ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುತ್ತರ | ಕಾಯಕವಾದೀತೆ ಕಲೆಯ ನೆಲೆ?

ಜೀವನ, ಸಂತೋಷದ ನಡುವಿನ ಸಂಬಂಧವನ್ನು ಕೆಲಸದ ಪರಿಕಲ್ಪನೆ ತುಂಡರಿಸಿದೆ
Published 29 ನವೆಂಬರ್ 2023, 22:56 IST
Last Updated 29 ನವೆಂಬರ್ 2023, 22:56 IST
ಅಕ್ಷರ ಗಾತ್ರ

‘ದೇಶದ ಅಭಿವೃದ್ಧಿಗಾಗಿ ಯುವಕರು ವಾರಕ್ಕೆ 70 ಗಂಟೆಗಳಷ್ಟು ಕೆಲಸವನ್ನು ಮಾಡಬೇಕು’– ಉದ್ಯಮಿ ಎನ್‌.ಆರ್‌.ನಾರಾಯಣಮೂರ್ತಿ ಅವರ ಈ ಹೇಳಿಕೆಯ ಬಗ್ಗೆ ಪರ, ವಿರೋಧದ ಚರ್ಚೆಗಳು ನಡೆದವು. ಈ ಬರಹದ ಗುರಿ, ಈ ಹೇಳಿಕೆಯನ್ನು ಸಮರ್ಥಿಸುವುದೋ ಖಂಡಿಸುವುದೋ ಅಲ್ಲ. ಇದು, ‘ಕೆಲಸ’ದ ಪರಿಕಲ್ಪನೆಯ ಅವಲೋಕನದ ಪ್ರಯತ್ನವಷ್ಟೆ.

ಪ್ರಸ್ತುತ ‘ವರ್ಕ್‌’, ‘ಜಾಬ್‌’ ಮತ್ತು ‘ಲೇಬರ್’ಗಳು ಮುಪ್ಪುರಿಗೊಂಡ ಪದವಾಗಿ ‘ವರ್ಕ್‌’ ಎಂಬುದನ್ನು ಸ್ವೀಕರಿಸಲಾಗಿದೆ. ‘ಕೆಲಸ’, ‘ಕ್ರಿಯೆ’, ‘ಕಾರ್ಯ’, ‘ಕರ್ಮ’, ‘ಉದ್ಯಮ’, ‘ನೌಕರಿ’, ‘ಜೀವನೋಪಾಯ’, ‘ಆದಾಯವನ್ನು ಗಳಿಸಲು ಅವಲಂಬಿಸಿದ ಕೆಲಸ’, ‘ದುಡಿತ’, ‘ದುಡಿಮೆ’, ‘ಕಾಯಕ’, ‘ದೈಹಿಕ–ಮಾನಸಿಕ ಶ್ರಮ’ ಎಂಬೆಲ್ಲ ಅರ್ಥಗಳ ಛಾಯೆಯನ್ನು ಈ ಪದಸಮೂಹದಲ್ಲಿ ಒಪ್ಪಿಕೊಳ್ಳಲಾಗಿದೆ.

ಎಲ್ಲ ಸಂಸ್ಕೃತಿಗಳಲ್ಲೂ ಕೆಲಸದ (ಕರ್ಮ) ಪರಿಕಲ್ಪನೆ ಇದ್ದೇ ಇದೆ. ನಮ್ಮ ಸಂಸ್ಕೃತಿಯಲ್ಲಿ ಇಡಿಯ ಸೃಷ್ಟಿಯನ್ನೇ ಒಂದು ಕರ್ಮವನ್ನಾಗಿ ನೋಡಲಾಗಿದೆ. ವಿಶ್ವವನ್ನೂ ವಿಶ್ವಕ್ಕೆ ಬೇಕಾದುವನ್ನೂ ಸೃಷ್ಟಿಸುವವನೇ ‘ವಿಶ್ವಕರ್ಮ’. ಆದರೆ ಅವನ ಈ ಸೃಷ್ಟಿ ಕ್ರಿಯೆಗೆ ಭಿತ್ತಿಯಾಗಿರುವುದು ಕೆಲಸವಲ್ಲ, ಲೀಲೆ; ಯಾಂತ್ರಿಕತೆಯಲ್ಲ, ಕುಶಲತೆ; ಆಯಾಸವಲ್ಲ, ಆನಂದ. ಆದರೆ ಇಂದು ಜಗತ್ತನ್ನೇ ಆಳುತ್ತಿರುವ ‘ವರ್ಕ್‌’ನ ವ್ಯಾಪ್ತಿಯಲ್ಲಿ ದೂರವಾಗಿರುವ ವಿವರಗಳು: ಲೀಲೆ (= ಕ್ರೀಡೆ), ಕುಶಲತೆ, ಆನಂದ.

ನಮ್ಮ ಜೀವನದ ಗೊತ್ತು ಗುರಿಗಳಲ್ಲೂ ‘ಪ್ರಗತಿ’ಯಲ್ಲಿಯೂ ‘ವರ್ಕ್‌’ನ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಇದು ಇಂದು ಜಗತ್ತನ್ನು ಏಕಧಾರೆಯಲ್ಲಿ ಬಂಧಿಸಿರುವ ಜೀವನಸೂತ್ರವೇ ಆಗಿದೆಯೆನ್ನಿ!

‘ಮನುಷ್ಯನು ನೂರು ವರ್ಷಗಳು ಕರ್ಮಗಳನ್ನು ಮಾಡುತ್ತಲೇ ಬದುಕಲು ಇಚ್ಛಿಸಬೇಕು’ ಎಂಬ ಒಕ್ಕಣೆ ಪ್ರಾಚೀನ ಭಾರತದಲ್ಲಿತ್ತು. ‘ನೂರು ವರ್ಷಗಳು’ ಎನ್ನುವುದು ಪೂರ್ಣಾಯುಷ್ಯಕ್ಕೂ ಸಂತಸದ ಬದುಕಿಗೂ ಸಂಕೇತ. ‘ಕರ್ಮ’ ಎನ್ನುವುದು ಜೀವನಕ್ಕೆ ಅತ್ಯಂತ ಆವಶ್ಯಕವಾದ ಎಲ್ಲ ಬಗೆಯ ಕ್ರಿಯೆಗಳನ್ನೂ ಎತ್ತಿಹಿಡಿಯುತ್ತದೆ. ‘ಜೀವನಕ್ಕೆ ಆವಶ್ಯಕವಾದುದೇ ಕೆಲಸ’ ಎಂಬುದು ಪ್ರಾಚೀನ ಸಂಸ್ಕೃತಿಗಳ ಒಪ್ಪಿತ ಸೂತ್ರವಾಗಿತ್ತು. ವಿಜ್ಞಾನ–ತಂತ್ರಜ್ಞಾನದ ಬೆಳವಣಿಗೆ ಯೊಂದಿಗೆ ಹುಟ್ಟಿಕೊಂಡ ಕೈಗಾರಿಕಾ ಕ್ರಾಂತಿಯು ಕರ್ಮ, ಎಂದರೆ ದುಡಿಮೆಯ ಈ ಪರಿಭಾಷೆಯನ್ನೇ ಬದಲಾಯಿಸಿತು. ಪ್ರಾಚೀನ ಕಾಲದಲ್ಲಿ, ಜೀವನಕ್ಕೆ ಆವಶ್ಯಕವಾದ ಸಾಧನ, ಸಲಕರಣೆಗಳನ್ನು ಪೂರೈಸುತ್ತಿದ್ದ ವೃತ್ತಿ, ಎಂದರೆ ಕೆಲಸಗಳನ್ನು ‘ಕಲೆ’ ಎಂದೂ, ಹಾಗೆ ಸಿದ್ಧಮಾಡಿಕೊಡುತ್ತಿದ್ದವನನ್ನು ‘ಶಿಲ್ಪಿ’ ಎಂದೂ ಪರಿಗಣಿಸ ಲಾಗುತ್ತಿತ್ತು. ಈ ಸಲಕರಣೆಗಳ ಆವಶ್ಯಕತೆಯಿದ್ದವನು ‘ಪೋಷಕ’. ಆಧುನಿಕ ಕೈಗಾರಿಕೆಗಳು ಮಾಡಿದ ಮೊದಲ ‘ಕ್ರಾಂತಿ’ ಎಂದರೆ ಈ ಕಲೆ, ಶಿಲ್ಪಿ ಮತ್ತು ಪೋಷಕ ಎಂಬ ಕೂಡುಕುಟುಂಬವನ್ನು ಒಡೆದುಹಾಕಿದ್ದು! ‘ಪ್ರಾಡಕ್ಟ್‌’, ‘ಲೇಬರ್‌’ ಮತ್ತು ‘ಓನರ್‌’ಗಳ ಸೃಷ್ಟಿಯೊಂದಿಗೆ ಜನಪದಗಳು ಮರೆಯಾದವು, ಮಾರುಕಟ್ಟೆಗಳು ತಲೆಯೆತ್ತಿದವು. ಪ್ರಾಚೀನ ಜನಜೀವನವನ್ನು ಧರ್ಮ ಮತ್ತು ಧಾರ್ಮಿಕ ನಂಬಿಕೆ, ಸಿದ್ಧಾಂತಗಳು ನಿರ್ದೇಶಿಸು ತ್ತಿದ್ದವು. ಆಧುನಿಕ ಜೀವನವಿಧಾನದಲ್ಲಿ ‘ವರ್ಕ್‌’ ಎಂಬುದೇ ‘ಧರ್ಮ’ವಾಯಿತು. ಹೀಗಾಗಿ, ಈ ನೂತನ ಧರ್ಮದ ಕಟ್ಟುಪಾಡುಗಳನ್ನು ರೂಪಿಸಲು, ಸ್ಥಾಪಿಸಲು ನೂತನ ಸಿದ್ಧಾಂತಗಳು ಹುಟ್ಟಿಕೊಳ್ಳುವುದು ಅನಿವಾರ್ಯವಾಯಿತು.

ನೂತನ ‘ಸಂಸ್ಕೃತಿ’ಯಾಗಿ ರೂಪುಗೊಂಡ ‘ವರ್ಕ್‌ ಕಲ್ಚರ್‌’ನ ಪ್ರಧಾನ ‘ಕೊಡುಗೆ’ ಎಂದರೆ ಜೀವನಕ್ಕೂ ದುಡಿಮೆಗೂ ಇದ್ದ ನೇರನಂಟನ್ನು ಕತ್ತರಿಸಿದ್ದು. ಇದರ ತಾತ್ತ್ವಿಕ ವ್ಯಾಖ್ಯಾನ ಎಂದರೆ, ‘ಸ್ವಧರ್ಮ’ಕ್ಕೂ (=Vocation) ಜೀವನಧರ್ಮಕ್ಕೂ ಇದ್ದ ಸಂಬಂಧದ ನಾಶ, ಕಲೆಗೂ ವೃತ್ತಿಗೂ ಇದ್ದ ರಕ್ತಸಂಬಂಧದ ವಿಚ್ಛೇದ, ಇದರ ಸರಳಾರ್ಥ: ವಾರದ ಆರು ದಿನಗಳನ್ನು ಒಂದು ಗುಂಪಿಗೂ ಭಾನುವಾರವನ್ನು ಇನ್ನೊಂದು ಗುಂಪಿಗೂ ಸೇರಿಸಿದ್ದು. ವಾರದಲ್ಲಿ ಐದಾರು ದಿನಗಳು ದುಡಿಮೆ ದುಡಿಮೆ ದುಡಿಮೆ. ವಾರಪೂರ್ತಿ ದೈಹಿಕ–ಮಾನಸಿಕ ಸಜಾ. ಬಳಿಕ ಒಂದೆರಡು ದಿನಗಳ ವಿರಾಮ, ಆರಾಮ. ವಾರಾಂತ್ಯದಲ್ಲಿ ಮಜಾ!

25–30 ವರ್ಷಗಳ ಹಿಂದೆ ನಗರಗಳಲ್ಲಿ ಭಾನುವಾರ ಗಳಂದು ರಸ್ತೆಗಳು ಖಾಲಿಯಾಗಿರುತ್ತಿದ್ದವು, ಬಹುಪಾಲು ವ್ಯಾಪಾರಕೇಂದ್ರಗಳು ಮುಚ್ಚಿರುತ್ತಿದ್ದವು. ಆದರೆ ಇಂದಿನ ಭಾನುವಾರಗಳಂದು ಹೋಟೆಲ್‌ಗಳು, ಮಾಲ್‌ಗಳು, ‘ಎಂ.ಜಿ. ರೋಡ್’, ‘ಬ್ರಿಗೇಡ್‌ ರೋಡ್‌’ಗಳು ಹೇಗಿರುತ್ತವೆ? ಹೌದು, ಕೈಗಾರಿಕೆಗಳು ನಗರಗಳನ್ನು ಸೃಷ್ಟಿಸಿದವು, ಜೊತೆಗೆ ‘ಸ್ಲಂ’ಗಳನ್ನೂ ಸೃಷ್ಟಿಸಿದವು, ಸ್ಥಳೀಯ ಸಂಸ್ಕೃತಿಗಳ ಆತ್ಮಹತ್ಯೆಗಳನ್ನೂ ಪ್ರೋತ್ಸಾಹಿಸಿದವು, ‘ಗ್ಲೋಬಲ್‌ ವಿಲೇಜ್‌’ನ ಘೋಷಣೆಯಲ್ಲಿ ಅಕ್ಕಪಕ್ಕ ದವರನ್ನೇ ಅಪರಿಚಿತರನ್ನಾಗಿಸಿದವು.

‘ಇಂಡಸ್ಟ್ರಿ ವಿಥೌಟ್‌ ಆರ್ಟ್ ಈಸ್‌ ಬ್ರೂಟ್ಯಾಲಿಟಿ’ ಎಂಬ ಮಾತಿನಲ್ಲಿ ಈ ವಿಚ್ಛೇದನದ ಎಲ್ಲ ಆಯಾಮಗಳೂ ಅಡಕವಾಗಿವೆ. ಮನುಷ್ಯ ಒಂದು ಕ್ಷಣವೂ ಕರ್ಮ ಮಾಡದಿರಲು ಸಾಧ್ಯವೇ ಇಲ್ಲ. ಆದರೆ ಆಧುನಿಕ ‘ಕರ್ಮಸಿದ್ಧಾಂತ’ ಪ್ರತಿಪಾದಿಸುವ ಕ್ರಿಯಾಶೀಲತೆ ಎಂದರೆ ‘ಕೆಲಸ ಕೆಲಸ ಕೆಲಸ’. ಹೀಗಾಗಿಯೇ, ನಾವು ತಿನ್ನುವ ಅನ್ನ, ಕಲಿಯುವ ಅಕ್ಷರ, ಪಡೆಯುವ ಆಶ್ರಯ, ಪಡೆಯಲು ಬಯಸುವ ಆನಂದ ಎಲ್ಲವೂ ‘ವರ್ಕ್‌’ ವ್ಯೂಹದ ಸುತ್ತಲೇ ಸುತ್ತುತ್ತಿರುವುದು. ಸಾವಿರಾರು ವರ್ಷಗಳ ಜೀವನಸೌಂದರ್ಯವನ್ನೂ ಸಂಸ್ಕೃತಿಯನ್ನೂ ಉಧ್ವಸ್ತಗೊಳಿಸಿ ತಲೆಯೆತ್ತಿರುವ ‘ಮಾರುಕಟ್ಟೆ’ಗಳ ಕೂಗಾಟಗಳಲ್ಲಿ ನಮ್ಮ ದನಿಯನ್ನೂ ಕೇಳಿಸಿಕೊಳ್ಳದಷ್ಟು ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದೇವೆ. ಹೀಗಿರುವಾಗ, ನಾವು ಯಾರಿಗಾಗಿ ದುಡಿಯುತ್ತಿದ್ದೇವೆ, ಯಾವುದಕ್ಕಾಗಿ ದುಡಿಯುತ್ತಿದ್ದೇವೆ, ಹೇಗೆ ದುಡಿಯುತ್ತಿದ್ದೇವೆ ಎಂಬ ಮನನಕ್ಕೆ ಅವಕಾಶವಾದರೂ ಎಲ್ಲಿದ್ದೀತು?

ತಂತ್ರಜ್ಞಾನದ ಸೃಷ್ಟಿಯೇ ಆದ ಇಂದಿನ ‘ವರ್ಕ್‌ ವರ್ಲ್ಡ್’ನಲ್ಲಿ ತಂತ್ರಜ್ಞಾನದ ಇನ್ನೊಂದು ಸೃಷ್ಟಿಯೇ ಆದ ಯಂತ್ರಗಳು ಮಾನವನ ಸ್ಥಾನವನ್ನು ಆಕ್ರಮಿಸು ತ್ತಿವೆ ಎಂಬ ಆತಂಕವೂ ಇದೀಗ ಎದುರಾಗುತ್ತಿದೆ. ಮನುಷ್ಯನನ್ನು ಯಂತ್ರಗಳು ಎತ್ತಂಗಡಿ ಮಾಡಬಲ್ಲವು ಎಂದರೆ, ಮನುಷ್ಯನು ಯಂತ್ರದಂತೆಯೇ ಇದ್ದಾನೆಂದು ಅರ್ಥವಲ್ಲವೆ?!

ಇಂದಿನ ‘ವರ್ಕ್‌ ಕಲ್ಚರ್‌’ನ ಕಬಂಧಬಾಹುಗಳು ನಮ್ಮ ಜೀವನಕ್ಕೂ ಕಲೆಗೂ ಸಂತೋಷಕ್ಕೂ ಇರುವ ಸಾವಯವ ಸಂಬಂಧವನ್ನು ತುಂಡರಿಸುವ ಮೂಲಕ ಮೂಡಿಸಿರುವ ಬಿರುಕಿನ ಬಗ್ಗೆ ಆನಂದ ಕುಮಾರಸ್ವಾಮಿ ಹೀಗೆಂದಿದ್ದಾರೆ: ‘ಕಲೆಯಲ್ಲದ ‘ಕೆಲಸ’ದಲ್ಲಿ ತೊಡಗಿದಮೇಲೆ ದೊರಕುವ ಬಿಡುವಿನ ವೇಳೆಯಲ್ಲಿ ಸಂತೋಷಪಡುವ ಜೀವನದ ಶ್ರೇಷ್ಠ ಸಂಗತಿಯೇ ‘ಕಲೆ’ ಎನ್ನುವುದು ಇತ್ತೀಚೆಗೆ ನಾವು ಒಪ್ಪಿರುವ ಕಲಾಸಿದ್ಧಾಂತವಾಗಿದೆ. ಕ್ಯಾನ್ವಾಸ್‌ನ ಮೇಲೆ ಚಿತ್ರ ಬರೆಯುವವರನ್ನೂ ಗೋಡೆಗೆ ಬಣ್ಣ ಬಳಿಯುವವ ರನ್ನೂ ಲೇಖನಿ ಬಳಸುವವರನ್ನೂ ಸುತ್ತಿಗೆ ಬಳಸುವವರನ್ನೂ ‘ಕಲಾವಿದರು’ ಮತ್ತು ‘ಕೆಲಸಗಾರರು’ ಎಂದು ಪ್ರತ್ಯೇಕವಾಗಿಸುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ನಮ್ಮ ನಾಗರಿಕತೆಯು ಧ್ಯಾನಶೀಲ ಜೀವನವನ್ನು ನಿತ್ಯ ಜೀವನದಿಂದ ಬೇರ್ಪಡಿಸಿರುವುದಂತೂ ದಿಟ. ಈ ಧ್ಯಾನಶೀಲತೆಯನ್ನು ಕಲಾಸಮಯದೊಂದಿಗೆ ಗಂಟುಹಾಕಿ, ಅದನ್ನು ‘ಮನೋರಂಜನೆ’ ಎನ್ನುತ್ತಿದ್ದೇವೆ. ಒಂದಂತೂ ದಿಟ, ಕಲೆ ಮತ್ತು ಕೆಲಸ– ಇವೆರಡು ಪರಸ್ಪರ ಹೊಂದಿಕೆಯಾಗದಂಥವು, ಪ್ರತ್ಯೇಕವಾಗಿರುವಂಥವು ಎಂದು ತೀರ್ಮಾಸಿದ್ದೇವೆ.

ಹೀಗಾಗಿಯೇ ಕಲೆಗೆ ನೆಲೆಯನ್ನು ಒದಗಿಸದ ಕಾರ್ಖಾನೆಗಳನ್ನು ಇತಿಹಾಸದಲ್ಲಿ ಮೊದಲ ಬಾರಿಗೆ ನಾವು ಸೃಷ್ಟಿಸಿದ್ದೇವೆ.’

‘ಇಂದು ನಾವು ಮ್ಯೂಸಿಯಂಗಳಲ್ಲಿ ನಮ್ಮ ಪೂರ್ವಜರ ಕಾಲದ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದೇವೆ. ಇವನ್ನು ಅವರು ತಮ್ಮ ನೇರ ಬಳಕೆಗಾಗಿ ತಯಾರಿಸಿಕೊಂಡಿದ್ದರೇ ವಿನಾ, ಮುಂದೆ ಎಂದೋ ನಾವು ಮ್ಯೂಸಿಯಂಗಳಲ್ಲಿ ಪ್ರದರ್ಶನಕ್ಕಿಡುತ್ತೇವೆ ಎಂದೇನಲ್ಲ’ ಎಂಬ ಕುಮಾರಸ್ವಾಮಿಯವರ ಮಾತು, ನಮ್ಮ ಪೂರ್ವಜರು ಸಾಧಿಸಿದ್ದ ಕಲೆ ಮತ್ತು ಕಾಯಕಗಳ ಏಕತೆಗೆ ಸೂಚಕ. ಆದರೆ ಇಂದು ನಮ್ಮ ಕೆಲಸದ ದಿನಗಳು ಮತ್ತು ಸಂತೋಷದ ದಿನಗಳು ಬೇರೆ ಬೇರೆಯಾಗಿವೆ, ನಮ್ಮ ಮನೆಗಳಲ್ಲಿನ ‘ಶೋಕೇಸ್‌’ಗಳಲ್ಲಿಡುವ ವಸ್ತುಗಳು ಮತ್ತು ಮನೆಯಲ್ಲಿ ದಿನವೂ ಬಳಸುವ ವಸ್ತುಗಳು ಬೇರೆ ಬೇರೆಯಾಗಿವೆ! ಎಂದರೆ, ಒಂದು ಕಾಲದ ಕಾಯಕಸಂಸ್ಕೃತಿಯು ನಮ್ಮ ಜೀವನವನ್ನೇ ಕಲೆಯನ್ನಾಗಿಸುತ್ತಿತ್ತು. ಆದರೆ ಇಂದಿನ ನಮ್ಮ ದುಡಿಮೆ ನಮಗೆ ಎಂಥ ಜೀವನವನ್ನು ಕೊಡುತ್ತಿದೆ?

‘ಎಷ್ಟು ಗಂಟೆಗಳ ಕೆಲಸದಿಂದ ಅಭಿವೃದ್ಧಿ’ ಎನ್ನುವು ದಕ್ಕೂ ಮೊದಲು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ: ‘ನಾವು ಮಾಡುತ್ತಿರುವ ಕೆಲಸಕ್ಕೂ ನಮ್ಮ ಜೀವನಕ್ಕೂ ಆನಂದಕ್ಕೂ ಕುಶಲತೆಗೂ ಇರುವ ನಂಟು ಎಂಥದ್ದು?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT