ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ ತಡಿಯಲ್ಲೂ ನೀರಿಗೆ ಬರ! ಕೇಶವ ಎಚ್. ಕೊರ್ಸೆ ಅವರ ವಿಶ್ಲೇಷಣೆ

ಪರಿಸರ ಸುಸ್ಥಿರತೆಯಿರದ, ಜನ ಸಹಭಾಗಿತ್ವವಿರದ ಆಡಳಿತನೀತಿಯ ಪರಿಣಾಮ
Published 21 ಸೆಪ್ಟೆಂಬರ್ 2023, 0:13 IST
Last Updated 21 ಸೆಪ್ಟೆಂಬರ್ 2023, 0:13 IST
ಅಕ್ಷರ ಗಾತ್ರ

ಮಂಗಳೂರು- ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವವರು ಕರಾವಳಿಯ ಸೌಂದರ್ಯಕ್ಕೆ ಮನಸೋಲದಿರರು. ಒಂದೆಡೆ, ನೀಲ ಕಡಲು, ಇನ್ನೊಂದೆಡೆ, ಹಸಿರು ಸಹ್ಯಾದ್ರಿ, ನಡುವೆ ಹರಿವ ನದಿ-ತೊರೆಗಳು ಹಾಗೂ ಹಸಿರು ತೋಟಗಳು. ಬರಗಾಲದ ಈ ಸಮಯದಲ್ಲಂತೂ ಹಸಿರುಮಯ ಕರಾವಳಿಯ ಜೀವನ ಬಲುಚೆನ್ನ ಎಂದೂ ಪ್ರವಾಸಿಗರಿಗೆ ತೋರೀತು. ಆದರೆ, ಇವೆಲ್ಲ ಮೇಲ್ನೋಟದ ಸಂಗತಿಗಳು. ಇಲ್ಲಿನ ಗಿಡಮರಗಳೆಲ್ಲ ಸದಾ ಹಸಿರಾಗಿರುವುದು ನಿತ್ಯಹರಿದ್ವರ್ಣ ಪ್ರಭೇದಗಳಿಂದಾಗಿ ಹಾಗೂ ವಾತಾವರಣದ ಅತೀವ ತೇವಾಂಶದಿಂದಾಗಿ.

ನದಿ, ಅಳಿವೆಗಳಲ್ಲಿ ಜಲರಾಶಿಯಿದ್ದರೂ ಅದು ಸಮುದ್ರದಿಂದ ಭೂಪ್ರದೇಶಕ್ಕೆ ಒಳನುಗ್ಗುತ್ತಿರುವ ಉಪ್ಪುನೀರು! ಕರಾವಳಿಯ ಈ ವಿಶಿಷ್ಟ ಪರಿಸರ ಹಾಗೂ ಜನಜೀವನದ ವಾಸ್ತವ ಅರ್ಥವಾಗಲು ಹೆದ್ದಾರಿ ಬಿಟ್ಟು ಒಳಸಾಗಬೇಕು. ಕಾಡು, ತೋಟ, ಅಳಿವೆ, ಕಡಲಂಚಿನ ನೈಜಸ್ಥಿತಿಯನ್ನು ಪರೀಕ್ಷಿಸಬೇಕು.

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಈ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಕರಾವಳಿಯನ್ನು ಪರಶುರಾಮ ಸೃಷ್ಟಿಯೆಂದು ವರ್ಣಿಸಲು ಕಾರಣವಿದೆ. ತನ್ನ ಸಮೃದ್ಧ ನೈಸರ್ಗಿಕ ಪರಿಸರ ಹಾಗೂ ಕೃಷಿ ಪರಂಪರೆಯನ್ನು ಆಧರಿಸಿ ಇಲ್ಲಿನ ಜನಜೀವನವು ಸಾಧಿಸಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಯನ್ನು ಸಾರುವ ರೂಪಕವದು. ಆದರೆ, ಈ ಸೂಕ್ಷ್ಮಪರಿಸರದ ನಿರ್ವಹಣೆ ಮೂರು ದಶಕಗಳಿಂದ ಅದೆಷ್ಟು ಹದಗೆಡುತ್ತಿದೆಯೆಂದರೆ, ಜನರ ಕನಿಷ್ಠ ಜೀವನಭದ್ರತೆಗೂ ಭಂಗ ಬರುತ್ತಿದೆ! ಕಾಡು, ನದಿ, ಕೃಷಿ, ಕಡಲತೀರಗಳ ಪ್ರಾತಿನಿಧಿಕ ಉದಾಹರಣೆಗಳನ್ನು ನೋಡಿದರೂ ಇದರ ಅರಿವಾಗುತ್ತದೆ.

ಪಶ್ಚಿಮಘಟ್ಟದ ಕಾಡು, ಅಲ್ಲಿಂದ ಹರಿದುಬರುವ ನದಿ, ತೊರೆಗಳ ಕಣಿವೆಗಳು, ಅವುಗಳಂಚಿನ ಹಾಡಿ ಬೆಟ್ಟಗಳು ಎಲ್ಲವೂ ವ್ಯಾಪಕ ಅತಿಕ್ರಮಣಕ್ಕೆ ಒಳಗಾಗುತ್ತಿವೆ. ಕೃಷಿ, ಹೈನುಗಾರಿಕೆಯನ್ನು ಪೊರೆಯುತ್ತಿದ್ದ ಗೋಮಾಳ, ಕುಮ್ಕಿ ಭೂಮಿಗಳು ಅನಧಿಕೃತ ಜಂಬಿಟ್ಟಿಗೆ ಕ್ವಾರಿ, ರಬ್ಬರ್ ನೆಡುತೋಪುಗಳಿಗೆ ಬಲಿಯಾಗುತ್ತಿವೆ. ಜಲಾನಯನ ಪ್ರದೇಶ ನಾಶವಾದಂತೆಲ್ಲ ಝರಿ, ತೊರೆಗಳು ಒಣಗಿ, ನದಿಗಳ ಕೆಳಹರಿವಿನಲ್ಲಿ ನೀರು ಇಲ್ಲದಾಗುತ್ತಿದೆ. ಸಹ್ಯಾದ್ರಿಯಿಂದ ಹರಿದು ಕಡಲು ಸೇರುವ ನದಿಗಳಲ್ಲಿ ಸಿಹಿನೀರು ಕಡಿಮೆಯಾದಾಗ, ನದಿಮುಖಜ ಪ್ರದೇಶಗಳಲ್ಲಿ ಜಲಚರಗಳನ್ನು ಪೊರೆಯುವ ಪೋಷಕಾಂಶಗಳ ಕೊರತೆಯಾಗುವುದು ಸಹಜ. ಹೀಗಾಗಿ, ಈಗ ಸಮುದ್ರದಲ್ಲೂ ಮೀನುಕ್ಷಾಮ ಮೈದೋರುತ್ತಿದೆ. ಒಣಗುತ್ತಿರುವ ಒಳಪ್ರದೇಶದ ಹೊಳೆ, ನದಿಗಳಿಗೂ ಸಮುದ್ರನೀರು ನುಗ್ಗುತ್ತಿದೆ. ಕರಾವಳಿಯ ಸಿಹಿನೀರಿನ ಮೂಲಗಳೆಲ್ಲ ಬರಿದಾಗುತ್ತ, ಉಳಿದವು ಸವುಳಾಗುತ್ತಿವೆ.

ಕಡಲಂಚಿನ ನಿರ್ವಹಣೆಯಾದರೂ ಹೇಗಿದೆ? ಕೇದಗೆ, ಸಿರಿಹೊನ್ನೆ, ಸಮುದ್ರಫಲದಂಥ ಸ್ಥಳೀಯ ಸಸ್ಯಪ್ರಭೇದಗಳ ಸಹಜಕಾಡು ಈವರೆಗೆ ಸಮುದ್ರದಂಚನ್ನು ಕಾಪಾಡುತ್ತಿತ್ತು. ಆದರೆ, ಸಮುದ್ರದಂಡೆ ಒತ್ತುವರಿ, ಬಂದರು ಖಾಸಗೀಕರಣ, ಪ್ರವಾಸೋದ್ಯಮದ ಹೆಸರಿನಲ್ಲಾಗುವ ಅವೈಜ್ಞಾನಿಕ ಭೂಪರಿವರ್ತನೆಗಳಿಗೆ ಈ ಹಸಿರುಗೋಡೆಗಳು ಬಲಿಯಾಗಿ, ಕಡಲಕೊರೆತ ಹೆಚ್ಚುತ್ತಿದೆ. ಮರಳು, ಸಿಲಿಕಾ ಹರಳು, ಚಿಪ್ಪುಸುಣ್ಣ, ಗ್ರಾನೈಟ್‌ನಂತಹವುಗಳ ಅನಧಿಕೃತ ಗಣಿಗಾರಿಕೆಗಳು ನದಿಗಳ ಸ್ವರೂಪವನ್ನೇ ಧ್ವಂಸಗೊಳಿಸುತ್ತಿವೆ.

ಬಹುವಿಧಗಳ ಪಾರಿಸರಿಕ ಸೇವೆ ನೀಡುವ ಅಳಿವೆಗಳನ್ನೆಲ್ಲ ಗುಡ್ಡದ ಮಣ್ಣು ತುಂಬಿಸಿ ಮಾರಲಾಗುತ್ತಿದೆ. ಈ ಸೂಕ್ಷ್ಮಪರಿಸರವನ್ನೇ ಆಧರಿಸುವ ಬೆಳಚು, ಸೀಗಡಿ, ಏಡಿ, ಸಮುದ್ರಏಡಿಯಂಥ ಜಲಚರಗಳು ಹಾಗೂ ಮೀನಿನ ಸಂಕುಲಗಳು ನಾಶವಾಗುತ್ತಿವೆ. ಇವನ್ನೇ ಆಶ್ರಯಿಸಿದ ಪಾರಂಪರಿಕ ಮೀನುಗಾರರು, ಭತ್ತ, ತರಕಾರಿ, ತೋಟಗಾರಿಕೆ ಕೃಷಿಕರು ಕಾಲಡಿಯ ನೆಲವೇ ಕುಸಿದಂತಾಗಿ ಕಂಗೆಟ್ಟಿದ್ದಾರೆ. ನಗರೀಕರಣದ ವಾಣಿಜ್ಯೋದ್ಯಮ ಹಾಗೂ ಭೂಬಳಕೆ ನೀತಿಯಿರದೆ ಸಾಗಿರುವ ಅಭಿವೃದ್ಧಿ ಕಾಮಗಾರಿಗಳ ಪರಿಣಾಮವಿದು.

ಏಕೆ ಈ ವ್ಯಾಪಕ ವಿನಾಶ? ಮೂರು ದಶಕಗಳ ಇಲ್ಲಿನ ಬೆಳವಣಿಗೆಗಳನ್ನು ವಿಶ್ಲೇಷಿಸಿದರೆ, ಎರಡು ಪ್ರಮುಖ ಕಾರಣಗಳು ತೋರುತ್ತವೆ. ಒಂದು, ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಪರಿಸರದ ಸಂರಚನೆಯನ್ನೇ ಧ್ವಂಸ ಮಾಡುತ್ತಿರುವ ಅವೈಜ್ಞಾನಿಕ ಕಾಮಗಾರಿಗಳು. ಅರಣ್ಯ, ಪರಿಸರ, ಜೀವವೈವಿಧ್ಯ, ವನ್ಯಜೀವಿಗಳ ಸಂರಕ್ಷಣೆ ಕುರಿತ ಕಾನೂನುಗಳ ಆಶಯಗಳನ್ನೆಲ್ಲ ಗಾಳಿಗೆ ತೂರಲಾಗುತ್ತಿದೆ. ಪ್ರತಿವರ್ಷವೂ ಕಲ್ಲುಬಂಡೆಗಳನ್ನು ಸುರಿಯುತ್ತಿದ್ದರೂ ಕೊಚ್ಚಿಹೋಗುತ್ತಿರುವ ಸಮುದ್ರದಂಚು, ಗುಡ್ಡಗಳನ್ನು ಲಂಬಕೋನದಲ್ಲಿ ಕತ್ತರಿಸುವ ನವ ಹೆದ್ದಾರಿಗಳು, ಕಾಂಡ್ಲಾಕಾಡು ಕಡಿದು ಮೇಲೇಳುವ ವಾಣಿಜ್ಯ ಕಟ್ಟಡಗಳು, ನದಿ-ಕಣಿವೆಗಳನ್ನು ಛಿದ್ರವಾಗಿಸುವ ಎತ್ತಿನಹೊಳೆ ತರಹದ ಯೋಜನೆಗಳ ಬೃಹತ್ ಕೊಳವೆಮಾರ್ಗಗಳು! ಎಲ್ಲೆಲ್ಲೂ ಈ ಬಗೆಯ ಅವಿವೇಕವೇ.

ಕರಾವಳಿ ದುರವಸ್ಥೆಗೆ ಇನ್ನೊಂದು ಕಾರಣವೆಂದರೆ, ಆಡಳಿತದಲ್ಲಿ ಜನಸಹಭಾಗಿತ್ವ ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಪರಸ್ಪರ ಸಮನ್ವಯವೇ ಇರದಿರುವುದು. ಪಂಚಾಯಿತಿ ಹಾಗೂ ನಗರಾಡಳಿತ ಸಂಸ್ಥೆಗಳು ತಮ್ಮ ಸ್ವಾಯತ್ತತೆ ಹಾಗೂ ಧ್ವನಿಯನ್ನು ಕಳೆದುಕೊಂಡು, ಸರ್ಕಾರಿ ಆದೇಶಗಳನ್ನು ಕುರುಡಾಗಿ ಪಾಲಿಸುವ ಶಾಖಾ ಕಚೇರಿಗಳಾಗುತ್ತಿವೆ. ಅಧಿಕಾರ ವಿಕೇಂದ್ರೀಕರಣದ ವಿಡಂಬನೆಯಲ್ಲವೇ ಇದು? ತಳಮಟ್ಟದ ಸಮುದಾಯ ಸಂಘಟನೆಗಳ ಅಭಿಪ್ರಾಯ ಆಲಿಸುವ ಸೂಕ್ಷ್ಮತೆಯಂತೂ ಅಧಿಕಾರಶಾಹಿಯಲ್ಲಿ ಯಾವತ್ತೋ ಮಾಯವಾಗಿದೆ. ಸರ್ಕಾರಿ ಯೋಜನೆಯೊಂದು ತಮ್ಮೂರಿಗೆ ಏಕೆ ಬರುತ್ತಿದೆ ಮತ್ತು ಹೇಗೆ ಅನುಷ್ಠಾನಗೊಳ್ಳುತ್ತಿದೆ ಎಂದು ಅರಿಯಲು, ಈ ಮಾಹಿತಿ ಯುಗದಲ್ಲೂ ಸ್ಥಳೀಯರಿಗೆ ಕಷ್ಟವಾಗುತ್ತಿದೆ!

ಹೀಗೆ ಜನರ ಪಾಲ್ಗೊಳ್ಳುವಿಕೆಯಿರದೆ ವಿಫಲವಾದ ಅಭಿವೃದ್ಧಿ ಮಾದರಿಗಳನ್ನು ಕರಾವಳಿಯ ಎಲ್ಲೆಡೆಯೂ ಕಾಣಬಹುದು. ಗುಡ್ಡಗಳನ್ನು ಛಿದ್ರವಾಗಿಸುವ ಅವೈಜ್ಞಾನಿಕ ರಸ್ತೆ, ಸೇತುವೆಗಳು, ಅಗತ್ಯವಿರದೆಡೆಯೂ ನಿರ್ಮಿಸುತ್ತಿರುವ ಖಾಸಗಿ ಬಂದರುಗಳು, ಕೆಲಸ ಮಾಡದ ತ್ಯಾಜ್ಯ ಸಾಗಣೆ ಹಾಗೂ ನಿರ್ವಹಣಾ ಘಟಕಗಳು, ಮಲಿನಗೊಂಡ ಬಾವಿ, ಹೊಳೆ, ಕೆರೆಗಳು, ಉಪಯೋಗಿಸಲು ಸಾಧ್ಯವಿರದ ಸಮುದಾಯ ಭವನದಂಥ ಸರ್ಕಾರಿ ಕಟ್ಟಡಗಳು, ನೀರೇ ನಿಲ್ಲದ ಕಿಂಡಿ ಅಣೆಕಟ್ಟು ಕಾಮಗಾರಿಗಳು! ಸರ್ಕಾರಿ ಅನುದಾನವೆಲ್ಲ ಹೀಗೆ ವ್ಯರ್ಥವಾಗುವ ಅಥವಾ ಅನರ್ಹರ ಕೈಸೇರುವುದನ್ನು ಮೌನವಾಗಿ ನೋಡುವ ಅನಿವಾರ್ಯವೊಂದೇ ಜನಸಾಮಾನ್ಯರದ್ದು.

ಅಭಿವೃದ್ಧಿ ವಿಧಾನಗಳಲ್ಲಿ ಸುಸ್ಥಿರತೆ ಸೂತ್ರ ಹಾಗೂ ಪಾರದರ್ಶಕತೆಯಿರದೆ, ಕೃಷಿ, ಕೈಗಾರಿಕೆ, ಉದ್ಯಮ ಎಲ್ಲವುಗಳ ಕ್ಷಮತೆ ಕ್ಷೀಣಿಸುತ್ತಿರುವ ಪರಿಯಿದು. ಜಲಮೂಲ ಬತ್ತಿ, ಅಂತರ್ಜಲ ಕುಸಿದು, ಗದ್ದೆ, ತೋಟಗಳು ಪಾಳುಬೀಳುತ್ತಿವೆ. ಕೃಷಿ, ಹೈನುಗಾರಿಕೆ, ಕರಕುಶಲದ ಪಾರಂಪರಿಕ ಜೀವನೋಪಾಯಗಳೆಲ್ಲ ಕರಗುತ್ತಿವೆ. ವಾರ್ಷಿಕ ಮೂರೂವರೆ ಸಾವಿರ ಮಿಲಿ ಮೀಟರ್‌ಗೂ ಮಿಕ್ಕಿ ಮಳೆ ಬೀಳುವ ಸಮೃದ್ಧ ಕರಾವಳಿಯ ಬಹುಪಾಲು ಪಟ್ಟಣ, ಹಳ್ಳಿಗಳು ಇಂದು ಕನಿಷ್ಠ ಪ್ರಮಾಣದ ಕುಡಿಯುವ ನೀರಿಗೂ ಒದ್ದಾಡುತ್ತಿವೆ!

ಆಡಳಿತ ವೈಫಲ್ಯ ತೋರುವ ಒಂದು ತಾಜಾ ಉದಾಹರಣೆ ಇಲ್ಲಿದೆ. ಉತ್ತರ ಕನ್ನಡದ ಕುಮಟಾ ತಾಲ್ಲೂಕಿನ ಹದಿನಾಲ್ಕು ಪಂಚಾಯಿತಿಗಳ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲೆಂದು, ಸ್ಥಳೀಯರ ಗಮನಕ್ಕೆ ತರದೆಯೇ ‘ಜಲಜೀವನ ಮಿಷನ್’ ಅಡಿಯಲ್ಲಿ ಯೋಜನೆಯೊಂದು ಇದೀಗ ಜಾರಿಯಾಗುತ್ತಿದೆ. ಕುಮಟಾ ಪಟ್ಟಣದಿಂದ ಪಶ್ಚಿಮಘಟ್ಟದ ತಪ್ಪಲಿನ ಅಘನಾಶಿನಿ ನದಿತಟದ ದೀವಳ್ಳಿವರೆಗೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೊಳವೆಮಾರ್ಗ ಕಾಮಗಾರಿ ಆರಂಭಿಸಿಯೂ ಆಗಿದೆ. ಆದರೆ, ಕುಮಟಾ ಪಟ್ಟಣ ಹಾಗೂ ನದಿಯ ಇಕ್ಕೆಲಗಳ ಹಳ್ಳಿಗಳ ಕುಡಿಯುವ ಹಾಗೂ ಕೃಷಿ ಬಳಕೆ ನೀರನ್ನು ಈಗಾಗಲೇ ಒದಗಿಸುತ್ತಿರುವ ಅಘನಾಶಿನಿ ನದಿಯಲ್ಲಿ, ಈ ಹೊಸ ಯೋಜನೆಗೆ ಒದಗಿಸಲು ಹೆಚ್ಚುವರಿ ನೀರಿಲ್ಲ ಎಂಬ ಸತ್ಯ ಈಗ ಅರಿವಾಗುತ್ತಿದೆ!

ತಾನು ಬಳಸುವ ನೀರಿಗಾಗಿ ಸುಸ್ಥಿರ ಜಲಮೂಲಗಳನ್ನು ಗುರುತಿಸುವ ಹಾಗೂ ಅವನ್ನು ಕಾಪಾಡಿಕೊಳ್ಳುವ ಕನಿಷ್ಠ ಹೊಣೆಗಾರಿಕೆಯನ್ನೂ ಒಳಗೊಳ್ಳದ ‘ಜಲಜೀವನ ಮಿಷನ್‌’ ಹಾಗೂ ‘ಮನೆಮನೆಗೆ ಗಂಗೆ’ ಯೋಜನೆಯು ಹುಟ್ಟುಹಾಕಿದ ಅನರ್ಥವಿದು.

ಸಿಹಿನೀರಿನ ಲಭ್ಯತೆಯೂ ಸೇರಿದಂತೆ ಸಮೃದ್ಧ ನಿಸರ್ಗದ ಪ್ರದೇಶವಾಗಿತ್ತು ಕರುನಾಡ ಕರಾವಳಿ. ಅವೈಜ್ಞಾನಿಕ ಕಾಮಗಾರಿ ಹಾಗೂ ಪಾರದರ್ಶಕವಲ್ಲದ ಆಡಳಿತನೀತಿಯಿಂದಾಗಿ ಇದೀಗ ಬರಡಾಗುತ್ತಿದೆ. ಇದಕ್ಕೆ ಯಾರು ಹೊಣೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT