‘ಗಾಂಧೀಜಿ ರಾಷ್ಟ್ರಪಿತ ಅಲ್ಲ’ ಅಥವಾ ‘ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಒಪ್ಪಲು ಸಾಧ್ಯವಿಲ್ಲ’, ‘ಗಾಂಧೀಜಿ ಮಹಾತ್ಮ ಅಲ್ಲ’ ಎನ್ನುವ ಮಾತುಗಳು ಆಗಾಗ ಕೇಳಿಸುತ್ತಾ ಇರುತ್ತವೆ. ಉಡುಪಿ ಮಠದಲ್ಲಿ ಇತ್ತೀಚೆಗೆ ನಾಲ್ವರು ಯತಿಗಳ ಸಮ್ಮುಖದಲ್ಲಿ ಗಾಂಧಿ ನಿಂದನೆಯ ಕೆಲಸ ಆಗಿರುವುದು ವರದಿಯಾಗಿದೆ. ಗಾಂಧಿ ಹತ್ಯೆಯಾದಾಗ ಪೇಜಾವರ ಮಠದ ಅಂದಿನ ಸ್ವಾಮೀಜಿ ದುಃಖಿಸಿದ್ದು, ಶೃಂಗೇರಿಯ ಅಂದಿನ ಶ್ರೀಗಳು ತುಂಗೆಯಲ್ಲಿ ಮುಳುಗೆದ್ದ ವಿದ್ಯಮಾನಗಳು ನಡೆದಿದ್ದವು. ಇಂದಿನ ಕೆಲವು ಸ್ವಾಮಿಗಳಿಗೆ ಅವೆಲ್ಲ ಅರ್ಥಹೀನ ಎಂದು ಅನಿಸಿರಬಹುದು. ಆದರೆ ಗಾಂಧೀಜಿ ಯಾಕೆ ರಾಷ್ಟ್ರಪಿತ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

ರಾಷ್ಟ್ರಪಿತ ಎನ್ನುವುದು ಒಂದು ರಾಷ್ಟ್ರ ಅಥವಾ ದೇಶ ಅಥವಾ ಆಡಳಿತಾತ್ಮಕ ವ್ಯವಸ್ಥೆಯನ್ನು ಸಂಘಟಿಸುವಲ್ಲಿ ಅಥವಾ ಸ್ವತಂತ್ರಗೊಳಿಸುವುದರಲ್ಲಿ ಅಥವಾ ಅಭಿವೃದ್ಧಿ ಸಾಧಿಸುವುದರಲ್ಲಿ ಪ್ರಮುಖ ಚಾಲಕಶಕ್ತಿಯಾಗಿದ್ದ ವ್ಯಕ್ತಿಗೆ ನೀಡುವ ಗೌರವಸೂಚಕ ಬಿರುದು. ಪುರಾತನ ರೋಮ್ ಸಾಮ್ರಾಜ್ಯದಲ್ಲಿ ಈ ಪದ್ಧತಿ ಇತ್ತು. ರೋಮ್ನ ಸೆನೆಟ್ ವೀರರಿಗೆ, ನಂತರದ ದಿನಗಳಲ್ಲಿ ಚಕ್ರವರ್ತಿಗಳಿಗೆ ‘ಪ್ಯಾಟರ್ ಪ್ಯಾಟ್ರಿಯಾ’ ಅಂದರೆ ‘ತಂದೆನಾಡಿನ ರಾಷ್ಟ್ರಪಿತ’ ಎಂಬ ಬಿರುದು ನೀಡುವ ಪದ್ಧತಿ ಇತ್ತು. ನಂತರದ ಕಾಲದಲ್ಲಿ ದೇಶವನ್ನು ತಾಯ್ನಾಡು ಎಂದು ಭಾವಿಸುವ ರಾಷ್ಟ್ರಗಳಲ್ಲೂ ‘ರಾಷ್ಟ್ರಪಿತ’ ಪರಿಕಲ್ಪನೆ ಅನುಷ್ಠಾನಕ್ಕೆ ಬಂದಿತ್ತು.

1603ರಿಂದ 1625ರ ಅವಧಿಯಲ್ಲಿ ಬ್ರಿಟನ್ನ ಚಕ್ರವರ್ತಿ ಒಂದನೇ ಜೇಮ್ಸ್ ‘ರಾಜನ ದೈವಿಕ ಹಕ್ಕುಗಳ ಸಿದ್ಧಾಂತ’ವನ್ನು ಪ್ರತಿಪಾದಿಸಿದ್ದ. ರಾಜನು ದೇವರಿಂದ ಅಧಿಕಾರವನ್ನು ಪಡೆದಿದ್ದು, ದೇವರ ಪ್ರತಿನಿಧಿಯಾಗಿದ್ದಾನೆ. ಆದ್ದರಿಂದ ರಾಜನು ದೇವರಿಗೆ ಮಾತ್ರ ಉತ್ತರದಾಯಿ’ ಎನ್ನುವುದು ಈ ಸಿದ್ಧಾಂತದ ತಿರುಳು. ಈ ಸಿದ್ಧಾಂತದ ಪ್ರಕಾರ, ರಾಜನು ತಾನೇ ತಾನಾಗಿ ರಾಷ್ಟ್ರಪಿತನಾಗುತ್ತಾನೆ. ಭಾರತದಲ್ಲಿ 1266ರಲ್ಲಿ ಅಧಿಕಾರಕ್ಕೆ ಬಂದಿದ್ದ ಘಿಯಾಸ್-ಉದ್-ದೀನ್-ಬಲ್ಬನ್ ಇದೇ ಸಿದ್ಧಾಂತವನ್ನು ಪ್ರತಿಪಾದಿಸಿದ್ದ.

1688- 89ರಲ್ಲಿ ಬ್ರಿಟನ್ನಲ್ಲಿ ನಡೆದ ‘ಗ್ಲೋರಿಯಸ್ ಕ್ರಾಂತಿ’ಯ ನಂತರ ‘ರಾಜನ ದೈವಿಕ ಹಕ್ಕುಗಳ ಸಿದ್ಧಾಂತ’ಕ್ಕೆ ಮಹತ್ವ ಉಳಿಯಲಿಲ್ಲ. ಆದರೆ ‘ರಾಷ್ಟ್ರಪಿತ’ ಪರಿಕಲ್ಪನೆ ಹೊರಟು ಹೋಗಲಿಲ್ಲ. ಅಮೆರಿಕಕ್ಕೆ ಜಾರ್ಜ್ ವಾಷಿಂಗ್ಟನ್ ರಾಷ್ಟ್ರಪಿತ. ನ್ಯೂಜಿಲೆಂಡ್ಗೆ ಜೇಮ್ಸ್ ಬುಸ್ಬೇ, ಕೆನಡಾಕ್ಕೆ ಜಾನ್ ಅಲೆಕ್ಸಾಂಡರ್ ಮೆಕ್ಡೊನಾಲ್ಡ್, ದಕ್ಷಿಣ ಆಫ್ರಿಕಾಕ್ಕೆ ನೆಲ್ಸನ್ ಮಂಡೇಲಾ ರಾಷ್ಟ್ರಪಿತರಾಗಿ ಪರಿಗಣಿಸಲ್ಪಟ್ಟಿದ್ದಾರೆ. ಇನ್ನೂ ಬಹಳಷ್ಟು ರಾಷ್ಟ್ರಗಳು ರಾಷ್ಟ್ರಪಿತರನ್ನು ಗುರುತಿಸಿಕೊಂಡಿವೆ. ಕೆಲವು ರಾಷ್ಟ್ರಗಳು ಶಾಸನಬದ್ಧವಾಗಿ ರಾಷ್ಟ್ರಪಿತರನ್ನು ಗುರುತಿಸಿದ್ದರೆ, ಇನ್ನು ಕೆಲವು ರಾಷ್ಟ್ರಗಳಲ್ಲಿ ಜನರೇ ರಾಷ್ಟ್ರಪಿತರನ್ನು ಗುರುತಿಸಿದ್ದಾರೆ. ಇಂಥ ರಾಷ್ಟ್ರಗಳಲ್ಲಿ ರಾಷ್ಟ್ರಪಿತ ಎನ್ನುವ ಸ್ಥಾನಕ್ಕೆ ಕಾನೂನಿನ ಮಾನ್ಯತೆ ಇಲ್ಲ.

ಭಾರತ ಸಂವಿಧಾನವು ರಾಷ್ಟ್ರಪಿತ ಸ್ಥಾನಕ್ಕೆ ಕಾನೂನಿನ ಮಾನ್ಯತೆಯನ್ನು ನೀಡಿಲ್ಲ. ಅಂದರೆ ಗಾಂಧೀಜಿಯನ್ನು ಜನರೇ ರಾಷ್ಟ್ರಪಿತ ಎಂದು ಗೌರವಿಸಿದ್ದಾರೆ. ಶಾಸನಾತ್ಮಕವಾಗಿ ರಾಷ್ಟ್ರಪಿತ ಸ್ಥಾನವನ್ನು ನೀಡಿದಾಗ ಶಾಸನಾತ್ಮಕವಾಗಿಯೇ ಆ ಸ್ಥಾನವನ್ನು ರದ್ದುಪಡಿಸಲೂ ಬರುತ್ತದೆ. ಭಾರತದಲ್ಲಿ ಗಾಂಧಿಯವರಿಗೆ ಶಾಸನಾತ್ಮಕವಾಗಿ ರಾಷ್ಟ್ರಪಿತ ಎಂಬ ಸ್ಥಾನ ಇಲ್ಲದಿರುವುದರಿಂದ ಅದನ್ನು ಹಿಂದಕ್ಕೆ ಪಡೆಯಲೂ ಆಗದು.

ಗಾಂಧಿಯವರನ್ನು ರಾಷ್ಟ್ರಪಿತ ಎಂದು ಮೊದಲು ಸಂಬೋಧಿಸಿದ್ದು ಸುಭಾಷ್ಚಂದ್ರ ಬೋಸ್. ಬೋಸ್ ಅವರನ್ನು ಅನುಸರಿಸಿ ಇತರರು ಗಾಂಧಿಯವರನ್ನು ರಾಷ್ಟ್ರಪಿತ ಎಂದು ಕರೆಯುವ ಪರಿಪಾಟ ಬೆಳೆಯಿತು. ಇಲ್ಲಿ, ರಾಷ್ಟ್ರಪಿತ ಎಂದು ಕರೆಯಲು ಗಾಂಧಿ ಯಾಕೆ ಅರ್ಹರು ಎಂಬುದು ಮುಖ್ಯ ಸಂಗತಿ.

ಭಾರತವನ್ನು ಯಾರೂ ಸೃಷ್ಟಿಸಲಿಲ್ಲ, ಗಾಂಧೀಜಿಗಿಂತ ಮೊದಲೂ ಭಾರತ ಇತ್ತು ಎನ್ನುವುದು ಗಾಂಧೀಜಿ ರಾಷ್ಟ್ರಪಿತ ಅಲ್ಲ ಎನ್ನುವವರ ವಾದಗಳಲ್ಲಿ ಪ್ರಮುಖವಾದ ಒಂದು ಅಂಶ. ಹಾಗಿದ್ದರೆ ಉಳಿದೆಲ್ಲ ರಾಷ್ಟ್ರಗಳನ್ನು ಅಲ್ಲಿನ ರಾಷ್ಟ್ರಪಿತರು ಸೃಷ್ಟಿಸಿದ್ದಾರೆಯೇ? ಇಲ್ಲ. ಭಾರತ ಎನ್ನುವ ಭೂಪ್ರದೇಶ ಇತ್ತು. ಭಾರತದಲ್ಲಿ ಏಕತೆಯೂ ಇತ್ತು. ಆದರೆ ಅದು ಸಾಂಸ್ಕೃತಿಕವಾಗಿ ಇತ್ತೇ ವಿನಾ ರಾಜಕೀಯ ಏಕತೆ ಇರಲಿಲ್ಲ. ಸಮುದ್ರಗುಪ್ತ, ಎರಡನೆಯ ಚಂದ್ರಗುಪ್ತ ವಿಕ್ರಮಾದಿತ್ಯ, ಅಲ್ಲಾ ಉದ್ದೀನ್ ಖಿಲ್ಜಿ ಅವರಂತಹ ರಾಜರು ಸಾಮ್ರಾಟರಾಗಿ ಭಾರತದ ಇತರ ರಾಜರನ್ನು ತಮ್ಮ ಏಕಚಕ್ರಾಧಿಪತ್ಯಕ್ಕೆ ತಂದಿದ್ದರೂ ಅವರ ಕಾಲದ ನಂತರ ಅದು ಉಳಿಯಲಿಲ್ಲ. ಭಾರತದ ಬೇರೆ ಬೇರೆ ಭಾಗಗಳನ್ನು ಬೇರೆ ಬೇರೆ ರಾಜರು ಸಾಮ್ರಾಟನ ಪರಮಾಧಿಕಾರಕ್ಕೆ ಒಳಪಡದೆಯೇ ಆಳುತ್ತಿದ್ದರು. ಬ್ರಿಟಿಷರ ವಿರುದ್ಧ ಯುದ್ಧ ಮಾಡಿದರಾದರೂ ಮರಾಠರಿಗೆ ತಮ್ಮ ಪ್ರಾಂತ್ಯದಲ್ಲಿ ಬ್ರಿಟಿಷರು ಇರಬಾರದು ಎನಿಸಿತ್ತೇ ವಿನಾ ಬಂಗಾಳದಲ್ಲಿ ಇರಬಾರದು ಎಂದು ಅನಿಸಿರಲಿಲ್ಲ. ಸಿಖ್ಖರಿಗೆ ಪಂಜಾಬ್ನಲ್ಲಿ ಬ್ರಿಟಿಷರು ಇರಬಾರದು ಎಂದೇ ಇತ್ತು. ಆದರೆ ಮುಂಬೈಯಲ್ಲಿ ಬ್ರಿಟಿಷರು ಇರಬಾರದು ಎಂದು ಇರಲಿಲ್ಲ. ಗಾಂಧಿ ಹಿಂಸೆಯನ್ನು ಒಪ್ಪಲಿಲ್ಲ ಎನ್ನುವ ಕಾರಣಕ್ಕಾಗಿ ಗಾಂಧಿಯನ್ನು ದ್ವೇಷಿಸುವ ಅನೇಕರಿಗೆ ಗಾಂಧಿ ಹುಟ್ಟುವ ಮೊದಲೇ ಬ್ರಿಟಿಷರ ವಿರುದ್ಧ ಹಲವು ಸಶಸ್ತ್ರ ಯುದ್ಧಗಳು ನಡೆದಿದ್ದವು, ಆದರೂ ಬ್ರಿಟಿಷರನ್ನು ಹೊರಹಾಕಲು ಆಗಿರಲಿಲ್ಲ ಎಂದು ಗೊತ್ತಿರಬೇಕಾಗುತ್ತದೆ.

ಒಂದು ವೇಳೆ ಬ್ರಿಟಿಷರ ವಿರುದ್ಧ ಅಲ್ಲಲ್ಲಿ ಯುದ್ಧ ಮಾಡಿದವರೆಲ್ಲರೂ ಒಟ್ಟಾಗಿ ಯುದ್ಧ ಮಾಡಿದ್ದರೆ ಬ್ರಿಟಿಷರನ್ನು ಹೊರಹಾಕಬಹುದಿತ್ತು. ಆದರೆ ಬ್ರಿಟಿಷರ ವಿರುದ್ಧ ಇದ್ದವರನ್ನೆಲ್ಲ ಸಂಘಟಿಸುವ ಕೆಲಸ ನಡೆದಿರಲಿಲ್ಲ. 1885ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸ್ಥಾಪನೆಯಾದಾಗ ಅದು ಒಂದು ಕ್ಲಬ್ ಮಾದರಿಯ ಸಂಸ್ಥೆಯಾಗಿತ್ತು. 1905ರಲ್ಲಿ ಬಂಗಾಳ ವಿಭಜನೆಯಾದಾಗ ಕಾಂಗ್ರೆಸ್ನ ತೀವ್ರಗಾಮಿಗಳು, ಮುಖ್ಯವಾಗಿ ಬಾಲಗಂಗಾಧರ ತಿಲಕ್ ಅವರು ಜನರನ್ನು ಸಂಘಟಿಸುವ ಕೆಲಸವನ್ನು ಮಾಡಿದ್ದರು. ಆದರೆ ಆ ಸಂಘಟಿಸುವಿಕೆ ಕೂಡ ಸಮಗ್ರ ಭಾರತವನ್ನು ಆವರಿಸಿರಲಿಲ್ಲ. ಸಮಗ್ರ ಭಾರತವನ್ನು ಒಂದು ಶಕ್ತಿಯಾಗಿ ಸಂಘಟಿಸಿದ್ದು ಗಾಂಧಿಯೇ.

ಇಡೀ ದೇಶವನ್ನು ಸಂಘಟಿಸಿದವರು ಗಾಂಧಿಯಾದದ್ದರಿಂದಲೇ ಆ ಕಾಲದ ಇತರ ನಾಯಕರು ಗಾಂಧೀಜಿ ನಾಯಕತ್ವವನ್ನು ನಿರಾಕರಿಸಲಿಲ್ಲ. ಗಾಂಧಿ ವಿಚಾರ, ಹೋರಾಟದ ಸ್ವರೂಪ, ವಿಧಾನವನ್ನು ವಿರೋಧಿಸಿದವರೂ ಅವರನ್ನು ರಾಷ್ಟ್ರೀಯ ನಾಯಕನನ್ನಾಗಿಯೇ ಗುರುತಿಸಿದ್ದರು. ಗಾಂಧಿ ರಾಷ್ಟ್ರೀಯ ಚಳವಳಿಯ ನಾಯಕ ಆಗಿರಲಿಲ್ಲ ಎಂದು ಇವತ್ತು ಹೇಳುತ್ತಿರುವವರು, ಗಾಂಧಿ ಅಲ್ಲದಿದ್ದರೆ ಬೇರೆ ಯಾರು ರಾಷ್ಟ್ರೀಯ ನಾಯಕ ಆಗಿದ್ದರು ಎಂದು ಹೇಳಬೇಕಾಗುತ್ತದೆ. ನಾಯಕನ ಜೊತೆ ಒಂದೋ ಸಮ್ಮತಿ ಅಥವಾ ಅಸಮ್ಮತಿಯ ಸಂಬಂಧ ಎಲ್ಲರಿಗೂ ಇರುತ್ತದೆ. ಸಮ್ಮತಿ ಇದ್ದವರೆಲ್ಲ ಗಾಂಧಿಯವರೊಂದಿಗೆ ಹೋದರು. ಅಸಮ್ಮತಿ ಇದ್ದವರು ವಿರೋಧಿಸಿದ್ದು ಗಾಂಧಿಯವರನ್ನೇ ವಿನಾ ಇತರ ನಾಯಕರನ್ನಲ್ಲ.

ಗಾಂಧಿಯವರನ್ನು ಪೂರ್ತಿಯಾಗಿ ನಿರಾಕರಿಸಿದವರು ಮಹಮದ್ ಅಲಿ ಜಿನ್ನಾ. ಆದರೆ ಅವರು ಪ್ರತ್ಯೇಕ ದೇಶ ಕೇಳಿದರೇ ವಿನಾ ಸಮಗ್ರ ಭಾರತಕ್ಕೆ ಗಾಂಧಿಯಲ್ಲ, ತಾನೇ ನಾಯಕ ಆಗುತ್ತೇನೆ ಎಂದು ಹೊರಡಲಿಲ್ಲ. ಅಂಬೇಡ್ಕರ್ ಅವರು ಗಾಂಧಿಯವರನ್ನು ಪ್ರಶ್ನಿಸಿದರೇ ವಿನಾ ಪುರುಷೋತ್ತಮ ದಾಸ್ ಟಂಡನ್ ಅವರನ್ನು ಪ್ರಶ್ನಿಸಲಿಲ್ಲ. ಸಾವರ್ಕರ್ ಅವರು ಮೋತಿಲಾಲ್ ನೆಹರೂ ಅವರ ಸಿದ್ಧಾಂತ ಸರಿ ಇಲ್ಲ, ಆದ್ದರಿಂದ ತಾನು ಹಿಂದೂ ಮಹಾಸಭಾ ಮಾಡುತ್ತೇನೆ ಎನ್ನಲಿಲ್ಲ. ಅವರು ಕೂಡ ಪ್ರಶ್ನಿಸಿದ್ದು ಗಾಂಧಿಯನ್ನೇ ಮತ್ತು ಸಾವರ್ಕರ್ ‘ದೇಶದ ಸ್ವಾತಂತ್ರ್ಯಕ್ಕೆ ಗಾಂಧಿಯವರ ಅಗತ್ಯ ಇದೆ’ ಎಂದೇ ಹೇಳಿದ್ದರು. ಬೋಸ್ ಅವರೂ ಗಾಂಧಿಯವರ ನಿಲುವಿನ ಆಧಾರದಲ್ಲೇ ತಮ್ಮ ದಾರಿಯನ್ನು ಕಂಡುಕೊಂಡವರು. ಚಂದ್ರಶೇಖರ ಆಜಾದ್ ಕೂಡ ಮೊದಲ ಹೋರಾಟವನ್ನು ‘ಗಾಂಧಿ ಕಿ ಜೈ’ ಎಂದೇ ಶುರುಮಾಡಿದ್ದು. ಅಂದರೆ ವೈಚಾರಿಕವಾಗಿ ಅವರನ್ನು ವಿರೋಧಿಸಿದವರೆಲ್ಲರೂ ಪ್ರಶ್ನಿಸಿದ್ದು ಗಾಂಧಿಯನ್ನೇ ವಿನಾ ಇತರ ನಾಯಕರನ್ನಲ್ಲ. ಪ್ರಧಾನ ನಾಯಕನನ್ನೇ ಯಾವಾಗಲೂ ಪ್ರಶ್ನಿಸುವುದು, ಉಳಿದವರನ್ನು ಯಾರಾದರೂ ಯಾಕೆ ಪ್ರಶ್ನಿಸುತ್ತಾರೆ.

ಯಾವುದೇ ಕಾಲದ ನಾಯಕರಲ್ಲಿ ಇತರರನ್ನು ತಮ್ಮೊಂದಿಗೆ ಬರುವಂತೆ ಮಾಡುವ ಗುಣ, ಕನಿಷ್ಠಪಕ್ಷ ವಿಶ್ವಾಸಕ್ಕಾದರೂ ತೆಗೆದುಕೊಳ್ಳುವ ಗುಣ ಇರುತ್ತದೆ. ಗಾಂಧಿಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಾವರ್ಕರ್ ಮುಂದಾಗಲಿಲ್ಲ. ಆದರೆ ಸಾವರ್ಕರ್ ಅವರಿಗೆ ಮನವರಿಕೆ ಮಾಡಿಕೊಡಲು ಗಾಂಧಿ ಮುಂದಾದರು. ಬೋಸರಿಗೂ ಮನವರಿಕೆ ಮಾಡಲು ಹೊರಟರು. ಅಂಬೇಡ್ಕರ್ ಬಳಿಯೂ ಸಮಸ್ಯೆ ಪರಿಹಾರದ ಸೂತ್ರ ಕಂಡುಕೊಂಡರು, ಸಂವಿಧಾನ ಸಮಿತಿಗೆ ಅಂಬೇಡ್ಕರ್ ಅವರನ್ನು ಸೂಚಿಸಿದರು. ಜಿನ್ನಾ ಅವರು ಗಾಂಧಿ ಬಳಿ ಬರಲಿಲ್ಲ. ಬದಲು, ಗಾಂಧೀಜಿಯೇ ಜಿನ್ನಾ ಬಳಿ ಹೋಗಿ ಮಾತನಾಡಿದರು. ಎಲ್ಲರ ಬೇಡಿಕೆಗಳಿಗೂ ಸ್ಪಂದಿಸುವ ಗುಣ ಇರುವುದು ನಾಯಕನಿಗೆ. ಆ ಕೆಲಸವನ್ನು ಮಾಡಿದ್ದು ಗಾಂಧಿಯೇ. ಇವತ್ತು ಗಾಂಧಿ ವಿರೋಧಿಗಳಲ್ಲಿ ಕೆಲವರು ತಮ್ಮನ್ನು ಆರ್ಎಸ್ಎಸ್ನೊಂದಿಗೆ ಗುರುತಿಸಿಕೊಳ್ಳುತ್ತಾರೆ. ಆದರೆ ಆರ್ಎಸ್ಎಸ್ನ ಸ್ಥಾಪಕ ಕೇಶವ ಬಲಿರಾಮ ಹೆಡಗೆವಾರ್ ಗಾಂಧಿಯವರೊಂದಿಗೆ ಸತ್ಯಾಗ್ರಹಕ್ಕೆ ಹೋದವರು. ಮತೀಯ ಗಲಭೆಯನ್ನು ತಡೆಯುವ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದಾಗ ಆರ್ಎಸ್ಎಸ್ನ ಗೋಳ್ವಲ್ಕರ್ ಕೂಡ ಗಾಂಧಿಯೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಕುಳಿತು, ‘ನಾನು ಮಾತಾಡುವುದಿಲ್ಲ. ನಿಮ್ಮ ಅಭಿಪ್ರಾಯವೇ ನನ್ನ ಅಭಿಪ್ರಾಯ’ ಎಂದವರು.

ಹಿಂದೆ ಸಾಮ್ರಾಟರು ರಾಜಕೀಯವಾಗಿ ಸಂಘಟಿಸಿದ್ದ ಭಾರತಕ್ಕೆ ಏಕರೂಪಿ ಶಾಸನ ಇಲ್ಲದ್ದರಿಂದ ಅವರ ಕಾಲದ ನಂತರ ಭಾರತ ಒಟ್ಟಾಗಿ ಉಳಿಯಲಿಲ್ಲ. ಗಾಂಧಿ ಸಂಘಟಿಸಿದ ಭಾರತವು ಗಾಂಧಿಯ ನಂತರವೂ ಒಟ್ಟಾಗಿ ಉಳಿಯಲು ಅಂಬೇಡ್ಕರ್ ಬರೆದ ಸಂವಿಧಾನ ಎಂಬ ಶಾಸನವಿದೆ. ಅಂದಮೇಲೆ ಭಾರತಕ್ಕೆ ಗಾಂಧಿಯ ವಿನಾ ಬೇರಾರು ರಾಷ್ಟ್ರಪಿತ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.