ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ. ಸೂರ್ಯ ಪ್ರಕಾಶ್‌ ಅಂಕಣ ಸೂರ್ಯ–ನಮಸ್ಕಾರ| ತುರ್ತುಪರಿಸ್ಥಿತಿ: ಸ್ಮರಿಸಬೇಕಾದ‌ ಮಹನೀಯ

Published 26 ಜೂನ್ 2023, 23:30 IST
Last Updated 26 ಜೂನ್ 2023, 23:30 IST
ಅಕ್ಷರ ಗಾತ್ರ

ಇಂದಿರಾ ಗಾಂಧಿ ಅವರು ಕರಾಳ ತುರ್ತು ಪರಿಸ್ಥಿತಿಯನ್ನು ಹೇರಿ ಜೂನ್‌ 25ಕ್ಕೆ ಇನ್ನೊಂದು ವರ್ಷ ಕಳೆಯಿತು. ಈ ಕ್ರಮದ ಮೂಲಕ ಇಂದಿರಾ ಅವರು ಶಕ್ತಿಶಾಲಿ ಪ್ರಜಾತಂತ್ರ ವ್ಯವಸ್ಥೆಯೊಂದನ್ನು ಸರ್ವಾಧಿಕಾರಿ ವ್ಯವಸ್ಥೆಯನ್ನಾಗಿಸಿದರು, ಜನರ ಮೂಲಭೂತ ಹಕ್ಕುಗಳನ್ನು ಅಮಾನತಿನಲ್ಲಿ ಇರಿಸಿದರು, ತಮ್ಮ ರಾಜಕೀಯ ವಿರೋಧಿಗಳನ್ನು ಬಹಳ ಕ್ರೂರವಾಗಿ ಹತ್ತಿಕ್ಕಿದರು, ಭಿನ್ನ ದನಿಗಳನ್ನು ಹೊಸಕಿಹಾಕಿದರು.

ಭಯ ಹುಟ್ಟಿಸುವ ಆ 19 ತಿಂಗಳ ಅವಧಿಯನ್ನು ಕಂಡ ಯಾರೂ ಆ ದುಃಸ್ವಪ್ನವನ್ನು ಮರೆಯಬಾರದು, ಅಂದಿನ ದೌರ್ಜನ್ಯಗಳಿಗೆ ಕಾರಣರಾದವರನ್ನು ಎಂದಿಗೂ ಕ್ಷಮಿಸಬಾರದು (ಈ ಲೇಖಕ ಆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ವರದಿಗಾರ ಆಗಿದ್ದರು).

ಎ. ಸೂರ್ಯ ಪ್ರಕಾಶ್‌
ಎ. ಸೂರ್ಯ ಪ್ರಕಾಶ್‌

ತುರ್ತು ಪರಿಸ್ಥಿತಿಯ ವೇಳೆ ಜಾರಿಯಲ್ಲಿದ್ದ ಕರಾಳ ಕಾನೂನುಗಳು ಹಲವರನ್ನು ಭೀತಿಗೆ ನೂಕಿದವು. ಮೀಸಾ ಕಾಯ್ದೆ ಹಾಗೂ ಭಾರತದ ರಕ್ಷಣೆ ನಿಯಮಗಳ ಅಡಿಯಲ್ಲಿ ಬಂಧಿಸಲು ಆಗ ಅವಕಾಶ ಇತ್ತು. ಕೆಲವು ರಾಜಕಾರಣಿಗಳು, ಪತ್ರಕರ್ತರು ಹಾಗೂ ನ್ಯಾಯಮೂರ್ತಿಗಳು ಆಗ ಸರ್ಕಾರವು ಅಧಿಕಾರವನ್ನು ಎಣೆಯಿಲ್ಲದೆ ಬಳಸುತ್ತಿದ್ದ ಬಗೆಯನ್ನು ಧೈರ್ಯದಿಂದ ಎದುರಿಸಿದರು. ಇಂದಿರಾ ಗಾಂಧಿ ಅವರ ಆಡಳಿತಕ್ಕೆ ಎದುರಾಗಿ ನಿಂತವರ ಪೈಕಿ ನ್ಯಾಯಾಂಗದಲ್ಲಿ ಒಂದು ಹೆಸರು ಎದ್ದು ಕಾಣುತ್ತದೆ. ಅವರು ನ್ಯಾಯಮೂರ್ತಿ ಎಚ್.ಆರ್. ಖನ್ನಾ.

ಅದು ಎಡಿಎಂ ಜಬಲ್ಪುರ್ ಮತ್ತು ಶಿವಕಾಂತ್ ಶುಕ್ಲಾ ನಡುವಿನ ಪ್ರಕರಣ. ತುರ್ತು ಪರಿಸ್ಥಿತಿಯು ಜಾರಿಯಲ್ಲಿ ಇರುವ ಸಂದರ್ಭದಲ್ಲಿ ದೇಶದ ಪ್ರಜೆಗಳು ಸಂವಿಧಾನದ 21ನೆಯ ವಿಧಿಯು ನೀಡಿರುವ ಜೀವಿಸುವ ಸ್ವಾತಂತ್ರ್ಯವನ್ನು ರಕ್ಷಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಬಹುದೇ ಎಂಬುದನ್ನು ಸುಪ್ರೀಂ ಕೋರ್ಟ್‌ ಈ ಪ್ರಕರಣದಲ್ಲಿ ತೀರ್ಮಾನಿಸಬೇಕಿತ್ತು. ನ್ಯಾಯಪೀಠದಲ್ಲಿ ಇದ್ದ ನಾಲ್ವರು ನ್ಯಾಯಮೂರ್ತಿಗಳು ‘ಇಲ್ಲ’ ಎಂದು ಹೇಳಿದರು. ಆದರೆ ನ್ಯಾಯಮೂರ್ತಿ ಖನ್ನಾ ಅವರು ಮಾತ್ರ, ಈ ಸ್ವಾತಂತ್ರ್ಯವನ್ನು ‘ಕಾರ್ಯಾಂಗದ ಪ್ರಶ್ನಾತೀತ ಅಧಿಕಾರದ ಕೃಪೆಯಲ್ಲಿ ಇರಿಸುವುದಕ್ಕೆ ದೇಶದ ಸಂವಿಧಾನ ಮತ್ತು ಕಾನೂನುಗಳು ಅವಕಾಶ ಕೊಡುವುದಿಲ್ಲ’ ಎಂದು ಹೇಳಿದರು.

ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಎಲ್ಲ ವಿಧಿಗಳು ಬಹುಮುಖ್ಯ. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ 21ನೆಯ ವಿಧಿಗೆ ಹೆಚ್ಚಿನ ಮಹತ್ವ ಇದೆ. ಇದನ್ನು ಅರ್ಥ ಮಾಡಿಕೊಂಡಾಗ, ನ್ಯಾಯಮೂರ್ತಿ ಖನ್ನಾ ಅವರು ನೀಡಿದ ಭಿನ್ನಮತದ ತೀರ್ಪಿನ ಮಹತ್ವ ಗೊತ್ತಾಗುತ್ತದೆ. ‘ಕಾನೂನಿನ ಮೂಲಕ ವಿವರಿಸಲಾಗಿರುವ ಪ್ರಕ್ರಿಯೆ ಹೊರತುಪಡಿಸಿ, ಬೇರೆ ಯಾವ ರೀತಿಯಲ್ಲಿಯೂ ಯಾವುದೇ ವ್ಯಕ್ತಿಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವಂತಿಲ್ಲ’ ಎಂದು ಈ ವಿಧಿಯು ಹೇಳಿದೆ. ಹೀಗಿದ್ದರೂ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಹೇರಿದ ನಂತರದಲ್ಲಿ ಮಾಡಿದ ಮೊದಲ ಕೆಲಸ, ಜೀವಿಸುವ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಸ್ವಾತಂತ್ರ್ಯ ಸೇರಿದಂತೆ ಪ್ರಜೆಗಳ ಎಲ್ಲ ಮೂಲಭೂತ ಹಕ್ಕುಗಳನ್ನು ಅಮಾನತಿನಲ್ಲಿ ಇರಿಸುವ ಆದೇಶಕ್ಕೆ ರಾಷ್ಟ್ರಪತಿಯವರು ಹಿಂದೆ–ಮುಂದೆ ನೋಡದೆ ಸಹಿ ಹಾಕುವಂತೆ ಮಾಡಿದ್ದು.

ಈ ಆದೇಶ ಬಂದ ನಂತರದಲ್ಲಿ ಸಹಸ್ರಾರು ಮಂದಿ ರಾಜಕೀಯ ಕಾರ್ಯಕರ್ತರು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಜೈಲಿಗೆ ತಳ್ಳಲಾಯಿತು. ಅವರು ವಿವಿಧ ಹೈಕೋರ್ಟ್‌ಗಳ ಮೊರೆ ಹೋದರು. ಅರ್ಜಿದಾರರ ಸಾಲಿನಲ್ಲಿ ರಾಜಕೀಯ ಪ್ರಮುಖರಾದ ಮಧು ದಂಡವತೆ, ಲಾಲ್ ಕೃಷ್ಣ ಅಡ್ವಾಣಿ ಅವರೂ ಇದ್ದರು. ಎಲ್ಲ ಪ್ರಕರಣಗಳನ್ನು ತನ್ನಲ್ಲಿಗೆ ವರ್ಗಾಯಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತು. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ.ಎನ್. ರೇ ಅವರು ತಮ್ಮನ್ನೂ ಒಳಗೊಂಡಂತೆ, ನ್ಯಾಯಮೂರ್ತಿಗಳಾದ ಖನ್ನಾ, ಎಚ್.ಎಂ. ಬೇಗ್, ವೈ.ವಿ. ಚಂದ್ರಚೂಡ್ ಮತ್ತು ಪಿ.ಎನ್. ಭಗವತಿ ಅವರಿರುವ ನ್ಯಾಯಪೀಠ ರಚಿಸಿದರು.

ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಅಟಾರ್ನಿ ಜನರಲ್ ನಿರೇನ್ ಡೆ ಹಾಗೂ ನ್ಯಾಯಮೂರ್ತಿ ಖನ್ನಾ ಅವರ ನಡುವೆ ನಡೆದ ಮಾತುಕತೆಯ ಮೂಲಕ, ಅವರ ಭಿನ್ನಮತದ ತೀರ್ಪಿನ ಮಹತ್ವವನ್ನು ಅರ್ಥ ಮಾಡಿಕೊಳ್ಳಬಹುದು. ತುರ್ತು ಪರಿಸ್ಥಿತಿಯು ಜಾರಿಯಲ್ಲಿ ಇರುವವರೆಗೆ ವೈಯಕ್ತಿಕ ಸ್ವಾತಂತ್ರ್ಯ ಬೇಕು ಎಂದು ಯಾವ ಪ್ರಜೆಯೂ ಕೇಳುವಂತಿಲ್ಲ ಎಂದು ಡೆ ವಾದಿಸಿದರು. ಇದರ ಅರ್ಥ ಪರೋಕ್ಷವಾಗಿ ಪೊಲೀಸ್ ರಾಜ್ಯ ನಿರ್ಮಾಣವೇ ಆಗಿತ್ತು. ಏಕೆಂದರೆ, ಇದನ್ನು ಒಪ್ಪಿದರೆ ನ್ಯಾಯಾಲಯಗಳು ಪ್ರಜೆಗಳ ನಿಲುಕಿಗೆ ಹೊರತಾಗುತ್ತಿದ್ದವು.

‘ನೈದರ್ ಥಾರ್ನ್ಸ್‌ ನಾರ್ ರೋಸಸ್’ ಹೆಸರಿನ ತಮ್ಮ ಆತ್ಮಕಥೆಯಲ್ಲಿ ನ್ಯಾಯಮೂರ್ತಿ ಖನ್ನಾ ಅವರು, ಮಾನವ ಹಕ್ಕುಗಳು ಹಾಗೂ ನಾಗರಿಕರ ಸ್ವಾತಂತ್ರ್ಯದ ಬಗ್ಗೆ ಯಾವಾಗಲೂ ಮಾತನಾಡುತ್ತಿದ್ದ ತಮ್ಮ ಕೆಲವು ಸಹೋದ್ಯೋಗಿಗಳು ಮಾತನಾಡದೆ ಕುಳಿತಿದ್ದರು ಎಂದು ಹೇಳಿದ್ದಾರೆ. ಹೀಗಾಗಿ, ನ್ಯಾಯಮೂರ್ತಿ ಖನ್ನಾ ಅವರು ಅಟಾರ್ನಿ ಜನರಲ್ ಮಾತುಗಳಿಗೆ ಮರುಪ್ರಶ್ನೆ ಹಾಕಲು ನಿರ್ಧರಿಸಿದರು. ತಮ್ಮ ವಾದವನ್ನು ಪರಿಗಣಿಸುವುದಾದರೆ, ‘ಪೊಲೀಸ್ ಅಧಿಕಾರಿಯೊಬ್ಬ ತನ್ನ ವೈಯಕ್ತಿಕ ದ್ವೇಷದಿಂದ ಇನ್ನೊಬ್ಬನನ್ನು ಕೊಂದರೆ ಪರಿಹಾರ ಮಾರ್ಗ ಇರುತ್ತದೆಯೇ’ ಎಂದು ನ್ಯಾಯಮೂರ್ತಿ ಖನ್ನಾ ಅವರು ಅಟಾರ್ನಿ ಜನರಲ್‌ರನ್ನು ಪ್ರಶ್ನಿಸಿದರು. ನಿರೇನ್ ಡೆ ಉತ್ತರ ಬಹಳ ಸ್ಪಷ್ಟವಾಗಿತ್ತು. ‘ತುರ್ತು ಪರಿಸ್ಥಿತಿ ಇರುವಷ್ಟು ಕಾಲ ಇಂತಹ ಸಂದರ್ಭಗಳಲ್ಲಿ ನ್ಯಾಯಾಂಗದ ಮೂಲಕ ಪರಿಹಾರ ಸಾಧ್ಯವಿಲ್ಲ’ ಎಂದು ಉತ್ತರಿಸಿದರು. ಮುಂದುವರಿದು ನಿರೇನ್ ಡೆ ಅವರು, ‘ಇದರಿಂದ ನಿಮ್ಮ ಆತ್ಮಸಾಕ್ಷಿಗೆ ಆಘಾತವಾಗಬಹುದು, ನನಗೂ ಹಾಗೇ ಆಗುತ್ತದೆ. ಆದರೆ ನನ್ನ ವಾದಕ್ಕೆ ಅನುಗುಣವಾಗಿ ಹೇಳುವುದಾದರೆ, ಆ ವಿಚಾರವಾಗಿ ನ್ಯಾಯಾಲಯದಲ್ಲಿ ಯಾವುದೇ ಪ್ರಕ್ರಿಯೆ ನಡೆಯಲು ಅವಕಾಶವಿಲ್ಲ’ ಎಂದರು.

ಆದರೆ ಇದು ಬಹುತೇಕ ನ್ಯಾಯಮೂರ್ತಿಗಳ ಆತ್ಮಸಾಕ್ಷಿಯನ್ನು ಕಲಕಲಿಲ್ಲ. ಸಿಜೆಐ ರೇ, ನ್ಯಾಯಮೂರ್ತಿಗಳಾದ ಬೇಗ್, ಚಂದ್ರಚೂಡ್ ಮತ್ತು ಭಗವತಿ ಅವರು ಸರ್ಕಾರದ ವಾದವನ್ನು ಎತ್ತಿಹಿಡಿದರು. ನ್ಯಾಯಮೂರ್ತಿ ಖನ್ನಾ ಭಿನ್ನಮತವನ್ನು ದಾಖಲಿಸಿದರು. ಜೀವಿಸುವ ಹಾಗೂ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿಯುವ ಹಕ್ಕು ತನಗೆ ಇದೆ ಎಂದು ಸರ್ಕಾರ ಹೇಳಿದ್ದನ್ನು ಒಪ್ಪಲಾಗದು ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು. ಹೀಗೆ ಹೇಳುವುದರ ಪರಿಣಾಮ ಅವರಿಗೆ ಗೊತ್ತಿತ್ತು. ಎಡಿಎಂ ಜಬಲ್ಪುರ್ ಪ್ರಕರಣವನ್ನು 1976ರಲ್ಲಿ ಇತ್ಯರ್ಥಗೊಳಿಸಲಾಯಿತು. ಒಂಬತ್ತು ತಿಂಗಳ ನಂತರ ಸಿಜೆಐ ಸ್ಥಾನದಿಂದ ರೇ ನಿವೃತ್ತರಾಗುವವರಿದ್ದರು. ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದ ಖನ್ನಾ ಸಿಜೆಐ ಆಗಬೇಕಿತ್ತು. ಸರ್ಕಾರಕ್ಕೆ ತನ್ನ ನಿಲುವುಗಳನ್ನು ಎತ್ತಿಹಿಡಿಯುವ ನ್ಯಾಯಮೂರ್ತಿಗಳು ಬೇಕು ಎಂಬುದು ಅವರಿಗೆ ತಿಳಿದಿತ್ತು. ಅದಕ್ಕಾಗಿಯೇ ನ್ಯಾಯಮೂರ್ತಿಗಳಾದ ಕೆ.ಎಸ್. ಹೆಗ್ಡೆ, ಜೆ.ಎಂ. ಶೆಲಾತ್, ಎ.ಎನ್. ಗ್ರೋವರ್ ಅವರ ಹಿರಿತನ ಕಡೆಗಣಿಸಿತ್ತು ಎಂಬುದು ಗೊತ್ತಿತ್ತು. ಕೇಂದ್ರವು, ನ್ಯಾಯಮೂರ್ತಿ ಖನ್ನಾ ಅವರ ಹಿರಿತನ ಕಡೆಗಣಿಸಿ 1977ರ ಜನವರಿಯಲ್ಲಿ ನ್ಯಾಯಮೂರ್ತಿ ಎಚ್.ಎಂ. ಬೇಗ್ ಅವರನ್ನು ಸಿಜೆಐ ಆಗಿಸಿತು.

ಸರ್ಕಾರದ ವಾದವನ್ನು ಒಪ್ಪಿದ ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ಭಗವತಿ ಅವರು ಕೂಡ ನಂತರದಲ್ಲಿ ಸಿಜೆಐ ಆದರು. ಇದು ಪ್ರಜಾತಂತ್ರ ಹಾಗೂ ಸಾಂವಿಧಾನಿಕ ಮೌಲ್ಯಗಳಿಗಾಗಿ ನ್ಯಾಯಮೂರ್ತಿ ಖನ್ನಾ ಮಾಡಿದ ತ್ಯಾಗ ಎಂಥದ್ದು ಎಂಬುದನ್ನು ತೋರಿಸುತ್ತದೆ. ಆದರೆ ಹಲವು ವರ್ಷಗಳ ನಂತರದಲ್ಲಿ ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠವೊಂದು, ಆ ಪ್ರಕರಣದಲ್ಲಿ ಬಹುಮತದ ತೀರ್ಪಿನಲ್ಲಿದ್ದ ಅಭಿಪ್ರಾಯ ದೋಷಪೂರಿತವಾಗಿತ್ತು ಹಾಗೂ ನ್ಯಾಯಮೂರ್ತಿ ಖನ್ನಾ ಅವರು ಪ್ರಜೆಗಳ ಹಕ್ಕುಗಳನ್ನು ರಕ್ಷಿಸುವ ವಿಚಾರವಾಗಿ ಸರಿಯಾದ ನಿಲುವು ತಳೆದಿದ್ದರು ಎಂದು ಹೇಳಿತು. ನ್ಯಾಯಮೂರ್ತಿ ಖನ್ನಾ ಅವರ ನೇರವಂತಿಕೆ ಹಾಗೂ ತ್ಯಾಗದ ಕಥೆಯನ್ನು ನಾವು ಎಲ್ಲರಿಗೂ ತಿಳಿಸಬೇಕು. ಅವರ ಗುಣಗಳು ಪ್ರಜಾತಂತ್ರವನ್ನು ರಕ್ಷಿಸಲು ಮುಂದಿನ ಪೀಳಿಗೆಯನ್ನು ಪ್ರೇರೇಪಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT