ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಎಲ್ಲವೂ ಚುನಾವಣೆಗಾಗಿ, ಚಲಾವಣೆಗಾಗಿ!

ನಾಡಿಗೆ ನೀರಿನ ದಾಹ, ರಾಜಕಾರಣಕ್ಕೆ ಅಧಿಕಾರದ ಬಗೆಗಿನ ಮೋಹ
Published 7 ಮಾರ್ಚ್ 2024, 1:14 IST
Last Updated 7 ಮಾರ್ಚ್ 2024, 1:14 IST
ಅಕ್ಷರ ಗಾತ್ರ

ಇಡೀ ನಾಡು ಬಿರುಬೇಸಿಗೆಯ ಝಳಕ್ಕೆ ಸಿಲುಕಿ ಬೆವರಿಳಿಸುತ್ತಿದೆ. ಎಲ್ಲೆಡೆ ಕೊಳವೆಬಾವಿಗಳ ನೀರು ಪಾತಾಳ ಕಂಡಿದೆ. ಅಣೆಕಟ್ಟುಗಳು, ಕೆರೆಕಟ್ಟೆಗಳು ಬರಿದಾಗಿವೆ. ಈ ವಿಕೋಪಕ್ಕೆ ಮಲೆನಾಡು, ಬಯಲುಸೀಮೆ, ಕರಾವಳಿ ಎಂಬ ಭೇದಭಾವವಿಲ್ಲ; ನಗರ-ಗ್ರಾಮ ಎಂಬ ತರತಮವೂ ಇಲ್ಲ. ನೀರು-ನೆಲ ನಂಬಿದ ರೈತರ ಗೋಳು ಹೇಳತೀರದು. ಜಮೀನುಗಳ ಬಾಯಾರಿಕೆ ಬದಿಗಿರಲಿ, ಜನ ಹಾಗೂ ಜಾನುವಾರುಗಳ ದಾಹ ತೀರಿಸಲಾದರೂ ನೀರಿನ ಲಭ್ಯತೆ ಎಲ್ಲಿದೆ? ಎಷ್ಟಿದೆ?

ದಿನಂಪ್ರತಿ ನೀರು ಸುರಿಸಬೇಕಾದ ಕೊಳಾಯಿಗಳು ವಾರಕ್ಕೊಮ್ಮೆ ಬಾಯಿ ಬಿಡುತ್ತಿವೆ. ಕೆಲವೆಡೆ ಎರಡು ವಾರ ಕಳೆದರೂ ನೀರಿನ ಸುಳಿವೇ ಇರುವುದಿಲ್ಲ. ಪರ್ಯಾಯವಾಗಿ ನೆರವಿಗೆ ಬರಬೇಕಾದ ಟ್ಯಾಂಕರ್ ನೀರಿನ ದರ ದುಪ್ಪಟ್ಟಾಗಿದೆ. ತುರ್ತಿಗೆ ಸಿಗುವುದೂ ಕಷ್ಟ.

ಮಾರ್ಚ್ ತಿಂಗಳಲ್ಲಿಯೇ ಆವರಿಸಿರುವ ಈ ಪರಿಯ ಜಲಕ್ಷಾಮದ ಗಂಭೀರ ಸ್ಥಿತಿ ಯಾರ ಅರಿವಿಗೂ ನಿಲುಕದಿರುವುದು ಆತಂಕಕಾರಿ ಸಂಗತಿ. ಮುಂಬಾಗಿಲಿಗೆ ಬಂದು ನಿಂತಿರುವ ಭಯಾನಕ ಬರಗಾಲದ ದಿನಗಳನ್ನು ಎದುರಿಸಲು ಕೂಡಲೇ ಮುಂಜಾಗ್ರತೆ ವಹಿಸದಿದ್ದರೆ ಪರಿಸ್ಥಿತಿ ಅಯೋಮಯ ಘಟ್ಟ ತಲುಪುವುದರಲ್ಲಿ ಅನುಮಾನವೇ ಇಲ್ಲ. ನಾಡಿನ ಜನರ ದೈನಂದಿನ ಬದುಕು ಹೀಗೆ ಹೈರಾಣಾಗಿ ಕುಸಿಯುತ್ತಿರುವಾಗ, ರಾಜಕಾರಣ ಸಂಪೂರ್ಣ ಚುನಾವಣಾ ‘ಮೋಡ್’ನಲ್ಲಿ ಕುಣಿಯುತ್ತಿದೆ. ಚುನಾವಣೆಯ ಲೆಕ್ಕಾಚಾರ, ಅಭ್ಯರ್ಥಿಗಳ ಆಯ್ಕೆ, ಪಕ್ಷಾಂತರ, ಪರಸ್ಪರ ಕೆಸರೆರಚಾಟ, ಹೊಂದಾಣಿಕೆಯ ಮೇಲಾಟ ಮತ್ತು ಅನುದಾನದ ಚೌಕಾಸಿಯಲ್ಲಿ ಮುಳುಗಿಹೋಗಿದೆ. ಆ ಪಕ್ಷವನ್ನೋ ಈ ಪಕ್ಷವನ್ನೋ ‌ವಹಿಸಿಕೊಂಡು ದಿನಂಪ್ರತಿ ತಮ್ಮ ಪ್ರತಿಭೆಯನ್ನೆಲ್ಲಾ ಪೋಲು ಮಾಡುತ್ತಾ ಅಥವಾ ನಗದು ಮಾಡಿಕೊಳ್ಳುತ್ತಾ ರಾಜಕೀಯ ವಕ್ತಾರಿಕೆಯಲ್ಲಿ ನಿರತರಾಗಿದ್ದಾರೆ ನಮ್ಮ ಕೆಲವು ಸಾಹಿತಿಗಳು, ಪತ್ರಕರ್ತರು ಮತ್ತು ಚಿಂತಕರು.

ಚುನಾವಣೆ ಗೆಲ್ಲಲು, ಗೆದ್ದ ನಂತರ ಮೆಲ್ಲಲು ಎಲ್ಲದಕ್ಕೂ ತಯಾರಾದಂತೆ ತೋರುವ ಸಮಕಾಲೀನ ರಾಜಕಾರಣ ಯಾವುದಕ್ಕೂ ಹೇಸುವಂತೆ ಕಾಣುವುದಿಲ್ಲ. ಅಧಿಕಾರ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರ ನಾಲಗೆಗೆ ದಿನಕ್ಕೊಂದು ರುಚಿಕಟ್ಟಾದ ವಿವಾದ ಬೇಕು, ಅದರ ಸವಿಯನ್ನು ಅಗಿದು ಮುಗಿಸುವುದರೊಳಗೆ ಮತ್ತೊಂದು ಆಹಾರ ಸಿದ್ಧವಾಗಿರಬೇಕು, ಅಷ್ಟೇ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ಸಾಮಾನ್ಯವಾದುದಲ್ಲ. ಪೊಲೀಸ್ ಇಲಾಖೆಯ ಅತ್ಯಂತ ದಕ್ಷ ತಂಡದಿಂದ ಘಟನೆಯ ಬುಡಮೂಲ ತನಿಖೆ ನಡೆದು ದುಷ್ಕರ್ಮಿಗಳಿಗೆ ಶಿಕ್ಷೆ ಆಗಬೇಕಾದುದು ಸಹಜ ಕಾನೂನು ಪ್ರಕ್ರಿಯೆ. ಆದರೆ ಅದು ಆಗುವುದಕ್ಕೆ ರಾಜಕಾರಣ ಸುಲಭವಾಗಿ ಬಿಡುವುದಿಲ್ಲ.

ಘಟನೆ ನಡೆದ ದಿನವೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ‘ಕಾಂಗ್ರೆಸ್ ನೇತೃತ್ವದ ಸರ್ಕಾರದ ಓಲೈಕೆ ರಾಜಕಾರಣದಿಂದಲೇ ಬಾಂಬ್ ಸ್ಫೋಟ ನಡೆದಿದೆ’ ಎಂದು ಖಚಿತ ದನಿಯಲ್ಲಿ ಘೋಷಿಸುತ್ತಾರೆ. ‘ಸ್ಫೋಟ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ರಾಜ್ಯ ಸರ್ಕಾರ ಪ್ರಕರಣವನ್ನು ಎನ್ಐಎಗೆ ವಹಿಸಬೇಕು’ ಎಂದು ಒತ್ತಾಯಿಸುತ್ತಾರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಇವರಿಬ್ಬರೂ ಈ ಹಿಂದೆ ಗೃಹ ಸಚಿವರಾಗಿ ಕಾರ್ಯ ನಿಭಾಯಿಸಿದವರು ಎಂಬುದು ಗಮನಾರ್ಹ.

ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ‘ಈ ಹಿಂದೆ ನಡೆದ ಹಲವು ಘಟನೆಗಳಲ್ಲಿ ಬಿಜೆಪಿಯವರ ಕೈವಾಡ ಇದೆ. ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದಲ್ಲಿ ಬಿಜೆಪಿಯವರ ಕೈವಾಡ ಇದೆ ಅಂತ ಹೇಳುವುದಿಲ್ಲ’ ಎಂದು ಜಾಣತನದಿಂದ ಹೇಳುವ ಮೂಲಕ ಅನುಮಾನ ಹುಟ್ಟಿಸುತ್ತಾರೆ. ಇಂಥ ತೀರ್ಪುರೂಪದ ಪೂರ್ವಭಾವಿ ಹೇಳಿಕೆಗಳು ತನಿಖೆ ನಡೆಸುವ ಅಧಿಕಾರಿಗಳ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಯೋಚಿಸುವ ವಿವೇಕ ರಾಜಕಾರಣಕ್ಕೆ ಇರಬೇಕಲ್ಲವೇ?

ಇನ್ನು, ರಾಜ್ಯಸಭೆಗೆ ಚುನಾಯಿತರಾದ ಸೈಯದ್ ನಾಸಿರ್ ಹುಸೇನ್ ಸಂಭ್ರಮಾಚರಣೆ ಸಂದರ್ಭದಲ್ಲಿ ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣವನ್ನು ಈ ರಾಜಕಾರಣ ಬಳಸಿಕೊಳ್ಳುತ್ತಿರುವ ರೀತಿ ನೋಡಿದರೆ, ಚುನಾವಣಾ ಲಾಭಕೋರತನಕ್ಕೆ ಅಪಥ್ಯ ಎಂಬುದು ಯಾವುದೂ ಇಲ್ಲವೇನೋ ಅನ್ನಿಸುತ್ತದೆ. ಈ ವಿವಾದ ಹುಟ್ಟಿಕೊಂಡ ತಕ್ಷಣ ಮಾಧ್ಯಮಗಳಲ್ಲಿ ತೂರಾಡತೊಡಗಿದ ಆರೋಪ, ಪ್ರತ್ಯಾರೋಪ, ಸಮರ್ಥನೆಗಳು ಪ್ರಕರಣವನ್ನು ಎಷ್ಟು ಸಾಧ್ಯವೋ ಅಷ್ಟು ಗಲಿಬಿಲಿಗೊಳಿಸಲು ಶಕ್ತವಾದವು. ನಾಯಕಮಣಿಗಳ ಹೇಳಿಕೆಗಳು ಒಂದು ಬಗೆಯಾದರೆ, ಪಕ್ಷಗಳ ಹಿಂಬಾಲಕರು, ಬೆಂಬಲಿಗರು, ಮಾಧ್ಯಮ ನಿರ್ವಾಹಕರು ಜೋಡಿಸಿದ ಆಯಾಮಗಳು ಪ್ರಕರಣವನ್ನು ಎಲ್ಲೆಲ್ಲಿಗೋ ಎಳೆದೊಯ್ದವು. ಒಂದು ಹಂತದಲ್ಲಂತೂ ಸರ್ಕಾರವೇ ಬೆರಗಾಗುವಂತೆ ಖಾಸಗಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯೊಂದು ಬಿಡುಗಡೆಯಾಗಿ ಅಲ್ಲೋಲಕಲ್ಲೋಲ ಉಂಟುಮಾಡಿತು. ಈ ಸಂದರ್ಭದಲ್ಲಿ, ಸರ್ಕಾರ ನಡೆಸುವವರಿಗಿಂತ ಸರ್ಕಾರದ ಬಾಹ್ಯ ಸಮರ್ಥಕರ ಪಡೆ ಅತಿ ಹೆಚ್ಚು ಆಕ್ರಮಣಶೀಲವಾಗಿ ವರ್ತಿಸಿದ್ದು ವಿಶೇಷವಾಗಿತ್ತು.

ಅಂತಿಮವಾಗಿ ಅಧಿಕೃತ ಎಫ್ಎಸ್ಎಲ್ ವರದಿ ದೊರಕಿದ ನಂತರ ಸನ್ನಿವೇಶ ತಿರುವುಮುರುವು! ಸರ್ಕಾರದ ಸಮರ್ಥಕರ ಗಂಟಲು ಕಟ್ಟಿದಂತಾಗಿ ವಿರೋಧಿಗಳು ಆರ್ಭಟಿಸತೊಡಗಿದ್ದಾರೆ. ಇಲಾಖೆಯ ಅಧಿಕೃತ ವರದಿ ಅನ್ವಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದರೂ ಬಿಜೆಪಿಯ ದನಿ ತಗ್ಗಿಲ್ಲ. ‘ರಾಜ್ಯಸಭೆಗೆ ಆಯ್ಕೆಯಾಗಿರುವ ನಾಸಿರ್ ಹುಸೇನ್‌ ಅವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಬೇಕು, ಈ ಪ್ರಕರಣ ಇತ್ಯರ್ಥ ಆಗುವವರೆಗೂ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಬಾರದು’ ಎಂಬುದು ಬಿಜೆಪಿಯ ಒತ್ತಾಯ. ಕಾಂಗ್ರೆಸ್ ನೇತೃತ್ವದ ಸರ್ಕಾರ ಕೂಡ ತಾನೇನೂ ಕಡಿಮೆಯಿಲ್ಲ ಎಂಬಂತೆ, 2022ರಲ್ಲಿ ಮಂಡ್ಯದಲ್ಲಿ ನಡೆದಿದ್ದ ಇಂಥದ್ದೇ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಪ್ರಕರಣದಲ್ಲಿ ಬಿಜೆಪಿಯ ಒಬ್ಬ ಕಾರ್ಯಕರ್ತನನ್ನು ಬಂಧನಕ್ಕೆ ಒಳಪಡಿಸಿದೆ.

ಅಷ್ಟಕ್ಕೂ ಈ ರೀತಿಯ ಘೋಷಣೆ ಕೂಗಿದವರನ್ನು ದೇಶದ್ರೋಹಿ ಎಂದು ಆರೋಪಿಸಿ ಕ್ರಮ ಕೈಗೊಳ್ಳುವ ಬಗೆಗೂ ವಿಭಿನ್ನ ಕಾನೂನಾತ್ಮಕ ವ್ಯಾಖ್ಯಾನಗಳಿವೆ. ಆದರೆ, ಇಲ್ಲಿ ಕಾನೂನಿನ ವ್ಯಾಖ್ಯಾನಗಳಿಗಿಂತಲೂ ಹೆಚ್ಚಾಗಿ ಸಾರ್ವಜನಿಕರ ವರ್ತನೆಗಳನ್ನು ಪ್ರಭಾವಿಸುವುದು ಭಾವನಾತ್ಮಕ ಸಂಗತಿಗಳೇ ಆಗಿರುತ್ತವೆ. ಅದಕ್ಕೆ ಒಂದು ಸಾಮಾಜಿಕ ಆಯಾಮವೂ ಇದೆ, ಐತಿಹಾಸಿಕ ಹಿನ್ನೆಲೆಯೂ ಇದೆ. ಇದು, ವಸ್ತುಸ್ಥಿತಿಯಲ್ಲಿ, ರಾಜಕಾರಣದ ಪರಿಭಾಷೆಯಲ್ಲಿ ಹೊರನೋಟಕ್ಕೆ ಕಂಡಷ್ಟು ಸರಳವಾಗಿಲ್ಲ. ಒಳಗೆ ಇಳಿದಷ್ಟೂ ಹಲವು ಆಯಾಮಗಳ ಸಂಕೀರ್ಣ ರೂಪದಲ್ಲಿ ಪ್ರತ್ಯಕ್ಷವಾಗುತ್ತದೆ.

ಕಾನೂನಿನ ವ್ಯಾಪ್ತಿಯಲ್ಲಿ, ರಾಜಕಾರಣದ ಪ್ರಾಂಗಣದಲ್ಲಿ ಈ ಪ್ರಕರಣ ಯಾವುದೇ ತೀರ್ಪು ಅಥವಾ ತಿರುವು ಪಡೆದುಕೊಳ್ಳಲಿ. ನಾಡಿನ ಸಂವೇದನಾಶೀಲ ಜೀವಗಳು ಪರಿಶೀಲಿಸಲೇಬೇಕಾದ ಬಹುಮುಖ್ಯ ಅಂಶವೊಂದು ಈ ಪ್ರಕರಣದಲ್ಲಿದೆ. ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು ವಿಧಾನಸೌಧದಂತಹ ಕೇಂದ್ರಸ್ಥಾನದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗುವುದು ಸಾಮಾನ್ಯ ವಿಷಯವಲ್ಲ. ಆ ಗುಂಪಿನ ವ್ಯಕ್ತಿಗಳಿಗೆ ಅಂತಹ ಧೈರ್ಯವನ್ನೋ ಅಸಹನೆಯನ್ನೋ ಅವಿವೇಕವನ್ನೋ ಅಫೀಮನ್ನೋ ತುಂಬಿದ್ದು ಯಾರು, ಹೇಗೆ ಮತ್ತು ಯಾವಾಗ ಎಂಬ ಪ್ರಶ್ನೆಗಳು ಪುಟಿದೇಳುವುದು ಸಹಜ. ಇಂತಹ ಮನಃಸ್ಥಿತಿಯ ಹಿಂದಿನ ಕಾರಣಗಳನ್ನು ಗಂಭೀರ ಅವಲೋಕನಕ್ಕೆ ಒಳಪಡಿಸಲು ಮುಕ್ತ ವಾತಾವರಣ ಮತ್ತು ಪ್ರಾಮಾಣಿಕತೆ ಜೊತೆಗೆ ಗಟ್ಟಿ ಎದೆಗುಂಡಿಗೆಯೂ ಬೇಕು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT