ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾದಿರಾಜ್ ಅವರ ವಿಶ್ಲೇಷಣೆ: ಮೀಸಲಾತಿ ನುಂಗುವ ನುಸುಳುಕೋರರು

ಸುಳ್ಳು ಜಾತಿ ಪ್ರಮಾಣಪತ್ರ ಪಡೆಯಲು ತಡೆಯಾಗಿ ನಿಂತಿದ್ದ ‘ಗೋಡೆ’ಯನ್ನು ಉರುಳಿಸಿದ್ದೇಕೆ?
Last Updated 18 ಏಪ್ರಿಲ್ 2022, 19:42 IST
ಅಕ್ಷರ ಗಾತ್ರ

ಲಿಂಗಾಯತ ಜಂಗಮರಾದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಮಗಳು ಬೇಡಜಂಗಮ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದಿದ್ದ ಸಂಗತಿ ವಿಧಾನಸಭೆಯಲ್ಲಿ ವ್ಯಾಪಕ ಚರ್ಚೆಗೆ ಒಳಗಾಯಿತು. ಈ ಕಾರಣಕ್ಕಾಗಿ ಸದನದ ಹೊರಗೆ ಪ್ರತಿಭಟನೆ
ಗಳೂ ನಡೆದವು. ಈ ಕುರಿತ ಚರ್ಚೆಗೆ ಮೊದಲೇ ನಕಲಿ ಜಾತಿ ಪ್ರಮಾಣಪತ್ರ ತಡೆಯುವ ಪ್ರಕ್ರಿಯೆಗೆ ಸಂಬಂಧಿಸಿದ ಆದೇಶವೊಂದನ್ನು ಮುಖ್ಯಮಂತ್ರಿ ಹಿಂಪಡೆದ ವಿಚಾರ ವಿಧಾನಸಭೆಯಲ್ಲಿ ಹೆಚ್ಚು ಚರ್ಚೆಯಾಗಲಿಲ್ಲ. ಏಕೆಂದರೆ ಈ ಆದೇಶವನ್ನು ಹಿಂಪಡೆಯುವ ಕೆಲಸವನ್ನು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್ ಜಂಟಿಯಾಗಿಯೇ ಮಾಡಿದ್ದವು.

ಬೀದರ್ ಜಿಲ್ಲೆಗೆ ಸೇರಿದ ಕೆಎಸ್‌ಆರ್‌ಟಿಸಿ ಚಾಲಕರೊಬ್ಬರು ಆತ್ಮಹತ್ಯೆಗೆ ಶರಣಾದ ವಿಷಯವನ್ನು ಮಾರ್ಚ್ 15ರಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಪೊಲೀಸ್‌ ಇಲಾಖೆಯ ವ್ಯಾಪ್ತಿಗೆ ಬರುವ ನಾಗರಿಕ ಹಕ್ಕು ಜಾರಿನಿರ್ದೇಶನಾಲಯವು ಜಾತಿ ಪ್ರಮಾಣಪತ್ರದ ವಿಷಯದಲ್ಲಿ ಅನಗತ್ಯ ಕಿರುಕುಳ ನೀಡುತ್ತಿದೆ. 2021ರ ಜ. 16ರಂದು ಬಿಜೆಪಿ ನೇತೃತ್ವದ ಸರ್ಕಾರ ಮಾಡಿದ ಆದೇಶದಿಂದಾಗಿ ಕಾನೂನು ಮತ್ತಷ್ಟು ಬಿಗಿಯಾಗಿ ಜಾತಿ ಪ್ರಮಾಣಪತ್ರದ ವಿಷಯದಲ್ಲಿ ಕಿರುಕುಳ ವಿಪರೀತವಾಗಿದೆ. ಇದರಿಂದ ಬೇಸತ್ತು ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ.

ಹೀಗಾಗಿ ಸರ್ಕಾರವು 2021ರ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಈ ಆಗ್ರಹಕ್ಕೆ ಕಾಂಗ್ರೆಸ್ಸಿನ ಈಶ್ವರ ಖಂಡ್ರೆ, ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ ಅವರೂ ದನಿಗೂಡಿಸಿದರು. ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಚರ್ಚೆ ನಡೆದದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದೇಶ ಹಿಂಪಡೆಯಲು ಮುಂದಾಗುವಂತೆ ಮಾಡಿತು. ಇದರ ಮರುದಿನವೇ, 2021ರಲ್ಲಿ ತಮ್ಮ ಪಕ್ಷದ ನೇತೃತ್ವದ ಸರ್ಕಾರವೇ ಮಾಡಿದ್ದ ಆದೇಶವನ್ನು ಹಿಂಪಡೆದರು.

ಜಾತಿ ಪ್ರಮಾಣಪತ್ರದ ಇನ್ನೊಂದು ಮುಖವಾದ ‘ನಕಲಿ’ತನದ ಬಗ್ಗೆ ಸದನದಲ್ಲಿ ಚರ್ಚೆ ಆಗಲಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಶಾಸಕರ್‍ಯಾರಿಗೂ ದನಿಯೆತ್ತುವ ಅವಕಾಶವೂ ಸಿಗಲಿಲ್ಲ. ವಾಸ್ತವದಲ್ಲಿ ಸರ್ಕಾರದ 2021ರ ಆದೇಶವು ನಕಲಿ ಜಾತಿ ಪ್ರಮಾಣ
ಪತ್ರದ ಹಾವಳಿಗೆ ಅಂಕುಶ ಹಾಕುವ ಶಕ್ತಿ ಹೊಂದಿತ್ತು. ನಕಲಿ ಜಾತಿ ಹೆಸರಿನಲ್ಲಿ ಅತಿಹೆಚ್ಚು ದುರುಪಯೋಗ ಆಗುವ 18 ಮೀಸಲು ಜಾತಿಗಳನ್ನು ಗುರುತಿಸಿತ್ತು. ಇದರಲ್ಲಿ ಗೊಂಡ, ಜೇನುಕುರುಬ, ಕಾಡುಕುರುಬ, ಟೋಕರೆ ಕೋಳಿ, ಡೋರ್ ಕೋಳಿ ಸೇರಿದಂತೆ ಎಸ್‌.ಟಿ.
ವ್ಯಾಪ್ತಿಗೆ ಬರುವ 12 ಜಾತಿಗಳು ಮತ್ತು ಎಸ್‌.ಸಿ. ವ್ಯಾಪ್ತಿಗೆ ಬರುವ ಬೇಡಜಂಗಮ, ಬುಡ್ಗಜಂಗಮ, ಮೊಗೇರ ಸೇರಿದಂತೆ 6 ಜಾತಿಗಳನ್ನು ಗುರುತಿಸಲಾಗಿತ್ತು. ಇವುಗಳ ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡುವ ಮುನ್ನ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯು ನಿರ್ದೇಶನಾಲಯದಿಂದ ವಿಚಾರಣಾ ವರದಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿತ್ತು.

ಈ ಸಂಬಂಧದ ಆದೇಶವನ್ನು ಈಗ ಹಿಂಪಡೆಯಲಾಗಿದೆ.ಅನುಮಾನಾಸ್ಪದ ಪ್ರಕರಣಗಳಲ್ಲಿ ಮಾತ್ರವೇ ವಿಚಾರಣಾ ವರದಿ ಪಡೆಯಬೇಕೆಂದು ಸೂಚಿಸಲಾಗಿದೆ. ಕರ್ನಾಟಕದಲ್ಲಿ ನಕಲಿ ಜಾತಿ ಪ್ರಮಾಣಪತ್ರದ ಮೂಲಕ ಮೀಸಲಾತಿ ಕಬಳಿಸುವುದು ದೊಡ್ಡದಂಧೆ. ಒಂದೆಡೆ ಕುರುಬ ಸಮುದಾಯದ ಕೆಲವರು ಗೊಂಡ, ಕಾಡುಕುರುಬರ ಹೆಸರಲ್ಲಿ, ಇನ್ನೊಂದೆಡೆ ಲಿಂಗಾಯತ ಜಂಗಮರಲ್ಲಿ ಕೆಲವರು ಬೇಡಜಂಗಮರ ಹೆಸರಿನಲ್ಲಿ ಮೀಸಲು ಪಟ್ಟಿಯೊಳಗೆ ನುಸುಳುತ್ತಿದ್ದಾರೆ. ಇದಲ್ಲದೆ ಕರಾವಳಿಯಲ್ಲಿ ಮೊಗೇರ, ಉತ್ತರ ಕರ್ನಾಟಕದಲ್ಲಿ ಟೋಕರೆ ಕೋಳಿ, ಡೋರ್ ಕೋಳಿ ಜಾತಿಗಳಲ್ಲೂ ನುಸುಳುಕೋರರು ದೊಡ್ಡ ಪ್ರಮಾಣದಲ್ಲಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರ ಮೀಸಲು ಲೋಕಸಭಾ ಕ್ಷೇತ್ರದಿಂದ ‘ಬೇಡಜಂಗಮ’ ಪ್ರಮಾಣಪತ್ರದೊಂದಿಗೆ,
ಲಿಂಗಾಯತ ಜಂಗಮರಾದ ಡಾ. ಜೈಸಿದ್ಧೇಶ್ವರ ಸ್ವಾಮೀಜಿ ಸಂಸದರಾಗಿ ಬಿಜೆಪಿಯಿಂದ ಗೆದ್ದಿದ್ದಾರೆ. ಸ್ವಾಮೀಜಿ ಪಡೆದಿದ್ದ ಜಾತಿ ಪ್ರಮಾಣಪತ್ರವು ಅಸಿಂಧು ಎಂದು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯು ಹೇಳಿದೆ. ಪ್ರಕರಣ ಈಗ ಕೋರ್ಟಿನಲ್ಲಿದೆ.

1991ರ ಜನಗಣತಿಯಲ್ಲಿ 1.24 ಲಕ್ಷ ಜನಸಂಖ್ಯೆಯಿದ್ದ ಗೊಂಡ ಸಮುದಾಯವು 2001ರಲ್ಲಿ 1.36 ಲಕ್ಷಕ್ಕೆ ಏರಿದರೆ 2011ರಲ್ಲಿ 1.58 ಲಕ್ಷ ತಲುಪಿದೆ. ಏರಿಕೆ ಪ್ರಮಾಣದಲ್ಲಿ ಅಸಹಜತೆ ಗೋಚರಿಸುತ್ತಿದೆ. ಕಾಡುಕುರುಬರ ಮೂಲ ಮೈಸೂರು, ಕೊಡಗು. ಆದರೆ, ಅವರು ರಾಜ್ಯದಲ್ಲಿ ಅತ್ಯಂತ ಹೆಚ್ಚಿರುವುದು ಯಾದಗಿರಿ ಜಿಲ್ಲೆಯಲ್ಲಿ! 2011ರ ಜನಗಣತಿಯಂತೆ ಕಾಡುಕುರುಬರದ್ದು ಮೈಸೂರು ಜಿಲ್ಲೆಯಲ್ಲಿ 1,859 ಜನಸಂಖ್ಯೆ ಇದ್ದರೆ, ಯಾದಗಿರಿ ಜಿಲ್ಲೆಯಲ್ಲಿ 5,297. ಕಾಡುವಾಸಿಗಳಾದ ಕಾಡುಕುರುಬರು ಕಾಡೇ ಇಲ್ಲದ ಯಾದಗಿರಿ ಜಿಲ್ಲೆಯಲ್ಲಿ ಹೇಗೆ ಇಷ್ಟೊಂದು ಸಂಖ್ಯೆಯಲ್ಲಿ ಬಂದರೆಂಬುದು ಸಮಸ್ಯೆಯ ಆಳವನ್ನು ಬಿಂಬಿಸುತ್ತದೆ. ಬೇಡಜಂಗಮ, ಬುಡ್ಗಜಂಗಮ- ತೆಲುಗು ಭಾಷಿಕ, ಮಾಂಸಾಹಾರಿ ಪರಿಶಿಷ್ಟ ಜಾತಿಗಳು. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಭಿಕ್ಷೆ ಬೇಡಿಕೊಂಡು, ಕೂಲಿ ಮಾಡಿಕೊಂಡು ಇರುವ ಸಮುದಾಯ. ಇವರ ಹೆಸರಿನಲ್ಲಿ ಮೀಸಲು ಪಟ್ಟಿಯೊಳಗೆ ನುಸುಳಿರುವ ಲಿಂಗಾಯತ ಜಂಗಮರು ಮೂಲದಲ್ಲಿ
ಬ್ರಾಹ್ಮಣರಾಗಿದ್ದವರು. ಹಾಗೆಂದೇ ಲಿಂಗಾಯತರಲ್ಲಿ ಈಗಲೂ ಬಹುಪಾಲು ಧಾರ್ಮಿಕ ನೇತೃತ್ವ ಈ ಜಂಗಮ
ರದ್ದೆ. ಎಲ್ಲ ಸಾಮಾಜಿಕ ಸ್ಥಾನಮಾನ ಅನುಭವಿಸುತ್ತಿರುವ ಇವರು ಮೀಸಲು ಪಟ್ಟಿಗೆ ವ್ಯವಸ್ಥಿತವಾಗಿ ನುಸುಳುತ್ತಿದ್ದಾರೆ.

ಲಿಂಗಾಯತ ಜಂಗಮ ಸ್ವಾಮೀಜಿಗಳ ನಿಯೋಗವು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಎಸ್‌.ಸಿ.
ಪ್ರಮಾಣಪತ್ರಕ್ಕಾಗಿ ಹಕ್ಕೊತ್ತಾಯ ಮಂಡಿಸಿದೆ. ಲಿಂಗಾಯತ ಜಂಗಮರ ಎರಡು ಸಂಘಟನೆಗಳು ಎಸ್.ಸಿ. ಪ್ರಮಾಣಪತ್ರ ಕೊಡಿಸುವುದಕ್ಕೆ ಒತ್ತಾಸೆಯಾಗಿ ನಿಂತಿವೆ. ಮೈಸೂರಿನ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಯು 2013ರ ಡಿ. 10ರಂದು, ಈ ಸಂಘಟನೆಗಳ ಶಿಫಾರಸು ಪತ್ರವಿದ್ದರೆ ಬೇಡಜಂಗಮ ಜಾತಿ ಪ್ರಮಾಣಪತ್ರ ಕೊಡಬೇಕೆಂದು ಆದೇಶಿಸಿದ್ದರು. ಸಿದ್ದರಾಮಯ್ಯ, ಶ್ರೀನಿವಾಸ ಪ್ರಸಾದ್, ಡಾ. ಮಹದೇವಪ್ಪ ಅಧಿಕಾರ ಸೂತ್ರ ಹಿಡಿದಿದ್ದರೂ ಮೈಸೂರು ಜಿಲ್ಲೆಯಲ್ಲಿ ಈ ಆದೇಶ ಐದು ವರ್ಷ ಚಾಲ್ತಿಯಲ್ಲಿತ್ತು. ಈ ಸಂದರ್ಭದಲ್ಲೇ ಕೆ.ಆರ್.ನಗರದ 62 ಮಂದಿ ಲಿಂಗಾಯತ ಜಂಗಮರು ‘ಬೇಡಜಂಗಮ’ ಪ್ರಮಾಣಪತ್ರ ಪಡೆದರು. ಈಗ ಈ ಪ್ರಕರಣವು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ತನಿಖೆಗೆ ಒಳಪಟ್ಟಿದೆ. ಮೈಸೂರಿನ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಯ ಆದೇಶ ರದ್ದಾದದ್ದು 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ನಂತರ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಕಲಿ ಜಾತಿ ಪ್ರಮಾಣಪತ್ರಗಳ ಮೇಲೆ ನಿಗಾ ಇಡಬೇಕಾದ ನಿರ್ದೇಶನಾಲಯವನ್ನು
ದುರ್ಬಲಗೊಳಿಸಲಾಗಿತ್ತು.

ಈ ನಡುವೆ ಧಾರವಾಡದ ಜಿಲ್ಲಾ ನ್ಯಾಯಾಲಯದಲ್ಲಿ ‘ಲಿಂಗಾಯತ ಜಂಗಮರೂ ಬೇಡಜಂಗಮರೇ’ ಎಂದು ತೀರ್ಪು ಬಂದದ್ದು ನುಸುಳುಕೋರರ ವೇಗ ಹೆಚ್ಚಿಸಿತ್ತು.ರಾಜಕೀಯ ಪ್ರಾತಿನಿಧ್ಯದಲ್ಲಿ, ಸರ್ಕಾರಿ ನೌಕರಿಯಲ್ಲಿ ನಕಲಿಪ್ರಮಾಣಪತ್ರ ಪತ್ತೆಯಾಗಿ ವಿಚಾರಣೆಯಾದರೂ ನಡೆಯುತ್ತದೆ. ಉನ್ನತ ಶಿಕ್ಷಣದಲ್ಲಿ ಅದರಲ್ಲೂ ಎಂಜಿನಿಯರಿಂಗ್, ವೈದ್ಯಕೀಯ ಸೀಟುಗಳ ಪೈಪೋಟಿಯಲ್ಲಿ ಶಕ್ತ ಸಮುದಾಯಗಳು ಎಸ್‌.ಸಿ., ಎಸ್‌.ಟಿ. ಮೀಸಲನ್ನು ಕಬಳಿಸುವುದು ಗಮನಕ್ಕೂ ಬಾರದೇ ಹೋಗುತ್ತಿದೆ. ಇಂತಹ ಹಾವಳಿ ತಡೆಯಲು ಕಾನೂನು ಬಿಗಿಯಾಗಿಯೇ ಇರಬೇಕು.

2019ರ ಅ. 1ರಂದು ಸುಪ್ರೀಂ ಕೋರ್ಟ್‌ ನೀಡಿರುವ ಒಂದು ತೀರ್ಪಿನಲ್ಲಿ ‘ಜಾತಿ ಪ್ರಮಾಣಪತ್ರದ ಪರಿಶೀಲನೆಯು ವಿಶೇಷ ನಿಗಾದಲ್ಲಿ ನಡೆಯಬೇಕು. ಅದಕ್ಕೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೂರ್ತಿ ನೆರವು ಪಡೆಯಬೇಕು. ಅಪಾತ್ರರ ಅಕ್ರಮ ಪ್ರವೇಶದಿಂದ ಅರ್ಹರು ಮೀಸಲಾತಿಯಿಂದ ವಂಚಿತರಾಗಬಾರದು’ ಎಂದು ಸ್ಪಷ್ಟವಾಗಿ ಹೇಳಿದೆ. ಇದನ್ನು ಆಧರಿಸಿಯೇ 2021ರಲ್ಲಿ ಸರ್ಕಾರವು ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡುವಾಗ ನಿರ್ದೇಶನಾಲಯದ ವರದಿ ಆಧರಿಸಿಯೇ ಕ್ರಮ ಕೈಗೊಳ್ಳಲು ಆದೇಶಿಸಿತ್ತು. ಇದನ್ನು ಸಂತ್ರಸ್ತ 18 ಎಸ್‌.ಸಿ., ಎಸ್‌.ಟಿ. ಜಾತಿಗಳ ವಿಷಯದಲ್ಲಿ ಕಡ್ಡಾಯಗೊಳಿಸಲಾಗಿತ್ತು. ಈಗ ಅದೇ ಸರ್ಕಾರದ ಮುಖ್ಯಮಂತ್ರಿಯು ಸಿದ್ದರಾಮಯ್ಯ ಮತ್ತಿತರರ ಒತ್ತಡಕ್ಕೆ ಮಣಿದು ಅದೇಶವನ್ನು ಹಿಂಪಡೆದು ಇಡೀ ಪ್ರಕ್ರಿಯೆಯನ್ನು ದುರ್ಬಲಗೊಳಿಸಿದ್ದಾರೆ. ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಮೀಸಲಾತಿ ಕಬಳಿಸುವುದು, ಅದನ್ನು ಪರೋಕ್ಷವಾಗಿ ಪೋಷಿಸುವುದು ಸಂವಿಧಾನಕ್ಕೆ ಮಾಡುವ ದ್ರೋಹ. ಕರ್ನಾಟಕದ ಎಲ್ಲ ಪಕ್ಷಗಳ ಪ್ರಮುಖ ರಾಜಕಾರಣಿಗಳ ಒಳಬೆಂಬಲದಿಂದಾಗಿಯೇ ನಕಲಿ ಜಾತಿ ಪ್ರಮಾಣಪತ್ರದ ಹಾವಳಿ ವಿಪರೀತಕ್ಕೆ ಹೋಗಲು ಕಾರಣವಾಗಿದೆ. ಇದೇ ಸದನ ಕೆಲ ತಿಂಗಳ ಹಿಂದಷ್ಟೇ ಸಂವಿಧಾನದ ಮಹತ್ವದ ಬಗ್ಗೆ ಇಡೀ ವಾರ ಚರ್ಚಿಸಿತ್ತು!

ಲೇಖಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT