ತುಳುನಾಡಿಗೆ ಮಹಾತ್ಮ ಗಾಂಧೀಜಿ ಬಂದ ಕಾಲದ ಹಾಸ್ಯರಸ ಪ್ರಕರಣವೊಂದು ಹೀಗಿದೆ:

ಗಾಂಧಿ ಮಂಗಳೂರಿಗೆ ಬಂದಿದ್ದಾಗ ಅಲ್ಲಿಗೆ ಹೋಗಲು ಸಾಧ್ಯವಾಗದೆ ಇದ್ದ ರೈತಾಪಿ ವರ್ಗದವರು, ತಾವೂ ಕೂಡ ಗಾಂಧಿ ಹೇಳಿದ್ದರಲ್ಲಿ ಏನಾದರೂ ಮಾಡಬೇಕೆಂದು ನಿರ್ಧರಿಸಿದರು. ಅವರ ಊರಿನ ಗಾಂಧಿ ಅನುಯಾಯಿ ಜಮೀನ್ದಾರನ ಬಳಿಗೆ ಹೋಗಿ ತಮ್ಮ ಇರಾದೆಯನ್ನು ಹೇಳಿದರು. ‘ಊರಿನಲ್ಲಿ ಗಡಂಗು ರದ್ದಾಗಬೇಕು’ ಎಂದು ಘೋಷಣೆ ಕೂಗುತ್ತಾ ಜನಜಾಗೃತಿ ಮೂಡಿಸಲು ಜಮೀನ್ದಾರ ಸಲಹೆ ನೀಡಿದ. ಜಾಥಾ ಹೊರಟಾಗ ಶರಾಬು ಅಂಗಡಿಯವನಿಗೆ ಚಿಂತೆ ಶುರುವಾಯಿತು. ಹೋರಾಟಗಾರರನ್ನು ಒಲಿಸಿಕೊಳ್ಳಲು ಆತ ಜಾಥಾ ಹೋಗುತ್ತಿದ್ದವರಿಗೆ ಉಚಿತ ಶರಾಬು ಹಂಚಿಕೆಯ ವ್ಯವಸ್ಥೆ ಮಾಡಿದ. ಜಾಥಾ ಹೋಗುತ್ತಿದ್ದವರಲ್ಲಿ ಬಹುತೇಕರು ಉಚಿತವಾಗಿ ಸಿಕ್ಕಿದ್ದನ್ನು ಬೇಕಾದಷ್ಟು ಕುಡಿದರು. ಹಲವರದ್ದು ನಾಲಗೆ ತೊದಲತೊಡಗಿತು. ಜಾಥಾ ಮುಂದೆ ಮುಂದೆ ಹೋಗುತ್ತಿದ್ದ ಹಾಗೆ ತುಳು ಭಾಷೆಯಲ್ಲಿ ‘ಗಡಂಗ್ ರದ್ದಾವೊಡು’ ಘೋಷಣೆ, ‘ಗಡಂಗ್ ರಡ್ಡಾವೊಡು’ (ಶರಾಬು ಅಂಗಡಿ ಎರಡಾಗಬೇಕು) ಎಂದು ಬದಲಾಯಿತು. ನಂತರ ಜಮೀನ್ದಾರನ ಪ್ರವೇಶ ಆಗಿ, ಒಂದಷ್ಟು ಮಂದಿ ಮದ್ಯಪಾನ ತ್ಯಜಿಸಿದ್ದೆಲ್ಲ ನಡೆದಿತ್ತು. ಆ ವಿಚಾರ ಇಲ್ಲಿ ಮುಖ್ಯ ಅಲ್ಲ. ಗಾಂಧಿ ತತ್ತ್ವ, ಗಾಂಧಿ ಚಿಂತನೆ, ರಾಷ್ಟ್ರೀಯ ಉದ್ದೇಶ ಇಂಥವುಗಳನ್ನೆಲ್ಲ ವೈಚಾರಿಕ ಸ್ಪಷ್ಟತೆಯಿಂದ ಗ್ರಹಿಸಲಾಗದ ಜನರೂ, ‘ಏನೋ ಒಳ್ಳೆಯದನ್ನು ಮಾಡುತ್ತಿರುವ ಗಾಂಧಿ ಅವರನ್ನು ನಾವು ಬೆಂಬಲಿಸಬೇಕು’ ಎಂಬ ಭಾವವನ್ನು ತಳೆದದ್ದು ಮುಖ್ಯ. ರೈತಾಪಿ ವರ್ಗ ಊಟಕ್ಕೂ ಕಷ್ಟಪಡುತ್ತಿದ್ದ ಕಾಲವದು. ಆದರೂ, ಆ ಜನರನ್ನು ಸೆಳೆಯಲು ಗಾಂಧಿ ಶಕ್ತರಾಗಿದ್ದರು.

ಗಾಂಧಿ ಗೊತ್ತಿಲ್ಲದ ಯಾವ ಸ್ಥಳವೂ ಬಹುಶಃ ಆಗ ಭಾರತದಲ್ಲಿ ಇರಲಿಲ್ಲ, ಈಗಲೂ ಇಲ್ಲ. ಸಂಪರ್ಕ ಮಾಧ್ಯಮಗಳು ತೀರಾ ದುರ್ಬಲವಿದ್ದ ಕಾಲದಲ್ಲಿ ಇಡೀ ಭಾರತವನ್ನು ಸಂಪರ್ಕಿಸಿದವರು ಗಾಂಧಿ. ಯಾವ ಊರಿಗೆ ಹೋದರೂ ತಮ್ಮ ಊರಿನ ಈ ಜಾಗಕ್ಕೆ ಗಾಂಧಿ ಬಂದಿದ್ದರು, ಆ ಜಾಗದಲ್ಲಿ ನಿಂತು ಭಾಷಣ ಮಾಡಿದ್ದರು, ತಮ್ಮೂರಿಗೆ ಗಾಂಧಿ ಬಂದಿದ್ದಾಗ ಹೀಗೆ ಆಗಿತ್ತು ಎಂದು ಹೇಳುವ ಗಾಂಧಿ ನೆನಪುಗಳು ಇವೆ. ಭೂಮಿಯನ್ನು ಒಂದೂವರೆ ಬಾರಿ ಸುತ್ತಿದಷ್ಟು ದೂರ ನಡೆದ ಗಾಂಧಿ ಈ ರೀತಿಯ ಅದ್ಭುತ ಸಂಪರ್ಕ ಜಾಲವನ್ನು ರೂಪಿಸಿದ್ದರು. ಆ ಸಂಪರ್ಕವೇ ಸಂಘಟನೆಯಾಗಿ ಇಂದಿನ ಭಾರತದ ನಿರ್ಮಾಣವಾಗಿದೆ.

ರಾಜರುಗಳ ಕಾಲದಲ್ಲೇ ಬ್ರಿಟಿಷರ ವಿರುದ್ಧ ಸಾಕಷ್ಟು ಯುದ್ಧಗಳಾಗಿದ್ದವು. ಬ್ರಿಟಿಷರನ್ನು ಎದುರಿಸಿ ದವರಿಗೆಲ್ಲ ದೇಶದ ಎಲ್ಲ ಭಾಗದವರೂ ಒಟ್ಟಾಗಿ ಎದುರಿಸಿದರೆ ಮಾತ್ರ ಬ್ರಿಟಿಷರನ್ನು ಹೊರಗಟ್ಟಬಹುದು ಎಂದು ಗೊತ್ತಿರಲಿಲ್ಲ ಎಂದು ಭಾವಿಸಬೇಕಾಗಿಲ್ಲ. ಷಾ ಆಲಂ, ಮೀರ್ ಖಾಸಿಂ, ಟಿಪ್ಪು ಸುಲ್ತಾನ್, ನವಾಬ್ ವಜೀದ್ ಆಲಿ ಷಾ, ನಾನಾ ಫಡ್ನವೀಸ್ ಮುಂತಾದ ರಾಜರುಗಳೆಲ್ಲ ಬ್ರಿಟಿಷರ ವಿರುದ್ಧ ಎಲ್ಲರನ್ನೂ ಸಂಘಟಿಸಲು ಹೊರಟವರೇ ಆಗಿದ್ದರು. 1834–37ರಲ್ಲಿ ರೈತರೇ ನಡೆಸಿದ ಕೊಡಗು ಮತ್ತು ಕರಾವಳಿ ಬಂಡಾಯದಲ್ಲಿ ಹುಲಿಕಡಿದ ನಂಜಯ್ಯ ಎಂಬ ಬಂಡಾಯಗಾರ ಹೂಜಿ (ಸಂಕೇತ) ತೆಗೆದುಕೊಂಡು ಲಾಹೋರ್ವರೆಗೂ ಹೋಗಿದ್ದರು. ಅಂದರೆ ಎಲ್ಲರೂ ಒಟ್ಟಾಗಿಯೇ ಬ್ರಿಟಿಷರನ್ನು ಎದುರಿಸಬೇಕು ಎನ್ನುವುದು ಹೋರಾಟಗಾರರಿಗೂ ಗೊತ್ತಿತ್ತು. ಆದರೆ, ಆ ಕಾಲಕ್ಕೆ ಹೋರಾಟ ಎಂದರೆ ಕೊಲ್ಲುವುದು
ಅಥವಾ ಸಾಯುವುದು. ಮನುಷ್ಯನನ್ನು ಹೋರಾಟ ದಿಂದ ಹಿಂದಕ್ಕೆ ಎಳೆಯುವ ಪ್ರಬಲ ಶಕ್ತಿ ಎಂದರೆ ಸಾವಿನ ಭಯ. ಗಾಂಧೀಜಿಯವರ ಹೋರಾಟದ ಸ್ವರೂಪ ಮಾಡಿದ ಮಹತ್ಕಾರ್ಯವೆಂದರೆ, ಮನುಷ್ಯನ ಸಾವಿನ ಭಯವನ್ನು ನಿವಾರಿಸಿದ್ದು.

ಸತ್ಯಾಗ್ರಹ ಮಾಡುವಾಗ ಬಂಧಿತರಾದರೆ ಹೆಚ್ಚೆಂದರೆ ನಾಲ್ಕೈದು ವರ್ಷ ಜೈಲಾಗಬಹುದು; ಮರಣದಂಡನೆ ಅಂತೂ ಆಗುವುದಿಲ್ಲ ಎಂದು ಯಾವಾಗ ಖಾತರಿಯಾಯಿತೋ ಆಗ ಜನ ಸ್ವಾತಂತ್ರ್ಯ ಹೋರಾಟಕ್ಕೆ ಪ್ರವಾಹದೋಪಾದಿಯಲ್ಲಿ ಬಂದರು. ದೇಶಕ್ಕಾಗಿ ಮಗ ಸಾಯಲಿ ಎಂದು ಬಯಸುವ ತಾಯಿ ವಿರಳ. ಆದರೆ, ಸಾವಿನ ಭಯದಿಂದ ಮುಕ್ತವಾಗಿದ್ದ ಗಾಂಧೀಜಿಯ ಹೋರಾಟ ಮಹಿಳೆಯರನ್ನು ತಲಪಿತು. ಒಂದು ಕುಟುಂಬದಲ್ಲಿ ಒಬ್ಬನೇ ಗಂಡು ಮಗ ಇದ್ದರೆ ಆತ ಸತ್ಯಾಗ್ರಹದಲ್ಲಿ ಭಾಗವಹಿಸತಕ್ಕದ್ದಲ್ಲ ಎನ್ನುವ ಗಾಂಧೀಜಿಯವರ ನಿಯಮದಿಂದಾಗಿ, ದೇಶದ ಕೆಲಸಕ್ಕಾಗಿ ಕುಟುಂಬ ತನ್ನ ಮಕ್ಕಳನ್ನು ಕಳೆದು ಕೊಂಡು ದುರ್ಬಲಗೊಳ್ಳುವುದು ತಪ್ಪಿತು. ಇತ್ತೀಚೆಗೆ, ಗಾಂಧಿ–ನೆಹರೂ ಅವರನ್ನು ಅಂಡಮಾನಿನ ಕರಿನೀರಿನ ಶಿಕ್ಷೆಗೆ ಯಾಕೆ ಒಳಪಡಿಸಲಿಲ್ಲ ಎಂದು ಕೇಳುವವರಿಗೆ, ‘ಧಿಕ್ಕಾರ ಕೂಗಿದವನಿಗೂ ಕೊಲೆ ಮಾಡಿದವನಿಗೂ ಒಂದೇ ಶಿಕ್ಷೆ ಇರುವುದಿಲ್ಲ’ ಎಂದು ಗೊತ್ತಿಲ್ಲದಿರುವುದು ಜಾಣ ದಡ್ಡತನ.

ಒಂದೇ ಉದ್ದೇಶದ ಹೋರಾಟಕ್ಕೆ ದೇಶದ ಎಲ್ಲ ಭಾಗಗಳಿಂದ ಜನರು ತೊಡಗಿಕೊಂಡಾಗ ಅನುಭವಗಳ ವಿನಿಮಯವಾಗುತ್ತವೆ, ಭಾವನೆಗಳ ಹೊಂದಾಣಿಕೆ ಏರ್ಪಡುತ್ತದೆ, ಎಲ್ಲರ ನಡುವೆಯೂ ಸಾಮಾನ್ಯತೆಯನ್ನು ರೂಪಿಸುವ ಸಂಗತಿಗಳು ಪ್ರಕಟವಾಗುತ್ತವೆ. ‘ನಾವೆಲ್ಲರೂ ಒಂದೇ’ ಎನ್ನುವ ಭಾವನೆ ಬೆಳೆಯಲು ಇಂತಹ ಅಂಶಗಳೇ ಆಧಾರವಾಗುತ್ತವೆ. ಬ್ರಿಟಿಷರು ಹೋದ ನಂತರ ಏನು ಮಾಡಬೇಕು ಎನ್ನುವ ಚಿಂತನೆಯೊಂದು ಸ್ವಾತಂತ್ರ್ಯ ಹೋರಾಟದ ಕಾಲದಲ್ಲೆ ಸ್ಪಷ್ಟವಾಗಿ ಕಾಣಿಸಿಕೊಂಡದ್ದು ಗಾಂಧೀಜಿಯವರ ಬಳಗದಿಂದಲೇ ಆಗಿದೆ. ಅಂದರೆ, ಗಾಂಧಿ ಚಳವಳಿಯು ಬ್ರಿಟಿಷರನ್ನು ಹೊರ ಹಾಕುವುದಕ್ಕಿಂತ ಹೆಚ್ಚಾಗಿ ಭಾರತೀಯರನ್ನು ಒಗ್ಗೂಡಿಸಿದ ಹೋರಾಟವಾಗಿತ್ತು.

ಬ್ರಿಟಿಷ್ ವಿರೋಧಿ ಸತ್ಯಾಗ್ರಹವಷ್ಟೇ ಆಗಿದ್ದರೆ ಗಾಂಧೀಜಿಯವರ ಒಗ್ಗೂಡಿಸುವಿಕೆಯ ಪ್ರಯತ್ನ ಬ್ರಿಟಿಷರ ನೇರ ಅಧೀನದಲ್ಲಿದ್ದ 17 ಸಂಸ್ಥಾನಗಳಿಗೆ ಸೀಮಿತವಾಗುತ್ತಿತ್ತು. 565 ರಾಜರುಗಳ ಸಂಸ್ಥಾನದ ಜನರಿಗೆ ಬ್ರಿಟಿಷರನ್ನು ತೊಲಗಿಸಿ ಆಗಬೇಕಾದ ದೊಡ್ಡ ಅಗತ್ಯವೇನೂ ಇರಲಿಲ್ಲ. ಅವರಿಗೆ ಅವರದೇ ರಾಜರು ಇದ್ದರು. ಬ್ರಿಟಿಷ್ ಸಾಮ್ರಾಟನಿಗೆ ಕೊಡಬೇಕಾದ್ದನ್ನು ಕೊಟ್ಟರೆ ವಿದೇಶಾಂಗ, ಮಿಲಿಟರಿಯಂಥ ವಿಚಾರಗಳ ಹೊರತಾಗಿ ಉಳಿದೆಲ್ಲ ವಿಷಯಗಳಲ್ಲಿ ರಾಜರುಗಳಿಗೆ ಸ್ವಾತಂತ್ರ್ಯ ಇತ್ತು. ರಾಜರುಗಳ ಪ್ರಜೆಗಳೂ ಬ್ರಿಟಿಷರ ಅಧೀನದಲ್ಲಿದ್ದ ಪ್ರಾಂತ್ಯಗಳ ಜನರೊಂದಿಗೆ ಸೇರಿಕೊಳ್ಳಬೇಕಾದರೆ ರಾಜರುಗಳ ಪ್ರಜೆಗಳಿಗೆ ಅಗತ್ಯ ವಾದ ಸಂಗತಿಗಳೂ ಬೇಕಾಗಿದ್ದವು. ಚರಕದಿಂದ ಬಟ್ಟೆ ತಯಾರಿಸಿಕೊಳ್ಳುವುದು, ಮದ್ಯಪಾನ ನಿಷೇಧ, ಅಸ್ಪೃಶ್ಯತಾ ನಿಷೇಧ, ದೇವಾಲಯಗಳಿಗೆ ಅಸ್ಪೃಶ್ಯರ ಪ್ರವೇಶ, ಗುಡಿ ಕೈಗಾರಿಕೆಯಂತಹ ವಿಚಾರಗಳು ಬ್ರಿಟಿಷರ ಅಧೀನದಲ್ಲಿದ್ದ ಪ್ರಜೆಗಳಿಗೂ, ರಾಜರುಗಳ ಅಧೀನದಲ್ಲಿದ್ದ ಪ್ರಜೆಗಳಿಗೂ ಸಮಾನವಾಗಿ ಅನ್ವಯ ವಾಗುವ ಸಂಗತಿಗಳಾಗಿದ್ದವು. ಗಾಂಧಿ ಚಿಂತನೆಗಳು ಮತ್ತು ಗಾಂಧಿ ತತ್ತ್ವ ಹಾಗೂ ಹೋರಾಟದ ಮಾದರಿಗಳು ಬ್ರಿಟಿಷರನ್ನು ತೊಲಗಿಸುವಷ್ಟಕ್ಕೆ ಸೀಮಿತವಾಗದೆ ಭಾರತವನ್ನು ಕಟ್ಟುವ, ಭಾರತೀಯರ ಬದುಕನ್ನು ಹಸನುಗೊಳಿಸುವ ಹಲವು ರೂಪಗಳಲ್ಲಿ ಇದ್ದುದರಿಂದ ಎಲ್ಲರನ್ನೂ ಸಾಮಾನ್ಯವಾದ ಒಂದು ರಾಷ್ಟ್ರೀಯ ವೇದಿಕೆಯ ಪ್ರಜ್ಞೆಯಲ್ಲಿ ಸಂಘಟಿಸಲು ಸಾಧ್ಯವಾಯಿತು. ಇದರ ಪರಿಣಾಮವನ್ನು 1947ರಲ್ಲಿ ಭಾರತ ಸ್ವಾತಂತ್ರ್ಯ ಶಾಸನ ಅನುಷ್ಠಾನಕ್ಕೆ ಬಂದ ತಕ್ಷಣದಿಂದಲೇ ನಾವು ಕಾಣಬಹುದು.

ನಿಜವಾಗಿ ಯಾವ ರಾಜರುಗಳಿಗೂ ಅವರ ಅಧಿಕಾರವನ್ನು ಭಾರತ ಸರ್ಕಾರಕ್ಕೆ ಕೊಟ್ಟು ತಾವು ಸಾಮಾನ್ಯ ಪೌರನಾಗಿ ಬಾಳುವುದು ಇಷ್ಟವಿರಲಿಲ್ಲ. ಜನರು ಒತ್ತಡ ತಂದದ್ದರ ಪರಿಣಾಮವಾಗಿ ರಾಜರು ತಮ್ಮ ಸಂಸ್ಥಾನಗಳನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸುವುದು ಅನಿವಾರ್ಯವಾಯಿತು. ಜನರು ಈ ರೀತಿ ಒಂದು ಒಕ್ಕೂಟದ ಆಶ್ರಯಕ್ಕೆ ಬರಲು ಕಾರಣವಾದದ್ದು ಗಾಂಧಿಯವರ ಚಳವಳಿಗಳು ರೂಪಿಸಿದ ಏಕಸೂತ್ರವಾಗಿತ್ತು.

ಆ ಕಾಲಕ್ಕೆ ಗೋವಾ ಸ್ವತಂತ್ರ ರಾಷ್ಟ್ರ. ಆದರೆ, ಗೋವಾದ ನಾಗರಿಕರಿಗೂ ಗಾಂಧಿ ಬಳಗದ ಜನರಿಗೂ ಸಂಪರ್ಕ ಮತ್ತು ಪರಸ್ಪರ ತೊಡಗಿಕೊಳ್ಳುವಿಕೆ ಇದ್ದವು. ಗೋವಾ ವಿಮೋಚನಾ ಚಳವಳಿಯ ನಾಯಕ ತ್ರಿಸ್ಟಾವೊ ಬ್ರಗಾನ್ಝ ದೆ ಕುನ್ಝ ಅವರು ನೆಹರೂ ಅವರೊಂದಿಗೆ ಒಡನಾಟ ಹೊಂದಿದ್ದರು. ಗೋವಾದಲ್ಲಿ ಸತ್ಯಾಗ್ರಹಿಗಳು ಸತ್ಯಾಗ್ರಹ ನಡೆಸಿ, ಪೂರಕ ಪರಿಸ್ಥಿತಿ ಸೃಷ್ಟಿಸಿದ ನಂತರ ಭಾರತ ಸರ್ಕಾರ ಗೋವಾಕ್ಕೆ ಸೈನ್ಯ ಕಳಿಸಿತು. ಗೋವಾದ ವಿಚಾರದಲ್ಲಿ ಅಂತಿಮ ಹಂತದಲ್ಲಿ ಡಿಯು, ಡಾಮನ್ಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಆರ್ಎಸ್ಎಸ್ ಸ್ವಯಂಸೇವಕರೂ ಕೆಲಸ ಮಾಡಿದ್ದರು. ಆರ್ಎಸ್ಎಸ್ ಬ್ರಿಟಿಷರ ವಿರುದ್ಧ ಹೋರಾಟ ಮಾಡಲಿಲ್ಲ. ಆದರೆ, ಪೋರ್ಚುಗೀಸರ ವಿರುದ್ಧ ಸೀಮಿತ ವ್ಯಾಪ್ತಿಯ ಹೋರಾಟ ಮಾಡಿದೆ. ಆದರೆ ಅಲ್ಲಿಯೂ ಭಾರತೀಯ ಒಕ್ಕೂಟಕ್ಕೆ ಸೇರಬೇಕೆಂಬ ಪ್ರಜ್ಞೆಯನ್ನು ವ್ಯಾಪಕಗೊಳಿಸಿದ್ದವರು ಸತ್ಯಾಗ್ರಹಿಗಳೇ. ಪಾಂಡಿಚೆರಿಯಲ್ಲೂ ಫ್ರೆಂಚರಿಂದ ಸ್ವತಂತ್ರಗೊಂಡು ಭಾರತೀಯ ಒಕ್ಕೂಟಕ್ಕೆ ಸೇರಲು ಒತ್ತಡ ಸೃಷ್ಟಿಸಿದವರು ಸತ್ಯಾಗ್ರಹಿಗಳೇ ಆಗಿದ್ದರು.

ಭಾರತೀಯ ಸಮಗ್ರತೆಯನ್ನು ರೂಪಿಸುವ ಸಂಗತಿಗಳು ಗಾಂಧಿಗಿಂತ ಮೊದಲು ಇರಲಿಲ್ಲ ಎಂದಲ್ಲ. ಸ್ವತಃ ಗಾಂಧೀಜಿಯೇ, ‘ಭಾರತದಲ್ಲಿ ಆಡಳಿತಾತ್ಮಕ ಏಕತೆಯನ್ನು ಬ್ರಿಟಿಷರು ರೂಪಿಸಿದ್ದು ಹೌದಾದರೂ, ಧಾರ್ಮಿಕ ಕೇಂದ್ರಗಳು ಧಾರ್ಮಿಕ ಏಕತೆಯನ್ನು ಸಾವಿರಾರು ವರ್ಷಗಳ ಹಿಂದೆಯೇ ರೂಪಿಸಿದ್ದವು’ ಎಂದು ಹೇಳಿದ್ದಾರೆ. ಅಶೋಕ ಮತ್ತು ಸಮುದ್ರಗುಪ್ತರು ಭಾರತವನ್ನು ಒಟ್ಟಾಗಿಸುವ ಕೆಲಸ ಮಾಡಿದ್ದರು. ಆದರೆ, ಅಶೋಕ ಮೌರ್ಯ ಒಟ್ಟಾಗಿಸಿದ ಭಾರತ ದಶರಥ ಮೌರ್ಯನ ಕಾಲಕ್ಕೆ ಉಳಿದಿರಲಿಲ್ಲ. ಸಮುದ್ರಗುಪ್ತ ಒಟ್ಟಾಗಿಸಿದ ಭಾರತವು ಕುಮಾರಗುಪ್ತನ ಕಾಲಕ್ಕೆ ಉಳಿದಿರಲಿಲ್ಲ. ಏಕೆಂದರೆ, ಇಡೀ ಭಾರತಕ್ಕೆ ಅನ್ವಯವಾಗುವ ಶಾಸನಾತ್ಮಕ ಒಕ್ಕೂಟವನ್ನು ರೂಪಿಸಲು ಆ ಸಂದರ್ಭದಲ್ಲಿ ಸಾಧ್ಯವಾಗಿರಲಿಲ್ಲ. ಆದರೆ, ಗಾಂಧಿ ಕಟ್ಟಿದ ಭಾರತವನ್ನು ಒಟ್ಟಾಗಿಯೇ ಉಳಿಸಲು ‘ಭಾರತ ಸಂವಿಧಾನ’ ಎನ್ನುವ ಸಾರ್ವತ್ರಿಕ ಅನ್ವಯದ ಶಾಸನವನ್ನು ರೂಪಿಸಲು ಸಾಧ್ಯವಾಗಿದೆ. ಆದ್ದರಿಂದ ಇಂದಿನ ಭಾರತ, ಗಾಂಧಿ ಕಟ್ಟಿದ ದೇಶವಲ್ಲದೆ ಬೇರೆ ಯಾರೂ ಕಟ್ಟಿದ ದೇಶ ಅಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.