ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜನ್ಸ್ (ಎ.ಐ) ಈಗ ಮನೆಮಾತಾಗಿದೆ. ಆದರೆ ಎ.ಐ.ನ ಬಳಕೆ, ದುರ್ಬಳಕೆಯ ಸಾಧ್ಯತೆ ಹಾಗೂ ಇದರ ಮೇಲಿನ ನಿಯಂತ್ರಣದ ಬಗ್ಗೆ ಸಮಗ್ರವಾದ ಅರಿವು ಹೊಂದಿರುವವರು ಕಡಿಮೆ.

ಚಾಟ್ಜಿಪಿಟಿಯಿಂದ ಹಿಡಿದು ಡೀಪ್ಸೀಕ್ವರೆಗೂ ಹರಡಿರುವ ಸಾವಿರಾರು ಎ.ಐ. ಟೂಲ್ಗಳು ಅಂತರ್ಜಾಲದ ಬಳಕೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿವೆ. ನಾವೆಲ್ಲಾ ಸಾಮಾನ್ಯವಾಗಿ ಬಳಸುವ ವಾಟ್ಸ್ಆ್ಯಪ್ನಲ್ಲಿನ ಮೆಟಾ ಎ.ಐ, ವಿಂಡೋಸ್ ಕಂಪ್ಯೂಟರ್ನಲ್ಲಿನ ಕೋಪೈಲಟ್, ಗೂಗಲ್ ತೆರೆದಾಕ್ಷಣ ಕಾಣುವ ಜೆಮಿನಿಯಂತಹ ಎ.ಐ. ಟೂಲ್ಗಳು ಉಪಯೋಗಿಸಲು ದುಂಬಾಲು ಬೀಳುವಂತೆ ಜನಸಾಮಾನ್ಯರ ಕೈಗೆ ತನ್ನಷ್ಟಕ್ಕೇ ಸಿಗುತ್ತವೆ. ಹೀಗಿರುವಾಗ, ನಾವು ಎ.ಐ. ಪ್ರಭಾವದಿಂದ ಮುಕ್ತರಾಗಿರಲು ಹೇಗೆ ಸಾಧ್ಯ?

ಕೃತಕ ಬುದ್ಧಿಮತ್ತೆಯನ್ನು ಕೈಗಾರಿಕಾ ಕ್ರಾಂತಿಯ ನಂತರ ಬಂದ ಅತಿ ಪರಿಣಾಮಕಾರಿ ತಂತ್ರಜ್ಞಾನ ಎಂದೇ ಬಣ್ಣಿಸಲಾಗುತ್ತಿದೆ. ಪದ್ಯ ರಚನೆಯಿಂದ ಹಿಡಿದು, ಕ್ಲಿಷ್ಟಕರವಾದ ಗಣಿತದ ಲೆಕ್ಕಗಳನ್ನು ಬಿಡಿಸುವುದರ ಜೊತೆಗೆ, ಕಠಿಣ ವೈದ್ಯಕೀಯ ಮಾಹಿತಿಯನ್ನು ಸರಳೀಕರಿಸುವುದೂ ಸೇರಿದಂತೆ, ಬಣ್ಣಿಸಲಾಗದ ವೈವಿಧ್ಯಮಯ ಸಹಾಯಗಳನ್ನು ನಾವು ಎ.ಐ.ನಿಂದ ಪಡೆದುಕೊಳ್ಳಲು ಸಾಧ್ಯ. ಇದರ ವ್ಯಾಪ್ತಿ ದಿನೇದಿನೇ ಹೆಚ್ಚುತ್ತಿದ್ದು, ಇದು ಎಲ್ಲಿಗೆ ತಲುಪಬಹುದು ಎಂಬುದು ಊಹಿಸಲು ಕಷ್ಟಸಾಧ್ಯ.

ಎ.ಐ.ನ ಇನ್ನೊಂದು ಮಜಲೆಂದರೆ ಇದರ ದುರ್ಬಳಕೆ. ಕೆಲವು ಪರಿಣತರ ಪ್ರಕಾರ, ಎ.ಐ. ತಂತ್ರಜ್ಞಾನವು ಮನುಕುಲವನ್ನೇ ಸಂಕಷ್ಟಕ್ಕೆ ಸಿಲುಕಿಸಬಹುದು! ಮನುಷ್ಯನೇ ನಿರ್ಮಿಸಿದ ಎ.ಐ. ಮುಂದೊಂದು ದಿನ ಅವನನ್ನೇ ನಿಯಂತ್ರಿಸುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. ವೇಗದ ಗತಿಯಲ್ಲಿ ಈ ತಂತ್ರಜ್ಞಾನ ಪ್ರಗತಿಯಾಗುತ್ತಿರುವಂತೆಯೇ ಅದರ ನಿಯಂತ್ರಣ ಮತ್ತು ಆ ದಿಸೆಯಲ್ಲಿ ರೂಪಿಸಬೇಕಾದ ನೀತಿಗಳ ಅಗತ್ಯವೂ ಹೆಚ್ಚುತ್ತಿದೆ. ಈ ದಿಸೆಯಲ್ಲಿ ಜಾಗತಿಕವಾಗಿ ಹಲವು ಪ್ರಯತ್ನಗಳು ನಡೆಯುತ್ತಿವೆ. ಫ್ರಾನ್ಸ್ನಲ್ಲಿ ಇತ್ತೀಚೆಗಷ್ಟೇ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರು ಜೊತೆಯಾಗಿ ಆಯೋಜಿಸಿದ, ಕೃತಕ ಬುದ್ಧಿಮತ್ತೆ ಕುರಿತ ಮೂರನೇ ಶೃಂಗಸಭೆಯಲ್ಲಿ ಎ.ಐ. ಬಳಕೆ ಮತ್ತು ನಿಯಂತ್ರಣದ ಬಗ್ಗೆ ಚರ್ಚೆ ನಡೆದಿರುವುದು ಸ್ವಾಗತಾರ್ಹ ಬೆಳವಣಿಗೆ.

ಮೊದಲನೆಯದಾಗಿ, ಎ.ಐ. ಅನ್ನು ನಿಯಂತ್ರಿಸುವ ಅಗತ್ಯವಿದೆಯೇ ಎಂಬ ಸವಾಲಿಗೆ ಒಂದು ಸರಳ ಉದಾಹರಣೆಯನ್ನು ನೀಡಬಹುದು. ವಿಶ್ವದ ಅತಿ ದುಬಾರಿ ಕಾರು ಎಂದು ಕರೆಸಿಕೊಳ್ಳುವ ರೋಲ್ಸ್ರಾಯ್ಸ್ನ ಹೊಸ ಕಾರಿಗೆ ಬ್ರೇಕ್ ಅಳವಡಿಸದೇ ಇದ್ದರೆ, ಎಷ್ಟೇ ನುರಿತ ಚಾಲಕನಾದರೂ ಅದನ್ನು ಚಾಲನೆ ಮಾಡಲು ಧೈರ್ಯ ತೋರುವರೇ?

ಯಾವುದೇ ತಂತ್ರಜ್ಞಾನವಿರಲಿ, ಅದಕ್ಕೆ ಸಹಜವಾಗಿಯೇ ಎರಡು ಮಜಲುಗಳು ಇದ್ದೇ ಇರುತ್ತವೆ. ಉದಾಹರಣೆಗೆ, ಪರಮಾಣು ತಂತ್ರಜ್ಞಾನ. ಇದರಿಂದ ಅಗಾಧ ಪ್ರಮಾಣದ ಶಕ್ತಿ ಪಡೆಯಬಹುದಾದರೂ ಅಣ್ವಸ್ತ್ರಗಳ ತಯಾರಿಕೆ, ಈ ಪ್ರಕ್ರಿಯೆಯಲ್ಲಿ ಸೃಷ್ಟಿಯಾಗುವ ಅಸಮರ್ಪಕ ತ್ಯಾಜ್ಯ ವಿಲೇವಾರಿಯಂತಹ ಸವಾಲುಗಳನ್ನು ನಿಯಂತ್ರಿಸಲು ಜಾಗತಿಕ ಮಟ್ಟದಲ್ಲಿ ಹಲವಾರು ಕಾನೂನುಗಳನ್ನು ರೂಪಿಸಲಾಗಿದೆ. ಹಾಗೆಯೇ ಎ.ಐ. ಮೇಲೆ ನಿಯಂತ್ರಣವಿಲ್ಲದೇ ಹೋದರೆ, ಪರಿಣಾಮ ತುಂಬಾ ಭೀಕರವಾಗಲೂಬಹುದು.

ಎ.ಐ. ತಂತ್ರಜ್ಞಾನದ ಸಂಭಾವ್ಯ ಅಪಾಯಗಳನ್ನು ಪಟ್ಟಿ ಮಾಡುವುದಾದರೆ, ರಕ್ಷಣೆಗಾಗಿ ಮಾಡಿದ ಎ.ಐ. ಟೂಲ್ಗಳು ಸ್ವಯಂಚಾಲಿತವಾಗಿ ನಿರ್ಧಾರಗಳನ್ನು ತೆಗೆದುಕೊಂಡು, ಶತ್ರುಗಳೆಂದು ಭಾವಿಸಿ, ನಾಗರಿಕರ ಮೇಲೆ ದಾಳಿ ಮಾಡಬಹುದು. ಪೂರ್ವಗ್ರಹಪೀಡಿತವಾಗಿ ನೈಜ ಮಾಹಿತಿಯನ್ನು ನೀಡದೇ ಹೋಗಬಹುದು ಅಥವಾ ತಪ್ಪಾದ ಮಾಹಿತಿ ನೀಡಿ, ಅದರ ಆಧಾರದ ಮೇಲೆ ಕೈಗೊಂಡ ನಿರ್ಧಾರಗಳು ಮಾರಕವಾಗಬಹುದು. ಉದಾಹರಣೆಗೆ, ತಪ್ಪು ಚಿಕಿತ್ಸೆ.

ಹುಟ್ಟುಹಬ್ಬಕ್ಕಾಗಿ ಇತ್ತೀಚೆಗೆ ನಾನು ನನಗೆ ಸಂಬಂಧಿಸಿದ ಕೆಲವು ಚಿತ್ರಗಳನ್ನು ಸೃಷ್ಟಿಸಲು ಎ.ಐ. ಟೂಲ್ ಬಳಿ ಕೇಳಿದೆ. ಅದು ಯಾರೋ ಒಬ್ಬರ ಚಿತ್ರವನ್ನು ಪ್ರಕಟಿಸಿತು. ಇಂಥ ಹಲವಾರು ಗೋಪ್ಯ ವಿಷಯಗಳನ್ನು ಹೊರಹಾಕಿ ಗೋಪ್ಯತೆಯ ಹಕ್ಕಿಗೆ ಧಕ್ಕೆ ತರಬಹುದು. ಯಾರೋ ಸೃಷಿಸಿರುವ ಬರಹ, ಚಿತ್ರ, ವಿಡಿಯೊಗಳನ್ನು ಬಳಸಿ, ಕೃತಿಸ್ವಾಮ್ಯದ ಮಾಲೀಕತ್ವದ ಹಕ್ಕನ್ನೂ ಉಲ್ಲಂಘಿಸಬಹುದು. ಸೈಬರ್ ದಾಳಿಯಂತಹ ವಿಧ್ವಂಸಕ ಕೃತ್ಯಗಳ ಮೂಲಕ ದೇಶದ ಸುರಕ್ಷತೆ ಮತ್ತು ಭದ್ರತೆಗೆ ಧಕ್ಕೆ ತರಬಹುದು. ಇನ್ನು ಚುನಾವಣೆಗಳಲ್ಲಿ ಸಾಮಾಜಿಕ ಅಭಿಪ್ರಾಯವನ್ನು ಬದಲಿಸುವ ಸಾಮರ್ಥ್ಯವು ಒಂದು ದೇಶದ ಪ್ರಜಾಪ್ರಭುತ್ವವನ್ನೇ ಹಾಳುಮಾಡಬಲ್ಲದು. ರಶ್ಮಿಕಾ ಮಂದಣ್ಣ ಪ್ರಕರಣದಲ್ಲಿ ಆದಂತೆ ಡೀಪ್ಫೇಕ್ನಂಥ ಸುಳ್ಳು ಚಿತ್ರ ಹಾಗೂ ವಿಡಿಯೊಗಳನ್ನು ಎ.ಐ. ಮೂಲಕ ಸೃಷ್ಟಿಸಿ, ಸಾಮಾಜಿಕ ಸ್ವಾಸ್ಥ್ಯವನ್ನು ಕದಡಬಹುದು. ಎರಡು ಕೋಮುಗಳ ನಡುವೆ ವೈರತ್ವವನ್ನು ಸಾರುವ ಸಾಧ್ಯತೆಯೂ ಇದೆ. ಇನ್ನು ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಅದು ಅನೇಕ ಉದ್ಯೋಗಗಳನ್ನು ನಾಶ ಮಾಡುವ ಸಂಭವವಿದೆ. ಇದರಿಂದ ಉದ್ಯೋಗಹಾನಿ ಮತ್ತು ಆರ್ಥಿಕ ಅಸ್ಥಿರತೆ ಉಂಟಾಗಬಹುದು. ಎ.ಐ.ನಲ್ಲಿ ಪಾರದರ್ಶಕತೆ ಇಲ್ಲದಿರುವುದು ಸಹ ಸಮಸ್ಯೆಯನ್ನು ಸೃಷ್ಟಿಸಬಲ್ಲದು. ಇದಲ್ಲದೆ ನೈತಿಕ ಮೌಲ್ಯ, ಬದ್ಧತೆಯಂತಹ ಹಲವಾರು ಪ್ರಶ್ನೆಗಳನ್ನು ಎ.ಐ. ಒಡ್ಡುತ್ತದೆ.

ಎ.ಐ. ನೆರವಿನಿಂದ ಎಸಗುವ ಅಪರಾಧ ಕೃತ್ಯಗಳಿಗೆ ಯಾರನ್ನು ಹೊಣೆ ಮಾಡಬೇಕು ಎನ್ನುವುದು ಪ್ರಮುಖ ಸವಾಲು. ಎ.ಐ. ಕೋಡ್ ಬರೆದವರನ್ನೇ, ಬಳಸಿದವರನ್ನೇ, ಬಳಕೆಯಾದ ಉಪಕರಣದ ಮಾಲೀಕರನ್ನೇ? ದುಷ್ಕೃತ್ಯಕ್ಕೂ ಈ ವ್ಯಕ್ತಿಗಳಿಗೂ ಸಂಪರ್ಕ ಕಲ್ಪಿಸುವುದು ಹೇಗೆ? ನಿಯಂತ್ರಣ ವ್ಯವಸ್ಥೆ ಮಾತ್ರ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲದು.

ಈ ದಿಸೆಯಲ್ಲಿ ಅಮೆರಿಕ, ಇಂಗ್ಲೆಂಡ್ ಮತ್ತು ಯುರೋಪ್ನ ನಡೆಗಳು ಭಿನ್ನವಾಗಿರುವುದು ಫ್ರಾನ್ಸ್ ಶೃಂಗಸಭೆಯಲ್ಲಿ ಗೋಚರಿಸಿತು. ಅಮೆರಿಕವು ಎ.ಐ. ಮೇಲೆ ಯಾವುದೇ ನಿಯಂತ್ರಣ ಹೇರಲು ಬಯಸದೆ, ಅದು ಸ್ವತಂತ್ರವಾಗಿ ಅಭಿವೃದ್ಧಿ ಹೊಂದಬೇಕೆಂದು ಬಲವಾಗಿ ಪ್ರತಿಪಾದಿಸಿತು. ಆದರೆ, ಎ.ಐ.ಗೆ ಸಂಬಂಧಿಸಿದಂತೆ ವಿಶ್ವದ ಮೊದಲ ಕಾನೂನು ಎಂದು ಕರೆಯಲಾಗುವ, ಐರೋಪ್ಯ ಒಕ್ಕೂಟ 2024ರಲ್ಲಿ ರೂಪಿಸಿದ ಕಾಯ್ದೆಯು ಈ ತಂತ್ರಜ್ಞಾನ ಒಡ್ಡುವ ಅಪಾಯಗಳನ್ನು ಆಧರಿಸಿ, ಅದನ್ನು ಸೃಷ್ಟಿಸುವ ತಂತ್ರಜ್ಞರ ಮೇಲೆ ಕೆಲವು ಕಟ್ಟುಪಾಡುಗಳನ್ನು ಹೇರಿದೆ. ಕೆಲವು ಬಗೆಯ ಎ.ಐ. ತಂತ್ರಜ್ಞಾನಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಉದಾಹರಣೆಗೆ, ಅಪರಾಧ ಕೃತ್ಯಕ್ಕೆ ಎ.ಐ. ಬಳಕೆ, ಎ.ಐ. ಮೂಲಕ ಬಯೊಮೆಟ್ರಿಕ್ ಉಪಯೋಗದಂತಹವು. ಚೀನಾದಲ್ಲೂ ಕೆಲವು ಎ.ಐ. ಅಪ್ಲಿಕೇಷನ್ಗಳ ಬಳಕೆಯ ಮೇಲೆ ನಿಯಂತ್ರಣ ಇದೆ. ಇವುಗಳಲ್ಲಿ, ಸಮ್ಮತಿ ಇಲ್ಲದೆ ಡೇಟಾ ಬಳಕೆ, ಎ.ಐ. ಸೃಷ್ಟಿಸಿದ ವಿಡಿಯೊ, ಚಿತ್ರಗಳ ಬಳಕೆ ಪ್ರಮುಖವಾಗಿವೆ. ಹೀಗೆಯೇ ಸಿಂಗಪುರ, ಜಪಾನ್ ಮತ್ತು ಇಂಗ್ಲೆಂಡ್ ಸಹ ಎ.ಐ. ಮೇಲಿನ ನಿಯಂತ್ರಣಕ್ಕೆ ಕಾಯ್ದೆಗಳನ್ನು ರೂಪಿಸಿವೆ.

ಕೃತಕ ಬುದ್ಧಿಮತ್ತೆಯ ಸುರಕ್ಷಿತ ಮತ್ತು ನಂಬಿಕಾರ್ಹ ಬಳಕೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ, ಎ.ಐ. ತಂತ್ರಜ್ಞಾನವು ಮಾನವ ಹಕ್ಕುಗಳನ್ನು ಗೌರವಿಸಬೇಕು, ರಕ್ಷಿಸಬೇಕು ಎಂಬ ಗೊತ್ತುವಳಿಯನ್ನು 2024ರಲ್ಲಿ ಅಂಗೀಕರಿಸಿದೆ.

ಭಾರತದಲ್ಲಿ ಎ.ಐ.ನಿಂದ ಉಂಟಾಗುವ ತೊಂದರೆಗಳನ್ನು ಮಾನನಷ್ಟ ಮೊಕದ್ದಮೆ, ಗೋಪ್ಯತೆ, ಹಕ್ಕುಸ್ವಾಮ್ಯ ಉಲ್ಲಂಘನೆ, ಸೈಬರ್ ಅಪರಾಧದಂತಹ ವಿಷಯಗಳಿಗೆ ಸಂಬಂಧಿಸಿದ ಕಾನೂನುಗಳ ಮೂಲಕ ನಿಯಂತ್ರಿಸಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಬಳಸಿಯೂ ಎ.ಐ.ನ ದುರುಪಯೋಗ ತಡೆಗೆ ಪ್ರಯತ್ನಿಸಲಾಗುತ್ತಿದೆ. ಆದರೂ ಈಗಿನ ಕಾನೂನುಗಳಿಂದ ಎ.ಐ. ಅನ್ನು ಸೂಕ್ತವಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಇದಕ್ಕೆ ತನ್ನದೇ ಅದ ಕಾನೂನಿನ ಅಗತ್ಯ ಇದೆ.

ಜಗತ್ತಿನಲ್ಲಿ ಭಾರತವು ಐದನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ಅತಿ ಹೆಚ್ಚು ಯುವ ಸಮೂಹವನ್ನು ಒಳಗೊಂಡ ದೇಶವಾಗಿದೆ. ಇಲ್ಲಿ ಎ.ಐ. ತಂತ್ರಜ್ಞಾನದ ಬೆಳವಣಿಗೆಗೆ ವಿಪುಲ ಅವಕಾಶಗಳಿವೆ. ಹಾಗಾಗಿ, ಸರ್ಕಾರವು ಜವಾಬ್ದಾರಿಯುತವಾದ ಎ.ಐ. ತಂತ್ರಜ್ಞಾವನ್ನು ಉತ್ತೇಜಿಸುತ್ತಿದೆ. ಪ್ರತಿ ಎ.ಐ. ಸೃಷ್ಟಿಕರ್ತನೂ ಬಳಕೆದಾರನೂ ತನ್ನ ಚಟುವಟಿಕೆಯಿಂದ ಸಮಾಜ ಅಥವಾ ವ್ಯಕ್ತಿಗಳಿಗೆ ಹಾನಿಯಾಗದಂತೆ ಅದನ್ನು ಬಳಸುವುದನ್ನು ರೂಢಿಸಿಕೊಂಡರೆ, ಮನುಕುಲಕ್ಕೆ ಎ.ಐ.ನಿಂದ ಅನುಕೂಲವಾಗಲಿದೆ ಎಂಬ ನಂಬಿಕೆಯನ್ನು ಸರ್ಕಾರ ಹೊಂದಿದೆ. ಹೀಗಾಗಿ, ಎ.ಐ.ನಿಂದ ಆಗುವ ಲಾಭ-ನಷ್ಟಗಳಲ್ಲಿ ಸಮತೋಲನ ಸಾಧಿಸಲು ಅದು ಮುಂದಾಗಿದೆ. ಈ ದಿಸೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜನ್ಸ್ ಸೇಫ್ಟಿ ಇನ್ಸ್ಟಿಟ್ಯೂಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಲು ಯೋಜಿಸಿದೆ. ಇಂಡಿಯಾಎಐ ಮಿಷನ್ ಎಂಬ ಸಂಸ್ಥೆಯ ಮೂಲಕ ಎ.ಐ. ಬೆಳವಣಿಗೆಗೆ ಸಹಾಯ ಮಾಡುತ್ತಿದೆ.

ಎ.ಐ. ಕ್ಷೇತ್ರದಲ್ಲಿ ಅಮೆರಿಕ, ಚೀನಾದಂತಹ ಪ್ರಬಲ ದೇಶಗಳ ನಡುವೆ ನಡೆಯುತ್ತಿರುವ ತೀವ್ರ ಪೈಪೋಟಿ, ಇದರ ನಿಯಂತ್ರಣಕ್ಕೆ ವಿಶ್ವ ಮಟ್ಟದಲ್ಲಿ ಯಾವುದೇ ಒಪ್ಪಂದಗಳು ಇಲ್ಲದೇ ಇರುವುದು ಅಪಾಯದ ಮುನ್ಸೂಚನೆಯನ್ನು ನೀಡುತ್ತಿವೆ. ಎ.ಐ. ತಂತ್ರಜ್ಞಾನದ ಉಸಿರು ಕಟ್ಟಿಸದೆ, ದುರುಪಯೋಗ ತಡೆಯುವಂತೆ ತುರ್ತಾಗಿ ಮೂಗುದಾರ ಹಾಕಬೇಕಾದ ಅಗತ್ಯ ಇದೆ. ಈ ದಿಸೆಯಲ್ಲಿ ವಿವಿಧ ದೇಶಗಳು ಮತ್ತು ವಿಶ್ವಸಂಸ್ಥೆ ಮುಂದೆ ಬಂದಾವೇ?

ಲೇಖಕ: ಅಂತರರಾಷ್ಟ್ರೀಯ ಕಾನೂನು ಸಲಹೆಗಾರ, ವಿದೇಶಾಂಗ ಇಲಾಖೆ, ನವದೆಹಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.