ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿರುವ ಹಿಂದೂಫೋಬಿಯಾ ಸಮಸ್ಯೆ: ಎ. ಸೂರ್ಯ ಪ್ರಕಾಶ್ ಲೇಖನ

ಕೇಂದ್ರ ಸರ್ಕಾರ ಈ ಸಂಗತಿಯನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಲಿರುವುದು ಮಹತ್ವದ ಬೆಳವಣಿಗೆ
Published 15 ಮೇ 2023, 19:58 IST
Last Updated 15 ಮೇ 2023, 19:58 IST
ಅಕ್ಷರ ಗಾತ್ರ

ಹಿಂದೂಗಳ ಕುರಿತು ಅನಗತ್ಯ ಭೀತಿ ಮತ್ತು ದ್ವೇಷಭಾವನೆ (ಹಿಂದೂಫೋಬಿಯಾ) ಹರಡುವ ಯತ್ನವು ಜಗತ್ತಿನ ಎಲ್ಲೆಡೆ ಹೆಚ್ಚಾಗುತ್ತಿರುವುದನ್ನು ತಡೆಯಲು ಕೇಂದ್ರ ಸರ್ಕಾರವು ಇನ್ನಷ್ಟು ಕೆಲಸ ಮಾಡಬೇಕು. ಹಿಂದೂಫೋಬಿಯಾ ಹರಡುವ ಕೆಲಸದಲ್ಲಿ ಇಸ್ಲಾಮಿಕ್‌ ತೀವ್ರವಾದಿಗಳು ಮುಂಚೂಣಿಯಲ್ಲಿದ್ದಾರೆ. ಇವರ ಜೊತೆ ಅಮೆರಿಕ ಮತ್ತು ಯುರೋಪಿನಲ್ಲಿ ಇರುವ ಭಾರತ ವಿರೋಧಿ ವಿದ್ವಾಂಸರೂ ಇದ್ದಾರೆ.

ಹೆನ್ರಿ ಜಾಕ್ಸನ್ ಸೊಸೈಟಿ (ಎಚ್‌ಜೆಎಸ್) ಬ್ರಿಟನ್ನಿನ ಶಾಲಾ ವಿದ್ಯಾರ್ಥಿಗಳು ಮತ್ತು ಅವರ ಪಾಲಕರ ನಡುವೆ ನಡೆಸಿದ ಸಮೀಕ್ಷೆಯು, ಹೆಚ್ಚುತ್ತಿರುವ ಈ ಸಮಸ್ಯೆಗೆ ತಾಜಾ ಸಾಕ್ಷ್ಯ ನೀಡಿದೆ. ಸಮೀಕ್ಷೆಯು ತನ್ನ ಸಾರಾಂಶದಲ್ಲಿ, ‘ಬ್ರಿಟನ್ನಿನ ಶಾಲೆಗಳಲ್ಲಿ ಹಿಂದೂಗಳನ್ನು ಗುರಿಯಾಗಿಸಿ ನಡೆಯುತ್ತಿರುವ ತಾರತಮ್ಯದ ಬಗ್ಗೆ ತನಿಖೆ ನಡೆಸಿ ಸಿದ್ಧಪಡಿಸಿದ ಮೊದಲ ವರದಿ ಇದು. ಹಿಂದೂ ದ್ವೇಷವನ್ನು ಗುರುತಿಸಿ, ಅದನ್ನು ತಡೆಯಲು ಶಾಲೆಗಳು ಸಜ್ಜಾಗಿಲ್ಲವೆಂಬುದನ್ನು, ಸಜ್ಜಾಗಿಲ್ಲದಿರುವಿಕೆ ಎಷ್ಟರಮಟ್ಟಿಗೆ ಇದೆ ಎಂಬುದನ್ನು ಇಲ್ಲಿ ಹೇಳಲಾಗಿದೆ’ ಎಂದು ಬರೆಯಲಾಗಿದೆ.

ಬೇರೆ ದೇಶಗಳಿಂದ ಬಂದವರ ಬಗ್ಗೆ ಪೂರ್ವಗ್ರಹ, ಅಸಹಿಷ್ಣುತೆ ಪ್ರಮುಖ ಸಮಸ್ಯೆ ಎಂದು ಸಮೀಕ್ಷೆ ಹೇಳುತ್ತದೆ. ಶ್ವೇತವರ್ಣೀಯ ವಿದ್ಯಾರ್ಥಿಗಳು ಹಿಂದೂ ಸಹಪಾಠಿಗಳನ್ನು ತಮ್ಮ ಚಟುವಟಿಕೆಗಳಲ್ಲಿ ಸೇರಿಸಿಕೊಳ್ಳುವುದಿಲ್ಲ. ಹಿಂದೂ ವಿದ್ಯಾರ್ಥಿಗಳು ಬಹುದೇವತೋಪಾಸಕರಾದ ಕಾರಣ, ಅವರನ್ನು ನಿಂದಿಸುತ್ತಾರೆ. ಮೂರ್ತಿಪೂಜೆಯನ್ನು, ಬಹುದೇವತೆಗಳ ಆರಾಧನೆಯನ್ನು ಅಣಕಿಸಲಾಗುತ್ತದೆ. ಇಸ್ಲಾಮಿಕ್‌ ತೀವ್ರವಾದ ಹಾಗೂ ಅದು ಹಿಂದೂ ಮಕ್ಕಳ ಮೇಲೆ ಉಂಟುಮಾಡುತ್ತಿರುವ ಪರಿಣಾಮ ಕೂಡ ಕಳವಳಕಾರಿ. ಹಿಂದೂ ವಿದ್ಯಾರ್ಥಿಗಳನ್ನು ಮುಸ್ಲಿಂ ವಿದ್ಯಾರ್ಥಿಗಳು /////‘ಕಾಫಿರ’ರು ಎಂದು ಕರೆಯುತ್ತಾರೆ, ಇಸ್ಲಾಂಗೆ ಮತಾಂತರವಾಗಲು ಹೇಳುತ್ತಾರೆ. ಇಲ್ಲವಾದರೆ, ನರಕದಲ್ಲಿ ಜೀವಿಸಲು ಸಿದ್ಧರಾಗಿ ಎನ್ನುತ್ತಿದ್ದಾರೆ.

ಬ್ರಿಟನ್ನಿನ ಒಂದು ಸಾವಿರ ಶಾಲೆಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿರುವ ಕಾರಣ ಈ ಸಮೀಕ್ಷೆಯು ಬಹಳ ದೊಡ್ಡದು. ಬ್ರಿಟನ್ನಿನಲ್ಲಿ ಶೇಕಡ 1.7ರಷ್ಟು ಜನ ಹಿಂದೂಗಳು, ಅಲ್ಲಿನ ಮೂರನೆಯ ಅತಿದೊಡ್ಡ ಧರ್ಮ ಹಿಂದೂ ಧರ್ಮ. ಆದರೆ, ಭಾರತ ಮೂಲದ ಬ್ರಿಟಿಷ್ ಹಿಂದೂಗಳ ಅನುಭವ ಏನು ಎಂಬ ಬಗ್ಗೆ ಹೆಚ್ಚಿನ ಸಂಶೋಧನೆಗಳು ಆಗಿಲ್ಲ. 2022ರ ಸೆಪ್ಟೆಂಬರ್‌ನಲ್ಲಿ ಬರ್ಮಿಂಗ್‌ಹ್ಯಾಂ ಮತ್ತು ///////ಲೈಸೆಸ್ಟರ್‌ನಲ್ಲಿ ಹಿಂದೂಗಳ ಮೇಲೆ ದಾಳಿಗಳು ನಡೆದವು, ಅವರ ಆಸ್ತಿ ಹಾಗೂ ಪೂಜಾಸ್ಥಳಗಳನ್ನು ಹಾಳು ಮಾಡಲಾಯಿತು. ಹಿಂದೂ ಧಾರ್ಮಿಕ ಆಚರಣೆಗಳನ್ನು ಅನುಸರಿಸುವ ರಿಷಿ ಸುನಕ್‌ ಬ್ರಿಟನ್ನಿನ ಪ್ರಧಾನಿ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿರುವ ಹಿಂದೂಗಳು ಈ ವಾಸ್ತವದ ಬಗ್ಗೆ ಅರಿವು ಹೊಂದಿರಬೇಕು.

ಈ ವರದಿಯು ಕಂಡುಕೊಂಡಿರುವ ಸಂಗತಿಗಳು ಕಳವಳ ಮೂಡಿಸುವಂತಿವೆ. ವರದಿ ಆಧರಿಸಿ ಕೇಂದ್ರ ಸರ್ಕಾರವು ತಕ್ಷಣವೇ ಕ್ರಮ ಕೈಗೊಳ್ಳಬೇಕಿದೆ. ತಮ್ಮ ಮಕ್ಕಳು ಹಿಂದೂ ದ್ವೇಷವನ್ನು ಎದುರಿಸಿದ್ದಾರೆ, ಅದರ ಪರಿಣಾಮವಾಗಿ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇಕಡ 51ರಷ್ಟು ಹಿಂದೂ ಪಾಲಕರು ಹೇಳಿದ್ದಾರೆ. ಹಿಂದೂ ಧರ್ಮದ ಕುರಿತ ಬೋಧನೆಯು, ಹಿಂದೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿದ ಧಾರ್ಮಿಕ ತಾರತಮ್ಯಕ್ಕೆ ಇಂಬುಕೊಡುವ ರೀತಿಯಲ್ಲಿ ಇದೆ ಎಂದು ಕೂಡ ಸಮೀಕ್ಷೆ ಕಂಡುಕೊಂಡಿದೆ.

ಹಿಂದೂಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಯುತ್ತಿದೆ. ಎಂಟು ಬಾರಿ ಹಲ್ಲೆ ನಡೆದಿರುವುದನ್ನು, ಅವುಗಳ ಪೈಕಿ ಒಂದು ಬಾರಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಗೋಮಾಂಸ ಎಸೆದಿದ್ದನ್ನು ಸಮೀಕ್ಷೆ ಉಲ್ಲೇಖಿಸಿದೆ. ಹಿಂದೂ ಧರ್ಮವನ್ನು ಶಾಲೆಗಳಲ್ಲಿ ಬೋಧಿಸುವ ಕ್ರಮದ ಪರಿಣಾಮವಾಗಿ ವಿದ್ಯಾರ್ಥಿಯೊಬ್ಬ ‘ಹಿಂದೂ ನಿಂದನೆ’ಗೆ ಗುರಿಯಾಗಿದ್ದನ್ನು, ಆ ವಿದ್ಯಾರ್ಥಿಯು ಮೂರು ಬಾರಿ ಶಾಲೆ ಬದಲಿಸಬೇಕಾಗಿ ಬಂದಿದ್ದನ್ನು ಸಮೀಕ್ಷೆ ಗುರುತಿಸಿದೆ.

ಹಿಂದೂ ಧರ್ಮದ ಬಗೆಗಿನ ಬೋಧನೆಯ ಗುಣಮಟ್ಟವು ಹಿಂದೂ ವಿದ್ಯಾರ್ಥಿಗಳ ಪಾಲಕರಿಗೆ ಹೆಚ್ಚು ಕಳವಳ ಮೂಡಿಸುವಂತೆ ಇದೆ ಎಂಬುದು ವರದಿಯಲ್ಲಿರುವ ಅಂಶ. ‘ಹಿಂದೂ ಧರ್ಮವನ್ನು ಅಬ್ರಹಾಮಿಕ್ ನಂಬಿಕೆಗಳ ದೃಷ್ಟಿಕೋನದಿಂದ ಕಲಿಸಲಾಗುತ್ತಿದೆ. ದೇವರ ವಿಚಾರವಾಗಿ ಸರಿಯಲ್ಲದ ರೀತಿಯಲ್ಲಿ ಆದ್ಯತೆ ನೀಡಲಾಗಿದೆ. ಪ್ರಮುಖ ಪರಿಕಲ್ಪನೆಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ತಪ್ಪು ಕಲ್ಪನೆಗಳೇ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನಡೆಯುವ ನಿಂದನೆಗೆ ನೇರ ಕಾರಣ’ ಎಂದು ಪಾಲಕರು ಹೇಳಿದ್ದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬ್ರಿಟನ್ನಿನ ಕನ್ಸರ್ವೇಟಿವ್ ಪಕ್ಷದ ಸಂಸದ ಬೆನ್ ಎವೆರಿಟ್ ಅವರು ವರದಿಗೆ ಮುನ್ನುಡಿ ಬರೆದಿದ್ದಾರೆ. ‘ಹಿಂದೂ ಧರ್ಮದ ಕುರಿತ ಬೋಧನೆಯಲ್ಲಿ ಇರುವ ಸಮಸ್ಯಾತ್ಮಕ ನಡೆಯು ಪೂರ್ವಗ್ರಹ ಬೆಳೆಸಲು ಕಾರಣವಾಗುತ್ತಿರಬಹುದು’ ಎಂದು ಅವರು ಭಾವಿಸಿದ್ದಾರೆ. ಸಮೀಕ್ಷೆಯು ಕಂಡುಕೊಂಡಿರುವ ಅಂಶಗಳು ಬಹಳ ಮಹತ್ವವಾದವು ಎಂದು ಕೂಡ ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಅಡಿಯಲ್ಲಿ ದೇಶದ ವಿದೇಶಾಂಗ ವ್ಯವಹಾರಗಳನ್ನು ನೋಡಿಕೊಳ್ಳುವವರು ಈ ಸಮಸ್ಯೆಯ ಕುರಿತಂತೆ ಎಚ್ಚೆತ್ತಿದ್ದಾರೆ. ಹಿಂದೂಫೋಬಿಯಾ ಸಮಸ್ಯೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿನ ಅತ್ಯುನ್ನತ ವೇದಿಕೆಯಾಗಿರುವ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಲು ಸರ್ಕಾರ ತೀರ್ಮಾನ ಮಾಡಿರುವುದು ಮೈಲಿಗಲ್ಲು ಎಂಬಂತಹ ಬೆಳವಣಿಗೆ. ಅಂತರರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಸಮ್ಮೇಳನದಲ್ಲಿ ಮಾತನಾಡುವ ಸಂದರ್ಭದಲ್ಲಿ, ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಟಿ.ಎಸ್.ತಿರುಮೂರ್ತಿ ಅವರು, ‘ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಇಸ್ಲಾಮೊಫೋಬಿಯಾ, ಕ್ರಿಶ್ಚಿಯಾನೊಫೋಬಿಯಾ ಮತ್ತು ಸೆಮೆಟಿಕ್ ವಿರೋಧಿ ಭಾವನೆಗಳ ಬಗ್ಗೆ ಅರಿವಿದೆ. ಆದರೆ, ದೇಶಗಳು ಹಿಂದೂಫೋಬಿಯಾ ಬಗ್ಗೆ ಯಾವತ್ತೂ ಮಾತನ್ನೇ ಆಡದಿದ್ದುದು ಏಕೆ’ ಎಂದು ಪ್ರಶ್ನಿಸಿದ್ದಾರೆ.

ಹಿಂದೂ, ಬೌದ್ಧ, ಸಿಖ್ ಧರ್ಮಗಳ ವಿಚಾರವಾಗಿ ಇರುವ ಫೋಬಿಯಾ ಹಾಗೂ ಆ ಒಂದು ಸಮಸ್ಯೆಯನ್ನು ಗುರುತಿಸುವ ಕೆಲಸವೇ ಆಗದಿರುವುದು ಯಾವ ಕಾರಣಕ್ಕಾಗಿ ಎಂದು ತಿರುಮೂರ್ತಿ ಅವರು ಪ್ರಶ್ನಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿ ಧರ್ಮಗಳ ಕುರಿತ ಚರ್ಚೆಯಲ್ಲಿ ಹೆಚ್ಚಿನ ಸಮತೋಲನ ಸಾಧ್ಯವಾಗಬೇಕು ಎಂದಾದರೆ, ಈ ಧರ್ಮಗಳನ್ನು ಗುರಿಯಾಗಿಸಿಕೊಂಡಿರುವ ದ್ವೇಷಭಾವನೆ, ಪೂರ್ವಗ್ರಹಗಳನ್ನು ಕೂಡ ಗುರುತಿಸುವ ಕೆಲಸ ಆಗಬೇಕು.

ಈ ದೇಶದ ಬಹುಸಂಖ್ಯೆಯ ಜನ ಅನುಸರಿಸುವ ಧರ್ಮದ ಪರವಾಗಿ ಕೇಂದ್ರ ಸರ್ಕಾರವು ದನಿ ಎತ್ತಿರುವುದು ಇದು ಮೊದಲ ಬಾರಿ. ಪಂಡಿತ್ ಜವಾಹರಲಾಲ್ ನೆಹರೂ ಅವರ ಕಾಲದಿಂದಲೂ ನಕಲಿ ಜಾತ್ಯತೀತವಾದದ ಚಿಪ್ಪಿನೊಳಗೆ ಬೆಚ್ಚಗೆ ಅವಿತುಕೊಳ್ಳುತ್ತಿದ್ದ ದೇಶದ ವಿದೇಶಾಂಗ ವ್ಯವಹಾರಗಳ ಅಧಿಕಾರಿಗಳು, ಅದರಿಂದ ಹೊರಬಂದು ಹಿಂದೂ ಧರ್ಮಕ್ಕೆ ಎದುರಾಗಿರುವ ಅಪಾಯಗಳ ಬಗ್ಗೆ ಮಾತನಾಡಿರುವುದು ಕೂಡ ಇದೇ ಮೊದಲು.

ದೇಶದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಬ್ರಿಟನ್ನಿನ ////ಲೈಸೆಸ್ಟರ್ ಮತ್ತು ಬರ್ಮಿಂಗ್‌ಹ್ಯಾಂನಲ್ಲಿ ಹಿಂದೂಗಳ ಸ್ಥಳಗಳ ಮೇಲೆ ನಡೆದ ದಾಳಿ ಕುರಿತ ವಿಚಾರ ಪ್ರಸ್ತಾಪಿಸಿದ್ದಾರೆ. ಹಿಂದೂಗಳ ಪೂಜಾ ಸ್ಥಳಗಳನ್ನು ರಕ್ಷಿಸುವಂತೆ ತಮ್ಮ ಬ್ರಿಟನ್ನಿನ ಸಹವರ್ತಿಗೆ ಆಗ್ರಹಿಸಿದ್ದಾರೆ. ಅದೇನೇ ಇದ್ದರೂ, ಈಗ ಎಚ್‌ಜೆಎಸ್ ವರದಿಯಲ್ಲಿ ಹೇಳಿರುವ ಅಂಶಗಳು ಎಚ್ಚರಿಕೆಯ ಕರೆಗಂಟೆ ಇದ್ದಂತೆ. ಅಮೆರಿಕ ಮತ್ತು ಯುರೋಪಿನಲ್ಲಿ ಲಕ್ಷಾಂತರ ಮಂದಿ ಹಿಂದೂಗಳು ನೆಲೆ ಕಂಡುಕೊಂಡಿದ್ದಾರೆ. ಕೇಂದ್ರ ಸರ್ಕಾರವು ಈ ವರದಿಯಲ್ಲಿನ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಪಾಶ್ಚಿಮಾತ್ಯ ದೇಶಗಳಲ್ಲಿ ಆಗುತ್ತಿರುವ ಕೆಲವು ಬೆಳವಣಿಗೆಗಳನ್ನು ನಿಗ್ರಹಿಸಲು ಕಾರ್ಯತಂತ್ರವೊಂದನ್ನು ರೂಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT