ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಪರಿಸರಸ್ನೇಹಿ ಬದುಕಿಗೆ ಹಸಿರು ‘ಇನಾಮು’

ಸುಸ್ಥಿರ ಬದುಕಿನ ಮಾದರಿ ಅನುಸರಿಸಿದವರಿಗೆ ಸಿಗಲಿದೆ ಆರ್ಥಿಕ ಅನುಕೂಲ
–ಗುರುರಾಜ್‌ ಎಸ್‌. ದಾವಣಗೆರೆ
Published 16 ಜನವರಿ 2024, 21:27 IST
Last Updated 16 ಜನವರಿ 2024, 21:27 IST
ಅಕ್ಷರ ಗಾತ್ರ

ಸುಸ್ಥಿರ ಅಭಿವೃದ್ಧಿ ಕುರಿತು ಬೆಂಗಳೂರಿನ ಪದವಿ ಕಾಲೇಜೊಂದರಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡುವಾಗ, ‘ನಿಮ್ಮಲ್ಲಿ ಎಷ್ಟು ಜನ ಇಕೊ ಮಾರ್ಕ್ ಇರುವ ವಸ್ತುಗಳನ್ನು ಬಳಸುತ್ತಿದ್ದೀರಿ ಕೈಎತ್ತಿ’ ಎಂದಾಗ, ಇದ್ದ 200 ಮಂದಿ ವಿದ್ಯಾರ್ಥಿ- ಅಧ್ಯಾಪಕರಲ್ಲಿ ಯಾರೊಬ್ಬರ ಕೈ ಸಹ ಮೇಲೆ ಬರಲಿಲ್ಲ. ‘ನನ್ನ ಪ್ರಶ್ನೆ ಅರ್ಥವಾಗಲಿಲ್ಲವೇ?’ ಎಂದದ್ದಕ್ಕೆ, ‘ಇಕೊ ಮಾರ್ಕ್ ಎಂದರೆ ಏನೆಂದು ನಮಗೆ ತಿಳಿದಿಲ್ಲ. ಹಾಗಿರುವಾಗ, ಆ ಉತ್ಪನ್ನಗಳನ್ನು ಬಳಸುವ ಮಾತು ಎಲ್ಲಿಂದ ಬರುತ್ತದೆ?’ ಎಂದು ಮರುಪ್ರಶ್ನೆ ಹಾಕಿದರು. ಆಶ್ಚರ್ಯವಾದರೂ ಪರದೆಯ ಮೇಲೆ ಇಕೊ ಮಾರ್ಕ್‌ನ ಚಿತ್ರ ತೋರಿಸಿದೆ ಮತ್ತು ‘ಈ ಚಿಹ್ನೆ ಇರುವ ವಸ್ತುಗಳನ್ನು ಖರೀದಿಸಿ ಬಳಸಿದರೆ ನೀವು ಸುಸ್ಥಿರ ಬದುಕಿನ ಭಾಗವಾಗುತ್ತೀರಿ, ಇಲ್ಲದಿದ್ದರೆ ಇಲ್ಲ’ ಎಂದೆ. ‘ಇಂಥ ಚಿತ್ರವಿರುವ ವಸ್ತು ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂಬುದೇ ನಮಗೆ ಗೊತ್ತಿಲ್ಲ’ ಎಂಬ ಉತ್ತರ ಬಹುತೇಕ ವಿದ್ಯಾರ್ಥಿಗಳಿಂದ ಬಂತು.

ಇದನ್ನು ಗಮನಿಸಿದಾಗ, ನಾವು ಸುಸ್ಥಿರ ಬದುಕಿನ ಕ್ರಮಗಳಿಂದ ನೂರಾರು ಮೈಲಿ ದೂರ ಇದ್ದೇವೆ ಅನ್ನಿಸಿತು. ಪರಿಸರ ಲೇಖಕರು, ಸಂಘಟನೆಗಳು, ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ಈ ದಿಸೆಯಲ್ಲಿ ಬಹಳಷ್ಟು ಪ್ರಯತ್ನ ಮಾಡುತ್ತಿದ್ದರೂ ಜನಸಾಮಾನ್ಯರಲ್ಲಿ ಇದರ ಬಗ್ಗೆ ಹೆಚ್ಚಿನ ತಿಳಿವಳಿಕೆಯಾಗಲೀ ಮಾಹಿತಿಯಾಗಲೀ ಇಲ್ಲ. ಹೀಗೆ ಮಾಡಿ, ಹಾಗೆ ಮಾಡಿ ಎಂದು ಹೇಳಿದರೆ ಜನ ಅಷ್ಟಾಗಿ ಪಾಲಿಸುವುದಿಲ್ಲ ಎಂಬುದನ್ನು ಚೆನ್ನಾಗಿ ಅರಿತಿರುವ ಕೇಂದ್ರ ಸರ್ಕಾರವು ಸುಸ್ಥಿರ ಬದುಕಿನ ಮಾದರಿ ಗಳನ್ನು ಅನುಸರಿಸಿದವರಿಗೆ ಆರ್ಥಿಕ ಅನುಕೂಲ ಕಲ್ಪಿಸುವ ಉದ್ದೇಶದ ಹಸಿರು ಕ್ರೆಡಿಟ್ ಯೋಜನೆಯನ್ನು ಈ ತಿಂಗಳ ಕೊನೆಗೆ ಜಾರಿಗೊಳಿಸಲಿದೆ.

ದೇಶದಲ್ಲಿ ಹೆಚ್ಚಾಗುತ್ತಿರುವ ವಿವಿಧ ಪ್ರಾಕೃತಿಕ ಮಾಲಿನ್ಯಗಳನ್ನು ಕಡಿಮೆ ಮಾಡುವ ದಿಸೆಯಲ್ಲಿ
ಸಾರ್ವಜನಿಕರನ್ನು ಆಕರ್ಷಿಸಲು ಜಾರಿಗೆ ತರುತ್ತಿರುವ ಯೋಜನೆ ಇದು. ಪ್ರಾರಂಭದ ಹಂತವಾಗಿ ನೀರಿನ ಸಂರಕ್ಷಣೆ ಮತ್ತು ಅರಣ್ಯೀಕರಣಕ್ಕೆ ಒತ್ತು ನೀಡಿರುವ ಈ ಯೋಜನೆಯು ಇಂಡಿಯನ್ ಕೌನ್ಸಿಲ್ ಫಾರ್ ಫಾರೆಸ್ಟ್ರಿ ರಿಸರ್ಚ್ ಆ್ಯಂಡ್ ಎಜುಕೇಷನ್‌ ಸಂಸ್ಥೆಯ ನೇತೃತ್ವದಲ್ಲಿ ನಡೆಯುತ್ತದೆ. ತಾವು ಮಾಡುತ್ತಿರುವ ಕೆಲಸ ಅಥವಾ ತಯಾರಿಸುತ್ತಿರುವ ಉತ್ಪನ್ನ ಯಾವುದು ಮತ್ತು ಅದಕ್ಕಾಗಿ ಯಾವ ಕ್ರಮ ಬಳಸುತ್ತಿದ್ದೇವೆ ಎಂಬುದನ್ನು ಸರ್ಕಾರವು ಗ್ರೀನ್ ಕ್ರೆಡಿಟ್‌ಗಾಗಿ ಸ್ಥಾಪಿಸಿರುವ ವೆಬ್‌ಸೈಟ್‌ನಲ್ಲಿ ಸಂಬಂಧಿಸಿದ ವ್ಯಕ್ತಿಗಳು ನೋಂದಾಯಿಸಿಕೊಳ್ಳಬೇಕು. ಆಸಕ್ತ ಜನ, ಉದ್ಯಮಗಳು, ಸ್ಥಳೀಯ ಸಂಸ್ಥೆ, ಸಂಘಟನೆಗಳು ತಾವು ಮಾಡುವ ಕೆಲಸಗಳ ಮೂಲಕ ವಾತಾವರಣದ ಮೇಲೆ ಸಕಾರಾತ್ಮಕ ಪರಿಣಾಮ ಉಂಟು ಮಾಡಿದರೆ ಅವರಿಗೆ ಗ್ರೀನ್ ಕ್ರೆಡಿಟ್ ಕೊಡಲಾಗುವುದು.

ಜನ ಎಲ್ಲೆಲ್ಲಿ ಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡಿಕೊಂಡು ಬದುಕು ಸಾಗಿಸಬಹುದು ಎಂಬ ದಿಸೆಯಲ್ಲಿ ಎಂಟು ವಿವಿಧ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಗಿಡ ನೆಡುವುದು, ಸುಸ್ಥಿರ ಕಟ್ಟಡ ನಿರ್ಮಾಣ ಮತ್ತು ಮೂಲಸೌಕರ್ಯ ಒದಗಿಸುವುದು, ನೀರಿನ ಮೂಲಗಳನ್ನು ಸಂರಕ್ಷಿಸುವುದು, ಸುಸ್ಥಿರ ಕೃಷಿ, ಕಸ ನಿರ್ವಹಣೆ, ವಾಯುಮಾಲಿನ್ಯ ನಿಯಂತ್ರಣ, ಕಾಂಡ್ಲಾ ಕಾಡಿನ ಸಂರಕ್ಷಣೆ ಮತ್ತು ಪುನರ್‌ಸ್ಥಾಪನೆ, ಇಕೊ ಮಾರ್ಕ್‌ಗಳಿಗೆ ಸಂಬಂಧಿಸಿದ ಕೆಲಸ ಮಾಡುವವರು ಮತ್ತು ಈ ಕ್ಷೇತ್ರಗಳಲ್ಲಿ ದುಡಿಯುವವರಿಗೆ ಗ್ರೀನ್ ಕ್ರೆಡಿಟ್ ಕೊಡಲಾಗುವುದು ಎಂದು ಸರ್ಕಾರ ಹೇಳಿದೆ.

ಈ 8 ಕ್ಷೇತ್ರಗಳಲ್ಲಿ ಪರಿಸರಕ್ಕೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಿದರೆ ಹಣಕಾಸಿನ ಅನುಕೂಲ ಸಿಗಲಿದೆ ಎಂಬ ಭರವಸೆಯು ಪರಿಸರ ಸಂರಕ್ಷಣೆಯ ಕೆಲಸ ಗಳಿಗೆ ಹೊಸ ಆಯಾಮ ತರಲಿದೆಯೋ ಅಥವಾ ಹೊಸ ಸಮಸ್ಯೆಗಳನ್ನು ತಂದೊಡ್ಡಲಿದೆಯೋ ಎಂಬುದನ್ನು ಕಾದು ನೋಡಬೇಕು. ಜನ ತಮ್ಮ ಆಸಕ್ತಿ, ವೈಯಕ್ತಿಕ ತೃಪ್ತಿಗಾಗಿ ಪರಿಸರಸ್ನೇಹಿ ಕೆಲಸ ಮಾಡಿದ ಉದಾಹರಣೆಗಳು ಬಹಳಷ್ಟಿವೆ. ವಿವಿಧ ಸಂಸ್ಥೆಗಳು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತವೆ.  ಸಾಲುಮರದ ತಿಮ್ಮಕ್ಕ ಅವರು ತಮಗೆ ಮಕ್ಕಳಿರದ ಕೊರತೆಯನ್ನು ರಸ್ತೆಬದಿಯ ಸಾಲುಮರಗಳಲ್ಲಿ ತುಂಬಿಕೊಂಡು ಇಡೀ ವಿಶ್ವಕ್ಕೆ ಮಾದರಿಯಾದರು. ಛತ್ತೀಸಗಢ ರಾಜ್ಯದ ಅಂಬಿಕಾಪುರದ ಅಕ್ಕಂದಿರು, ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಅಲಂಕಾರು, ಅರಂತೋಡು ಪಂಚಾಯಿತಿಗಳು ಪರಿಸರಸ್ನೇಹಿ ವೈಜ್ಞಾನಿಕ ಕಸ ನಿರ್ವಹಣೆ ಹಾಗೂ ವಿಲೇವಾರಿಗೆ ಸಂಬಂಧಿಸಿದಂತೆ ಹೊಸ ವಿಧಾನಗಳನ್ನೇ ಹುಟ್ಟುಹಾಕಿರುವ ನಿದರ್ಶನಗಳಿವೆ.

ನೀರಿನ ಮೂಲಗಳ ಸಂರಕ್ಷಣೆ, ನೆಲದ ಫಲವತ್ತತೆ ಕಾಯ್ದುಕೊಳ್ಳುವುದು, ಮಣ್ಣು ಸವಕಳಿ ತಡೆ, ತ್ಯಾಜ್ಯ ನಿರ್ವಹಣೆ, ಇಂಗಾಲದ ಡೈಯಾಕ್ಸೈಡ್ ಹೊಮ್ಮುವಿಕೆಯನ್ನು ಕಡಿಮೆ ಮಾಡುವ ಕೆಲಸಗಳಿಗೆ ಸರ್ಕಾರದಿಂದಲೇ ನೇರ ಉತ್ತೇಜನ ದೊರಕುತ್ತಿರುವುದು ಜನರಲ್ಲಿ ಇಮ್ಮಡಿ ಉತ್ಸಾಹ ಮೂಡಿಸಿದೆ. ನಗರ ಪ್ರದೇಶ, ತರಿಭೂಮಿ, ಹುಲ್ಲುಗಾವಲು ಪ್ರದೇಶಗಳಿಗೆ ಅನ್ವಯವಾಗುವಂತೆ ಅನೇಕ ಪರಿಸರಸ್ನೇಹಿ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಈ ಕೆಲಸಗಳೆಲ್ಲ ಇದುವರೆಗೂ ಪಾರಿಸರಿಕ ದೃಷ್ಟಿಯಿಂದ ನಡೆಯುತ್ತಿದ್ದವು. ಇನ್ನುಮುಂದೆ ಇವೆಲ್ಲ ಮಾರುಕಟ್ಟೆ ಅಗತ್ಯಗಳಿಗೂ ಸಲ್ಲಬೇಕಾದ ಅನಿವಾರ್ಯ ಸೃಷ್ಟಿಯಾಗುವುದರಿಂದ ಸಂರಕ್ಷಣೆಯ ಕ್ರಮ ಮತ್ತು ಕೆಲಸದ ವಿಧಾನಗಳು ಬದಲಾಗಲಿವೆ. ಇದುವರೆಗೂ ಮನೆ ಕಟ್ಟಲು, ಭೂಮಿ ಸಾಗುವಳಿ ಮಾಡಲು, ವಾಹನ ಕೊಳ್ಳಲು ಸಾಲ ಕೊಡುತ್ತಿದ್ದ ಬ್ಯಾಂಕುಗಳು, ಇನ್ನುಮುಂದೆ ಹಸಿರು ಕ್ರೆಡಿಟ್‌ನ ಕೆಲಸಗಳಿಗೂ ಸಾಲ ನೀಡಬೇಕಾಗುತ್ತದೆ ಎಂಬುದು ತಜ್ಞರ ಅಭಿಮತ.

ಯೋಜನೆಯನ್ನು ಯಶಸ್ವಿಗೊಳಿಸುವ ದಿಸೆಯಲ್ಲಿ, ವಾಯುಗುಣ ವೈಪರೀತ್ಯ ನಿಯಂತ್ರಣಕ್ಕಾಗಿ ಜನಸಾಮಾ ನ್ಯರು ಏನೇನು ಮಾಡಬಹುದು ಎಂಬುದನ್ನು ಸ್ಪಷ್ಟ ವಾಗಿ ಹೇಳುವ, ಕಲಿಸುವ ವ್ಯವಸ್ಥೆ ಇರಬೇಕು. ಮಾಡುವ ಕೆಲಸಗಳನ್ನು ಸ್ಥಳೀಯವಾಗಿ ವಿವಿಧ ಹಂತಗಳಲ್ಲಿ ಗುರುತಿಸುವಂತಾದರೆ ಸಂರಕ್ಷಣೆ ಕೆಲಸಗಳು ಮತ್ತಷ್ಟು ಚೆನ್ನಾಗಿ ನಡೆಯುತ್ತವೆ. ಬೃಹತ್ ಜನಸಂಖ್ಯೆಯ ನಮ್ಮ ದೇಶದಲ್ಲಿ ಈ ಕೆಲಸಗಳಿಂದ ಪರಿಸರಕ್ಕೆ ಅನುಕೂಲ ಮತ್ತು ಜನರಿಗೆ ಲಾಭವಾಗಬೇಕೆಂದರೆ, ಗ್ರಾಮ ಮಟ್ಟದಿಂದ ಹಿಡಿದು ಬೃಹತ್ ನಗರದವರೆಗೆ ಯೋಜನೆಯು ವ್ಯವಸ್ಥಿತ ವಾಗಿ ಅನುಷ್ಠಾನಗೊಳ್ಳಬೇಕು. ಮೇಲೆ ವಿಂಗಡಿಸಿರುವ ಅನೇಕ ಕ್ಷೇತ್ರಗಳು ಬೇರೆ ಬೇರೆ ಇಲಾಖೆಗಳಿಗೆ ಸಂಬಂಧಪಡುವುದರಿಂದ, ಅಲ್ಲಿ ನಡೆಯುವ ಕೆಲಸಗಳನ್ನು ಸರಿಯಾಗಿ ನಿರ್ವಹಿಸಲು ಕಾನೂನಾತ್ಮಕ ತೊಡಕುಗಳನ್ನು ಮೊದಲು ನಿವಾರಿಸಬೇಕು. ಉದಾಹರಣೆಗೆ, ತರಿ ಭೂಮಿ ಸಂರಕ್ಷಣೆ ಎಂದಾಕ್ಷಣ ನೀರಾವರಿ, ಅರಣ್ಯ, ಕಂದಾಯ, ನದಿ ಪ್ರಾಧಿಕಾರ ಹೀಗೆ ಮೂರ್ನಾಲ್ಕು ವಿಭಾಗಗಳಿಗೆ ಸಂಬಂಧಪಡುವುದರಿಂದ, ಜನರು ಮಾಡುವ ಕೆಲಸ ವನ್ನು ಯಾರು ಗುರುತಿಸಬೇಕು ಎಂಬ ಗೊಂದಲ ಸಹಜವಾಗಿ ಏರ್ಪಡುತ್ತದೆ.

ಕೆಲಸ ಸಮರ್ಪಕವಾಗಿದೆಯೇ ಎಂದು ನಿರ್ಧರಿಸಲು ತಜ್ಞರು ರೂಪಿಸಿದ ಮಾನದಂಡಗಳು ಬೇಕು. ಪರಿಸರ ಸಂಬಂಧಿ ಕೆಲಸಗಳಿಗಾಗಿ ಪ್ರತ್ಯೇಕ ಬ್ಯೂರೊ ಸ್ಥಾಪಿಸು ವುದು ಒಳ್ಳೆಯದು ಎಂಬುದು ಕ್ಷೇತ್ರದಲ್ಲಿರುವವರ ಮಾತು. ಕೆಲಸ ಶುರು ಮಾಡುವುದಕ್ಕಿಂತ ಮುಂಚೆ ಹೀಗೆ ಮಾಡಬೇಕು ಎಂದು ಸೂಕ್ತ ಸಲಹೆ, ಮಾರ್ಗದರ್ಶನ ನೀಡುವ ಸ್ಥಳೀಯ ಸಂಸ್ಥೆಯ ಘಟಕಗಳ ಅವಶ್ಯಕತೆ ತುಂಬಾ ಇರುತ್ತದೆ. ಈಗಾಗಲೇ ಜನರು ಮಾಡುತ್ತಿರುವ ಪರಿಸರಸ್ನೇಹಿ ಕೆಲಸಗಳಿಗೆ ಸಲಹೆ, ಸಹಕಾರ ನೀಡಿದಲ್ಲಿ ಗ್ರೀನ್ ಕ್ರೆಡಿಟ್ ಪಡೆಯಲು ಇಚ್ಛಿಸುವವರು ತಪ್ಪುತಪ್ಪಾದ ಕ್ರಮಗಳನ್ನು ಅನುಸರಿಸಿ ಅನಗತ್ಯವಾಗಿ ಸಮಯ ವಿಳಂಬ ಮಾಡುವುದು ತಪ್ಪುತ್ತದೆ.

ಆದರೆ ಇದರ ಕುರಿತು ಕಾನೂನು ತಜ್ಞರ ಅಭಿಪ್ರಾಯ ಬೇರೆಯೇ ಇದೆ. ದೇಶದ ಯಾವುದೇ ನಾಗರಿಕರು ಪರಿಸರಸ್ನೇಹಿಯಾಗಿ ಬದುಕಬೇಕಾದದ್ದು ಸಹಜಕ್ರಿಯೆ. ಅದರಲ್ಲೂ ಉದ್ಯಮಗಳು, ಉತ್ಪಾದನೆ ವಲಯಗಳು, ಅರಣ್ಯ, ನೀರಾವರಿ ಇಲಾಖೆಗಳು ಪರಿಸರಕ್ಕೆ ತೊಂದರೆಯಾಗದಂತೆ ಕೆಲಸ ಮಾಡಬೇಕಾದದ್ದು ಮೂಲಭೂತ ಕರ್ತವ್ಯ ಆಗಿ ರುವುದರಿಂದ, ಅದಕ್ಕಾಗಿ ಬಹುಮಾನ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಇನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಕೆಲಸವಾದರೂ ಏನು? ಮಾಲಿನ್ಯ ನಿಯಂತ್ರಣವನ್ನು ಹೇಗೆ ಮಾಡಬೇಕು, ಏಕೆ ಮಾಡಬೇಕು ಎಂಬುದನ್ನು ಹೇಳುತ್ತಲೇ ತಾನೇ ಮುಂದೆ ನಿಂತು ಮಾದರಿ ಕೆಲಸಗಳನ್ನು ಮಾಡಿ ತೋರಿಸಬೇಕು. ಎಲ್ಲೆಲ್ಲಿ ಉದ್ಯಮಗಳಿಂದ ಕಾನೂನಿನ ಉಲ್ಲಂಘನೆ ಆಗುತ್ತದೆಯೋ ಅಲ್ಲಿ ಶಿಕ್ಷೆ ವಿಧಿಸಲು ಮುಂದಾಗಬೇಕು. ಪರಿಸರಸ್ನೇಹಿ ವಿಧಾನಗಳನ್ನು ಅನುಸರಿಸಿ ಕಟ್ಟಡ ಕಟ್ಟ ಬೇಕೆಂಬ  ನಿಯಮವಿದೆ. ಅದನ್ನು ಪಾಲಿಸುವಂತೆ ತಾಕೀತು ಮಾಡಬೇಕು. ಅದಕ್ಕೆ ಬಹುಮಾನವೇಕೆ? ಕಾನೂನುಬದ್ಧವಾಗಿ ಮಾಡಬೇಕಾದ ಕೆಲಸಗಳಿಗೆ ಪ್ರತ್ಯೇಕ ಇನಾಮು ಬೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT