ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾತಿಚರಾಮಿ... ಧ್ವನಿಸುತ್ತಿದೆ, ಕಿವಿಗೊಡಿ

Last Updated 28 ಮೇ 2019, 20:09 IST
ಅಕ್ಷರ ಗಾತ್ರ

ತಾನು ಟೀಚರ್ ಅಗಬೇಕೆಂದು ಕನಸು ಕಂಡಿದ್ದ ನನ್ನ ಅಮ್ಮ ‘ನಿಮ್ಮ ಕಾಲವೇ ಚಂದ ಮಗಾ’ ಅನ್ನುತ್ತಿದ್ದರು. ನಾವು ಓದಿ ಕೆಲಸ ಪಡೆದಿದ್ದು, ಎಲ್ಲದಕ್ಕೂ ಗಂಡನ ಕೈ ಕಾಯಬೇಕಾಗದಿರುವುದು ಮತ್ತು ಎಲ್ಲದಕ್ಕೂ ಮೂಕಳಾಗಿ ಇರಬೇಕಾಗಿಲ್ಲ ಎಂಬುದು ಅವಳಿಗೆ ಕ್ರಾಂತಿಕಾರಕ ಬದಲಾವಣೆ ಎನಿಸಿತ್ತು. ಈಚೆಗೆ ಹೆಣ್ಣುಮಗಳೊಬ್ಬರು, ‘ಭಾರತದಲ್ಲಿ ಹೆಣ್ಣುಮಕ್ಕಳಿಗೆ ಸಮಸ್ಯೆಗಳೇ ಇದ್ದಿರಲಿಲ್ಲ. ಬೇಕಾದಂತೆ ಬದುಕುವ ಎಲ್ಲ ಸ್ವಾತಂತ್ರ್ಯವೂ ಇತ್ತು. ಅವಳಿಗೆ ಬೇಕಾದ ಉಡುಗೆ ತೊಡಬಹುದಿತ್ತು. ಎಷ್ಟೊಂದು ಜನ ಹೆಣ್ಣುಮಕ್ಕಳು ರಾಣಿಯರೂ ಆಗಿದ್ದರು. ಹೆಣ್ಣುಮಕ್ಕಳೆಲ್ಲಾ ಸಂತೋಷವಾಗಿದ್ದರು. ಈಗ ಎಲ್ಲ ಹಾಳಾಗುತ್ತಿದೆ. ಈ ಕೆಲವು ‘ಇಸಂ’ಗಳು ಬಂದು ಬರೀ ಹುಳುಕನ್ನು ಹೇಳುತ್ತವೆ. ಇದರಿಂದಾಗಿ ದುಃಖ ಹೆಚ್ಚಾಗುತ್ತಿದೆ. ನಾವು ನಮ್ಮ ಭವ್ಯ ಪ್ರಾಚೀನ ಭಾರತಕ್ಕೆ ಮರಳೋಣ’ ಎನ್ನುತ್ತಿದ್ದರು. ಇದಕ್ಕೇನು ಹೇಳಬೇಕು?

ನಮ್ಮ ರಾಷ್ಟ್ರೀಯ ಚಳವಳಿಯ ಸಂದರ್ಭದಲ್ಲಿ ಮಹಿಳೆಯರ ಬದುಕಿನ ಪುನರುಜ್ಜೀವನಕ್ಕಾಗಿ ಹೋರಾಡಿದವರು, ಮಹಿಳೆಯರ ಶಿಕ್ಷಣಕ್ಕಾಗಿ ಶಾಲೆ ತೆರೆದು ಸೆಗಣಿಯಿಂದ ಎರಚಿಕೊಂಡು ಅವಮಾನಿತಳಾದ ಸಾವಿತ್ರಿಬಾಯಿ ಫುಲೆಯಂತಹವರ ತ್ಯಾಗಗಳು, ಹಲವು ಸ್ತ್ರೀ– ಪುರುಷರ ಹೋರಾಟಗಳು, ನಲುಗಿಹೋದ ಹೆಣ್ಣುಮಕ್ಕಳ ಕತೆಗಳನ್ನು ತಮ್ಮ ಕೃತಿಗಳಲ್ಲಿ ಅನಾವರಣ ಮಾಡಿದ ಉತ್ಕೃಷ್ಟ ಸಾಹಿತಿಗಳು, ಹಿಂದೂ ಕೋಡ್ ಬಿಲ್ ಜಾರಿಗಾಗಿ ತಮ್ಮ ಮಂತ್ರಿ ಪದವಿಯನ್ನೇ ಬಿಟ್ಟುಕೊಟ್ಟ ಅಂಬೇಡ್ಕರ್‌ ಅಂತಹವರು, ಇವೆಲ್ಲಕ್ಕಿಂತ ಮೊದಲು ‘ಅರಿವಿಂಗೆ ಹೆಣ್ಣು ಗಂಡೆಂಬ ಭೇದವುಂಟೇ’ ಎಂದು ಪ್ರಶ್ನಿಸಿದ ವಚನಕಾರರು... ಇವರೆಲ್ಲರ ಪ್ರಯತ್ನದ ಫಲವಾಗಿ ಇಂದು ಹೆಣ್ಣು ಅವಕಾಶಗಳ, ತನ್ನದೇ ಬದುಕಿನ ಒಂದು ಹಂತಕ್ಕೆ ತಲುಪಲು ಸಾಧ್ಯವಾಯಿತು ಎಂಬೆಡೆಗೆ ನಮಗೆ ಕೃತಜ್ಞತೆ ಬೇಡವೇ?

ಇತಿಹಾಸದ ನಡೆಗಳನ್ನು ಮುಚ್ಚಿಹಾಕಿ, ಈ ನಡೆಗಳಿಂದಲೇ ವೇದಿಕೆ ಪಡೆದ ಹೆಣ್ಣುಮಕ್ಕಳೇ ‘ಹೆಂಗಸರೇ ಸರಿ ಇಲ್ಲ, ಹೆಂಗಸರ ಚೆಲ್ಲು ನಡೆಗಳಿಂದ ರೇಪ್ ಆಗುತ್ತಿದೆ. ಹೆಂಗಸರು ಸಭ್ಯ ಉಡುಗೆಯೊಂದಿಗೆ ಗಂಭೀರ ನಡೆ ಇಟ್ಟುಕೊಂಡರೆ ಯಾರೂ ಹತ್ತಿರವೂ ಬರಲಾರರು’ ಎಂಬ ಮಾತುಗಳನ್ನು ಹೇಳಿ ಚಪ್ಪಾಳೆ ಪಡೆಯುತ್ತಿದ್ದರೆ, ಇನ್ನೊಂದೆಡೆ, ‘ಮ್ಯಾರಿಟಲ್ ರೇಪ್ ಎಂಬುದು ಇಲ್ಲವೇ ಇಲ್ಲ’ ಎಂದು ವಾದಿಸುವವರೂ ನಮ್ಮ ನಡುವೆ ಇದ್ದಾರೆ. ಸರಿ, ಆ ಪದ ಬೇಡ. ಅಸಮ್ಮತಿಯ ಸಂಬಂಧ ಎಂದು ಬೇಕಾದರೆ ಇದನ್ನು ವ್ಯಾಖ್ಯಾನಿಸೋಣ. ಇದು ಇಲ್ಲವೇ ಇಲ್ಲ ಎಂದು ಅದರ ಅರಿವಿಲ್ಲದ ಗಂಡಸರೋ, ಅದರ ಅನುಭವವಿಲ್ಲದ ಹೆಂಗಸರೋ ಹೇಳಿದರೆ ಅದನ್ನು ಒಪ್ಪಲಾದೀತೆ? ಮತ್ತೆ ಯಾರೋ ಕೆಲವರು ಇದನ್ನು ಅಸ್ತ್ರ ಮಾಡಿಕೊಂಡು ಆರೋಪಿಸುತ್ತಾರೆ ಎಂಬ ಕಾರಣಕ್ಕೂ ಇದನ್ನು ಅಲ್ಲಗಳೆಯಲಾಗದು.

ವಿವಾಹ ಸಂಬಂಧವೆಂದರೆ, ಹೆಣ್ಣಿನ ದೇಹವನ್ನು ಗಂಡು ತಾನು ಹೇಗೆ ಬೇಕಾದರೂ ಬಳಸಬಲ್ಲ ತನ್ನ ಸ್ವಾಮ್ಯದ ವಸ್ತು ಎಂದು ಭಾವಿಸುವಂತಿಲ್ಲ. ಹೀಗೆ ಹೇಳಿದ ತಕ್ಷಣ, ಇದು ಭಾರತೀಯ ಸಂಸ್ಕೃತಿಯಲ್ಲ ಎಂಬ ಮಾತು ಮುನ್ನೆಲೆಗೆ ಬರುತ್ತದೆ. ನನ್ನ ಕಾಳಜಿ ಕೂಡ ಇದು ಭಾರತೀಯ ಸಂಸ್ಕೃತಿ ಆಗಬಾರದು, ಯಾರ ಸಂಸ್ಕೃತಿಯೂ ಆಗಬಾರದು ಎಂಬುದೇ ಆಗಿದೆ. ಸಾಂಪ್ರದಾಯಿಕ ಮದುವೆ ಮನೆಗೆ ಹೋದರೆ ಪುರೋಹಿತರ ಬಾಯಿಯಲ್ಲಿ ಬರುವ ಕೆಲವು ಮಂತ್ರಗಳಲ್ಲಿ ‘ಧರ್ಮೇಚ, ಅರ್ಥೇಚ, ಕಾಮೇಚ ನಾತಿಚರಾಮಿ’ ಎಂಬುದೂ ಒಂದು. ಗಂಡಾಗಲೀ, ಹೆಣ್ಣಾಗಲೀ ಒಬ್ಬರ ಒಪ್ಪಿಗೆ ಇಲ್ಲದೆ ಇನ್ನೊಬ್ಬರು ಅತಿಕ್ರಮಣ ಮಾಡಿದಲ್ಲಿ ಅದು ಆ ಸಂಬಂಧವನ್ನು ಯಾಂತ್ರಿಕಗೊಳಿಸುತ್ತದೆ, ಪರಸ್ಪರ ದ್ವೇಷಿಸುತ್ತಾ ಗತಿ ಇಲ್ಲದೆ ಒಟ್ಟಿಗೆ ಬದುಕುವುದಕ್ಕೂ, ಅದರಿಂದಾಗಿ ಮಕ್ಕಳು, ಮನೆ ಮಂದಿಯ ಬದುಕು ನರಕವಾಗುವುದಕ್ಕೂ ಕಾರಣವಾಗುತ್ತದೆ. ಆದರೆ ಇದನ್ನು ವಾಸ್ತವದಲ್ಲಿ ಮನಗಾಣಿಸಲಾಗುತ್ತಿದೆಯೇ ಎಂಬುದೇ ಸಮಸ್ಯೆ. ಜನಪದರೊಳಗೆ ‘ಹೆಂಡತಿಯ ಮಾತು ಕೇಳುವುದೆಂದರೆ ಹೆಂಡತಿಯ ದಾಸನಾದಂತೆ’ ಎಂಬುದನ್ನು ಹಾಸು ಹೊಕ್ಕಾಗುವಂತೆ ತಲೆಗೆ ತುಂಬಿರುವುದರಿಂದ, ಹೆಣ್ಣಿನ ಅಸಮ್ಮತಿಯೆಂದರೆ ಅವಳ ನಿರಾಕರಣೆ ಎಂದು ಭಾವಿಸಲಾಗಿದೆ.

ತನ್ನಿಚ್ಛೆಗೆ ಎಂಥಾ ಸನ್ನಿವೇಶದಲ್ಲಾದರೂ ತಲೆಬಾಗುವುದೇ ಹೆಂಡತಿಯ ಕರ್ತವ್ಯ ಮತ್ತು ಅವಳನ್ನು ಹಾಗೆ ಇರಿಸಿಕೊಳ್ಳುವುದು ‘ಪೌರುಷ’ ಎಂಬ ತಪ್ಪು ತಿಳಿವಳಿಕೆ ಜಗತ್ತಿನ ಎಷ್ಟು ಮದುವೆಗಳನ್ನು ಆಪೋಶನ ತೆಗೆದುಕೊಂಡಿದೆಯೋ ಗೊತ್ತಿಲ್ಲ. ಏನೇ ಆದರೂ ಮೌನವಾಗಿ ಸಮ್ಮತಿಸಬೇಕು, ಯಾರ ಎದುರೂ ಬಾಯಿ ಬಿಡಬಾರದು, ಈಗೀಗ ಫೆಮಿನಿಸಂ ಓದಿ, ಕೇಳಿ ಕೆಟ್ಟುಹೋಗಿರುವವರು ನಾಚಿಕೆ ಇಲ್ಲದೆ ಇಂಥ ವಿಚಾರಗಳನ್ನೆಲ್ಲ ಚರ್ಚಿಸತೊಡಗಿದ್ದಾರೆ ಎಂಬ ದೂರುಗಳ ಬಗೆಗೆ ಆಕ್ಷೇಪ ಎತ್ತದೆ ಬೇರೆ ದಾರಿಯೇ ಇಲ್ಲ. ಯಾಕೆಂದರೆ, ಹೆಣ್ಣಿನ ಮೇಲೆ ಆಕ್ರಮಣ ಮಾಡುವುದೇ ನಾಚಿಕೆಗೇಡಿನ ಸಂಗತಿ ಎಂಬುದನ್ನು ಇವರು ಮನಗಾಣಬೇಕು ಮತ್ತು ಹಾಗೆ ಆಕ್ರಮಣ ಮಾಡಿ ಅವಳ ಬಾಯಿ ಮುಚ್ಚಿಸುವುದು ಭಾರತೀಯ ಸಂಸ್ಕೃತಿ ಎನಿಸಿಕೊಳ್ಳಬಾರದು.

ಸ್ತ್ರೀವಾದ ಎನ್ನುವುದು ಜಗತ್ತಿನಾದ್ಯಂತ ಆಯಾ ದೇಶದ, ಸಮುದಾಯದ ಅನುಭವ ದ್ರವ್ಯದಿಂದ ಹೊಸ ನೋಟಗಳನ್ನು ಅದಕ್ಕೆ ಸೇರಿಸುತ್ತಾ ಬೆಳೆಯುತ್ತಿರುವುದಕ್ಕೆ ಕಾರಣ, ಅದು ಹೆಣ್ಣುಮಕ್ಕಳಿಗೆ ತಮ್ಮ ಅಭಿವ್ಯಕ್ತಿಗೊಂದು ಧೈರ್ಯ ಕೊಡುತ್ತಿದೆ ಎಂಬುದೇ ಆಗಿದೆ. ಯಾವುದೇ ಇಸಂ ನಮ್ಮ ನಡುವಿನ ಅನ್ಯಾಯಗಳನ್ನು ವಿವರಿಸುತ್ತಿದೆಯೇ? ಅದು ಕೀಳರಿಮೆಯಿಂದ ನರಳುತ್ತಿರುವ ಹೆಣ್ಣುಮಗಳೊಬ್ಬಳಿಗೆ ಆತ್ಮವಿಶ್ವಾಸವನ್ನು ತುಂಬುತ್ತಿದೆಯೇ? ಅದು ನರಕಸದೃಶ ಬದುಕಿನಿಂದ ಪಾರಾಗಲು ಅವಳಿಗೆ ದಾರಿ ತೋರುತ್ತಿದೆಯೇ ಎಂಬುದು ಮುಖ್ಯ. ಈ ಸ್ವಪ್ರಜ್ಞೆ ಬರದೇ ಅವಳು ಧ್ವನಿ ಎತ್ತಲಾರಳು. ಅವಳು ಧ್ವನಿ ಎತ್ತದೇ ಲೋಕ ಅರಿತುಕೊಳ್ಳಲಾರದು. ಅಂತಹ ಧ್ವನಿಗಳೀಗ ಕೇಳಿಸತೊಡಗಿವೆ. ಗೊಲ್ಲರ ಹಟ್ಟಿಯ ಹೆಣ್ಣುಮಕ್ಕಳು ಮುಟ್ಟಾದಾಗ, ಮಕ್ಕಳನ್ನು ಹೆತ್ತಾಗ ಅವರನ್ನು ಊರಿನ ಹೊರಗೆ ಗುಡಿಸಲಿನಲ್ಲಿ ಪ್ರತ್ಯೇಕವಾಗಿ ಇರಿಸುವುದನ್ನು ಪತ್ರಿಕೆಗಳಲ್ಲಿ ಓದಿದ್ದೇವೆ. ಆದರೆ ಅದೇ ಗೊಲ್ಲರ ಹಟ್ಟಿಯ ಮಕ್ಕಳು ಇಂದು ಓದಿ ಕೆಲಸ ಪಡೆದು ಇಂತಹ ಹಿಂಸೆಗಳಿಂದ ಪಾರಾಗಿರುವುದನ್ನೂ ನೋಡುತ್ತಿದ್ದೇವೆ. ಇವರಿಗೆಲ್ಲರಿಗೂ ಈ ಕಾಲವೇ ಒಳ್ಳೆಯ ಕಾಲವಾಗಿ ಕಾಣಿಸುತ್ತದೆ. ಯಾಕೆಂದರೆ, ಇತಿಹಾಸದಲ್ಲಿ ನೋವುಂಡವರು ಮಾತ್ರ ಅದನ್ನು ಹೇಳಬಲ್ಲರು. ನೋವನ್ನೇ ಕಾಣದೆ, ಎಲ್ಲ ಸವಲತ್ತುಗಳನ್ನು ಮೊದಲು ಅನುಭವಿಸಿ, ಈಗ ಕೈತಪ್ಪುವ ಭಯದಲ್ಲಿ ಇರುವವರಿಗೆ, ಕೆಲವು ಇಸಂಗಳ ತಿಳಿವಿನಿಂದಾಗಿ ಜನ ಪ್ರಶ್ನಿಸತೊಡಗಿದರೆ, ಅದು ಘೋರ ಅಪರಾಧವಾಗಿ ಕಾಣುತ್ತದೆ. ಆದರೂ ಚಲನೆ ಮುಂದುವರಿಯುತ್ತಲೇ ಇರುತ್ತದೆ.

ಈ ತಿಳಿವಿನ ಮುಂದುವರಿಕೆಯಾಗಿ, ವಿವಾಹದೊಳ ಗಣ ಆಕ್ರಮಣವನ್ನು ಪ್ರಶ್ನಿಸಿದರೂ ಅಪರಾಧ ಎನಿಸುತ್ತಿದೆ. ಅದನ್ನು ಸಹಾನುಭೂತಿಯಿಂದ ಪರಿಶೀ ಲಿಸದೇ ಹೋದರೆ, ತರುಣ ಜನಾಂಗದ ವೈವಾಹಿಕ ಬದುಕು ಛಿದ್ರವಾಗುತ್ತದೆ. ಸಮಾನತೆಯ ಆಶಯ ಮಿದುಳಿಗೆ ರವಾನೆಯಾಗದೇ, ಎಲ್ಲ ಸರಿಯಿತ್ತು ಎಂದು ತಿಪ್ಪೆ ಸಾರಿಸಲಾಗದು. ಅಂದೂವೈದಿಕವಲ್ಲದೆ ಅವೈದಿಕ ನಡೆಗಳಿಂದಲೂ ಒಳಿತು ಕೆಡುಕುಗಳ ವಿಶ್ಲೇಷಣೆ ನಡೆದಿತ್ತು. ಇಂದೂ ನಡೆಯುತ್ತಿರುತ್ತದೆ. ಅನುಕೂಲಕ್ಕೆ ತಕ್ಕಂತೆ ಹಿಂದು ಮುಂದುಗಳನ್ನು ತಿರುಚುತ್ತಾ, ಹಿಂದಿನ ತರತಮಗಳಿಗೆ ಮರುಮನ್ನಣೆ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ನಿಮ್ಮ ಸ್ಥಿತಿಗೆ ನೀವೇ ಕಾರಣ ಎಂದು ಒಪ್ಪಿಸಲಾಗುತ್ತಿದೆ. ಆಗ ಎಲ್ಲಾ ಚೆನ್ನಾಗಿತ್ತು ಎನ್ನುವಾಗಲೂ, ಆಗಿನ ತಪ್ಪುಗಳನ್ನು ಮುಚ್ಚಿಟ್ಟು ಈಗಿನವರನ್ನು ದೂಷಿಸುವುದು ಇಂದಿನ ಹೊಸ ರಾಜಕಾರಣ.

ಭೈರಪ್ಪನವರ ‘ಗೃಹಭಂಗ’ ಕಾದಂಬರಿಯ ನಂಜಮ್ಮನಂತೆ, ಅವಳ ಮರಿಮಗಳು ನಲುಗಲು ತಯಾರಿರುವುದಿಲ್ಲ. ಫೆಮಿನಿಸ್ಟರನ್ನು ಬೈಯುವುದು ಒತ್ತಟ್ಟಿಗಿರಲಿ, ಕಾಮದಲ್ಲೂ ಒಪ್ಪಿಗೆ ಕೇಳುತ್ತೇನೆ ಎನ್ನುವ ‘ನಾತಿಚರಾಮಿ’ ಮಂತ್ರದೆಡೆಗೆ ಸೆಲೆಕ್ಟಿವ್ ಆಗದಿರಿ ಎಂದವಳು ಕೇಳತೊಡಗಿದ್ದಾಳೆ, ಕಿವಿಗೊಡಿ.

ಸಬಿತಾ ಬನ್ನಾಡಿ
ಸಬಿತಾ ಬನ್ನಾಡಿ

ಲೇಖಕಿ: ಕನ್ನಡ ಪ್ರಾಧ್ಯಾಪಕಿ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT