ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಐಪಿಎಲ್‌ ಮೋಹ: ಬಿಸಿಸಿಐಗೆ ಪಾಠ

ಇಶಾನ್‌ ಪ್ರಕರಣ: ರಣಜಿ ರಂಗು ಮಾಸದಿರಲಿ, ನಿಯಮ ಎಲ್ಲರಿಗೂ ಅನ್ವಯವಾಗಲಿ
Published 3 ಮಾರ್ಚ್ 2024, 23:40 IST
Last Updated 3 ಮಾರ್ಚ್ 2024, 23:40 IST
ಅಕ್ಷರ ಗಾತ್ರ

ಆಗುವುದೆಲ್ಲ ಒಳಿತಿಗೆ ಎನ್ನುವಂತೆ, ಇಶಾನ್ ಕಿಶನ್ ಅವರು ದಕ್ಷಿಣ ಆಫ್ರಿಕಾ ಪ್ರವಾಸದ ಮಧ್ಯದಲ್ಲಿಯೇ ಭಾರತ ತಂಡವನ್ನು ಬಿಟ್ಟು ಬಂದಿದ್ದು ದೇಶದ ಕ್ರಿಕೆಟ್‌ಗೆ ಒಂದು ರೀತಿಯಿಂದ ಒಳ್ಳೆಯದೇ ಆಯಿತು. ವೈಯಕ್ತಿಕ ಕಾರಣಕ್ಕೆ ‘ವಿರಾಮ’ ಪಡೆಯುವುದಾಗಿ ಇಶಾನ್ ಆಗ ಹೇಳಿದ್ದರು. ಆದರೆ ಆ ಕಾರಣಗಳು ಸುಳ್ಳು. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಂತಹ ಫ್ರ್ಯಾಂಚೈಸಿ ಲೀಗ್‌ಗಳ ಆಕರ್ಷಣೆಯೇ ಇಂತಹ ಸುಳ್ಳುಗಳ ಸೃಷ್ಟಿಗೆ ಮೂಲವೆಂಬುದು ಈಗ ಜಗಜ್ಜಾಹೀರಾಗಿದೆ.  

ಅಷ್ಟೇ ಅಲ್ಲ, ಇವತ್ತಿನ ಕ್ರಿಕೆಟ್‌ನಲ್ಲಿ ಆಟಗಾರರ ಭವಿಷ್ಯ ನಿರ್ಧರಿಸುವ ತಾಕತ್ತು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕೈಯಲ್ಲಿ ಮಾತ್ರವಿಲ್ಲ. ಮಂಡಳಿಯ ಕೇಂದ್ರ ಗುತ್ತಿಗೆಯಿಂದ ಸಿಗುವುದಕ್ಕಿಂತಲೂ ದುಪ್ಪಟ್ಟು ಮೊತ್ತವನ್ನು ಕೊಟ್ಟು ಆಡಿಸುವ ‘ಮಾಲೀಕರು’ ಇದ್ದಾರೆ ಎಂಬುದನ್ನು ಜಾರ್ಖಂಡ್‌ ರಾಜ್ಯದ ಈ 25 ವರ್ಷದ ಎಡಗೈ ಆಟಗಾರ ಇಶಾನ್ ತೋರಿಸಿಕೊಟ್ಟಿದ್ದಾರೆ. ಅದಕ್ಕಾಗಿಯೇ, ರಣಜಿ ಟೂರ್ನಿಯಲ್ಲಿ ಪ್ರತಿನಿಧಿಸುವಂತೆ ಬಿಸಿಸಿಐ ನೀಡಿದ್ದ ಸೂಚನೆಗೂ ಈ ಹುಡುಗ ಕ್ಯಾರೆ ಅನ್ನಲಿಲ್ಲ.

ಇದರಿಂದ ಬಿಸಿಸಿಐಗೆ ಮುಖಭಂಗವಾದಂತೆ ಆಗಿದೆ. ತತ್‌ಕ್ಷಣದ ಕ್ರಮವಾಗಿ, ಐಪಿಎಲ್ ಆಡಬೇಕೆಂದರೆ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಲೇಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ. ಇದಕ್ಕೂ ಇಶಾನ್ ಸೊಪ್ಪು ಹಾಕಲಿಲ್ಲ. ಇಲ್ಲಿ ಇಶಾನ್ ಈಗ ಕೇಂದ್ರಬಿಂದು ಆಗಿರಬಹುದು. ಆದರೆ ಈ ಬಗೆಯ ಧೋರಣೆಯನ್ನು ಅನುಸರಿಸುತ್ತಿರುವ ಹಲವು ಆಟಗಾರರು ಇವತ್ತಿನ ಕ್ರಿಕೆಟ್‌ನಲ್ಲಿದ್ದಾರೆ. ಆದರೆ ಅವರಿಗೆ ಕಡಿವಾಣ ಹಾಕುವತ್ತ ಯೋಚಿಸದ ಮಂಡಳಿ, ಈಗ ತನ್ನ ಕೈಯಿಂದ ಹಿಡಿತ ಜಾರುವ ಸೂಚನೆ ಕಾಣುತ್ತಿದ್ದಂತೆ ಎದ್ದು ಕುಳಿತಂತಿದೆ. ಐಪಿಎಲ್‌ನಿಂದ ಬರುವ ಸಾವಿರಾರು ಕೋಟಿ ಹಣವೇ ಸರ್ವಸ್ವ ಎಂಬಂತೆ ವರ್ತಿಸುತ್ತಿದ್ದ ಮಂಡಳಿಗೆ ಈ ಪ್ರಕರಣ ಬಿಸಿ ಮುಟ್ಟಿಸಿರುವುದು ಸುಳ್ಳಲ್ಲ. 

ಹಾಗೆ ನೋಡಿದರೆ, ಆಟಗಾರರು ದೇಶಿ ಕ್ರಿಕೆಟ್‌ನಿಂದ ವಿಮುಖರಾಗಿ ಹಣದ ಹೊಳೆ ಹರಿಸುವ ಟಿ20 ಲೀಗ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವುದು ಹೊಸದೇನಲ್ಲ. ಗಾಯ,  ಕಾರ್ಯದೊತ್ತಡ, ಮಾನಸಿಕ ಒತ್ತಡ ಮತ್ತು ಕೌಟುಂಬಿಕ ಕಾರಣಗಳನ್ನು ನೀಡಿ ದೇಶಿ ಕ್ರಿಕೆಟ್‌ನಿಂದ ದೂರ ಉಳಿದು, ಐಪಿಎಲ್‌ ಬಿಡ್‌ ಪ್ರಕ್ರಿಯೆ ಅಥವಾ ಟೂರ್ನಿಯ ಹೊತ್ತಿನಲ್ಲಿ ಪ್ರತ್ಯಕ್ಷರಾಗುವ ಪರಿಪಾಟ ಇದೆ. ಆಯ್ಕೆಗಾರರ ಗಮನ ಸೆಳೆಯಲೆಂದೇ ದೇಶಿ ಪಂದ್ಯಗಳಲ್ಲಿ ಆಡುವ ಆಟಗಾರರೂ ಇದ್ದಾರೆ. ಆಗೆಲ್ಲ ಜಾಣಮೌನ ತೋರಿದ್ದ ಮಂಡಳಿಯು ಈಗ ಇಶಾನ್ ಮತ್ತು ಶ್ರೇಯಸ್ ಅಯ್ಯರ್ ಅವರ ಕೇಂದ್ರ ಗುತ್ತಿಗೆಯನ್ನು ಮೊಟಕುಗೊಳಿಸಿದೆ. 

ಬ್ಯಾಟರ್ ಅಯ್ಯರ್ ಬೆನ್ನುನೋವಿನ ಕಾರಣ ನೀಡಿ ಟೆಸ್ಟ್ ಸರಣಿಯಿಂದ ಹಿಂದೆ ಸರಿದರು. ಆದರೆ ಎನ್‌ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ವೈದ್ಯರು ತಪಾಸಣೆ ನಡೆಸಿ, ಅಯ್ಯರ್ ಪೂರ್ಣ ಫಿಟ್ ಆಗಿದ್ದಾರೆಂದು ಹೇಳಿದರು. ಇದು ಮಂಡಳಿಯ ಕಣ್ಣು ಕೆಂಪಗಾಗಿಸಿತು. ಆದ್ದರಿಂದಲೇ ಅಯ್ಯರ್ ಗುತ್ತಿಗೆ ಕಳೆದುಕೊಂಡರು. ಇದೀಗ ರಣಜಿ ಸೆಮಿಫೈನಲ್‌ನಲ್ಲಿ ಆಡುತ್ತಿರುವ ಮುಂಬೈ ತಂಡದಲ್ಲಿ ಕಣಕ್ಕಿಳಿದಿದ್ದಾರೆ. 

ಆದರೆ ಇಂತಹದೇ ಕ್ರಮವನ್ನು ಹಾರ್ದಿಕ್ ಪಾಂಡ್ಯ ಅವರ ವಿರುದ್ಧ ಯಾಕೆ ಜರುಗಿಸಲಿಲ್ಲ ಎಂದು ಕೇಳಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಪ್ರಶ್ನೆಯನ್ನೂ ತಳ್ಳಿಹಾಕುವಂತಿಲ್ಲ. ಕಪಿಲ್ ದೇವ್ ಅವರಂತಹ ಆಲ್‌ರೌಂಡರ್ ಎಂದೇ ಬಿಂಬಿತವಾಗಿದ್ದ ಹಾರ್ದಿಕ್  2018ರಿಂದ ಇಲ್ಲಿಯವರೆಗೆ ಒಂದೂ ಟೆಸ್ಟ್ ಆಡಿಲ್ಲ. ಹೋದ ವರ್ಷ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾ ಎದುರಿನ ಪಂದ್ಯದಲ್ಲಿ ಕಾಲು ಉಳುಕಿಸಿಕೊಂಡು ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆದ ನಂತರ ಅವರು ಕಣಕ್ಕಿಳಿದಿದ್ದು ಈಚೆಗೆ ಆರಂಭವಾದ ಡಿ.ವೈ. ಪಾಟೀಲ ಟ್ರೋಫಿ ಟಿ20 ಟೂರ್ನಿಯಲ್ಲಿ. 2019ರಿಂದ 2023ರ ವಿಶ್ವಕಪ್‌ಟೂರ್ನಿಯವರೆಗಿನ ಅವಧಿಯಲ್ಲಿ ಭಾರತ ತಂಡವು 66 ಏಕದಿನ ಪಂದ್ಯಗಳಲ್ಲಿ ಆಡಿದೆ. ಅದರಲ್ಲಿ ಹಾರ್ದಿಕ್ 28ರಲ್ಲಿ ಮಾತ್ರ ಕಾಣಿಸಿಕೊಂಡಿದ್ದರು.  ಅಂತರರಾಷ್ಟ್ರೀಯ ಪಂದ್ಯಗಳಲ್ಲಿಯೇ ಹೊರಗುಳಿಯುವ ಅವರು ತಮ್ಮ ತವರು ಬರೋಡಾ ತಂಡದಲ್ಲಿ ಕಾಣಿಸಿಕೊಂಡಿದ್ದೇ ಕಡಿಮೆ.

ಆದರೆ ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ಗುಜರಾತ್ ಟೈಟನ್ಸ್‌ ತಂಡದ ನಾಯಕತ್ವವನ್ನು ನಿಭಾಯಿಸಿದ್ದರು. ಅವರ ನೇತೃತ್ವದಲ್ಲಿ ತಂಡವು ಎರಡೂ ಸಲ ಫೈನಲ್ ತಲುಪಿತ್ತು. ಆಗ ಅವರು ಹೆಚ್ಚು ಬೌಲಿಂಗ್ ಮಾಡಿರಲಿಲ್ಲ. ಆದರೆ ಯಾವುದೇ ಪಂದ್ಯವನ್ನೂ ತಪ್ಪಿಸಿಕೊಂಡಿರಲಿಲ್ಲ. ಈ ಬಾರಿ ಅವರನ್ನು ಮುಂಬೈ ಇಂಡಿಯನ್ಸ್ ಫ್ರ್ಯಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಂಡು ನಾಯಕತ್ವ ನೀಡಿದೆ. ತಂಡವನ್ನು ಐದು ಬಾರಿ ಟ್ರೋಫಿ ಜಯದತ್ತ ಕೊಂಡೊಯ್ದಿದ್ದ ರೋಹಿತ್ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಲಾಗಿದೆ.  

ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ ದರೆ, ಐಪಿಎಲ್ ಫ್ರ್ಯಾಂಚೈಸಿಗಳು ದೇಶದ ಕ್ರಿಕೆಟ್‌ ಮೇಲೆ ‘ನಿಯಂತ್ರಣ’ ಸಾಧಿಸುತ್ತಿರುವ ಅನುಮಾನ ಕಾಡದೇ ಇರದು. ದಶಕಗಳ ಹಿಂದೆ ರಾಜಮನೆತನ
ಗಳಿಗೆ ಸೀಮಿತವಾಗಿದ್ದ ಕ್ರಿಕೆಟ್‌ ಈಗ ಶ್ರೀಮಂತ ಉದ್ಯಮಿಗಳ ಹಿಡಿತಕ್ಕೊಳಪಡುತ್ತಿರುವ ಸಂಶಯ ತಲೆ ಎತ್ತುತ್ತಿದೆ.  ಆದರೆ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ದೇಶಗಳನ್ನೂ ಮೀರಿಸುವಂತೆ ಭಾರತಕ್ಕೆ ಬೆಳೆಯಲು ಸಾಧ್ಯವಾಗಿದ್ದು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯು ನೀಡಿದ ಕೊಡುಗೆಗಳಿಂದಾಗಿ ಎಂಬುದರಲ್ಲಿ ಅನುಮಾನವೇ ಇಲ್ಲ.

ಒಂಬತ್ತು ದಶಕಗಳ ಇತಿಹಾಸವಿರುವ ಈ ರಣಜಿ ಟೂರ್ನಿಯಿಂದಲೇ ಹಲವಾರು ಖ್ಯಾತನಾಮ ಕ್ರಿಕೆಟಿಗರು ಬೆಳೆದರು. ಭಾರತ ತಂಡವು ವಿದೇಶದಲ್ಲಿಯೂ ಮಿಂಚು ವಂತೆ ಮಾಡಿದರು. 1983ರ ವಿಶ್ವಕಪ್ ಜಯಿಸಿದ ತಂಡದಲ್ಲಿದ್ದವರೆಲ್ಲರೂ ದೇಶಿ ಕ್ರಿಕೆಟ್‌ ತೊಟ್ಟಿಲಲ್ಲಿ ಆಡಿ ಬಂದವರೇ. ಈಚೆಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮಿಂಚಿದ ನವಪ್ರತಿಭೆಗಳಾದ ಸರ್ಫರಾಜ್ ಖಾನ್, ಧ್ರುವ ಜುರೇಲ್, ಆಕಾಶ್ ದೀಪ್, ಯಶಸ್ವಿ ಜೈಸ್ವಾಲ್ ಕೂಡ ದೇಶಿ ಟೂರ್ನಿಗಳಿಂದಲೇ ಬೆಳಕಿಗೆ ಬಂದವರು. 

ಅಷ್ಟೇ ಅಲ್ಲ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ಯುವರಾಜ್ ಸಿಂಗ್ ಮತ್ತು ಮಹೇಂದ್ರಸಿಂಗ್ ಧೋನಿ ಅವರಂತಹ ಖ್ಯಾತನಾಮರು ಐಪಿಎಲ್‌ನಲ್ಲಿಯೂ ಯಶಸ್ವಿಯಾದರು. ಆದರೆ ತಮ್ಮ ತವರು ರಾಜ್ಯ ತಂಡಗಳ ನಂಟು ಬಿಟ್ಟುಕೊಟ್ಟಿರಲಿಲ್ಲ. ಧೋನಿ ಅವರಂತೂ ಎಲ್ಲ ಮಾದರಿಗಳ ಪಂದ್ಯಗಳಲ್ಲಿ ಸತತವಾಗಿ ಆಡಿದವರು. ಗಾಯದ ಕಾರಣ ನೀಡಿ ಹೆಚ್ಚು ವಿರಾಮ ಪಡೆದವರಲ್ಲ. ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿ ಆದ ಮೇಲೂ ವರ್ಷಕ್ಕೊಮ್ಮೆ ಐಪಿಎಲ್‌ನಲ್ಲಿ  ಆಡುತ್ತಾರೆ. ಅಷ್ಟೇ ಅಲ್ಲ, ತಮ್ಮ ತಂಡವನ್ನು ಪ್ರಶಸ್ತಿ ಜಯದತ್ತ ಮುನ್ನಡೆಸುತ್ತಾರೆ. ಅವರೆಲ್ಲರ ಫಿಟ್‌ನೆಸ್‌ ಈಗಿನ ಅತ್ಯಾಧುನಿಕ ತರಬೇತಿ ಪಡೆಯುವ ಆಟಗಾರರಿಗೆ ಯಾಕೆ ಬರುತ್ತಿಲ್ಲ? ವಿರಾಟ್ ಕೊಹ್ಲಿ, ರೋಹಿತ್, ರವೀಂದ್ರ ಜಡೇಜ, ಜಸ್‌ಪ್ರೀತ್ ಬೂಮ್ರಾ ಅವರೂ ದೇಶಿ ಟೂರ್ನಿಗಳಲ್ಲಿ ಆಡಬೇಕು ಎಂಬ ಕೂಗು ಕೂಡ ಈಗ ಕೇಳಿಬರುತ್ತಿದೆ. ಆಟಗಾರ ಎಷ್ಟೇ ದೊಡ್ಡವನಿರಲಿ ಆ ಕ್ರೀಡೆಗಿಂತ ದೊಡ್ಡವನಲ್ಲ ಎಂಬುದು ಆಟಗಾರರಿಗೂ ಮನವರಿಕೆ ಆಗಬೇಕು. 

ದೊಡ್ಡ ಮೊತ್ತ ನೀಡುವ ಫ್ರ್ಯಾಂಚೈಸಿಗಳ ಗಮನ ಸೆಳೆಯುವಷ್ಟು ಎತ್ತರಕ್ಕೆ ಬೆಳೆಯಲು ಮಂಡಳಿಯು
ವರ್ಷಾನುಗಟ್ಟಲೇ ಬಹಳಷ್ಟು ಸಂಪನ್ಮೂಲ ವಿನಿಯೋಗಿ ಸಿರು ತ್ತದೆ. ಆದ್ದರಿಂದ ದೇಶಿ ಕ್ರಿಕೆಟ್‌ ಘನತೆ ಉಳಿಸಲು ಮತ್ತು ದೇಶಕ್ಕಾಗಿ ಆಡುವ ಮನೋಭಾವವನ್ನು ಆಟಗಾರರಲ್ಲಿ ಬೆಳೆಸಲು ಮತ್ತಷ್ಟು ಕ್ರಮಗಳಿಗೆ ಮುಂದಾಗಬೇಕಿರುವುದು ಇವತ್ತಿನ ತುರ್ತು. ಐಪಿಎಲ್‌ನಲ್ಲಿ ಆಡಲು ರಣಜಿ ಆಡುವುದು ಕಡ್ಡಾಯ ಎಂದು ಘೋಷಿಸಲಾಗಿದೆ. ಆದರೆ ರಣಜಿ ಸೇರಿದಂತೆ ದೇಶಿ ಟೂರ್ನಿಗಳಲ್ಲಿ ಆಡಿದವರನ್ನೇ ತಮ್ಮ ತಂಡಕ್ಕೆ ಖರೀದಿಸಲು ಆದ್ಯತೆ ನೀಡಬೇಕೆಂದು ಫ್ರ್ಯಾಂಚೈಸಿಗಳಿಗೂ ನಿಯಮ ವಿಧಿಸಬೇಕು. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ದೇಶಿ ಸಾಧನೆಯೇ ಪ್ರಮುಖ ಆಗಬೇಕು. ಐಪಿಎಲ್ ಮಾನದಂಡವಾಗಬಾರದು. 

ವಿಪರ್ಯಾಸವೆಂದರೆ, ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದ ಕೆಲವು ಸ್ಥಾನ ಗಳನ್ನು ಇದೇ ತಿಂಗಳು ಆರಂಭವಾಗುವ ಐಪಿಎಲ್‌ ಪ್ರತಿಭೆ ಗಳಿಂದ ತುಂಬುವುದಾಗಿ ಮಂಡಳಿಯೇ ಹೇಳಿದೆ. ಇಂತಹ ದ್ವಂದ್ವಗಳು ನಿಲ್ಲದಿದ್ದರೆ, ಮತ್ತಷ್ಟು ಆಟಗಾರರು ಇಶಾನ್‌ ಅವರಂತೆ ಆಗಬಹುದೇನೋ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT