ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ‘ರಾಮರಾಜ್ಯ’ ನಿರ್ಮಾಣಕ್ಕಿರುವ ಅಡ್ಡಿ

ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆಸಿರುವ ಹಿಂದೂ ಮಾದರಿಯ ಸರ್ಕಾರ ಹೇಗಿದೆಯೆಂದರೆ...
Last Updated 19 ಜನವರಿ 2022, 19:30 IST
ಅಕ್ಷರ ಗಾತ್ರ

ಮುಂದಿನ ತಿಂಗಳು ಚುನಾವಣೆ ಎದುರಿಸಲಿರುವ ಅಷ್ಟೂ ರಾಜ್ಯಗಳ ಪೈಕಿ ಬಿಜೆಪಿಗೆ ಅತಿದೊಡ್ಡ ಸವಾಲಿನದು ಉತ್ತರಪ್ರದೇಶ. ಬಿಜೆಪಿಯು ಈ ರಾಜ್ಯವನ್ನು ‘ಹಿಂದೂ ಮಾದರಿ’ ಸರ್ಕಾರದ ಪ್ರಯೋಗಶಾಲೆಯಾಗಿ ಬಳಸಿಕೊಂಡು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಕಾರ, ಈ ಮಾದರಿಯು ಪರಂಪರೆಯನ್ನು ಅಭಿವೃದ್ಧಿಯ ಜೊತೆ ಬೆರೆಸುವಂಥದ್ದು. ಈ ಮಾದರಿಯನ್ನು ಅತ್ಯುತ್ತಮವಾಗಿ ಅನುಷ್ಠಾನಕ್ಕೆ ತರಲು ಯೋಗಿ ಆದಿತ್ಯನಾಥ ಸೂಕ್ತ ವ್ಯಕ್ತಿ ಎಂದು ಪಕ್ಷವು ಭಾವಿಸಿ, ಅವರನ್ನು ಅಲ್ಲಿನ ಮುಖ್ಯಮಂತ್ರಿಯನ್ನಾಗಿಸಿತು. ಪಕ್ಷದ ಅಂದಾಜಿನ ಪ್ರಕಾರ, ಅವರು ತಮ್ಮ ಕೆಲಸವನ್ನು ಅಸಾಮಾನ್ಯವೆಂಬಂತೆ ನಿರ್ವಹಿಸಿದ್ದಾರೆ. ಯೋಗಿ ತಮ್ಮ ಎಲ್ಲ ಭಾಷಣಗಳಲ್ಲಿ ರಾಮ ಮಂದಿರ (ಪರಂಪರೆ) ಹಾಗೂ ಎಕ್ಸ್‌ಪ್ರೆಸ್‌ವೇ ಮತ್ತು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಗಳ (ಅಭಿವೃದ್ಧಿ) ಬಗ್ಗೆ ಉಲ್ಲೇಖಿಸುತ್ತಾರೆ.

ಹಿಂದುತ್ವ ಸಿದ್ಧಾಂತದ ಚಾಲಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌). ಬಿಜೆಪಿಯು ಅದರ ವಾಹನ ಮಾತ್ರ. ಪರಂಪರೆ ಮತ್ತು ಅಭಿವೃದ್ಧಿಯನ್ನು ಬೆಸೆಯುವ ಹಿಂದೂ ಮಾದರಿ ಸರ್ಕಾರವು ಆರ್‌ಎಸ್‌ಎಸ್‌ನ ಪರಿಕಲ್ಪನೆ. ರಾಮ ಮಂದಿರಕ್ಕಾಗಿನ ಹೋರಾಟದಲ್ಲಿ ಗೆಲುವು ಸಾಧಿಸಿರುವ ಸಂಘವು ಮುಂದಿನ 25 ವರ್ಷಗಳಲ್ಲಿ ‘ರಾಮರಾಜ್ಯ’ ಸ್ಥಾಪನೆಯ ಗುರಿ ಇಟ್ಟುಕೊಂಡಿದೆ ಎಂಬುದು ಅದರ ನಾಯಕರ ಭಾಷಣಗಳನ್ನು ಕೇಳುತ್ತಿರುವವರಿಗೆ ಗೊತ್ತಿರುತ್ತದೆ.

‘ರಾಮರಾಜ್ಯ’ವೆಂಬುದು ಹಿಂದೂ ರಾಷ್ಟ್ರಕ್ಕೆ ಇರುವ ಇನ್ನೊಂದು ಹೆಸರು. ರಾಮರಾಜ್ಯದ ಪರಿಕಲ್ಪನೆಯು ಜನಸಮುದಾಯಕ್ಕೆ ಹಿಂದೂರಾಷ್ಟ್ರ ಪರಿಕಲ್ಪನೆಗಿಂತಲೂ ಹೆಚ್ಚು ಹತ್ತಿರವಾಗಬಲ್ಲದು, ಬಹುತ್ವವಾದಿಗಳ ಟೀಕೆಯಿಂದ ಸುರಕ್ಷಿತವಾಗಿಯೂ ಉಳಿಯಬಲ್ಲದು ಎಂಬುದನ್ನು ಆರ್‌ಎಸ್‌ಎಸ್‌ ಕಂಡುಕೊಂಡಂತಿದೆ.

ಪ್ರಧಾನಿಯವರು ಪರಂಪರೆ ಹಾಗೂ ಅಭಿವೃದ್ಧಿಯ ಮಾತು ಆಡಿದಾಗ, ಅವು ಜನಸಾಮಾನ್ಯರ ಕಣ್ಣಿಗೆ ಎರಡು ಪರಿಕಲ್ಪನೆಗಳಂತೆ ಕಾಣಿಸಬಹುದು. ಆದರೆ, ಆರ್‌ಎಸ್‌ಎಸ್‌ಗೆ ಅವು ಬೇರೆಬೇರೆ ಅಲ್ಲ. ರಾಮಭಕ್ತಿ ಎಂಬ ಒಂದೇ ಪರಿಕಲ್ಪನೆಯಿಂದ ಉದಯಿಸಿದವು ಅವು. ಆಡಳಿತ ನಡೆಸುವವನು ರಾಮನ ಭಕ್ತ ಆಗಿರಬೇಕು ಮತ್ತು ಆತ ಅಭಿವೃದ್ಧಿಯನ್ನು ಸಾಧ್ಯವಾಗಿಸಬೇಕು– ರಾಮನು ಅಯೋಧ್ಯೆಯ ರಾಜನಾಗಿ ತನ್ನ ಪ್ರಜೆಗಳನ್ನು ನೋಡಿಕೊಂಡಂತೆ. ಆ ಮೂಲಕ ರಾಮರಾಜ್ಯವನ್ನು ಸ್ಥಾಪಿಸಬಹುದು. ಇದು ಬಿಜೆಪಿಯು ಉತ್ತರಪ್ರದೇಶದಲ್ಲಿ ಸ್ಥಾ‍ಪಿಸಲು ಯತ್ನಿಸುತ್ತಿರುವ ಹಿಂದೂ ಮಾದರಿಯ ಸರ್ಕಾರ.

ಸಾಮಾಜಿಕ ಒಳಗೊಳ್ಳುವಿಕೆಯ ವಿಚಾರದಲ್ಲಿ ಸಮಾಜವಾದಿ ಪಕ್ಷದ ಸಾಮಾಜಿಕ ನ್ಯಾಯ ಮಾದರಿಗಿಂತಲೂ ಹಿಂದೂ ಮಾದರಿಯ ಅಭಿವೃದ್ಧಿ ಹೆಚ್ಚು ಉತ್ತಮ ಎಂಬುದನ್ನು ಸಾಬೀತು ಮಾಡಲು ಮೋದಿ ಮತ್ತು ಯೋಗಿ ಹರಸಾಹಸಪಡುತ್ತಿದ್ದಾರೆ.

ಸಮಾಜವಾದಿ ಪಕ್ಷದ ಸರ್ಕಾರವು ಸೌಲಭ್ಯಗಳನ್ನು ಕೆಲವು ಜಾತಿಗಳಿಗೆ ಮಾತ್ರ ಒದಗಿಸಿತ್ತು. ಆದರೆ, ಹಿಂದೂ ಮಾದರಿಯು ಸೌಲಭ್ಯಗಳನ್ನು ಎಲ್ಲ ಜಾತಿಗಳು ಮತ್ತು ಸಮುದಾಯಗಳಿಗೆ ಒದಗಿಸಿದೆ ಎಂದು ಅವರು ಹೇಳುತ್ತಿದ್ದಾರೆ. ತಮ್ಮ ಆಡಳಿತ ಅವಧಿಯಲ್ಲಿ ಸಾಮಾಜಿಕ ಸೌಹಾರ್ದ ಮತ್ತು ಸಾಮಾಜಿಕ ಸಮಾನತೆ ನಿಜವಾಗಿಯೂ ಮೂಡಿದೆ ಎಂದೂ ಹೇಳುತ್ತಿದ್ದಾರೆ. ಈಚಿನ ವರ್ಷಗಳಲ್ಲಿ ಬಿಜೆಪಿಗೆ ಯಾದವೇತರ ಹಿಂದುಳಿದ ವರ್ಗಗಳು ಮತ್ತು ದಲಿತರಿಂದ ಸಿಗುತ್ತಿರುವ ಬೆಂಬಲವನ್ನು ತಮ್ಮ ಮಾತಿಗೆ ಆಧಾರವಾಗಿ ತೋರಿಸುತ್ತಿದ್ದಾರೆ. ಮೋದಿ ಮತ್ತು ಯೋಗಿ ಅವರನ್ನು ನಂಬುವುದಾದಲ್ಲಿ, ಉತ್ತರ ಪ್ರದೇಶವು ರಾಮರಾಜ್ಯವಾಗುವ ಹಾದಿಯಲ್ಲಿದೆ ಮತ್ತು ಅಲ್ಲಿ ರಾಮಭಕ್ತ ಆಡಳಿತಗಾರ ರಾಮನಂತೆಯೇ ಪ್ರಾಮಾಣಿಕವಾಗಿ, ನ್ಯಾಯಬದ್ಧವಾಗಿ, ನಿಷ್ಪಕ್ಷಪಾತವಾಗಿ ಆಡಳಿತ ನಡೆಸುತ್ತಿದ್ದಾರೆ.

ಆದರೆ ಪರಿಸ್ಥಿತಿ ಹಾಗಿಲ್ಲ ಎನ್ನುವುದು ಚುನಾವಣೆ ಘೋಷಣೆ ಆದಾಗ ಗೊತ್ತಾಯಿತು. ಯಾದವೇತರ ಹಿಂದುಳಿದ ವರ್ಗಗಳ ಬೆಂಬಲವನ್ನು ನೆಚ್ಚಿಕೊಂಡು ರಾಜಕೀಯ ಬದುಕು ಕಟ್ಟಿಕೊಂಡಿರುವ ಬಿಜೆಪಿಯ ಹಲವು ಶಾಸಕರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದರು. ಅವರ ಕ್ಷೇತ್ರದ ಜನ ಬಿಜೆಪಿಯ ಸಾಧನೆಯಿಂದ ಅತೃಪ್ತರಾಗಿದ್ದರು ಎಂಬುದನ್ನು ರಾಜೀನಾಮೆ ಸೂಚಿಸುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿ ಮನೆಗಳನ್ನು ನಿರ್ಮಿಸಿಕೊಳ್ಳಲು ಹಲವು ಗ್ರಾಮಗಳ ತಳವರ್ಗಗಳ ಜನರಿಗೆ ಹಣಕಾಸಿನ ನೆರವು ನಿರಾಕರಿಸಲಾಗಿದೆ ಎಂದು ವರದಿಗಳು ಹೇಳುತ್ತವೆ. ಸ್ಥಳೀಯ ಅಧಿಕಾರಿಗಳು ಕೇಳಿದಷ್ಟು ಲಂಚವನ್ನು ಕೊಡಲು ಇವರಿಗೆ ಸಾಧ್ಯವಾಗದ ಕಾರಣದಿಂದಾಗಿ ನೆರವು ನಿರಾಕರಣೆ ಆಗಿದೆ. ಪ್ರಧಾನಿಯವರನ್ನು ವಾರಾಣಸಿಯ ಸಂಸದರನ್ನಾಗಿ ಆಯ್ಕೆ ಮಾಡಿದ ಜಯಪುರ ಗ್ರಾಮದಲ್ಲಿಯೂ ಈ ರೀತಿ ಆಗಿದೆ. ಬಯಲು ಶೌಚ ಮುಕ್ತ ಗ್ರಾಮ ಎಂಬ ಹೆಗ್ಗಳಿಕೆ ಹೊತ್ತ ಕೆಲವು ಹಳ್ಳಿಗಳಲ್ಲಿ ಬಡವರು ಶೌಚಾಲಯ ಹೊಂದಿರಲಿಲ್ಲ.

ಮಹಿಳೆಯರ ಜೀವನವನ್ನು ಸುಭದ್ರಗೊಳಿಸಿದ್ದಾಗಿ ಯೋಗಿ ಹೇಳಿಕೊಂಡಿದ್ದರು. ಆದರೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಪ್ರಕಾರ, 2020ರಲ್ಲಿ ಮಹಿಳೆಯ ಘನತೆಗೆ ಚ್ಯುತಿ ತರುವ ಉದ್ದೇಶದ ಒಟ್ಟು 9,864 ಪ್ರಕರಣಗಳು ವರದಿಯಾಗಿವೆ.ತಳ ವರ್ಗಗಳಿಗೆ ಅನ್ಯಾಯವಾದ ಪ್ರತೀ ಪ್ರಕರಣದಲ್ಲಿಯೂ ಅನ್ಯಾಯ ಎಸಗಿದವರು ಮೇಲ್ವರ್ಗದವರೇ ಆಗಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಲಂಚ ಕೇಳಿದವರು, ಹಳ್ಳಿಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದವರು, ಅಪರಾಧ ಎಸಗಿದವರ ಪರವಾಗಿ ನಿಂತು ಕೆಲಸ ಮಾಡಿದ ಪೊಲೀಸರು... ಇವರೆಲ್ಲ ಮೇಲ್ವರ್ಗಗಳಿಗೆ ಸೇರಿದವರು. ಈ ತಾರತಮ್ಯವು ಯೋಗಿ ಆಡಳಿತದಲ್ಲಿ ಬದಲಾವಣೆ ಕಾಣಲಿಲ್ಲ. ಹೀಗಾಗಿ, ತಳವರ್ಗಗಳ ಜನರಲ್ಲಿ ಬಿಜೆಪಿ ಬಗ್ಗೆ ಅಸಮಾಧಾನ ಉಂಟಾಗಿದೆ.

ಅತೃಪ್ತಿಗೆ ಇಂಬು ಕೊಟ್ಟ ಇನ್ನೊಂದು ಅಂಶವೂ ಇದೆ. ಬಿಜೆಪಿಯು ಸಾಮಾಜಿಕ–ಆರ್ಥಿಕ ಪರಿಸ್ಥಿತಿ ಅಧ್ಯಯನ ನಡೆಸುವ ಉದ್ದೇಶದ ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸಿತು. ಈ ಜಾತಿ ಗಣತಿ ನಡೆಯದ ಹೊರತು ಸರ್ಕಾರಿ ಉದ್ಯೋಗಗಳು ಹಾಗೂ ಕಾಲೇಜು ಪ್ರವೇಶಕ್ಕೆ ಸಂಬಂಧಿಸಿದ ಸೌಲಭ್ಯಗಳು ಸಮಾನವಾಗಿ ಹಂಚಿಕೆ ಆಗುವುದಿಲ್ಲ ಎಂದು ಹಿಂದುಳಿದ ವರ್ಗಗಳ ಪೈಕಿ ಬಡ ಸಮುದಾಯಗಳಿಗೆ ಸೇರಿದವರು ತೀರ್ಮಾನಿಸಿದ್ದಾರೆ.

ಇತರೆ ಹಿಂದುಳಿದ ಸಮುದಾಯಗಳಿಗೆ (ಒಬಿಸಿ) ನೀಡಿರುವ ಶೇಕಡ 27ರಷ್ಟು ಮೀಸಲಾತಿಯನ್ನು ಹಿಂದುಳಿದ ವರ್ಗಗಳು (ಶೇ 7ರಷ್ಟು), ಹೆಚ್ಚು ಹಿಂದುಳಿದ ವರ್ಗಗಳು (ಶೇ 11ರಷ್ಟು) ಮತ್ತು ಅತಿಹೆಚ್ಚು ಹಿಂದುಳಿದ ವರ್ಗಗಳ (ಶೇ 9ರಷ್ಟು) ನಡುವೆ ಮರುಹಂಚಿಕೆ ಮಾಡಬೇಕು ಎಂದು ಸಾಮಾಜಿಕ ನ್ಯಾಯ ಸಮಿತಿ ನೀಡಿದ್ದ ಶಿಫಾರಸು ಅನುಷ್ಠಾನಕ್ಕೆ ತರುವುದಕ್ಕೂ ಯೋಗಿ ನೇತೃತ್ವದ ಸರ್ಕಾರ ಹಿಂದೇಟು ಹಾಕಿದೆ.

ಹಿಂದುತ್ವದ ಅಡಿಯಲ್ಲಿ ಎಲ್ಲ ಜಾತಿಗಳನ್ನೂ ಸುಭದ್ರವಾಗಿ ಒಂದೆಡೆ ಸೇರಿಸಬಹುದು ಎಂದು ಬಿಜೆಪಿ ಹೊಂದಿದ್ದ ಭ್ರಮೆಯನ್ನು ತಳ ವರ್ಗಗಳಲ್ಲಿ ಮೂಡಿರುವ ಅತೃಪ್ತಿಯು ಒಡೆದುಹಾಕಿದೆ. ತಳವರ್ಗಗಳಿಗೆ ಭದ್ರತೆ, ಘನತೆಯ ಬದುಕು, ಸಾಮಾಜಿಕವಾಗಿ ಮೇಲ್ಮುಖ ಚಲನೆ ಬೇಕಿದೆ. ಈ ವರ್ಗಗಳಿಗೆ ಸೇರಿದವರು ಹಿಂದೂ ಏಕತೆಗಾಗಿ ತಮ್ಮ ಈ ಬಯಕೆಗಳನ್ನು ಬಿಟ್ಟುಕೊಡುವವರಲ್ಲ. ಹಿಂದೂ ಏಕತೆ ಎಂಬುದು ಈ ವರ್ಗಗಳ ಪಾಲಿಗೆ ಮರೀಚಿಕೆ ಇದ್ದಂತೆ ಎಂಬುದು ಸಾಬೀತಾಗಿದೆ. ಅವರಿಗೆ ಹಿಂದೂ ಏಕತೆಯು ಆಳವಾದ ಸಾಮಾಜಿಕ ಮತ್ತು ಆರ್ಥಿಕ ತರತಮಗಳನ್ನು ಶಾಶ್ವತಗೊಳಿಸುವಂಥದ್ದು.

ಬಿಜೆಪಿ ನಿರ್ಮಿಸಿದ್ದ ಸಾಮಾಜಿಕ ಮೈತ್ರಿಕೂಟದ ಅಳಿದುಳಿದ ಚೂರುಗಳ ಅಡಿಯಲ್ಲಿ ಹಿಂದುತ್ವ ಮುಚ್ಚಿಹೋಗಿದೆ. ಇದರಲ್ಲಿ ಪಕ್ಷಕ್ಕೆ ಇರುವ ಬಹುದೊಡ್ಡ ಪಾಠ: ಹಿಂದುತ್ವದ ಅಡಿಯಲ್ಲಿ ಎಲ್ಲ ಜಾತಿಗಳನ್ನು ಒಗ್ಗೂಡಿಸುವ ಮೊದಲು ಪಕ್ಷವು ಮೂಲಭೂತ ಸಮಸ್ಯೆಗಳಾದ ಸಾಮಾಜಿಕ ಅನ್ಯಾಯ, ಆರ್ಥಿಕ ದಬ್ಬಾಳಿಕೆ, ಸಾಮಾಜಿಕ ಅಸಮಾನತೆ ಮತ್ತು ಆಡಳಿತಾತ್ಮಕ ತಾರತಮ್ಯ, ತಳವರ್ಗಗಳಿಗೆ ಸೇರಿದವರು ಎದುರಿಸಬೇಕಾದ ಭ್ರಷ್ಟಾಚಾರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಆದರೆ, ಮೇಲ್ವರ್ಗದವರು ಪಕ್ಷದ ಮುಖ್ಯ ಮತಬ್ಯಾಂಕ್ ಆಗಿರುವವರೆಗೆ ಬಿಜೆಪಿಗೆ ಈ ಎಲ್ಲ ಕೆಲಸಗಳನ್ನು ಆದ್ಯತೆಯ ಮೇಲೆ ಮಾಡಲಾಗುವುದಿಲ್ಲ. ಇದರಿಂದಾಗಿ ಪಕ್ಷವು ಶಾಶ್ವತವಾಗಿ ಗೊಂದಲದ ಸ್ಥಿತಿಯಲ್ಲಿ ಇರಲಿದೆ. ಪಕ್ಷವು ಮುಂದಿನ ವರ್ಷಗಳಲ್ಲಿ ಈ ಗೊಂದಲವನ್ನು ಹೇಗೆ ಪರಿಹರಿಸಿಕೊಳ್ಳುತ್ತದೆ ಎಂಬುದನ್ನು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT