‘ಬ್ರಿಟಿಷರ ವಿರುದ್ಧ ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಹೋರಾಟದ ಬದಲು ಸಶಸ್ತ್ರ ಕ್ರಾಂತಿ ನಡೆಸಿದ್ದರೆ ಬೇಗ ಸ್ವಾತಂತ್ರ್ಯ ಸಿಗುತ್ತಿತ್ತು. ಅಹಿಂಸಾತ್ಮಕ ಹೋರಾಟ ನಿಷ್ಪ್ರಯೋಜಕ’ ಎಂಬ ವಾದ ಸರಣಿ ಪ್ರಸ್ತುತ ದಿನಗಳಲ್ಲಿ ಬಹುವಾಗಿ ಚಲಾವಣೆಯಲ್ಲಿದೆ. ಇದನ್ನು ವ್ಯಂಗ್ಯವಾಗಿ, ‘ಚರಕದಿಂದ ಸ್ವಾತಂತ್ರ್ಯ ಬರುವುದಿಲ್ಲ; ನೂಲು ಬರುತ್ತದೆ ಅಷ್ಟೆ’ ಎಂದೂ ಹೇಳಲಾಗುತ್ತದೆ. ಈ ಎಲ್ಲ ವಾದಗಳ ಉದ್ದೇಶ, ಗಾಂಧೀಜಿಯವರ ತೇಜೋವಧೆ ಮಾಡುವುದರ ಹೊರತು ಬೇರೇನಲ್ಲ ಎನ್ನುವುದು ಯಾರಿಗಾದರೂ ಗೊತ್ತಾಗುವ ವಿಷಯ. ಆದರೂ, ಈ ಬಗ್ಗೆ ಒಂದು ಐತಿಹಾಸಿಕ ಪರಿಶೀಲನೆಯ ಅಗತ್ಯವಿದೆ.

ಹಿಂಸಾತ್ಮಕ ಹೋರಾಟದಿಂದ ಬ್ರಿಟಿಷರನ್ನು ಮಣಿಸಬಹುದಾಗಿದ್ದ ಸಾಧ್ಯತೆ ಎಷ್ಟು ಎಂದು ಗೊತ್ತಾಗಬೇಕಾದರೆ, ಬ್ರಿಟಿಷರ ಯುದ್ಧ ಇತಿಹಾಸವನ್ನು ನೋಡಬೇಕು.

ಕೈಗಾರಿಕಾ ಕ್ರಾಂತಿಯ ನಂತರ ಬ್ರಿಟನ್ ಯಾವ ರೀತಿ ಸೈನಿಕ ಸನ್ನದ್ಧತೆಯನ್ನು ಹೊಂದಿತ್ತು ಎಂದರೆ, ಬ್ರಿಟಿಷ್ ಸೈನ್ಯ ಭಾಗವಹಿಸಿದ್ದ ಯುದ್ಧಗಳಲ್ಲಿ ಅದು ಸೋತದ್ದೇ ಇಲ್ಲ. ಫ್ರಾನ್ಸ್ ಮತ್ತು ಬ್ರಿಟನ್ ನಡುವೆ ನಡೆದ ಸಪ್ತ ವಾರ್ಷಿಕ ಯುದ್ಧ (1754–1763)ದಲ್ಲಿ ಬ್ರಿಟಿಷರೇ ಗೆದ್ದರು. 1854–56ರಲ್ಲಿ ರಷ್ಯಾದೊಂದಿಗೆ ಬ್ರಿಟನ್, ಫ್ರಾನ್ಸ್, ಆಟೋಮನ್ ಸಾಮ್ರಾಜ್ಯ, ಸಾರ್ಡೀನಿಯ ಹಾಗೂ ಪೀಡ್ಮಾಂಟ್ಗಳು, ಡ್ಯೂಕ್ ಆಫ್ ವೆಲ್ಲಿಂಗ್ಟನ್ ನಾಯಕತ್ವದಲ್ಲಿ ನಡೆಸಿದ ಕ್ರಿಮಿಯಾ ಯುದ್ಧದಲ್ಲಿಯೂ ವೆಲ್ಲಿಂಗ್ಟನ್ ಸೇನೆಯೇ ಗೆದ್ದಿತು. 1899–1902ರ ಬಾಯೆರ್ ಕದನ, 1842ರಲ್ಲಿ ಚೀನಾದಲ್ಲಿ ನಡೆದ ಓಪಿಯಮ್ ಕದನದಲ್ಲೂ ಬ್ರಿಟಿಷರೇ ಗೆದ್ದರು. 1815ರ ವಾಟರ್ಲೂ ಕದನದಲ್ಲಿ ನೆಪೋಲಿಯನ್ ಬೋನೋಪಾರ್ಟೆಯನ್ನೂ ಬ್ರಿಟಿಷರು ಸೋಲಿಸಿದರು. 20ನೆಯ ಶತಮಾನದ ಎರಡು ಜಾಗತಿಕ ಯುದ್ಧಗಳಲ್ಲೂ ಬ್ರಿಟಿಷರು ಇದ್ದ ಕಡೆಯೇ ಅಂತಿಮ ಗೆಲುವು ಆಗಿತ್ತು. 1775–1783ರ ಅಮೆರಿಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರು ಸೋತದ್ದು ಹೌದು; ಆದರೆ, ಅಲ್ಲಿ ಬ್ರಿಟಿಷರನ್ನು ಎದುರಿಸಿದ್ದು ಅಮೆರಿಕವನ್ನೇ ತಾಯ್ನಾಡಾಗಿ ಪರಿಗಣಿಸಿ ನೆಲಸಿದ ಬ್ರಿಟಿಷರೇ ಆಗಿದ್ದರೇ ಹೊರತು ಅಮೆರಿಕದ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ಸ್ ಅಲ್ಲ.

ಯುದ್ಧಗಳ ತರುವಾಯ ಐರ್ಲೆಂಡನ್ನು ವಿಭಜಿಸುವುದನ್ನೆಲ್ಲ ಮಾಡಿ, ಡೊಮಿನಿಯನ್ ಸ್ಟೇಟಸ್ ಕೊಟ್ಟು, ಬ್ರಿಟಿಷರು ಐರ್ಲೆಂಡ್ ಅನ್ನು ಬಿಟ್ಟುಕೊಟ್ಟಿದ್ದರು. ಆದರೆ, ಐರ್ಲೆಂಡಿನ ವಿಚಾರದಲ್ಲಿ ನೂರು ವರ್ಷಗಳಿಂದ ‘ಹೋಂ ರೂಲ್’ ಬೇಡಿಕೆಯ ಚಳವಳಿ ನಡೆದಿತ್ತು. ಹೋರಾಟದ ಹಿಂದೆ ತಾತ್ವಿಕ ಮತ್ತು ವೈಚಾರಿಕ ಸಂಗತಿಗಳಿದ್ದವು. ಹಾಗೆ ನೋಡಿದರೆ, ಭಾರತ ಬ್ರಿಟಿಷರ ಅಧೀನದಲ್ಲಿದ್ದಾಗಲೂ ವೈಚಾರಿಕ ಪ್ರಶ್ನೆಗಳಿಗೆ ಬ್ರಿಟಿಷರು ಸಾಪೇಕ್ಷವಾಗಿ ಸ್ಪಂದಿಸಿದ್ದರು. ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ವಿಧಿಸುತ್ತಿರುವ ತೆರಿಗೆಯ ಅತಿರೇಕವನ್ನು ನೋಡಿ ಕನಲಿದ ಎಡ್ಮಂಡ್ ಬರ್ಕ್, ‘ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟಿಷ್ ಸರ್ಕಾರ ಪಡೆಯುತ್ತಿರುವುದು ಕ್ರಿಮಿನಲ್ ತೆರಿಗೆ’ ಎಂದು ಬ್ರಿಟನ್ನ ಸಂಸತ್ನಲ್ಲಿ ಸರ್ಕಾರದ ಗಮನ ಸೆಳೆದ ನಂತರ, ಈಸ್ಟ್ ಇಂಡಿಯಾ ಕಂಪನಿಯನ್ನು ನಿಯಂತ್ರಿಸುವ 1773ರ ರೆಗ್ಯುಲೇಟಿಂಗ್ ಕಾಯ್ದೆ ಜಾರಿಗೆ ಬಂದಿತ್ತು.

ಗಾಂಧೀಜಿ ಹುಟ್ಟುವ ಮೊದಲೇ ಭಾರತದಲ್ಲಿ ನಡೆದ ಸಾವಿರಾರು ಸಶಸ್ತ್ರ ಹೋರಾಟಗಳನ್ನು ಬ್ರಿಟಿಷರು ದಮನಿಸಿದ್ದರು. ಸಾಗರದ ಮೇಲೆ ಪರಮಾಧಿಕಾರವನ್ನು ಸ್ಥಾಪಿಸುವುದಕ್ಕಾಗಿಯೇ ಪೋರ್ಚುಗೀಸರ ಫ್ರಾನ್ಸಿಸ್ಕೊ ಡಿ ಅಲ್ಮೆಡಾ ‘ಬ್ಲೂ ವಾಟರ್ ಪಾಲಿಸಿ’ಯನ್ನು 1505ರಲ್ಲಿ ಜಾರಿಗೆ ತಂದಿದ್ದು, ನಂತರದ ಸುಮಾರು ನೂರು ವರ್ಷಗಳ ಕಾಲ ಪೋರ್ಚುಗೀಸರದ್ದೇ ಪರಮಾಧಿಕಾರವಿತ್ತು. ಅಂತಹ ಪೋರ್ಚುಗೀಸರ ಸಾಗರ ಪರಮಾಧಿಕಾರವನ್ನೂ ಬ್ರಿಟಿಷರು ಲೆಕ್ಕಿಸಲಿಲ್ಲ. ಛತ್ರಪತಿ ಶಿವಾಜಿ ಮಹಾರಾಜರ ನೌಕಾದಳ, ಪೋರ್ಚುಗೀಸರು ಮತ್ತು ಬ್ರಿಟಿಷರನ್ನು ಕೆಲವು ಪ್ರಕರಣಗಳಲ್ಲಿ ಕರಾವಳಿ ತೀರದಲ್ಲಿ ತಡೆದದ್ದೂ ಇದೆ. ಆದರೆ, ಮಟ್ಟ ಹಾಕಲು ಆಗಲಿಲ್ಲ.

1760ರ ಸುಮಾರಿಗೆ, ಮರಾಠರ ನೌಕಾದಳವನ್ನು ಬ್ರಿಟಿಷರು ಸಂಪೂರ್ಣವಾಗಿ ನಾಶಪಡಿಸಿದರು. ರಾಜೇಂದ್ರ ಚೋಳನ (971–1044) ತರುವಾಯ ಸಶಕ್ತ ನೌಕಾದಳದ ಮಹತ್ವವನ್ನು ಶಿವಾಜಿ (1630–80) ಅರಿತಿದ್ದರು. ಆದರೆ, ರಾಜೇಂದ್ರ ಚೋಳನ ನೌಕಾದಳಕ್ಕೆ ಸಮುದ್ರವನ್ನು ದಾಟಿ ಹೋಗಿ ಯುದ್ಧ ಮಾಡುವ ಸಾಮರ್ಥ್ಯವಿತ್ತು. ನಂತರದ 600 ವರ್ಷಗಳಲ್ಲಿ ಯುರೋಪ್ನಲ್ಲಿ ತಂತ್ರಜ್ಞಾನದ ಕ್ರಾಂತಿ ನಡೆದಿತ್ತು. ಆದ್ದರಿಂದ ಸಮುದ್ರವನ್ನು ದಾಟಿ ಯುರೋಪಿಯನ್ನರನ್ನು ಎದುರಿಸಬಲ್ಲಷ್ಟು ಸಶಕ್ತ ಹಡಗುಗಳನ್ನು ನಿರ್ಮಿಸಲು ಶಿವಾಜಿಗಾಗಲೀ ನಂತರದ ಮರಾಠರಿಗಾಗಲೀ ಸಾಧ್ಯವಾಗಿರಲಿಲ್ಲ.

ಭಾರತೀಯರು ಒಗ್ಗಟ್ಟಾಗಿ ಸೇರಿದ್ದರೆ ಬ್ರಿಟಿಷರನ್ನು ಸೋಲಿಸಬಹುದಿತ್ತು ಎಂದು ಊಹಾತ್ಮಕ ತರ್ಕವನ್ನು ಮಾಡಬಹುದು. ಆದರೆ, ಭೂಮಿಯ ಮೇಲೆ ಬ್ರಿಟಿಷರನ್ನು ಸೋಲಿಸಿದರೂ ಬ್ರಿಟಿಷರ ನೌಕಾದಳವನ್ನು ಎದುರಿಸಬಲ್ಲ ನೌಕಾದಳ ಭಾರತದ ಎಲ್ಲ ರಾಜರು ಸೇರಿದಾಗಲೂ ಇತ್ತು ಎನ್ನಲು ಯಾವ ಸಾಕ್ಷಿಯೂ ಸಿಗುವುದಿಲ್ಲ. ಅಂದರೆ, ಸಶಸ್ತ್ರ ಯುದ್ಧದ ಮೂಲಕ ಬ್ರಿಟಿಷರನ್ನು ಬ್ರಿಟನ್ ತನಕ ಹಿಮ್ಮೆಟ್ಟಿಸಲು ಭಾರತದಲ್ಲಿ ವ್ಯವಸ್ಥೆಗಳೇ ಇರಲಿಲ್ಲ. ಬ್ರಿಟನ್ನಿನ ಸೈನಿಕ ಶಕ್ತಿಯ ಇತಿಹಾಸದ ಅರಿವಿದ್ದವರು ಅಹಿಂಸಾತ್ಮಕ ಹೋರಾಟದ ಹೊರತು ಬೇರೆ ಏನನ್ನೂ ಮಾಡಲು ಸಾಧ್ಯವಿರಲಿಲ್ಲ. ಸುಭಾಷ್ಚಂದ್ರ ಬೋಸರು ಬ್ರಿಟಿಷ್ ವಿರೋಧಿ ಯುರೋಪಿಯನ್ನರೊಂದಿಗೆ ಸೇರಿ ಯುದ್ಧದ ಮೂಲಕ ಬ್ರಿಟಿಷರನ್ನು ಹಿಮ್ಮೆಟ್ಟಿಸುವ ಯೋಜನೆಯನ್ನು ರೂಪಿಸಿದ್ದರು. 2ನೆಯ ಜಾಗತಿಕ ಯುದ್ಧದಲ್ಲಿ ಜರ್ಮನಿ ಮತ್ತು ಜಪಾನ್ ಮೇಲುಗೈ ಪಡೆದಿದ್ದರೆ ಅದು ಸಾಧ್ಯವಾಗಬಹುದಾಗಿತ್ತು. ಆದರೆ, ಆ ಯುದ್ಧದಲ್ಲೂ ಬ್ರಿಟಿಷರೇ ಮೇಲುಗೈ ಪಡೆದಿದ್ದರು.

ಅಹಿಂಸಾತ್ಮಕ ಹೋರಾಟದ ಎರಡನೆಯ ಅನಿವಾರ್ಯತೆ ಯಾರ ವಿರುದ್ಧ ಹೋರಾಟ ಎಂಬುದನ್ನು ಅವಲಂಬಿಸಿದೆ. ಭಾರತದಲ್ಲಿನ ಬ್ರಿಟಿಷ್ ಸೈನ್ಯದಲ್ಲಿದ್ದ ಸೈನಿಕರು, ಪೊಲೀಸರು ಭಾರತೀಯರೇ ಆಗಿದ್ದರು. ಬ್ರಿಟಿಷ್ ದಳಗಳಿಗೆ ಬ್ರಿಟಿಷರು ಭಾರತೀಯ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದರು. ಆಗ ಸ್ವಾತಂತ್ರ್ಯ ಹೋರಾಟಗಾರರು ಬಾಂಬ್ ದಾಳಿ ನಡೆಸಿದ್ದರೆ, ಬಹುಮಟ್ಟಿಗೆ ಅವರು ಬ್ರಿಟಿಷ್ ಸೇನೆ ಮತ್ತು ಪೊಲೀಸ್ ಇಲಾಖೆಯಲ್ಲಿದ್ದ ಭಾರತೀಯರನ್ನೇ ಕೊಲ್ಲಬೇಕಾದ ಪರಿಸ್ಥಿತಿ ಬರುತ್ತಿತ್ತು. ಗಾಂಧಿಯವರ ಅಹಿಂಸಾತ್ಮಕ ಹೋರಾಟವು ಭಾರತೀಯರು ಭಾರತೀಯರನ್ನೇ ಕೊಲ್ಲುವುದನ್ನು ತಪ್ಪಿಸಿತ್ತು.

ಗಾಂಧಿಯವರ ಅಹಿಂಸೆ ಹೋರಾಟದ ಒಂದು ಅಸ್ತ್ರವಾಗಲು, ಹೋರಾಟ ಯಾರ ವಿರುದ್ಧ ಎನ್ನುವ ಕುರಿತ ಗಾಂಧಿಯವರ ವೈಚಾರಿಕ ಸ್ಪಷ್ಟತೆಯೂ ಕಾರಣವಾಗಿತ್ತು. ಗಾಂಧಿಯವರ ಹೋರಾಟ ಬ್ರಿಟಿಷರ ವಿರುದ್ಧವಾಗಿರಲಿಲ್ಲ. ಬ್ರಿಟಿಷ್ ಸಾಮ್ರಾಜ್ಯಶಾಹಿತ್ವದ ವಿರುದ್ಧ ಮಾತ್ರವೇ ಆಗಿತ್ತು. ಬ್ರಿಟಿಷರು ಭಾರತೀಯರಾಗಿ ನೆಲಸಿ ಭಾರತೀಯ ಆಡಳಿತವನ್ನು ಸ್ವೀಕರಿಸುವುದಿದ್ದರೆ, ಅದಕ್ಕೆ ಗಾಂಧಿಯವರ ವಿರೋಧ ಇರಲಿಲ್ಲ. ಈ ಧೋರಣೆಯಿಂದಾಗಿ ಬ್ರಿಟಿಷ್ ಪ್ರಭುತ್ವ ಮಾತ್ರ ವಿರೋಧಿಯ ಸ್ಥಾನಕ್ಕೆ ಬಂದಿತು. ಬ್ರಿಟಿಷ್ ಪೌರರು ವಿರೋಧಿಯ ಸ್ಥಾನದಲ್ಲಿರಲಿಲ್ಲ. ಸಾಕಷ್ಟು ಬ್ರಿಟಿಷ್ ಪೌರರು ಗಾಂಧಿಯವರ ಪರ ಇದ್ದರು. ಹಲಗಲಿಯ ಬೇಡರ ದಂಗೆ, ಸಂತಾಲ ದಂಗೆಯಂತಹ ಯಾವುದೇ ಸಶಸ್ತ್ರ ಬಂಡಾಯಗಳಲ್ಲಿ ಬಂಡಾಯವನ್ನು ದಮನಿಸಿದ ನಂತರ ಬ್ರಿಟಿಷ್ ಸರ್ಕಾರ ಬಂಡಾಯಗಾರರ ಬೇಡಿಕೆಗಳನ್ನು ಈಡೇರಿಸಲಿಲ್ಲ. ಆದರೆ, ಚಂಪಾರಣ್ ಸತ್ಯಾಗ್ರಹ, ಬಾರ್ಡೋಲಿ ಸತ್ಯಾಗ್ರಹದಲ್ಲಿ ಸತ್ಯಾಗ್ರಹಿಗಳ ಬೇಡಿಕೆಗಳನ್ನು ಈಡೇರಿಸಲಾಗಿತ್ತು. ಇದು ಅಹಿಂಸಾತ್ಮಕ ಹೋರಾಟದ ಶಕ್ತಿ. ದಕ್ಷಿಣ ಆಫ್ರಿಕಾದಲ್ಲೂ ಗಾಂಧಿ ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಹೋರಾಟವನ್ನು ಯಶಸ್ವಿಗೊಳಿಸಿದ್ದರು. ಉಪ್ಪಿನ ಸತ್ಯಾಗ್ರಹದ ನಂತರ ಗಾಂಧಿ– ಇರ್ವಿನ್ ಒಪ್ಪಂದವೇ ಆಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಮ್ಯಾಂಚೆಸ್ಟರ್ನ ಬಟ್ಟೆಗಳನ್ನು ತಂದು ಭಾರತದಲ್ಲಿ ಮಾರುವ ಜವಳಿ ಉದ್ಯಮವು ಬ್ರಿಟಿಷರಿಗೆ ಅಪಾರ ಲಾಭದಾಯಕ ಉದ್ಯಮವಾಗಿತ್ತು. ಚರಕ ಚಳವಳಿಯು ಬ್ರಿಟಿಷರ ಜವಳಿ ವ್ಯಾಪಾರವನ್ನು ದುರ್ಬಲಗೊಳಿಸಿತ್ತು. ಗಾಂಧಿ ಅವರು ದುಂಡು ಮೇಜಿನ ಪರಿಷತ್ತಿಗೆ ಲಂಡನ್ಗೆ ಹೋಗಿದ್ದಾಗ, ಈತ ತಮ್ಮ ಉದ್ಯೋಗವನ್ನು ತೆಗೆದವನು ಎಂದು ಮ್ಯಾಂಚೆಸ್ಟರ್ನ ಬಟ್ಟೆ ಗಿರಣಿಗಳ ನೌಕರರಾಗಿದ್ದವರು ಗಾಂಧಿಯವರ ವಿರುದ್ಧ ಪ್ರತಿಭಟನೆಗಳನ್ನು ಮಾಡಿದ್ದರು.

ತೆರಿಗೆ ನಿರಾಕರಣಾ ಚಳವಳಿ ಬ್ರಿಟಿಷರ ಬೊಕ್ಕಸಕ್ಕೆ ಹಣ ಹೋಗದಂತೆ ತಡೆಯುವ ಕೆಲಸವನ್ನು ಮಾಡಿತು. ಕ್ವಿಟ್ ಇಂಡಿಯಾ ಚಳವಳಿಯ ನಂತರ ವೈಸರಾಯ್ ವವೆಲ್ ಬ್ರಿಟಿಷ್ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಖಜಾನೆ ಬರಿದಾಗಿರುವುದರ ಪ್ರಸ್ತಾಪವನ್ನೂ ಮಾಡಿದ್ದರು. ಆದ್ದರಿಂದಲೇ ಗಾಂಧಿ ಒಬ್ಬ ಮಹಾನ್ ವಾಸ್ತವವಾದಿ. ಬ್ರಿಟಿಷರನ್ನು ಎದುರಿಸಲು ಅಹಿಂಸಾತ್ಮಕ ಹೋರಾಟದ ಹೊರತು ಅನ್ಯಮಾರ್ಗವಿಲ್ಲ ಎಂಬುದನ್ನು ಕಂಡುಕೊಂಡವರಾಗಿದ್ದರು. ಅಂತಹ ಹೋರಾಟಕ್ಕೆ ಧಾರ್ಮಿಕ ಮತ್ತು ಅಧ್ಯಾತ್ಮದ ತಳಹದಿಯನ್ನು ಒದಗಿಸಿದ್ದರಿಂದ ಅಹಿಂಸಾತ್ಮಕ ಸತ್ಯಾಗ್ರಹಕ್ಕೆ ಪರಂಪರೆಯ ಶಕ್ತಿ ಮತ್ತು ಉದಾತ್ತತೆಯ ಸ್ವರೂಪವೂ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.