ಗುರುವಾರ , ಅಕ್ಟೋಬರ್ 29, 2020
19 °C

PV Web Exclusive: ಅಧಿಕಾರ ಮೊಟಕು, ಅಭಿವೃದ್ಧಿಗೂ ಮೊಟಕು!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಪಂಚಾಯ್ತಿಗಳ ಅಧ್ಯಕ್ಷ–ಉಪಾಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ ರಾಜ್ (ತಿದ್ದುಪಡಿ) ಮಸೂದೆಗೆ, ಕಾಂಗ್ರೆಸ್‌ ಸದಸ್ಯರ ತೀವ್ರ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಒಪ್ಪಿಗೆ ಪಡೆದಿದ್ದಾಗಿದೆ. ಪಂಚಾಯ್ತಿ ಚುನಾವಣೆಗಳತ್ತ ಗ್ರಾಮಗಳು ಆಸೆಗಣ್ಣಿನಲ್ಲಿ ನೋಡುತ್ತಿರುವ ಹೊತ್ತಿನಲ್ಲೇ ಒಪ್ಪಿಗೆಯ ನಡಾವಳಿ ಕೊನೆಗೊಂಡಿದೆ.

ಅಧಿಕಾರದ ಅವಧಿಯನ್ನು ಹೆಚ್ಚಿಸುವ ಸಂದರ್ಭದಲ್ಲಿ ನಡೆದಿದ್ದ ಚರ್ಚೆಗೆ ಹೋಲಿಸಿದರೆ, ಮೊಟುಕುಗೊಳಿಸುವ ನಿರ್ಧಾರದ ಬಗ್ಗೆ ರಾಜ್ಯದಲ್ಲಿ ಹೆಚ್ಚಿನ ಚರ್ಚೆಯೇನೂ ನಡೆಯಲಿಲ್ಲ. ಅಧ್ಯಕ್ಷ–ಉಪಾಧ್ಯಕ್ಷರ ಗಾದಿ ಮೇಲೆ ಕಣ್ಣಿಟ್ಟು ಕುಂತವರಿಗೆ ಇದರ ಅರಿವು ಇನ್ನೂ ಆಗಿಲ್ಲವೇ? ಆಗಿಲ್ಲ ಎಂದು ಹೇಳುವುದು ಕಷ್ಟ.

ಸ್ಥಳೀಯ ಆಡಳಿತದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು ಎಂಬ ಕಾರಣ ಕೊಟ್ಟು, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅಧ್ಯಕ್ಷ–ಉಪಾಧ್ಯಕ್ಷರ ಅಧಿಕಾರವನ್ನು ಐದು ವರ್ಷಕ್ಕೆ ಹೆಚ್ಚಿಸಲಾಗಿತ್ತು. ಅದಕ್ಕಾಗಿಯೇ ಆಗ ಉನ್ನತ ಮಟ್ಟದ ಅಧ್ಯಯನ ಸಮಿತಿಯನ್ನೂ ರಚಿಸಲಾಗಿತ್ತು. ಈಗ ಅಧಿಕಾರವನ್ನು ಮತ್ತೆ ಎರಡೂವರೆ ವರ್ಷಕ್ಕೆ ಮೊಟುಕುಗೊಳಿಸಲಾಗಿದೆ. ಈಗಿನ ಬದಲಾವಣೆಯು ಮತ್ತೆ, ಅಧ್ಯಕ್ಷರನ್ನು ಅವಿಶ್ವಾಸದಿಂದ ಪದೇಪದೇ ಇಳಿಸುವ ರಾಜಕೀಯ ಮೇಲಾಟಗಳಿಗೆ ದಾರಿ ಮಾಡುವ ಸ್ಪಷ್ಟ ಸೂಚನೆಗಳಿವೆ.

ಈಗ ಅಧಿಕಾರದ ಅವಧಿಯಷ್ಟೇ ಮೊಟುಕಾಗಿಲ್ಲ. ಪಂಚಾಯ್ತಿ ಕ್ಷೇತ್ರಗಳ ಮೀಸಲಾತಿ ಅವಧಿಯನ್ನು 10 ವರ್ಷದಿಂದ 5 ವರ್ಷಕ್ಕೆ ಇಳಿಸಲಾಗಿದೆ. ಅಧ್ಯಕ್ಷ–ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ಅವಧಿಯನ್ನೂ 30 ತಿಂಗಳಿಂದ 15 ತಿಂಗಳಿಗೆ ಇಳಿಸಲಾಗಿದೆ. ಪಂಚಾಯ್ತಿ ಚುನಾವಣೆಗಳ ಸಂದರ್ಭದಲ್ಲಿ ಮದ್ಯಮಾರಾಟಕ್ಕೆ ಇದ್ದ ನಿಷೇಧವನ್ನು ಎಂಟರಿಂದ ಎರಡು ದಿನಕ್ಕೆ ಇಳಿಸಲಾಗಿದೆ.

ಅಧ್ಯಕ್ಷ–ಉಪಾಧ್ಯಕ್ಷರಾಗಿ ಆಯ್ಕೆಯಾದವರು ತಮ್ಮ ಅಧಿಕಾರದ ಅವಧಿ ಭರ್ತಿ ಎರಡೂವರೆ ವರ್ಷ ಇದೆ ಎಂದು ನಿಶ್ಚಿಂತರಾಗಿ ಇರುವಂತಿಲ್ಲ. ಏಕೆಂದರೆ ಒಂದು ವರ್ಷ ಮೂರು ತಿಂಗಳಾಗುವಷ್ಟರಲ್ಲೇ ಅವರ ವಿರುದ್ಧ ಸದಸ್ಯರು ಅವಿಶ್ವಾಸ ಮಂಡಿಸಬಹುದು. ಅಲ್ಲಿಗೇ ಅವರ ಅಧಿಕಾರ ಕೊನೆಗೊಳ್ಳಲೂಬಹುದು!

ಪಂಚಾಯ್ತಿಗಳ ಚುನಾವಣೆ ಘೋಷಣೆಯ ದಿನದಿಂದ ಮುಕ್ತಾಯದ ದಿನದವರೆಗೂ ಮದ್ಯಮಾರಾಟ ನಿಷೇಧಗೊಳ್ಳಬೇಕು ಎಂಬುದು ಕೆ.ಆರ್‌.ರಮೇಶ್‌ಕುಮಾರ್‌ ಸಮಿತಿಯು ಹಿಂದೆ ನೀಡಿದ್ದ ಶಿಫಾರಸುಗಳ ಪೈಕಿ ಒಂದಾಗಿತ್ತು. ಈಗೇನಿಲ್ಲ. ಚುನಾವಣೆ ನಾಡಿದ್ದು ಎನ್ನುವಾಗಲೂ ಹಳ್ಳಿಗಳಲ್ಲಿ ಮದ್ಯದ ಆಮಿಷವನ್ನು ಸುಲಭವಾಗಿ ಒಡ್ಡುವ ಅವಕಾಶ ನಿರ್ಮಾಣವಾಗಿದೆ. ಚುನಾವಣೆಗಳ ಮೇಲೆ ಮದ್ಯದ ಅಮಲು ಗಾಢ ಪ್ರಭಾವ ಬೀರಲು ಅಡ್ಡಿ ಇಲ್ಲ.

ಪೂರ್ಣಾವಧಿಗೆ ಒಬ್ಬ ಅಧ್ಯಕ್ಷ–ಉಪಾಧ್ಯಕ್ಷರು ಅಧಿಕಾರದಲ್ಲಿದ್ದರೆ ಪಂಚಾಯತ್‌ ರಾಜ್‌ ವ್ಯವಸ್ಥೆಯು ಸುಸ್ಥಿರವಾಗಿರುತ್ತದೆ ಎಂಬ ಆಶಯ ಈಗ ಬುಡಮೇಲಾಗುತ್ತದೆ. ಆಡಳಿತ ಮತ್ತು ಅಭಿವೃದ್ಧಿ ವಿಷಯಗಳು ಹಿನ್ನೆಲೆಗೆ ಸರಿದು ಅಧಿಕಾರದ ಹಂಚಿಕೆಯ ತೆರೆಮರೆಯ ನಾಟಕಗಳು ನಡೆಯಲಾರಂಭಿಸುತ್ತವೆ.

ಅಧಿಕಾರ ಹಂಚಿಕೆಯ ರಾಜಕಾರಣದಿಂದ ಹಳ್ಳಿಯ ಜನ ನಿಜಕ್ಕೂ ತೊಂದರೆಗೆ ಸಿಲುಕುತ್ತಾರೆ. ಅವಿಶ್ವಾಸ ಗೊತ್ತುವಳಿ ಮಂಡನೆ, ಅಂಗೀಕಾರ, ಸರ್ಕಾರದ ಗಮನಕ್ಕೆ ತರುವುದು, ಉಪಾಧ್ಯಕ್ಷರ ಆಡಳಿತ, ಚುನಾವಣೆ ನಿಗದಿ, ಪ್ರಚಾರ, ಚುನಾವಣೆಯ ಪ್ರಕ್ರಿಯೆಗಳು ನಡೆಯುವ ಹೊತ್ತಿಗೆ, ಜನಪ್ರತಿನಿಧಿಗಳ ನಾಯಕನಿಲ್ಲದ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಕಾರ್ಯಗಳು ದಿಕ್ಕಾಪಾಲಾಗಿರುತ್ತವೆ. ಅಥವಾ ನಿಂತಲ್ಲೇ ನಿಂತಿರುತ್ತವೆ.

ಅಧಿಕಾರದ ಹಂಚಿಕೆ ಗ್ರಾಮ ಸಮುದಾಯದ ಅಭಿವೃದ್ಧಿಗಾಗಿ ನಡೆದರೆ ಅದನ್ನು ಯಾರೂ ವಿರೋಧಿಸುವುದಿಲ್ಲ. ವಿರೋಧಿಸಲೂಬಾರದು. ಆದರೆ ಅದು ಕೆಲವು ಸದಸ್ಯರ ಸಣ್ಣಾಸೆಗಳಿಗೂ ಅಧ್ಯಕ್ಷರ ಬದಲಾವಣೆ ಪ್ರಯತ್ನಗಳು ನಡೆಯುತ್ತವೆ.

‘ಹತ್ತು ದಿನ ಅಧ್ಯಕ್ಷರಾದರೂ ಸಾಕು’. ‘ಪಂಚಾಯ್ತಿ ಬೋರ್ಡಲ್ಲಿ ಅಧ್ಯಕ್ಷರೆಂದು ಹೆಸರು ಬಂದರೆ ಸಾಕು. ನಂತರ ಮಾಜಿ ಅಧ್ಯಕ್ಷರು ಎಂದು ಹೇಳಿಕೊಂಡು ತಿರುಗಾಡಬಹುದು’ ಎಂದು ಅಧ್ಯಕ್ಷರೆಂಬ ಪದನಾಮಕ್ಕಾಗಿ, ಪ್ರತಿಷ್ಠೆಗಷ್ಟೇ ಆಸೆ ಪಡುವವರು ಪಂಚಾಯ್ತಿ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲೇ ಇದ್ದಾರೆ. ಅವರ ನಡುವೆ ಗ್ರಾಮಾಭಿವೃದ್ಧಿಗಾಗಿಯೇ ಅಧ್ಯಕ್ಷರಾಗಬೇಕು ಎಂಬುವವರು ಅತಿ ಕಡಿಮೆ. ಅಂಥವರಿಗೆ ಸಿಗುವ ಅವಕಾಶವೂ ಕಡಿಮೆ.

ಅಧ್ಯಕ್ಷರಾಗಲೇಬೇಕು ಎಂಬ ಆಸೆಯುಳ್ಳವರು ಸದಸ್ಯರನ್ನು ಖರೀದಿಸುವ ‘ಕುದುರೆ ವ್ಯಾಪಾರ’ಕ್ಕೂ ಇದು ಅವಕಾಶ ಮಾಡಿಕೊಡುತ್ತದೆ. ವ್ಯಾಪಾರ, ಪ್ರವಾಸ, ಮೋಜು–ಮಸ್ತಿಗಳೇ ವಿಜೃಂಭಿಸಿದರೆ ಪಂಚಾಯತ್‌ರಾಜ್‌ ಕಾಯ್ದೆಯನ್ನು ರೂಪಿಸಿದ ಆಶಯಕ್ಕೂ ಧಕ್ಕೆ ಉಂಟಾಗುತ್ತದೆ.

ಅಧಿಕಾರದ ಅವಧಿಯನ್ನು ಕಡಿತಗೊಳಿಸಿರುವುದರಿಂದ ಪಂಚಾಯ್ತಿಗಳಲ್ಲಿ ಗಟ್ಟಿ ನಾಯಕತ್ವಕ್ಕೆ ಅವಕಾಶ ದೊರಕದು. ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನದ ಮಹತ್ವ, ಹೊಣೆಗಾರಿಕೆಯನ್ನು ಅರಿತುಕೊಳ್ಳುವಷ್ಟರಲ್ಲೇ ಅಧಿಕಾರದ ಅವಧಿ ಮುಗಿಯುತ್ತ ಬಂದಿರುತ್ತದೆ ಎಂಬುದು ಪಂಚಾಯ್ತಿ ಸದಸ್ಯರಾಗಿದ್ದವರ ಮಾತು. ಅಧಿಕಾರವು ಪೂರ್ಣಾವಧಿ ಇದ್ದರಷ್ಟೇ ಪರಿಣಾಮಕಾರಿ ಆಡಳಿತ ಸಾಧ್ಯ ಎಂಬುದು ಅವರ ಪ್ರತಿಪಾದನೆ.

ಆದರೆ ಅವರ ಮಾತನ್ನು ಬಹುತೇಕರು ಒಪ್ಪುವುದಿಲ್ಲ ಎಂಬುದನ್ನೂ ಗಮನಿಸಬೇಕು. ಏಕೆಂದರೆ ಅವರಿಗೆಲ್ಲ ಅಧಿಕಾರದ ಹಂಚಿಕೆಯೇ ಆಗಬೇಕು. ಅದು ಯಾಕೆ ಬೇಕು ಎಂಬುದಕ್ಕೆ ಸಮುದಾಯ ಕೇಂದ್ರಿತ ಕಾರಣಗಳನ್ನು ಕೊಡುವವರು ಬೆರಳೆಣಿಕೆಯಷ್ಟು ಮಂದಿ.

ಬಹುತೇಕರು ಕೊಡುವ ಸ್ವಂತ ಕಾರಣಗಳಲ್ಲಿ, ಅನಿಯಂತ್ರಿತವಾಗಿ ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ನಡೆಸಬಹುದು ಎಂಬುದು ಮೊದಲನೆಯದಾಗಿದ್ದರೆ ಅಚ್ಚರಿ‍ಪಡಬೇಕಿಲ್ಲ. ಪಂಚಾಯ್ತಿ ಸದಸ್ಯರಾಗುವುದು ಎಂದರೆ ಈಗ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ಪಡೆಯುವುದು ಎಂದೂ ಅರ್ಥ.

ಮಸೂದೆಯಿಂದಾಗಿ, ಹಲವು ಮಂದಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗುವ ಅವಕಾಶ ಸಿಗುತ್ತದೆಯಲ್ಲವೇ ಎಂದು ಕೇಳಬಹುದು. ಆದರೆ ಆಡಳಿತ ವ್ಯವಸ್ಥೆ ವ್ಯಕ್ತಿ ಕೇಂದ್ರಿತವಾದಾಗ ಸಮುದಾಯ ಬಳಲುತ್ತದೆ. ಆ ಸಾಧ್ಯತೆ ಇಲ್ಲಿ ಹೆಚ್ಚಿದೆ ಎಂಬುದನ್ನು ಮರೆಯುವಂತಿಲ್ಲ. ಅದರೊಂದಿಗೆ, ಆಡಳಿತದಲ್ಲಿ ಸ್ಥಿರತೆಗೆ ಜಾಗವಿಲ್ಲದಂತಾಗುತ್ತದೆ.

ಮಸೂದೆ ತಿದ್ದುಪಡಿಗೆ ಒಪ್ಪಿಗೆ ಪಡೆದಿರುವ ಸರ್ಕಾರವು ಹೊಸ ಮಾನದಂಡಗಳ ಅನುಸಾರವಾಗಿಯೇ ಗ್ರಾಮ ಸಮುದಾಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಪರ್ಯಾಯ ದಾರಿಗಳನ್ನು ಹುಡುಕುವ ಹೊಣೆಯನ್ನೂ ಹೊರಲೇಬೇಕು. ಹಾಗೆ ಮಾಡದೇ ಇದ್ದರೆ ಈ ತಿದ್ದುಪಡಿಯಿಂದ ಅಧ್ಯಕ್ಷ, ಉಪಾಧ್ಯಕ್ಷರಿಗೆ ಮತ್ತು ಅವರು ಒಳಗೇ ಪ್ರತಿನಿಧಿಸುವ ಪಕ್ಷಗಳಿಗಷ್ಟೇ ಅಲ್ಲದೆ, ಗ್ರಾಮ ಸಮುದಾಯಕ್ಕೆ ಪ್ರಯೋಜನವಾಗುವುದಿಲ್ಲ.

ಯಾವುದೇ ಕಾಯ್ದೆಯ ತಿದ್ದುಪಡಿ ಆಶಯವು ಮೊದಲು ಜನಪರವಾಗಿರಲೇಬೇಕು. ಸುಧಾರಣಾವಾದಿಯಾಗಿರಬೇಕು. ಸುಧಾರಣೆಯ ಹೆಸರಿನಲ್ಲಿ ಮತ್ತೆ ಹಿಂದಕ್ಕೆ ಹೋಗುವಂತಿರಬಾರದು. ಆದರೆ ಇತ್ತೀಚೆಗೆ ನಡೆದಿರುವ ಕಾಯ್ದೆಗಳ ತಿದ್ದುಪಡಿಯಲ್ಲಿ ಅಂಥ ಉದ್ದೇಶಗಳಿಲ್ಲ ಎಂಬ ದೂರುಗಳೊಂದಿಗೇ ಪ್ರತಿಭಟನೆಯ ಕಾವು ಹೆಚ್ಚಿದೆ.

ವಿದ್ಯುತ್‌ ಕಾಯ್ದೆ, ಕಾರ್ಮಿಕ ಕಾಯ್ದೆ, ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳ ತಿದ್ದುಪಡಿ ಸುಗ್ರೀವಾಜ್ಞೆಯನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ಧರಣಿ, ಪ್ರತಿಭಟನೆಗಳು ನಡೆಯುತ್ತಲೇ ಇವೆ, ಈ ಹೋರಾಟದ ನಡುವೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ ರಾಜ್ (ತಿದ್ದುಪಡಿ) ಮಸೂದೆಯ ಕುರಿತು ಚರ್ಚೆಯೇ ನಡೆಯದಿರುವುದು ಸದ್ಯ ಸೋಜಿಗದ ಸಂಗತಿ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು