ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಗ್ರಂಥಾಲಯ ಮಹತ್ವ ಮತ್ತು ಪುನಶ್ಚೇತನ ಕ್ರಮ

ಈ ಜ್ಞಾನ ತಾಣವೀಗ ಪುಸ್ತಕಗಳ ಸಂರಕ್ಷಣೆಗಷ್ಟೇ ಸೀಮಿತವಾಗಿಲ್ಲ, ಅದರ ವ್ಯಾಪ್ತಿ ವಿಸ್ತರಿಸುತ್ತಿದೆ
Published 18 ಜೂನ್ 2023, 23:05 IST
Last Updated 18 ಜೂನ್ 2023, 23:05 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯಿತಿ ವ್ಯಾಪ್ತಿಯ 5,600 ಗ್ರಂಥಾಲಯಗಳನ್ನು ಮೇಲ್ದರ್ಜೆಗೆ ಏರಿಸಿದೆ ಮತ್ತು ಇವುಗಳಲ್ಲಿ ಸುಮಾರು 4,000 ಗ್ರಂಥಾಲಯಗಳಿಗೆ ಕಂಪ್ಯೂಟರ್ ಮತ್ತು ಇಂಟರ್‌ನೆಟ್‌ ಸಂಪರ್ಕವನ್ನು ಒದಗಿಸಲಾಗಿದೆ. ಈ ಗ್ರಂಥಾಲಯಗಳು ಸಂಪೂರ್ಣ ಉಚಿತವಾಗಿದ್ದು, 6ರಿಂದ 18 ವರ್ಷ ವಯಸ್ಸಿನ 30 ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು ಇಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಈ ಸಾರ್ವಜನಿಕ ಗ್ರಂಥಾಲಯಗಳ ಪುನಶ್ಚೇತನಕ್ಕಾಗಿ ಕೈಗೊಳ್ಳುವ ಕ್ರಮಗಳು, ಹೆಚ್ಚಿನ ಕಾಳಜಿ ವಹಿಸಿ ಆಯ್ಕೆ ಮಾಡಿದ ಮಕ್ಕಳ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಸೇರಿಸುವುದು, ಗ್ರಂಥಪಾಲಕರಿಗೆ ತರಬೇತಿ, ನೆರೆಹೊರೆಯ ಶಾಲೆಗಳಲ್ಲಿನ ಶಿಕ್ಷಕರಿಗೆ ಮಾರ್ಗದರ್ಶನ ನೀಡುವುದು ಮತ್ತು ಹೊಸ ನೋಂದಣಿಗಾಗಿ ಮಕ್ಕಳನ್ನು ತಲುಪುವ ಪ್ರಯತ್ನಗಳನ್ನು ಒಳಗೊಂಡಿದೆ. ‘ಓದುವ ಬೆಳಕು’ ಮತ್ತು ‘ಪುಸ್ತಕ ಜೋಳಿಗೆ’ಯಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳು ತಮ್ಮ ಹಿರಿಯರಿಗಾಗಿ ಪುಸ್ತಕಗಳನ್ನು ಓದುವುದು ಹಾಗೂ ಮನೆ ಮನೆಗೆ ಹೋಗಿ ಪುಸ್ತಕಗಳನ್ನು ಸಂಗ್ರಹಿಸುವುದನ್ನು ನೋಡಬಹುದು.

ಮತ್ತೊಂದು ಸಂತಸದ ಬೆಳವಣಿಗೆ ಎಂದರೆ, ಈವರೆಗೆ ಪ್ರವೇಶವನ್ನು ನಿರ್ಬಂಧಿಸಿದ್ದ, ಮಹಾರಾಷ್ಟ್ರ ಸ್ಟೇಟ್‌ ಟೆಕ್ಸ್ಟ್‌ ಬುಕ್‌ ಪ್ರೊಡಕ್ಷನ್‌ ಆ್ಯಂಡ್‌ ಕರಿಕುಲಮ್‌ ರಿಸರ್ಚ್‌ ಬೋರ್ಡ್‌ಗೆ ಸೇರಿದ ಪುಣೆಯ ಬಾಲ ಭಾರತಿ ಗ್ರಂಥಾಲಯವು ತನ್ನ ಒಂದು ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವನ್ನು ಸಾರ್ವಜನಿಕರಿಗೆ ಮುಕ್ತವಾಗಿಸಿದೆ.

ಸಾರ್ವಜನಿಕ ಗ್ರಂಥಾಲಯವು ಒಂದು ಸಾಮಾಜಿಕ ಸಂಸ್ಥೆಯಾಗಿದ್ದು ಡಿಜಿಟಲ್ ಕಂಟೆಂಟ್‌ಗಳ (ಡಿಜಿಟಲ್‌ ರೂಪದಲ್ಲಿ ದೊರೆಯುತ್ತಿರುವ ಮಾಹಿತಿಯ) ವ್ಯಾಪ್ತಿ ಹೆಚ್ಚಾಗುತ್ತಿದ್ದರೂ, ಸಮಾಜದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಡಿಜಿಟಲ್ ಪ್ರಪಂಚ ಉಂಟುಮಾಡುವ ಪ್ರತ್ಯೇಕತೆಗೆ ಇದು ಒಂದು ಸಂಜೀವಿನಿಯಾಗಿದೆ. ನಾನು ಶಾಲೆಯಲ್ಲಿದ್ದಾಗ ನನ್ನ ಅಜ್ಜ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಲೈಬ್ರರಿಯಲ್ಲಿದ್ದ ಪುಸ್ತಕಗಳನ್ನು ನನಗೆ ಪರಿಚಯಿಸಿದ್ದರು. ಹಾಗೆಯೇ ಕೋಲ್ಕತ್ತದಲ್ಲಿ ನಾನು ಓದಿದ ಸಂಸ್ಥೆಯಲ್ಲಿಯ ಬಿ.ಸಿ.ರಾಯ್ ಮೆಮೋರಿಯಲ್ ಲೈಬ್ರರಿಯ ಪುಸ್ತಕಗಳ ವಿಶಿಷ್ಟವಾದ ಘಮಲಿನ (ಆಹ್ಲಾದಕರ ವೆನಿಲ್ಲಾ!) ನೆನಪುಗಳು ಇಂದಿಗೂ ನನ್ನೊಳಗೆ ಹಾಗೆಯೇ ಉಳಿದಿವೆ. ನನ್ನ ಪ್ರಯಾಣದಲ್ಲಿ, ನಾನು ಸದಾ ಗ್ರಂಥಾಲಯಗಳಿಂದ ಆಕರ್ಷಿತನಾಗಿದ್ದೇನೆ. ಅವುಗಳಲ್ಲಿ ಎಂದಿಗೂ ನೆನಪಿನಲ್ಲಿ ಉಳಿಯುವಂಥದ್ದು, ಆಕ್ಸ್‌ಫರ್ಡ್‌ನಲ್ಲಿರುವ ಬೋಡ್ಲಿಯನ್, ವಾಷಿಂಗ್ಟನ್ ಡಿ.ಸಿ.ಯ ಲೈಬ್ರರಿ ಆಫ್ ಕಾಂಗ್ರೆಸ್ ಮತ್ತು ಮೆಡಿಟರೇನಿಯನ್‌ ಸಮುದ್ರದ ವಿಹಂಗಮ ನೋಟವನ್ನು ಹೊಂದಿರುವ ಇಸ್ತಾನ್‌ಬುಲ್‌ನಲ್ಲಿರುವ ವಿಶಿಷ್ಟ ಸಾರ್ವಜನಿಕ ಗ್ರಂಥಾಲಯ ಸೇರಿವೆ.

ಕ್ರಿಸ್ತಪೂರ್ವ 7ನೇ ಶತಮಾನದಲ್ಲಿ ಮೆಸಪಟೋಮಿಯಾದಲ್ಲಿ ಮೊದಲ ಬಾರಿಗೆ ಗ್ರಂಥಾಲಯಗಳನ್ನು ಸ್ಥಾಪಿಸಲಾಯಿತು ಎಂದು ಹೇಳಲಾಗುತ್ತದೆ. 2,700 ವರ್ಷಗಳಷ್ಟು ಪ್ರಾಚೀನ ಮಾನವ ಇತಿಹಾಸದಿಂದ ಆರಂಭಗೊಂಡ ಗ್ರಂಥಾಲಯಗಳು ಈಗಲೂ ಅಸ್ತಿತ್ವ ಉಳಿಸಿಕೊಂಡಿವೆ ಎಂಬುದು ನಾಗರಿಕರಿಗೆ ಅವುಗಳಿಂದ ದೊರಕುವ ಉಪಯುಕ್ತತೆಗೆ ನಿದರ್ಶನವಾಗಿದೆ. ಹೀಗಾಗಿ, ಸಾರ್ವಜನಿಕ ಗ್ರಂಥಾಲಯಗಳನ್ನು ಎಂಥದ್ದೇ ಸಂದರ್ಭ ಎದುರಾದರೂ ರಕ್ಷಿಸಬೇಕಾಗಿದೆ. ನಾಗರಿಕತೆಯ ಮೌಲ್ಯಗಳ ಪ್ರಸಾರಕ್ಕೆ ಅವು ಅತಿ ಅಗತ್ಯವಾಗಿವೆ. 2014ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಫರ್ಗ್ಯುಸನ್ ಗಲಭೆಯ ಸಮಯದಲ್ಲಿ ಇತರೆಲ್ಲ ಸಾರ್ವಜನಿಕ ಸೇವೆಗಳು ಸ್ಥಗಿತಗೊಂಡಿದ್ದರೂ ತೆರೆದಿದ್ದ ಏಕೈಕ ಸ್ಥಳವೆಂದರೆ ಸಾರ್ವಜನಿಕ ಗ್ರಂಥಾಲಯ ಮಾತ್ರ.

ಇದರ ಹೊರತಾಗಿಯೂ, ಇತಿಹಾಸದುದ್ದಕ್ಕೂ ದಾಳಿಗಳು ಮತ್ತು ಸಂಘರ್ಷಗಳು ಗ್ರಂಥಾಲಯಗಳನ್ನು ನಾಶಪಡಿಸಿವೆ. ಮೂವತ್ತು ಲಕ್ಷ ಪುಸ್ತಕಗಳನ್ನು ಹೊಂದಿದ್ದ ಸರಜೆವೊದಲ್ಲಿನ ರಾಷ್ಟ್ರೀಯ ಗ್ರಂಥಾಲಯವು 1992ರಲ್ಲಿ ಮುತ್ತಿಗೆಯ ಸಮಯದಲ್ಲಿ ನಾಶವಾಯಿತು ಮತ್ತು ಅಲೆಕ್ಸಾಂಡ್ರಿಯಾದ ಗ್ರೇಟ್ ಲೈಬ್ರರಿಯು ಕ್ರಿಸ್ತಪೂರ್ವ 48ರಲ್ಲಿ ನಡೆದ ಅಂತರ್ಯುದ್ಧದಲ್ಲಿ ನಾಶವಾಯಿತು (ಈ ಅಂತರ್ಯುದ್ಧದಿಂದಾಗಿ ಮಾನವ ಅಭಿವೃದ್ಧಿಯ ಗಡಿಯಾರ ಎರಡು ಸಹಸ್ರಮಾನಗಳಷ್ಟು ಹಿಮ್ಮುಖವಾಗಿ ತಿರುಗಿದೆ ಎಂದು ಹೇಳಲಾಗುತ್ತದೆ). ಬಾಗ್ದಾದ್ ಮತ್ತು ನಳಂದಾದಲ್ಲೂ ಇದೇ ರೀತಿಯ ಕಥೆಗಳಿವೆ.

ನಮ್ಮ ಹತ್ತಿರದಲ್ಲೇ ನಡೆದ ಘಟನೆಯನ್ನು ಉದಾಹರಿಸುವುದಾದರೆ, ಬಿಹಾರದಲ್ಲಿ 113 ವರ್ಷಗಳಷ್ಟು ಹಳೆಯದಾದ ಗ್ರಂಥಾಲಯವನ್ನು ಉದ್ರಿಕ್ತ ಗುಂಪೊಂದು ಇತ್ತೀಚೆಗೆ ಧ್ವಂಸಗೊಳಿಸಿ, ಬೆಂಕಿ ಹಚ್ಚಿ, ಅದರಲ್ಲಿದ್ದ 4,500 ಪುಸ್ತಕಗಳನ್ನು ಬೂದಿಯಾಗಿಸಿತು.

ಆಂಡ್ರ್ಯೂ ಕಾರ್ನೆಗಿ (1835-1919) ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 1,600ಕ್ಕೂ ಹೆಚ್ಚು ಗ್ರಂಥಾಲಯಗಳನ್ನು ಸ್ಥಾಪಿಸಲು ಲಕ್ಷಾಂತರ ಡಾಲರ್‌ಗಳನ್ನು ದೇಣಿಗೆಯಾಗಿ ನೀಡಿದರು. ಗ್ರಂಥಾಲಯಗಳಿಗೆ ಉದಾರವಾಗಿ ದಾನಧರ್ಮ ನೀಡಿದವರ ಅನೇಕ ಉದಾಹರಣೆಗಳಿವೆ. ನಾನು ಕೆಲಸ ಮಾಡುತ್ತಿರುವ ಸಂಸ್ಥೆಯು ದೇಶದಾದ್ಯಂತ ವಿವಿಧ ಪಟ್ಟಣಗಳಲ್ಲಿ 278 ಗ್ರಂಥಾಲಯಗಳನ್ನು ನಿರ್ವಹಿಸುತ್ತಿದೆ. ಪ್ರತಿಯೊಂದು ಗ್ರಂಥಾಲಯವೂ ಸರಿಸುಮಾರು 2,500 ಪುಸ್ತಕಗಳನ್ನು ಹೊಂದಿವೆ. ಬೆಂಗಳೂರಿನಲ್ಲಿರುವ ದೊಡ್ಡ ಗ್ರಂಥಾಲಯವು ಒಂದು ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿದೆ. ವಿಜ್ಞಾನಿ ಪಿ.ಎಂ.ಭಾರ್ಗವ, ಅರ್ಥಶಾಸ್ತ್ರಜ್ಞ ಎಚ್.ಎಂ.ಪಟೇಲ್, ಶಿಕ್ಷಣತಜ್ಞ ಡೇವಿಡ್ ಹರ್ಸೆಬುರೊ ಸೇರಿದಂತೆ ಹಲವು ದಾನಿಗಳಿಂದ ಹಲವಾರು ದೊಡ್ಡ ಮಟ್ಟದ ಪುಸ್ತಕ ಸಂಗ್ರಹಗಳು ಗ್ರಂಥಾಲಯಕ್ಕೆ ಸಂದಿವೆ. ತಾವು ಸಂಗ್ರಹಿಸಿರುವ ಪುಸ್ತಕಗಳಿಂದ ಮುಂಬರುವ ಪೀಳಿಗೆಯವರು ಪ್ರಯೋಜನ ಪಡೆಯುತ್ತಾರೆ ಎಂಬ ಭಾವನೆ ಇದರ ಹಿಂದೆ ಕೆಲಸ ಮಾಡುತ್ತದೆ.

ಗ್ರಂಥಾಲಯಗಳು ಪುಸ್ತಕಗಳ ಸಂರಕ್ಷಣೆಯ ಉದ್ದೇಶಕ್ಕೆ ಮಾತ್ರ ಸೀಮಿತವಾಗದೆ, ಅವುಗಳ ವ್ಯಾಪ್ತಿ ವಿಸ್ತರಿಸುತ್ತಿದೆ. ಗ್ರಂಥಾಲಯಗಳು ಅನೇಕ ಸ್ಥಳಗಳಲ್ಲಿ, ಪೋಷಕರು ಮನೆಗೆ ಹಿಂದಿರುಗುವವರೆಗೆ ಸೃಜನಶೀಲವಾಗಿ ಕಾಲ ಕಳೆಯಲು ಸೂಕ್ತ ಸ್ಥಳದ ಅಗತ್ಯವಿರುವ ಮಕ್ಕಳಿಗೆ, ಪರೀಕ್ಷೆಗೆ ತಯಾರಿ ನಡೆಸುವ ಆಕಾಂಕ್ಷಿಗಳಿಗೆ ಅಥವಾ ಜೊತೆಗಾರರನ್ನು ಹುಡುಕುತ್ತಿರುವ ಹಿರಿಯ ನಾಗರಿಕರಿಗೆ ಆಶ್ರಯ ತಾಣಗಳಾಗಿವೆ. ಗ್ರಂಥಾಲಯಗಳು ಇತ್ತೀಚೆಗೆ ಡಿಜಿಟಲ್ ತಾಣಗಳಾಗಿ ಎಕ್ಸ್‌ಪ್ಲೋರಟೋರಿಯಮ್‌ಗಳಾಗಿ (ವಿಜ್ಞಾನ, ತಂತ್ರಜ್ಞಾನದಂತಹ ವಿಷಯಗಳ ಪ್ರಯೋಗಶಾಲೆಗಳಾಗಿ) ವಿಸ್ತರಿಸುತ್ತಿವೆ. ಉತ್ತರ ಕೆರೊಲಿನಾದ ಜೇಮ್ಸ್ ಬಿ. ಹಂಟ್ ಜೂನಿಯರ್ ಗ್ರಂಥಾಲಯವು ತಂತ್ರಜ್ಞಾನ ಪ್ರಯೋಗಾಲಯಗಳು, ಮೀಡಿಯಾ ಪ್ರೊಡಕ್ಷನ್‌ ಹೌಸ್‌ ಮತ್ತು ಸೃಜನಶೀಲ ಸ್ಟುಡಿಯೊಗಳನ್ನು ಹೊಂದಿದ್ದು, ಅದನ್ನು ಗ್ರಂಥಾಲಯ ಮತ್ತು ಪ್ರಯೋಗಾಲಯ ಎರಡನ್ನೂ ಒಳಗೊಂಡ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ.

ಪುಸ್ತಕ ಸೂಚಿ (ಇಂಡೆಕ್ಸಿಂಗ್) ಮತ್ತು ಸಂಗ್ರಹ (ಆರ್ಕೈವಿಂಗ್‌) ಕಾರ್ಯದಲ್ಲಿ ತಂತ್ರಜ್ಞಾನದ ಬಳಕೆಯು ಗ್ರಂಥಾಲಯಗಳನ್ನು ಹೆಚ್ಚು ಬಳಕೆದಾರಸ್ನೇಹಿ ಆಗಿಸುತ್ತವೆ ಹಾಗೂ ಗ್ರಂಥಗಳು ಸುಲಭವಾಗಿ ಲಭಿಸುವಂತೆ ಮಾಡುತ್ತವೆ. ಕೆಲವು ಸಾರ್ವಜನಿಕ ಗ್ರಂಥಾಲಯಗಳು ಓದುಗರು ಇರುವ ಸ್ಥಳಕ್ಕೇ ಪುಸ್ತಕಗಳನ್ನು ತಲುಪಿಸುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯ ಕುಗ್ರಾಮವಾದ ಮಂಡೆಕೋಲಿನಲ್ಲಿ ಸಾವಿತ್ರಿರಾಮ್ ಕಣೆಮರಡ್ಕ ಅವರು ‘ಅಮ್ಮನಿಗಾಗಿ ಒಂದು ಪುಸ್ತಕ’ ಕಾರ್ಯಕ್ರಮ ಪ್ರಾರಂಭಿಸಿದರು. ಈ ವಿಶಿಷ್ಟ ಉಪಕ್ರಮದಲ್ಲಿ ಗ್ರಂಥಾಲಯದ ಪುಸ್ತಕಗಳನ್ನು ತಾಯಿಗಾಗಿ ಪುಸ್ತಕ ಓದುವ ಮಕ್ಕಳಿಗೆ ಮತ್ತು ಮಕ್ಕಳಿಗಾಗಿ ಓದುವ ತಾಯಂದಿರಿಗಾಗಿ ನೀಡಲಾಯಿತು.

ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯವನ್ನು ಹೊಂದಿರುವ ಶಾಲೆಗಳಲ್ಲಿನ ವಿದ್ಯಾರ್ಥಿಗಳಲ್ಲಿ ಉತ್ತಮ ಕಲಿಕಾ ಫಲಿತಾಂಶಗಳು ವರದಿಯಾಗುತ್ತಿವೆ. ನ್ಯಾಷನಲ್‌ ಅಚೀವ್‌ಮೆಂಟ್‌ ಸರ್ವೆ 2017ರ ಪ್ರಕಾರ, ಅತ್ಯಧಿಕ ಕಲಿಕಾ ಸಾಧನೆ ಮಾಡುವ (ರಾಜಸ್ಥಾನ, ಆಂಧ್ರಪ್ರದೇಶ, ಕರ್ನಾಟಕದಂತಹ) ಹತ್ತು ರಾಜ್ಯಗಳ ಪೈಕಿ ಶೇ 91ರಷ್ಟು ಶಾಲೆಗಳು ಗ್ರಂಥಾಲಯವನ್ನು ಹೊಂದಿದ್ದರೆ, ಕಲಿಕೆಯಲ್ಲಿ ಕಡಿಮೆ ಸಾಧನೆ ಮಾಡಿರುವ ಹತ್ತು ರಾಜ್ಯಗಳ ಪೈಕಿ (ಅರುಣಾಚಲ ಪ್ರದೇಶ, ಪಂಜಾಬ್, ಉತ್ತರ ಪ್ರದೇಶದಂತಹ) ಶೇ 62ರಷ್ಟು ಶಾಲೆಗಳು ಮಾತ್ರ ಗ್ರಂಥಾಲಯ ಹೊಂದಿವೆ. ಸಮಗ್ರ ಶಿಕ್ಷಾ ಅಭಿಯಾನವು ಶಾಲಾ ಗ್ರಂಥಾಲಯಗಳನ್ನು ವಿದ್ಯಾರ್ಥಿಗಳೊಂದಿಗೆ ಸಮುದಾಯಕ್ಕೂ ಸೇವೆ ಸಲ್ಲಿಸುವ ದಿಸೆಯಲ್ಲಿ ಒಂದಕ್ಕೊಂದು ಜೋಡಿಸಲು ಯತ್ನಿಸುತ್ತಿದೆ.

ಕೇಂದ್ರ ಸರ್ಕಾರದ ಇತ್ತೀಚಿನ ಬಜೆಟ್ ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸ್ಥಾಪನೆಗೆ ಅನುಮೋದನೆ ನೀಡಿದೆ.ಈ ಗ್ರಂಥಾಲಯವನ್ನು ಪ್ರವೇಶಿಸಲು ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ಅಗತ್ಯವಿರುವ ಭೌತಿಕ ಗ್ರಂಥಾಲಯಗಳ ಸ್ಥಾಪನೆಗೆ ಹಣವನ್ನು ಒದಗಿಸಿದೆ.

ಲೇಖಕ: ಮುಖ್ಯ ಸಂವಹನ ಅಧಿಕಾರಿ, ಅಜೀಂ ಪ್ರೇಮ್‌ಜಿ ಫೌಂಡೇಷನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT