ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಬದಲಾಗಬೇಕಿದೆ ತಂತ್ರಜ್ಞಾನದ ದಿಕ್ಕು

ಆರ್ಥಿಕತೆ, ಪ್ರಜಾಪ್ರಭುತ್ವದ ಉನ್ನತಿಗೆ ಪೂರಕವಾಗಿ ಕೃತಕ ಬುದ್ಧಿಮತ್ತೆಯ ದಿಕ್ಕನ್ನು ಬದಲಿಸಬೇಕಿದೆ
Published 24 ನವೆಂಬರ್ 2023, 0:30 IST
Last Updated 24 ನವೆಂಬರ್ 2023, 0:30 IST
ಅಕ್ಷರ ಗಾತ್ರ

‘ತಂತ್ರಜ್ಞಾನ ಅಂದರೆ ನಿಯಂತ್ರಣ. ಪ್ರಕೃತಿಯನ್ನು ಮಾತ್ರವಲ್ಲ, ಜೊತೆಯವರನ್ನೂ ನಿಯಂತ್ರಿಸುತ್ತಿರುತ್ತೇವೆ. ಕೆಲವರಿಗೆ ಅಧಿಕಾರ ಸಿಕ್ಕರೆ, ಹಲವರು ಅಧಿಕಾರ ಕಳೆದುಕೊಳ್ಳುತ್ತಾರೆ’– ಇದನ್ನು ಎಚ್.ಜಿ.ವೇಲ್ಸ್ ಸುಮಾರು 130 ವರ್ಷಗಳ ಹಿಂದೆಯೇ ಕಂಡುಕೊಂಡಿದ್ದ. 

ಈಗ ಕೃತಕ ಬುದ್ಧಿಮತ್ತೆ ಹಾಗೂ ಅದರ ವಿಭಿನ್ನ ರೂಪಗಳು ಮತ್ತೆ ಆತಂಕವನ್ನು ಮೂಡಿಸಿವೆ. ಕೆಲಸ ಕಳೆದುಕೊಳ್ಳುವ ಭೀತಿ ಹಲವರನ್ನು ಕಾಡುತ್ತಿದೆ. ಅಮೆರಿಕದಲ್ಲಿ ಟಿ.ವಿಗೆ ಚಿತ್ರಕಥೆ ಬರೆಯುವವರು ತಂತ್ರಜ್ಞಾನ ತಮ್ಮ ಕೆಲಸವನ್ನು ಕಸಿದುಕೊಳ್ಳುತ್ತಿದೆ ಎಂದು ಮುಷ್ಕರ ನಡೆಸಿದ್ದರು. ಕೆಲವರು ತಂತ್ರಜ್ಞಾನದ ಅಪಾರ ಸಾಧ್ಯತೆಯನ್ನು ನೋಡಿ ಪುಳಕಿತರಾಗಿದ್ದಾರೆ. ವಾಸ್ತವ ಎರಡರ ಮಧ್ಯೆ ಇದೆ ಅನ್ನುತ್ತಾರೆ ಅರ್ಥಶಾಸ್ತ್ರಜ್ಞ ಡರೋನ್ ಅಸಿಮೊಗ್ಲು. ಅವರು ಜೇಮ್ಸ್ ಎ. ರಾಬಿನ್‌ಸನ್ ಅವರ ಜೊತೆ ಸೇರಿ, ಮನುಷ್ಯ ಹಾಗೂ ತಂತ್ರಜ್ಞಾನದ ನಡುವಿನ ಸಂಘರ್ಷದ ಸಾವಿರ ವರ್ಷದ ಚರಿತ್ರೆಯನ್ನು ಅಧ್ಯಯನ ಮಾಡಿದ್ದಾರೆ. ಅದು ತಂತ್ರಜ್ಞಾನ ಕುರಿತ ನಮ್ಮ ಅರಿವನ್ನು ಹಿಗ್ಗಿಸುತ್ತದೆ.

ತಂತ್ರಜ್ಞಾನದಿಂದ ಅಭಿವೃದ್ಧಿ ಆಗಿರುವುದು ಜನರ ಜೀವನಮಟ್ಟ ಸುಧಾರಿಸಿರುವುದು ನಿಜ. ವೈದ್ಯಕೀಯ, ಮನರಂಜನೆ, ಸಾರಿಗೆಯಂತಹ ಕ್ಷೇತ್ರಗ ಳಲ್ಲಿ ಮಹತ್ತರವಾದ ಬದಲಾವಣೆಗಳಾಗಿವೆ. ಕೃತಕ ಬುದ್ಧಿಮತ್ತೆಯ ಆವಿಷ್ಕಾರವಂತೂ ತಂತ್ರಜ್ಞಾನದ ಸಾಮರ್ಥ್ಯ, ಸಾಧ್ಯತೆಯನ್ನು ಹಲವು ಪಟ್ಟು ಹೆಚ್ಚಿಸಿದೆ. ಅದರ ಅಗಾಧ ಸಾಮರ್ಥ್ಯದಲ್ಲೇ ಅದರ ಅಪಾಯವೂ ಇದೆ. ಮನುಷ್ಯ ಮಾಡುವ ಕೆಲಸವನ್ನು ಯಂತ್ರದಿಂದ ಮಾಡಿಸಬಹುದು. ಆಗ ಮನುಷ್ಯ ಕೆಲಸವಿಲ್ಲ
ದಂತೆ ಆಗುತ್ತಾನೆ. ಪರ್ಯಾಯವಾಗಿ ತಂತ್ರಜ್ಞಾನ
ವನ್ನು ಮನುಷ್ಯನಿಗೆ ಪೂರಕವಾಗಿ ಬಳಸಿಕೊಂಡು ಅವನ ಉತ್ಪಾದಕತೆಯನ್ನು ಹೆಚ್ಚಿಸಬಹುದು. ಹೊಸ ಕೆಲಸ, ಅವಕಾಶಗಳನ್ನು ಸೃಷ್ಟಿಸಬಹುದು. ಹಿಂದೆ ಹೀಗೆ ಆಗಿದೆ.

ಫೋರ್ಡ್ ಕಂಪನಿ 20ನೇ ಶತಮಾನದ ಪ್ರಾರಂಭದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿ
ಕೊಂಡಾಗ, ಕಾರಿನ ಉತ್ಪಾದನೆಯು 2,500 ಇದ್ದಿದ್ದು 15 ಲಕ್ಷಕ್ಕೆ ಜಿಗಿಯಿತು. ಹಾಗೆಯೇ ಕೆಲಸಗಾರರ ಸಂಖ್ಯೆ ಕೆಲವು ಸಾವಿರ ಇದ್ದುದು 4 ಲಕ್ಷದಷ್ಟಾಯಿತು. ಇದಕ್ಕಾಗಿ ಕಾರ್ಮಿಕರು ತೀವ್ರವಾಗಿ ಹೋರಾಡಿದ್ದರು ಅನ್ನುವುದೂ ನಿಜ. ಅದರಿಂದ ಇಬ್ಬರಿಗೂ ಅನುಕೂಲವಾಯಿತು. ಆದರೆ ಕೃತಕ ಬುದ್ಧಿಮತ್ತೆಯ ಬೆಳವಣಿಗೆಯಿಂದ ಮನುಷ್ಯ ಮಾಡುತ್ತಿರುವ ಹೆಚ್ಚಿನ ಕೆಲಸಗಳನ್ನು ಯಂತ್ರಗಳು ಮಾಡತೊಡಗಿವೆ. ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಇದು ಹೆಚ್ಚಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳು ವುದು, ಲಾಕ್‌ಡೌನ್ ಇವೆಲ್ಲಾ ಯಾಂತ್ರೀಕರಣಕ್ಕೆ ಪುಷ್ಟಿ ನೀಡಿವೆ. ತಂತ್ರಜ್ಞಾನದ ಇನ್ನೊಂದು ಅಪಾಯ ಅಂದರೆ, ಸರ್ಕಾರಗಳು, ದೊಡ್ಡ ಉದ್ದಿಮೆಗಳು ಜನರಿಂದ ಮಾಹಿತಿ ಸಂಗ್ರಹಿಸಿ ತಂತ್ರಜ್ಞಾನವನ್ನು ಬೇಹುಗಾರಿಕೆಗೂ
ಬಳಸಿಕೊಳ್ಳಬಹುದು. ಪೆಗಾಸಸ್‌ನಂತಹ ಬೇಹುಗಾರಿಕೆ ಸಾಫ್ಟ್‌ವೇರನ್ನು ಸಾವಿರಾರು ಮೈಲಿ ಆಚೆ ಇರುವ ಜನರ ಅಂಕಿಅಂಶಗಳನ್ನು ಸಂಗ್ರಹಿಸಲು, ಅವರ ಖಾಸಗಿ
ವ್ಯವಹಾರವನ್ನು ಗಮನಿಸಲು ಬಳಸಲಾಗುತ್ತಿದೆ. ಅದರಿಂದ ಜನರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ತಮ್ಮನ್ನು ಗಮನಿಸಲಾಗುತ್ತಿದೆ ಅನ್ನುವ ಭೀತಿಯಿಂದ ನಿಷ್ಕ್ರಿಯರಾಗುತ್ತಾರೆ. ಅವರು ಸಮಾಜವನ್ನು ರೂಪಿಸುವ ಶಕ್ತಿಯಾಗಿ ಉಳಿಯುವುದಿಲ್ಲ.

ಅಂತಿಮವಾಗಿ ಕೃತಕ ಬುದ್ಧಿಮತ್ತೆಯ ಪರಿಣಾಮವು ಪ್ರಜಾಪ್ರಭುತ್ವದ ಮೇಲೂ ಆಗುತ್ತಿದೆ. ಫೇಸ್‌ಬುಕ್ ಹಾಗೂ ಎಕ್ಸ್‌ ವೇದಿಕೆಗಳು ರಾಜಕೀಯ ಸಂವಹನ ಮತ್ತು ಚರ್ಚೆಯ ದಿಕ್ಕನ್ನೇ ಬದಲಿಸಿವೆ. ಜನರನ್ನು ವೈಯಕ್ತಿಕವಾಗಿ ಪ್ರಭಾವಿಸುವ ಪ್ರಯತ್ನಗಳು ಹೆಚ್ಚಿವೆ. ಕೇಂಬ್ರಿಜ್‌ ಅನಲಿಟಿಕಾ ಕೋಟ್ಯಂತರ ಜನರ ಖಾಸಗಿ ಮಾಹಿತಿಯನ್ನು ಸಂಗ್ರಹಿಸಿ ರಾಜಕೀಯ ಉದ್ದೇಶಕ್ಕೆ ಮಾರಿದ್ದು ದೊಡ್ಡ ಸುದ್ದಿಯಾಗಿತ್ತು. ಬ್ರೆಕ್ಸಿಟ್ ಸಂದರ್ಭದಲ್ಲಿ ಇಂತಹುದೇ ಮಾಹಿತಿಯನ್ನು ಬಳಸಿಕೊಂಡು ಬ್ರೆಕ್ಸಿಟ್ ಪರವಾಗಿ ಜನ ಮತ ಚಲಾಯಿಸುವಂತೆ ಪ್ರೇರೇಪಿಸಲಾಯಿತು ಎನ್ನಲಾಗಿದೆ. ಚೀನಾದ ಕಮ್ಯುನಿಸ್ಟ್ ಪಕ್ಷವೂ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸಲು, ವಿರೋಧವನ್ನು ಗುರುತಿಸಲು ಹಾಗೂ ಹತ್ತಿಕ್ಕಲು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದೆ ಎಂದು ಹೇಳಲಾಗಿದೆ. ಮುಂದೆ ಕೃತಕ ಬುದ್ಧಿಮತ್ತೆಯ ಸಾಮರ್ಥ್ಯ ಬೆಳೆದಂತೆ ಇಂತಹ ಚಟುವಟಿಕೆಗಳು ಇನ್ನಷ್ಟು ವ್ಯಾಪಕವಾಗಬಹುದು.

ಬೇಹುಗಾರಿಕೆಯಂತಹ ಕೆಲಸಗಳಿಗೆ ಅಲ್ಲದೆ, ಜನರಿಗೆ ವಿಶ್ವಾಸಾರ್ಹ ಮಾಹಿತಿಯನ್ನು ಗುರುತಿಸುವು ದಕ್ಕೆ ನೆರವಾಗುವಂತೆ ಕೃತಕ ಬುದ್ಧಿಮತ್ತೆ
ಯನ್ನು ರೂಪಿಸಬಹುದು. ಹೆಚ್ಚು ಪ್ರಜಾಸತ್ತಾತ್ಮ
ಕವಾದ ಚರ್ಚೆಗಳು, ಸಂವಾದಗಳು ನಡೆಯುವುದಕ್ಕೆ ಸಾಮಾಜಿಕ ಮಾಧ್ಯಮಗಳು ವೇದಿಕೆಯಾಗ
ಬಹುದು. ಹಾಗೆಯೇ ಮಾಹಿತಿಯನ್ನು ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವುದಕ್ಕೆ ಅವಕಾಶ ಇರಬಾರದು. ವಿರೂಪಗೊಂಡ ಮಾಹಿತಿಯನ್ನು ಗುರುತಿಸುವು ದಕ್ಕೆ ತಂತ್ರಜ್ಞಾನ ನೆರವಾಗಬೇಕು. ಹಾಗೆಯೇ ಮಾಹಿತಿಯ ಕೇಂದ್ರೀಕರಣವೂ ಒಳ್ಳೆಯದಲ್ಲ. ಈ ದಿಸೆಯಲ್ಲಿ ವಿಕಿಪಿಡಿಯ ಒಂದು ವಿಭಿನ್ನವಾದ ಪ್ರಯೋಗ. ಲಾಭವಿಲ್ಲದ ಮಾದರಿಯ ಪ್ರಯತ್ನ. ಅದು ಯಶಸ್ವಿಯಾಗಿದೆ. ಪರ್ಯಾಯ ದಾರಿ ಸಾಧ್ಯ.

ಅಂದರೆ ಕೃತಕ ಬುದ್ಧಿಮತ್ತೆಗೆ ಬೇರೆ ದಾರಿ ಸಾಧ್ಯವಿತ್ತು. ಮನುಷ್ಯನ ಉತ್ಪಾದಕತೆಯನ್ನು ಹೆಚ್ಚಿಸುವ, ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ, ಸಂಪತ್ತನ್ನು ಹಂಚಿಕೊಳ್ಳುವ, ಪ್ರಜಾಸತ್ತಾತ್ಮಕ ಸ್ವಾತಂತ್ರ್ಯವನ್ನು ರಕ್ಷಿಸುವ ಹಾಗೂ ಬಲಗೊಳಿಸುವ ದಿಸೆಯಲ್ಲಿ ಕೃತಕ ಬುದ್ಧಿಮತ್ತೆಯನ್ನು ರೂಪಿಸುವುದಕ್ಕೆ ಸಾಧ್ಯವಿತ್ತು. ಅದಕ್ಕೆ ನಾವು ಬೇರೆ ದಾರಿಯಲ್ಲಿ ಸಾಗಬೇಕಿತ್ತು ಅಷ್ಟೆ.

ಕೃತಕ ಬುದ್ಧಿಮತ್ತೆಯ ಸಂಶೋಧನೆಯ ದಿಕ್ಕನ್ನು ಬದಲಿಸಬೇಕಾದರೆ ಅದು ಯಾರ ನಿಯಂತ್ರಣ
ದಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಕೃತಕ ಬುದ್ಧಿಮತ್ತೆ ಕೆಲವೇ ಬೃಹತ್ ಉದ್ದಿಮೆಗಳ ಕೈಯಲ್ಲಿ ಕೇಂದ್ರೀಕೃತವಾಗಿದೆ. ಗೂಗಲ್, ಫೇಸ್‌ಬುಕ್, ಅಮೆಜಾನ್, ಮೈಕ್ರೊಸಾಫ್ಟ್, ನೆಟ್‌ಫ್ಲಿಕ್ಸ್, ಅಲಿಬಾಬ, ಬೈಡು ಇವು ಕೃತಕ ಬುದ್ಧಿಮತ್ತೆಯ ಬಹುಪಾಲು ಹೂಡಿಕೆಯನ್ನು ನೋಡಿಕೊಳ್ಳುತ್ತವೆ. ವಿಶ್ವವಿದ್ಯಾಲಯ ಗಳಲ್ಲಿ ಕೃತಕ ಬುದ್ಧಿಮತ್ತೆ ಕುರಿತಂತೆ ಸಂಶೋಧನೆಗೆ ಹಣ ನೀಡುತ್ತಿರುವುದೂ ಅದರ ದಿಕ್ಕನ್ನು ರೂಪಿಸುತ್ತಿರು ವುದೂ ದೊಡ್ಡ ಕಾರ್ಪೊರೇಟ್‌ ಸಂಸ್ಥೆಗಳೇ. ಈ ಟೆಕ್ ಕಂಪನಿಗಳೇ ಪ್ರಮುಖ ವಿಶ್ವವಿದ್ಯಾಲಯಗಳ ಪಠ್ಯಕ್ರಮ ವನ್ನು ಹಾಗೂ ಕೃತಕ ಬುದ್ಧಿಮತ್ತೆಯ ಕ್ಷೇತ್ರವನ್ನು ನೇರವಾಗಿ ಪ್ರಭಾವಿಸುತ್ತಿವೆ. ತಂತ್ರಜ್ಞಾನದ ಹಾದಿಯನ್ನು ನಿರ್ಧರಿಸುತ್ತಿರುವವರೂ ಇವರೇ. ಇವರನ್ನು ನಿಯಂತ್ರಿಸು ವುದಕ್ಕೆ ಸಾಧ್ಯವಾಗದೇ ಹೋದರೆ, ಅದರಲ್ಲೂ ಅವರ ನಡೆಯಿಂದ ಉಳಿದವರಿಗೆ ತೊಂದರೆಯಾಗುತ್ತಿದ್ದಾಗ, ಅದು ಒಳ್ಳೆಯ ಬೆಳವಣಿಗೆಯಲ್ಲ.

ಇದಕ್ಕೆ ಪರಿಹಾರವೇನು? ಇಂಧನದ ವಿಷಯದಲ್ಲಾ ಗಿದ್ದು ಇಲ್ಲೂ ಮಾದರಿಯಾಗಬಹುದು. ತಂತ್ರಜ್ಞಾನ ದಿಂದ ಅತ್ಯಂತ ನಕಾರಾತ್ಮಕ ಸಾಮಾಜಿಕ ಪರಿಣಾಮವಾ ಗಿದ್ದು ಇಂಧನದಿಂದ. ಫಾಸಿಲ್ ಇಂಧನವು ಕಾರ್ಬನ್ ಹೊಗೆ ಹೊರಸೂಸುತ್ತಾ ಹವಾಮಾನವನ್ನು ವಿಪರೀತ ಹಾಳುಮಾಡಿತು. ಆಗ ಪೆಟ್ರೋಲ್ ತುಂಬಾ ಅಗ್ಗವಾಗಿತ್ತು. ಪರ್ಯಾಯ ಇಂಧನ ವ್ಯವಸ್ಥೆ ದುಬಾರಿಯಾಗಿತ್ತು. ಹಾಗಾಗಿ, ನವೀಕರಿಸಬಹುದಾದ ಇಂಧನದ ತಯಾರಿಕೆಯನ್ನು ಹೆಚ್ಚಿಸುವ ದಿಸೆಯಲ್ಲಿ ತಂತ್ರಜ್ಞಾನ ಬೆಳೆಯಬೇಕಿತ್ತು. ಗಾಳಿ, ಸೂರ್ಯನ ಬೆಳಕನ್ನು ಬಳಸಿ ಇಂಧನವನ್ನು ಅಗ್ಗವಾಗಿ ತಯಾರಿಸಬೇಕಿತ್ತು. ತಂತ್ರಜ್ಞಾನ ಆ ದಿಕ್ಕಿನಲ್ಲಿ ಚಲಿಸಿತು. ಪರ್ಯಾಯ ಇಂಧನದ ತಂತ್ರಜ್ಞಾನದ ಬೆಲೆ ಸುಮಾರಾಗಿ ಹತ್ತುಪಟ್ಟು ಇಳಿಯಿತು.

ಇದು ಹೇಗೆ ಸಾಧ್ಯವಾಯಿತು? ಎರಡು ಕಾರಣಗಳಿವೆ. ಒಂದು, ಸಮಾಜದ ಒತ್ತಾಯ. ಬಳಕೆದಾರರು ಹಾಗೂ ಜನ ಶುದ್ಧ ಇಂಧನಕ್ಕಾಗಿ ಒತ್ತಾಯಿಸಿದರು. ಎರಡನೆಯದಾಗಿ, ಕೆಲವು ದೇಶಗಳ ಸರ್ಕಾರಿ ನೀತಿ. ಉದಾಹರಣೆಗೆ, ಕಾರ್ಬನ್ ಟ್ಯಾಕ್ಸ್, ಸೋಲಾರ್ ಹಾಗೂ ಇತರ ಪರ್ಯಾಯ ಇಂಧನಗಳಿಗೆ ಸಬ್ಸಿಡಿಯ ನೆರವು ತಂತ್ರಜ್ಞಾನದ ದಿಕ್ಕನ್ನು ಬದಲಿಸುವಲ್ಲಿ ಮಹತ್ತರ ಪಾತ್ರ ವಹಿಸಿತು. ಸರ್ಕಾರದ ನೀತಿಯೊಂದಿಗೆ ಸಮಾಜದ ಒತ್ತಾಯವೂ ಸೇರಿಕೊಂಡು ಇದು ಸಾಧ್ಯವಾಗಿದೆ. ಹಾಗೆಯೇ ಸಾಮಾಜಿಕ ಒತ್ತಡ ಹಾಗೂ ಸರ್ಕಾರದ ನೀತಿಯಿಂದ ಇಂದಿನ ತಂತ್ರಜ್ಞಾನದ ದಿಕ್ಕನ್ನು ಬದಲಿ
ಸುವುದಕ್ಕೆ ಸಾಧ್ಯವಾಗಬೇಕು ಎನ್ನುತ್ತಾರೆ ಅಸಿಮೊಗ್ಲು.

ನಮ್ಮ ಆರ್ಥಿಕತೆ ಹಾಗೂ ಪ್ರಜಾಪ್ರಭುತ್ವದ ಭವಿಷ್ಯ ನಮ್ಮ ಕೈಯಲ್ಲಿದೆ. ಅದಕ್ಕೆ ಪೂರಕವಾಗಿ ಕೃತಕ ಬುದ್ಧಿಮತ್ತೆಯ ದಿಕ್ಕನ್ನು ಬದಲಿಸಬೇಕಿದೆ. ಇದೊಂದು ಮಹತ್ತರ ಜವಾಬ್ದಾರಿ. ದೊಡ್ಡ ಸವಾಲು. ಆದರೆ
ನಿರ್ಲಕ್ಷಿಸುವುದಕ್ಕೆ ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT