ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ | ಸುಸ್ಥಿರ ಕೃಷಿ ಮತ್ತು ವರ್ಷಾಂತ್ಯದ ಚಿಂತನೆ

ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಹೈನೋದ್ಯಮದ ಮಾದರಿಯಿಂದ ಪರಿಹಾರ?
Last Updated 26 ಡಿಸೆಂಬರ್ 2022, 23:45 IST
ಅಕ್ಷರ ಗಾತ್ರ

ಕೃಷಿ ಕ್ಷೇತ್ರದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿ ಸಿದಂತೆ ಭಿನ್ನ ಅಭಿಪ್ರಾಯಗಳು ಇವೆಯಾದರೂ, ಸಮಸ್ಯೆಗಳ ವಿಷಯದಲ್ಲಿ ಭಿನ್ನಮತವಿಲ್ಲ. ಸಣ್ಣ ಹಿಡುವಳಿ, ಅಸಮರ್ಪಕ ಬೆಲೆ, ವಾತಾವರಣ ಬದಲಾವಣೆ– ಜಲಸಂಪನ್ಮೂಲದಲ್ಲಿನ ಸವಾಲುಗಳು, ಮಣ್ಣಿನಲ್ಲಿನ ಪೋಷಕಾಂಶದ ಕೊರತೆ– ಈ ಎಲ್ಲವನ್ನೂ ಸಮಸ್ಯೆಗಳೆಂದು ನಾವು ಗುರುತಿಸಬಹುದು. ಇವುಗಳಿಗೆ ಪರಿಹಾರವನ್ನು ಯಾವ ರೀತಿಯಲ್ಲಿ ಕಂಡುಕೊಳ್ಳಬೇಕು ಎನ್ನುವುದರ ಬಗ್ಗೆ ತೀವ್ರ ಭಿನ್ನಾಭಿಪ್ರಾಯವಿದೆ.

ಕೃಷಿಯಲ್ಲಿ ‘ಸುಧಾರಣೆ’ಯನ್ನು ಪ್ರತಿಪಾದಿಸುವವರು, ಈ ಕ್ಷೇತ್ರದಲ್ಲಿ ಸರ್ಕಾರದ ಪಾತ್ರವನ್ನು ನಗಣ್ಯವಾಗಿಸಿ ಮಾರುಕಟ್ಟೆಗೆ ಎಲ್ಲವನ್ನೂ ಒಪ್ಪಿಸಬೇಕೆಂದು ವಾದಿಸುತ್ತಾರೆ. ಆ ವಾದಸರಣಿಯಲ್ಲಿ ವಿಜ್ಞಾನದಿಂದಾದ ಸಮಸ್ಯೆಗಳಿಗೆ (ನೀರು, ರಸಗೊಬ್ಬರ, ಕೀಟನಾಶಕಗಳ ಅತಿ ಬಳಕೆ) ವಿಜ್ಞಾನವೇ (ತಳಿ ಮಾರ್ಪಾಡು ತಂತ್ರಜ್ಞಾನ, ಹೈಡ್ರೊಪೋನಿಕ್ಸ್– ಮಣ್ಣಿಲ್ಲದೇ ಕೈಗೊಳ್ಳುವ ಜಲಕೃಷಿ) ಪರಿಹಾರವೆಂದು ನಂಬಿದ್ದಾರೆ. ಇತ್ತೀಚೆಗೆ ಜಾರಿ ಮಾಡಿ ಕಡೆಗೆ ವಾಪಸ್‌ ಪಡೆದ ಮೂರು ಕೃಷಿ ಕಾನೂನುಗಳು ಜಾದೂವಿನ ರೀತಿಯಲ್ಲಿ ಕೆಲಸ ಮಾಡುತ್ತವೆ ಎಂದು ಸಮರ್ಥಿಸುತ್ತಾರೆ. ಮಾರುಕಟ್ಟೆಯ ಆರ್ಥಿಕತೆಯೇ ಎಲ್ಲವನ್ನೂ ದುರಸ್ತಿ ಮಾಡುತ್ತದೆ, ಅಂದರೆ ಅತಿ ಉತ್ಪಾದನೆಯಾಗಿ ಬೆಲೆಗಳು ನೆಲಕಚ್ಚಿದರೆ ರೈತರು ಮುಂದಿನ ಬಾರಿ ಬೆಳೆಯನ್ನು ಬದಲಾಯಿಸುತ್ತಾರಾದ್ದರಿಂದ ಮಾರುಕಟ್ಟೆಯ ಸಮತೋಲನವೇ ಕೃಷಿಯ ಆರ್ಥಿಕತೆಗೆ ಉತ್ತರವೆಂದೂ ಸರ್ಕಾರಗಳು ತಮ್ಮ ಸಂಪನ್ಮೂಲಗಳನ್ನು ಸಬ್ಸಿಡಿಗಳ ಮೇಲೆ ದುಂದು ಮಾಡಬಾರದೆಂದೂ ಈ ವಿಚಾರಧಾರೆ ಹೇಳುತ್ತದೆ.

ಇದರ ವಿರುದ್ಧವಾಗಿ, ಸರ್ಕಾರದ ಪಾತ್ರ ಅಧಿಕವಾಗಿ ರಬೇಕು, ಆ ಪಾತ್ರದಲ್ಲಿ ಕನಿಷ್ಠ ಬೆಂಬಲ ಬೆಲೆ ಕಾನೂನು ಬದ್ಧವಾಗಿರಬೇಕು, ನೈಸರ್ಗಿಕ ಮತ್ತು ಸಾವಯವ ಕೃಷಿಯತ್ತ ನಾವು ಸಾಗಬೇಕು ಎಂದು ವಾದಿಸುವವರೂ ಇದ್ದಾರೆ. ಎರಡೂ ಬದಿಯ ಜನ ‘ಅಮುಲ್’ ಮಾದರಿಯ ಸಹಕಾರಿ ಪದ್ಧತಿ ಅಥವಾ ರೈತ ಉತ್ಪಾದಕ ಸಂಸ್ಥೆಗಳು ಸಮಸ್ಯೆಗಳ ಪರಿಹಾರಕ್ಕೆ ಮಾರ್ಗವೆಂದು ಒಪ್ಪುತ್ತಾರೆ. ಆದರೆ ನಾವು ಒಂದು ಮೂಲಭೂತ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಇಂದಿನ ಸ್ಥಿತಿಯಲ್ಲಿ ಕೃಷಿಯಲ್ಲಿ ತೊಡಗುವುದು ಸುಸ್ಥಿರ ಜೀವನೋಪಾಯವಾಗಿದೆಯೇ? ಅಲ್ಲವಾದರೆ ವ್ಯಾಪಕ ಮಟ್ಟದಲ್ಲಿ ಕೃಷಿಯನ್ನು ಬಿಟ್ಟು ಬೇರಾವುದೇ ಜೀವನೋಪಾಧಿಯನ್ನು ಅಪ್ಪಬಹುದೇ? ಈ ಪ್ರಶ್ನೆಗೆ ಉತ್ತರ ಸರಳವಲ್ಲ.

ಕೃಷಿಯು ಭೂತಾಯಿಯನ್ನು ನಂಬಿ ನಡೆಸುವ ಕೆಲಸ. ನೆಲ ಮತ್ತು ಮಣ್ಣಿನ ಜೊತೆಗಿನ ಸಂಬಂಧವು ಆರ್ಥಿಕತೆಗೆ ಮಾತ್ರ ಸಲ್ಲುವುದಿಲ್ಲ, ಅಲ್ಲಿ ನಮ್ಮ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಸಂಬಂಧವು ಒಣ ಆರ್ಥಿಕತೆಗಿಂತ ಹೆಚ್ಚು ಪ್ರಮುಖ ಸ್ಥಾನವನ್ನು ಪಡೆಯುತ್ತದೆ. ಈ ಸಮಸ್ಯೆಗಳಿಗೆ ಪರಿಹಾರ ಮಾರ್ಗವನ್ನು ಕಂಡುಕೊಳ್ಳುವುದರಲ್ಲಿ, ನಾವು ನಮ್ಮ ಹೈನುಗಾರಿಕೆಯು ಅಭಿವೃದ್ಧಿಯಾದ ಮಾರ್ಗದಿಂದ ಏನನ್ನಾದರೂ ಕಲಿಯಬಹುದೇ? ಹೈನುಗಾರಿಕೆಯು ಸಹಕಾರ ವ್ಯವಸ್ಥೆಯಲ್ಲಿ ನಿರ್ಮಾಣಗೊಂಡಿರುವ ಒಂದು ಉಪಕ್ರಮವಾದರೂ ನಮ್ಮ ಚರ್ಚೆಗೆ ಸಹಕಾರವೇ ಮುಖ್ಯವಲ್ಲ, ಅದನ್ನೊಂದು ಮತ- ಪಂಥ- ಧರ್ಮದಂತೆ ಪಾಲಿಸಬೇಕೆನ್ನುವ ವಾದವನ್ನು ಮೀರಿ ನಾವು ಯೋಚಿಸ ಬಹುದೇ? ಹೈನುಗಾರಿಕೆಯನ್ನು ದೇಶದಲ್ಲಿ ಸಫಲವಾಗಿ ಬೆಳೆಸಿದ ನಮ್ಮ ಅನುಭವದ ಈರುಳ್ಳಿಯನ್ನು ಪದರ
ಪದರವಾಗಿ ಬಿಡಿಸಿ ನೋಡಬೇಕಾಗಿದೆ.

ಮುಂಬೈ (ಹಾಲಿನ ಉತ್ಪನ್ನಗಳಿಗೆ ಇದ್ದ ಮಾರುಕಟ್ಟೆ) ಇಲ್ಲದಿದ್ದರೆ ಆಣಂದ (ಅಮುಲ್ ಸ್ಥಾಪಿತವಾದ ಊರು) ಇಲ್ಲವೇ ಇಲ್ಲ ಎಂದು, ಹೈನುಗಾರಿಕೆಯ ಪಿತಾಮಹ ರೆಂದೇ ಖ್ಯಾತರಾಗಿರುವ ಡಾ. ವರ್ಗೀಸ್ ಕುರಿಯನ್ ಹೇಳುತ್ತಿದ್ದರು. ಮಾರುಕಟ್ಟೆಯ ಮಹತ್ವವನ್ನು ನಾವು ಯಾವುದೇ ಪರಿಸ್ಥಿತಿಯಲ್ಲಿ ಅಲ್ಲಗಳೆಯುವಂತಿಲ್ಲ. ಹೈನುಗಾರಿಕೆಯ ವಿಷಯಕ್ಕೆ ಬಂದಾಗ, ಹಾಲನ್ನು ಸಂಗ್ರಹಿಸಲು ಏರ್ಪಡಿಸಿದ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಜೊತೆಜೊತೆಗೇ ಅದನ್ನು ಸಂಸ್ಕರಿಸಿ ಉತ್ಪನ್ನಗಳನ್ನು ತಯಾರಿಸುವ ಜಿಲ್ಲಾವಾರು ಒಕ್ಕೂಟಗಳು ಮತ್ತು ಕಾರ್ಖಾನೆಗಳನ್ನೂ ಸ್ಥಾಪಿಸಲಾಯಿತು. ರೈತರನ್ನು ಸಹಕಾರಿ ವ್ಯವಸ್ಥೆಯಲ್ಲಿ ಒಟ್ಟುಗೂಡಿಸುವುದು ಸರ್ಕಾರದ ಕೆಲಸವಾದರೆ, ಸಂಸ್ಕರಣಾ ಕೇಂದ್ರಗಳು ವ್ಯಾಪಾರದ ಸೂತ್ರಗಳಿಗೆ ಅನುಗುಣವಾಗಿ ಮಾರುಕಟ್ಟೆಯ ನಿಯಮದಡಿ ನಡೆಯುತ್ತಿದ್ದವು. ಗ್ರಾಹಕರು ಖರ್ಚು ಮಾಡುವ ರೂಪಾಯಿಯಲ್ಲಿ ಹೆಚ್ಚಿನ ಭಾಗ ರೈತರು ಹಾಗೂ ಉತ್ಪಾದಕರಿಗೆ ದಕ್ಕ ಬೇಕಾದರೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ಜೊತೆಜೊತೆಗೇ ತಮ್ಮ ಮತ್ತು ಗ್ರಾಹಕರ ನಡುವಿರುವ ಸರಪಳಿಯ ಅನೇಕ ಕೊಂಡಿಗಳನ್ನು ಕೈವಶ ಮಾಡಿ ಕೊಳ್ಳಲು ಪ್ರಯಾಸಪಡಬೇಕು. ಹಾಗೆಂದರೆ ಈ ಸರಪಳಿ ಯಲ್ಲಿ ರೈತರಿಗೆ ವ್ಯಾಪಕ ಪ್ರಭಾವ ಮತ್ತು ವ್ಯವಹಾರ ಶಕ್ತಿ ಇರಬೇಕು. ಉತ್ತಮ ಉತ್ಪತ್ತಿ, ದಾಸ್ತಾನು ಸೌಲಭ್ಯ ಮತ್ತು ಆರ್ಥಿಕ ಸವಲತ್ತುಗಳಿದ್ದರೆ ರೈತರ ಪ್ರಭಾವ ಮತ್ತು ವ್ಯವಹಾರಶಕ್ತಿಯು ವರ್ಧಿಸುತ್ತದೆ.

ರೈತರ ಶ್ರಮಕ್ಕೆ ಹೆಚ್ಚಿನ ಮೌಲ್ಯ ದಕ್ಕುವುದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ದೊರೆಯುವುದರಿಂದ ಮಾತ್ರವಲ್ಲ. ಇರುವ ಸಂಪನ್ಮೂಲಗಳನ್ನು ದಕ್ಷತೆಯಿಂದ ನಿರ್ವಹಿಸುವುದೂ ಮುಖ್ಯವೇ. ಹೈನುಗಾರಿಕೆಯ ವಿಷಯದಲ್ಲಿ ಪಶುವಿನ ಸ್ವಾಸ್ಥ್ಯ ಕಾಪಾಡುವುದು ಒಂದು ಉಪಕ್ರಮವಾಗಿತ್ತು. ಪೌಷ್ಟಿಕ ಪಶು ಆಹಾರವನ್ನು ನೀಡುವುದು ಮತ್ತೊಂದು ಉಪಕ್ರಮ. ಸ್ವಾಸ್ಥ್ಯ ಸೇವೆಗಳು ಸರ್ಕಾರದ ಜವಾಬ್ದಾರಿ. ಪೌಷ್ಟಿಕ ಆಹಾರವು ಮಾರುಕಟ್ಟೆಗೆ ಸಂದದ್ದು. ಇದನ್ನು ನಾವು ಕೃಷಿಗೆ ಅನ್ವಯಿಸಿದರೆ– ಉನ್ನತ ಪದ್ಧತಿಗಳ ಅರಿವು ಮತ್ತು ಬೆಳೆಯ ರಕ್ಷಣೆಯನ್ನು ಸರ್ಕಾರ ತನ್ನ ಜವಾಬ್ದಾರಿಯಾಗಿ ಸ್ವೀಕರಿಸಬೇಕಾಗುತ್ತದೆ. ಸುಸ್ಥಿರ ವ್ಯವಸ್ಥೆಯಲ್ಲಿ ಕೃಷಿಯನ್ನು ಕೈಗೊಳ್ಳಲು ಬೇಕಾದ ಇತರ ಹೂಡಿಕೆಗಳು ಮಾರುಕಟ್ಟೆಯ ಸೂತ್ರಕ್ಕೆ ಒಗ್ಗುತ್ತವೆ.

ಇಲ್ಲಿ ನೀರಾವರಿ ಮತ್ತು ಅದಕ್ಕೆ ಬೇಕಾದ ವಿದ್ಯುತ್ತಿನ ಹೊಣೆ ಮಾರುಕಟ್ಟೆಯದೋ ಅಥವಾ ಸರ್ಕಾರದ್ದೋ ಎನ್ನುವ ಚರ್ಚೆ ಉಂಟಾಗಬಹುದು. ಅಣೆಕಟ್ಟುಗಳು ಮತ್ತು ಕಾಲುವೆಗಳು ಸರ್ಕಾರದ ಜವಾಬ್ದಾರಿಯಾಗಿದ್ದರೆ, ಕೊಳವೆಬಾವಿಗಳು, ವಿದ್ಯುತ್ತು ಮತ್ತು ಡೀಸೆಲ್ ವ್ಯವಸ್ಥೆಯು ಮಾರುಕಟ್ಟೆಯ ತರ್ಕಕ್ಕೆ ಒಗ್ಗುತ್ತದೆ. ಇಲ್ಲೂ ಸರ್ಕಾರಗಳು ಉಚಿತ ವಿದ್ಯುತ್‌ ನೀಡಿ ಜವಾಬ್ದಾರಿ
ನಿರ್ವಹಿಸಬಹುದಾದರೂ ಅದು ಉತ್ತಮವಾದ ಸಬ್ಸಿಡಿಯೇ ಎನ್ನುವುದು ತುಸು ವಿವಾದಾಸ್ಪದ ವಿಷಯ.

ಇರುವ ಸಂಪನ್ಮೂಲಗಳನ್ನೇ ಬಳಸಿ ಉತ್ಪಾದಕತೆ ಹೆಚ್ಚಿಸುವುದು ಹೇಗೆ? ಇದರಲ್ಲಿ ವಿಜ್ಞಾನದ ಪಾತ್ರ ಮಹತ್ವ ಪಡೆಯುತ್ತದೆ. ತಳಿಯನ್ನು ಉತ್ತಮಪಡಿಸುವುದು, ಕೃತಕ ಗರ್ಭಧಾರಣೆ, ಭ್ರೂಣ ವರ್ಗಾವಣೆಯಂತಹ ಕ್ರಮಗಳನ್ನು ಹೈನುಗಾರಿಕೆಯಲ್ಲಿ ಕೈಗೊಳ್ಳಲಾಗಿದೆ. ಸಾಂಪ್ರದಾಯಿಕ ಕೃಷಿಗೆ ಇದನ್ನು ಅನ್ವಯಿಸಿದರೆ, ನಾವು ಕೃಷಿಯ ಉದ್ಯಮೀ ಕರಣದ ಬಗ್ಗೆ ಯೋಚಿಸಿ, ದೊಡ್ಡ ಗಾತ್ರದ ಜಮೀನು, ಟ್ರ್ಯಾಕ್ಟರಿನಿಂದ ಆಳವಾಗಿ ಭೂಮಿಯನ್ನು ಉಳುವುದು, ಧಾರಾಳವಾಗಿ ನೀರು, ರಸಗೊಬ್ಬರ, ಕೀಟನಾಶಕ
ಗಳನ್ನು ಬಳಸುವತ್ತ ಸಾಗುತ್ತೇವೆ. ಸುಸ್ಥಿರತೆಯ ಬಗ್ಗೆ ಕಾಳಜಿಯಿರುವವರು ನೈಸರ್ಗಿಕ ಕೃಷಿ, ಸಾವಯವ ಕೃಷಿ ಮತ್ತು ಸಿಸ್ಟಮ್ಯಾಟಿಕ್ ರೈಸ್ (ಅಥವಾ ವೀಟ್) ಇಂಟೆನ್ಸಿಫಿಕೇಷನ್ನಿನಂತಹ ಕ್ರಮಗಳನ್ನು ಕೈಗೊಳ್ಳಬಹುದು.

ಹೈನುಗಾರಿಕೆಯಲ್ಲಿ ಸುಮಾರು ಐದು ದಶಕಗಳ ಕಾಲ ತೆರಿಗೆದಾರರ ಹಣವನ್ನು ಶಿಸ್ತುಬದ್ಧವಾಗಿ ಹೈನುಗಾರಿಕೆಯ ಸುತ್ತಲಿರುವ ಮಾರುಕಟ್ಟೆಯ ಮೂಲಸೌಕರ್ಯ ಮತ್ತು ರೈತಸ್ನೇಹಿ ಪರಿಸರ ಕಟ್ಟಲು ಹೂಡಲಾಯಿತು. ಸರ್ಕಾರದ ಆರ್ಥಿಕ ಸಂಪ‍ನ್ಮೂಲದ ಹೂಡಿಕೆ ಸಹ ಬಹಳಷ್ಟಿದ್ದರೂ ಅದು ವ್ಯಾಪಾರದ ಯಾವುದೇ ಸೂತ್ರಗಳನ್ನು ಉಲ್ಲಂಘಿಸಿ ಮಾರುಕಟ್ಟೆಯಲ್ಲಿ ಏರುಪೇರನ್ನು ಉಂಟು ಮಾಡಲಿಲ್ಲ. ಸುಧಾರಣಾವಾದಿಗಳು ಅಮುಲ್‌ನ ದಕ್ಷತೆಯನ್ನು ಉದಾಹರಿಸಿ, ಮಾರುಕಟ್ಟೆ ವ್ಯವಸ್ಥೆಯಲ್ಲಿ ಎಲ್ಲವೂ ಚೆನ್ನಾಗಿವೆಯೆಂದು ವಾದಿಸುತ್ತಾರೆ. ಅವರಿಗೆ ಗೋಚರಿಸುವುದು ಸಂಸ್ಕರಣೆ, ಜಾಹೀರಾತು, ಮಾರುಕಟ್ಟೆ, ಪಾರ್ಲರುಗಳ ಹೊರಗಿನ ಪದರವಷ್ಟೇ. ಅದರ ಹಿಂದಿರುವ ಮೂಲಸೌಕರ್ಯ ವೃದ್ಧಿಯಲ್ಲಿ ಸರ್ಕಾರಿ ಹೂಡಿಕೆ ಮತ್ತು ಸಬ್ಸಿಡಿಗಳು ಕಾಣುವುದಿಲ್ಲ. ಸಹಕಾರ ವ್ಯವಸ್ಥೆಯ ವಿಚಾರಧಾರೆಯು ಜನಸ್ನೇಹಿ- ರೈತಸ್ನೇಹಿ ಎನ್ನುವ ಒಂದು ತಾತ್ವಿಕ ಪದರದ ಹೊಳಪನ್ನು ಒದಗಿಸುತ್ತದೆ ಅಷ್ಟೇ. ಮಾರುಕಟ್ಟೆಗಳು ರೈತರ ಪರವಾಗಿ ಕೃಷಿ ಕ್ಷೇತ್ರದಲ್ಲಿ ಸಶಕ್ತವಾಗಿ ಕೆಲಸ ಮಾಡಲು ಬೇಕಾದ ಮೂಲಸೌಕರ್ಯಗಳ ಮೇಲೆ ನಾವು ಬಹಳಷ್ಟು ಹೂಡಿಕೆ ಮಾಡಿದ್ದೇವೆಯೇ ಎಂದು ಕೇಳಿಕೊಳ್ಳಬೇಕಾಗಿದೆ.

ಆದರೆ ನಾವು ಎಲ್ಲವೂ ಚೆನ್ನಾಗಿದೆ ಎನ್ನುವ ಭ್ರಮೆಯಲ್ಲಿದ್ದರೆ ಏನು ತಾನೇ ಮಾಡಬಹುದು? ನಿದ್ರೆಯಲ್ಲಿ ಇರುವವರನ್ನು ಎಬ್ಬಿಸಬಹುದು, ಆದರೆ ನಿದ್ರೆಯೆಂದು ನಟಿಸುವವರನ್ನು ಎಬ್ಬಿಸುವುದು ಹೇಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT