ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಗ್ಯಾರಂಟಿ: ಹೊರೆಯಲ್ಲ, ಇದೊಂದು ಪ್ರಯೋಗ

Published 10 ಜೂನ್ 2023, 0:55 IST
Last Updated 10 ಜೂನ್ 2023, 0:55 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಐದು ಜನಕಲ್ಯಾಣ ಯೋಜನೆಗಳ ಸಾಧಕ– ಬಾಧಕಗಳ ಬಗ್ಗೆ ಒಂದು ಆರೋಗ್ಯಪೂರ್ಣ ಚರ್ಚೆಯ ಅಗತ್ಯವಿತ್ತು. ಯೋಜನೆಗಳ ಜಾರಿಯಿಂದಾಗುವ ಆರ್ಥಿಕ ಹೊರೆಯ ವಿಚಾರವಾಗಿ ಚಿಂತನ– ಮಂಥನ ನಡೆಯಬೇಕಿತ್ತು. ಅದೆಲ್ಲಾ ಆದ ನಂತರ ಎಲ್ಲಾ ಜಾರಿಯಾಗಿದ್ದರೆ ಚೆನ್ನಾಗಿತ್ತು. ಆದರೆ ಈಗ ನಡೆಯುತ್ತಿರುವುದು ಚರ್ಚೆಯಲ್ಲ, ಮಂಥನವಲ್ಲ. ಬದಲಿಗೆ, ಉಳ್ಳವರೆಲ್ಲಾ ಒಂದಾಗಿ, ಅದೇನೋ ಆರ್ಥಿಕ ಅಪರಾಧ ನಡೆಯುತ್ತಿದೆ ಎನ್ನುವಂತೆ ಪ್ರತಿಕ್ರಿಯಿಸುತ್ತಿದ್ದಾರೆ. ಕುಚೋದ್ಯದ ಹೇಳಿಕೆ ನೀಡುತ್ತಿದ್ದಾರೆ. ಸುಳ್ಳುಗಳನ್ನು ಹರಿಯಬಿಡುತ್ತಿದ್ದಾರೆ.

ಬಡವರನ್ನು ಹಂಗಿಸಿ ಅವಮಾನಿಸುತ್ತಿದ್ದಾರೆ. ಇನ್ನು ಕೆಲವರು ಇಲ್ಲೂ ಕೋಮು ಆಯಾಮ ಏನಾದರೂ ಸಿಗಬಹುದೇನೋ ಎಂದು ಹೊಂಚುಹಾಕುತ್ತಿದ್ದಾರೆ.

ವಿರೋಧ ಪಕ್ಷವಾದ ಬಿಜೆಪಿಯವರು ಈ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಬೊಬ್ಬಿಡುತ್ತಾ, ಇನ್ನೊಂದೆಡೆ, ಯಾವುದೇ ಷರತ್ತುಗಳಿಲ್ಲದೆ ಅವುಗಳನ್ನು ಜಾರಿಗೊಳಿಸಿ ಎನ್ನುವ ಎಡಬಿಡಂಗಿ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ರಾಜ್ಯದಲ್ಲಿ ಒಂದು ಜವಾಬ್ದಾರಿಯುತ ವಿರೋಧ ಪಕ್ಷ ಇದ್ದಿದ್ದರೆ ಮತ್ತು ಮಾಧ್ಯಮಗಳಲ್ಲಿ ಹೆಚ್ಚಿನವು ವಸ್ತುನಿಷ್ಠವಾಗಿ ಏನಾದರೂ ಇದ್ದಿದ್ದರೆ, ಚುನಾವಣಾ ಕಾಲದಲ್ಲಿ ನೀಡಿದಆತುರದ ಭರವಸೆ ಏನೇ ಇರಲಿ, ಈಗ ಷರತ್ತುಗಳನ್ನು ಅನ್ವಯಿಸಿಯೇ ಜಾರಿಗೊಳಿಸಿ, ವೆಚ್ಚ-ಪ್ರತಿಫಲ ಲೆಕ್ಕ ಹಾಕಿ ಮುಂದುವರಿಯಿರಿ ಅಂತ ಪಟ್ಟುಹಿಡಿಯಬೇಕಿತ್ತು.

ಅವೆಲ್ಲ ಬಿಟ್ಟುಬಿಡಿ. ಶತಮಾನಗಳಿಂದ ಬಿಟ್ಟಿ ಕೊಡುಗೆಗಳನ್ನೇ ಅನುಭವಿಸಿ ಪ್ರವರ್ಧಮಾನಕ್ಕೆ ಬಂದಿರುವ, ಮೇಲ್ವರ್ಗ ಎಂದು ಕರೆಯಬಹುದಾದ ಮಂದಿಯೇ ಈ ಯೋಜನೆಗಳನ್ನು ‘ಬಿಟ್ಟಿ ಭಾಗ್ಯ’ಗಳೆಂದು ಹಂಗಿಸುತ್ತಿದ್ದಾರೆ. ಇದು ವಿಪರ್ಯಾಸಕರವೂ, ಅಸಂಗತವೂ ಆದ ವಿದ್ಯಮಾನ. ಎಂದೂ ಹಸಿವನ್ನು ಅನುಭವಿಸಿ ಗೊತ್ತಿರದ, ಎಂದೂ ರೇಷನ್ ಅಕ್ಕಿ ತಿನ್ನದ, ಎಂದೂ ಕೆಂಪು ಬಸ್‌ಗಳಲ್ಲಿ ಪ್ರಯಾಣಿಸದ, ಎಂದೂ ಅಂದಿನ ಅನ್ನವನ್ನು ಅಂದೇ ದುಡಿದು ಸಂಪಾದಿಸುವ ಅನಿಶ್ಚಿತ ಬದುಕಿನ ಬವಣೆ ಏನೆಂದು ತಿಳಿಯದ ಈ ಮಂದಿಯ ಹಸಿಹಸಿ ಅಹಂಕಾರ ಎಷ್ಟಿದೆಯೆಂದರೆ, ಅವರು ‘ನಮ್ಮ ತೆರಿಗೆ ಅಭಿವೃದ್ಧಿಗಾಗಿಯೇ ವಿನಾ ಬಿಟ್ಟಿ ಭಾಗ್ಯಗಳಿಗಲ್ಲ’ ಎನ್ನುವ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಥೇಚ್ಛವಾಗಿ ಪ್ರದರ್ಶಿಸುತ್ತಿದ್ದಾರೆ.

ಈ ಪ್ರಪಂಚದಲ್ಲಿ ಭಿಕ್ಷೆ ಬೇಡಿ ತಿನ್ನುವ ವ್ಯಕ್ತಿಗಳೂ ತೆರಿಗೆ ಕಟ್ಟುತ್ತಾರೆ. ಅದೇ ರೀತಿ ಈ ದೇಶದ ಶ್ರೀಮಂತಾತಿ ಶ್ರೀಮಂತರು ಕೂಡಾ ಒಂದಲ್ಲ ಒಂದು ರೀತಿಯ ಬಿಟ್ಟಿ ಭಾಗ್ಯಗಳ ಫಲಾನುಭವಿಗಳಾಗಿದ್ದಾರೆ. ಬುದ್ಧನೇನಾದರೂ ಈಗ ಇದ್ದಿದ್ದರೆ, ಕಿಸಾಗೌತಮಿಗೆ ಸಾವಿಲ್ಲದ ಮನೆಯ ಸಾಸಿವೆ ತಂದುಕೊಡು ಎನ್ನುವ ಬದಲು, ಸರ್ಕಾರ ನೀಡುವ ‘ಬಿಟ್ಟಿ’ ಭಾಗ್ಯಗಳ ಲಾಭ ಪಡೆಯದವರ ಮನೆಯ ಸಾಸಿವೆ ತಂದುಕೊಡು ಎನ್ನುತ್ತಿದ್ದನೇನೊ?

ಹಾಗಾಗಿ, ‘ನಮ್ಮ ತೆರಿಗೆ- ನಿಮಗೆ ಬಿಟ್ಟಿ ಕೊಡುಗೆ’ ಎಂದು ಹಂಗಿಸುವ ಹಕ್ಕು ಯಾರಿಗೂ ಇಲ್ಲ. ಇದೆ ಎಂದಾದರೆ, ನಾಳೆ ದೇಶದ ಬಡವರೆಲ್ಲಾ ಎದ್ದು, ನಾವು ನೀಡಿದ ತೆರಿಗೆಯನ್ನು ದೇವಸ್ಥಾನ ಕಟ್ಟಲಿಕ್ಕೆ, ಮಠಮಾನ್ಯಗಳಿಗೆ ದೇಣಿಗೆ ನೀಡಲಿಕ್ಕೆ, ಪ್ರತಿಮೆ ನಿರ್ಮಿಸಲಿಕ್ಕೆ, ಪಾರ್ಲಿಮೆಂಟ್ ಕಟ್ಟಡಕ್ಕೆ ಪೂಜೆ ಮಾಡಲು ಪುರೋಹಿತರನ್ನು ವಿಶೇಷ ವಿಮಾನದಲ್ಲಿ ಸಾಗಿಸುವುದಕ್ಕೆ, ಮಾಧ್ಯಮಗಳಿಗೆ ಮನಸೋಇಚ್ಛೆ ಜಾಹೀರಾತು ನೀಡುವುದಕ್ಕೆ ಹಾಗೂ ಸರ್ಕಾರದ ಜವಾಬ್ದಾರಿಗೆ ಸಂಬಂಧಪಡದ ಇಂತಹ ಇನ್ನಿತರ ಕೆಲಸಗಳಿಗೆ ಬಳಸಬಾರದು ಅಂತ ಬೀದಿಗಿಳಿಯಬಹುದಲ್ಲ.

ಐದು ಯೋಜನೆಗಳನ್ನೊಮ್ಮೆ ಸೂಕ್ಷ್ಮವಾಗಿ ನೋಡಿದರೆ, ‘ಇದ್ಯಾಕೆ ಬೇಕಿತ್ತು’ ಅನ್ನಿಸುವಂತಹದ್ದು ಏನೂ ಅಲ್ಲಿ ಕಾಣಿಸುವುದಿಲ್ಲ. ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಅಕ್ಕಿ ನೀಡಬೇಕಾಗಿರುವ ಜವಾಬ್ದಾರಿ ಸರ್ಕಾರದ್ದು. ಹಾಗಾಗಿ ಉಚಿತ ಅಕ್ಕಿ ನೀಡಿದ್ದನ್ನು ಪ್ರಶ್ನಿಸುವಂತಿಲ್ಲ. ನಿರುದ್ಯೋಗ ಭತ್ಯೆ ಬಹುಕಾಲದಿಂದಲೂ ಚರ್ಚೆಯಲ್ಲಿದೆ. ಎಷ್ಟೋ ದೇಶಗಳು ಇದನ್ನು ನೀಡುತ್ತಿವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವು ಬಡವರ ವಾಹನವಾದ ಕೆಂಪು ಬಸ್‌ಗೆ ಸೀಮಿತ. ಬಡ ಮಹಿಳೆಯರು ಬಹುತೇಕ ಪ್ರಯಾಣಿಸುವುದು ಉದ್ಯೋಗ ಅಥವಾ ಅಗತ್ಯ ಕೆಲಸದ ನಿಮಿತ್ತ. ತಮಿಳುನಾಡಿನಲ್ಲಿ ಜಾರಿಯಲ್ಲಿರುವ ಈ ಯೋಜನೆಯ ಸತ್ಪರಿಣಾಮಗಳ ಬಗ್ಗೆ ಅಧ್ಯಯನಗಳಿವೆ.

ಬಹಳ ವಿವಾದಕ್ಕೆ ಒಳಗಾಗಿರುವುದು ಎಂದರೆ 200 ಯೂನಿಟ್‌ವರೆಗಿನ ಉಚಿತ ವಿದ್ಯುತ್. ಹಿಂದೆ ಇಂಧನ (ಅಡುಗೆ ಅನಿಲ) ಸಬ್ಸಿಡಿ ಇತ್ತು. ಅದನ್ನೀಗ ಕಡಿತಗೊಳಿಸಿದ ಕಾರಣ ಬಡವರು ಕಷ್ಟದಲ್ಲಿದ್ದಾರೆ. ಹಾಗಾಗಿ, ರಾಜ್ಯ ಸರ್ಕಾರ ತನ್ನ ಸುಪರ್ದಿಯಲ್ಲಿರುವ ಇನ್ನೊಂದು ಇಂಧನದ ವಿಚಾರದಲ್ಲಿ ವಿನಾಯಿತಿ ತೋರಿದೆ. ಅಡುಗೆ ಅನಿಲದ ಸಬ್ಸಿಡಿಯನ್ನು ನಿರಾಕರಿಸಿದವರಿದ್ದಾರೆ. ಹಾಗೆಯೇ, ಬೇಡವಾದವರು ಉಚಿತ ವಿದ್ಯುತ್ ಬಿಟ್ಟುಬಿಡಬಹುದು. ಅಷ್ಟೇ ವಿವಾದಕ್ಕೆ ಒಳಗಾಗಿರುವುದು ಮನೆಯೊಡತಿಗೆ ನೀಡಲಿರುವ ಮಾಸಿಕ ₹ 2,000. ಇದು ಪ್ರಪಂಚದಾದ್ಯಂತ ಚಾಲ್ತಿಗೆ ಬರುತ್ತಿರುವ ಸಾರ್ವತ್ರಿಕ ಕನಿಷ್ಠ ಆದಾಯ (ಯೂನಿವರ್ಸಲ್‌ ಬೇಸಿಕ್‌ ಇನ್‌ಕಂ) ಎಂದು ಕರೆಯಲಾಗುವ ಯೋಜನೆ. ಅಗತ್ಯ ಇರುವ ಎಲ್ಲರಿಗೂ ಇಂತಿಷ್ಟು ಕನಿಷ್ಠ ವೇತನ ಅಂತ ನೀಡುವ ಈ ಪರಿಪಾಟವು ಕಲ್ಯಾಣ ಕಾರ್ಯಕ್ರಮಗಳ ಪೈಕಿ ಹೊಸ ಆವಿಷ್ಕಾರ. ಇದನ್ನು ಮಹಿಳೆಯರಿಗೆ ಸೀಮಿತವಾಗಿ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ನಾಳೆ ಇದು ದೇಶದಾದ್ಯಂತ ಪ್ರಯೋಗಕ್ಕೆ ಬಂದರೂ ಬಂದೀತು.

ಆರ್ಥಿಕ ಅಭಿವೃದ್ಧಿ ಚಿಂತನೆಯಲ್ಲಿ ನೂರಾರು ಕವಲುಗಳಿವೆ. ಅಭಿವೃದ್ಧಿ ಸಾಧಿಸುವ ಒಂದು ಹಂತದಲ್ಲಿ ಬಡವರ ಜೇಬಿಗೆ ಹಣ ಹರಿಯುವಂತೆ ಮಾಡುವುದು ಕೂಡಾ ಒಂದು ಅಭಿವೃದ್ಧಿ ಮಾದರಿ ಅಂತ ಅರ್ಥಶಾಸ್ತ್ರವೇ ಹೇಳುತ್ತದೆ. ಯಾಕೆಂದರೆ ಬಡವರು ತಮಗೆ ಸಿಕ್ಕ ಹಣವನ್ನು ಖರ್ಚು ಮಾಡುತ್ತಾರೆ. ತಮ್ಮ ಅಗತ್ಯಗಳೆಲ್ಲಾ ತೀರಿರುವ ಶ್ರೀಮಂತರ ಕೈಸೇರಿದ ಹಣ ಖರ್ಚಾಗದೇ ಉಳಿಯುತ್ತದೆ. ಆರ್ಥಿಕತೆ ಬೆಳೆಯುವುದು ಗಳಿಸಿದ್ದನ್ನು ಖರ್ಚು ಮಾಡುವ ಒಲವು ಜನರಲ್ಲಿ ಎಷ್ಟಿದೆ ಎನ್ನುವುದರ ಆಧಾರದಲ್ಲಿ. ಹಾಗಾಗಿ ‘ಬಿಟ್ಟಿ ಭಾಗ್ಯ’ ಅಂತ ಹಂಗಿಸುವಲ್ಲಿ ಕಾಣುವುದು ಅರ್ಥಶಾಸ್ತ್ರವಲ್ಲ, ಅಲ್ಲಿರುವುದು ಚುನಾವಣೆಯಲ್ಲಿ ರಾಜ್ಯದ ಬಡಜನರು ನೀಡಿದ ತೀರ್ಪಿನ ಬಗ್ಗೆ ಇರುವ ಅಸೂಯೆ.

ನಮ್ಮ ಪಕ್ಕದ ರಾಜ್ಯವಾದ ಆಂಧ್ರಪ್ರದೇಶ ಈ ವರ್ಷ ಇಂತಹ ಕಾರ್ಯಕ್ರಮಗಳಿಗೆ ಬರೋಬ್ಬರಿ ₹ 54,228 ಕೋಟಿ ಖರ್ಚು ಮಾಡುತ್ತಿದೆ. ಅಲ್ಲಿನ ಆರ್ಥಿಕತೆ ಚಿಗಿತುಕೊಳ್ಳುತ್ತಿರುವ ವರ್ತಮಾನವಿದೆ. ಕರ್ನಾಟಕದಲ್ಲೂ ಒಂದು ಪ್ರಯೋಗ ನಡೆಯಲಿ. ಕೆಲವರಿಗೆ ಮಾತ್ರ ಅಗೋಚರವಾಗಿ ಸಿಗುತ್ತಿದ್ದ ‘ಬಿಟ್ಟಿ’ ಭಾಗ್ಯ ಎಲ್ಲರಿಗೂ ಸಿಗಲಿ. ಹಸಿದವರಿಗೆ ಮೀನು ನೀಡಬಾರದು, ಮೀನು ಹಿಡಿಯಲು ಕಲಿಸಬೇಕು ಎನ್ನುವ ನಾಣ್ನುಡಿಯನ್ನು ಹಲವರುಗುನುಗುನಿಸುತ್ತಿದ್ದಾರೆ. ಆದರೆ ಈ ಯೋಜನೆಗಳಿರುವುದುಮೀನು ಹಿಡಿಯಲು ಕಲಿತ ನಂತರವೂ ಕಷ್ಟ ಎದುರಿಸುತ್ತಿರುವವರಿಗಾಗಿ ಎನ್ನುವ ಸತ್ಯವನ್ನು ಮರೆಯುತ್ತಾರೆ.

ಈ ವಾದಗಳನ್ನೆಲ್ಲ ಬದಿಗಿಡೋಣ. ಜನರನ್ನು ಮರುಳು ಮಾಡಿ ಚುನಾವಣೆ ಗೆಲ್ಲಲೆಂದೇ ಕಾಂಗ್ರೆಸ್ ಈ ಯೋಜನೆಗಳನ್ನು ಪ್ರಕಟಿಸಿದೆ ಎನ್ನುವುದೇ ಸರಿ ಎಂದುಕೊಳ್ಳೋಣ. ಈ ಪ್ರಕಾರ ನೋಡಿದರೆ, ಚುನಾವಣಾ ಕಾಲದಲ್ಲಿ ರಾಜ್ಯದ ಮತದಾರರ ಮುಂದೆ ಎರಡು ಆಯ್ಕೆಗಳಿದ್ದವು. ಒಂದೋ ‘ಪುಕ್ಕಟೆ’ ಯೋಜನೆಗಳ ಭರವಸೆಗೆ ಮರುಳಾಗಿ ಒಂದು ಪಕ್ಷಕ್ಕೆ ಮತ ನೀಡುವುದು. ಇಲ್ಲವೇ ಮತಾಂಧತೆಯ ಅಮಲೇರಿಸಿಕೊಂಡು ಇನ್ನೊಂದು ಪಕ್ಷಕ್ಕೆ ಮತ ನೀಡುವುದು. ಕರ್ನಾಟಕದ ಮತದಾರರು ‘ಪುಕ್ಕಟೆ’ ಯೋಜನೆಗಳಿಗೆ ಮರುಳಾಗುವ ಮಾದರಿಯನ್ನು ಆಯ್ದುಕೊಂಡಿದ್ದಾರೆ. ಮತಾಂಧತೆಯ ಅಮಲೇರಿಸಿಕೊಂಡು ಮತ ನೀಡುವ ಆಯ್ಕೆಯನ್ನು ತಿರಸ್ಕರಿಸಿದ್ದಾರೆ. ಅದಕ್ಕೆ ಮತದಾರರ ವಿವೇಕ ಕಾರಣವೋ ಅಥವಾ ವ್ಯಾವಹಾರಿಕ ಬದುಕಿನ ಲೆಕ್ಕಾಚಾರ ಕಾರಣವೋ ಗೊತ್ತಿಲ್ಲ.

ಏನೇ ಆಗಲಿ, ‘ಪುಕ್ಕಟೆ’ ಯೋಜನೆಗಳ ಕಾರಣಕ್ಕೆ ಹೆಚ್ಚೆಂದರೆ ರಾಜ್ಯದಲ್ಲಿ ಒಂದಷ್ಟು ಆರ್ಥಿಕ ಮುಗ್ಗಟ್ಟು ಉಂಟಾಗಬಹುದು. ಆಗಲಿ ಬಿಡಿ. ಅದು ಮತಾಂಧತೆಯ ವಿಷ ಉಂಟುಮಾಡುವ ದಾರುಣ ದುರಂತಕ್ಕೆ ಹೋಲಿಸಿದರೆ ಏನೇನೂ ಅಲ್ಲ. ಆರ್ಥಿಕ ಬಿಕ್ಕಟ್ಟು ಎನ್ನುವುದು ಒಂದು ತಾತ್ಕಾಲಿಕ ಸ್ಥಿತಿ. ಯಾವುದೇ ರಾಜ್ಯ ಶಾಶ್ವತವಾಗಿ ದಿವಾಳಿಯಾಗಿ ನಾಶವಾದ ನಿದರ್ಶನ ಇಲ್ಲ. ಆದರೆ ಮತಾಂಧತೆಯ ವಿಷ ಅಡರಿದಾಗ ಸಂಭವಿಸ

ಬಹುದಾದ ವಿವಿಧ ರೀತಿಯ ಹಾನಿಗಳು ಏನಿವೆ ಅವೆಲ್ಲವೂ ಒಂದು ಸಮಾಜವನ್ನು ಶಾಶ್ವತವಾದ ಬಿಕ್ಕಟ್ಟಿಗೆ ನೂಕಬಲ್ಲವು. ಹಾಗಾಗಿ, ಮತಾಂಧತೆಯ ಮೂಲಕ ಮತದಾರರನ್ನು ಮರುಳುಗೊಳಿಸುವ ಮಾದರಿಯನ್ನು ಸೋಲಿಸಬಲ್ಲ ಇನ್ಯಾವುದೇ ಮರುಳುಗೊಳಿಸುವ ಮಾದರಿಯನ್ನಾದರೂ ಮರುಮಾತಿಲ್ಲದೆ ಮನ್ನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT