ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಶೆಯ ಕಾಲದ ಕರ್ತವ್ಯಗಳು

ವಸ್ತುನಿಷ್ಠ ಆತ್ಮಪರೀಕ್ಷೆಯಿಂದಷ್ಟೇ ಸೋಲಿನ ನಿಜವಾದ ಕಾರಣಗಳು ಹೊಳೆಯುತ್ತವೆ
Last Updated 6 ಜೂನ್ 2019, 20:36 IST
ಅಕ್ಷರ ಗಾತ್ರ

ಐವತ್ತು ವರ್ಷಗಳ ಕೆಳಗೆ ಚುನಾವಣೆ ಹಾಗೂ ಚಳವಳಿಗಳ ನಿರಂತರ ಸೋಲುಗಳ ಕಾಲದಲ್ಲಿ ರಾಮಮನೋಹರ ಲೋಹಿಯಾ, ‘ನಿರಾಶೆಯ ಕಾಲದ ಕರ್ತವ್ಯಗಳು’ ಎಂಬ ಲೇಖನ ಬರೆದರು. ಎಲ್ಲ ಜವಾಬ್ದಾರಿಯುತ ವ್ಯಕ್ತಿಗಳೂ ತಂತಮ್ಮ ಕಾಲದ ಸವಾಲುಗಳೆದುರು ಮತ್ತೆ ಮತ್ತೆ ವಿವರಿಸಿಕೊಳ್ಳಬೇಕಾದ ಬರಹವಿದು. ಈಚಿನ ಲೋಕಸಭಾ ಚುನಾವಣೆಯ ಫಲಿತಾಂಶದೆದುರು ನಿರಾಶರಾಗಿರುವ ವಿರೋಧ ಪಕ್ಷಗಳನ್ನು, ಹೋರಾಟಗಾರರನ್ನು ಕಂಡಾಗ ಈ ಶೀರ್ಷಿಕೆಯ ಅರ್ಥ ವಿಸ್ತಾರವಾಗತೊಡಗಿತು.

ರಾಜಕೀಯ ಸೋಲುಗಳನ್ನು ತಮ್ಮ ಖಾಸಗಿ ಸೋಲುಗಳೆಂದು ನಿರಾಶರಾಗಿ ಕುಸಿಯುವವರಿಗೆ ಮುಂದಿನ ಹಾದಿಯೇ ಕಾಣಲಾರದು. ವಸ್ತುನಿಷ್ಠವಾದ ಆತ್ಮಪರೀಕ್ಷೆಯಿಂದ ಮಾತ್ರ ಸೋಲಿನ ಕಾರಣಗಳು ಹೊಳೆಯುತ್ತವೆ; ಸೋಲನ್ನು ದಾಟುವ ಮಾರ್ಗಗಳು ಕಾಣತೊಡಗು
ತ್ತವೆ. ಇವತ್ತು ಸೋಲು–ಗೆಲುವುಗಳ ಹಿಂದಿನ ನಿಜವಾದ ಕಾರಣಗಳನ್ನು ವಿಶ್ಲೇಷಿಸದೆ,ಸೋತವರನ್ನೇ ಹಣಿಯಲು ಚಿಂತಕರು ಸನ್ನದ್ಧರಾಗಿದ್ದಾರೆ. ಅವರೆಲ್ಲರ ಟೀಕೆಯ ಮೊದಲ ಗುರಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮಾತ್ರ ಆಗಿದೆ ಎಂಬುದು ಗಮನಾರ್ಹ.

ಉಳಿದೆಲ್ಲ ವಿರೋಧ ಪಕ್ಷಗಳ ‘ಅನುಭವಸ್ಥರು’ ಮಾಡಿದಷ್ಟು ತಪ್ಪನ್ನೇ ಅವರೂ ಮಾಡಿದ್ದಾರೆ. ಜೊತೆಗೆ, ಸುಳ್ಳಿನ ಕಾರ್ಖಾನೆಗಳು ಹೊಸೆದ ಸುಳ್ಳುಗಳು, ತಿರುಚಿದ ಅಂಕಿಅಂಶಗಳ ಆರ್ಭಟದಿಂದ ವಿರೋಧ ಪಕ್ಷಗಳ ದನಿ ಮಸುಕಾದದ್ದನ್ನು ಮರೆಯಬಾರದು. ಪಕ್ಷಪಾತಿಯಾಗಿ ವರ್ತಿಸಿದ ಕೆಲವು ಮಾಧ್ಯಮಗಳು, ಗೋಡ್ಸೆವಾದಿಗಳನ್ನು ಹೊಗಳುವ ವಿಕೃತರಿಗೆ ಸಿಕ್ಕ ಪ್ರಚಾರಗಳೂ ಮತದಾರರನ್ನು ಹಾದಿ ತಪ್ಪಿಸಿವೆ. ವಿರೋಧ ಪಕ್ಷಗಳ ಸೋಲಿಗೆ ನಿಗೂಢ ಕಾರಣಗಳೂ ಇವೆ.

‘ನಮ್ಮದು ರಾಷ್ಟ್ರೀಯ ಪಕ್ಷ’ ಎಂಬ ಅಹಂಕಾರ, ‘ನಮ್ಮದೇ ಪ್ರಬಲ ಪ್ರಾದೇಶಿಕ ಪಕ್ಷ’ ಎಂಬ ಭ್ರಮೆಗಳೆರಡೂ ಸೇರಿಕೊಂಡು ವಿರೋಧ ಪಕ್ಷಗಳ ಮತಗಳು ಹರಿದು ಹಂಚಿಹೋದವು. ಇಂತಹ ಹಲವಾರು ಕ್ಷೇತ್ರಗಳು ಎನ್‌ಡಿಎ ಗೆಲುವಿಗೆ ಕಾರಣವಾಗಿವೆ. ಈ ಏರುಪೇರಿಗೆ ಕಾಂಗ್ರೆಸ್, ಆಮ್‌ ಆದ್ಮಿ ಪಕ್ಷ, ಎಸ್‌ಪಿ, ಬಿಎಸ್‌ಪಿ ಎಲ್ಲ ಪಕ್ಷಗಳೂ ಮಾಡಿಕೊಂಡ ಎಡವಟ್ಟುಗಳೂ ಕಾರಣ. ಕರ್ನಾಟಕದಲ್ಲಂತೂ ಲೋಕಸಭಾ ಚುನಾವಣೆ ‘ಕಾಂಗ್ರೆಸ್ ವರ್ಸಸ್ ಜೆಡಿಎಸ್’ ಆಗಿಬಿಟ್ಟಿತ್ತು!

ಈ ಚುನಾವಣೆಯಲ್ಲಿ ಕೆಳಮಟ್ಟದ ಭಾಷೆಯನ್ನು ಬಳಸಿದವರ ಮಾತುಗಳನ್ನು ಬೆಂಬಲಿಸಿ, ಅದನ್ನೊಂದು ಮನರಂಜನೆ ಎಂದುಕೊಂಡಿರುವವರಿಗೆ, ಇದೇ ಭಾಷೆಯು ತಮ್ಮ ಮನೆ ಅಥವಾ ಶಾಲಾ–ಕಾಲೇಜುಗಳಲ್ಲಿ ಹಬ್ಬಿ ದೇಶದ ಆರೋಗ್ಯವೇ ನಾಶವಾಗುವ ಕಟುಸತ್ಯ ತಿಳಿದಂತಿಲ್ಲ. ಇಂಡಿಯಾದಲ್ಲಿ ಧರ್ಮ, ರಾಜಕೀಯ, ಮಾಧ್ಯಮಗಳ ಭಾಷೆ ಇಷ್ಟು ಕೆಳಮಟ್ಟಕ್ಕೆ ಎಂದೂ ಇಳಿದಿರಲಿಲ್ಲ. ಬಾಯಿಗೆ ಬಂದದ್ದನ್ನು ಹೇಳುವ ಈ ಕಾಯಿಲೆ ಮಕ್ಕಳಲ್ಲೂ ಹಬ್ಬಿದರೆ ಏನಾಗುತ್ತದೆಂಬ ಬಗ್ಗೆ ಶಿಕ್ಷಕರು, ತಂದೆ–ತಾಯಿ ಗಂಭೀರವಾಗಿ ಯೋಚಿಸಬೇಕು. ಎಲ್ಲರೂ ಸುಳ್ಳು ಹೇಳುತ್ತಿರುವಾಗ, ಪರೀಕ್ಷೆಗಳಲ್ಲಿ ತಪ್ಪು ಉತ್ತರಕ್ಕೂ ಅಂಕ ಕೊಡಿ, ಸುಳ್ಳು ಹೇಳಿದರೂ ಒಪ್ಪಿಕೊಳ್ಳಿ ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದರೆ ತಪ್ಪೇನಿದೆ! ಪ್ರಧಾನಿ, ಮುಖ್ಯಮಂತ್ರಿ, ಶಾಸಕ… ಯಾರೇ ಹೀನ ಭಾಷೆ ಬಳಸಿದರೂ ಅಸಹ್ಯಪಟ್ಟು ಖಂಡಿಸುವ ಹೊಣೆ ಮತದಾರರ ಮೇಲೂ ಇದೆ. ಚುನಾವಣೆಯ ಗೆಲುವಿಗಾಗಿ ಆರ್ಥಿಕ ವ್ಯವಸ್ಥೆ, ಸಹಬಾಳ್ವೆ ಎಲ್ಲವನ್ನೂ ನಾಶ ಮಾಡುವವರ ಆಟಗಳನ್ನು ಎಲ್ಲರೂ ವಿರೋಧಿಸಬೇಕು.

ತಮ್ಮ ತಪ್ಪುಗಳಿಂದ, ಛಿದ್ರಗೊಂಡ ಮತಗಳಿಂದ ಸೋತು ಕಂಗೆಟ್ಟಿರುವ ವಿರೋಧ ಪಕ್ಷಗಳು ಹಾಗೂ ಅವರ ತಾತ್ವಿಕ ಬೆಂಬಲಿಗರು ಹತಾಶರಾಗಬೇಕಾಗಿಲ್ಲ. ಬದಲಿಗೆ ಒಗ್ಗೂಡಿ ದೇಶದ ಅಸಲಿ ಸಮಸ್ಯೆಗಳ ಬಗ್ಗೆ ಏಕದನಿಯಲ್ಲಿ ಮಾತನಾಡಿದರೆ, ಸುಳ್ಳುಗಳು ಚದುರಿ ಹೋಗುತ್ತವೆ. ‘ಮೆಜಾರಿಟಿಯ ಅಹಂಕಾರ’ದ ಭಾಷೆಯ ಎದುರು ಜನರನ್ನು ಒಗ್ಗೂಡಿಸುವ ಭಾಷೆಯನ್ನು ಒಪ್ಪುವ, ಸ್ವೀಕರಿಸುವ ಭಾರತವಿನ್ನೂ ಜೀವಂತವಾಗಿದೆ. ಇದನ್ನು ಅರಿತು ಆರೋಗ್ಯಕರ ಭಾಷೆಯನ್ನೇ ಬಳಸತೊಡಗಿದರೆ, ಅದು ದ್ವೇಷದ ಭಾಷೆಯನ್ನು ನಿಧಾನವಾಗಿಯಾದರೂ ಹಿಮ್ಮೆಟ್ಟಿಸಬಲ್ಲದು. ಯುದ್ಧದ ಅಫೀಮನ್ನು ಜನರಿಗೆ ತಿನ್ನಿಸಿ ಕೆಲಕಾಲ ಭಯಗ್ರಸ್ತ ಮನಸ್ಥಿತಿಯ
ನ್ನುಂಟು ಮಾಡಬಹುದು; ಯುದ್ಧದ ಠೇಂಕಾರ ಕೆಲವರನ್ನು ಮರುಳುಗೊಳಿಸಬಹುದು. ಆದರೆ ಅಣ್ವಸ್ತ್ರಗಳ ಕಾಲದಲ್ಲಿ ಇಂಥ ಚೀರಾಟಗಳಿಂದ ದೇಶವೇ ನಾಶವಾಗಿ, ಬದುಕು ಭೀಕರವಾಗುತ್ತದೆ ಎಂಬ ಪ್ರಜ್ಞೆ ಜನರಿಗಿರಲಿ.

ಚುನಾವಣಾ ಸೋಲಿಗೆ ಕಾಂಗ್ರೆಸ್ಸನ್ನೋ, ಇತರ ವಿರೋಧ ಪಕ್ಷಗಳನ್ನೋ ಹೊಣೆ ಮಾಡಿ ಕೂಗುತ್ತಿರುವ ಪ್ರಗತಿಪರರು, ಇದು ಈ ಪಕ್ಷಗಳು ಬಳಸಿರುವ ಸಾಮಾಜಿಕ ನ್ಯಾಯದ ಭಾಷೆಗೂ ಒದಗಿರುವ ಸೋಲು ಎಂಬುದನ್ನು ಅರಿತಂತಿಲ್ಲ. ಇವತ್ತಿಗೂ ಸಾಮಾಜಿಕ ನ್ಯಾಯ, ಸಮಾನತೆ, ಸಬಲೀಕರಣ ಕಾರ್ಯಕ್ರಮಗಳಿಗೆ ಕಾಂಗ್ರೆಸ್, ಬಿಎಸ್‌ಪಿ, ಎಸ್‌ಪಿ, ರಾಷ್ಟ್ರೀಯ ಜನತಾದಳ, ಕಮ್ಯುನಿಸ್ಟ್ ಪಕ್ಷಗಳು ಬದ್ಧವಾಗಿರುವುದನ್ನು ಮರೆಯದಿರೋಣ. ಕೊನೆಯಪಕ್ಷ ಪ್ರಗತಿಪರ ಭಾಷೆಯ ಬಳಕೆಯಾದರೂ ರೂಢಿಯಾಗಿರುವ ಪಕ್ಷಗಳನ್ನು ಸಾಮಾಜಿಕ ನ್ಯಾಯದ ರಾಜಕಾರಣಕ್ಕೆ ಮತ್ತಷ್ಟು ಬದ್ಧವಾಗಿಸುವುದು, ಕೇಂದ್ರ ಸರ್ಕಾರವೂ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವಂತೆ ಒತ್ತಡ ತರುವುದು ಇಂದಿನ ಗುರಿಯಾಗಬೇಕೇ ಹೊರತು, ವಿರೋಧ ಪಕ್ಷಗಳ ಮೇಲೆ ಕಲ್ಲೆಸೆಯುವುದಲ್ಲ.

ಕಳೆದ ನೂರು ವರ್ಷಗಳಲ್ಲಿ ಸಾವಿರಾರು ಕಾರ್ಯಕರ್ತರ ತ್ಯಾಗ, ಬಲಿದಾನದ ಮೂಲಕ ಕಾರ್ಮಿಕರ, ಶ್ರಮಿಕರ ಚಳವಳಿಗಳನ್ನು ಕಟ್ಟಿರುವ ಕಮ್ಯುನಿಸ್ಟರ ಹಿನ್ನಡೆಯಿಂದ ಹೋರಾಟದ ರಾಜಕಾರಣಕ್ಕೆ, ದೇಶದ ರಾಜಕಾರಣದ ಬೌದ್ಧಿಕ ಆಯಾಮಕ್ಕೆ ಆಗಿರುವ ಆತಂಕ
ಕಾರಿ ಹಿನ್ನಡೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಮಾಜಿ ಸಮಾಜವಾದಿಗಳ ದುರಾಸೆ, ಚಳವಳಿಗಳ ರಾಜಕೀಯ ಗೊಂದಲಗಳು ಮತ್ತೊಂದು ಬಗೆಯ ಪತನಕ್ಕೆ ಕಾರಣವಾಗಿವೆ. ಈ ಕಾಲದಲ್ಲಿ ದಿನನಿತ್ಯದ ಸಂಬಂಧದಲ್ಲೇ ಎದ್ದು ಕಾಣುತ್ತಿರುವ ನಂಬಿಕೆ
ದ್ರೋಹವು ದೇಶದ ರಾಜಕಾರಣದಲ್ಲಿ ಭೀಕರ ಕಾಯಿಲೆಯಾಗಿರುವುದು ಕೂಡ ಇದಕ್ಕೆ ಕಾರಣವಿರಬಹುದು. ಈ ಕಾಯಿಲೆಗಳಿಗೆ ಮದ್ದರೆಯಲು ನಮ್ಮ ಕಾಲದ ಆರ್ಥಿಕ, ಸಾಮಾಜಿಕ ಬಿಕ್ಕಟ್ಟುಗಳ ಬಗ್ಗೆ ಜವಾಬ್ದಾರಿಯುತ ಚಿಂತಕರು ಅಥವಾ ಮಾರ್ಕ್ಸ್‌ವಾದ, ಅಂಬೇಡ್ಕರ್‌ವಾದ, ಸಮಾಜವಾದಗಳನ್ನು ಆಳವಾಗಿ ಬಲ್ಲವರು ಅವನ್ನು ಈ ಕಾಲಕ್ಕೆ ಅನ್ವಯಿಸಿ ಜನರಿಗೆ ತಲುಪಿಸುವ ಅಗತ್ಯವಿದೆ.

ಕ್ಷುಲ್ಲಕ ವಿಷಯಗಳಿಗೆ ಮಾಧ್ಯಮಗಳಲ್ಲಿ ಚೀರುವ ತರುಣರು ಇಂಥ ಗಂಭೀರ ವಿಶ್ಲೇಷಣೆಗಳನ್ನು ಹಂಚಿಕೊಳ್ಳತೊಡಗಿದರೆ ಚರ್ಚೆಯ ದಿಕ್ಕೇ ಬದಲಾಗತೊಡಗುತ್ತದೆ. ಕೆಲವರಿಗಾದರೂ ಸತ್ಯ ಕಾಣತೊಡಗುತ್ತದೆ. ಹಲವು ವಿಚಾರಗಳ ಬಗ್ಗೆ ಸ್ಪಷ್ಟವಾಗಿರುವ ಕಮ್ಯುನಿಸ್ಟರ, ಪ್ರಗತಿಪರ ಚಿಂತಕರ ಗ್ರಹಿಕೆಗಳನ್ನು ವಿರೋಧ ಪಕ್ಷಗಳು ಅರಿಯುತ್ತಿರಬೇಕಾಗುತ್ತದೆ. ದೇಶದ ಭೀಕರ ಆರ್ಥಿಕ ಹಿನ್ನಡೆಗಳ ಬಗ್ಗೆ ವಾಚಾಳಿಗಳು, ಕೆಲವು ಮಾಧ್ಯಮಗಳು ಚರ್ಚೆಯ ಹಾದಿಯ ದಿಕ್ಕನ್ನೇ ತಪ್ಪಿಸುತ್ತಿದ್ದರೂ ಜವಾಬ್ದಾರಿಯುತ ವಿಶ್ಲೇಷಕರು ನಿಜಸ್ಥಿತಿಯನ್ನು ಕಾಣಿಸುತ್ತಲೇ ಇರುತ್ತಾರೆ. ನಾಯಕರಾದವರು ಸತ್ಯದ ಶಕ್ತಿಯಲ್ಲಿ ನಂಬಿಕೆಯಿಟ್ಟು, ದೇಶದ ದುರಂತಗಳನ್ನು ಗ್ರಹಿಸಿ ಸರಳವಾಗಿ
ಹೇಳತೊಡಗಿದರೆ ಜನರಿಗೂ ನಿಜಸ್ಥಿತಿಯ ಅರಿವಾಗತೊಡಗುತ್ತದೆ.

ಇದೊಂದು ಚುನಾವಣೆಗೇ ಎಲ್ಲವೂ ಮುಗಿಯಲಿಲ್ಲ. ಇಂಥ ಅನೇಕ ಏರುಪೇರುಗಳನ್ನು ಇಂಡಿಯಾ ಕಂಡಿದೆ. ಮುಂಬರಲಿರುವ ಸಣ್ಣ ಪುಟ್ಟ ಚುನಾವಣೆಗಳೂ ದೇಶದ ರಾಜಕಾರಣವನ್ನು ಬದಲಿಸಬಲ್ಲವು ಎಂದು ನಂಬಿ ವಿರೋಧ ಪಕ್ಷಗಳು ದಿಟ್ಟವಾಗಿ ನಡೆದರೆ ಮಾತ್ರ ದಟ್ಟ ನಿರಾಶೆಯೆಲ್ಲ ಚದುರಿ ಹೋಗುತ್ತದೆ. ಸೋಲಿನಹತಾಶೆಯಲ್ಲಿ, ಹುಚ್ಚು ಕಚ್ಚಾಟದಲ್ಲಿ ತೊಡಗಿರುವ ಕರ್ನಾಟಕದ ಮೈತ್ರಿಕೂಟದ ನಾಯಕರಿಗೆ, ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ತಮ್ಮ ಪರವಾಗಿ ಮತ ಹಾಕಿದ ಮತದಾರರ ಸ್ಪಷ್ಟ ಸಂದೇಶ ಕೆಲವು
ಪಾಠಗಳನ್ನಾದರೂ ಕಲಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT