ಸಮಾನತೆ ತಳಹದಿಯ ಸಮ ಸಮಾಜವು ಶಿಕ್ಷಣದಿಂದ ರೂಪುಗೊಳ್ಳಬೇಕು. ಆದರೆ, ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆ ಸಾಮಾಜಿಕ ಅಸಮಾನತೆ ಬಲಗೊಳ್ಳಲು ಪೂರಕವಾಗಿದೆ. ಬಂಡವಾಳಶಾಹಿ ವ್ಯವಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಮೇಲುಗೈ ಪಡೆದಿದ್ದರೂ, ಕ್ರಾಂತಿಕಾರಿ ಗುಣವು ಶಿಕ್ಷಣದಲ್ಲಿ ಸುಪ್ತವಾಗಿ ಇರುವುದನ್ನು ಗಮನಿಸಬೇಕುಸಾಮಾಜಿಕ ಬದಲಾವಣೆಗೆ ಶಿಕ್ಷಣ ಬಳಕೆಯಾಗಬೇಕು.

ಸಾಮಾಜಿಕ ವ್ಯವಸ್ಥೆಯಲ್ಲಿನ ಮುಖ್ಯವಾಹಿನಿ ಸಾಂಪ್ರದಾಯಿಕ ಶಿಕ್ಷಣವು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಬಗೆಯ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯ ಪ್ರಬಲ ನಂಬಿಕೆ ಮತ್ತು ಮೌಲ್ಯಗಳನ್ನು ಬೆಳೆಸುತ್ತದೆ. ಈ ಬೆಳವಣಿಗೆಯು ಸಮಾಜದಲ್ಲಿನ ಯಥಾಸ್ಥಿತಿಯನ್ನು ಮುಂದುವರಿಸುತ್ತದೆ. ಯಥಾಸ್ಥಿತಿ ಯನ್ನು ಪೋಷಿಸಿ ಮುಂದುವರಿಸುವ ಬಗೆಯ ಶಿಕ್ಷಣ ವ್ಯವಸ್ಥೆಯು ಸಮಾಜದ ಎಲ್ಲ ಜನರಿಗೆ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಬದುಕನ್ನು ಸಮಾನತೆಯ ನೆಲೆಯಲ್ಲಿ ಸೃಷ್ಟಿಸುವ ಪ್ರಯತ್ನ ಮಾಡುವುದಿಲ್ಲ. ಸಮಾನತೆಯ ಬದಲಾಗಿ ಅಸಮಾನತೆ, ತಾರತಮ್ಯ ಮತ್ತು ದೊಡ್ಡ ಆರ್ಥಿಕ ಕಂದರಗಳನ್ನು ಸೃಷ್ಟಿಸುತ್ತದೆ.

ಕೆಲವೇ ಜನರ ಹಿತಾಸಕ್ತಿಯನ್ನು ಈ ವ್ಯವಸ್ಥೆ ಕಾಪಾಡುತ್ತದೆ ಹಾಗೂ ಸಂವಿಧಾನಗಳು ಪ್ರತಿಪಾದಿಸುವ ವರ್ಗರಹಿತ ಸಮ ಸಮಾಜ ಕಟ್ಟಿಕೊಡುವ ಬದಲು, ವರ್ಗ ಆಧಾರಿತ ಅಸಮಾನತೆಯನ್ನು ಸೃಷ್ಟಿಸಿ ಪೋಷಿಸಲು ನೆರವಾಗುತ್ತದೆ. ಈ ಸಾಮಾಜಿಕ ಅಸಮಾನತೆಯ ಹಿನ್ನೆಲೆಯಲ್ಲಿ, ಶಿಕ್ಷಣವು ಒಂದು ಸಾಂಪ್ರದಾಯಿಕ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಹೇಗೆ ಸಾಧನವಾಗ ಬಹುದು ಎಂಬುದನ್ನು ವಿಶ್ಲೇಷಿಸುವುದು, ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.

ಸಾಮಾಜಿಕ ಬದಲಾವಣೆಯಲ್ಲಿ ಶಿಕ್ಷಣದ ಪಾತ್ರ ಮತ್ತು ಸ್ವರೂಪವನ್ನು ತಿಳಿಯಲು, ಸಿದ್ಧಾಂತ ಮತ್ತು ಶಿಕ್ಷಣದ ನಡುವಿನ ಸಂಬಂಧವನ್ನು ಪರಿಶೀಲಿಸುವುದು ಅಗತ್ಯ. ‘ಸಿದ್ಧಾಂತ’ದ ಪರಿ ಕಲ್ಪನೆಯನ್ನು ಸರಳವಾಗಿ ಅರ್ಥೈಸುವುದಾದರೆ, ಸಮಾಜದಲ್ಲಿ ಒಂದು ನಿರ್ದಿಷ್ಟ ವರ್ಗದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ನೆರವಾಗುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನಂಬಿಕೆ, ಮೌಲ್ಯ ಹಾಗೂ ದೃಷ್ಟಿಕೋನವನ್ನು ಸಾಂಸ್ಥೀಕರಣಗೊಳಿಸುವುದು; ಆ ಮೂಲಕ ಮಾನವ ಮತ್ತು ಸಮಾಜದ ನಡುವಿನ ಸಂಬಂಧಗಳನ್ನು ನಿರೂಪಿಸಿ, ನಿಯಂತ್ರಿಸಿ, ನಿರ್ದೇಶಿಸಲು ವ್ಯವಸ್ಥಿತವಾಗಿ ತಲೆಗೆ ತುಂಬುವ ಪ್ರಕ್ರಿಯೆಯನ್ನು ‘ಸಿದ್ಧಾಂತ’ ಎನ್ನಬಹುದು. ಇದನ್ನು ಪ್ರತಿಗಾಮಿ ಹಾಗೂ ಪ್ರಗತಿಪರ ಎಂದು ವರ್ಗೀಕರಿಸಬಹುದು.

ಇಂದಿನ ಬಂಡವಾಳಶಾಹಿ ಸಾಮಾಜಿಕ ವ್ಯವಸ್ಥೆಯಲ್ಲಿ ಶಿಕ್ಷಣ ಎನ್ನುವುದು ವಿದ್ಯಾರ್ಥಿಗಳ ಜೀವನದಲ್ಲಿ ಬಂಡವಾಳಶಾಹಿ ಸಿದ್ಧಾಂತವನ್ನು ಅಳವಡಿಸುವ ಮತ್ತು ಅದನ್ನು ಮುಂದುವರಿಸುವ ಸಾಧನವಾಗುತ್ತದೆ. ವೈಯಕ್ತಿಕತೆ (ಮಿತಿಮೀರಿದ ಸ್ವಾರ್ಥ), ಅನಾರೋಗ್ಯಕರ ಸ್ಪರ್ಧೆ ಹಾಗೂ ಎಲ್ಲ ಮಾನವ ಸಂಬಂಧಗಳನ್ನು ಹಣದ ಸಂಬಂಧಗಳನ್ನಾಗಿ ಮಾರ್ಪಡಿಸುವ ಮೂಲಕ ಗರಿಷ್ಠ ಲಾಭ ಗಳಿಸುವುದು ಬಂಡವಾಳಶಾಹಿ ವ್ಯವಸ್ಥೆಯ ಪ್ರಮುಖ ಲಕ್ಷಣವಾಗಿದೆ.

ವೈಯಕ್ತಿಕ ಯಶಸ್ಸು ಮತ್ತು ವೈಫಲ್ಯ ವ್ಯಕ್ತಿಯ ಪ್ರಯತ್ನಗಳಿಂದ ಮಾತ್ರ ಉಂಟಾಗುತ್ತವೆ ಎಂಬ ತಪ್ಪು ನಂಬಿಕೆಯನ್ನು ಹುಟ್ಟು ಹಾಕುವ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳನ್ನು ಬಂಡವಾಳಶಾಹಿ ಸಾಮಾಜಿಕ ವ್ಯವಸ್ಥೆ ಅಲ್ಲಗಳೆಯುತ್ತದೆ. ಸಾಮಾಜಿಕ ಒಳಿತು ಹಾಗೂ ಚಲನಶೀಲ ಸಾಮಾಜಿಕ ಪರಿವರ್ತನೆಯ ಸಾಧನವಾಗಬೇಕಿದ್ದ ಶಿಕ್ಷಣವನ್ನು, ವೈಯಕ್ತಿಕ ಒಳಿತಿನ ನೆಲೆಯಲ್ಲಿ ವ್ಯಾಪಾರದ ಸರಕನ್ನಾಗಿ ಪರಿವರ್ತಿಸುವ ಮೂಲಕ ಅನಾರೋಗ್ಯಕರ ಸ್ಪರ್ಧೆಯನ್ನು ಸೃಷ್ಟಿಸುತ್ತದೆ.

ಈ ಸ್ಪರ್ಧೆ ಗೆಲ್ಲುವವರ ಪಾಲಿಗೆ ಸಕಾರಾತ್ಮಕವಾಗಿರುತ್ತದೆ ಹಾಗೂ ಸೋಲುವವರಿಗೆ ನಕಾರಾತ್ಮಕ ವಾಗಿ ಪರಿಣಮಿಸುತ್ತದೆ. ‘ಸೋಲಲು ಹಣೆಬರಹವೇ ಕಾರಣ’ ಎಂಬ ವಿಧಿವಾದವನ್ನು ಮುಂದೊಡ್ಡಿ ಯಥಾಸ್ಥಿತಿಯನ್ನು ಮುಂದುವರಿಸುತ್ತದೆ.

ಬಂಡವಾಳಶಾಹಿ ಆರ್ಥಿಕತೆ ಮತ್ತು ಶಿಕ್ಷಣ ವ್ಯವಸ್ಥೆಯ ನಡುವಿನ ಸಂಬಂಧಗಳ ಕುರಿತಾಗಿ ಹಲವು ತಜ್ಞರು ಕೂಲಂಕಷವಾಗಿ ಅಧ್ಯಯನ ನಡೆಸಿದ್ದಾರೆ. ಮುಖ್ಯವಾಗಿ ತಜ್ಞರಾದ ಬೌಲ್ಸ್ ಮತ್ತು ಗಿಂಟಿಸ್ ಅವರು, ‘ಸ್ಕೂಲಿಂಗ್ ಇನ್ ಕ್ಯಾಪಿಟಲಿಸ್ಟ್ ಅಮೆರಿಕ’ ಪುಸ್ತಕದಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಸಾಮಾಜಿಕ ಸಂಬಂಧ ಮತ್ತು ಶಿಕ್ಷಣದ ಸಾಮಾಜಿಕ ಸಂಬಂಧಗಳ ನಡುವೆ ಅಪಾರ ಹೋಲಿಕೆಯನ್ನು ಗುರುತಿಸಿದ್ದಾರೆ.

ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬೇರೂರಿರುವ ಪರಕೀಯತೆ, ಶ್ರೇಣೀಕೃತ ಅಸಮಾನತೆ, ವರ್ಗ ವಿಭಜನೆ (ನಮ್ಮಲ್ಲಿ ಜಾತಿ– ವರ್ಗ ಎರಡೂ ಹೌದು) ಹಾಗೂ ತಾರತಮ್ಯಗಳು ಶಾಲೆಯ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಪ್ರತಿಫಲಿಸುತ್ತವೆ. ಬಂಡವಾಳಶಾಹಿಯು ತನ್ನ ಸಾಮಾಜಿಕ ವ್ಯವಸ್ಥೆಯಲ್ಲಿನ ಅಸಮಾನತೆ, ತಾರತಮ್ಯ ಮತ್ತು ಶ್ರೇಣೀಕೃತ ವ್ಯವಸ್ಥೆಯನ್ನು ಶಿಕ್ಷಣದಲ್ಲಿಯೂ ಕಾನೂನು ಬದ್ಧಗೊಳಿಸುತ್ತದೆ.

ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಗೆ ಆರ್ಥಿಕ ಸಾಮರ್ಥ್ಯದ ನೆಲೆಯಲ್ಲಿ ಅತ್ಯುತ್ತಮ ಸವಲತ್ತಿನ ಶಾಲೆಗಳ ಮೂಲಕ ಗುಣಾತ್ಮಕ ಶಿಕ್ಷಣವನ್ನು ನೀಡಿ, ಬಹುಜನ ಸಮಾಜದ ಬಹುಸಂಖ್ಯಾತ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಶಿಕ್ಷಣವನ್ನು ಸಮರ್ಥಿಸುತ್ತದೆ. ಶಿಕ್ಷಣ ಪಡೆಯುವಲ್ಲಿನ ಈ ತಾರತಮ್ಯಕ್ಕೆ ಬಡತನ ಅಥವಾ ಹಣೆಬರಹ ಕಾರಣವೆಂದು ಬಿಂಬಿಸಲಾಗುತ್ತದೆ; ಅಸಮಾನತೆ, ತಾರತಮ್ಯ ಹಾಗೂ ವರ್ಗಾಧಾರಿತ ವ್ಯವಸ್ಥೆ ಪುನರುತ್ಪಾದನೆಗೊಂಡು ಮುಂದುವರಿಯುತ್ತದೆ.

ಆರ್ಥಿಕ ವ್ಯವಸ್ಥೆಯ ಪ್ರಾಬಲ್ಯ ಮತ್ತು ಅಧೀನದ ಸಂಬಂಧಗಳನ್ನು ನಮ್ಮ ಶಾಲೆಗಳು ಶಾಶ್ವತಗೊಳಿಸುತ್ತವೆ. ಶೈಕ್ಷಣಿಕ ಆಡಳಿತಗಾರರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧಗಳೂ ಈ ಶ್ರೇಣೀಕೃತ ವಿಭಜನೆ ಹಾಗೂ ವಿಧೇಯತೆಯನ್ನು ಪುನರುಚ್ಚರಿಸುತ್ತವೆ. ಆ ಮೂಲಕ, ಪ್ರಶ್ನಿಸುವ ಮನೋಭಾವವನ್ನು ಹತ್ತಿಕ್ಕಿ, ವಿಧೇಯತೆಯನ್ನೇ ನಿಯಮವಾಗಿಸುತ್ತವೆ.

ಸಮಾಜದಲ್ಲಿ ವರ್ಗ, ಅಸಮಾನತೆ ಮತ್ತು ತಾರತಮ್ಯ ಸಹಜವೆಂದು ಪ್ರತಿಪಾದಿಸುವ ಮೂಲಕ ಯಥಾಸ್ಥಿತಿಯನ್ನು ಒಪ್ಪಿ ಮುಂದುವರಿಸಲು ಅನುಕೂಲವಾಗುವ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುತ್ತವೆ. ಶಿಕ್ಷಣದಲ್ಲಿನ ಪಠ್ಯಕ್ರಮ ಹಾಗೂ ಪಠ್ಯವಸ್ತು ಕೂಡ ಸ್ಥಾಪಿತ ಮೌಲ್ಯಗಳನ್ನು ರೂಢಿಗತವಾಗಿ ಮುಂದುವರಿಸುತ್ತವೆ. ಇದರಿಂದಾಗಿ, ಸಮಾಜದಲ್ಲಿನ ಅಸಮಾನತೆ, ತಾರತಮ್ಯ, ಅನ್ಯಾಯ ಮತ್ತು ಸಂಪತ್ತಿನ ಉತ್ಪಾದನೆ ಹಾಗೂ ಹಂಚಿಕೆಯಲ್ಲಿನ ಆರ್ಥಿಕ ಅಸಮಾನತೆ ನಿರಾತಂಕವಾಗಿ ಮುಂದುವರಿಯುತ್ತವೆ.

ಬಂಡವಾಳಶಾಹಿ ವ್ಯವಸ್ಥೆಯು ಶಿಕ್ಷಣದಲ್ಲಿ ವರ್ಗಾಧಾರಿತ ಶ್ರೇಣೀಕೃತ ವ್ಯವಸ್ಥೆಯನ್ನು ಪ್ರಜ್ಞಾಪೂರ್ವಕವಾಗಿ ಬಿತ್ತಿ ಬೆಳೆಸುತ್ತದೆ. ಆ ಮೂಲಕ, ಸಮಾಜದಲ್ಲಿನ ಅಸಮಾನತೆಯನ್ನು ಸಮರ್ಥಿಸುತ್ತದೆ. ಉದಾಹರಣೆಗೆ, ಶಿಕ್ಷಣದ ಶ್ರೇಣೀಕೃತ ವ್ಯವಸ್ಥೆಯ ಕೆಳಹಂತದಲ್ಲಿರುವ ಸರ್ಕಾರಿ, ಸರ್ಕಾರಿ ಅನುದಾನಿತ ಹಾಗೂ ಕಳಪೆ ದರ್ಜೆಯ ಖಾಸಗಿ ಶಾಲೆಗಳಲ್ಲಿ ಕನಿಷ್ಠ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ಶಿಕ್ಷಕರು, ಪೀಠೋಪಕರಣ, ಪಾಠೋಪಕರಣ, ಗ್ರಂಥಾಲಯದ ಕೊರತೆ ಎದ್ದು ಕಾಣಿಸುತ್ತದೆ.

ಇಂಥ ಶಾಲೆಗಳಲ್ಲಿ ಕಲಿಕೆಯ ವಿಧಾನವು ಸಾಮಾನ್ಯವಾಗಿ ಕಂಠಪಾಠ ಆಗಿರುತ್ತದೆ. ಅಲ್ಲಿ ಕಲಿಯುವ ಬಹುತೇಕ ವಿದ್ಯಾರ್ಥಿಗಳು ಅತಿ ಕಡಿಮೆ ಆದಾಯದ ಜವಾನ, ಸಹಾಯಕ ಹಾಗೂ ಗುಮಾಸ್ತರಂತಹ ಉದ್ಯೋಗಗಳಲ್ಲಿ ಭವಿಷ್ಯ ಕಂಡುಕೊಳ್ಳಬೇಕಾಗುತ್ತದೆ. ಇತ್ತೀಚೆಗೆ ಈ ಬಗೆಯ ಉದ್ಯೋಗಗಳು ಕೂಡ ಕ್ಷೀಣಿಸುತ್ತಿವೆ ಹಾಗೂ ಹೊರಗುತ್ತಿಗೆ ಉದ್ಯೋಗಗಳು ಹೆಚ್ಚಾಗುತ್ತಿವೆ.

ಶ್ರೇಣೀಕೃತ ವ್ಯವಸ್ಥೆಯ ಮೇಲ್ತುದಿಯಲ್ಲಿ ಪ್ರತಿಷ್ಠಿತ ಶಾಲೆಗಳನ್ನು ಗುರುತಿಸಬಹುದು. ಸಾಮಾನ್ಯವಾಗಿ ಇವು ಪ್ರೀಮಿಯಂ ಅಥವಾ ಬೋರ್ಡಿಂಗ್ ಶಾಲೆಗಳಾಗಿರುತ್ತವೆ. ವಿಶಿಷ್ಟ ಪಠ್ಯಕ್ರಮವಾದ ಅಂತರರಾಷ್ಟ್ರೀಯ ಬ್ಯಾಕಲೌರಿಯೇಟ್ (ಐಬಿ), ಅಂತರರಾಷ್ಟ್ರೀಯ ಪ್ರೌಢ ಶಿಕ್ಷಣದ ಸಾಮಾನ್ಯ ಪ್ರಮಾಣ ಪತ್ರ (ಐಜಿಸಿಎಸ್ಇ), ಅಮೆರಿಕನ್ ಎಂಬೆಸಿ (ಎಪಿ), ಸಿಬಿಎಸ್ಇ ಮತ್ತು ಐಸಿಎಸ್ಇ ಪಠ್ಯಕ್ರಮ ಮಂಡಳಿಗಳೊಂದಿಗೆ ಸಂಯೋಜನೆ ಹೊಂದಿರುತ್ತವೆ. ಈ ಶಾಲೆಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವುದರ ಜೊತೆಗೆ, ಉನ್ನತ ಶೈಕ್ಷಣಿಕ ಗುಣಮಟ್ಟ ಮತ್ತು ಜಾಗತಿಕ ದೃಷ್ಟಿಕೋನಗಳಿಗೆ ಹೆಸರುವಾಸಿಯಾಗಿವೆ.

ಇಂಥ ಶಾಲೆಗಳಲ್ಲಿ ಸೃಜನಶೀಲ ಚಟುವಟಿಕೆಗಳಿಗೆ ಒತ್ತು ನೀಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಮತ್ತು ಅನ್ವಯಿಸಲು ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಈ ಶಾಲೆಗಳಲ್ಲಿ ಕಲಿತವರು ಸಮಾಜದಲ್ಲಿ ಪ್ರತಿಷ್ಠಿತ ಹಾಗೂ ಆಯಕಟ್ಟಿನ ಜಾಗಗಳನ್ನು ಸುಲಭವಾಗಿ ಆಕ್ರಮಿಸುತ್ತಾರೆ.

ಬಂಡವಾಳಶಾಹಿ ವ್ಯವಸ್ಥೆಯನ್ನು ತಿರಸ್ಕರಿಸುವ ಮತ್ತು ಸಮಾನತೆಯ ಸಮ ಸಮಾಜವನ್ನು ಸೃಷ್ಟಿಸುವ ಸಾಮಾಜಿಕ ಪರಿವರ್ತನೆಯ ಗುಣವನ್ನು ಈ ಬಗೆಯ ಶಿಕ್ಷಣ ವ್ಯವಸ್ಥೆಯಿಂದ ಕಾಣಲು ಕಷ್ಟಸಾಧ್ಯ. ಹೀಗಿದ್ದಾಗ್ಯೂ ಸಾಮಾಜಿಕ ಪರಿವರ್ತನೆ ಮತ್ತು ಅಸಮಾನತೆಯ ವಿರುದ್ಧ ಕಿಡಿ ಹತ್ತಿಸಬಲ್ಲ ಆಂತರಿಕ ಸುಪ್ತ ಶಕ್ತಿಯನ್ನು ಶಿಕ್ಷಣ ಹೊಂದಿದೆ.

ಸಮಾನತೆಯ ಸಮ ಸಮಾಜವನ್ನು ಸೃಷ್ಟಿಸಲು ಜನಾಂದೋಲನ ರೂಪಿಸುವ ಸಾಧನವನ್ನಾಗಿ ಶಿಕ್ಷಣವನ್ನು ಬಳಸಿಕೊಳ್ಳಬಹುದು ಎಂಬ ಅಂಶವನ್ನು ಹಲವು ದಾರ್ಶನಿಕರು ಪ್ರತಿಪಾದಿಸಿದ್ದಾರೆ. ಶಿಕ್ಷಣ ಸ್ಥೂಲವಾಗಿ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯ ಸರಳ ಪ್ರತಿಬಿಂಬವಾಗಿರದೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಕಾಲಕಾಲಕ್ಕೆ ಬದಲಾಯಿಸಬಲ್ಲ ಸುಪ್ತ ಶಕ್ತಿಯನ್ನೂ ಹೊಂದಿದೆ ಎಂದು ಆಂಟೋನಿಯೊ ಗ್ರಾಮ್ಸಿ ಹೇಳುತ್ತಾರೆ.

ಬಂಡವಾಳಶಾಹಿ ವ್ಯವಸ್ಥೆಯು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ತಾನು ಪ್ರತಿಪಾದಿಸುವ ನಂಬಿಕೆ, ಮೌಲ್ಯ ಮತ್ತು ದೃಷ್ಟಿಕೋನವನ್ನು ಶಿಕ್ಷಣ ವ್ಯವಸ್ಥೆಯನ್ನು ಬಳಸಿ ಕಾನೂನುಬದ್ಧಗೊಳಿಸಲು ತನ್ನ ಪ್ರಾಬಲ್ಯವನ್ನು ಸಾಧನವಾಗಿ ಬಳಸುತ್ತದೆ. ಇದೇ ಸಂದರ್ಭದಲ್ಲಿ ಶಿಕ್ಷಣದಲ್ಲಿ ಇರುವ ಸುಪ್ತ ಕ್ರಾಂತಿಕಾರಿ ಗುಣವು ಬಂಡವಾಳಶಾಹಿ ವ್ಯವಸ್ಥೆ ಯಲ್ಲಿ ಇರುವ ವೈರುಧ್ಯಗಳನ್ನು ತೆರೆದಿಡುತ್ತದೆ. ಆ ಮೂಲಕ ಹೊಸ ಬಗೆಯ ನಂಬಿಕೆ, ಮೌಲ್ಯ ಹಾಗೂ ಮಾನವ ಸಂಬಂಧಗಳನ್ನು ಪುನರ್ ಸ್ಥಾಪಿಸುವ ಸಲುವಾಗಿ ‘ಪ್ರತಿ– ಪ್ರಾಬಲ್ಯ’ ಸೃಷ್ಟಿಸಿ, ಸಾಮಾಜಿಕ ಪರಿವರ್ತನೆಗೆ ನಾಂದಿಯಾಗುತ್ತದೆ.

ಸಾಮಾಜಿಕ ಬದಲಾವಣೆಗೆ ಪೂರಕವಾಗಿ ಶಿಕ್ಷಣವನ್ನು ಬಳಸಿಕೊಳ್ಳುವುದಕ್ಕೆ ಮಾದರಿಗಳಾಗಿ ಬಿ.ಆರ್. ಅಂಬೇಡ್ಕರ್, ನೆಲ್ಸನ್ ಮಂಡೇಲಾ, ಜಾರ್ಜ್ ವಾಷಿಂಗ್ಟನ್, ಎಮಿಲಿಯಾನೊ ಜಪಾಟಾ ಅಂಥವರು ನಮಗೆ ಸ್ಫೂರ್ತಿಯಾಗುತ್ತಾರೆ. ಮುಖ್ಯವಾಹಿನಿಯ ಶಿಕ್ಷಣದ ಭಾಗವಾಗಿಯೇ ಇದ್ದು, ಹೊಸ ಬಗೆಯ ನಾಯಕತ್ವ ನೀಡಿದ ಈ ನಾಯಕರು ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ ಚರಿತ್ರೆಯಲ್ಲಿ ಉಳಿದಿದ್ದಾರೆ.

ಲೇಖಕ: ಅಭಿವೃದ್ಧಿ ಶಿಕ್ಷಣ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.