ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಚಿಪ್ ಉದ್ಯಮದತ್ತ ಭಾರತದ ಚಿತ್ತ

ಹೊಸ ಅವಕಾಶಗಳು ವಿಪುಲವಾಗಿರುವಂತೆ ಅಸಂಖ್ಯ ಸವಾಲುಗಳೂ ಇವೆ
Published 13 ನವೆಂಬರ್ 2023, 20:34 IST
Last Updated 13 ನವೆಂಬರ್ 2023, 20:34 IST
ಅಕ್ಷರ ಗಾತ್ರ

ನಾವು ಇಂದು ವ್ಯಾಪಕವಾಗಿ ಬಳಸುತ್ತಿರುವ ಸ್ಮಾರ್ಟ್‌ ಫೋನ್‍ಗಳಿಂದ ಹಿಡಿದು, ಸರ್ವ ಸಮಸ್ತ ಎಲೆಕ್ಟ್ರಾನಿಕ್ ಉಪಕರಣಗಳು, ಡಿಜಿಟಲ್ ಸಾಧನಗಳು, ವಾಹನಗಳು, ಕೃತಕ ಉಪಗ್ರಹಗಳು, ಅತ್ಯಾಧುನಿಕ ಯುದ್ಧನೌಕೆ, ವಿಮಾನ, ಕ್ಷಿಪಣಿ, ಶಸ್ತ್ರಾಸ್ತ್ರದಂತಹವುಗಳ ಅತಿಮುಖ್ಯ, ಅವಿಭಾಜ್ಯ ಅಂಗವೆಂದರೆ ಅರೆವಾಹಕ ಚಿಪ್‍ಗಳು (ಸೆಮಿಕಂಡಕ್ಟರ್ ಚಿಪ್ಸ್). ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದಷ್ಟೇ ಮಹತ್ವವಿರುವ ಚಿಪ್‍ಗಳು ಅಂತರರಾಷ್ಟ್ರೀಯ ರಾಜಕೀಯ ಪೈಪೋಟಿ, ಸೆಣಸಾಟಗಳ ಅತಿ ಪ್ರಬಲ ಅಸ್ತ್ರವೂ ಹೌದು.

ಜಗತ್ತಿನ ವಿವಿಧ ರಾಷ್ಟ್ರಗಳ ಸೆಮಿಕಂಡಕ್ಟರ್ ಚಿಪ್‌ಗಳ ಬೇಡಿಕೆಯ ಶೇ 60ರಷ್ಟನ್ನು ಮತ್ತು ಅತ್ಯಾಧುನಿಕ ಚಿಪ್‍ಗಳ ಬೇಡಿಕೆಯ ಶೇ 90ರಷ್ಟನ್ನು ತೈವಾನ್ ಪೂರೈಸುತ್ತಿದೆ. ಅಮೆರಿಕದ ಬೇಡಿಕೆಯ ಶೇ 92ರಷ್ಟು, ಚೀನಾದ ಬೇಡಿಕೆಯ ಶೇ 84ರಷ್ಟು ಪೂರೈಕೆಯಾಗುವುದೂ ಅಲ್ಲಿಂದಲೇ. ಇಂತಹ ಪರಿಸ್ಥಿತಿಯಲ್ಲಿ, ತೈವಾನ್ ತನ್ನ ದೇಶದ ಭಾಗವೆಂದು ಮೊದಲಿನಿಂದಲೂ ಸಾರುತ್ತಾ ಬಂದಿರುವ ಚೀನಾ ಅದನ್ನು ವಶಪಡಿಸಿಕೊಂಡರೆ, ಜಾಗತಿಕ ಅರ್ಥವ್ಯವಸ್ಥೆ ಕುಸಿದು, ಭಾರತವೂ ಸೇರಿದಂತೆ ಅರೆವಾಹಕ ಚಿಪ್‍ಗಳಿಗಾಗಿ ತೈವಾನ್ ಮೇಲೆ ಅವಲಂಬಿತವಾಗಿರುವ ಎಲ್ಲ ದೇಶಗಳ ವಿವಿಧ ಉದ್ಯಮಗಳು ಅಕ್ಷರಶಃ ನೆಲ ಕಚ್ಚುತ್ತವೆ. ಇಂತಹ ಸಂಭವನೀಯ ಅಪಾಯದಿಂದ ಪಾರಾಗಲು ಚಿಪ್‍ಗಳ ಉತ್ಪಾದನೆಯನ್ನು ಭಾರತ, ಥಾಯ್ಲೆಂಡ್‌, ವಿಯೆಟ್ನಾಂ, ಫಿಲಿಪ್ಪೀನ್ಸ್ ಮುಂತಾದ ದೇಶಗಳಿಗೆ ವರ್ಗಾಯಿಸುವ ಪ್ರಯತ್ನ ಪ್ರಾರಂಭವಾಗಿದೆ. ಅದಕ್ಕಿಂತ ಮುಖ್ಯವಾಗಿ, ನಮ್ಮ ದೇಶವನ್ನು ಚಿಪ್‍ಗಳ ಉತ್ಪಾದನೆಯ ಪ್ರಮುಖ ಕೇಂದ್ರವನ್ನಾಗಿ ಅಭಿವೃದ್ಧಿ
ಪಡಿಸುವ ದಿಕ್ಕಿನಲ್ಲಿ ಪ್ರಯತ್ನಗಳು ಪ್ರಾರಂಭವಾಗಿವೆ.

‘ತೈವಾನ್ ಸೆಮಿಕಂಡಕ್ಟರ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿ’ (ಟಿಎಸ್‍ಎಂಸಿ) ಪ್ರಪಂಚದ ಅತಿದೊಡ್ಡ, ಅತ್ಯಾಧುನಿಕ ಚಿಪ್‍ಗಳನ್ನು ಉತ್ಪಾದಿಸುವ ಪ್ರತಿಷ್ಠಿತ ಸಂಸ್ಥೆ. ಇದು ಅಸ್ತಿತ್ವಕ್ಕೆ ಬಂದದ್ದು 1987ರಲ್ಲಿ. ಆದರೆ ಅದಕ್ಕಿಂತ ಮೂರು ವರ್ಷಗಳ ಮುಂಚೆಯೇ 1984ರಲ್ಲಿ ಪಂಜಾಬಿನ ಮೊಹಾಲಿಯಲ್ಲಿ 51 ಎಕರೆಗಳ ವಿಶಾಲ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದ, ಸಾರ್ವಜನಿಕ ವಲಯದ ‘ಸೆಮಿಕಂಡಕ್ಟರ್ ಲ್ಯಾಬೊರೇಟರಿ’ (ಎಸ್‍ಸಿಎಲ್), ಸೀಮಿತ ಪ್ರಮಾಣದಲ್ಲಿ ಸೆಮಿಕಂಡಕ್ಟರ್‌ ಚಿಪ್‌ಗಳ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆ ಗಳನ್ನು ಪ್ರಾರಂಭಿಸಿತ್ತು. ಆದರೆ 1989ರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಈ ಸಂಸ್ಥೆಯ ಎಲ್ಲ ಸೌಲಭ್ಯಗಳೂ ಸಂಪೂರ್ಣವಾಗಿ ನಾಶವಾದವು.

ಬಹಳಷ್ಟು ಪ್ರಯತ್ನಗಳ ನಂತರ 1997ರಲ್ಲಿ ಎಸ್‍ಸಿಎಲ್ ಮತ್ತೊಮ್ಮೆ ಸಕ್ರಿಯವಾಯಿತು. 2010ರಲ್ಲಿ ಇಸ್ರೇಲ್‍ನ ‘ಟವರ್ ಸೆಮಿಕಂಡಕ್ಟರ್’ ಸಂಸ್ಥೆಯ ನೆರವಿನಿಂದ, 180 ನ್ಯಾನೊ ಮೀಟರ್ ಚಿಪ್‍ಗಳ ಉತ್ಪಾದನೆ ಪ್ರಾರಂಭವಾಯಿತು. ಈ ಚಿಪ್‍ಗಳನ್ನು ನಮ್ಮ ದೇಶದ ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಬಳಸಲಾ ಗುತ್ತಿದ್ದರೂ ಒಟ್ಟಾರೆಯಾಗಿ ಸರ್ಕಾರದ ನಿರಾಸಕ್ತಿ, ಬಂಡವಾಳದ ಕೊರತೆ, ಸ್ಥಾವರ ಸಾಮರ್ಥ್ಯದ ಅತಿ ಕಡಿಮೆ ಬಳಕೆಯಂತಹ ಕಾರಣಗಳಿಂದಾಗಿ ಉತ್ಪಾದನೆ ಕುಂಟುತ್ತಾ ನಡೆದು, 2021– 22ರ ಸಾಲಿನಲ್ಲಿ ₹ 318 ಕೋಟಿ ನಷ್ಟ ಅನುಭವಿಸಿತು.

2020ಕ್ಕೆ ಮುಂಚೆ, ಸೆಮಿಕಂಡಕ್ಟರ್ ಚಿಪ್‌ಗಳ ಉತ್ಪಾದನಾ ವಲಯಕ್ಕೆ ನಮ್ಮ ದೇಶದಲ್ಲಿ ಅತಿ ಹೆಚ್ಚಿನ ಮಹತ್ವ ಇರಲಿಲ್ಲವೆಂಬುದು ತಜ್ಞರ ಅಭಿಪ್ರಾಯ. ಕೋವಿಡ್ ನಂತರ ಕಂಡುಬಂದ ಸೆಮಿಕಂಡಕ್ಟರ್ ಚಿಪ್‍ಗಳ ತೀವ್ರ ಕೊರತೆ ಮತ್ತು ಅವುಗಳ ಪೂರೈಕೆಗಾಗಿ ಸೀಮಿತ ಮೂಲಗಳ ಮೇಲಿನ ಅವಲಂಬನೆ ತರುವ ಅಪಾಯಗಳು ಸರ್ಕಾರವನ್ನು ಎಚ್ಚರಿಸಿದವು. 2021ರಲ್ಲಿ ಕೇಂದ್ರ ಸರ್ಕಾರವು ₹ 76,000 ಕೋಟಿ ಬಂಡವಾಳದ ವಿಶೇಷ ‘ಸೆಮಿಕಂಡಕ್ಟರ್ ಮಿಷನ್’ ಯೋಜನೆಯನ್ನು ಪ್ರಾರಂಭಿಸಿತು. ಅದರ ಮೊದಲ ಭಾಗವಾಗಿ, ₹ 16,500 ಕೋಟಿ ವೆಚ್ಚದಲ್ಲಿ ಮೊಹಾಲಿ ಲ್ಯಾಬೊರೇಟರಿಯ ಎಲ್ಲ ಸೌಲಭ್ಯಗಳನ್ನೂ ಉನ್ನತೀಕರಣಗೊಳಿಸಲಾಗುತ್ತಿದೆ.

ನಮ್ಮ ದೇಶದ ರಕ್ಷಣಾ ಮತ್ತು ಬಾಹ್ಯಾಕಾಶ ವಲಯಗಳಲ್ಲಿರುವ ಚಿಪ್‍ಗಳ ಒಟ್ಟು ಬೇಡಿಕೆಯಲ್ಲಿ ಶೇ 60ರಷ್ಟು, 180 ನ್ಯಾನೊ ಮೀಟರ್ ಚಿಪ್‍ಗಳಿಗಿದೆ. ಈ ಎಲ್ಲ ಬೇಡಿಕೆಯನ್ನೂ ಪೂರೈಸುವುದರ ಜೊತೆಗೆ ಹಂತ ಹಂತವಾಗಿ ಉತ್ಪಾದನಾ ಸಾಮರ್ಥ್ಯ ಮತ್ತು ಕೌಶಲಗಳನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯ ಎರಡನೆಯ ಭಾಗವಾಗಿ, ಅಹಮದಾಬಾದ್ ಜಿಲ್ಲೆಯ ಸನಂದ್ ನಗರದ ಕೈಗಾರಿಕಾ ವಲಯದಲ್ಲಿ ಅಮೆರಿಕದ ‘ಮೈಕ್ರಾನ್ ಟೆಕ್ನಾಲಜಿ’ ಸಂಸ್ಥೆ ₹ 22,000 ಕೋಟಿ ಬಂಡವಾಳ ಹೂಡಿ, ಮೊಬೈಲ್, ಲ್ಯಾಪ್‌ಟಾಪ್, ಸರ್ವರ್ಸ್, ವಿದ್ಯುತ್ ವಾಹನಗಳು, ದೂರಸಂಪರ್ಕ ಮತ್ತು ರಕ್ಷಣಾ ಉಪಕರಣಗಳಿಗೆ ಬೇಕಾದ ಅತ್ಯಾಧುನಿಕ ಚಿಪ್‍ಗಳನ್ನು ಉತ್ಪಾದಿಸಲಿದೆ. ಈ ಬಂಡವಾಳದ ಶೇ 50ರಷ್ಟು ಕೇಂದ್ರ ಸರ್ಕಾರ ಮತ್ತು ಶೇ 20ರಷ್ಟು ಗುಜರಾತ್ ಸರ್ಕಾರದಿಂದ ವಿಶೇಷ ಸಬ್ಸಿಡಿಯ ರೂಪದಲ್ಲಿ ದೊರೆಯಲಿದ್ದು, 2024ರ ಡಿಸೆಂಬರ್ ವೇಳೆಗೆ ಉತ್ಪಾದನೆ ಪ್ರಾರಂಭವಾಗಲಿದೆ.

ಗಾಂಧಿನಗರದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ ‘ಸೆಮಿಕಾನ್- 2023’ ಸಮಾವೇಶದಲ್ಲಿ ಭಾಗವಹಿಸಿದ ಅಮೆರಿಕದ ‘ಅಡ್ವಾನ್ಸ್ಡ್ ಮೈಕ್ರೊ ಡಿವೈಸಸ್’ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ 400 ದಶಲಕ್ಷ ಡಾಲರ್‌ಗಳ (ಅಂದಾಜು ₹ 3,329 ಕೋಟಿ) ಹೂಡಿಕೆ ಮಾಡಿ, ಬೆಂಗಳೂರಿನಲ್ಲಿ ಅತಿ ದೊಡ್ಡ ಸೆಮಿಕಂಡಕ್ಟರ್‌ ಚಿಪ್‌ಗಳ ವಿನ್ಯಾಸ, ಅಭಿವೃದ್ಧಿ ಮತ್ತು ಇನೊವೇಷನ್ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಇದರೊಂದಿಗೆ ರಾಜ್ಯ ಸರ್ಕಾರದ ಪ್ರಯತ್ನದ ಫಲವಾಗಿ ಅಮೆರಿಕದ ‘ಅಪ್ಲೈಡ್ ಮೆಟೀರಿಯಲ್ಸ್’ ಕಂಪನಿಯು ಮುಂದಿನ ನಾಲ್ಕು ವರ್ಷಗಳಲ್ಲಿ, ಬೆಂಗಳೂರಿನಲ್ಲಿ ಚಿಪ್‍ಗಳ ಉತ್ಪಾದನೆಗೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಅಭಿವೃದ್ಧಿಯ ಎಂಜಿನಿಯರಿಂಗ್ ಕೇಂದ್ರವನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದೆ.

ನಮ್ಮ ದೇಶದ ಮೊದಲ ‘ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್ ಸ್ಥಾವರ’ವು ಗುಜರಾತ್‍ನ ಧೊಲೇರಾ ವಿಶೇಷ ಹೂಡಿಕೆಯ ವಲಯದಲ್ಲಿ ಬರಲಿದೆ. ವೇದಾಂತ ಲಿಮಿಟೆಡ್ ಸ್ಥಾಪಿಸುತ್ತಿರುವ ಈ ಸ್ಥಾವರವು ಮುಂದಿನ ಎರಡೂವರೆ ವರ್ಷಗಳ ಒಳಗಾಗಿ, ಭಾರತದಲ್ಲಿಯೇ ವಿನ್ಯಾಸಗೊಂಡು ಉತ್ಪಾದನೆಯಾದ ಚಿಪ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಸಂಸ್ಥೆ ತಿಳಿಸಿದೆ. ಚಿಪ್‍ಗಳ ವಿನ್ಯಾಸ ಮತ್ತು ಉತ್ಪಾದನೆ ಅತ್ಯಂತ ಸಂಕೀರ್ಣವಾದ, ಅಣುಗಳ ಮಟ್ಟದ ನಿಖರತೆ ಅಗತ್ಯವಿರುವ ಬಹು ಸವಾಲಿನ ಕೆಲಸ. ಅದಕ್ಕೆ ಬೇಕಾದ ಅತಿ ವಿಶಿಷ್ಟ ಕೌಶಲದ ಪರಿಣತರಾಗಲೀ ಅತ್ಯಾಧುನಿಕ ಯಂತ್ರೋಪಕರಣಗಳಾಗಲೀ ಸದ್ಯದಲ್ಲಿ ನಮ್ಮಲ್ಲಿ ಇಲ್ಲ. ತೈವಾನ್‍ನ ಟಿಎಸ್‍ಎಂಸಿ ಸಂಸ್ಥೆಯ ಸಂಸ್ಥಾಪಕ ಮಾರಿಸ್‍ಚಾಂಗ್, ಅಮೆರಿಕದ ಆರಿಜೋನಾದಲ್ಲಿ ಚಿಪ್ ಫ್ಯಾಬ್ರಿಕೇಷನ್ ಸ್ಥಾವರವನ್ನು ಸ್ಥಾಪಿಸಲು ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಸಂಪೂರ್ಣ ಯಶಸ್ಸು ದೊರೆತಿಲ್ಲ. ಚೀನಾದ ಕಥೆಯೂ ಹೆಚ್ಚುಕಡಿಮೆ ಇದೇ. ಈ ನಡುವೆ ವೇದಾಂತ ಜೊತೆಗೆ ಚಿಪ್ ಉತ್ಪಾದನೆಗೆ ಕೈಜೋಡಿಸಿದ್ದ ತೈವಾನ್‍ನ ಫಾಕ್ಸ್‌ಕಾನ್‌ ಸಂಸ್ಥೆಯು ಕಾರಣಾಂತರಗಳಿಂದ ಜಂಟಿ ಯೋಜನೆಯಿಂದ ಹಿಂದೆ ಸರಿದಿದ್ದು, ವೇದಾಂತ ಬೇರೆ ಮೂರು ತಾಂತ್ರಿಕ ಸಂಸ್ಥೆಗಳೊಡನೆ ಒಪ್ಪಂದಕ್ಕೆ ಮುಂದಾಗಿದೆ.

ಈ ಕಾರಣಗಳಿಂದಾಗಿ ಮುಂದಿನ ಎರಡು ವರ್ಷಗಳ ಒಳಗಾಗಿ, ನಮ್ಮ ದೇಶದಲ್ಲಿ ಅತ್ಯಾಧುನಿಕ ಸೆಮಿಕಂಡಕ್ಟರ್‌ ಚಿಪ್‍ಗಳ ವಿನ್ಯಾಸ ಮತ್ತು ಉತ್ಪಾದನೆ ಕಷ್ಟಸಾಧ್ಯ ಎಂಬುದು ಪರಿಣತರ ನಿಲುವು. ಪದಾರ್ಥ ವಿಜ್ಞಾನ (ಮೆಟೀರಿಯಲ್ ಸೈನ್ಸ್), ಸಿಸ್ಟಮ್-ಆನ್-ಚಿಪ್, ಸಿಸ್ಟಮ್ ಮಾಡೆಲಿಂಗ್, ವಿದ್ಯುತ್‍ಕಾಂತೀಯ ವಿಜ್ಞಾನ, ಪ್ಲಾಸ್ಮಾ ರಸಾಯನ ವಿಜ್ಞಾನ, ಮೈಕ್ರೊ ಎಲೆಕ್ಟ್ರಾನಿಕ್ಸ್, ಸಿಲಿಕಾನ್ ಸಂಸ್ಕರಣೆ, ಸ್ವಯಂಚಾಲಿತ ಯಂತ್ರೋಪಕರಣಗಳ ಕ್ಷೇತ್ರ ಗಳಲ್ಲಿ ತಂತ್ರಜ್ಞರು, ಎಂಜಿನಿಯರುಗಳು ಮತ್ತು ಇನ್ನಿತರ ಸಿಬ್ಬಂದಿಗೆ ವಿಶೇಷ ತರಬೇತಿ ಮತ್ತು ಕೌಶಲಾಭಿವೃದ್ಧಿ ತೀರಾ ಅಗತ್ಯ. ಈ ಸವಾಲುಗಳನ್ನು ಎದುರಿಸಲು ಪ್ರಾರಂಭದಲ್ಲಿ, ಪ್ರಪಂಚದ ಪ್ರತಿಷ್ಠಿತ ಚಿಪ್ ಉತ್ಪಾದನಾ ಸಂಸ್ಥೆಗಳಿಂದ 300 ಪರಿಣತರನ್ನು ಭಾರತಕ್ಕೆ ಕರೆತರುವ ಪ್ರಯತ್ನಗಳು ನಡೆದಿವೆ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಭಾರತದ ಸೆಮಿಕಂಡಕ್ಟರ್‌ ಚಿಪ್‌ ಉದ್ಯಮ ಇಂದು ಭರವಸೆಯ ಬದಲಾವಣೆಗಳ ಹೊಸ್ತಿಲಲ್ಲಿದೆ. ವಿಪುಲವಾದ ಹೊಸ ಅವಕಾಶಗಳು ಇರುವಂತೆಯೇ ಅಸಂಖ್ಯ ಸವಾಲುಗಳೂ ಇವೆ. ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಸವಾಲು, ಸಂಕಷ್ಟಗಳನ್ನು ಎದುರಿಸುತ್ತಲೇ ಜಗತ್ತಿನ ಗಮನ ಸೆಳೆಯುವಂತಹ ಸಾಧನೆಗಳಿಗೆ ಕಾರಣವಾದ ರಾಜಕೀಯ ಇಚ್ಛಾಶಕ್ತಿ, ದೂರದೃಷ್ಟಿ, ಬದ್ಧತೆ, ನಾವೀನ್ಯವೇ ಚಿಪ್ ಉದ್ಯಮದಲ್ಲೂ ಕಂಡುಬರಬೇಕೆಂಬುದು ಪರಿಣತರ ನಿರೀಕ್ಷೆ.

ಎಚ್.ಆರ್.ಕೃಷ್ಣಮೂರ್ತಿ

ಎಚ್.ಆರ್.ಕೃಷ್ಣಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT