‘ರಾಷ್ಟ್ರೀಯ ಶಿಕ್ಷಣ ನೀತಿ– 2020’ಕ್ಕೆ (ಎನ್ಇಪಿ) ಈಗ ಐದು ವರ್ಷ ತುಂಬುತ್ತಿದೆ. ಶಿಕ್ಷಣ ಕ್ಷೇತ್ರದ ಪಯಣದಲ್ಲಿ ಭಾರತವು ಅತ್ಯಂತ ನಾಜೂಕಾದ ಸ್ಥಿತಿಯಲ್ಲಿ ಇರುವ ಸಂದರ್ಭವಿದು. 2020ರ ಜುಲೈ 29ರಂದು, ಕೋವಿಡ್ ಸಾಂಕ್ರಾಮಿಕ ವ್ಯಾಪಕವಾಗಿದ್ದಾಗ ‘ಎನ್ಇಪಿ’ ಜಾರಿಗೆ ಬಂತು. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯ ಹಂತದವರೆಗೆ ಕ್ರಾಂತಿಕಾರಿ ಬದಲಾವಣೆ ತರುವ ಭರವಸೆಯೊಂದಿಗೆ ಹೊಸ ಶಿಕ್ಷಣ ನೀತಿ ಆರಂಭಗೊಂಡಿತು. 1986ರ ರಾಷ್ಟ್ರೀಯ ನೀತಿಯನ್ನು, ಬದಲಾವಣೆಯ ಮಹತ್ವಾಕಾಂಕ್ಷೆಯೊಂದಿಗೆ ‘ಎನ್ಇಪಿ’ ಬದಲಿಸಿತು.

ಈ ವರ್ಷ ಏಪ್ರಿಲ್ 25ರಂದು ದೇಶದ ಪ್ರಸಿದ್ಧ ವಿಜ್ಞಾನಿ ಕೆ. ಕಸ್ತೂರಿರಂಗನ್ ನಿಧನರಾದರು. ದೂರದೃಷ್ಟಿಯುಳ್ಳ ವಿಜ್ಞಾನಿಯೂ ಶಿಕ್ಷಣ ತಜ್ಞರೂ ಆಗಿದ್ದ ಅವರ ನೇತೃತ್ವದ ಸಮಿತಿಯೇ ‘ಎನ್ಇಪಿ’ ಕರಡನ್ನು ಸಿದ್ಧಪಡಿಸಿದ್ದು.

ದೂರದೃಷ್ಟಿಯುಳ್ಳ ಹಾಗೂ ರಚನಾತ್ಮಕ ಸುಧಾರಕರಾಗಿ ಈ ಸಂದರ್ಭದಲ್ಲಿ ನಾವು ಕಸ್ತೂರಿರಂಗನ್ ಅವರನ್ನು ಸ್ಮರಿಸಿಕೊಳ್ಳಬೇಕು.

ಕಸ್ತೂರಿರಂಗನ್ ಅವರ ಚುರುಕುಮತಿಯಷ್ಟೇ ಅಲ್ಲದೆ, ಅವರಲ್ಲಿನ ಸೂಕ್ಷ್ಮ ಪ್ರಜ್ಞೆ ಕೂಡ ಎಲ್ಲರನ್ನೂ ಆಕರ್ಷಿಸುತ್ತಿತ್ತು. ವಿಜ್ಞಾನ ಹಾಗೂ ಬಾಹ್ಯಾಕಾಶ ಸಂಶೋಧನೆಯ ಹಿನ್ನೆಲೆಯಿಂದ ಬಂದವರಾದರೂ ಅವರು ತಮ್ಮನ್ನು ತಾವು ಶಿಕ್ಷಣದ ಸಂಕೀರ್ಣ ಸಂಗತಿಗಳಲ್ಲಿ ತೊಡಗಿಸಿಕೊಂಡರು. ಶಾಲೆಯಿಂದ ವಿಶ್ವವಿದ್ಯಾಲಯದವರೆಗಿನ ಶಿಕ್ಷಣದ ಆಮೂಲಾಗ್ರ ಸುಧಾರಣೆಗೆ ಅವರು ಕಟಿಬದ್ಧರಾಗಿದ್ದರು. ಈ ನಿಟ್ಟಿನಲ್ಲಿ ಪಠ್ಯಕ್ರಮ ಹೇಗಿರಬೇಕೆಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟರು. ಶಿಕ್ಷಣದಲ್ಲಿ ಹೊಸತನ ತರುವುದು ಹೇಗೆಂದು ನಿರಂತರವಾಗಿ ಚಿಂತಿಸುತ್ತಿದ್ದರು. ಶಿಕ್ಷಣ ಕುರಿತು ಅವರು ಖುದ್ದು ವಿಷಯದ ಆಳಕ್ಕಿಳಿದು, ಆ ವಿಷಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಅರಿತುಕೊಂಡ ಸಂಗತಿಯನ್ನು ವ್ಯವಸ್ಥೆಯ ಸುಧಾರಣೆಗೆ ಅಳವಡಿಸಲೇಬೇಕು ಎಂಬ ಬದ್ಧತೆ ಅವರಲ್ಲಿ ಇತ್ತು.

ಎನ್ಇಪಿ ಸಿದ್ಧಪಡಿಸುವಾಗ, ಮಾಹಿತಿಯನ್ನು ಕಲೆಹಾಕುವ ಸಾಧ್ಯತೆಗಳ ಬಗ್ಗೆ ಅವರದು ಮುಕ್ತ ಮನೋಧರ್ಮ ಆಗಿತ್ತು. ಸಮುದಾಯಗಳ ಮುಖಂಡರು, ಅಲ್ಪಸಂಖ್ಯಾತ ಸಮುದಾಯಗಳು, ಬುಡಕಟ್ಟು ಜನರು, ಈಶಾನ್ಯ ರಾಜ್ಯಗಳ ಜನರು, ಲಿಂಗತ್ವ ಅಲ್ಪಸಂಖ್ಯಾತರು– ಈ ಎಲ್ಲರಿಂದಲೂ ಅವರು ಮಾಹಿತಿ ಪಡೆದುಕೊಂಡಿದ್ದರು. ಹೀಗೆ ಮಾಹಿತಿ ಪಡೆಯುವಾಗ ಅವರು, ಮಾಹಿತಿ ನೀಡುವವರೊಂದಿಗೆ ನಮ್ರ ಮನೋಭಾವದಿಂದ ವರ್ತಿಸುತ್ತಿದ್ದರು. ಮೇಲ್ಮಟ್ಟದ ಮಾತುಕತೆ ನಡೆಸಿ, ಅವರು ಸುಮ್ಮನಾಗುತ್ತಿರಲಿಲ್ಲ. ಪ್ರತಿಯೊಂದು ಸಲಹೆಯನ್ನು ದಾಖಲಿಸಿಕೊಂಡು, ಪರಿಶೀಲಿಸುತ್ತಿದ್ದರು. ಆ ಸಲಹೆ ಶಿಕ್ಷಣ ನೀತಿಯಲ್ಲಿ ಸಮರ್ಪಕವಾಗಿ ಮಿಳಿತವಾಗುವಂತೆ ಕಾಳಜಿ ವಹಿಸುತ್ತಿದ್ದರು. ಎನ್ಇಪಿಗೆ ಸಂಬಂಧಿಸಿದಂತೆ ಸಂವಾದ ನಡೆಯುವಾಗ, ವಿವಿಧ ಸಮಾಜೋ– ಸಾಂಸ್ಕೃತಿಕ ಹಿನ್ನೆಲೆಯವರು ತೊಡಗಿದ್ದಾರೆಯೇ ಇಲ್ಲವೇ ಎನ್ನುವುದನ್ನು ಖಾತರಿಪಡಿಸಿಕೊಳ್ಳುತ್ತಿದ್ದರು. ಇದರ ಫಲಿತವಾಗಿಯೇ, ಎನ್ಇಪಿ ರೂಪರೇಷೆಯಲ್ಲಿ ‘ಎಲ್ಲರ ಒಳಗೊಳ್ಳುವಿಕೆ’ ಎನ್ನುವುದು ನಿಜಾರ್ಥದಲ್ಲಿ ಇತ್ತೇ ವಿನಾ ಔಪಚಾರಿಕ ತೋರಿಕೆಗೆ ಎಂಬಂತೆ ಇರಲಿಲ್ಲ.

ಕಸ್ತೂರಿರಂಗನ್ ಅವರು ಪೂರ್ವ ನಿಶ್ಚಿತ ಉತ್ತರಗಳೊಂದಿಗೆ ಯಾವುದೇ ವಾಗ್ವಾದ ಶುರು ಮಾಡುತ್ತಿರಲಿಲ್ಲ. ವಿವಿಧ ದೃಷ್ಟಿಕೋನಗಳಿಗೆ ಅವಕಾಶ ಕಲ್ಪಿಸಬೇಕು ಎನ್ನುವ ಎಚ್ಚರ ಸದಾ ಅವರಲ್ಲಿ ಇರುತ್ತಿತ್ತು. ಆ ಎಚ್ಚರ ಎನ್ಇಪಿ ಸಲಹಾ ಸಭೆಗಳಲ್ಲಿ ಎದ್ದು ಕಾಣುತ್ತಿತ್ತು. ಹಿಂದಿನ ನೀತಿಗಳಲ್ಲಿನ ಮಾಹಿತಿಯನ್ನು ಕರಡು ರೂಪಿಸಲು ಅಗತ್ಯ ಅಧ್ಯಯನಕ್ಕೆಂದು ಪರಿಗಣಿಸುವುದು ಸಹಜ. ‘21ನೇ ಶತಮಾನದಲ್ಲಿ ಹೊಸ ರೀತಿಯಲ್ಲಿ ಆಲೋಚಿಸಿ, ಇಂದಿನ ಸವಾಲುಗಳನ್ನು ಮನಗಂಡು, ನಾಳಿನ ಸದೃಢ ಭಾರತ ನಿರ್ಮಾಣಕ್ಕಾಗಿ ನೀತಿ ರೂಪಿಸೋಣ’ ಎಂದವರು ಹೇಳುತ್ತಿದ್ದರು. ನಡೆದುಬಂದ ದಾರಿಯ ಅರಿವು, ಅನುಭವದೊಂದಿಗೆ ವರ್ತಮಾನದ ಸವಾಲುಗಳನ್ನೂ ಒಳಗೊಂಡು ದೇಶದ ಭವಿಷ್ಯವನ್ನು ರೂಪಿಸುವ ದಾರ್ಶನಿಕ ಪ್ರಜ್ಞೆ ಅವರ ಕಾರ್ಯವಿಧಾನದ ಭಾಗವಾಗಿತ್ತು.

ಅಸಾಧಾರಣವಾದ ಸಂಯಮ ಕಸ್ತೂರಿರಂಗನ್ ಅವರ ವ್ಯಕ್ತಿತ್ವದಲ್ಲಿ ಎದ್ದುಕಾಣುತ್ತಿದ್ದ ಅಂಶ. ವೈಯಕ್ತಿಕವಾಗಿ ಉಂಟಾಗುವ ದೋಷಗಳು ಅಥವಾ ಸಾಂಸ್ಥಿಕವಾಗಿ ಆಗುವ ವಿಳಂಬದ ಕುರಿತು ಅವರೆಂದೂ ದೂರುತ್ತಿರಲಿಲ್ಲ. ಪ್ರಕ್ರಿಯೆಯು ನಿಧಾನಗತಿಯಲ್ಲಿ ಸಾಗುತ್ತಿದ್ದಾಗಲೂ ತಾಳ್ಮೆಯಿಂದ ಪ್ರತಿಕ್ರಿಯಿಸುತ್ತಿದ್ದರು. ಸರಿಯಾದ ರೀತಿಯಲ್ಲಿ ಗಮನಹರಿಸಿ, ಸಮರ್ಪಕವಾಗಿ ಕೆಲಸ ಪೂರೈಸುವಂತೆ ಸಹೋದ್ಯೋಗಿಗಳನ್ನು ಉತ್ತೇಜಿಸುತ್ತಿದ್ದರು. ಅವರ ಸ್ಥಿತಪ್ರಜ್ಞೆಯೇ ಸಂಕೀರ್ಣವಾದ ಸಂವಾದಗಳು ಅರ್ಥಪೂರ್ಣವಾಗಿ ನಡೆಯಲು ಪ್ರೇರಕಶಕ್ತಿಯಂತೆ ಇತ್ತು. ಏರಿದ ದನಿಯಲ್ಲಿ ಅವರು ಮಾತನಾಡಿದ್ದು ವಿರಳ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದು ಅವರ ಅಭ್ಯಾಸ ಆಗಿರಲಿಲ್ಲ. ಮೇಲಿನ ಶ್ರೇಣಿಯಲ್ಲಿ ಇರುವವರು ಉಳಿದವರೊಡನೆ ದರ್ಪದ ಧೋರಣೆಯಿಂದ ಮಾತನಾಡಲು ಅಥವಾ ವ್ಯವಹರಿಸಲು ಅವರು ಅವಕಾಶವನ್ನೇ ಕೊಡುತ್ತಿರಲಿಲ್ಲ. ಉನ್ನತ ಅಧಿಕಾರಿಗಳಿಂದ ಹಿಡಿದು ಯುವ ಸಂಶೋಧಕರವರೆಗೆ ಎಲ್ಲರ ಅಭಿಪ್ರಾಯವನ್ನೂ ಗೌರವಿಸುತ್ತಿದ್ದರು. ಎಲ್ಲರನ್ನೂ ಹೆಸರು ಹಿಡಿದೇ ಮಾತನಾಡಿಸುತ್ತಿದ್ದುದು ಅವರ ವೈಶಿಷ್ಟ್ಯವಾಗಿತ್ತು.

ಸಮಯಪ್ರಜ್ಞೆ ಕಸ್ತೂರಿರಂಗನ್ ಅವರ ಮತ್ತೊಂದು ಅನುಕರಣೀಯ ಗುಣ. ಸಭೆಗಳಿಗೆ ತಡವಾಗಿ ಬರುವ ಪೈಕಿ ಅವರಾಗಿರಲಿಲ್ಲ. ಸಾಕಷ್ಟು ಮುಂಚಿತವಾಗಿ ಸಭೆಗಳಿಗೆ ಬರುತ್ತಿದ್ದ ಅವರು, ಆ ಸ್ಥಳದಲ್ಲಿ ಸಿದ್ಧತೆ ನಡೆಯುತ್ತಿದ್ದರೂ ತಾಳ್ಮೆಯಿಂದ ನೋಡುತ್ತಾ ನಿಲ್ಲುತ್ತಿದ್ದರು. ಪಾಲ್ಗೊಳ್ಳಲು ಬರುತ್ತಿದ್ದ ಪ್ರತಿಯೊಬ್ಬರನ್ನೂ ಸಹೃದಯತೆಯಿಂದ ಮಾತನಾಡಿಸುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಅವರು ಸಂಶೋಧನಾ ಸಹಾಯಕರು ಹಾಗೂ ಸಿಬ್ಬಂದಿಯಿಂದ ನೇರವಾಗಿ ಮಾಹಿತಿ ಪಡೆಯುತ್ತಿದ್ದರು.

ಎನ್ಇಪಿ ಸಿದ್ಧಗೊಂಡ ನಂತರ, ತಾಂತ್ರಿಕ ಸಮಿತಿಯ ಯುವ ಸಂಶೋಧಕರನ್ನೂ ಒಳಗೊಂಡಂತೆ ಎಲ್ಲರಿಗೂ ಖುದ್ದು ಅವರೇ ಧನ್ಯವಾದ ಹೇಳಿ ಪತ್ರ ಬರೆದಿದ್ದರು. ಅವರ ಕೈಬರಹದ ಆ ಪತ್ರಗಳು ಎಷ್ಟೋ ಮನೆಗಳಲ್ಲಿ ಚೌಕಟ್ಟು ಹಾಕಿಸಿಕೊಂಡು ಸಾರ್ಥಕ್ಯದ ಬಿಂಬಗಳಂತೆ ಉಳಿದಿವೆ. ಸಾಮಾನ್ಯವಾಗಿ, ಬೃಹತ್ ಯೋಜನೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರನ್ನು ವ್ಯವಸ್ಥೆಯು ಮರೆತುಬಿಡುವುದೇ ಹೆಚ್ಚು. ಕಸ್ತೂರಿರಂಗನ್ ಅವರ ಪತ್ರಗಳು ಆ ಧೋರಣೆಗೆ ಅಪವಾದ ಎನ್ನುವಂತಿವೆ. ಅವರು ಯಾವುದೇ ವಿಷಯವನ್ನು ತಮ್ಮೊಂದಿಗೆ ಕೆಲಸ ಮಾಡುವವರ ಮೇಲೆ ಹೇರುತ್ತಿರಲಿಲ್ಲ. ಗಮನಿಸುತ್ತಿದ್ದರು, ಉತ್ತೇಜಿಸುತ್ತಿದ್ದರು, ಉಳಿದವರು ಬೆಳೆಯಲು ಅಗತ್ಯವಿರುವ ಅವಕಾಶವನ್ನು ಸೃಷ್ಟಿಸುತ್ತಿದ್ದರು. ಸಂಗಡಿಗರು ತಾವೇ ಜವಾಬ್ದಾರಿ ವಹಿಸಿಕೊಳ್ಳಲು ಮುಂದಾದರೆ, ಅದನ್ನು ಅವರಿಗೆ ವಹಿಸಿ ಬೆನ್ನಹಿಂದೆ ನಿಲ್ಲುತ್ತಿದ್ದರು. ಎಲ್ಲವನ್ನೂ ಮೈಮೇಲೆ ಎಳೆದುಕೊಳ್ಳದೆ, ಸಣ್ಣಪುಟ್ಟ ಕೆಲಸಗಳನ್ನು ತಂಡದಲ್ಲಿ ಇರುವವರು ಮಾಡಲು ಅವರು ಪ್ರೇರಣೆ ನೀಡುತ್ತಿದ್ದ ರೀತಿ ಇದಾಗಿತ್ತು.

ಶೈಕ್ಷಣಿಕ ಕ್ಷೇತ್ರದಲ್ಲಿ ಕಸ್ತೂರಿರಂಗನ್ ಅವರ ಅನನ್ಯತೆ ಎದ್ದುಕಾಣಿಸುತ್ತಿದ್ದುದು, ಉದ್ದೇಶ ಮತ್ತು ನೀತಿಯನ್ನು ಪರಸ್ಪರ ಬೆಸೆಯುವುದರಲ್ಲಿ. ವಿಜ್ಞಾನದ ಅರಿವು ಅವರಲ್ಲಿ ತೀವ್ರ ಸಂಶೋಧನಾ ಪ್ರಜ್ಞೆಯನ್ನು ಮೂಡಿಸಿತ್ತಾದರೂ, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಿಕೆಯು ಸಹಾನುಭೂತಿಯನ್ನೂ ಅವರಲ್ಲಿ ರೂಢಿಸಿತ್ತು. ಶಿಕ್ಷಣ ಎನ್ನುವುದು ವಿಷಯದ ಕಲಿಕೆ ಮಾತ್ರವಲ್ಲ; ಸನ್ನಿವೇಶವನ್ನು ಅರ್ಥ ಮಾಡಿಕೊಂಡು ಮನನ ಮಾಡಿಕೊಳ್ಳುವುದು, ಸಂಸ್ಕೃತಿ ಹಾಗೂ ಸನ್ನಡತೆಯನ್ನು ರೂಢಿಸಿಕೊಳ್ಳುವುದು ಎನ್ಳುವುದು ಅವರ ತಿಳಿವಳಿಕೆಯಾಗಿತ್ತು. ಆ ತಿಳಿವಳಿಕೆ ಶಿಕ್ಷಣವನ್ನು ಒಂದು ಮೌಲ್ಯವಾಗಿ ಕಾಣುವುದಕ್ಕೆ ಪೂರಕವಾಗಿತ್ತು.

ಅವರು ಯಃಕಶ್ಚಿತ್ ಓರ್ವ ನಾಯಕರಾಗಿ ಮಾತ್ರ ಇರಲಿಲ್ಲ; ಪರಿವರ್ತನೆ ಬಯಸುವ ನೇತಾರನಂತೆ ಇದ್ದರು. ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವ ಮಹತ್ವದ ಹೊಣೆಗಾರಿಕೆ ವಹಿಸಿದಾಗ, ಅವರು ಅದನ್ನು ಸ್ವೀಕರಿಸಿದ ಬಗೆ ಹಾಗೂ ಆ ನೀತಿಯ ಕರಡನ್ನು ಸಿದ್ಧ ಮಾಡಿದ ಪ್ರಕ್ರಿಯೆಯಲ್ಲಿನ ದೂರದೃಷ್ಟಿ ಅಸಾಧಾರಣವಾದುದು. ಶಿಕ್ಷಣವು ಅವರಿಗೆ ಸಹಜವಾದ ಕ್ಷೇತ್ರವಾಗಿರಲಿಲ್ಲ. ಬುದ್ಧಿ ಮತ್ತು ಹೃದಯದಿಂದ ತಮಗೆ ದೊರೆತ ಅವಕಾಶವನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದರು. ಎಲ್ಲರಿಗೂ, ಎಲ್ಲಕ್ಕೂ ಮಿಡಿಯುವ ಹೃದಯವಂತ ಅವರಾಗಿದ್ದರು.

‘ನೀವು ರೂಪಿಸುತ್ತಿರುವ ಶಿಕ್ಷಣ ನೀತಿಯು 2040ರವರೆಗೆ ಚಾಲ್ತಿಯಲ್ಲಿ ಇರುತ್ತದೆ’ ಎಂದು ಅವರು ಪದೇ ಪದೇ ಎಚ್ಚರಿಸುತ್ತಿದ್ದರು. ಆ ಎಚ್ಚರದ ಮಾತು ನೀತಿನಿರೂಪಕರಿಗೆ ಇರುವ ಗುರುತರ ಜವಾಬ್ದಾರಿಯನ್ನು ನೆನಪಿಸುವಂತಿತ್ತು. ಯಾವುದೇ ಒಂದು ನೀತಿಯನ್ನು ಯಥಾವತ್ತು ಅನುಸರಿಸಬೇಕು ಎನ್ನುವುದರಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಸಿದ್ಧ ಚೌಕಟ್ಟನ್ನು ಮೀರಿದ ಕಲಿಕೆಯಲ್ಲಿ ಅವರಿಗೆ ನಂಬಿಕೆ ಇತ್ತು. ಆ ನಂಬಿಕೆ ಅವರ ಒಳನೋಟ ಹಾಗೂ ದೂರದೃಷ್ಟಿಗೆ ಸಾಕ್ಷಿ.

ಸರ್ಕಾರದ ಜೊತೆಗೆ ಕೆಲಸ ಮಾಡುತ್ತಿದ್ದರೂ, ಕಸ್ತೂರಿರಂಗನ್ ಅವರು ಅಧಿಕಾರದ ದಂತಗೋಪುರದಲ್ಲಿ ಉಳಿಯುವ ವ್ಯಕ್ತಿಯಾಗಿರಲಿಲ್ಲ. ತಮ್ಮ ಹುದ್ದೆಯ ಪರಿಧಿಯನ್ನು ಮೀರಿ ಅನೇಕ ಸಲ ಜನರೊಟ್ಟಿಗೂ ಅವರು ತೊಡಗಿಸಿಕೊಳ್ಳುತ್ತಿದ್ದರು.

ಸಾರ್ವಜನಿಕ ಜೀವನದಲ್ಲಿ ದೂರದಿಂದ ನಿಂತು ನೋಡಿದಾಗ ಎಷ್ಟೋ ಜನರು ಬೆರಗಿನಂತೆ ಕಾಣಿಸುತ್ತಾರೆ. ಆದರೆ, ಅಂತಹವರ ಜೊತೆ ಹತ್ತಿರದಿಂದ ಒಡನಾಡಿದಾಗ ಭ್ರಮನಿರಸನ ಆಗುವುದಿದೆ. ದೂರದ ಬೆಟ್ಟ ನುಣ್ಣಗೆ ಎನ್ನುವ ಮಾತು ಬಹಳಷ್ಟು ಸಂದರ್ಭಗಳಲ್ಲಿ ಸತ್ಯವೂ ಹೌದು. ಕಸ್ತೂರಿರಂಗನ್ ವಿಷಯದಲ್ಲಿ ಇದು ಸಂಪೂರ್ಣ ಸುಳ್ಳಾಯಿತು. ಅವರೊಟ್ಟಿಗೆ ಕೆಲಸ ಮಾಡಿದಷ್ಟೂ ಅವರ ಮೇಲಿನ ಗೌರವ ಹಾಗೂ ಅಭಿಮಾನ ಹೆಚ್ಚಾಗುತ್ತಾ ಹೋಗಿತ್ತು. ಸಾರ್ವಜನಿಕ ಬದುಕಿನಲ್ಲಿ ಹೇಗೆ ಇದ್ದರೋ ವ್ಯಕ್ತಿಯಾಗಿಯೂ ಅವರು ಹಾಗೆಯೇ ವರ್ತಿಸುತ್ತಿದ್ದರು. ಅವರು ಸ್ಥಿರತೆ ಇದ್ದ ಜಾಣರೂ, ಬೆಚ್ಚಗಿನ ಅನುಭವ ನೀಡುವ ಸಜ್ಜನರೂ ಆಗಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿಗಾಗಿ ದಾಖಲೆಗಳನ್ನು ಸಿದ್ಧಪಡಿಸಿದ್ದು ಅಥವಾ ಸಾಂಸ್ಥಿಕ ರೂಪರೇಷೆ ತಯಾರಿಸಿದ್ದಷ್ಟೇ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಎನ್ನಲಾಗದು. ಆ ಇಡೀ ಪ್ರಕ್ರಿಯೆಯನ್ನು ಅವರು ಕಟ್ಟಿಕೊಟ್ಟ ರೀತಿ ಹಾಗೂ ಜನರೊಟ್ಟಿಗಿನ ಅವರ ಅವಿನಾಭಾವ ಸಂಬಂಧ ಹಾಗೂ ಬದುಕಿದ ಮೌಲ್ಯಗಳು ಮುಖ್ಯವಾದ ಕೊಡುಗೆಗಳು ಎಂದು ಭಾವಿಸುವೆ.

ಪ್ರಸ್ತುತ, ‘ರಾಷ್ಟ್ರೀಯ ಶಿಕ್ಷಣ ನೀತಿ’ಗೆ ಐದು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ, ಹಿಂತಿರುಗಿ ನೋಡಿದರೆ, ಆ ಶಿಕ್ಷಣ ನೀತಿ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ ಕಸ್ತೂರಿರಂಗನ್ ಅವರ ಅಸಾಧಾರಣ ವ್ಯಕ್ತಿತ್ವವೂ ಹಾಗೂ ಅಷ್ಟೇ ಹಿರಿದಾದ ಅವರ ತಿಳಿವಳಿಕೆಯ ನೆನಪುಗಳು ಎದೆದುಂಬುತ್ತವೆ.

(ಲೇಖಕರು ಶಿಕ್ಷಣ ತಜ್ಞರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.