ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ– ದುಡಿಮೆಯಲ್ಲಿ ಮಹಿಳಾ ಪ್ರಾತಿನಿಧ್ಯ: ಡಾ. ಗೀತಾ ಕೃಷ್ಣಮೂರ್ತಿ ಲೇಖನ

ಮಹಿಳಾ ಉದ್ಯೋಗಿಗಳ ಪ್ರಮಾಣ ಹೆಚ್ಚಳದಿಂದ ದೇಶದ ಆರ್ಥಿಕತೆಗೆ ಬಲ
Last Updated 3 ಅಕ್ಟೋಬರ್ 2022, 0:30 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಹೈನು ಪ್ರತಿಷ್ಠಾನದ ವಿಶ್ವ ಹೈನು ಶೃಂಗಸಭೆಯನ್ನು ಇತ್ತೀಚೆಗೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ‘2014ರಲ್ಲಿ 14.6 ಕೋಟಿ ಟನ್ನುಗಳಷ್ಟಿದ್ದ ಹಾಲು ಉತ್ಪಾದನೆಯು 2022ರಲ್ಲಿ 21 ಕೋಟಿ ಟನ್ನುಗಳಿಗೆ ಏರಿದೆ. ಈ ಹೆಚ್ಚಳದ ಸಂಪೂರ್ಣ ಶ್ರೇಯ ಮಹಿಳೆಯರಿಗೆ ಸಲ್ಲುತ್ತದೆ’ ಎಂದರು. ‘ಹೈನು ವಲಯದಲ್ಲಿ ದುಡಿಯುವ ಕಾರ್ಮಿಕರ ಪೈಕಿ ಶೇ 70 ರಷ್ಟು ಮಂದಿ ಮಹಿಳೆಯರು ಮತ್ತು ಹೈನು ಸಹಕಾರ ಸಂಘಗಳ ಶೇ 30ರಷ್ಟು ಸದಸ್ಯರು ಮಹಿಳೆಯರು’ ಎಂದು ಶ್ಲಾಘಿಸಿದರು.

ಆದರೆ, ಒಟ್ಟಾರೆಯಾಗಿ ಉದ್ಯೋಗ ಕ್ಷೇತ್ರದಲ್ಲಿನ ಮಹಿಳಾ ಪ್ರಾತಿನಿಧ್ಯವನ್ನು ಅವಲೋಕಿಸಿದಾಗ ದೊರೆಯುವ ಚಿತ್ರಣ ಬೇರೆಯೇ ಆಗಿದೆ. ಸಾಮಾನ್ಯವಾಗಿ, ಒಂದು ದೇಶವು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದಂತೆ ಕಾರ್ಮಿಕ ವರ್ಗದಲ್ಲಿ ಮಹಿಳೆಯರ ಪ್ರಮಾಣವೂ ಹೆಚ್ಚಾಗುತ್ತದೆ ಎಂಬ ಭಾವನೆ ಇದೆ. ವಿಶ್ವಬ್ಯಾಂಕ್‍ನ ‘ಸೌತ್ ಏಷ್ಯಾ ಎಕನಾಮಿಕ್ ಫೋಕಸ್’ ಹೆಸರಿನ ದ್ವೈವಾರ್ಷಿಕ ಸಂಪುಟದಲ್ಲಿ (2022) ಮಹಿಳಾ ಕಾರ್ಮಿಕರ ಭಾಗವಹಿಸು ವಿಕೆಗೆ ಸಂಬಂಧಿಸಿದಂತೆ ಪ್ರಕಟವಾಗಿರುವ ಅಧ್ಯಯನ ವರದಿಯು ಭಾರತದಲ್ಲಿ ಇದು ಸತ್ಯಕ್ಕೆ ದೂರವಾದಸಂಗತಿ ಎನ್ನುತ್ತದೆ.

ಉದ್ಯೋಗನಿರತ ಮಹಿಳೆಯರು ಮತ್ತು ಉದ್ಯೋಗ ವನ್ನು ಹುಡುಕುತ್ತಿರುವ ಮಹಿಳೆಯರ ಶೇಕಡಾವಾರು ಪ್ರಮಾಣ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಯ ಸೂಚ್ಯಂಕದ ನಡುವಿನ ಅನುಪಾತ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಭಿನ್ನವಾಗಿ ಇರಬಹುದು. ಬಾಂಗ್ಲಾದೇಶ, ಭೂತಾನ, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಭಾರತದಂಥ ದಕ್ಷಿಣ ಏಷ್ಯಾದ ದೇಶಗಳಲ್ಲಿನ ಅಂಕಿ ಅಂಶಗಳನ್ನು ಗಮನಿಸಿದಾಗ ಈ ರೀತಿಯ ಭಿನ್ನತೆ ಇರುವುದು ಗೋಚರಿಸುತ್ತದೆ.

ಭಾರತದಲ್ಲಿ, ಶಿಕ್ಷಣ ಪಡೆದ ಮಹಿಳೆಯರ ಪ್ರಮಾಣದಲ್ಲಿ ಏರಿಕೆ ಮತ್ತು ಮಕ್ಕಳನ್ನು ಪಡೆಯಲಿಚ್ಛಿಸುವ ಮಹಿಳೆಯರ ಪ್ರಮಾಣದಲ್ಲಿನ ಇಳಿಕೆಯು ಮಹಿಳಾ ಉದ್ಯೋಗಿಗಳ ಶೇಕಡಾವಾರು ಸಂಖ್ಯೆಯ ಮೇಲೆ ಯಾವುದೇ ಪ್ರಭಾವ ಬೀರಿಲ್ಲ ಎಂಬುದನ್ನೂ ಈ ವರದಿ ಸ್ಪಷ್ಟಪಡಿಸಿದೆ. ಇದಕ್ಕೆ ನಿಖರ ಕಾರಣವನ್ನು ಉಲ್ಲೇಖಿಸಿಲ್ಲವಾದರೂ ಭಾರತದ ಸಂಪ್ರದಾಯಬದ್ಧ ಸಾಮಾಜಿಕ ಕಟ್ಟಲೆಗಳು ಇದಕ್ಕೆ ಸ್ವಲ್ಪಮಟ್ಟಿಗೆ ಕಾರಣ ಇರಬಹುದು ಎಂದಿದೆ. ವ್ಯವಸಾಯವೇ ಪ್ರಧಾನವಾಗಿರುವ ದೇಶದಲ್ಲಿ, ವ್ಯವಸಾಯ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯ ಪ್ರಮಾಣ ಹೆಚ್ಚು. ಆದರೆ, ಯಾಂತ್ರೀಕರಣ ಹೆಚ್ಚಾದಂತೆ, ದುಡಿಯುವ ಕೈಗಳ ಅಗತ್ಯ ಕಡಿಮೆಯಾಗುವ ಕಾರಣ ಆ ಕ್ಷೇತ್ರದಲ್ಲಿ ದುಡಿಯುವ ಮಹಿಳಾ ಕಾರ್ಮಿಕರ ಪ್ರಮಾಣ ಕಡಿಮೆಯಾಗುತ್ತದೆ.

ವಿಶ್ವ ಆರ್ಥಿಕ ವೇದಿಕೆಯ ಲಿಂಗ ಅಸಮಾನತೆ ಕುರಿತ 2022ರ ವರದಿಯ ಪ್ರಕಾರ, ಪುರುಷ ಮತ್ತು ಮಹಿಳಾ ಕಾರ್ಮಿಕರ ಸಂಖ್ಯೆಯ ನಡುವೆ ಇರುವ ಅಂತರ ಅತ್ಯಧಿಕವಾಗಿದೆ. 146 ದೇಶಗಳ ಪೈಕಿ ಭಾರತದ ಸ್ಥಾನ 135ರಷ್ಟು ಕೆಳಗೆ. ಇದಕ್ಕೆ ಕಾರಣ, ಕಾರ್ಮಿಕ ವರ್ಗದಲ್ಲಿ ಅತಿಯಾಗಿ ಕುಸಿದ ಮಹಿಳೆಯರ ಸಂಖ್ಯೆ. ಉದ್ಯೋಗದಲ್ಲಿ ತೊಡಗುವ ಭಾರತೀಯ ಮಹಿಳೆಯರ ಸಂಖ್ಯೆ ಆತಂಕಕಾರಿಯಾಗಿ ಕಡಿಮೆಯಾಗುತ್ತಿರುವುದನ್ನು ಬೇರೆ ಬೇರೆ ಅಧ್ಯಯನ ವರದಿಗಳೂ ಎತ್ತಿ ತೋರಿಸಿವೆ. ಇದನ್ನು ಸರಿಪಡಿಸಲು ಕೂಡಲೇ ಕಾರ್ಯನೀತಿ ರೂಪಿಸುವ, ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬ ಆರ್ಥಿಕ ತಜ್ಞರ ಮಾತನ್ನು
ಕಡೆಗಣಿಸುವಂತಿಲ್ಲ.

ಭಾರತದ ಸಾಮಾಜಿಕ ವ್ಯವಸ್ಥೆ ಅತ್ಯಂತ ಸಂಕೀರ್ಣವಾದುದು. ನಮ್ಮ ಬೌದ್ಧಿಕ ಸಾಮರ್ಥ್ಯ ಪ್ರಶ್ನಾತೀತ ವಾದುದು. ಆದರೆ ನಮ್ಮ ಸಮಾಜವು ಮಹಿಳೆಯರ ಮೇಲೆ ವಿಧಿಸುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಟ್ಟಲೆಗಳು, ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರ ಏಳಿಗೆಗೆ ಪ್ರತಿಕೂಲವಾಗಿ ಪರಿಣಮಿಸಿವೆ. ಕಾರ್ಮಿಕ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಕುಸಿಯಲು ಕೆಲವು ವಿಶಿಷ್ಟ ಕಾರಣಗಳಿವೆ. ಮೊದಲನೆಯದಾಗಿ, ಈ ಐದು ದಶಕಗಳಲ್ಲಿ ಮಹಿಳೆಯರ ಸಾಕ್ಷರತೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಹದಿನೈದು ವರ್ಷಗಳಿಗೆ ಮೇಲ್ಪಟ್ಟ ವಯೋಮಾನದ ಹುಡುಗಿಯರು ಹೆಚ್ಚಿನ ವಿದ್ಯಾಭ್ಯಾಸದ ಕಡೆಗೆ ಹೊರಳಿ ರುವುದರಿಂದ, ಆ ವಯೋಮಾನದ ಹುಡುಗಿಯರು ಉದ್ಯೋಗದಲ್ಲಿ ದಾಖಲಾಗುವುದು ಕಡಿಮೆಯಾಗಿದೆ. ಎರಡನೆಯದಾಗಿ, ನಗರಗಳ ಕುಟುಂಬವಾರು ಆದಾಯದಲ್ಲಿ ಏರಿಕೆಯಾಗಿರುವುದರಿಂದ ಕುಟುಂಬ ನಿರ್ವಹಣೆಗೆ ಮಹಿಳೆಯರು ದುಡಿಯಲೇಬೇಕೆಂಬ ಅನಿವಾರ್ಯ ಇಲ್ಲವಾಗಿದೆ. ಇದರಿಂದಾಗಿ, ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ. ಮೂರನೆಯದಾಗಿ, ಬೇಡಿಕೆಯಿರುವ ಉದ್ಯೋಗಗಳನ್ನು ಬೇಡಿಕೆಯಿರು
ವಷ್ಟು ಸಂಖ್ಯೆಯಲ್ಲಿ ಸರ್ಕಾರ ಸೃಷ್ಟಿಸದೇ ಇರುವುದರಿಂದ ಮಹಿಳೆಯರು ಮನೆಯಲ್ಲಿ ಉಳಿಯುವಂತಾಗಿದೆ.

ನಾಲ್ಕನೆಯದಾಗಿ, ಬಹುಪಾಲು ಭಾರತೀಯ ಮಹಿಳೆಯರು ಮನೆಯಲ್ಲೇ ಉಳಿದು, ನಗದು ಪ್ರತಿಫಲ ವಿಲ್ಲದ ಕೌಟುಂಬಿಕ ಕೆಲಸದಲ್ಲಿ ತೊಡಗುವುದರಿಂದ, ಅವರು ದುಡಿಯುವ ಕಾರ್ಮಿಕರ ಲೆಕ್ಕಕ್ಕೆ ಪರಿಗಣಿತರಾಗುವುದಿಲ್ಲ. ಇಷ್ಟು ದೊಡ್ಡ ಸಂಖ್ಯೆಯ ಮಹಿಳೆಯರು ವಿವಿಧ ಕಾರಣಗಳಿಗಾಗಿ ಉದ್ಯೋಗದಿಂದ ದೂರ ಉಳಿಯುವುದರಿಂದ ದೇಶದ ಆರ್ಥಿಕತೆಗೆ ಉಂಟಾಗುವ ನಷ್ಟ ಅಷ್ಟಿಷ್ಟಲ್ಲ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಒಂದು ವರ್ಷದಲ್ಲಿ ಮಹಿಳೆ ನಿರ್ವಹಿಸುವ ಗಳಿಕೆಯಿಲ್ಲದ ಗೃಹಕೃತ್ಯಗಳಿಗೆ ಹಣದ ರೂಪದಲ್ಲಿ ಬೆಲೆ ಕಟ್ಟಿದರೆ, ಅದು, ಭಾರತದ ಜಿಡಿಪಿಯ ಶೇ 3.1ರಷ್ಟಾಗುತ್ತದೆ! ಒಂದು ದೇಶದ ಜನಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟಿರುವ ಮಹಿಳೆಯರ ಸಾಮರ್ಥ್ಯವು ಆದಾಯವಿಲ್ಲದ, ಕಡಿಮೆ ಉತ್ಪಾದಕತೆಯುಳ್ಳ, ಆರ್ಥಿಕವಲ್ಲದ ಚಟುವಟಿಕೆಗಳಲ್ಲಿ ಕಳೆದುಹೋದರೆ, ಅಂಥ ದೇಶ ಅಭಿವೃದ್ಧಿ ಹೊಂದಲು ಮತ್ತು ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬ ವಿಶ್ವಬ್ಯಾಂಕ್‍ನ ಮಾತು ನಮಗೆ ಎಚ್ಚರಿಕೆಯ ಗಂಟೆಯಾಗಬೇಕು.

ನಗರಗಳಲ್ಲಿ ವಿವಾಹಿತ ಮಹಿಳೆಯರು ಉದ್ಯೋಗ ದಿಂದ ದೂರ ಉಳಿಯಲು ಇನ್ನೂ ಕೆಲವು ಕಾರಣಗಳಿವೆ. ಕೌಟುಂಬಿಕ ಕೆಲಸಗಳು ಮತ್ತು ಉದ್ಯೋಗದಲ್ಲಿ ನಿಭಾಯಿಸಬೇಕಾದ ಕೆಲಸಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗದೇ ಹೋಗುವುದು, ಮನೆಯಿಂದ ಉದ್ಯೋಗ ಸ್ಥಳಕ್ಕೆ ಹೋಗಿ– ಬರಲು ಇರುವ ಪ್ರಯಾಣ ಸೌಕರ್ಯದ ಕೊರತೆ, ವಾಹನ ದಟ್ಟಣೆಯ ಕಿರಿಕಿರಿ ಮತ್ತು ಅದಕ್ಕೆ ವ್ಯಯಿಸಬೇಕಾದ ಸಮಯವನ್ನು ಕೊಡಲಾಗದೇ ಇರುವುದು ಕೆಲವು ಕಾರಣಗಳು. ಹಾಗಾಗಿಯೇ, ಮನೆಯ ಬಳಿಯೇ ಕೆಲಸ ಮಾಡುವ ಮತ್ತು ಸೀಮಿತ ಅವಧಿಗೆ ಕೆಲಸ ಮಾಡುವ ಸೌಕರ್ಯವಿರುವ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಕಾರ್ಮಿಕರಾಗಿ ದುಡಿಮೆಯಲ್ಲಿ ತೊಡಗಿಸಿಕೊಂಡಿರುವು
ದನ್ನು ನೋಡಬಹುದು. ಮನೆಯಿಂದಲೇ ಕೆಲಸ ಮಾಡುವ ಸೌಕರ್ಯವಿದ್ದರೆ ಶೇಕಡ 90ರಷ್ಟು ಮಹಿಳೆಯರು ಮತ್ತು ಅರೆಕಾಲಿಕ ಕೆಲಸ ಮಾಡಲು ಸೌಕರ್ಯವಿದ್ದರೆ ಶೇಕಡ 70ರಷ್ಟು ಮಹಿಳೆಯರು ಕೆಲಸ ಮಾಡಲು ಸಿದ್ಧರಿದ್ದಾರೆ ಎಂಬುದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಅಧ್ಯಯನದಿಂದ ತಿಳಿದುಬಂದಿದೆ.

ಕೊರೊನಾ ಸಾಂಕ್ರಾಮಿಕವು ಮನೆಯಿಂದ ಕೆಲಸ ಮಾಡುವ ಅಗಾಧವಾದ ಸಾಧ್ಯತೆಯನ್ನು ನಮ್ಮ ಮುಂದೆ ತೆರೆದಿಟ್ಟಿದೆ. ಕೆಲಸದ ಸ್ಥಳಕ್ಕೆ ಹೋಗಲು ಸಾಧ್ಯವಾಗದೆ ಕೆಲಸವನ್ನು ತ್ಯಜಿಸಿದ ಮಹಿಳೆಯರಿಗೆ ಮತ್ತೆ ಉದ್ಯೋಗಾವಕಾಶವನ್ನು ಕಲ್ಪಿಸಲು ಈ ಮಾದರಿಯನ್ನು ಬಳಸಿಕೊಳ್ಳ
ಬೇಕು. ಮನೆಯಲ್ಲಿ ಕುಳಿತು ಮೂರು– ನಾಲ್ಕು ಗಂಟೆಗಳ ಕಾಲ ಕೆಲಸ ಮಾಡಿದರೆ ಸಾಕು ಎನ್ನುವಂಥ ಉದ್ಯೋಗಗಳನ್ನು ಸೃಜಿಸುವ ಪ್ರಯತ್ನಗಳು ಸರ್ಕಾರದ ಕಡೆಯಿಂದ ಆಗಬೇಕು. ಅದಕ್ಕೆ ಅಗತ್ಯವಿರುವ ಕೌಶಲ ತರಬೇತಿಯನ್ನು ಸರ್ಕಾರದ ವತಿಯಿಂದ ನೀಡುವ ವ್ಯವಸ್ಥೆಯೂ ಆಗಬೇಕು.

ಉದ್ಯೋಗಗಳಲ್ಲಿ ಪುರುಷರಿಗೆ ಸಮಾನ ಸಂಖ್ಯೆಯಲ್ಲಿ ಮಹಿಳೆಯರನ್ನು ನೇಮಿಸಿಕೊಂಡಲ್ಲಿ ಖಾಸಗಿ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆಯಿಂದ ಸ್ವಲ್ಪಮಟ್ಟಿಗೆ ವಿನಾಯಿತಿ ನೀಡಬೇಕು. ಆ ಮೂಲಕ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳಲು ಕಂಪನಿಗಳನ್ನು ಪ್ರೋತ್ಸಾಹಿ ಸಬೇಕು. ಕೆಲಸದ ಸ್ಥಳಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಅಗತ್ಯವಿರುವ ರಕ್ಷಣೆ ಮತ್ತು ಸೌಲಭ್ಯಗಳನ್ನು ಕಲ್ಪಿಸುವುದು, ಸಮಾನ ರೀತಿಯ ಕೆಲಸಗಳಿಗೆ ಲಿಂಗಭೇದವಿಲ್ಲದೆ ಸಮಾನ ವೇತನ ನಿಗದಿ, ಶಿಶುಪಾಲನಾ ಕೇಂದ್ರಗಳ ಸ್ಥಾಪನೆ, ಪ್ರಸೂತಿ ರಜೆ, ವಿವಿಧ ಕಾರಣಗಳಿಗಾಗಿ ಉದ್ಯೋಗವನ್ನು ತೊರೆದ ಮಹಿಳೆಯರ ಮರುನೇಮಕಾತಿಗೆ ಚಾಲನೆಯಂತಹ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಕೈಗೊಂಡಲ್ಲಿ ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತಮಪಡಿಸಲು ಮತ್ತು ತನ್ಮೂಲಕ ದೇಶದ ಆರ್ಥಿಕತೆಯನ್ನು ಸುಭದ್ರಗೊಳಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT