ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Doctor's Day| ಶ್ವಾಸನಾಳ ಸೇರಿದ್ದ ಅಡಿಕೆ ಗೋಟು ತೆಗೆದ ಸನ್ನಿವೇಶ: ಡಾ.ಎಸ್.ಶ್ರೀಧರ್

ವೈದ್ಯರ ದಿನದ ವಿಶೇಷ....
Published 30 ಜೂನ್ 2023, 23:31 IST
Last Updated 30 ಜೂನ್ 2023, 23:31 IST
ಅಕ್ಷರ ಗಾತ್ರ

ಡಾ.ಎಸ್.ಶ್ರೀಧರ್

ದಶಕದ ಹಿಂದಿನ ಮಾತು. ಜುಲೈ ತಿಂಗಳ ರಾತ್ರಿ. ಧೋ ಮಳೆ. ರಾತ್ರಿ ಊಟ ಮಾಡಿ, ಮಲಗುವ ಮುನ್ನ ಹವ್ಯಾಸದಂತೆ ಪುಸ್ತಕವೊಂದನ್ನು ತಿರುವಿ ಹಾಕುತ್ತಾ ಕುಳಿತಿದ್ದೆ. ಸಹೋದ್ಯೋಗಿಯೊಬ್ಬರು ಕರೆ ಮಾಡಿ ತುರ್ತಾಗಿ ಆಸ್ಪತ್ರೆಗೆ ಬರುವಂತೆ ಕೋರಿದರು.

ವಿಷಯ ತುರ್ತು ಎಂದು ಅವರು ಹೇಳಿದ್ದರಿಂದ ರೇನ್‌ಕೋಟ್‌ ಧರಿಸಿದವನೇ ಮಳೆಯಲ್ಲೇ ಆಸ್ಪತ್ರೆಯತ್ತ ಸ್ಕೂಟರ್ ತಿರುಗಿಸಿದೆ. ತುರ್ತು ಚಿಕಿತ್ಸೆ ಕೊಠಡಿಯಲ್ಲಿ ಮಂಚದ ಮೇಲೆ ಮಲಗಿದ್ದ ಪುಟ್ಟ ಮಗು ಉಸಿರಾಡಲು ಕಷ್ಟಪಡುತ್ತಿತ್ತು. ಪಕ್ಕದಲ್ಲಿ ನಿಂತಿದ್ದ ಪಾಲಕರು ದುಃಖದ ಮಡುವಿನಲ್ಲಿದ್ದರು. ಮಗಳ ಮುಖ ನೋಡುತ್ತಾ ಆಕೆ ಉಸಿರಾಡಲೂ ಪಡುತ್ತಿದ್ದ ಕಷ್ಟ ಕಂಡು ಕಣ್ಣೀರು ಸುರಿಸುತ್ತಿದ್ದರು. ವಿಷಯ ಏನೆಂದು ಸಹೋದ್ಯೋಗಿಯನ್ನು ವಿಚಾರಿಸಿದೆ. ಆಗ ಮಗುವಿನ ತಂದೆಯು ನಡೆದ ವೃತ್ತಾಂತ ವಿವರಿಸಿದರು.

ಒಂದೂವರೆ ವರ್ಷದ ಆ ಪುಟ್ಟ ಬಾಲೆ ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಬಳಿಯ ಹಳ್ಳಿಯೊಂದರ ದಂಪತಿಯ ಒಬ್ಬಳೇ ಮಗಳು. ಬಹಳ ವರ್ಷದ ನಂತರ ಹುಟ್ಟಿದ್ದರಿಂದ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ, ಆ ರಾತ್ರಿ ಮನೆಯ ವರಾಂಡದಲ್ಲಿ ಒಣಹಾಕಿದ್ದ ಅಡಿಕೆ ಗೋಟನ್ನು ಮಗು ಆಟವಾಡುತ್ತಾ ಆಕಸ್ಮಿಕವಾಗಿ ಬಾಯಲ್ಲಿ ಹಾಕಿಕೊಂಡು ನುಂಗಿತ್ತು. ಅಡಿಕೆ ಗೋಟು ಸೀದಾ ಬಾಲಕಿಯ ಶ್ವಾಸನಾಳದಲ್ಲಿ ಸಿಲುಕಿಕೊಂಡಿತ್ತು. ಅಳುತ್ತಾ ಒದ್ದಾಡುತ್ತಿದ್ದ ಮಗುವಿಗೆ ಉಸಿರಾಡಲು ಕಷ್ಟವಾಗಿದೆ. ಅಡಿಕೆ ಗೋಟು ತೆಗೆಯಲು ಎಲ್ಲ ಪ್ರಯತ್ನ ನಡೆಸಿದ್ದ ಪಾಲಕರು, ಮಗುವಿನ ಉಸಿರಾಟ ಕ್ಷೀಣವಾಗುತ್ತಿರುವುದನ್ನು ಕಂಡು ಆಸ್ಪತ್ರೆಗೆ ಧಾವಿಸಿದ್ದರು.

ಮಗುವಿನ ಸ್ಥಿತಿ ಗಮನಿಸಿದವನೇ ತುರ್ತಾಗಿ ಅದೊಂದು ಕ್ಲಿಷ್ಟಕರ ಚಿಕಿತ್ಸೆಗೆ ಮುಂದಾದೆ. ಶ್ವಾಸನಾಳದ ಎಂಡೊಸ್ಕೋಪಿ ಮಾಡಿ ಬ್ರಾಂಕೊಸ್ಕೋಪಿ ಚಿಕಿತ್ಸೆ ಮೂಲಕ ಅಡಿಕೆ ಗೋಟು ಹೊರಗೆ ತೆಗೆಯಲಾಯಿತು. ಮಧ್ಯರಾತ್ರಿ ವೇಳೆಗೆ ಆ ಮಗು ಸಹಜ ಸ್ಥಿತಿಗೆ ಬಂತು. ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂಬ ವಿಷಯ ತಿಳಿದಾಗ ಆ ದಂಪತಿಯ ಮುಖದಲ್ಲಿ ಮೂಡಿದ ಸಂತಸ, ಕಣ್ಣಲ್ಲಿನ ಕೃತಜ್ಞತೆಯ ಹೊಳಪು ನನಗೆ ಈಗಲೂ ನೆನಪಿದೆ. ನನ್ನ ವೈದ್ಯಕೀಯ ವೃತ್ತಿ ಬದುಕಿನಲ್ಲಿ ಅದೊಂದು ಮರೆಯಲಾಗದ ಕ್ಷಣ.

ಡಾ.ಎಸ್.ಶ್ರೀಧರ್, ವೈದ್ಯಕೀಯ ಅಧೀಕ್ಷಕರು, ಮೆಗ್ಗಾನ್ ಆಸ್ಪತ್ರೆ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT