ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನಾತನ ಧರ್ಮ ಎಂದರೇ..? ಸಿ.ಎನ್. ರಾಮಚಂದ್ರನ್ ಅವರ ವಿಶ್ಲೇಷಣೆ

ಇಂದು ನಾವು ಅಳವಡಿಸಿಕೊಳ್ಳಬೇಕಿರುವುದು ಸನಾತನ ಧರ್ಮದ ಆಧುನಿಕ ರೂಪವನ್ನು
Published 23 ಸೆಪ್ಟೆಂಬರ್ 2023, 0:02 IST
Last Updated 23 ಸೆಪ್ಟೆಂಬರ್ 2023, 0:02 IST
ಅಕ್ಷರ ಗಾತ್ರ

ಅನೇಕ ಸಂದರ್ಭಗಳಲ್ಲಿ ಚರ್ಚೆಗಳು, ವಾದ-ಪ್ರತಿವಾದಗಳು ನಡೆಯುವುದು ಅಮೂರ್ತ ಪರಿಕಲ್ಪನೆಗಳ ಬಗ್ಗೆ. ಚರ್ಚೆಗಳಲ್ಲಿ ಆ ಅಮೂರ್ತ ಪರಿಕಲ್ಪನೆಗಳ ಆನ್ವಯಿಕ ಸ್ವರೂಪಗಳೇನು, ಪರಿಣಾಮಗಳೇನು ಎಂಬ ಪ್ರಶ್ನೆಗಳು ಸಂಪೂರ್ಣವಾಗಿ ಮರೆಯಾಗುತ್ತವೆ. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ, ದೇಶದ ವಿವಿಧೆಡೆ ಹಾಗೂ ಮಾಧ್ಯಮಗಳಲ್ಲಿ ಸನಾತನ ಧರ್ಮದ ಕುರಿತು ಈಗ ನಡೆಯುತ್ತಿರುವ ಚರ್ಚೆ.

ಈ ಚರ್ಚೆ ಚೆನ್ನೈಯಲ್ಲಿ ಪ್ರಾರಂಭವಾಗಿ, ರಾಷ್ಟ್ರದ ರಾಜಧಾನಿಯನ್ನು ತಲುಪಿ, ಸ್ವತಃ ಪ್ರಧಾನಿಯವರೇ ಸಾರ್ವಜನಿಕ ಸಭೆಗಳಲ್ಲಿ ‘ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ಸನಾತನ ಧರ್ಮವನ್ನು ನಾಶ ಮಾಡಿ ದೇಶವನ್ನು ಮರಳಿ ಸಾವಿರ ವರ್ಷಗಳ ದಾಸ್ಯಕ್ಕೆ ನೂಕುತ್ತದೆ’ ಎಂದು ಹೇಳುವಷ್ಟು ತೀವ್ರ ಸ್ವರೂಪವನ್ನು ತಾಳಿದೆ.

ಸನಾತನ ಧರ್ಮ ಎಂದರೇನು ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಕಾರಣ, ಇಂದು ಹಿಂದೂ ಧರ್ಮವೆಂದು ಕರೆಯಲಾಗುವ ಧರ್ಮಕ್ಕೆ ಕ್ರಿ.ಶ. ಆರನೆಯ ಶತಮಾನದವರೆಗೆ ಯಾವ ಹೆಸರೂ ಇರಲಿಲ್ಲ. ಸನಾತನ ಧರ್ಮ ಎಂಬ ಹೆಸರು ಮೊದಲಿಗೆ ಮಾಧವವರ್ಮನ ಖಾನಾಪುರ ತಾಮ್ರಶಾಸನಗಳಲ್ಲಿ ಕಂಡುಬರುತ್ತದೆ ಎಂದು ಸ್ವಾಮಿ ಹರ್ಷಾನಂದ ಅವರು ಹಿಂದೂ ಧರ್ಮವನ್ನು ಕುರಿತ ತಮ್ಮ ‘ವಿಶ್ವಕೋಶ’ದಲ್ಲಿ ದಾಖಲಿಸುತ್ತಾರೆ (ಸಂ.3: ಪುಟ 183). ಆನಂತರ ಆ ಹೆಸರು ‘ಮತ್ಸ್ಯಪುರಾಣ’, ‘ಭಾಗವತ ಪುರಾಣ’ದಂತಹವುಗಳಲ್ಲಿ ಕಂಡುಬರುತ್ತದೆ.

ಹಿಂದೂ ಧರ್ಮ ಅಥವಾ ಸನಾತನ ಧರ್ಮಕ್ಕೆ ಇಸ್ಲಾಂ ಧರ್ಮಕ್ಕೆ ಹಾಗೂ ಕ್ರೈಸ್ತ ಧರ್ಮಕ್ಕೆ ಇರುವಂತೆ ಯಾವ ಒಂದು ಆಧಾರ ಗ್ರಂಥವೂ ಇಲ್ಲ, ಇದು ಒಂದು ‘ರಿಲಿಜನ್’ ಅಲ್ಲ ಎಂದು ವಾದಿಸುವುದು ಅರ್ಧಸತ್ಯ. ಸನಾತನ ಧರ್ಮವೂ ವ್ಯಾಪಕ ವೈಚಾರಿಕತೆಯನ್ನು ಆಧರಿಸಿದೆ. ಶ್ರುತಿ, ಸ್ಮೃತಿ ಮತ್ತು ಪುರಾಣ ಈ ಮೂರು ವೈಚಾರಿಕ ಸ್ತಂಭಗಳ ಮೇಲೆ ನಿಂತಿದೆ.

‘ಶ್ರುತಿ’ ಎಂದರೆ ‘ಕೇಳಿದುದು’; ನಾಲ್ಕು ವೇದಗಳು. ಇವುಗಳು ಅಪೌರುಷೇಯ, ಎಂದರೆ ಮಾನವನಿಂದ ರಚಿಸಲ್ಪಟ್ಟವುಗಳಲ್ಲ ಎಂದು ಆಸ್ತಿಕರು ನಂಬುತ್ತಾರೆ. ಪ್ರತಿಯೊಂದು ವೇದದಲ್ಲಿಯೂ ಮೂರು ಭಾಗಗಳಿವೆ: ಸಂಹಿತೆ (ಸೂಕ್ತಗಳು. ನೈಸರ್ಗಿಕ ಸಂಗತಿಗಳನ್ನು ಮಾನುಷೀಕರಣಗೊಳಿಸಿ, ಅವುಗಳನ್ನು ಸ್ತುತಿಸುವ ಸ್ತೋತ್ರಗಳು), ಬ್ರಾಹ್ಮಣಗಳು (ಯಜ್ಞಯಾಗಾದಿ ವಿಧಿವತ್ತಾದ ಆಚರಣೆಗಳ ಸ್ವರೂಪ ಮತ್ತು ಅವುಗಳನ್ನು ಆಚರಿಸುವ ವಿಧಿವಿಧಾನಗಳನ್ನು ಮಂಡಿಸುವ ಭಾಗ) ಮತ್ತು ಉಪನಿಷತ್ತುಗಳು (ಮಾನವರೆಲ್ಲರಿಗೂ ಸಮಾನವಾದ ವಿಶ್ವಸೃಷ್ಟಿ, ಸೃಷ್ಟಿಕರ್ತ- ಮಾನವ ಸಂಬಂಧ, ಪಾಪ-ಪುಣ್ಯ, ಸಾವು-ಜನ್ಮಾಂತರದಂತಹ ವಿಷಯಗಳ ಬಗ್ಗೆ ಇರುವ ಆಳವಾದ ಜಿಜ್ಞಾಸೆಯನ್ನು ಹಾಗೂ ಅಮೂಲ್ಯ ಚಿಂತನೆಯನ್ನು ಮಂಡಿಸುತ್ತವೆ). ಎಸ್‌.ರಾಧಾಕೃಷ್ಣನ್, ವಿವೇಕಾನಂದರಂತಹವರು ಗೌರವಿಸುವುದು ಈ ಭಾಗವನ್ನು.

ಇರುವ ನೂರೆಂಟು ಉಪನಿಷತ್ತುಗಳಲ್ಲಿ ಮುಖ್ಯವಾದವು ಐತ್ತರೇಯ, ತೈತ್ತಿರೀಯ, ಬೃಹದಾರಣ್ಯಕ, ಪ್ರಶ್ನದಂತಹ 10-12 ಮಾತ್ರ. ಪುರಾಣಗಳು ಎಂದರೆ ಪ್ರಾಚೀನ ಇತಿಹಾಸ ಮತ್ತು ಕಾಲ್ಪನಿಕ ಕಥನಗಳು. ಇವೆಲ್ಲವೂ, ಅದರಲ್ಲಿಯೂ ಮುಖ್ಯವಾಗಿ ವೇದೋಪನಿಷತ್ತುಗಳು ಸನಾತನ ಧರ್ಮದ ಅದ್ಭುತ ತಾತ್ವಿಕ, ಆಧ್ಯಾತ್ಮಿಕ ಆಯಾಮವನ್ನು ಕಟ್ಟಿಕೊಡುತ್ತವೆ. ಆದರೆ, ಒಂದು ಸಮಾಜವನ್ನು ಹಾಗೂ ಅದು ಒಳಗೊಳ್ಳುವ ವ್ಯಕ್ತಿಗಳ ದೈನಂದಿನ ಬದುಕಿಗೆ ಸಂಬಂಧಿಸಿದ ಲೌಕಿಕ ಆಯಾಮವನ್ನು ಕಟ್ಟಿಕೊಡುವುದು ‘ಸ್ಮೃತಿಗಳು.’ ಹಿಂದೂ ಸಮಾಜದ ರಾಜಕೀಯ, ಸಾಮಾಜಿಕ, ಕೌಟುಂಬಿಕ ಸಂಬಂಧಗಳನ್ನು, ಕರ್ತವ್ಯಾಕರ್ತವ್ಯಗಳನ್ನು ಮತ್ತು ವಿಧಿನಿಷೇಧಗಳನ್ನು ಸುಮಾರು ಎರಡು ಸಹಸ್ರಮಾನಗಳ ಕಾಲ ನಿರ್ಧರಿಸಿದುದು ಹಾಗೂ ನಿಯಂತ್ರಿಸಿದುದು ಸ್ಮೃತಿಗಳು.

ಸ್ಮೃತಿ ಎಂದರೆ ನೆನಪು. ವೇದೋಪನಿಷತ್ತುಗಳ ‘ಸತ್ಯವನ್ನು’ ಮತ್ತೆ ಮತ್ತೆ ನೆನಪಿಸುವುದು ಸ್ಮೃತಿ. ಪ್ರಪ್ರಥಮ ಸ್ಮೃತಿಯೆಂದರೆ, ಬಹುಶಃ ಕ್ರಿ.ಪೂ. ಮೂರನೆಯ ಶತಮಾನದಲ್ಲಿ ರಚಿಸಲ್ಪಟ್ಟ ಮನುಸ್ಮೃತಿ ಅಥವಾ ಮಾನವ ಧರ್ಮಶಾಸ್ತ್ರ. ನಂತರ ಬಂದ ಎಲ್ಲ ಸ್ಮೃತಿಕಾರರೂ ಮನುವನ್ನು ಗೌರವದಿಂದ ಕಂಡು, ಅವನ ವಿಚಾರಗಳನ್ನು ಒಪ್ಪಿ ಮುಂದುವರಿಯುತ್ತಾರೆ.

ಸ್ಮೃತಿಗಳು ಅನೇಕವಾದರೂ ಮುಖ್ಯವಾದವುಗಳೆಂದರೆ ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ನಾರದ ಸ್ಮೃತಿ ಮತ್ತು ಪರಾಶರ ಸ್ಮೃತಿ (ಕ್ರಿ.ಶ. 100- 300). ಆಶ್ಚರ್ಯದ ಸಂಗತಿಯೆಂದರೆ, ಹನ್ನೆರಡನೆಯ ಶತಮಾನದಲ್ಲಿ ರಚಿಸಲಾದ ಯಾಜ್ಞವಲ್ಕ್ಯ ಸ್ಮೃತಿಯ ವ್ಯಾಖ್ಯಾನವಾದ ಮಿತಾಕ್ಷರ ಸಂಹಿತೆಯು ಇತರ ಸ್ಮೃತಿಗಳಿಗಿಂತ ಹೆಚ್ಚು ಪ್ರಭಾವಿಯಾಗಿದ್ದುದು.

ಆದಿಸ್ಮೃತಿಯಾದ ಮನುಸ್ಮೃತಿಯ ಬಗ್ಗೆ ಸ್ವಲ್ಪದರಲ್ಲಿಯೇ ಹೇಳಬೇಕಾದರೆ, ಮನು ಕೌಟುಂಬಿಕ, ಸಾಮಾಜಿಕ, ರಾಜಕೀಯದಂತಹ ಎಲ್ಲ ಕ್ಷೇತ್ರಗಳಲ್ಲಿಯೂ ಮೌಲ್ಯಾಧಾರಿತ ಶ್ರೇಣೀಕರಣವನ್ನು ಮಾಡುತ್ತಾನೆ. ಕೌಟುಂಬಿಕ ನೆಲೆಯಲ್ಲಿ ಪತಿ-ಪತ್ನಿ, ಸಾಮಾಜಿಕ ನೆಲೆಯಲ್ಲಿ ಸವರ್ಣೀಯರು-ಶೂದ್ರರು, ರಾಜಕೀಯ ನೆಲೆಯಲ್ಲಿ ಪ್ರಭು-ಪ್ರಜೆ... ಈ ಜೋಡಿ ಪದಗಳಲ್ಲಿ ಮೊದಲನೆಯದು ಶ್ರೇಷ್ಠ, ಎರಡನೆಯದು ಕನಿಷ್ಠ. ಎಂದರೆ, ಪತಿಗೆ ಪತ್ನಿ ಸದಾ ವಿಧೇಯಳಾಗಿರಬೇಕು, ಸವರ್ಣೀಯರಿಗೆ ಶೂದ್ರರು ಸದಾ ದಾಸರಾಗಿರಬೇಕು. ವರ್ಣಾಶ್ರಮ ಚೌಕಟ್ಟಿನಿಂದ ಹೊರಗಿರುವ (ಪಂಚಮರು ಎಂದು ಕರೆಯಲ್ಪಟ್ಟಿದ್ದ) ದಲಿತರು, ಅಲೆಮಾರಿ ಜನಾಂಗಕ್ಕೆ ಸೇರಿದವರು, ಬುಡಕಟ್ಟು ಜನರು, ಆದಿವಾಸಿಗಳಂತಹ ಸಮುದಾಯಗಳು ಸ್ಮೃತಿಕಾರರ ದೃಷ್ಟಿಯಲ್ಲಿ ಪರಿಗಣಿಸಬೇಕಾದ ಮಾನವರೇ ಅಲ್ಲ. ಅವರು ಊರು-ನಗರಗಳಿಂದ, ಸಮಾಜದಿಂದ ಹೊರಗಿರುವವರು. ಈ ಹೇಳಿಕೆಯ ವಿವರಣೆ:

ಸ್ತ್ರೀ: ಹುಟ್ಟುವಾಗಲೇ ಪಾಪಿಷ್ಠಳಾಗಿರುವ ಸ್ತ್ರೀ ಯಾವ ಶಿಕ್ಷಣಕ್ಕಾಗಲಿ, ಅಧಿಕಾರಕ್ಕಾಗಲಿ ಯೋಗ್ಯಳಲ್ಲ. ಹಾಸಿಗೆ, ಮಂಚ, ಆಭರಣಗಳು, ಕಾಮಾಸಕ್ತಿ, ಕ್ರೋಧ, ದುಷ್ಟ ವರ್ತನೆ, ಅಸೂಯಾಪರ ಸ್ವಭಾವ ಮತ್ತು ಕೆಟ್ಟ ಗುಣ- ಇವುಗಳನ್ನು ಮನು ಸ್ತ್ರೀಯರಿಗೆ ಕೊಟ್ಟಿದ್ದಾನೆ. ಆದ್ದರಿಂದ, ಸ್ತ್ರೀಯರು ತಮ್ಮನ್ನು ಹಗಲು-ರಾತ್ರಿ ಅವಲಂಬಿಸಿರುವಂತೆ ಪುರುಷರು ಅವರನ್ನು ನಡೆಸಿಕೊಳ್ಳಬೇಕು.

ಮನುವಿನ ನಂತರ ಬಂದ ಯಾವ ಸ್ಮೃತಿಕಾರನೂ ಮನುವಿನ ಈ ನಿಲುವನ್ನು ಖಂಡಿಸಿಲ್ಲ. ಅದಕ್ಕೆ ವಿರುದ್ಧವಾಗಿ, ಮನುವಿನ ನಿಲುವನ್ನೇ ಮತ್ತಷ್ಟು ಕಠಿಣ ಮಾಡುತ್ತಾರೆ. ಮನುವಿಗಿಂತ ಸಾವಿರ ವರ್ಷಗಳ ನಂತರ ಬಂದ ವಿಜ್ಞಾನೇಶ್ವರನು ಮಿತಾಕ್ಷರ ಸಂಹಿತೆಯಲ್ಲಿ ಮಂಡಿಸುವಂತೆ, ಅವಿಭಕ್ತ ಕುಟುಂಬದಲ್ಲಿ ಗಂಡುಮಕ್ಕಳಿಗೆ ಹುಟ್ಟಿನಿಂದಲೇ ಆಸ್ತಿಯ ಹಕ್ಕು ಲಭಿಸಿದರೆ, ಅದೇ ಕುಟುಂಬದ ಹೆಣ್ಣುಮಕ್ಕಳು, ಪತ್ನಿ, ಮೃತನ ವಿಧವೆ ಇವರುಗಳಿಗೆ ಆ ಕುಟುಂಬದ ಆಸ್ತಿಯಲ್ಲಿ ಎಂದಿಗೂ ಹಕ್ಕಿರುವುದಿಲ್ಲ. ಮನು ವಿಧವೆಯರಿಗೆ ಶೋಚನೀಯ ಬದುಕನ್ನು ವಿಧಿಸಿದರೆ, ವಿಜ್ಞಾನೇಶ್ವರನು ವಿಧವೆಯರಿಗೆ ಬದುಕುವ ಹಕ್ಕನ್ನೇ ನಿರಾಕರಿಸುತ್ತಾನೆ. ಗಂಡ ಸತ್ತ ನಂತರ ವಿಧವೆಯರಿಗೆ ಅನ್ವಾರೋಹಣ (ಪತಿಯ ಮೃತದೇಹದೊಡನೆ ಚಿತೆಗೇರುವುದು) ತುಂಬಾ ಪುಣ್ಯಕಾರಕ ಎಂದು ಮಂಡಿಸುತ್ತಾನೆ.

ಇಂತಹ ಮಹಿಳಾ ವಿರೋಧಿ ಮಿತಾಕ್ಷರ ಸಂಹಿತೆಯು ಭಾರತದ ಬಹು ಭಾಗಗಳಲ್ಲಿ ಅಧಿಕೃತವಾಗಿ ಸುಮಾರು 800 ವರ್ಷ (1955ರವರೆಗೆ) ಹಿಂದೂ ಸಮಾಜದ ಆಚಾರ, ವ್ಯವಹಾರಗಳನ್ನು ನಿಯಂತ್ರಿಸಿತು ಎಂಬುದನ್ನು ನಂಬುವುದೇ ಕಷ್ಟವಾಗುತ್ತದೆ.

ಶೂದ್ರರು: ಸ್ತ್ರೀಯರು ಮತ್ತು ಶೂದ್ರರ ಬಗೆಗಿನ ನಿಲುವುಗಳ ನಡುವೆ ಸ್ಮೃತಿಗಳಲ್ಲಿ ಹೆಚ್ಚು ವ್ಯತ್ಯಾಸವೇನೂ ಇಲ್ಲ. ನಿದರ್ಶನಾರ್ಥವಾಗಿ ಮನುಸ್ಮೃತಿಯ ಈ ಕೆಳಗಿನ ಶ್ಲೋಕಗಳನ್ನು ನೋಡಬಹುದು:

ಪ್ರಭುವು ಶೂದ್ರರಿಗೆ ನಿರ್ದೇಶಿಸಿರುವ ಒಂದೇ ಒಂದು ಕರ್ಮವೆಂದರೆ, ಮೊದಲ ಮೂರು ವರ್ಣಗಳ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ಸೇವೆಯನ್ನು ವಿನೀತರಾಗಿ ಮಾಡುವುದು.

ಶೂದ್ರನು ದ್ವಿಜರನ್ನು ನಿಂದನೆಯ ಮೂಲಕ ಅಪಮಾನಿಸಿದರೆ ಅವನ ನಾಲಿಗೆಯನ್ನು ಕತ್ತರಿಸಬೇಕು (ಇಂತಹ ಶಿಕ್ಷೆಗಳ ಪಟ್ಟಿ ಬಹಳಷ್ಟು ದೀರ್ಘವಾಗಿದೆ).

ಯಾವ ಸ್ಮೃತಿಕಾರನೂ ಮನುವಿನ ಈ ಕಟ್ಟಳೆಗಳನ್ನು ವಿರೋಧಿಸಿಲ್ಲ. ಒಟ್ಟಾರೆಯಾಗಿ, ಇಂದು ನಾವು ಅಳವಡಿಸಿಕೊಳ್ಳಬೇಕಾದ ಸನಾತನ ಧರ್ಮದ ಆಧುನಿಕ ರೂಪವೆಂದರೆ: ಉಪನಿಷತ್ತುಗಳ ಪಠಣ ಮತ್ತು ಮನನ ಮಾಡುವುದು, ಸ್ಮೃತಿಗಳನ್ನು ತಿರಸ್ಕರಿಸುವುದು ಮತ್ತು ಪುರಾಣಗಳನ್ನು ಕಾಲ್ಪನಿಕ ಕಥೆಗಳಂತೆ ಓದುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT