ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಡೀಸೆಲ್ ಬಳಕೆ ಕುಸಿತದ ಹಲವು ಮುಖಗಳು

Last Updated 1 ಜೂನ್ 2022, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಡೀಸೆಲ್ ಬಳಕೆ ಕಡಿಮೆಯಾಗಿದೆ. 2014–15ನೇ ಸಾಲಿನಿಂದ ದೇಶದಲ್ಲಿ ಡೀಸೆಲ್ ಬಳಕೆ ಸತತವಾಗಿ ಏರಿಕೆಯಾಗುತ್ತಿತ್ತು. 2019–20ರಲ್ಲಿ ಡೀಸೆಲ್ ಬಳಕೆ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಆದರೆ 2020–21ರಲ್ಲಿ ಕೋವಿಡ್‌ನ ಕಾರಣದಿಂದ ಎಲ್ಲಾ ಸ್ವರೂಪದ ಇಂಧನ ಬಳಕೆ ಕುಸಿದಿತ್ತು. ಆದರೆ ಆರ್ಥಿಕತೆಯ ಚೇತರಿಕೆಯ ಮಧ್ಯೆಯೂ 2021–22ನೇ ಸಾಲಿನಲ್ಲಿ ಡೀಸೆಲ್‌ ಬಳಕೆ ನಿರೀಕ್ಷಿತ ಮಟ್ಟವನ್ನು ತಲುಪಿಲ್ಲ. ಈ ಆರ್ಥಿಕ ವರ್ಷದಲ್ಲಿ ಸರ್ಕಾರದ ನಿರೀಕ್ಷೆಯನ್ನೂ ಮೀರಿ, ತೆರಿಗೆ ಸಂಗ್ರಹವಾಗಿದೆ. ಆರ್ಥಿಕ ಚಟುವಟಿಕೆಗಳಿಗೆ ಚಾಲನೆ ದೊರೆತಿದೆ. ಆದರೆ ಈ ಸಾಲಿನಲ್ಲಿನ ಡೀಸೆಲ್‌ ಬಳಕೆಯ ಪ್ರಮಾಣವು, 2016–17ರ ಮಟ್ಟಕ್ಕೆ ಕುಸಿದಿದೆ.

ದೇಶದಲ್ಲಿ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಮಂಗಳವಾರವಷ್ಟೇ ಬಿಡುಗಡೆಯಾಗಿರುವ ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯ ವಾರ್ಷಿಕ ವರದಿಯಲ್ಲಿ, ಒಟ್ಟು ರಾಷ್ಟ್ರೀಯ ತಲಾ ವೆಚ್ಚವು (ಗ್ರಾಹಕ ಬಳಕೆಯ ಅಂತಿಮ ವೆಚ್ಚ) ₹1.02 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಹೇಳಲಾಗಿದೆ. 2020–21ನೇ ಸಾಲಿಗೆ ಹೋಲಿಸಿದರೆ (₹88,775), ಒಟ್ಟು ರಾಷ್ಟ್ರೀಯ ತಲಾ ವೆಚ್ಚದಲ್ಲಿ ಶೇ 16.5ರಷ್ಟು ಏರಿಕೆಯಾಗಿದೆ. ಇದರಿಂದ ದೇಶದ ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಪರಿಣಾಮವಾಗಿ ದೇಶದ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆ. ಇವೆಲ್ಲವುಗಳ ಪರಿಣಾಮವಾಗಿ ತಯಾರಿಕಾ ವಲಯ ಮತ್ತು ಸರಕು ಸಾಗಣೆ ವಲಯದಲ್ಲಿ ಬೇಡಿಕೆ ಕುಸಿದಿದೆ. ಸರಕು ಸಾಗಣೆಯಲ್ಲಿ ಟ್ರಕ್‌ಗಳ ಬಳಕೆ ಕಡಿಮೆಯಾಗಿರುವ ಕಾರಣ, ಒಟ್ಟಾರೆಯಾಗಿ ದೇಶದಲ್ಲಿ ಡೀಸೆಲ್‌ ಬಳಕೆ ಕುಸಿದಿದೆ.

ದೇಶದಲ್ಲಿ ದೈನಂದಿನ ವಸ್ತುಗಳ ಬೆಲೆ ಏರಿಕೆಗೆ ಇಂಧನದ ಬೆಲೆ ಏರಿಕೆ ನೇರವಾಗಿ ಕಾರಣವಾಗಿದೆ. ಡೀಸೆಲ್‌ ಬೆಲೆಯಲ್ಲಿನ ಏರಿಕೆಯಿಂದಾಗಿ, ಸರಕು ಸಾಗಣೆ ವೆಚ್ಚ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಎಲ್ಲಾ ರೀತಿಯ ಸರಕುಗಳ ಬೆಲೆ ಏರಿಕೆಯಾಗಿದೆ. ಚಿಲ್ಲರೆ ಹಣದುಬ್ಬರವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಎಲ್ಲಾ ಸರಕು ಮತ್ತು ಸೇವೆಗಳ ಮೇಲೆ ಹೆಚ್ಚು ವೆಚ್ಚ ಮಾಡಬೇಕಿರುವ ಕಾರಣ, ದೇಶದ ಪ್ರಜೆಗಳ ರಾಷ್ಟ್ರೀಯ ತಲಾ ವೆಚ್ಚವು ಒಂದು ಲಕ್ಷ ರೂಪಾಯಿಯ ಗಡಿ ದಾಟಿದೆ. ವೆಚ್ಚ ಮಾಡಲು ಜನರು ಬಳಿ ಹಣ ಉಳಿಯುತ್ತಿಲ್ಲ. ಡೀಸೆಲ್‌ ಬೆಲೆ ಏರಿಕೆಯಿಂದಲೇ ಉಂಟಾದ ಈ ಸ್ಥಿತಿಯಿಂದ ಅಂತಿಮವಾಗಿ, ಡೀಸೆಲ್‌ಗೇ ಬೇಡಿಕೆ ಕುಸಿದಿದೆ ಎಂದು ವಿಶ್ಲೇಷಿಸಲಾಗಿದೆ.

ಬಳಕೆ ಸ್ಥಿರವಾಗಿಲ್ಲ

ಕೋವಿಡ್‌ ಕಾರಣದಿಂದ ಡೀಸೆಲ್‌ ಬಳಕೆ ಪ್ರಮಾಣ ಕಡಿಮೆಯಾಗಿದೆ ಎಂದು ಸರ್ಕಾರವು ಹೇಳಿದೆ. ಕೋವಿಡ್‌ ಪತ್ತೆಯಾದ 2020ರ ಆರಂಭದ ತಿಂಗಳಲ್ಲಿ ಡೀಸೆಲ್ ಬಳಕೆ ಪ್ರಮಾಣ ಭಾರಿ ಕುಸಿದಿತ್ತು. ಆದರೆ, ಅದೇ ವರ್ಷದ ನಂತರದ ತಿಂಗಳುಗಳಲ್ಲಿ ಏರಿಕೆಯಾಗಿತ್ತು. ಆದರೆ ಈ ಏರಿಕೆಯು 2021–2022ನೇ ಸಾಲಿನಲ್ಲಿ ಮುಂದುವರೆದಿಲ್ಲ. 2021ರ ಜನವರಿಯಿಂದಲೇ ಡೀಸೆಲ್ ಬಳಕೆಯ ಮಟ್ಟ ಕುಸಿಯುತ್ತಾ ಬಂದಿದೆ. ಮಧ್ಯೆ ಕೆಲವು ತಿಂಗಳಲ್ಲಿ ಬಳಕೆ ಮಟ್ಟ ಏರಿಕೆಯಾಗಿದೆ. ಆದರೆ, ಡೀಸೆಲ್‌ ಬೆಲೆ ವಿಪರೀತ ಏರಿಕೆಯಾದ ನಂತರ ಬಳಕೆ ಪ್ರಮಾಣ ಮತ್ತೆ ಇಳಿಕೆಯಾಗುತ್ತಿದೆ

ಲಭ್ಯತೆ ಕೊರತೆಯೇ?

ದೇಶದಲ್ಲಿ ಡೀಸೆಲ್‌ ಕೊರತೆಯಾಗುತ್ತಿದೆ. ಡೀಸೆಲ್ ಬಳಕೆ ಕುಸಿಯಲು ಇದೂ ಒಂದು ಪ್ರಮುಖ ಕಾರಣ ಎಂದು ಪ್ರತಿಪಾದಿಸಲಾಗುತ್ತಿದೆ. ಖಾಸಗಿ ಕಂಪನಿಗಳು ದೇಶೀಯ ಮಾರಾಟವನ್ನು ಕಡಿಮೆ ಮಾಡಿ, ರಫ್ತನ್ನು ಹೆಚ್ಚಿಸಿಕೊಂಡಿವೆ. ಇದರಿಂದ ಡೀಸೆಲ್‌ ಲಭ್ಯತೆ ಕಡಿಮೆಯಾಗಿದೆ. ಇದರಿಂದಲೂ ಬಳಕೆ ಮಟ್ಟ ಕುಸಿದಿದೆ ಎಂದು ರಾಯಿಟರ್ಸ್‌ ವಿಶ್ಲೇಷಣೆ ಪ್ರಕಟಿಸಿದೆ.

ರಷ್ಯಾದ ಕಡಿಮೆ ದರದ ತೈಲದಿಂದ ಖಾಸಗಿ ತೈಲ ಸಂಸ್ಕರಣಾ ಕಂಪನಿಗಳು ಭರ್ಜರಿ ಲಾಭ ಮಾಡಿಕೊಳ್ಳುತ್ತಿದ್ದರೆ, ಕೇಂದ್ರ ಸರ್ಕಾರಿ ಒಡೆತನದ ತೈಲ ಕಂಪನಿಗಳು ನಷ್ಟದ ಹಾದಿ ಹಿಡಿದಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾಕ್ಕೆ ಆರ್ಥಿಕ ದಿಗ್ಬಂಧನ ಹೇರಿರುವ ಐರೋಪ್ಯ ರಾಷ್ಟ್ರಗಳು ಅಲ್ಲಿಂದ ತೈಲ ಆಮದು ಬಹಿಷ್ಕರಿಸಿವೆ. ಆದರೆ ಭಾರತವು ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ರಷ್ಯಾದ ಕಚ್ಚಾ ತೈಲ ಕಡಿಮೆ ದರಕ್ಕೆ ಲಭ್ಯವಾಗುತ್ತಿದ್ದು, ಇದನ್ನು ಸಂಸ್ಕರಣೆ ಮಾಡುತ್ತಿರುವ ಖಾಸಗಿ ಕಂಪನಿಗಳು ವಿದೇಶಗಳಿಗೆ ರಫ್ತು ಮಾಡಿ ಲಾಭ ಮಾಡಿಕೊಳ್ಳುತ್ತಿವೆ. ಆದರೆ, ಸರ್ಕಾರಿ ಒಡೆತನದ ಕಂಪನಿಗಳು ದೇಶೀಯ ಪೂರೈಕೆಗೆ ಒತ್ತು ನೀಡಿವೆ. ರಷ್ಯಾ ಹೊರತುಪಡಿಸಿ, ಬೇರೆ ಕಡೆಗಳಿಂದ ಅಧಿಕ ದರದಲ್ಲಿ ತೈಲ ಖರೀದಿಸಬೇಕಾದ ಅನಿವಾರ್ಯತೆ ಹಾಗೂ ದೇಶೀಯ ತೈಲ ಮಾರಾಟ ಬೆಲೆ ನಿಯಂತ್ರಣ ಕಾರಣಗಳಿಂದ ಸರ್ಕಾರಿ ತೈಲ ಸಂಸ್ಕರಣೆ ಕಂಪನಿಗಳು ಹಿನ್ನಡೆ ಎದುರಿಸುತ್ತಿವೆ ಎನ್ನಲಾಗಿದೆ.

ಯುರೋಪ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ರಷ್ಯಾದ ತೈಲ ಆಮದು ನಿರ್ಬಂಧಿಸಿವೆ. ಆದರೆ, ಭಾರತದ ಖಾಸಗಿ ಕಂಪನಿಗಳಾದ ರಿಲಯನ್ಸ್, ನಯಾರಾ ಮೊದಲಾದವು ರಿಯಾಯಿತಿ ದರದಲ್ಲಿ ಲಭ್ಯವಿರುವ ರಷ್ಯಾದ ತೈಲವನ್ನು ಬೃಹತ್ ಪ್ರಮಾಣದಲ್ಲಿ ಖರೀದಿ ಮಾಡುತ್ತಿವೆ. ಈ ಖಾಸಗಿ ಕಂಪನಿಗಳು ದೇಶೀಯ ಪೂರೈಕೆಯನ್ನು ಆದಷ್ಟು ಕಡಿಮೆ ಮಾಡಿ, ವಿದೇಶಗಳಿಗೆ ರಫ್ತು ಪ್ರಮಾಣವನ್ನು ಹೆಚ್ಚಿಸಿವೆ. ಇದರಿಂದ ದೊಡ್ಡ ಪ್ರಮಾಣದ ಆದಾಯವನ್ನು ಗಳಿಸುತ್ತಿವೆ. ಆದರೆ, ಸರ್ಕಾರಿ ಒಡೆತನದ ಸಂಸ್ಥೆಗಳು ವಾರ್ಷಿಕ ಪೂರೈಕೆ ಒಪ್ಪಂದಗಳ ಮೂಲಕ ಬೇರೆಡೆಯಿಂದ ಬೃಹತ್ ಪ್ರಮಾಣದ ತೈಲವನ್ನು ಖರೀದಿಸುತ್ತಿವೆ. ಹೀಗಾಗಿ ರಷ್ಯಾದಿಂದ ಕಡಿಮೆ ಪ್ರಮಾಣದ ತೈಲವನ್ನು ಖರೀದಿಸಲಷ್ಟೇ ಸಾಧ್ಯವಾಗುತ್ತಿದೆ.

ಸರ್ಕಾರಿ ತೈಲ ಸಂಸ್ಕರಣೆ ಘಟಕಗಳು ಬಿಕ್ಕಟ್ಟಿನಲ್ಲಿ ಸಿಲುಕಲು ಇನ್ನೂ ಕೆಲವು ಕಾರಣಗಳಿವೆ. ಕೋವಿಡ್ ಬಳಿಕ ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರುತ್ತಲೇ ಇದೆ. ಹೀಗಾಗಿ ಸರ್ಕಾರಿ ಕಂಪನಿಗಳು ಹೆಚ್ಚು ಹಣವನ್ನು ತೆತ್ತು ಕಚ್ಚಾ ತೈಲ ಖರೀದಿಸುತ್ತಿವೆ. ದೇಶದ ಬಳಕೆದಾರರಿಗೆ ಪೂರೈಸುವ ಸಂಸ್ಕರಿತ ತೈಲದ ಮಾರಾಟ ಬೆಲೆಯಲ್ಲಿ ಏಪ್ರಿಲ್‌ನಿಂದ ಬದಲಾವಣೆಯಾಗಿಲ್ಲ. ಕಳೆದ ವಾರ ಬೆಲೆಯನ್ನು ತಗ್ಗಿಸಲಾಗಿದೆ. ಹಣದುಬ್ಬರ ಹೆಚ್ಚಳ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಹಲವು ತಿಂಗಳವರೆಗೆ ಬೆಲೆ ಏರಿಕೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಇವೆಲ್ಲವೂ ಸರ್ಕಾರಿ ತೈಲ ಕಂಪನಿಗಳ ಆದಾಯವನ್ನು ತಗ್ಗಿಸಿವೆ ಎಂದು ವಿಶ್ಲೇಷಿಸಲಾಗಿದೆ.

3 ಪಟ್ಟು ಹೆಚ್ಚು ಖರೀದಿ: ಫೆಬ್ರುವರಿ 24ರಂದು ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ದಿನದಿಂದ ಈವರೆಗೆ ಭಾರತವು ರಷ್ಯಾದಿಂದ 6.25 ಕೋಟಿ ಬ್ಯಾರೆಲ್ ತೈಲವನ್ನು ಖರೀದಿಸಿದೆ. 2021ರ ಇದೇ ಅವಧಿಯಲ್ಲಿ ಖರೀದಿಸಿದ್ದ ತೈಲಕ್ಕೆ ಹೋಲಿಸಿದರೆ 3 ಪಟ್ಟು ಅಧಿಕ ಪ್ರಮಾಣದ ತೈಲವನ್ನು ಈ ವರ್ಷ ಖರೀದಿಸಲಾಗಿದೆ. ಈ ಪೈಕಿ ಖಾಸಗಿ ಕಂಪನಿಗಳು ಶೇ 50ಕ್ಕಿಂತ ಹೆಚ್ಚು ರಷ್ಯನ್ ತೈಲ ಖರೀದಿಸಿವೆ ಎಂದು ರಿಲಯನ್ಸ್, ನಯಾರಾ ಎನರ್ಜಿ, ರೆಫಿನಿಟಿವ್ ಎಕೊನ್ ಸಂಸ್ಥೆಗಳ ದತ್ತಾಂಶಗಳು ಹೇಳುತ್ತವೆ.

ಖಾಸಗಿ ಕಂಪನಿಗಳು ತೈಲ ರಫ್ತು ಹೆಚ್ಚಿಸಿರುವುದರಿಂದ ಭಾರತದ ತೈಲ ರಫ್ತು ಪ್ರಮಾಣವು ಶೇ 15ಕ್ಕೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, 2022ರ ಮೊದಲ ಐದು ತಿಂಗಳಲ್ಲಿ ಇದು ಅತ್ಯಧಿಕ ರಫ್ತು ಎನ್ನಲಾಗಿದೆ.

ಖಾಸಗಿ ಮಾರುಕಟ್ಟೆ ಪಾಲು ಕುಸಿತ: ರಫ್ತು ಪ್ರಮಾಣವನ್ನು ತಕ್ಷಣಕ್ಕೆ ಹೆಚ್ಚಿಸುವ ಉದ್ದೇಶದಿಂದ ಖಾಸಗಿ ಕಂಪನಿಗಳು ದೇಶೀಯ ತೈಲ ಮಾರಾಟ ಪ್ರಮಾಣವನ್ನು ತಗ್ಗಿಸಿವೆ. 2022ರ ಮಾರ್ಚ್‌ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಶೇ 10ರಷ್ಟು ಪಾಲು ಹೊಂದಿದ್ದ ಖಾಸಗಿ ಸಂಸ್ಥೆಗಳು ಏಪ್ರಿಲ್ ಹೊತ್ತಿಗೆ ತಮ್ಮ ಪಾಲನ್ನು ಶೇ 7ಕ್ಕೆ ತಗ್ಗಿಸಿವೆ ಎಂದು ಸರ್ಕಾರಿ ತೈಲ ಸಂಸ್ಕರಣ ಕಂಪನಿಗಳ ಮೂಲಗಳು ತಿಳಿಸಿವೆ.

ಖಾಸಗಿಯವರಿಗೆ ಭಾರಿ ಲಾಭ: ರಷ್ಯಾದ ಪ್ರತೀ ಬ್ಯಾರಲ್ ತೈಲವನ್ನು ಸಂಸ್ಕರಣೆ ಮಾಡಿ ಅದನ್ನು ರಫ್ತು ಮಾಡುವುದರಿಂದ ₹2,275 (30 ಡಾಲರ್) ಲಾಭ ಸಿಗುತ್ತಿದೆ ಎಂದು ಖಾಸಗಿ ರಿಫೈನರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಸರ್ಕಾರಿ ಕಂಪನಿಗಳು ದೇಶೀಯ ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸಲೇಬೇಕು. ಇದೇ ವೇಳೆ ಖಾಸಗಿ ಸಂಸ್ಥೆಗಳು ರಿಯಾಯಿತಿ ದರದಲ್ಲಿ ತೈಲವನ್ನು ಖರೀದಿಸಿ, ಐರೋಪ್ಯ ದೇಶಗಳಿಗೆ ರಫ್ತು ಮಾಡಿ ಭಾರಿ ಪ್ರಮಾಣದ ಲಾಭ ಗಳಿಸುತ್ತಿವೆ’ ಎಂದು ರೆಫಿನಿಟಿವ್‌ನ ವಿಶ್ಲೇಷಕ ಎಹ್ಸಾನ್ ಉಲ್ ಹಕ್ ಹೇಳುತ್ತಾರೆ.

ಸರ್ಕಾರಿ ಕಂಪನಿಗಳು ದೇಶೀಯ ತೈಲ ಮಾರಾಟವನ್ನು ಹೆಚ್ಚಿಸಬೇಕಿದೆ. ಆದರೆ, ಈ ಕಂಪನಿಗಳು ಹೆಚ್ಚಿನ ದರದಲ್ಲಿ ತೈಲ ಖರೀದಿಸಿ, ಸಂಸ್ಕರಿಸಿ ಮಾರಾಟ ಮಾಡಬೇಕಿರುವುದರಿಂದ ಪ್ರತೀ ಲೀಟರ್‌ ಡೀಸೆಲ್‌ಗೆ ₹20 ಹಾಗೂ ಪ್ರತೀ ಲೀಟರ್‌ ಪೆಟ್ರೋಲ್‌ಗೆ ₹17 ನಷ್ಟ ಉಂಟಾಗುತ್ತಿದೆ ಎಂದು ಸರ್ಕಾರಿ ತೈಲ ಸಂಸ್ಕರಣ ಘಟಕದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಕಂಪನಿಗಳು ಪ್ರತೀ ಅಡುಗೆ ಅನಿಲ ಸಿಲಿಂಡರ್‌ಗೆ ₹200 ನಷ್ಟ ಅನುಭವಿಸುತ್ತಿವೆ. ‘ನಾವು ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟ ಮಾಡುತ್ತಿದ್ದೇವೆ, ಹೆಚ್ಚು ನಷ್ಟ ಅನುಭವಿಸುತ್ತಿದ್ದೇವೆ’ ಎಂದು ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT