ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಜನಗಣತಿ ಭಾಗವಾಗಲಿ ಜಾತಿ ಜನಗಣತಿ

ಜನಗಣತಿಯಿಂದ ಪ್ರತ್ಯೇಕಿಸಿ ಸಂಗ್ರಹಿಸುವ ಅಂಕಿಅಂಶಗಳಿಗೆ ವಿಶ್ವಾಸಾರ್ಹತೆಯ ಕೊರತೆ ಕಾಡುತ್ತದೆ
ಕೆ. ಅಶೋಕವರ್ಧನ್‌ ಶೆಟ್ಟಿ
Published 2 ಆಗಸ್ಟ್ 2024, 23:13 IST
Last Updated 2 ಆಗಸ್ಟ್ 2024, 23:13 IST
ಅಕ್ಷರ ಗಾತ್ರ

ಜಾತಿ ಜನಗಣತಿಯ ಬಗ್ಗೆ ಗಂಭೀರ ಚರ್ಚೆಗಳಾಗುತ್ತಿವೆ. ಇದು, ಜಾತಿ ಆಧಾರಿತ ರಾಜಕೀಯವನ್ನು ಮತ್ತು ಜಾತಿ ಜಾತಿಗಳ ನಡುವಣ ಒಡಕುಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎನ್ನುವುದು ಕೆಲವರ ಅಭಿಪ್ರಾಯ. ಈ ಆತಂಕಕ್ಕೆ ಅರ್ಥವಿಲ್ಲ. ವಿಷಯ ಇಷ್ಟೇ. ನಮ್ಮ ಸಮಾಜದಲ್ಲಿ ಜಾತಿ, ಧರ್ಮ, ಲಿಂಗ, ಜನಾಂಗ, ಅಂಗವೈಕಲ್ಯದಂತಹವುಗಳನ್ನು ಆಧರಿಸಿದ ಅಸಮಾನತೆ ಮತ್ತು ತಾರತಮ್ಯ ಇವೆ ಎನ್ನುವುದು ಸತ್ಯ. ಇದು ಆಧುನಿಕ ಭಾರತದ ದೊಡ್ಡ ಸಮಸ್ಯೆ. ಈ ಸಮಸ್ಯೆಯನ್ನು ನಿವಾರಿಸಬೇಕು ಎನ್ನುವಲ್ಲಿ ಯಾರಿಗೂ ಭಿನ್ನ ಅಭಿಪ್ರಾಯ ಇರಲು ಸಾಧ್ಯವಿಲ್ಲ.

ಸಮಸ್ಯೆ ಯಾವುದೇ ಇರಲಿ, ಅದು ಯಾವ ಪ್ರಮಾಣದಲ್ಲಿದೆ ಎಂದು ಲೆಕ್ಕಹಾಕದೆ ಪರಿಹಾರ ಹುಡುಕಲು ಸಾಧ್ಯವಿಲ್ಲ. ನಮ್ಮ ನಡುವೆ ಇರುವ ಜಾತಿ ಆಧಾರಿತ ಅಸಮಾನತೆ ಮತ್ತು ತಾರತಮ್ಯದ ಸಮಸ್ಯೆಗಳಿಗೂ ಇದು ಅನ್ವಯಿಸುತ್ತದೆ. ಪೀಟರ್ ಡ್ರಕರ್ ಅವರ ಪ್ರಸಿದ್ಧ ಹೇಳಿಕೆಯೊಂದು ನೆನಪಾಗುತ್ತದೆ: ‘ಏನನ್ನು ಲೆಕ್ಕಹಾಕಲು ಸಾಧ್ಯವಿಲ್ಲವೋ ಅದನ್ನು ನಿರ್ವಹಿಸಲೂ ಸಾಧ್ಯವಿಲ್ಲ’. ಹಾಗಾಗಿ, ಜಾತಿಯ ಕುರಿತಂತೆ ಕರಾರುವಾಕ್ಕಾದ ಅಂಕಿಅಂಶಗಳನ್ನು ಸಂಗ್ರಹ ಮಾಡುವುದರಿಂದ ಮಾತ್ರ, ಬಹುಕಾಲದಿಂದ ಪರಿಹಾರವಾಗದೇ ಉಳಿದಿರುವ ಜಾತಿ ಆಧಾರಿತ ಅಸಮಾನತೆ ಮತ್ತು ತಾರತಮ್ಯವನ್ನು ನೀಗಲು ನಿರ್ದಿಷ್ಟವಾದ ಕಾರ್ಯನೀತಿಗಳನ್ನು ಅಳವಡಿಸಿಕೊಳ್ಳಲು ಸಾಧ್ಯ.

ಜರ್ಮನಿಯಲ್ಲಿಯೂ ಜನಗಣತಿಯು ಜನಾಂಗದ (ರೇಸ್) ಆಧಾರದಲ್ಲಿ ನಡೆಯುವುದಿಲ್ಲ. ಇದು ಅಲ್ಲಿನ ಕಪ್ಪು ವರ್ಣೀಯರಿಗೆ ಸಮಸ್ಯಾತ್ಮಕವಾಗಿ ಪರಿಣಮಿಸಿದೆ. ಅಲ್ಲಿನ ಕಪ್ಪು ವರ್ಣೀಯರು ತಮ್ಮ ಜನಾಂಗದ ಸ್ಥಿತಿಗತಿಯ ಬಗ್ಗೆ 2020ರಲ್ಲಿ ಖಾಸಗಿ ಆನ್‌ಲೈನ್ ಸಮೀಕ್ಷೆಯೊಂದನ್ನು ನಡೆಸಿದರು. ‘ಆಫ್ರೋಸೆನ್ಸಸ್’ ಎನ್ನುವ ಹೆಸರಿನ ಈ ಸಮೀಕ್ಷೆ, ಆ ದೇಶದಲ್ಲಿ ಕಪ್ಪು ವರ್ಣೀಯರ ವಿರುದ್ಧ ವ್ಯಾಪಕವಾದ ಜನಾಂಗೀಯ ತಾರತಮ್ಯ ನೆಲಸಿದೆ ಎನ್ನುವ ವಾಸ್ತವವನ್ನು ಹೊರಗೆಡವಿತು. ಸಾಮಾನ್ಯವಾಗಿ ಸಾಮಾಜಿಕ ಗುರುತಿನ ಆಧಾರದಲ್ಲಿ ಜನಗಣತಿ ನಡೆಯಬೇಕೆನ್ನುವ ಬೇಡಿಕೆಯು ಸಾಮಾಜಿಕ ತಾರತಮ್ಯಕ್ಕೆ ಗುರಿಯಾದವರ ಕಡೆಯಿಂದ ಬರುತ್ತದೆ. ಅದೇವೇಳೆ, ಸ್ಥಾಪಿತ ಹಿತಾಸಕ್ತಿಗಳು ಅದಕ್ಕೆ ಪ್ರತಿರೋಧ ಒಡ್ಡುತ್ತವೆ.

ಜಾತಿ ಆಧಾರಿತ ಜನಗಣತಿ ಅಗತ್ಯ ಎನ್ನಲು ನಾಲ್ಕು ಪ್ರಮುಖ ಕಾರಣಗಳನ್ನು ನೀಡಬಹುದು: ಮೊದಲನೆಯದಾಗಿ, ಜಾತಿ ಜನಗಣತಿ ಎನ್ನುವುದು ಒಂದು ಸಾಮಾಜಿಕ ಅಗತ್ಯ. ಯಾಕೆಂದರೆ, ಜಾತಿ ಈ ದೇಶದ ವಾಸ್ತವ. ಇಲ್ಲಿ ಮದುವೆಗಳು (ಅಂತರ್ಜಾತಿ ವಿವಾಹಗಳು ಇನ್ನೂ ಶೇ 5ರಷ್ಟಿವೆ ಅಷ್ಟೇ), ವಾಸಸ್ಥಳದ ನಿರ್ಣಯ, ಮತದಾನ, ಮಂತ್ರಿಗಳ ಆಯ್ಕೆ ಎಲ್ಲವೂ ಜಾತಿಯ ಆಧಾರದಲ್ಲೇ ಆಗುವುದು. ಎರಡನೆಯದಾಗಿ, ಜಾತಿ ಜನಗಣತಿ ಕಾನೂನಾತ್ಮಕವಾದ ಅಗತ್ಯವೂ ಹೌದು. ಯಾಕೆಂದರೆ, ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಯೋಜನೆಗಳು, ಅದರಲ್ಲೂ ಸಂವಿಧಾನದತ್ತವಾಗಿ ನೀಡಲಾಗುವ ಉದ್ಯೋಗ, ವಿದ್ಯಾಭ್ಯಾಸ ಮತ್ತು ಚುನಾವಣಾ ಕ್ಷೇತ್ರಗಳ ಮೀಸಲಾತಿಯು ಅರ್ಹರಿಗೆ ಸಿಗಬೇಕು ಎಂದಾದಲ್ಲಿ ಜಾತಿವಾರು ಅಂಕಿಅಂಶಗಳು ಬೇಕೇಬೇಕು. ಸಂವಿಧಾನವು ಹಿಂದುಳಿದ ವರ್ಗ ಎನ್ನುವ ಪದವನ್ನು ಬಳಸಿದೆ. ಆದರೆ ಈ ವರ್ಗಕ್ಕೆ ಸೇರಿದವರು ಯಾರು ಎನ್ನುವುದರ ನಿರ್ಣಯ ಜಾತಿಯ ಆಧಾರದಲ್ಲೇ ಆಗಬೇಕು ಎಂದು ನ್ಯಾಯಾಂಗ ಹೇಳಿದೆ. ಹಿಂದುಳಿದ ವರ್ಗಗಳ ಮೀಸಲಾತಿ ನೀತಿಯನ್ನು ಕಾನೂನುಬದ್ಧಗೊಳಿಸಲು ಅಂಕಿಅಂಶಗಳು ಬೇಕೆನ್ನುತ್ತಿದೆ.

ಮೂರನೆಯದಾಗಿ, ಆಡಳಿತಾತ್ಮಕವಾಗಿ ಜಾತಿ ಜನಗಣತಿ ಅಗತ್ಯ. ಯಾಕೆಂದರೆ, ಅಸ್ತಿತ್ವದಲ್ಲಿರುವ ಮೀಸಲಾತಿಯಂತಹ ನೀತಿಗಳಿಗೆ ಅರ್ಹರನ್ನು ಆಯ್ಕೆ ಮಾಡಲು ಮತ್ತು ಅನರ್ಹರನ್ನು ಹೊರಗಿಡಲು ಅಂಕಿಅಂಶಗಳಿದ್ದಾಗ ಮಾತ್ರ ಸಾಧ್ಯ. ಕೊನೆಯದಾಗಿ, ಜಾತಿ ಜನಗಣತಿ ಒಂದು ನೈತಿಕ ಅವಶ್ಯಕತೆ. ಯಾಕೆಂದರೆ, ಅಂಕಿಅಂಶಗಳಿಲ್ಲದ ಕಾರಣಕ್ಕೆ, ಅಶಕ್ತ ವರ್ಗಗಳಿಗೆ ನೀಡಲಾದ ಸೌಲಭ್ಯಗಳು ಆಯಾ ವರ್ಗಗಳಲ್ಲಿರುವ ಪ್ರಬಲರ ಪಾಲಾಗುತ್ತಿವೆ. ಸಂಪನ್ಮೂಲಗಳು ಹಾಗೂ ಅಧಿಕಾರದಲ್ಲಿ ಈ ಪ್ರಬಲ ಸಮೂಹವು ಸಿಂಹಪಾಲು ಪಡೆಯುತ್ತಿದೆ.

ಈ ದೇಶದಲ್ಲಿ 1931ರವರೆಗೆ ಬ್ರಿಟಿಷರು ನಡೆಸುತ್ತಿದ್ದ ಎಲ್ಲ ಜನಗಣತಿಗಳಲ್ಲೂ ಜನಸಂಖ್ಯೆಯನ್ನು ಜಾತಿವಾರು ಲೆಕ್ಕ ಹಾಕಲಾಗುತ್ತಿತ್ತು. ಸ್ವಾತಂತ್ರ್ಯಾನಂತರದ ಮೊದಲ ಜನಗಣತಿ 1951ರಲ್ಲಿ ನಡೆದಾಗ, ಭಾರತ ಸರ್ಕಾರವು ಜಾತಿ ಜನಗಣತಿ ಬೇಡ ಎಂದು ನಿರ್ಧರಿಸಿತು. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಗಣತಿಯನ್ನು ಜನಗಣತಿಯಲ್ಲಿ ಮುಂದುವರಿಸಲಾಯಿತು. ಕೇಂದ್ರ ಸರ್ಕಾರವು 1961ರಲ್ಲಿ, ರಾಜ್ಯಗಳು ಇಚ್ಛಿಸಿದರೆ ತಮ್ಮ ವ್ಯಾಪ್ತಿಯಲ್ಲಿ, ಹಿಂದುಳಿದ ವರ್ಗಗಳಿಗೆ ಸೇರಿದ ಜನರ ಗಣತಿ ನಡೆಸಬಹುದು ಎಂದು ಸೂಚನೆ ನೀಡಿತು. ಆಗ ಕೇಂದ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇರಲಿಲ್ಲ.

ಜಾತಿ ಜನಗಣತಿ ವಿರೋಧಿಸುತ್ತಿರುವವರು ಹಲವು ವಾದಗಳನ್ನು ಮುಂದಿಡುತ್ತಾರೆ. ಅವುಗಳಲ್ಲಿ ಪ್ರಮುಖವಾದದ್ದು, ಜಾತಿ ಜನಗಣತಿ ಸಾಮಾಜಿಕ ಒಡಕನ್ನು ಸೃಷ್ಟಿಸಬಹುದು ಎನ್ನುವುದು. ಭಾರತದಲ್ಲಿ ಸಾಮಾಜಿಕ ಒಡಕಿಗೆ ದೇಶದಲ್ಲಿ ಜನಗಣತಿ ಆರಂಭ ಆಗುವುದಕ್ಕೂ ಹಿಂದಿನ ಸುಮಾರು 3,000 ವರ್ಷಗಳ ಇತಿಹಾಸ ಇದೆ. ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಗಣತಿ ನಡೆಯುತ್ತಿದೆ. ಇದರಿಂದಾಗಿ ಸಾಮಾಜಿಕ ಸಮಸ್ಯೆಯೇನೂ ಹೆಚ್ಚಾಗಿಲ್ಲ. ಅಷ್ಟೇಅಲ್ಲ. ಜನಗಣತಿಯಲ್ಲಿ ಧರ್ಮ, ಭಾಷೆ, ಪ್ರಾದೇಶಿಕತೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಇವೆಲ್ಲವೂ ಜಾತಿಯಷ್ಟೇ ವಿಭಜನಕಾರಿ ವಿಷಯಗಳು. ಜಾತಿ ಜನಗಣತಿ ಮಾಡದೇ ಇದ್ದರೆ ಜಾತೀಯತೆ ಇರುವುದಿಲ್ಲ ಎಂಬ ಅಭಿಪ್ರಾಯವನ್ನು ಒಪ್ಪಿಕೊಂಡರೆ, ಮತೀಯತೆ ಮತ್ತು ಪ್ರಾದೇಶಿಕತೆಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸದೇ ಇದ್ದರೆ ಆ ಸಮಸ್ಯೆಗಳೆಲ್ಲಾ ಮರೆಯಾಗಿಬಿಡುತ್ತವೆ ಎಂದು ಒಪ್ಪಿಕೊಳ್ಳಬೇಕಾಗುತ್ತದೆ.

ಎರಡನೆಯದಾಗಿ, ಜಾತಿ ಜನಗಣತಿ ನಡೆಸುವುದು ಆಡಳಿತಾತ್ಮಕವಾಗಿ ತೀರಾ ಕಷ್ಟ ಎನ್ನುವ ವಾದವಿದೆ. ನಿಜಕ್ಕೂ ಜಾತಿ ಜನಗಣತಿ ನಡೆಸುವುದು ಜನಾಂಗೀಯ ಗಣತಿ ನಡೆಸುವಷ್ಟು ಕಷ್ಟವೇನಲ್ಲ. ಅಮೆರಿಕ ಸೇರಿದಂತೆ ಎಷ್ಟೋ ದೇಶಗಳು ಜನಾಂಗೀಯತೆಯನ್ನು ಆಧರಿಸಿ ಜನಗಣತಿ ನಡೆಸುತ್ತವೆ. ಭಾರತದಲ್ಲಿ ಈಗಲೂ ಜನಗಣತಿಯಲ್ಲಿ ಸುಮಾರು 1,234 ಪರಿಶಿಷ್ಟ ಜಾತಿಗಳಿಗೆ ಮತ್ತು 698 ಪರಿಶಿಷ್ಟ ಪಂಗಡಗಳಿಗೆ ಸೇರಿದ ಜನರ ಗಣತಿ ನಡೆಸಲಾಗುತ್ತದೆ. ಇದೇ ರೀತಿ ಉಳಿದ ಸುಮಾರು 4,000 ಇತರ ಜಾತಿಗಳ ಜನರನ್ನು ಗುರುತಿಸಿ ಲೆಕ್ಕ ಹಾಕುವುದೇನೂ ಕಷ್ಟ ಆಗಲಾರದು. ಇವುಗಳಲ್ಲಿ ಹೆಚ್ಚಿನ ಜಾತಿಗಳನ್ನು ಹೇಗಿದ್ದರೂ ರಾಜ್ಯವಾರು ಗುರುತಿಸಬೇಕಿದೆ.

ಜಾತಿ ಜನಗಣತಿ ಮಾಡುವುದರಿಂದ ಮೀಸಲಾತಿ ಹೆಚ್ಚಿಸಬೇಕು ಎಂಬ ಬೇಡಿಕೆ ಇನ್ನೂ ವ್ಯಾಪಕವಾಗಬಹುದು ಎಂಬ ಇನ್ನೊಂದು ವಾದವಿದೆ. ವಾಸ್ತವದಲ್ಲಿ ಜಾತಿಯ ಕುರಿತಾಗಿ ನಿಖರ ಅಂಕಿಅಂಶಗಳು ಲಭಿಸತೊಡಗಿದಾಗ, ಮೀಸಲಾತಿಯ ಬೇಡಿಕೆ ಹೆಚ್ಚಾಗುವುದರ ಬದಲು ಕಡಿಮೆ ಆಗಲಿದೆ. ವಸ್ತುನಿಷ್ಠ ವಿವರಗಳು ಇಲ್ಲದೆ ಇರುವುದರಿಂದ, ವಿವಿಧ ಜಾತಿಗಳು ತಮಗೆ ಅನ್ಯಾಯ ಆಗಿದೆ ಎಂದು ಊಹಿಸಿಕೊಂಡು, ಹೆಚ್ಚು ಮೀಸಲಾತಿ ಬೇಕು ಎಂದು ಕೇಳುವ ಸಾಧ್ಯತೆ ಹೆಚ್ಚು. ಇತ್ತೀಚೆಗೆ ಕೇಳಿಸುತ್ತಿರುವ ಮರಾಠ, ಪಾಟಿದಾರ, ಜಾಟ್ ಮುಂತಾದ ಸಮುದಾಯಗಳ ಮೀಸಲಾತಿ ಬೇಡಿಕೆಯನ್ನು ಅಂಕಿಅಂಶಗಳಿದ್ದಾಗ ವಸ್ತುನಿಷ್ಠವಾಗಿ ಪರಿಶೀಲಿಸಲು ಸಾಧ್ಯವಿದೆ. ಇಲ್ಲದೇಹೋದರೆ ಇಂತಹ ಬೇಡಿಕೆಗಳು ರಾಜಕೀಯವಾಗಿ ಚುನಾವಣಾ ಲೆಕ್ಕಾಚಾರದ ಪ್ರಕಾರ ನಿರ್ಣಯವಾಗುವುದೇ ಹೆಚ್ಚು.

ಸಂವಿಧಾನವು ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿಗೆ ಅವಕಾಶ ನೀಡಿದಂತೆ, ಹಿಂದುಳಿದ ವರ್ಗಗಳಿಗೆ ಕೂಡ ಪರಿಚ್ಛೇದ 15 (4) ಮತ್ತು 16 (4)ರ ಅಡಿ ಮೀಸಲಾತಿ ನೀಡಲು ಅನುವು ಮಾಡಿಕೊಟ್ಟಿದೆ. ಮಂಡಲ್ ಆಯೋಗದ ವರದಿಯ ಆಧಾರದಲ್ಲಿ ಕೇಂದ್ರ ಸರ್ಕಾರವು ಹಿಂದುಳಿದ ವರ್ಗಗಳಿಗೆ ಉದ್ಯೋಗದಲ್ಲಿ ಮೀಸಲಾತಿ ವಿಸ್ತರಿಸಿತು. ಹಿಂದುಳಿದ ವರ್ಗಗಳಿಗೆ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ರಾಜಕೀಯ ಮೀಸಲಾತಿ ಇಲ್ಲ. ಆದರೆ, ಸ್ಥಳೀಯ ಸರ್ಕಾರಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇದೆ. ಈ ಮೀಸಲಾತಿಯನ್ನು ನೀಡುವ ವಿಚಾರದಲ್ಲಿ ನಿಖರವಾದ ಅಂಕಿಅಂಶಗಳನ್ನು ಸಂಗ್ರಹಿಸಬೇಕು ಎಂದು ನ್ಯಾಯಾಂಗವು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಒಂದೆಡೆ, ನ್ಯಾಯಾಂಗವು ಜಾತಿ ಆಧಾರಿತ ಜನಗಣತಿಯ ಅಂಕಿ ಅಂಶಗಳು ಬೇಕು ಎನ್ನುತ್ತದೆ, ಅದೇವೇಳೆ ಕಾರ್ಯಾಂಗವು ಅದನ್ನು ಒಂದಲ್ಲ ಒಂದು ನೆಪ ನೀಡಿ ತಿರಸ್ಕರಿಸುತ್ತಾ ಬಂದಿದೆ.

ಅದೇವೇಳೆಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಸರ್ಕಾರ ನೀಡಿದ ಶೇ 10ರಷ್ಟು ಮೀಸಲಾತಿಯನ್ನು ನ್ಯಾಯಾಂಗವು ಯಾವುದೇ ಅಂಕಿ ಅಂಶಗಳ ಆಧಾರವಿಲ್ಲದೆಯೇ ಒಪ್ಪಿಕೊಂಡಿದೆ ಎನ್ನುವುದು ಕೂಡ ವಾಸ್ತವ. ಆರ್ಥಿಕ ಹಿಂದುಳಿದಿರುವಿಕೆಯ ಆಧಾರದಲ್ಲಿ ನೀಡಲಾದ ಮೀಸಲಾತಿಯ ಹಿನ್ನೆಲೆಯಲ್ಲಿ ಸಹ ಎಲ್ಲ ಜಾತಿ ಆಧಾರಿತ ಜನಗಣತಿ ನಡೆಸುವ ಅವಶ್ಯಕತೆ ಇದೆ.

ಭಾರತದಲ್ಲಿ ಜನಗಣತಿಯು ಕೇಂದ್ರದ ವ್ಯಾಪ್ತಿಗೆ ಬರುತ್ತದೆ. ಆದರೆ ಅಂಕಿಅಂಶ ಸಂಗ್ರಹಣಾ ಕಾಯ್ದೆಯ (2008) ಪ್ರಕಾರ, ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ಕೂಡ ತಮಗೆ ಅಗತ್ಯವಿರುವ ಅಂಕಿಅಂಶಗಳನ್ನು ಸಂಗ್ರಹಿಸಬಹುದು. ಕರ್ನಾಟಕ (2015) ಮತ್ತು ಬಿಹಾರ (2020) ಈ ಕಾಯ್ದೆಯ ಪ್ರಕಾರ ಜಾತಿ ಜನಗಣತಿ ನಡೆಸಿವೆ. ಆದರೆ, ಕೇಂದ್ರ ಸರ್ಕಾರ ನಡೆಸುವ ಜನಗಣತಿಯ ಭಾಗವಾಗಿ ನಡೆಯುವ ಜಾತಿ ಜನಗಣತಿಗೆ ಹೆಚ್ಚಿನ ವಿಶ್ವಾಸಾರ್ಹತೆ ಇರುತ್ತದೆ. ಅದನ್ನು ನಡೆಸದೇ ಇರುವುದು ಕಾನೂನಿನ ದೃಷ್ಟಿಯಿಂದ ಸಮರ್ಥನೀಯವೂ ಅಲ್ಲ, ಆಡಳಿತಾತ್ಮಕವಾಗಿ ಸೂಕ್ತ ನಡೆಯೂ ಅಲ್ಲ.

ಹಿಂದುಳಿದ ವರ್ಗಗಳ ಒತ್ತಾಯದ ಮೇರೆಗೆ 2010ರಲ್ಲಿ ಸಂಸತ್ತು, ಮುಂದಿನ ಅಂದರೆ 2011ರ ಜನಗಣತಿಯನ್ನು ಜಾತಿ ಆಧಾರದಲ್ಲಿ ಮಾಡಬೇಕು ಎಂದು ಒಂದು ನಿರ್ಣಯವನ್ನು ಅಂಗೀಕರಿಸಿತ್ತು. ಅದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಅಂಗೀಕಾರವೂ ಇತ್ತು. 1931ರಲ್ಲಿ ಬ್ರಿಟಿಷ್ ಸರ್ಕಾರ ನಡೆಸಿದ ಜಾತಿ ಆಧಾರಿತ ಜನಗಣತಿಯ ಪ್ರಕಾರ 4,147 ಜಾತಿಗಳಿದ್ದವು. ಈ ಸಂಖ್ಯೆಯಲ್ಲಿ ಆ ಕಾಲದಲ್ಲಿ ಅಸ್ಪೃಶ್ಯರು ಎಂದು ಪರಿಗಣಿಸಲಾದ ಜಾತಿಗಳು ಸೇರಿಲ್ಲ. ಆದರೆ, 2012ರಲ್ಲಿ ಕೇಂದ್ರ ಸರ್ಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಸುಮಾರು ನಾಲ್ಕು ಲಕ್ಷ ಜಾತಿಗಳಿವೆ! ಇದು ಹಾಸ್ಯಾಸ್ಪದ ಅಂಕಿಅಂಶ. ಇದಕ್ಕೆ ಕಾರಣ, ಈ ಗಣತಿ ನಡೆಸಿದ್ದು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ. ಜನಗಣತಿ ನಡೆಸುವ ಪರಿಣತಿ ಇಲ್ಲದ ಸರ್ಕಾರದ ಅಂಗವೊಂದು ಈ ಗಣತಿ ನಡೆಸಿದ್ದರಿಂದ ಇಂತಹ ಅಪಭ್ರಂಶ ಆಗಿರುವುದು. ಬಿಹಾರ ಸರ್ಕಾರ ನಡೆಸಿದ ಜಾತಿ ಜನಗಣತಿಯು 214 ಜಾತಿಗಳನ್ನು ಗುರುತಿಸಿದೆ. ಇದರಾಚೆಗೆ ‘ಇತರ’ ಎನ್ನುವ ಇನ್ನೊಂದು ವರ್ಗದಲ್ಲಿ ಕೆಲವು ಜಾತಿಗಳನ್ನು ದಾಖಲಿಸಲಾಗಿತ್ತು.

ಸಂಸತ್ತು 2010ರಲ್ಲಿ ಜಾತಿ ಜನಗಣತಿ ನಡೆಸಬೇಕೆಂದು ಅಂಗೀಕರಿಸಿದ ಸರ್ವಾನುಮತದ ನಿರ್ಣಯದ ಹೊರತಾಗಿಯೂ 2021ರ ಜನಗಣತಿಯಲ್ಲಿ ಜಾತಿಯನ್ನು ದಾಖಲೀಕರಿಸಿಕೊಳ್ಳುವುದಿಲ್ಲ ಎಂಬ ನಿರ್ಧಾರಕ್ಕೆ ಅಂದಿನ ಸರ್ಕಾರ ಬಂದಿತು. ಇದೇ ನಿರ್ಧಾರವನ್ನು ಅದು, ಜನಗಣತಿಯು ಜಾತಿ ಆಧಾರಿತವಾಗಿರಬೇಕೆಂದು ಆಗ್ರಹಿಸಿ ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆಯ ವೇಳೆ ಪುನರುಚ್ಚರಿಸಿತು. ಅಂತಿಮವಾಗಿ ಡಿಸೆಂಬರ್ 2021ರಲ್ಲಿ ಸುಪ್ರೀಂ ಕೋರ್ಟ್ ತನ್ನದೇ ಹಿಂದಿನ ನಿರ್ಧಾರಗಳಿಗೆ ವಿರುದ್ಧವಾಗಿ ಮಹಾರಾಷ್ಟ್ರ ಸರ್ಕಾರದ ಅರ್ಜಿಯನ್ನು ತಳ್ಳಿಹಾಕಿತು.

ಕೇಂದ್ರ ಸರ್ಕಾರ ಈ ಹಿಂದೆ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಗಣತಿಯಲ್ಲಿ ಜಾತಿ ಕುರಿತ ಅಂಕಿಸಂಖ್ಯೆಗಳನ್ನು ವಿಶ್ವಾಸಾರ್ಹವಾಗಿ ಕಲೆಹಾಕಲು ವಿಫಲವಾದ ಹಿನ್ನೆಲೆಯಲ್ಲಿ ಉಳಿದಿರುವ ಹಾದಿ ಎಂದರೆ, 1948ರ ಜನಗಣತಿ ಕಾಯ್ದೆಗೆ ತಿದ್ದುಪಡಿ ತಂದು, ಜನಗಣತಿ ನಡೆಸುವಾಗ ಜಾತಿಯ ಹೆಸರನ್ನು ನಮೂದಿಸಬೇಕೆಂದು ಕಡ್ಡಾಯಗೊಳಿಸುವುದು. ಹೀಗೆ ಮಾಡುವುದರಿಂದ ಜಾತಿ ಜನಗಣತಿಯ ನಿರ್ಧಾರವನ್ನು ಆಯಾ ಕಾಲದಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳ ಮರ್ಜಿಯ ಪ್ರಕಾರ ನಡೆಸುವುದು ತಪ್ಪುತ್ತದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ಆಯುಕ್ತಾಲಯ ನಡೆಸುವ ಜನಗಣತಿ ಪ್ರಕ್ರಿಯೆಯ ಭಾಗವಾಗಿಯೇ ಜಾತಿ ಆಧಾರಿತ ಜನಗಣತಿ ನಡೆಸಲು, ಜನಗಣತಿಯಲ್ಲಿ ಬಳಸಲಾಗುವ ಪ್ರಶ್ನಾವಳಿಗೆ ಕೆಲವೇ ಕೆಲವು ಪ್ರಶ್ನೆಗಳನ್ನು ಸೇರಿಸಿದರೆ ಸಾಕಾಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಆಯಾ ರಾಜ್ಯಗಳಲ್ಲಿ ಇರುವ ಜಾತಿಗಳ ಸಮಗ್ರ ಪಟ್ಟಿಯೊಂದನ್ನು ತಜ್ಞರ ಸಹಾಯದೊಂದಿಗೆ ತಯಾರಿಸಿ, ಸಾರ್ವಜನಿಕರ ಅಹವಾಲುಗಳನ್ನು ಪಡೆದುಕೊಂಡು ಅದನ್ನು ಅಂತಿಮಗೊಳಿಸಿ, ಅದನ್ನೇ ಜನಗಣತಿದಾರರಿಗೆ ನೀಡಬೇಕು. ಅದರಲ್ಲಿ ಎಲ್ಲ ಉಪಜಾತಿ, ಒಂದೇ ಜಾತಿಗಿರುವ ಪರ್ಯಾಯ ಹೆಸರುಗಳು, ಗೋತ್ರ ಇತ್ಯಾದಿಗಳೆಲ್ಲವೂ ಒಳಗೊಂಡಿರಬೇಕು. ಈಗ ಸಾಫ್ಟ್‌ವೇರ್ ಬಳಸಿ ಮೊಬೈಲ್ ಫೋನ್‌ನಂತಹ ಸಣ್ಣ ಎಲೆಕ್ಟ್ರಾನಿಕ್ ಸಾಧನದಲ್ಲಿ ಜಾತಿಗಳ ಪೂರ್ವನಿರ್ಧರಿತ ಪಟ್ಟಿಯೊಂದನ್ನು ಅಳವಡಿಸಿ, ಜನಗಣತಿದಾರರಿಗೆ ಈ ಪಟ್ಟಿಯಿಂದಲೇ ಸೂಕ್ತ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬಂತೆ ವ್ಯವಸ್ಥೆ ಮಾಡಿದರೆ, ಆಗ ತಪ್ಪು ಮಾಹಿತಿ ಸಂಗ್ರಹಕ್ಕೆ ಅವಕಾಶ ಇರುವುದಿಲ್ಲ.

ಜಾತಿವಾರು ಜನಸಂಖ್ಯೆಯನ್ನು ಪರಿಶೀಲಿಸದೇ ಜಾತಿ ಆಧಾರಿತ ಮೀಸಲಾತಿ ನೀಡುವುದು ಹಾಗೂ ಯಾವುದೇ ಅಂಕಿಅಂಶಗಳನ್ನು ಸಂಗ್ರಹಿಸದೇ ಆರ್ಥಿಕ ಮಾನದಂಡಗಳ ಆಧಾರದಲ್ಲಿ ಮೀಸಲಾತಿ ನೀಡುವುದು ಅಸಂಗತ ಎನಿಸುತ್ತದೆ. ಹಾಗಾಗಿ, ಮುಂದಿನ ಜನಗಣತಿಯಲ್ಲಿ ಜಾತಿ ಆಧಾರಿತ ಜನಗಣತಿಯೂ ಆಗಬೇಕು.

ಲೇಖಕ: ನಿವೃತ್ತ ಐಎಎಸ್‌ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT