ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಭೂಷಣ್ ಪ್ರಕರಣದ ಸೂಕ್ಷ್ಮಗಳು

ಜಾಧವ್‌ ಅವರನ್ನು ಪಾರು ಮಾಡುವ ಶಕ್ತಿ ಐಸಿಜೆಗೆ ಇದೆಯೇ?
Last Updated 6 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ರಾಜಕೀಯ ಆಟದ ಕಾರಣದಿಂದಾಗಿ ಕುಲಭೂಷಣ್ ಜಾಧವ್ ಪ್ರಕರಣದ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ಜನರಿಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ.

ಪಾಕಿಸ್ತಾನದ ಹಲವು ಪ್ರಾಂತ್ಯಗಳು ಅಸ್ಥಿರತೆಗೆ ತುತ್ತಾಗಿವೆ. ಪಾಕಿಸ್ತಾನದ ಬಹುಪಾಲು ಆಂತರಿಕ ವಿಚಾರಗಳಲ್ಲಿ ಅಲ್ಲಿನ ಸೇನೆಯೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಅಲ್ಲಿ ಪೊಲೀಸ್ ವ್ಯವಸ್ಥೆ ಮತ್ತು ಸೇನೆಯು ರಾಜಕೀಯ ವಿರೋಧಿಗಳನ್ನು, ಮಾನವ ಹಕ್ಕುಗಳ ಕಾರ್ಯಕರ್ತರನ್ನು ಆಗಾಗ ಅಪಹರಿಸುವ, ಕೊಲ್ಲುವ ಕೆಲಸ ಮಾಡುತ್ತವೆ.

ಜಾಧವ್ ಭಾರತದ ಪ್ರಜೆ. ಅವರು ಭಾರತೀಯ ನೌಕಾಪಡೆಯ ಸೇವೆಯಲ್ಲಿ ಹಲವು ವರ್ಷಗಳಿಂದ ಇದ್ದರು ಎಂದು ಭಾರತದ ಮಾಧ್ಯಮ ವರದಿಗಳು ಹೇಳುತ್ತವೆ. ‘ಜಾಧವ್ ಅವರು ಭಾರತದ ಏಜೆಂಟ್. ಭಯೋತ್ಪಾದನೆ ಬೆಂಬಲಿಸಿ, ಅದನ್ನು ಪ್ರಾಯೋಜಿಸಿ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಲು ಅವರನ್ನು ಕಳುಹಿಸಲಾಗಿತ್ತು’ ಎಂದು ಪಾಕಿಸ್ತಾನ ಹೇಳುತ್ತಿದೆ. 2016ರ ಮಾರ್ಚ್‌ನಲ್ಲಿ ಜಾಧವ್ ಅವರನ್ನು ಬಂಧಿಸಿದ್ದಾಗಿ ಅದು ಹೇಳುತ್ತದೆ. ಆದರೆ, ಬಂಧಿಸಿದ ತಕ್ಷಣ ಅವರನ್ನು ಪಾಕಿಸ್ತಾನ ಏಕೆ ಹತ್ಯೆ ಮಾಡಲಿಲ್ಲ ಎಂಬ ಪ್ರಶ್ನೆ ಏಳುತ್ತದೆ– ಏಕೆಂದರೆ, ಬಲೂಚಿಸ್ತಾನದಲ್ಲಿನ ಸಮಸ್ಯೆಯನ್ನು ಪಾಕಿಸ್ತಾನ ನಿಭಾಯಿಸುವ ರೀತಿಯೇ ಅದು.

ಅದಕ್ಕೆ ಕಾರಣ ಏನೇ ಇರಬಹುದು. ಜಾಧವ್ ಅವರ ಜೀವ ತೆಗೆಯದೇ ಇರುವುದಕ್ಕೆ, ಕಾನೂನು ಗೌರವಿಸದ ಅಲ್ಲಿನ ಸೇನೆಗೆ ಒಂದಿಷ್ಟು ಕೃತಜ್ಞತೆ ಹೇಳಬೇಕು. ಗೂಢಚರ್ಯೆ ನಡೆಸುತ್ತಿದ್ದ ಜಾಧವ್ ಅವರನ್ನು ಬಂಧಿಸಿದ್ದಾಗಿ ಹೇಳಿಕೊಳ್ಳುವುದರ ರಾಜಕೀಯ ಪ್ರಯೋಜನಗಳು ಅವರನ್ನು ಹತ್ಯೆ ಮಾಡುವುದಕ್ಕಿಂತ ಹೆಚ್ಚು ಎಂದೂ ಪಾಕಿಸ್ತಾನ ಭಾವಿಸಿದ್ದಿರಬಹುದು.

ಪಾಕಿಸ್ತಾನದವರು ಜಾಧವ್ ಅವರನ್ನು ಇರಾನ್‌ನಲ್ಲಿ ಅಪಹರಿಸಿ, ಪಾಕಿಸ್ತಾನಕ್ಕೆ ಕರೆದೊಯ್ದರು ಎಂಬುದು ಭಾರತದ ವಾದ. ಜಾಧವ್ ಅವರು ಕಾನೂನುಬದ್ಧ ವ್ಯವಹಾರದ ಭಾಗವಾಗಿ ಇರಾನ್‌ನಲ್ಲಿ ಇದ್ದರು ಎಂದೂ ಭಾರತ ಹೇಳಿದೆ.

ಜಾಧವ್ ಅವರಿಗೆ ಭಾರತವು ಮುಸ್ಲಿಂ ವ್ಯಕ್ತಿಯ ಹೆಸರಿನ ನಕಲಿ ಪಾಸ್‌ಪೋರ್ಟ್‌ ನೀಡಿತ್ತು ಎಂಬುದು ಪಾಕಿಸ್ತಾನದ ಆರೋಪ. ಅಂತಹ ಪಾಸ್‌ಪೋರ್ಟ್‌ ನೀಡಿದ್ದನ್ನು ಭಾರತ ಸಾರ್ವಜನಿಕವಾಗಿ ಅಲ್ಲಗಳೆದ ಅಥವಾ ನಕಲಿ ಪಾಸ್‌ಪೋರ್ಟ್‌ ಹೊಂದಿದ್ದಕ್ಕೆ ಅವರ ವಿರುದ್ಧ ಪ್ರಕರಣ ದಾಖಲಿಸಿದ ದಾಖಲೆ ಇಲ್ಲ. ಹಾಗಾಗಿ, ಜಾಧವ್ ಅವರು ಭಾರತದ ನಕಲಿ ಪಾಸ್‌ಪೋರ್ಟ್‌ ಹೊಂದಿದ್ದರು ಎಂದು ಒಮ್ಮೆ ಭಾವಿಸೋಣ.

ಪಾಸ್‌ಪೋರ್ಟ್‌ ವಿಚಾರದಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳದ ಭಾರತದ ಕ್ರಮ, ದೌರ್ಬಲ್ಯ ತೋರಿಸುತ್ತದೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಿರಂಗವಾಗಿ, ಭಾರತದ ನೈತಿಕತೆಗೆ ಧಕ್ಕೆ ತರುವ ಸಾಧ್ಯತೆಯಿದ್ದರೂ ಈ ಪ್ರಕರಣದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮೆಟ್ಟಿಲೇರುವ ತೀರ್ಮಾನ ತೆಗೆದುಕೊಂಡಿದ್ದು ಆಶ್ಚರ್ಯಕರ. ಜಾಧವ್ ಅವರಿಗೆ ಪಾಕಿಸ್ತಾನ
ದಲ್ಲಿನ ಭಾರತದ ರಾಯಭಾರ ಕಚೇರಿಯಿಂದ ನೆರವು ಕೊಡಿಸುವುದು, ರಾಯಭಾರ ಕಚೇರಿಯ ನೆರವು ಇಲ್ಲದ ಸಂದರ್ಭದಲ್ಲಿ ಜಾಧವ್ ಅವರಿಗೆ ವಿಧಿಸಿದ ಶಿಕ್ಷೆಯನ್ನು ಪುನರ್ ಪರಿಶೀಲನೆಗೆ ಒಳಪಡಿಸುವಂತೆ ಪಾಕಿಸ್ತಾನಕ್ಕೆ ಮನವಿ ಮಾಡುವುದು ಮಾತ್ರ ಐಸಿಜೆ ಮೂಲಕ ಭಾರತ ಪಡೆದುಕೊಳ್ಳಬಹುದಾದ ಪ್ರಯೋಜನ.

ಹೀಗಿದ್ದರೂ, ಐಸಿಜೆ ಮುಂದೆ ಈಗಿರುವ ಪ್ರಕರಣದ ವ್ಯಾಪ್ತಿಯ ವಿಚಾರದಲ್ಲಿ ಕೇಂದ್ರ ಸರ್ಕಾರವು ಜನರಿಗೆ ಪೂರ್ಣ ಚಿತ್ರಣ ನೀಡಿಲ್ಲ. ಐಸಿಜೆಯು ಜಾಧವ್ ಅವರನ್ನು ಮರಣದಂಡನೆಯಿಂದ ಪಾರು ಮಾಡಬಹುದು ಎಂದು ಜನ ನಂಬುವಂತೆ ಮಾಡುವುದು ಸರಿಯಲ್ಲ. ಅವರನ್ನು ಪಾರು ಮಾಡುವ ಶಕ್ತಿ ಐಸಿಜೆಗೆ ಇಲ್ಲ. ಐಸಿಜೆಯಲ್ಲಿ ಗೆದ್ದರೂ ಜಾಧವ್ ಅವರಿಗೆ ರಾಯಭಾರ ಕಚೇರಿಯ ನೆರವು ಕೊಡಿಸಲು ಮಾತ್ರ ಸಾಧ್ಯ, ಪಾಕಿಸ್ತಾನದ ವ್ಯವಸ್ಥೆಯು ಜಾಧವ್ ಅವರನ್ನು ಮತ್ತೆ ಮರಣದಂಡನೆಗೆ ಗುರಿಪಡಿಸಲು ತೀರ್ಮಾನಿಸಿದರೆ ಅದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಹೇಳಬಹುದಿತ್ತಲ್ಲವೇ? ಜಾಧವ್ ಅವರನ್ನು ಭಾರತವು ಗೂಢಚರ್ಯೆಗೆ, ಭಯೋತ್ಪಾದನೆಗೆ ಕಳುಹಿಸಿತ್ತು ಎಂಬುದನ್ನು ನಾನು ನಂಬುವುದಿಲ್ಲ. ಜಾಧವ್ ಕುರಿತ ಹಲವು ಸಂಗತಿಗಳು ನಿಗೂಢವಾಗಿಯೇ ಇವೆಯಾದರೂ, ಜಾಧವ್ ಬಳಿ ಇದ್ದ ನಕಲಿ ಪಾಸ್‌ಪೋರ್ಟ್‌, ಅವರ ಬಂಧನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಲು ಪಾಕಿಸ್ತಾನಕ್ಕೆ ಸಾಕಾಗಿತ್ತು.

ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ತನ್ನ ಇಮೇಜ್ ಬಗ್ಗೆ ಬಹಳ ಆಸ್ಥೆಯಿದೆ. ಬಿಕ್ಕಟ್ಟುಗಳನ್ನು ಅಸಾಂಪ್ರದಾಯಿಕವಾಗಿ ನಿಭಾಯಿಸುವ ಆಲೋಚನೆಗಳು ಇಂತಹ ಸರ್ಕಾರಗಳಿಗೆ ಬರುವುದು ಕಡಿಮೆ. ಜಾಧವ್ ಅವರಲ್ಲಿ ನಕಲಿ ಪಾಸ್‌ಪೋರ್ಟ್‌ ಇದೆ ಎಂಬುದನ್ನು ಒಪ್ಪಿ, ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿ, ಪಾಕಿಸ್ತಾನವು ಜಾಧವ್ ಅವರನ್ನು ಅಪಹರಿಸಿದೆ ಎಂದು ವಿಶ್ವ ಸಮುದಾಯದ ಎದುರು ಹೇಳಬಹುದಿತ್ತು. ಆಗ, ಜಾಧವ್ ಗೂಢಚರ್ಯೆ ನಡೆಸಿದ್ದಕ್ಕೆ ಪುರಾವೆ ಕೊಡಿ ಎಂದು ಪಾಕಿಸ್ತಾನದ ಮೇಲೆ ಅಂತರರಾಷ್ಟ್ರೀಯ ಸಮುದಾಯದಿಂದ ಒತ್ತಡ ಬರುತ್ತಿತ್ತು.

ಜಾಧವ್ ಅವರನ್ನು ಗೂಢಚರ್ಯೆ ನಡೆಸಲು ಕಳುಹಿಸಿದ್ದರೂ, ಅವರು ನಕಲಿ ಪಾಸ್‌ಪೋರ್ಟ್‌ ಪಡೆದುಕೊಂಡಿದ್ದನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಬಹುದಿತ್ತು. ಆಗ, ‘ಪಾಕಿಸ್ತಾನವು ಜಾಧವ್ ಅವರ ನಕಲಿ ಪಾಸ್‌‍ಪೋರ್ಟ್‌ ಮುಂದಿಟ್ಟುಕೊಂಡು ಸಾಕ್ಷ್ಯಗಳನ್ನು ತಾನೇ ಸೃಷ್ಟಿಸಿ, ಅವರನ್ನು ಶಿಕ್ಷೆಗೆ ಗುರಿಪಡಿಸಿದೆ’ ಎಂದು ವಾದಿಸಬಹುದಿತ್ತು. ಆ ಮೂಲಕ, ಪಾಕಿಸ್ತಾನ ಮತ್ತು ಅಲ್ಲಿನ ಸೇನೆ ನಂಬಿಕೆಗೆ ಅರ್ಹವಲ್ಲ ಎಂದು ವಿಶ್ವದ ಎದುರು ತೋರಿಸಬಹುದಿತ್ತು. ನಾವು ಸ್ವಾತಂತ್ರ್ಯ ಗಿಟ್ಟಿಸಿಕೊಂಡಿದ್ದು ಉದ್ದೇಶದಲ್ಲಿ ಪ್ರಾಮಾಣಿಕರಾಗಿ ಉಳಿದಿದ್ದರ ಮೂಲಕ. ಅದು ಈಗಲೂ ಕೆಲಸಕ್ಕೆ ಬರುತ್ತದೆ. ಅಂದಹಾಗೆ, ಹಿಂದಿನ ಯುಪಿಎ ಸರ್ಕಾರವು ಬೇರೆ ರೀತಿಯಲ್ಲಿ ಇದನ್ನು ನಿಭಾಯಿಸಿಬಿಡುತ್ತಿತ್ತು
ಎಂದು ಹೇಳಲು ಹೋಗುವುದಿಲ್ಲ. ಆ ಸರ್ಕಾರ ಕೂಡ ಯಾವುದೇ ಇತರ ಸರ್ಕಾರಗಳಂತೆ ದುರ್ಬಲವೇ ಆಗಿತ್ತು.

ಜಾಧವ್ ತಪ್ಪು ಮಾಡಿದ್ದಾರೆ ಎನ್ನಲು ಪಾಕಿಸ್ತಾನ ಹಾಜರುಪಡಿಸಿರುವ ಸಾಕ್ಷ್ಯಗಳು ಅವರ ತಪ್ಪೊಪ್ಪಿಗೆ ಹೇಳಿಕೆ ಹೊರತು ಹೆಚ್ಚೇನೂ ಅಲ್ಲ. ಅಪರಾಧ ಸಾಬೀತು ಮಾಡಲು, ಮರಣದಂಡನೆ ವಿಧಿಸಲು ಆರೋಪಿಯ ಹೇಳಿಕೆಯನ್ನು ಯುದ್ಧಪೀಡಿತ ಪಾಕಿಸ್ತಾನ ಒಪ್ಪಬಹುದೇ ವಿನಾ, ಭಾರತ ಸೇರಿದಂತೆ ವಿಶ್ವದ ಬೇರೆ ಕಡೆ ಅದು ಸಾಕಾಗುವುದಿಲ್ಲ. ತನಗೆ ದೊರೆಯುವ ಶಿಕ್ಷೆ ಸಾವು ಎಂಬುದು ಗೊತ್ತಿದ್ದರೆ ಯಾವುದೇ ವ್ಯಕ್ತಿ ತಪ್ಪನ್ನು ಏಕೆ ಒಪ್ಪಿಕೊಳ್ಳುತ್ತಾನೆ? ಈ ಬಾರಿ ವಿಶ್ವದ ಬಹುಪಾಲು ಮಾನವ ಹಕ್ಕು ಸಂಘಟನೆಗಳು ಜಾಧವ್ ಪರ ಮಾತನಾಡಿಲ್ಲ. ಇದಕ್ಕೆ ಕಾರಣ, ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಗಳನ್ನು ಸರ್ಕಾರ ಸ್ಪಷ್ಟವಾಗಿ ಹೇಳದಿರುವುದು.

ಗೂಢಚರ್ಯೆಗೆ ಬೇರೆ ದೇಶಕ್ಕೆ ತನ್ನವರನ್ನು ಕಳಿಸುವ ದೇಶ, ಆ ಕೆಲಸದ ಅಪಾಯಗಳ ಬಗ್ಗೆ ವಿವರ ನೀಡಿರುತ್ತದೆ. ದೇಶಕ್ಕಾಗಿ ಸಾಯಲು ಸಿದ್ಧವಿರುವವರನ್ನೇ ಅಂತಹ ಕೆಲಸಗಳಿಗೆ ಕಳುಹಿಸುವುದು. ಹಾಗಾಗಿ, ಗೂಢಚಾರರು ಬೇರೆ ದೇಶಗಳಲ್ಲಿ ಸಿಕ್ಕಿಬಿದ್ದರೆ, ಅವರನ್ನು ಕಳುಹಿಸಿದ ದೇಶ ಸುಮ್ಮನಿದ್ದುಬಿಡುತ್ತದೆ. ಆದರೆ, ಜಾಧವ್ ಅವರು ಭಾರತದ ಗೂಢಚಾರ ಆಗಿದ್ದರು ಎಂಬ ಆರೋಪವನ್ನು ಸುಳ್ಳೆಂದು ಸಾಬೀತು ಮಾಡದೆಯೇ ಭಾರತವು ಅವರನ್ನು ರಕ್ಷಿಸುವುದಾಗಿದೇಶವಾಸಿಗಳಿಗೆ ಮತ್ತು ಪ್ರಪಂಚಕ್ಕೆ ಹೇಳುತ್ತಿದೆ.

ಲೇಖಕ: ಸುಪ್ರೀಂ ಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT