಕೊಟ್ಟರೆ ಅದೇ ಹೆಚ್ಚು ಅನ್ನುವ ಸ್ಥಿತಿಯೂ ಬಂದೊದಗಿದೆ. ಆದರೆ ಇಂತಹ ಸ್ಥಿತಿಯಲ್ಲಿ ದೆಹಲಿಯ ಹೈಕಮಾಂಡಿನ ಭಯವಿಲ್ಲದೇ ರಾಜ್ಯದ ಪಾಲನ್ನು ಕೇಳುವ ಎದೆಗಾರಿಕೆ ನಮ್ಮ ರಾಜಕಾರಣಿಗಳಲ್ಲಿ ಯಾಕೆ ಬಂದಿಲ್ಲ ಅಂದರೆ ಅಂತಹ ಒತ್ತಡ ಸೃಷ್ಟಿಸುವ ‘ಕರ್ನಾಟಕ ಕೇಂದ್ರಿತ ರಾಜಕಾರಣ’ ನಮ್ಮಲ್ಲಿಲ್ಲ ಅನ್ನುವುದೇ ಉತ್ತರ.

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದಿಂದ ಭಾರತ ಅನ್ನುವ ವಾದಕ್ಕೆ ಒಂದಿಷ್ಟು ಬಲ ತಂದುಕೊಳ್ಳದೇ ಹೋದರೆ ಕಲಿಕೆ, ದುಡಿಮೆಯ ಸುತ್ತಲಿನ ನಮ್ಮ ಕೊರತೆಗಳನ್ನು ತುಂಬಿಕೊಳ್ಳುವುದೂ ಅಸಾಧ್ಯ.

ಬೆನೆಡಿಕ್ಟ್ ಆ್ಯಂಡರ್ಸನ್ ಹೇಳಿದ ಕಲ್ಪಿತ ಸಮುದಾಯದ ವಾದವನ್ನು ಭಾಷೆಯ ವಿಚಾರಕ್ಕೆ ಹಿಗ್ಗಿಸಿ, ಅದರ ಸುತ್ತ ಈ ಮೂರು ವಿಚಾರಗಳನ್ನು ಇರಿಸಿ ಯೋಚಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT