ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾದಿ ತಪ್ಪಿದ ಸಂಸದೀಯ ನಡೆ, ನುಡಿ: ಬರಗೂರು ರಾಮಚಂದ್ರಪ್ಪ ಅವರ ವಿಶ್ಲೇಷಣೆ

ಇಡೀ ಸಮಾಜದಲ್ಲಿ ಸಂಸದೀಯ ನಡೆನುಡಿಗೆ ನಿಜದ ನೆಲೆ ಒದಗಿಸಬೇಕಾಗಿದೆ
Published 12 ಜುಲೈ 2023, 0:31 IST
Last Updated 12 ಜುಲೈ 2023, 0:31 IST
ಅಕ್ಷರ ಗಾತ್ರ

ನಮ್ಮ ದೇಶವು ಸಂಸದೀಯ ಪ್ರಜಾಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದು ಎಪ್ಪತ್ತಮೂರು ವರ್ಷಗಳಾಗಿವೆ. ಡಾ. ಅಂಬೇಡ್ಕರ್ ಅವರು ಕಟ್ಟಿಕೊಟ್ಟ ಸಂವಿಧಾನದಿಂದ ಇದು ಸಾಧ್ಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಸಂಸದೀಯ ನಡೆ–ನುಡಿಗಳಿಗೆ ಮನ್ನಣೆ ನೀಡಬೇಕು. ಪಕ್ವಗೊಂಡ ಪ್ರಜಾಸತ್ತಾತ್ಮಕ ಪರಿಭಾಷೆಯು ಮುನ್ನೆಲೆಗೆ ಬರಬೇಕು. ಆದರೆ ನಮ್ಮ ಸಮಾಜದ ಸಂಕೀರ್ಣತೆ ಹೇಗಿದೆಯೆಂದರೆ, ಪುರೋಹಿತಶಾಹಿ, ಬಂಡವಾಳಶಾಹಿ ಮತ್ತು ಊಳಿಗಮಾನ್ಯ ಪದ್ಧತಿಯ ಗುಣಲಕ್ಷಣಗಳು ವಿವಿಧ ಪ್ರಮಾಣದಲ್ಲಿ ಸಮ್ಮಿಶ್ರಣಗೊಂಡು, ಪ್ರಜಾಪ್ರಭುತ್ವದ ಪರಿಕಲ್ಪನೆ ಮತ್ತು ಪರಿಭಾಷೆಗೆ ಧಕ್ಕೆ ತರುವ ಮನೋಪ್ರವೃತ್ತಿಯು ಮುನ್ನೆಲೆಗೆ ಬರುತ್ತಿದೆ. ವ್ಯಕ್ತಿಕೇಂದ್ರಿತ ಚರ್ಚೆಗಳಿಗೆ ಆದ್ಯತೆ ಸಿಗುತ್ತಿದೆ.

ಈಗ ಕೆಲವು ನಿದರ್ಶನಗಳನ್ನು ನೋಡೋಣ. ಚುನಾವಣೆಗಳು ಹತ್ತಿರ ಬಂದಂತೆ, ಮಾಧ್ಯಮದವರು ‘ನಿಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಪ್ರಧಾನಮಂತ್ರಿ ಅಭ್ಯರ್ಥಿ ಯಾರು?’ ಎಂದು ಕೇಳುತ್ತಾರೆ. ಕೆಲವು ಪಕ್ಷದವರು ಇನ್ನಿತರ ಪಕ್ಷದವರನ್ನು ಇದೇ ಪ್ರಶ್ನೆ ಕೇಳುತ್ತಾರೆ. ಈ ಪ್ರವೃತ್ತಿಯು ಸಂಸದೀಯ ಪ್ರಜಾಪ್ರಭುತ್ವದ ನೀತಿ ನಿಯಮಗಳಿಗೆ ವಿರುದ್ಧವಾದುದೆಂಬ ಸತ್ಯವನ್ನು ಇವರೆಲ್ಲರೂ ಬದಿಗೊತ್ತುತ್ತಾರೆ.

ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಮೊದಲೇ ಘೋಷಣೆ ಮಾಡುವುದರಿಂದ ಕ್ರಮವಾಗಿ ಶಾಸಕರು ಮತ್ತು ಸಂಸದರ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಕೆಲವೊಮ್ಮೆ ಶಾಸಕರು ಮತ್ತು ಸಂಸದರು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯ ಆಯ್ಕೆಯ ಹಕ್ಕನ್ನು ತಂತಮ್ಮ ಪಕ್ಷದ ಹೈಕಮಾಂಡ್‍ಗೆ ವರ್ಗಾಯಿಸುತ್ತಾರಾದರೂ ಇಲ್ಲಿ ತಾಂತ್ರಿಕ ಅಗತ್ಯವನ್ನು ಸ್ವಯಂ ಒಪ್ಪಿಗೆಯಿಂದ ಪೂರೈಸಲಾಗುತ್ತದೆ. ಆದರೆ ಚುನಾವಣೆಗೆ ಮುಂಚೆಯೇ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದು, ಅದಕ್ಕಾಗಿ ಒತ್ತಾಯಿಸುವುದು ತಾತ್ವಿಕವಾಗಿಯಾಗಲಿ, ತಾಂತ್ರಿಕವಾಗಿಯಾಗಲಿ ಸಂಸದೀಯ ನಡೆಯಾಗುವುದಿಲ್ಲ.

ಸಂವಿಧಾನದ 75ನೇ ವಿಧಿ ಪ್ರಕಾರ ಪ್ರಧಾನಮಂತ್ರಿಯ ಹುದ್ದೆ ಸೃಷ್ಟಿಯಾಗುತ್ತದೆ. 75(1)ರಿಂದ 75(6)ರವರೆಗಿನ ವಿಧಿಗಳಲ್ಲಿ ಅರ್ಹತೆ, ಆಯ್ಕೆಯ ವಿಧಾನ, ಅಧಿಕಾರ ವ್ಯಾಪ್ತಿಯ ವಿವರಗಳಿವೆ. 79ನೇ ವಿಧಿ ಪ್ರಕಾರ ಸಂಸತ್ತು ರಚಿತವಾಗುತ್ತದೆ. ಅಂತೆಯೇ 163ನೇ ವಿಧಿ ಅನ್ವಯ ಮುಖ್ಯಮಂತ್ರಿಯ ಹುದ್ದೆಯನ್ನು ಸೃಷ್ಟಿಸಲಾಗುತ್ತದೆ ಮತ್ತು 168ನೇ ವಿಧಿ ಪ್ರಕಾರ ವಿಧಾನಮಂಡಲಗಳ ರಚನೆಯಾಗುತ್ತದೆ. ವಿಧಾನಮಂಡಲ ಮತ್ತು ಸಂಸತ್ತಿನ ರಚನೆ ಆಗುವುದಕ್ಕೆ ಮುಂಚೆಯೇ ಮುಖ್ಯಮಂತ್ರಿ ಹಾಗೂ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡುವುದು ಸಂವಿಧಾನದ ಈ ಎಲ್ಲ ವಿಧಿಗಳ ಉಲ್ಲಂಘನೆಯಾಗುತ್ತದೆ.

ಮಾಧ್ಯಮದವರು ಸಮೀಕ್ಷೆ ನಡೆಸಿ, ಯಾರು ಮುಖ್ಯಮಂತ್ರಿ ಆಗಬೇಕು, ಯಾರು ಪ್ರಧಾನಮಂತ್ರಿ ಆಗಬೇಕು ಎಂದು ಕೇಳಿ ಫಲಿತಾಂಶ ಪ್ರಕಟಿಸುವುದು ಕೂಡ ಸಂಸದೀಯವಲ್ಲದ ಅಸಂಗತ ಪ್ರಕ್ರಿಯೆ. ಯಾಕೆಂದರೆ, ಜನರು ತಮ್ಮಿಚ್ಛೆಯ ಶಾಸಕ ಹಾಗೂ ಸಂಸದರನ್ನು ಆಯ್ಕೆ ಮಾಡಿ ಅವರಿಗೆ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಆಯ್ಕೆಯ ಹಕ್ಕನ್ನು ವರ್ಗಾಯಿಸುತ್ತಾರೆಯೇ ವಿನಾ ತಾವೇ ನೇರವಾಗಿ ಆಯ್ಕೆ ಮಾಡುವುದಿಲ್ಲ. ಎಷ್ಟೋ ಸಾರಿ ಸಮೀಕ್ಷೆಯಲ್ಲಿ ಗರಿಷ್ಠ ಜನಪ್ರಿಯತೆ ಗಳಿಸಿದವರು ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ಆಗುವುದಿಲ್ಲ. ಯಾಕೆಂದರೆ ಆಯ್ಕೆಯ ಸಂಸದೀಯ ಪ್ರಕ್ರಿಯೆಯೇ ಬೇರೆ ಇರುತ್ತದೆ.

ಇನ್ನೊಂದು ಅಂಶವನ್ನೂ ಇಲ್ಲಿ ಹೇಳಬೇಕು. ಇಂದು ರಾಜಕಾರಣದಲ್ಲಿ ವಂಶಾಡಳಿತ ಮತ್ತು ಕುಟುಂಬ ರಾಜಕಾರಣದ ಪ್ರಶ್ನೆ ರಾಷ್ಟ್ರೀಯ ಸಮಸ್ಯೆಯೆಂಬಂತೆ ಚರ್ಚಿತವಾಗುತ್ತಿದೆ. ಚುನಾವಣೆಗೆ ಮುಂಚೆ ಮುಖ್ಯಮಂತ್ರಿ, ಪ್ರಧಾನಮಂತ್ರಿ ಅಭ್ಯರ್ಥಿಯ ಘೋಷಣೆ ಮಾಡುವುದರಲ್ಲಿ ಆಂಶಿಕವಾಗಿಯಾದರೂ ವಂಶಾಡಳಿತದ ಚಹರೆಯಿದೆ. ಇದನ್ನು ಹೀಗೆ ವಿವರಿಸಬಹುದು: ವಂಶಾಡಳಿತದಲ್ಲಿ ಉತ್ತರಾಧಿಕಾರಿಯನ್ನು ಮೊದಲೇ ನಿರ್ಧರಿಸಲಾಗಿರುತ್ತದೆ. ಇದು ರಾಜಪ್ರಭುತ್ವ ಪದ್ಧತಿಯ ನಡೆ. ಇಲ್ಲಿ ಆಯ್ಕೆಯ ಪ್ರಶ್ನೆ ಇಲ್ಲವೇ ಇಲ್ಲ. ನೇರ ನಾಮನಿರ್ದೇಶನ ಮಾತ್ರ ಇರುತ್ತದೆ. ಆದ್ದರಿಂದ ಚುನಾವಣೆಗೆ ಮುಂಚೆಯೇ ಉತ್ತರಾಧಿಕಾರಿ ಅಭ್ಯರ್ಥಿ ಘೋಷಣೆಯು ರಾಜಪ್ರಭುತ್ವದ ಅರ್ಥಾತ್ ವಂಶಾಡಳಿತದ ಪಳೆಯುಳಿಕೆಯಂತೆ ಕಾಣುತ್ತದೆ.

ಈಗ ನೇರವಾಗಿ ವಂಶಾಡಳಿತ ಮತ್ತು ಕುಟುಂಬ ರಾಜಕಾರಣದ ವಿಷಯಕ್ಕೆ ಬರೋಣ. ಇವೆರಡೂ ಒಂದೇ ಅಲ್ಲ. ವಂಶಾಡಳಿತದಲ್ಲಿ ಆಯ್ಕೆಗೆ ಅವಕಾಶ ಇರುವುದಿಲ್ಲ. ಕುಟುಂಬ ರಾಜಕಾರಣವು ಆಯ್ಕೆಯಿಂದ ಹೊರಗುಳಿಯಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಈಗ ವಂಶಾಡಳಿತವಿಲ್ಲ. ನಿರ್ದಿಷ್ಟ ವಂಶದವರು ಅಧಿಕಾರಕ್ಕೆ ಬರಬೇಕಾದರೂ ಚುನಾವಣೆಯ ಆಯ್ಕೆಯನ್ನು ಎದುರಿಸಬೇಕಾಗುತ್ತದೆ. ಚುನಾವಣೆಯಲ್ಲಿ ಒಂದೇ ಕುಟುಂಬದವರನ್ನು ಗೆಲ್ಲಿಸುವ ಅಥವಾ ಸೋಲಿಸುವ ಹಕ್ಕು ಜನರಿಗೆ ಇದ್ದೇ ಇರುತ್ತದೆ. ಇಷ್ಟಕ್ಕೂ ಕುಟುಂಬ ರಾಜಕಾರಣವು ಆಯಾ ಕುಟುಂಬದ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಒಂದು ಶಕ್ತಿಶಾಲಿ ಚಿಮ್ಮುಹಲಗೆಯಾಗುತ್ತದೆಯೇ ವಿನಾ ಸದಾ ಅವರನ್ನು ಗೆಲ್ಲಿಸುತ್ತದೆ ಎಂದು ಹೇಳಲಾಗದು. ಕುಟುಂಬದ ಪ್ರಬಲ ಪ್ರಭಾವಳಿಯಿದ್ದೂ ಸೋತವರ ನಿದರ್ಶನಗಳಿವೆ. ಇದು ಪ್ರಜಾಪ್ರಭುತ್ವದ ಶಕ್ತಿ. ಇಷ್ಟಾಗಿಯೂ ಕುಟುಂಬ ರಾಜಕಾರಣವೇ ಅತಿಯಾಗಿ ಇತರರ ಅವಕಾಶವನ್ನು ಕದ್ದರೆ, ಆಯಾ ಪಕ್ಷಗಳ ಒಳಗೇ ಪ್ರತಿರೋಧ ಹುಟ್ಟಬೇಕು.

ಕುಟುಂಬ ರಾಜಕಾರಣವು ಈಗ ಬಹುಪಾಲು ಪಕ್ಷಗಳಲ್ಲಿದ್ದು, ಕೆಲ ಪಕ್ಷಗಳಿಗೆ ಅದು ಆಸರೆಯೂ ಆಗಿರುವ ವಿಚಿತ್ರ ನಮ್ಮೆದುರು ಇದೆ. ಇಷ್ಟಾಗಿಯೂ ಅದು ಆಯಾ ಪಕ್ಷಗಳ ಆಂತರಿಕ ಸಮಸ್ಯೆಯೇ ವಿನಾ ರಾಷ್ಟ್ರೀಯ ಸಮಸ್ಯೆಯಲ್ಲ. ಪಕ್ಷಗಳ ಆಂತರಿಕ ಸಮಸ್ಯೆಯನ್ನು ರಾಷ್ಟ್ರೀಯ ಸಮಸ್ಯೆಯಂತೆ ಬಿಂಬಿಸುವ ಬದಲು ಈಗ ಪಕ್ಷಾಂತರ ಪ್ರವೃತ್ತಿಯನ್ನು ಒಂದು ರಾಷ್ಟ್ರೀಯ ಸಮಸ್ಯೆ ಎಂದು ಪರಿಗಣಿಸಬೇಕಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಿ, ಜನರ ಆಯ್ಕೆಯ ಹಕ್ಕಿಗೆ ಬೆಲೆ ತರಬೇಕಾಗಿದೆ. ನಿರ್ದಿಷ್ಟ ಪಕ್ಷದ ಮೂರನೇ ಎರಡು ಭಾಗದಷ್ಟು ಶಾಸಕರು, ಸಂಸದರು ಪಕ್ಷಾಂತರ ಮಾಡಿದರೆ, ಅವರ ಸ್ಥಾನಗಳಿಗೆ ಚ್ಯುತಿಯಿಲ್ಲ ಎಂಬ ಈಗಿನ ನಿಯಮವನ್ನು ಬದಲಾಯಿಸಿ, ಸಂಖ್ಯೆಗಳ ಲೆಕ್ಕ ಮಾಡದೆ, ಇಡೀ ಪಕ್ಷದ ಸಮಸ್ತ ಶಾಸಕ-ಸಂಸದರು ಪಕ್ಷಾಂತರ ಮಾಡಿದರೂ ಅವರ ಸ್ಥಾನ ಚ್ಯುತಿ ಮಾಡಬೇಕು. ಈ ದಿಸೆಯಲ್ಲಿ ತಳಸ್ಪರ್ಶಿ ಚರ್ಚೆ-ಚಿಂತನೆಗಳು ನಡೆದು, ರಾಜಕೀಯ ನೈತಿಕತೆ ಮತ್ತು ತಾತ್ವಿಕತೆಗಳ ನೆಲೆಯಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು.

ಪಕ್ಷಾಂತರದ ಜೊತೆಗೆ ಭ್ರಷ್ಟಾಚಾರವು ಒಂದು ರಾಷ್ಟ್ರೀಯ ಸಮಸ್ಯೆಯಾಗಿದೆ. ಆದರೆ ಬಹುಪಾಲು ಪಕ್ಷಗಳಿಗೆ ಇದು ಸಮಸ್ಯೆಯಾಗಿ ಕಾಡುತ್ತಿಲ್ಲ; ಸಹಜವೆಂಬಂತೆ ಕಾಣುತ್ತಿದೆ. ವಿಶೇಷವಾಗಿ, ಚುನಾವಣೆ ಮತ್ತು ಭ್ರಷ್ಟಾಚಾರದ ಸಂಬಂಧವು ಈಗ ರಹಸ್ಯವಾಗಿ ಉಳಿದಿಲ್ಲ. ಆದ್ದರಿಂದ ಭ್ರಷ್ಟಾಚಾರವಿಲ್ಲದ ಚುನಾವಣೆಗೆ ಅಗತ್ಯ ಕ್ರಮ ಕೈಗೊಳ್ಳುವುದು ಪ್ರಜಾಪ್ರಭುತ್ವದ ರಾಷ್ಟ್ರೀಯ ಆದ್ಯತೆಯಾಗಬೇಕು.

ಸಲ್ಲದ ಹಾಗೂ ಇಲ್ಲದ ವಿಷಯಗಳನ್ನು ರಾಷ್ಟ್ರೀಯ ಸಮಸ್ಯೆಯಂತೆ ಪ್ರಚುರಪಡಿಸುವ ಬದಲು ಜನರ ಸಮಸ್ಯೆಗಳ ಚರ್ಚೆ ಮುನ್ನೆಲೆಗೆ ಬರಬೇಕು. ಮಹಿಳೆ ಮತ್ತು ದಲಿತರ ಮೇಲಿನ ದೌರ್ಜನ್ಯಗಳು ನಿಂತಿಲ್ಲ, ರೈತರ ಸಮಸ್ಯೆಗಳಿಗೆ ಪೂರ್ಣ ಪರಿಹಾರ ಸಿಕ್ಕಿಲ್ಲ. ಬೆಲೆಯೇರಿಕೆಗೆ ಕಡಿವಾಣವಿಲ್ಲ. ಬಡವರಿಗೆ ಕೊಡುವ ಸೌಲಭ್ಯಗಳನ್ನು ಬಿಟ್ಟಿ ಭಾಗ್ಯವೆಂದು ಹೀಗಳೆಯುವವರು ಬಂಡವಾಳಶಾಹಿಗಳಿಗೆ ಲಕ್ಷಾಂತರ ಕೋಟಿಗಳ ರಿಯಾಯಿತಿ ತೋರುವುದನ್ನು ಪ್ರಶ್ನಿಸುವುದಿಲ್ಲ. ಈ ಮಧ್ಯೆ ನಿರುದ್ಯೋಗ ಮತ್ತು ಹಸಿವಿನ ಪ್ರಮಾಣ ಏರುತ್ತಿದೆ. ಇವೆಲ್ಲವೂ ತುರ್ತು ಪರಿಹಾರವನ್ನು ಬಯಸುವ ರಾಷ್ಟ್ರೀಯ ಸಮಸ್ಯೆಗಳಾಗಿವೆ.

ಮೇಲ್ಮನೆಗಳಿಗೆ ನಾಮನಿರ್ದೇಶನ ಮಾಡುವಾಗ ಬಹಳಷ್ಟು ಸಾರಿ ಸಂವಿಧಾನದ ಆಶಯವನ್ನು ಉಲ್ಲಂಘಿಸಿ ತಂತಮ್ಮ ಪಕ್ಷದವರಿಗೇ ಅವಕಾಶ ಕಲ್ಪಿಸುವ ಪ್ರವೃತ್ತಿ ಸಹಜ ನಡೆಯಾಗಿಬಿಟ್ಟಿದೆ.

ಅಂತೆಯೇ ವ್ಯಕ್ತಿಕೇಂದ್ರಿತ ಹುಸಿ ವೈಭವೀಕರಣ ಹಾಗೂ ವ್ಯಕ್ತಿನಿಂದೆಯ ಕ್ಷುಲ್ಲಕ ರಾಜಕಾರಣಗಳು ‘ಬಹುಪಾಲು’ ಪಕ್ಷಗಳ ಪ್ರವೃತ್ತಿಯಾಗಿವೆ. ಜೊತೆಗೆ ನಂಜುನಾಲಿಗೆಯ ನುಡಿನೇತಾರರು ಸಂಸದೀಯ ಸಂವೇದನೆಯನ್ನು ನಾಶ ಮಾಡುತ್ತಿದ್ದಾರೆ. ಇಂಥ ನಡೆನುಡಿಗಳು ರಾಜಕೀಯ ಕ್ಷೇತ್ರದ ‘ಕೆಲವು’ ನೇತಾರರಲ್ಲಿ ಮಾತ್ರವಲ್ಲ, ಇತರ ಕ್ಷೇತ್ರದವರಲ್ಲೂ ಕಾಣಿಸುತ್ತಿವೆ. ಆದ್ದರಿಂದ ಎಲ್ಲ ಕ್ಷೇತ್ರದವರೂ ಸೇರಿ ಇಡೀ ಸಮಾಜದಲ್ಲಿ ಸಂಸದೀಯ ನಡೆನುಡಿಗಳಿಗೆ ನಿಜದ ನೆಲೆ ಒದಗಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT