ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಕ್ರೀಡೆಗಂಟಿದ ಪೀಡೆಗೆ ಇಲ್ಲವೇ ಮುಕ್ತಿ?

ಲೈಂಗಿಕ ದೌರ್ಜನ್ಯದ ಆರೋಪಿಯ ವಿರುದ್ಧ ತೊಡೆ ತಟ್ಟಿದ ವಿಶ್ವಮಾನ್ಯ ಪೈಲ್ವಾನರು
Published 21 ಮೇ 2023, 23:26 IST
Last Updated 21 ಮೇ 2023, 23:26 IST
ಅಕ್ಷರ ಗಾತ್ರ

ಹರಿಯಾಣ ರಾಜ್ಯದ ಝಾಜ್ಜರ್ ಎಂಬ ಹಳ್ಳಿಯ ಹುಡುಗ ಬಜರಂಗ್ ಪೂನಿಯಾ. ರೈತಾಪಿ ಕುಟುಂಬದಲ್ಲಿ ಕ್ರೀಡಾಪಟುವಾಗಿ ಬೆಳೆಯುವಷ್ಟು ದುಡ್ಡು ಇರದಿದ್ದರೂ ಬಜರಂಗ್  ಎತ್ತರದ ಸಾಧನೆ ಮಾಡಿದರು. ಭಾರತಕ್ಕೆ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್, 2020ರ ಟೋಕಿಯೊ ಒಲಿಂಪಿಕ್ಸ್ ಸೇರಿದಂತೆ ಹಲವು ಪ್ರತಿಷ್ಠಿತ ಕೂಟಗಳ ಪದಕಗಳನ್ನು ಗೆದ್ದುಕೊಟ್ಟರು. ಆದರೆ ಇದೀಗ ಆ ಪದಕಗಳನ್ನೇ ಹಿಂತಿರುಗಿಸುವುದಾಗಿ ಹೇಳಿದ್ದಾರೆ.

ಭಾರತ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ನಡೆದಿರುವ ಧರಣಿಯ ಮುಂಚೂಣಿಯಲ್ಲಿ ಬಜರಂಗ್ ಇದ್ದಾರೆ. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಬ್ರಿಜ್‌ ಭೂಷಣ್ ಹಾಗೂ ಕೆಲವು ಕೋಚ್‌ಗಳ ಮೇಲೆ ಇದೆ. ಒಂದು ತಿಂಗಳಿನಿಂದ ನವದೆಹಲಿಯಲ್ಲಿ ಒಲಿಂಪಿಯನ್ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶಾ ಫೋಗಟ್, ರವಿ ದಹಿಯಾ ಹಾಗೂ ಬಜರಂಗ್‌ ನೇತ್ವತ್ವದಲ್ಲಿ ಕುಸ್ತಿಪಟುಗಳು ಧರಣಿ ನಡೆಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಪೊಲೀಸರು ಬ್ರಿಜ್‌ಭೂಷಣ್ ಮೇಲೆ ಎರಡು ಎಫ್‌ಐಆರ್‌ ದಾಖಲಿಸಿ ಹದಿನೈದು ದಿನಗಳೇ ಕಳೆದಿವೆ. ಅದರಲ್ಲಿ ಒಂದು ದೂರು ಪೊಕ್ಸೊ  ಕಾಯಿದೆಯಡಿ ದಾಖಲಾಗಿದೆ. ಆದರೂ ಬಿಜೆಪಿಯ ಪ್ರಭಾವಿ ಸಂಸದರಾಗಿರುವ ಬ್ರಿಜ್‌ಭೂಷಣ್ ಅವರನ್ನು ದೆಹಲಿ ಪೊಲೀಸರು ಈವರೆಗೆ ಬಂಧಿಸಿಲ್ಲ.

ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅಷ್ಟೇ ಅಲ್ಲದೇ ಧರಣಿನಿರತರಲ್ಲಿ ಕೆಲವರು ಬಿಜೆಪಿಯ ಪ್ರತಿನಿಧಿಗಳೇ ಆಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವಮಟ್ಟದಲ್ಲಿ ಪದಕ ಗೆದ್ದಿರುವ ಪೈಲ್ವಾನರು ಬೀದಿಗಿಳಿದರೂ ಆರೋಪಿಯನ್ನು ಬಂಧಿಸದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಹೋದ ಜನವರಿಯಲ್ಲಿಯೇ ನಾಲ್ಕು ದಿನಗಳ ಕಾಲ ಈ ಕುಸ್ತಿಪಟುಗಳು ಜಂತರ್ ಮಂಥರ್‌ನಲ್ಲಿ ಧರಣಿ ನಡೆಸಿದ್ದರು. ಆಗ ಸರ್ಕಾರಕ್ಕೆ ಆಗುವ ಮುಜುಗರ ತಪ್ಪಿಸಲು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ತನಿಖೆ ನಡೆಸುವ ಭರವಸೆ ನೀಡಲಾಗಿತ್ತು. ಮೇರಿ ಕೋಮ್ ನೇತೃತ್ವದ ಸಮಿತಿಯು ನೀಡಿರುವ ವರದಿಯನ್ನು ಕೇಂದ್ರ ಕ್ರೀಡಾ ಸಚಿವಾಲಯ ಇನ್ನೂ ಬಹಿರಂಗಗೊಳಿಸಿಲ್ಲ.

ಬಹುಶಃ ಕ್ರೀಡಾಪಟುಗಳ ಸಮುದಾಯವು ರಾಜಕೀಯ ಪಕ್ಷಗಳ ಭವಿಷ್ಯವನ್ನು ನಿರ್ಧರಿಸುವ ಮತಬ್ಯಾಂಕ್ ಅಲ್ಲದಿರುವುದು ಕೂಡ ಇಂತಹ ಅಸೀಮ ನಿರ್ಲಕ್ಷ್ಯಕ್ಕೆ ಕಾರಣವಿರಬಹುದು. ಅಲ್ಲದೇ ಈ ಹಿಂದೆ ಬೇರೆ ಬೇರೆ ಕ್ಷೇತ್ರಗಳಲ್ಲಿ ನಡೆದಂತಹ ಲೈಂಗಿಕ ದೌರ್ಜನ್ಯ ಪ್ರಕರಣಗಳಂತೆ ಇದೂ ಒಂದು ಎಂಬ ಉಡಾಫೆಯೂ ಆಡಳಿತಾರೂಢರಲ್ಲಿ ಇರಬಹುದು.

ಆದರೆ ಕ್ರೀಡಾಪಟುಗಳು ದೇಶದ ಸಾಂಸ್ಕೃತಿಕ ರಾಯಭಾರಿಗಳಾಗಿರುವುದರಿಂದ ಮತಬ್ಯಾಂಕ್‌ಗಿಂತಲೂ ಪರಿಣಾಮಕಾರಿಯಾಗಬಲ್ಲರು. ದೇಶದ ಆಡಳಿತ ವ್ಯವಸ್ಥೆ ಹಾಗೂ ಮಹಿಳಾ ಕ್ರೀಡಾಪಟುಗಳು ಅಸುರಕ್ಷಿತರಾಗಿದ್ದಾರೆ ಎಂಬ ಸಂದೇಶ ಈಗಾಗಲೇ ಹೋಗಿದೆ. ಇನ್ನು ಬೇರೆ ಪ್ರಕರಣಗಳಂತೆ ಇದು ಕೂಡ ಮೂಲೆಗುಂಪಾದರೆ ದೇಶದ ಕುಸ್ತಿ ಕ್ರೀಡೆಯು ಮಣ್ಣುಮುಕ್ಕುವ ಅಪಾಯವಿದೆ. ಹೆಣ್ಣುಮಕ್ಕಳು ಕ್ರೀಡೆಯಿಂದ ವಿಮುಖರಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಭಾರತಕ್ಕೆ ಒಲಿಂಪಿಕ್ ಕೂಟಗಳಲ್ಲಿ ಹಾಕಿ ಕ್ರೀಡೆ ಬಿಟ್ಟರೆ ಅತಿ ಹೆಚ್ಚು ಪದಕಗಳನ್ನು ಗೆದ್ದುಕೊಟ್ಟ ಶ್ರೇಯ ಕುಸ್ತಿಪಟುಗಳದ್ದು. ಎರಡು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಜಯಿಸಿದ್ದಾರೆ. ಇದರಲ್ಲಿ ಮಹಿಳೆಯರ ವಿಭಾಗದಲ್ಲಿರುವುದು ಒಂದು ಕಂಚು ಮಾತ್ರ.

ಹರಿಯಾಣದಲ್ಲಿ ಮಹಿಳೆಯರ ಮೇಲಿದ್ದ ಅತ್ಯಂತ ಕಠಿಣ ಕಟ್ಟುಪಾಡುಗಳನ್ನು ಮೀರಿದ ಫೋಗಟ್ ಕುಟುಂಬದ ಕುಡಿಗಳಾದ ಗೀತಾ, ಬಬಿತಾ, ವಿನೇಶಾ, ಸಂಗೀತಾ ಅವರು ದಂತಕಥೆಯೇ ಆಗಿದ್ದಾರೆ. ಅವರ ‘ದಂಗಲ್’ ಯಶೋಗಾಥೆಯಿಂದ ಪ್ರಭಾವಿತರಾದ ಹೆಣ್ಣುಮಕ್ಕಳು ಕುಸ್ತಿಯತ್ತ ಆಕರ್ಷಿತರಾದರು. ಇದರಲ್ಲಿ ಗ್ರಾಮೀಣ ಪ್ರತಿಭೆಗಳ ಸಂಖ್ಯೆ ಹೆಚ್ಚು. ಆದರೆ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆ ಇಲ್ಲದ ಕಡೆ ಪಾಲಕರು ತಮ್ಮ ಮಕ್ಕಳನ್ನು ಕಳಿಸಲು ಒಪ್ಪುತ್ತಾರೆಯೇ?

ಕಳೆದ ಹತ್ತು ವರ್ಷಗಳಿಂದ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಲೈಂಗಿಕ ಶೋಷಣೆಗೊಳಗಾಗಿರುವ 10–20 ಹುಡುಗಿಯರು ತಮಗೆ ಗೊತ್ತಿದ್ದಾರೆ. ಆದರೆ ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ದನಿಯೆತ್ತುವಷ್ಟು ಶಕ್ತಿ ಈ ಮಕ್ಕಳಿಗೆ ಇಲ್ಲ. ಲಖನೌನಲ್ಲಿ ನಡೆದ ರಾಷ್ಟ್ರೀಯ ತರಬೇತಿ ಶಿಬಿರಗಳಲ್ಲಿ ಕೆಲವು ಕೋಚ್‌ಗಳೂ ಮಹಿಳಾಪಟುಗಳನ್ನು ಲೈಂಗಿಕವಾಗಿ ಶೋಷಣೆ ಮಾಡಿರುವ ಸಾಕ್ಷ್ಯಾಧಾರಗಳು ತಮ್ಮ ಬಳಿ ಇವೆ ಎಂದೂ ವಿನೇಶಾ ಫೋಗಟ್ ಆರೋಪಿಸಿದ್ದಾರೆ. 

ಇನ್ನೊಂದೆಡೆ, ಕ್ರೀಡಾಕ್ಷೇತ್ರದಲ್ಲಿ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹಲವಾರು ವರ್ಷಗಳಿಂದ ನಡೆಯುತ್ತಲೇ ಇವೆ. ಕ್ರೀಡಾಪಟುಗಳನ್ನು ಪೋಷಿಸಿ ಬೆಳೆಸಬೇಕಾದ ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ವ್ಯಾಪ್ತಿಯಲ್ಲಿಯೇ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ವರದಿಯಾಗಿವೆ. 2010ರಿಂದ 2019ರವರೆಗೆ 24 ಸಾಯ್‌ ಕೇಂದ್ರಗಳಲ್ಲಿ 45 ಪ್ರಕರಣಗಳು ವರದಿಯಾಗಿದ್ದವು. ಆ ಪೈಕಿ 29 ದೂರುಗಳು ಕೋಚ್‌ಗಳ ವಿರುದ್ಧ ದಾಖಲಾಗಿದ್ದವು. ಎರಡು ದಿನಗಳ ಹಿಂದಷ್ಟೇ ಅಸ್ಸಾಂನ ಸಾಯ್‌ ವಸತಿ ನಿಲಯದಲ್ಲಿ ತರಬೇತಿ ಪಡೆಯುತ್ತಿರುವ ಬಾಲಕಿಯರು ತಮ್ಮ ಮೇಲೆ ಈಜು ಕೋಚ್ ಮೃಣಾಲ್ ಬಸುಮಾತ್ರೆ ಲೈಂಗಿಕ ಶೋಷಣೆ ನಡೆಸಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದಾರೆ.  

ಇಂತಹ ಪ್ರಕರಣಗಳು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅಮೆರಿಕದಂತಹ ದೇಶದಲ್ಲಿಯೂ ಇವೆ. ಅಲ್ಲಿಯೂ ಇಂತಹ ಪ್ರಕರಣಗಳಲ್ಲಿ ಪೊಲೀಸ್ ವ್ಯವಸ್ಥೆಯು ನಿರ್ಲಕ್ಷ್ಯ ಧೋರಣೆ ತೋರಿದ ಉದಾಹರಣೆಗಳು ಇವೆ. ಒಲಿಂಪಿಕ್ಸ್‌ ಜಿಮ್ನಾಸ್ಟಿಕ್ಸ್‌ ಚಾಂಪಿಯನ್ ಸಿಮೊನ್ ಬೈಲ್ಸ್‌ ಎರಡು ವರ್ಷಗಳ ಹಿಂದೆ ನ್ಯಾಯಾಲಯದಲ್ಲಿ ನೀಡಿದ್ದ ಹೇಳಿಕೆಗೆ ಕ್ರೀಡಾಜಗತ್ತು ಬೆಚ್ಚಿಬಿದ್ದಿತ್ತು.  70ಕ್ಕೂ ಹೆಚ್ಚು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನೆಂಬ ಆರೋಪವು ಅಮೆರಿಕ ಜಿಮ್ನಾಸ್ಟಿಕ್ಸ್ ತಂಡ ಮತ್ತು ಮಿಷಿಗನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ (ಎಂಎಸ್‌ಯು) ವೈದ್ಯನಾಗಿದ್ದ ಲ್ಯಾರಿ ಇತ್ತು. ಈ ಬಗ್ಗೆ ಎಫ್‌ಬಿಐಗೆ ಅಮೆರಿಕ ಜಿಮ್ನಾಸ್ಟಿಕ್ಸ್‌ 2015ರಲ್ಲಿಯೇ ದೂರು ನೀಡಿತ್ತು. ಆದರೂ ಲ್ಯಾರಿ ತನ್ನ ಹುದ್ದೆಯಲ್ಲಿ ಮುಂದುವರಿದಿದ್ದ. 2016ರಲ್ಲಿ ಪತ್ರಿಕೆಯೊಂದು ಆತನ ಕರ್ಮಕಾಂಡಗಳ ಲೇಖನ ಪ್ರಕಟಿಸಿದಾಗ ಎಫ್‌ಬಿಐ ಕ್ರಮಕ್ಕೆ ಮುಂದಾಯಿತು.‌ 58 ವರ್ಷದ ಲ್ಯಾರಿ ನಾಸರ್‌ಗೆ 2018ರಲ್ಲಿಯೇ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಜೈಲಿಗೆ ತಳ್ಳಲಾಯಿತು. ಆದರೆ ಆತನ ದೌರ್ಜನ್ಯದಿಂದಾಗಿ ಬೈಲ್ಸ್‌ ಸೇರಿದಂತೆ ಉಳಿದ ಹುಡುಗಿಯರು ಅನುಭವಿಸಿದ ಮಾನಸಿಕ ಹಾಗೂ ದೈಹಿಕ ಯಾತನೆ ಅವರಿಗಷ್ಟೇ ಗೊತ್ತು.

‘ನಾನು ಲ್ಯಾರಿಯನ್ನು ಖಂಡಿಸುವಷ್ಟೇ, ಇಡೀ ವ್ಯವಸ್ಥೆಯನ್ನೂ ದೂಷಿಸುತ್ತೇನೆ. ಅವನ ವಿಕೃತ ಕೃತ್ಯಗಳಿಗೆ ಕಡಿವಾಣ ಹಾಕದ ವ್ಯವಸ್ಥೆಗೆ ಧಿಕ್ಕಾರ’ ಎಂದು ಬೈಲ್ಸ್‌ ಆಕ್ರೋಶ ವ್ಯಕ್ತಪಡಿಸಿದ್ದರು.

ಭಾರತದಲ್ಲಿಯೂ ಈಗ ಅದೇ ಪರಿಸ್ಥಿತಿ ಇದೆ. ಆರೋಪಿಯ ಜೊತೆಗೆ ಆತನಿಗೆ ‘ರಕ್ಷಣೆ’ ಒದಗಿಸುತ್ತಿರುವ ವ್ಯವಸ್ಥೆಯನ್ನೂ ಕುಸ್ತಿಪಟುಗಳು ಖಂಡಿಸುತ್ತಿದ್ದಾರೆ. ಆದರೂ ನ್ಯಾಯ ಸಿಕ್ಕಿಲ್ಲ. ‘ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಸಾಧನೆ ಮಾಡಿ ಬಂದಾಗ ಔತಣಕೂಟ ನೀಡಿ ಗೌರವಿಸಿದ್ದ ಪ್ರಧಾನಿಯವರಿಗೂ ನಮ್ಮ ಮನದ ಮಾತು ಕೇಳುತ್ತಿಲ್ಲ. ಬೇಟಿ ಪಢಾವೊ, ಬೇಟಿ ಬಚಾವೊ ಎಂದು ಹೇಳುವ ಅವರಿಗೆ ನಮ್ಮ ಅಹವಾಲು ತಲುಪಿಲ್ಲ’ ಎಂದು ಕೆಲವು ದಿನಗಳ ಹಿಂದೆ ಸಾಕ್ಷಿ ಮಲಿಕ್ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದರು.

ಇನ್ನೊಂದೆಡೆ, ಆರೋಪಗಳಲ್ಲಿ ಹುರುಳಿಲ್ಲ. ಫೆಡರೇಷನ್‌ ಇತ್ತೀಚೆಗೆ ಜಾರಿಗೊಳಿಸಿರುವ ಕೆಲವು ಹೊಸ ನಿಯಮಗಳ ಬಗ್ಗೆ ಈ ಕುಸ್ತಿಪಟುಗಳಿಗೆ ತಕರಾರು ಇದೆ. ಧರಣಿಯಲ್ಲಿ ಭಾಗವಹಿಸಿದವರೆಲ್ಲರೂ ಹರಿಯಾಣದವರು ಮತ್ತು ಮುಂದಾಳತ್ವ ವಹಿಸಿದವರು ಒಂದೇ ಕುಟುಂಬದವರು. ಅದೇ ರಾಜ್ಯದ ಕುಸ್ತಿಪಟು ಯೋಗೇಶ್ವರ್ ದತ್ ತಟಸ್ಥವಾಗಿದ್ದಾರೆ. ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆದು ಸತ್ಯಾಂಶ ಹೊರಬರಲಿದೆ ಎಂಬ ಭರವಸೆ ತಮಗಿದೆ ಎಂದು ಬ್ರಿಜ್‌ ಭೂಷಣ್ ಪರವಾಗಿರುವವರು ವಾದಿಸುತ್ತಾರೆ.

ಆದರೆ ಪಾರದರ್ಶಕ ತನಿಖೆ ಮಾಡುವವರು ಯಾರು ಎಂಬುದೇ ಈಗ ಇರುವ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT