ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಸಿಗದ ಮುಲಾಮು, ಆರದ ಗಾಯ!

ಚುನಾವಣೆ ಸಂದರ್ಭದಲ್ಲಿ ಸಂವಿಧಾನ, ಇತಿಹಾಸ, ಮಹಾತ್ಮರ ಮೇಲೆ ಪ್ರಹಾರ
Published 31 ಮೇ 2024, 0:38 IST
Last Updated 31 ಮೇ 2024, 0:38 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆ ಇನ್ನೇನು ಮುಗಿಯಲಿದೆ. ಇನ್ನೊಂದೇ ಸುತ್ತಿನ ಮತದಾನ ಬಾಕಿ ಇದೆ. ಜೂನ್ 4ಕ್ಕೆ ಫಲಿತಾಂಶ. ಆಮೇಲೆ ಹೊಸ ಸರ್ಕಾರ. ಯಾವ ಪಕ್ಷದ ನೇತೃತ್ವದ ಸರ್ಕಾರ ಬರುತ್ತದೆ? ಯಾವುದಾದರೂ ಬರಲಿ. ಈಗ ಅದಲ್ಲ ಮುಖ್ಯ. ಸುದೀರ್ಘ 82 ದಿನಗಳವರೆಗೆ ನಡೆದ ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ನಮ್ಮ ಮನಸ್ಸಿನ ಮೇಲೆ, ಸಮಾಜದ ಮೇಲೆ ಹಾಗೂ ದೇಶದ ಮೇಲೆ ಆದ ಗಾಯಕ್ಕೆ ಮುಲಾಮನ್ನು ಎಲ್ಲಿಂದ ತರುವುದು? ಹೊಸ ಸರ್ಕಾರ ಬಂದ ಸಂಭ್ರಮದಲ್ಲಿ ಈ ಗಾಯಗಳು ಮರೆಯಾಗುವುದಿಲ್ಲ. ನಾವು ಬಯಸಿದ ಪಕ್ಷ ಅಥವಾ ನಾಯಕನ ನೇತೃತ್ವದ ಸರ್ಕಾರ ಬಂದರೂ ಇದಕ್ಕೆ ಔಷಧಿ ದೊರೆಯುವುದಿಲ್ಲ. ಬರೀ ಔಷಧಿಗೆ ಗುಣವಾಗುವ ಗಾಯವೂ ಇದಲ್ಲ. ಸದ್ಯಕ್ಕೆ ಇದು ಆರದ ಗಾಯ. ಗುಣವಾಗಲು ಬಹಳಷ್ಟು ಸಮಯ ಬೇಕು. ಗಾಯ ಮಾಡಿದ ನಾಯಕ ಚೆನ್ನಾಗಿರುತ್ತಾನೆ. ಪಕ್ಷವೂ ಆರಾಂ ಆಗಿ ಇರುತ್ತದೆ. ಆದರೆ ಪ್ರಜೆ, ದೇಶ, ಸಮಾಜ?

ಗಾಯ ಮಾಡಿದ್ದು ಆ ಪಕ್ಷದವರು, ಈ ಪಕ್ಷದವರು ಅಂತ ಭೇದವೇನಿಲ್ಲ. ಎಲ್ಲ ಪಕ್ಷಗಳ ಮುಖಂಡರೂ ಪರಚಿ ಪರಚಿ ಗಾಯ ಮಾಡಿದ್ದಾರೆ. ಪ್ರಜೆಗಳ ಮೈ ಈಗ ಗಾಯಗಳಿಂದಲೇ ತುಂಬಿಹೋಗಿದೆ. ಹಾಲಿ ಪ್ರಧಾನಿ, ಭಾವಿ ಪ್ರಧಾನಿಗಳು, ಎಂದೋ ಪ್ರಧಾನಿಯಾಗುತ್ತೇನೆ ಎಂದು ಭ್ರಮಿಸಿದವರು ಎಲ್ಲರೂ ಗಾಯದ ಮೇಲೆ ಗಾಯ ಮಾಡುತ್ತಲೇ ಹೋಗಿದ್ದಾರೆ. ಇಡೀ ಚುನಾವಣಾ ಪ್ರಕ್ರಿಯೆ ಯಲ್ಲಿ ಕಂಡುಬಂದಿದ್ದು ಬರೀ ಒಡಕಿನ ಮಾತು. ದೇಶ ಕಟ್ಟುವ ಮಾತಿಗಿಂತ ಮನಸ್ಸು ವಿಭಜಿಸುವ ಮಾತುಗಳೇ ವಿಜೃಂಭಿಸಿದವು.

ಈ ಚುನಾವಣೆ ಸಂದರ್ಭದಲ್ಲಿ ಅತ್ಯಂತ ಚರ್ಚೆಗೆ ಬಂದ ವಿಷಯ ಎಂದರೆ, ಸಂವಿಧಾನದ ಮೂಲ ಸ್ವರೂಪವನ್ನೇ ಬದಲಾಯಿಸಲಾಗುತ್ತದೆ ಎಂಬ ಅಂಶ. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೂ ಅಧಿಕಾರಕ್ಕೆ ಬಂದರೆ ಭಾರತವನ್ನು ಹಿಂದೂ ದೇಶ ಮಾಡುತ್ತಾರೆ, ಅದಕ್ಕೆ ಬೇಕಾದಂತೆ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ ನಾಯಕರು ಹುಯಿಲೆಬ್ಬಿಸಿದರು. ಸಂವಿಧಾನ ಬದಲಾವಣೆ ಮಾಡುವ ಕುರಿತಂತೆ ಬಿಜೆಪಿ ನಾಯಕರು ನೀಡಿದ ಹೇಳಿಕೆಗಳನ್ನು ಅವರು ಇದಕ್ಕೆ ಪುರಾವೆಯಾಗಿ ನೀಡಿದರು.

‘ಮೋದಿ ಮತ್ತೆ ಪ್ರಧಾನಿಯಾದರೆ ಈ ದೇಶದಲ್ಲಿ ಚುನಾವಣೆಯೇ ಇರುವುದಿಲ್ಲ. ಇದೇ ಕೊನೆಯ ಚುನಾವಣೆ ಆಗುತ್ತದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಈ ವಿಷಯದಲ್ಲಿ ಮೋದಿಯವರೇನೂ ಹಿಂದೆ ಬೀಳಲಿಲ್ಲ. ‘ದಲಿತರು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವುದಕ್ಕೆ ಕಾಂಗ್ರೆಸ್ ಪಕ್ಷ ಸಂವಿಧಾನವನ್ನು ಬದಲಾಯಿಸುತ್ತದೆ’ ಎಂದು ಹೇಳಿಕೆ ನೀಡಿದರು. ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರು ‘ರೈತರ ಭೂಮಿಯನ್ನು ಕಸಿದುಕೊಳ್ಳುವುದಕ್ಕೆ ಬಿಜೆಪಿಯು ಸಂವಿಧಾನಕ್ಕೆ ತಿದ್ದುಪಡಿ ತರುತ್ತದೆ’ ಎಂದು ಆರೋಪಿಸಿದರು. ಅಂದರೆ ಯಾವ ಪಕ್ಷದ ನೇತೃತ್ವದ ಸರ್ಕಾರ ಬಂದರೂ ನಮ್ಮ ಸಂವಿಧಾನಕ್ಕೆ ಉಳಿಗಾಲವಿಲ್ಲ ಎಂದು ಪ್ರಜೆಗಳು ಕಂಗಾಲಾಗುವಂತಾಗಿದೆ.

ಸಂವಿಧಾನದ ಮೇಲೆ ನಂಬಿಕೆ ಹೊರಟುಹೋದರೆ ಅದು ಪ್ರಜಾಪ್ರಭುತ್ವದ ನಾಶಕ್ಕೆ ಕಾರಣವಾಗುತ್ತದೆ. ಚುನಾವಣೆ ಫಲಿತಾಂಶ ಏನಾಗುತ್ತದೆ ಎನ್ನುವುದಕ್ಕಿಂತ ಫಲಿತಾಂಶ ಹೊರಬಂದ ಮೇಲೆ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಉಳಿಯುವುದೇ ಅಥವಾ ಹೊಸ ಸಂವಿಧಾನ ಜಾರಿಗೆ ಬರುವುದೇ ಎಂದು ಪ್ರಜೆಗಳು ಚಿಂತಿಸುವಂತಾಗಿದೆ.

ಸಂವಿಧಾನದಂತೆಯೇ ಪ್ರಬಲ ದಾಳಿಗೆ ಒಳಗಾಗಿದ್ದು ನಮ್ಮ ಇತಿಹಾಸ. ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀಜಿ, ನೆಹರೂ ಅವರ ಮೇಲೂ ಒಂದರ ಹಿಂದೆ ಒಂದು ಪ್ರಹಾರ ನಡೆಯಿತು. ‘ಗಾಂಧಿ’ ಸಿನಿಮಾ ಬರುವ ವರೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಾಂಧಿ ಯಾರೆಂದೇ ಗೊತ್ತಿರಲಿಲ್ಲ ಎಂಬ ಮಾತನ್ನೂ ನಾವು ಕೇಳಬೇಕಾಯಿತು. ಇತಿಹಾಸವನ್ನು ಮತ್ತೆ ಬರೆಯುವುದಾಗಿ ಘೋಷಣೆಗಳು ಕೇಳಿಬಂದವು. ನಮ್ಮ ಮಕ್ಕಳು ಈಗ ಯಾರನ್ನು ನಂಬ ಬೇಕು ಎಂದು ತಿಳಿಯದೆ ಒದ್ದಾಡುವಂತಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆಯೇ ಅಪನಂಬಿಕೆ ಮೂಡಿದರೆ ಗತಿ ಏನು?

ಮುಸ್ಲಿಮರ ವಿರುದ್ಧ ದ್ವೇಷ ಹುಟ್ಟುಹಾಕುವ ಕೆಲಸವನ್ನು ಕೆಲವು ಗುಂಪುಗಳು ನಮ್ಮ ದೇಶದಲ್ಲಿ ಬಹಳ ಕಾಲದಿಂದಲೂ ಮಾಡುತ್ತಾ ಬಂದಿವೆ. ಆದರೆ ಪ್ರಸಕ್ತ ಚುನಾವಣೆ ಈ ದ್ವೇಷಕ್ಕೆ ಗೊಬ್ಬರ, ನೀರು ಎಲ್ಲವನ್ನೂ ಹಾಕಿ ಬೃಹತ್ತಾಗಿ ಬೆಳೆಯುವಂತೆ ಮಾಡಿದೆ. ದ್ವೇಷದ ಮಾತುಗಳು ಮನಸ್ಸನ್ನು ಎಷ್ಟು ಕೆಡಿಸಿವೆ ಎಂದರೆ, ಯಾವುದೇ ಮುಸ್ಲಿಂ ವ್ಯಕ್ತಿಯನ್ನು ಯಾವ ಹಿಂದೂವೂ ಯಾವುದೇ ಹಿಂದೂ ವ್ಯಕ್ತಿಯನ್ನು ಯಾವ ಮುಸ್ಲಿಮನೂ ನಂಬಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾದಿ ಬೀದಿಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ಮಾತು–ಬರಹಗಳು ರಾರಾಜಿಸುತ್ತಿವೆ. ‌

‘ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ನಿಮ್ಮ ಆಸ್ತಿಪಾಸ್ತಿಯನ್ನು ಕಸಿದು ಮುಸ್ಲಿಮರಿಗೆ ಹಂಚಲಾಗುತ್ತದೆ. ಹಿಂದುಳಿದವರು ಮತ್ತು ದಲಿತರ ಮೀಸಲಾತಿಯನ್ನು ಕಸಿದುಕೊಳ್ಳಲಾಗು ತ್ತದೆ. ಅದರ ಲಾಭ ಮುಸ್ಲಿಮರಿಗೆ ಸಿಗುತ್ತದೆ. ಮಂಗಳ ಸೂತ್ರವನ್ನೂ ಬಿಡುವುದಿಲ್ಲ’ ಎಂದು ಸ್ವತಃ ಪ್ರಧಾನ ಮಂತ್ರಿಯವರೇ ಹೇಳಿದರು. ಪ್ರಧಾನಿ ಬಾಯಿಯಿಂದಲೇ ಇಂತಹ ಮಾತು ಬಂದ ಮೇಲೆ ಅವರ ಭಕ್ತರು ದ್ವೇಷ ಹಂಚುವುದಕ್ಕೆ ತಡಮಾಡಲೇ ಇಲ್ಲ. ಜಾತಿ ವಿಭಜನೆಯ ಮಾತುಗಳಂತೂ ಸುನಾಮಿಯಂತಿದ್ದವು.

ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ಅವರು ತಮ್ಮ ಅವಧಿಯಲ್ಲಿ ಮಾಡಿದ ಕೆಲಸಗಳು ಮತ್ತು ಮುಂದೆ ಮಾಡಲು ಉದ್ದೇಶಿಸಿರುವ ಕೆಲಸಗಳ ಬಗ್ಗೆ ಮಾತನಾಡಬೇಕಿತ್ತು. ಅದೇ ಆದ್ಯತೆ ಆಗಬೇಕಿತ್ತು. ವಿರೋಧ ಪಕ್ಷಗಳೂ ತಾವು ಅಧಿಕಾರಕ್ಕೆ ಬಂದರೆ ಮಾಡಲು ಉದ್ದೇಶಿಸಿರುವ ಕೆಲಸಗಳ ಬಗ್ಗೆ ಹೇಳಬೇಕಿತ್ತು. ಆದರೆ ಎಲ್ಲಾ ಮುಖಂಡರ ಭಾಷಣಗಳಲ್ಲಿ ಕಿಚ್ಚಿಗೆ ಸಿಕ್ಕ ಪ್ರಾಧಾನ್ಯವು ಬೆಂಕಿ ಆರಿಸುವ ಸಾಮಗ್ರಿಗೆ ಸಿಗಲೇ ಇಲ್ಲ. ಪ್ರಜಾಪ್ರಭುತ್ವದ ಸಂಕೇತವಾದ ಭವ್ಯ ಸಂಸತ್ ಭವನವು ಮೋದಿ ಆಡಳಿತದ ಅವಧಿಯಲ್ಲಿ ನಿರ್ಮಾಣವಾಗಿದೆ. ಆದರೆ ಅದರ ಬಗ್ಗೆ ಅವರು ಹೆಚ್ಚು ಮಾತನಾಡಲಿಲ್ಲ. ರಾಮಮಂದಿರ ಕಟ್ಟಿದ್ದರ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಿದರು. ಅದು ಉಪಯೋಗಕ್ಕೆ ಬಾರದು ಎಂಬ ಕಾರಣಕ್ಕೋ ಏನೋ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮಮಂದಿರಕ್ಕೆ ಬುಲ್ಡೋಜರ್ ಹತ್ತಿಸಿ ನಾಶ ಮಾಡಲಾಗುತ್ತದೆ ಎಂದು ಹೇಳಿದರು. ನಾವು ಒಪ್ಪುತ್ತೇವೋ ಬಿಡುತ್ತೇವೋ ಆದರೆ ಈ ದೇಶದಲ್ಲಿ ರಾಮನ ಭಕ್ತರು ಅಪಾರ ಸಂಖ್ಯೆಯಲ್ಲಿ ಇದ್ದಾರೆ. ಅಷ್ಟೊಂದು ರಾಮ ಭಕ್ತರನ್ನು ಎದುರು ಹಾಕಿ ಕೊಂಡು ಮಂದಿರಕ್ಕೆ ಬುಲ್ಡೋಜರ್ ಹಚ್ಚುವ ಧೈರ್ಯ ಯಾರಿಗಿದೆ? ಯಾವ ಸರ್ಕಾರ ಇಂತಹ ಹುಚ್ಚು ಸಾಹಸ ಮಾಡಬಹುದು? ಇದು ಹೇಳಿದ ಅವರಿಗೂ ಗೊತ್ತು, ಕೇಳಿದ ನಮಗೂ ಗೊತ್ತು. ಆದರೂ ಪ್ರಧಾನಿ ಬಾಯಲ್ಲಿ ಬಂತು ಒಡಕಿನ ಮಾತು.

ಮೀಸಲಾತಿಯ ವಿಷಯದಲ್ಲಿಯೂ ಇಂತಹ ವಿಭಜನೆಯ ಮಾತುಗಳು ಕೇಳಿಬಂದವು. ಅವಕಾಶ ವಂಚಿತರಿಗೆ ಘನತೆಯನ್ನು ತಂದುಕೊಡುವುದಕ್ಕಾಗಿಯೇ ಬಿ.ಆರ್.ಅಂಬೇಡ್ಕರ್ ಅವರು ರೂಪಿಸಿದ ಮೀಸಲಾತಿ ವ್ಯವಸ್ಥೆಯ ಬಗ್ಗೆಯೇ ತಿರಸ್ಕಾರದ ಭಾವನೆ ಯನ್ನು ಉಂಟು ಮಾಡುವಂತಹ ಹೇಳಿಕೆಗಳು ಈ ಬಾರಿ ಕೇಳಿಬಂದವು. ಮೀಸಲಾತಿ ವ್ಯವಸ್ಥೆಯನ್ನು ವಿರೋಧಿ ಸುವ ಮನೋಭಾವವನ್ನು ಹಲವಾರು ವರ್ಷಗಳಿಂದ ನಿಧಾನವಾಗಿ ಸೃಷ್ಟಿಸಲಾಗುತ್ತಿತ್ತು. ಈ ಚುನಾವಣೆ ಸಂದರ್ಭದಲ್ಲಿ ಅದು ವೇಗವನ್ನು ಕಂಡಿತು. ‘ಮೀಸಲಾತಿ ಪಡೆಯುವವರೆಲ್ಲಾ ನಮ್ಮ ಅವಕಾಶವನ್ನು ಕಸಿದುಕೊಳ್ಳುವ ದುರುಳರು’ ಎಂಬ ಭಾವನೆಯನ್ನು ಯುವಜನರಲ್ಲಿ ಬಿತ್ತುವ ಕಾರ್ಯ ಅತ್ಯಂತ ವ್ಯವಸ್ಥಿತವಾಗಿಯೇ ನಡೆದಿದೆ. 

ಕರ್ನಾಟಕದ ಮತದಾರರ ಪರಿಸ್ಥಿತಿಯಂತೂ ಇನ್ನೂ ವಿಚಿತ್ರವಾಗಿದೆ. ‘ಮಧ್ಯರಾತ್ರಿಯಲ್ಲಿ ಮಹಿಳೆಯೊಬ್ಬಳು ಯಾವುದೇ ಭಯವಿಲ್ಲದೆ ನಡೆದಾಡುವಂತಹ ಪರಿಸ್ಥಿತಿ ನಿರ್ಮಾಣವಾದರೆ ಅದು ನಿಜವಾದ ಸ್ವಾತಂತ್ರ್ಯ’ ಎಂದು ಗಾಂಧೀಜಿ ಹೇಳಿದ್ದರು. ರಾಜ್ಯದಲ್ಲಿ ಈಗ ಅದನ್ನು ‘ಮಹಿಳೆಯೊಬ್ಬಳು ಸಂಸದರ ಅಥವಾ ಶಾಸಕರ ಕಚೇರಿಗೆ ಧೈರ್ಯವಾಗಿ ಹೋಗಿಬಂದರೆ ಅದು ನಿಜವಾದ ಸ್ವಾತಂತ್ರ್ಯ’ ಎಂದು ಬದಲಾಯಿಸಬೇಕಾಗಿದೆ. ಹೇ ರಾಮ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT