ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ಪ್ರಸಾರದಲ್ಲಿ ಕೋರ್ಟ್‌ ಕಲಾಪ!

Last Updated 14 ಜುಲೈ 2018, 19:46 IST
ಅಕ್ಷರ ಗಾತ್ರ

ಗ್ರೀಕ್‌ ತತ್ವಶಾಸ್ತ್ರಜ್ಞ ಪ್ಲೇಟೊ ಒಂದು ಮಾತು ಹೇಳಿದ್ದ. ‘ನ್ಯಾಯಾಲಯದಲ್ಲಿನ ವಿಚಾರಣೆಗಳಿಗೆ ಪ್ರಜೆಗಳು ಹಾಜರಾಗಿ, ವಿಚಾರಣೆಗಳನ್ನು ಗಮನವಿಟ್ಟು ಕೇಳಿಸಿಕೊಳ್ಳಬೇಕು’ ಎಂಬುದು ಅವನ ಮಾತು. ‘ನ್ಯಾಯಾಂಗದ ಉದ್ದೇಶ ನ್ಯಾಯದಾನ ಆಗಿರುವ ಕಾರಣ ನ್ಯಾಯಾಂಗದ ಕಲಾಪಗಳು ಸಾರ್ವಜನಿಕವಾಗಿ ನಡೆಯಬೇಕು’ ಎಂದು ಜರ್ಮನ್‌ ತತ್ವಶಾಸ್ತ್ರಜ್ಞ ಹೆಗಲ್ ‘ಫಿಲಾಸಫಿ ಆಫ್‌ ರೈಟ್‌’ ಕೃತಿಯಲ್ಲಿ ಹೇಳಿದ್ದ. ಇವರಿಬ್ಬರ ಮಾತುಗಳನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ಬಿ. ಗಜೇಂದ್ರಗಡ್ಕರ್ ಅವರು 1966ರಲ್ಲಿ ನೀಡಿದ ಒಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದರು.

ಸುಪ್ರೀಂ ಕೋರ್ಟ್‌ನ ಕಲಾಪಗಳನ್ನು ನೇರ ಪ್ರಸಾರ ಮಾಡಲು ಸಿದ್ಧವಿರುವುದಾಗಿ ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ಅವರಿದ್ದ ನ್ಯಾಯಪೀಠ ಈ ವಾರದ ಆರಂಭದಲ್ಲಿ ಹೇಳಿದೆ. ಹಾಗೆಯೇ, ಕಲಾಪ ನೇರ ಪ್ರಸಾರ ಮಾಡಲು ಕೇಂದ್ರ ಸರ್ಕಾರ ಕೂಡ ಒಲವು ತೋರಿಸಿದೆ. ಸರ್ಕಾರ ಮತ್ತು ಕೋರ್ಟ್‌ ಸಹಮತದ ಕಡೆ ಸಾಗುತ್ತಿರುವುದು, ಭಾರತಕೂಡ ಕೋರ್ಟ್‌ ಕಲಾಪಗಳನ್ನು ನೇರ ಪ್ರಸಾರ ಮಾಡುವ ದೇಶಗಳ ಸಾಲಿಗೆ ಸೇರಲಿದೆಯೇ ಎಂಬ ಕುತೂಹಲವನ್ನು ಹುಟ್ಟುಹಾಕಿದೆ. ಈ ವಿದ್ಯಮಾನದ ಸುತ್ತ ಒಂದು ನೋಟ ಇಲ್ಲಿದೆ:

* ಕಲಾಪಗಳ ನೇರ ಪ್ರಸಾರದ ಬೇಡಿಕೆ ಸಾಧುವೇ?

‘ನ್ಯಾಯ ಕೊಡುವುದು ಮಾತ್ರವೇ ಮುಖ್ಯವಲ್ಲ,ನ್ಯಾಯ ಕೊಡುತ್ತಿರುವುದು ಇತರರಿಗೆ ಗೊತ್ತಾಗುವಂತೆಯೂ ಇರಬೇಕು’ ಎಂಬುದು ನ್ಯಾಯಶಾಸ್ತ್ರದಲ್ಲಿ ಇರುವ ಒಂದು ಮಾತು. ಅಂದರೆ, ನ್ಯಾಯಾಂಗದ ಕಲಾಪಗಳನ್ನು ಸಾರ್ವಜನಿಕರು ವೀಕ್ಷಿಸುವ ವ್ಯವಸ್ಥೆಯೂ ಇರಬೇಕು. ನಮ್ಮ ದೇಶದಲ್ಲಿ ಜಾರಿಯಲ್ಲಿರುವುದು ಮುಕ್ತ ನ್ಯಾಯಾಲಯ (Open Court) ವ್ಯವಸ್ಥೆ. ಅಂದರೆ, ನಿರ್ದಿಷ್ಟ ಸ್ವರೂಪದ ಪ್ರಕರಣಗಳನ್ನು ಹೊರತುಪಡಿಸಿದರೆ, ಇತರ ಪ್ರಕರಣಗಳ ವಿಚಾರಣೆ ವೇಳೆ, ಕೋರ್ಟ್‌ ಕೊಠಡಿಗೆ ಹೋಗಿ ವೀಕ್ಷಿಸಲು ಸಾರ್ವಜನಿಕರ ಮೇಲೆ ನಿರ್ಬಂಧ ಇಲ್ಲ.

2010ರಲ್ಲಿ ಮೊಹಮ್ಮದ್ ಶಹಾಬುದ್ದೀನ್‌ ಮತ್ತು ಬಿಹಾರ ಸರ್ಕಾರದ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಹೇಳಿರುವ ಮಾತು ಹೀಗಿದೆ: ‘ಸಾರ್ವಜನಿಕರಿಗೆ ಕೋರ್ಟ್‌ ಕೊಠಡಿಗೆ ಪ್ರವೇಶ ನಿರಾಕರಿಸಿದರೆ, ಕಲಾಪವು ಮುಕ್ತ ನ್ಯಾಯಾಲಯ ವ್ಯವಸ್ಥೆಯ ಅಡಿ ನಡೆದಿದೆ ಎಂದು ಭಾವಿಸಲಾಗದು. ಮುಕ್ತ ನ್ಯಾಯಾಲಯ ಎಂದರೆ ಸಾರ್ವಜನಿಕರಿಗೆ ಅಲ್ಲಿಗೆ ಬರಲು ಅವಕಾಶ ಇರಬೇಕು, ನ್ಯಾಯಾಂಗದ ಕಲಾಪ ಹೇಗೆ ನಡೆಯುತ್ತಿದೆ ಎಂಬುದನ್ನು ತಿಳಿಯುವ ಆಸೆ ಇರುವ ಎಲ್ಲರಿಗೂ ಕೋರ್ಟ್‌ ಕೊಠಡಿಗೆ ಬರುವ ಅವಕಾಶ ಇದೆ’.

ಕೋರ್ಟ್‌ನಲ್ಲಿ ನಡೆಯುವ ಕಲಾಪಗಳನ್ನು ಖುದ್ದಾಗಿ ವೀಕ್ಷಿಸುವ ಅವಕಾಶ ಸಾರ್ವಜನಿಕರಿಗೆ ಸಾಮಾನ್ಯ ಸಂದರ್ಭಗಳಲ್ಲಿ ಇದ್ದೇ ಇರುತ್ತದೆ. ಆದರೆ, ಕೋರ್ಟ್‌ ಕೊಠಡಿಯೊಳಗೆ ನಿರ್ದಿಷ್ಟ ಸಂಖ್ಯೆಯ ಜನ ಮಾತ್ರ ಪ್ರವೇಶಿಸಬಹುದೇ ವಿನಾ, ಆಸಕ್ತಿ ಇರುವ ಎಲ್ಲರೂ ಅಲ್ಲಿಗೆ ಹೋಗಿ ಕೂರಲು ಅಸಾಧ್ಯ. ಕೋರ್ಟ್‌ ಕಲಾಪಗಳ ನೇರ ಪ್ರಸಾರವು ಈಗಾಗಲೇ ಇರುವ ‘ಮುಕ್ತ ನ್ಯಾಯಾಲಯ’ ವ್ಯವಸ್ಥೆಯ ವಿಸ್ತರಣೆ ಆಗುತ್ತದೆ ಎಂದು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಸೋಮವಾರ ನಡೆದ ವಿಚಾರಣೆ ವೇಳೆ ಸ್ಪಷ್ಟಪಡಿಸಿದೆ.

* ಕಲಾಪದ ನೇರ ಪ್ರಸಾರದಿಂದ ಸಾರ್ವಜನಿಕರಿಗೆ ಆಗುವ ಪ್ರಯೋಜನ ಏನು?

1966ರ ಮಾರ್ಚ್‌ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ ಒಂದು ತೀರ್ಪು ನೀಡಿತ್ತು. ಅದರಲ್ಲಿ ಕೋರ್ಟ್‌, ‘ನ್ಯಾಯಾಲಯ ಎಂಬುದು ಸಾರ್ವಜನಿಕ ವೇದಿಕೆಯೂ ಹೌದು. ನ್ಯಾಯಾಲಯವು ಸರಿಯಾಗಿ ನ್ಯಾಯದಾನ ಮಾಡುತ್ತಿದೆ ಎಂಬುದು ಪ್ರಜೆಗಳಿಗೆ ಮನವರಿಕೆ ಆಗುವುದು (ಕಲಾಪಗಳ) ಪ್ರಚಾರದ ಮೂಲಕ. ಹಾಗಾಗಿ, ವಿಚಾರಣೆಗಳು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿ ಇರಬೇಕಾದುದು ಅತ್ಯಗತ್ಯ. ಕೋರ್ಟ್ ಕಲಾಪಗಳ ವರದಿಗಾರಿಕೆಯ ಮೇಲೆ ಕೂಡ ನಿರ್ಬಂಧ ಇರಬಾರದು. ಅಪರೂಪದ ಸಂದರ್ಭಗಳಲ್ಲಿ ಮಾತ್ರ ನ್ಯಾಯಾಲಯಗಳು ವಿಚಾರಣೆಯನ್ನು ಸಾರ್ವಜನಿಕರು ವೀಕ್ಷಿಸದಂತೆ ಮಾಡಬಹುದು ಅಥವಾ ಪ್ರಕರಣದ ತೀರ್ಪು ಬರುವವರೆಗೆ ಅದರ ಬಗ್ಗೆ ವರದಿ ಮಾಡುವಂತಿಲ್ಲ ಎಂದು ಹೇಳಬಹುದು’ ಎಂದಿದೆ.

‘ಮುಕ್ತ ನ್ಯಾಯಾಲಯದ ವ್ಯವಸ್ಥೆಯನ್ನು ಕಲಾಪಗಳ ನೇರ ಪ್ರಸಾರಕ್ಕೂ ವಿಸ್ತರಿಸಿ, ಸಾರ್ವಜನಿಕರಿಗೆ ಕಲಾಪ ವೀಕ್ಷಿಸುವ ಅವಕಾಶ ಕೊಟ್ಟರೆ ನ್ಯಾಯದಾನ ವ್ಯವಸ್ಥೆ ಇನ್ನಷ್ಟು ಪಾರದರ್ಶಕ ಆಗುತ್ತದೆ. ದೂರದ ಊರುಗಳಲ್ಲಿ ನಡೆಯುವ ಕೋರ್ಟ್‌ ಕಲಾಪಗಳಲ್ಲಿ ತಮ್ಮ ವಕೀಲರು ಏನು ವಾದ ಮಂಡಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ಕಕ್ಷಿದಾರರಿಗೆ ಸಾಧ್ಯವಾಗುತ್ತದೆ. ವಕೀಲರು ಬಲವಾದ ಕಾರಣ ಇಲ್ಲದೆ ಪ್ರಕರಣದ ವಿಚಾರಣೆಯ ದಿನಾಂಕವನ್ನು ಮುಂದಕ್ಕೆ ಹಾಕಿಸಿಕೊಂಡರೂ ಅದು ಕಕ್ಷಿದಾರನಿಗೆ ಗೊತ್ತಾಗುತ್ತದೆ’ ಎಂಬ ಮಾತನ್ನು ಕೆಲವು ವಕೀಲರೇ ಹೇಳಿದ್ದಾರೆ.

* ಸುಪ್ರೀಂ ಕೋರ್ಟ್‌ನಲ್ಲಿ ಈ ವಿಷಯ ಈಗ ಪ್ರಸ್ತಾಪ ಆಗಿರುವುದೇಕೆ?

ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಸೇರಿದಂತೆ ಕೆಲವರು ‘ಕಲಾಪಗಳ ನೇರ ಪ್ರಸಾರದ ವ್ಯವಸ್ಥೆ ಬೇಕು’ ಎನ್ನುವ ಕೋರಿಕೆಯೊಂದಿಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ವೇಳೆ ಕೋರ್ಟ್‌, ನೇರ ಪ್ರಸಾರಕ್ಕೆ ತನ್ನ ಒಲವು ಇರುವುದನ್ನು ಹೇಳಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಕೂಡ ರಾಜ್ಯಸಭೆ ಹಾಗೂ ಲೋಕಸಭೆಯ ಕಲಾಪಗಳನ್ನು ನೇರಪ್ರಸಾರ ಮಾಡುವ ರೀತಿಯಲ್ಲಿ ಪ್ರತ್ಯೇಕ ಟಿ.ವಿ. ವಾಹಿನಿ ಮೂಲಕ ಕೋರ್ಟ್‌ ಕಲಾಪಗಳನ್ನು ನೇರಪ್ರಸಾರ ಮಾಡಬಹುದು ಎಂದು ಹೇಳಿದೆ.

* ಅಂದಹಾಗೆ, ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸುವುದಕ್ಕೆ ಕಾನೂನಿನ ತೊಡಕೇನಾದರೂ ಇದೆಯೇ?

‘ಖಂಡಿತ ಇಲ್ಲ. ಈ ಹಂತದಲ್ಲಿ ಭಾರತದಲ್ಲಿನ ಯಾವ ಕಾನೂನು ಕೂಡ ಕಲಾಪಗಳ ನೇರ ಪ್ರಸಾರ ಆಗಬಾರದು ಎಂದು ಹೇಳುತ್ತಿಲ್ಲ’ ಎನ್ನುತ್ತಾರೆ ವಕೀಲ ಕೆ.ವಿ. ಧನಂಜಯ. ಇವರು, ಕಲಾಪಗಳ ನೇರಪ್ರಸಾರಕ್ಕೆ ಕಳೆದ ಹತ್ತು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದಾರೆ. ‘ಈ ವ್ಯವಸ್ಥೆ ಜಾರಿಗೆ ಬಂದರೆ, ಪ್ರಕರಣಗಳ ಬಗ್ಗೆ ಜನರಿಗೆ ತಪ್ಪು ಮಾಹಿತಿ ರವಾನೆಯಾಗುವ ಸಾಧ್ಯತೆ ಸಂಪೂರ್ಣವಾಗಿ ಇಲ್ಲವಾಗುತ್ತದೆ’ ಎಂದು ಅವರು ಹೇಳುತ್ತಾರೆ.

‘ನ್ಯಾಯ ಕೇಳುವ ಮೂಲಭೂತ ಹಕ್ಕು ಎಲ್ಲರಿಗೂ ಇದೆ. ಈ ಹಕ್ಕಿನ ವ್ಯಾಪ್ತಿಯನ್ನು ವಿಸ್ತರಿಸಿ, ನೇರ ಪ್ರಸಾರದ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ದೈಹಿಕ ಸಮಸ್ಯೆ, ಭೌಗೋಳಿಕ ಸಮಸ್ಯೆ ಸೇರಿದಂತೆ ಯಾವುದೋ ಸಮಸ್ಯೆಯ ಕಾರಣದಿಂದಾಗಿ ಕೋರ್ಟ್‌ಗೆ ಖುದ್ದಾಗಿ ಬರಲು ಸಾಧ್ಯವಾಗದವರಿಗೆ ಕೂಡ ಖಚಿತ ಮಾಹಿತಿ ಪಡೆದುಕೊಳ್ಳಲು ನೇರಪ್ರಸಾರದ ವ್ಯವಸ್ಥೆಯಿಂದ ಸಾಧ್ಯವಾಗುತ್ತದೆ. ಕಲಾಪದ ಪ್ರಸಾರಕ್ಕೆ ಸೂಕ್ತ ವ್ಯವಸ್ಥೆ ಆಗುವವರೆಗೆ, ಕಲಾಪಗಳನ್ನು ಡಿಜಿಟಲ್ ಸ್ವರೂಪದಲ್ಲಿ ದಾಖಲಿಸಿ, ಅವುಗಳನ್ನು ಒಂದು ಯೂಟ್ಯೂಬ್‌ ವಾಹಿನಿ ಮೂಲಕ ಪ್ರಸಾರ ಮಾಡಬಹುದು’ ಎಂದು ಇಂದಿರಾ ಜೈಸಿಂಗ್ ಹೇಳಿದ್ದಾರೆ.

* ಯಾವ ಪ್ರಕರಣಗಳ ವಿಚಾರಣೆಯ ನೇರ ಪ್ರಸಾರ ಮಾಡದಿರುವುದು ಸೂಕ್ತ?

ರಾಷ್ಟ್ರೀಯ ಮಹತ್ವದ ಪ್ರಕರಣಗಳ ವಿಚಾರಣೆಯ ನೇರ ಪ್ರಸಾರ ಆಗಬೇಕು ಎಂಬ ಬೇಡಿಕೆಯ ಜೊತೆಯಲ್ಲೇ, ಕೆಲವು ಪ್ರಕರಣಗಳ ವಿಚಾರಣೆಯನ್ನು ನೇರ ಪ್ರಸಾರದ ವ್ಯಾಪ್ತಿಗೆ ತರಬಾರದು ಎಂದು ವಕೀಲರು ಕೇಳಿ ಕೊಂಡಿದ್ದಾರೆ. ಇದೇ ರೀತಿಯ ಮಾತುಗಳು ನ್ಯಾಯಮೂರ್ತಿಗಳು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಂದಲೂ ವ್ಯಕ್ತವಾಗಿವೆ. ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳು, ಕೌಟುಂಬಿಕ ವ್ಯಾಜ್ಯಗಳು, ವ್ಯಕ್ತಿಯ ಖಾಸಗಿತನಕ್ಕೆ ಸಂಬಂಧಿಸಿದ ವಿಚಾರಣೆಗಳು ಹಾಗೂ ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯ ನೇರಪ್ರಸಾರ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹಾಗೆಯೇ, ಇಂದಿರಾ ಜೈಸಿಂಗ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುವ ಸಂದರ್ಭದಲ್ಲಿ, ‘ನೇರ ಪ್ರಸಾರದ ಸೌಲಭ್ಯವನ್ನು ಅನ್ಯರು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳದಂತೆ ನಿರ್ಬಂಧ ಇರಬೇಕು’ ಎಂದು ಕೋರಿದ್ದಾರೆ.

* ಹಿಂದೆ ಕಪಿಲ್‌ ಸಿಬಲ್‌ ಅವರೂ ಕಲಾಪಗಳ ಚಿತ್ರೀಕರಣದ ಬಗ್ಗೆ ಮಾತನಾಡಿದ್ದರಲ್ಲವೇ?

ಹೌದು, ಕಪಿಲ್‌ ಸಿಬಲ್‌ ಅವರು ಯುಪಿಎ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದಾಗ ಕೋರ್ಟ್‌ ಕಲಾಪಗಳ ಚಿತ್ರೀಕರಣದ ಪರ ದನಿ ಎತ್ತಿದ್ದರು. ‘ನ್ಯಾಯಾಲಯದ ಕಲಾಪಗಳ ಚಿತ್ರೀಕರಣ ಆಗಬೇಕು ಎಂಬ ಅನಿಸಿಕೆ ಕಾನೂನು ಸಚಿವಾಲಯದ ಸಲಹಾ ಮಂಡಳಿಯ ಸಭೆಯಲ್ಲಿ ವ್ಯಕ್ತವಾಗಿದೆ. ಸರ್ಕಾರದ ಪ್ರಕ್ರಿಯೆಗಳು ಎಷ್ಟು ಪಾರದರ್ಶಕ ಆಗಿರುತ್ತವೋ, ಕಾನೂನು ಪ್ರಕ್ರಿಯೆ ಕೂಡ ಅಷ್ಟೇ ಪಾರದರ್ಶಕ ಆಗಿರಬೇಕು’ ಎಂದು ಸಿಬಲ್ ಅವರು 2014ರ ಫೆಬ್ರುವರಿಯಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT