ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಸಂಘರ್ಷಕ್ಕೆ ಕಾರಣವಾದ ಚೀನಾ ಉದ್ದೀಮೆ

ಪಾಶ್ಚಿಮಾತ್ಯ ದೇಶಗಳ ಉದ್ದಿಮೆದಾರರ ಅನುಭವ ಚೀನಿ ಉದ್ದಿಮೆದಾರರಿಗೆ ಇಲ್ಲ
Last Updated 16 ಜನವರಿ 2016, 5:01 IST
ಅಕ್ಷರ ಗಾತ್ರ

ಚೀನಾದ ಟ್ರಕ್‌ ತಯಾರಿಕಾ ಸಂಸ್ಥೆಯೊಂದು ಭಾರತದಲ್ಲಿ ತನ್ನ ಘಟಕ ಸ್ಥಾಪಿಸಲು ಮುಂದೆ ಬಂದಾಗ, ಸಂಸ್ಥೆಯ ಮಾಲೀಕರು ಚೀನಾದ ಸಾಂಪ್ರದಾಯಿಕ  ನಂಬಿಕೆಯಾಗಿರುವ ‘ಫೆಂಗ್‌ ಶುಯಿ’ ಪ್ರಕಾರ ಅದೃಷ್ಟ ತರುವ ಸ್ಥಳದ ಹುಡುಕಾಟಕ್ಕೆ ಮುಂದಾಗುತ್ತಾರೆ. ಕೈಗಾರಿಕಾ ನಿವೇಶನದ ಹಿಂಭಾಗದಲ್ಲಿ ಪರ್ವತ ಪ್ರದೇಶ, ಎದುರಿಗೆ ಹರಿಯುವ ನದಿ ಇದ್ದರೆ ಉದ್ದಿಮೆ ಸ್ಥಾಪನೆಗೆ ತುಂಬ ಪ್ರಶಸ್ತವಾದ ಸ್ಥಳ ಎನ್ನುವ ನಂಬಿಕೆ ಅವರಲ್ಲಿ ಇದೆ. ಚೀನಿಯರ ಇಂತಹ ನಂಬಿಕೆಗಳೇ ಭಾರತದಲ್ಲಿ ಸಾಂಸ್ಕೃತಿಕ ಸಂಘರ್ಷಕ್ಕೆ ಎಡೆ ಮಾಡಿರುವ ವಿದ್ಯಮಾನ ಮಹಾರಾಷ್ಟ್ರದಲ್ಲಿ ನಡೆದಿದೆ.

ಬೈಕಿ ಫೋಟೊನ್‌ ಮೋಟಾರ್‌ಗೆ  (Beiqi Foton Motor) ಮಹಾರಾಷ್ಟ್ರದ ಶಿಂದೆ ಎಂಬಲ್ಲಿ 250 ಎಕರೆಗಳಷ್ಟು ಭೂಮಿ ಮಂಜೂರಾದಾಗ ಸಂಸ್ಥೆಯ ಪಾಲಿಗೆ ಅದು ಫೆಂಗ್‌ ಶುಯಿ ಪ್ರಕಾರ ಅದೃಷ್ಟದ ತಾಣವಾಗಿತ್ತು. ಸಂಸ್ಥೆಯು ಬಿಡಿಭಾಗ ತಯಾರಿಕೆಯ ಪೂರಕ ಉದ್ದಿಮೆಗಳಿಗಾಗಿ ಕೈಗಾರಿಕಾ ಪಾರ್ಕ್‌ ಸ್ಥಾಪಿಸಲು ಹೆಚ್ಚುವರಿಯಾಗಿ 1,250 ಎಕರೆ ಭೂಮಿ ಮಂಜೂರು ಮಾಡಬೇಕೆಂದು ಬಯಸಿದೆ.

ಈ ಪ್ರದೇಶದಲ್ಲಿನ ಬೆಟ್ಟವು ಹಿಂದೂಗಳ ಪಾಲಿಗೆ  ಶತಮಾನಗಳಿಂದ ಪೂಜನೀಯ ಸ್ಥಳವಾಗಿದೆ. ಇಲ್ಲಿರುವ ಗುಹೆಗಳು ಸನ್ಯಾಸಿಗಳ ಧ್ಯಾನ ಕೇಂದ್ರಗಳಾಗಿವೆ. 17ನೇ ಶತ ಮಾನದಲ್ಲಿ ಸಂತನೊಬ್ಬನಿಗೆ ಇಲ್ಲಿಯೇ ದೇವರ ದರ್ಶನವಾಗಿದೆ ಎಂಬ ನಂಬಿಕೆಯೂ ಭಕ್ತರಲ್ಲಿ ಪ್ರಚಲಿತದಲ್ಲಿ ಇದೆ.

ಧಾರ್ಮಿಕ ಶ್ರದ್ಧಾ ಕೇಂದ್ರವಾದ ಸ್ಥಳದಲ್ಲಿ ಈಗ ಟ್ರಕ್‌ ತಯಾರಿಕೆ ಉದ್ದಿಮೆಯ ಸದ್ದುಗದ್ದಲ, ಭೂಮಿ ಮಾರಾಟಕ್ಕೆ ಹಿಂದೇಟು ಹಾಕುವ ಸಣ್ಣ ಪುಟ್ಟ ಭೂಮಾಲೀಕರ ಅಸಹಾಯಕ ಪ್ರತಿಭಟನೆಯ ದನಿ, ಭೂಮಿ ಪರಭಾರೆ ಮಾಡಿ ಐಷಾರಾಮಿ ಜೀವನಕ್ಕೆ ಮನಸೋತಿರುವ ಉಳ್ಳವರು ಮತ್ತಿತರ ವೈರುಧ್ಯಗಳನ್ನು ಕಾಣಬಹುದಾಗಿದೆ.

ಮಂಜೂರಾದ ಭೂಮಿಯ ಸುತ್ತ ತಂತಿ ಬೇಲಿ ನಿರ್ಮಿಸಿರುವ ಫೋಟೊನ್‌ ಸಂಸ್ಥೆ, ಅತಿಕ್ರಮಣ ಪ್ರವೇಶ ತಡೆಯಲು ಕಾವಲುಗಾರರನ್ನು ನೇಮಿಸಿದೆ. ದನ ಮೇಯಿಸುವವರು, ಹಿಂದೂ ಯಾತ್ರಾರ್ಥಿಗಳು ಪದೇ ಪದೇ ಬೇಲಿ ಮುರಿಯುತ್ತಲೇ ಇದ್ದಾರೆ. ಇಲ್ಲಿ ನೆಲೆಸಿರುವ ಸಾಧು ಸಂತರು ತಮ್ಮ ಸುತ್ತಲಿನ ಪ್ರದೇಶದಲ್ಲಿ ವಾಹನಗಳ ಗೌಜು ಗದ್ದಲವನ್ನು ಯಾವುದೇ ಕಾರಣಕ್ಕೂ ಇಷ್ಟಪಡುತ್ತಿಲ್ಲ.

‘ವರ್ತಮಾನದಲ್ಲಿ ಮಾನವನಿಗೆ ಧಾರ್ಮಿಕತೆ ಮತ್ತು ವಿಜ್ಞಾನ ಎರಡೂ ಬೇಕಾಗಿವೆ. ಒಂದು ಇನ್ನೊಂದನ್ನು ಬಿಟ್ಟು ಇರುವುದಿಲ್ಲ’ ಎಂದು ಹೇಳುವ ಸಾಧು ಕೈಲಾಶ್‌ ನೇಮಡೆ, ಅದೇ ಓಘದಲ್ಲಿ, ‘ಆದರೆ ಈ ಕಾರ್ಖಾನೆ ಇಲ್ಲಿ ಸ್ಥಾಪನೆ ಗೊಳ್ಳಬಾರದು. ಅದು ಈ ಪ್ರದೇಶದ ಧಾರ್ಮಿಕ ಪಾವಿತ್ರ್ಯಕ್ಕೆ ಧಕ್ಕೆ ತರುತ್ತದೆ’ ಎಂದು ಸ್ಪಷ್ಟವಾಗಿ ನುಡಿಯುತ್ತಾರೆ.

ಚೀನಾದ ಉದ್ದಿಮೆ ಸಂಸ್ಥೆಗಳು ಸಾಗರೋತ್ತರ ವಿಸ್ತರಣೆಗೆ ಮಹತ್ವಾಕಾಂಕ್ಷೆ ಯೋಜನೆ ಹಮ್ಮಿಕೊಂಡಿವೆ. ಹಲವಾರು ದೇಶಗಳಲ್ಲಿ ಕಾರ್ಖಾನೆ ಆರಂಭಿಸಲು, ಕೈಗಾರಿಕಾ  ಪಾರ್ಕ್‌ ಸ್ಥಾಪಿಸಲು, ವಿದ್ಯುತ್‌ ಸ್ಥಾವರ ಮತ್ತಿತರ ಕೈಗಾರಿಕಾ ಉದ್ದೇಶಗಳಿಗೆ ಅಪಾರ ಪ್ರಮಾಣದ ಭೂಮಿ ಮಂಜೂರಾತಿಗೆ ಪಟ್ಟು ಹಿಡಿದಿವೆ.

ವಿದೇಶಿ ಬಂಡವಾಳ ಹೂಡಿಕೆ, ಯಾವುದೇ ದೇಶದ ಆರ್ಥಿಕತೆಯ ಚೇತರಿಕೆಗೆ ನೆರವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೂಡಿಕೆ ಜತೆಗೆ ತಳಕು ಹಾಕಿಕೊಂಡಿ ರುವ  ಸಂಕೀರ್ಣಮಯ ಸಾಂಸ್ಕೃತಿಕ, ರಾಜಕೀಯ ಮತ್ತು ಸ್ಪರ್ಧಾತ್ಮಕ ವಿವಾದಗಳಿಗೂ ಇದು ಕಾರಣವಾಗುತ್ತಿರು ವುದು ಸುಳ್ಳಲ್ಲ.

ಕರೆನ್ಸಿ ಯುವಾನ್‌ ಅಪಮೌಲ್ಯ, ಷೇರು ಮಾರುಕಟ್ಟೆಯಲ್ಲಿನ ಕುಸಿತ, ಮಂದಗತಿಯ ಆರ್ಥಿಕ ಚೇತರಿಕೆ ಮತ್ತಿತರ ಆರ್ಥಿಕ ಪ್ರತಿಕೂಲ ಸಂಗತಿಗಳು ಚೀನಾದ ಉದ್ದಿಮೆ ಸಂಸ್ಥೆಗಳ ಸಾಗರೋತ್ತರ ವಿಸ್ತರಣೆ ದಾಹದ ಮೇಲೆ ಯಾವುದೇ ಪ್ರಭಾವ ಬೀರುತ್ತಿಲ್ಲ. ಸ್ವದೇಶಿ ಮಾರುಕಟ್ಟೆ ಲಾಭದಾಯಕ ಅಲ್ಲ ಎನ್ನುವ ತೀರ್ಮಾನಕ್ಕೆ ಬಂದಿರುವ ಚೀನಾದ ಅನೇಕ ಉದ್ದಿಮೆದಾರರು ಈಗ ವಿಶ್ವದ ಇತರೆಡೆ ತಮ್ಮ ಗಮನ ಕೇಂದ್ರೀಕರಿಸುತ್ತಿದ್ದಾರೆ. ಪಾಶ್ಚಿಮಾತ್ಯದೇಶಗಳ ಉದ್ದಿಮೆದಾರರ ಅನುಭವವೂ ಚೀನಿ ಉದ್ದಿಮೆದಾರರಿಗೆ ಇಲ್ಲದಿರುವುದರಿಂದ ಇವರು ಹೋದಲ್ಲೆಲ್ಲ ಸಾಂಸ್ಕೃತಿಕ ಸಂಘರ್ಷಕ್ಕೆ ಕಾರಣವಾಗುತ್ತಿದೆ. 

ಪಾಶ್ಚಿಮಾತ್ಯ ಉದ್ದಿಮೆ ಸಂಸ್ಥೆಗಳು ತಮ್ಮ ವಿದೇಶಿ ವಹಿವಾಟು ಅಭಿವೃದ್ಧಿಪಡಿಸಲು ದಶಕಗಳಷ್ಟು ಕಾಲ ಸಂಯಮದಿಂದ ವರ್ತಿಸಿವೆ.  ಸ್ವದೇಶಿ ನೆಲದಲ್ಲಿ  ಎಗ್ಗಿಲ್ಲದೆ ವ್ಯಾಪಕವಾಗಿ ತಮ್ಮ ಉದ್ದಿಮೆ ಸಾಮ್ರಾಜ್ಯ ವಿಸ್ತರಿಸಿರುವ ಚೀನಾ ಉದ್ಯಮಿಗಳಿಗೆ ಸಾಂಸ್ಕೃತಿಕ ಸಂಘರ್ಷಕ್ಕೆ ಎಡೆ ಮಾಡಿಕೊಡುವ ವಿದ್ಯಮಾನಗಳ ಅನುಭವವೇ ಇಲ್ಲ ಎಂದರೆ ಅತಿಶಯೋಕ್ತಿ ಏನಲ್ಲ.

ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ಬೆಂಬಲ ಹೊಂದಿರುವ ಚೀನಾ ಉದ್ದಿಮೆ ಸಂಸ್ಥೆಗಳು, ಧಾರ್ಮಿಕ ಸ್ಥಳಗಳನ್ನು  ನಿರ್ದಾಕ್ಷಿಣ್ಯವಾಗಿ ನೆಲಸಮ ಮಾಡಿದ್ದರೆ,  ಸಮುದಾಯಗಳನ್ನು  ಅಮಾನವೀಯವಾಗಿ ಒಕ್ಕಲೆಬ್ಬಿಸಿವೆ.  ಚೀನಾದಲ್ಲಿ ಸ್ವತಂತ್ರ  ಕಾರ್ಮಿಕ ಸಂಘಗಳನ್ನು ನಿಷೇಧಿಸಲಾಗಿದೆ. ಕಾರ್ಮಿಕರ ಅಶಾಂತಿ, ಪ್ರತಿಭಟನೆಗಳನ್ನು ಆರಂಭದಲ್ಲಿಯೇ  ದಮನ ಮಾಡಲಾಗುತ್ತಿದೆ. ಆದರೆ, ವಿದೇಶಗಳಲ್ಲಿ ಉದ್ದಿಮೆ ವಿಸ್ತರಣೆಗೆ ಮುಂದಾಗುತ್ತಿರುವ ಚೀನಾ ಸಂಸ್ಥೆ ಗಳಿಗೆ ಮಾತ್ರ ಸ್ಥಳೀಯರಿಂದ ಅನೇಕ ಬಗೆಯ ಪ್ರತಿಭಟನೆಗಳ ಮಹಾಪೂರವೇ ಎದುರಾಗುತ್ತಿದೆ.

ಆಫ್ರಿಕಾದಲ್ಲಿ ಚೀನಾ ಸಂಸ್ಥೆಯ ಒಡೆತನದ ತೈಲ ನಿಕ್ಷೇಪ ಮತ್ತು ತಾಮ್ರದ ಗಣಿಗಾರಿಕೆಯ ಕಾರ್ಮಿಕರು ಕಡಿಮೆ ಸಂಬಳ ಮತ್ತು ಅಪಾಯಕಾರಿ ಕೆಲಸದ ಸ್ಥಿತಿಗತಿ ವಿರುದ್ಧ ಮುಷ್ಕರ ನಡೆಸುತ್ತಿದ್ದಾರೆ. ಹಳ್ಳಿಗರ ಸ್ಥಳಾಂತರ ವಿಷಯ ಮತ್ತು ಪರಿಸರಕ್ಕೆ ಧಕ್ಕೆ ಒದಗಿಸಿದ ಕಾರಣಕ್ಕೆ ಮ್ಯಾನ್ಮಾರ್‌ ಸರ್ಕಾರವು ಚೀನಾ ನಿರ್ಮಿಸುತ್ತಿದ್ದ ಜಲ ವಿದ್ಯುತ್‌ ಯೋಜನೆಯನ್ನು ಸ್ಥಗಿತಗೊಳಿಸಿದೆ. ಚೀನಾದ ಉದ್ಯಮಿಗಾಗಿ ಕಾಲುವೆ ನಿರ್ಮಾಣಕ್ಕೆ  ಗ್ರಾಮವೊಂದರ ಜನರ ಪುನರ್‌ವಸತಿ ಯೋಜನೆಗೆ ಸ್ಥಳೀಯರು ಅಡ್ಡಿಪಡಿಸಿದ ಘಟನೆ ನಿಕರಗುವಾದಲ್ಲಿ ನಡೆದಿದೆ. ಭಾರತದಲ್ಲಿನ ಫೋಟೊನ್‌ ವಿವಾದವು ಕೂಡ,  ಈ ದೇಶಗಳಲ್ಲಿ ಕಂಡು ಬಂದಿರುವ ಆಂತರಿಕ ಸಂಘರ್ಷದತ್ತ ಗಮನ ಸೆಳೆಯುತ್ತದೆ.

ಭಾರತದಲ್ಲಿ ಪ್ರತಿ ವರ್ಷ 1.30 ಕೋಟಿಯಷ್ಟು ಯುವ ಜನರು ದುಡಿಯುವ ವರ್ಗಕ್ಕೆ ಸೇರ್ಪಡೆಯಾಗುತ್ತಿದ್ದು, ಅವರಿಗೆಲ್ಲ ಉದ್ಯೋಗ ಅವಕಾಶ ಕಲ್ಪಿಸುವ ಅನಿವಾರ್ಯ ಸೃಷ್ಟಿಯಾಗಿರುವುದರಿಂದ ವಿದೇಶಿ ಬಂಡವಾಳ ಹೂಡಿಕೆಯ ಅಗತ್ಯ ಇದೆ. ಪಾಶ್ಚಿಮಾತ್ಯ ದೇಶಗಳು ಹಳೆಯ ತಪ್ಪುಗಳಿಂದ ಪಾಠ ಕಲಿತು ತುಂಬ ಎಚ್ಚರಿಕೆಯಿಂದ ತಮ್ಮ ಕೈಗಾರಿಕಾ  ವಸಾಹತುಗಳನ್ನು ಸ್ಥಾಪಿಸುತ್ತಿವೆ. ಸ್ಥಳೀಯರ ಜತೆ ಸೌಹಾರ್ದದಿಂದ ವರ್ತಿಸಿ, ತಮ್ಮ ಯೋಜನೆಗಳನ್ನು ಮನವರಿಕೆ ಮಾಡಿಕೊಟ್ಟು ಅವರ ಮನಸ್ಸು ಗೆಲ್ಲಲು ಪ್ರಯತ್ನಿಸುತ್ತಿವೆ.

ಇಂತಹ ಯಾವೊಂದು ಪ್ರಯತ್ನವನ್ನೂ ಮಾಡದ ಫೋಟೊನ್‌ ತನ್ನ ಕಾರ್ಖಾನೆ ಸ್ಥಾಪನೆ ಉದ್ದೇಶವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದೆ. ‘ಟ್ರಕ್‌ ತಯಾರಿಕೆ ಘಟಕ ಮತ್ತು ಬಿಡಿಭಾಗ ತಯಾರಿಕಾ ಉದ್ದಿಮೆಗಳ ಪಾರ್ಕ್‌, ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗಳಿಗೆ ಭಾರಿ ಉತ್ತೇಜನ ನೀಡುತ್ತದೆ ಎಂದು ಹೇಳಿಕೊಳ್ಳುತ್ತಿದೆ. ಈ ಯೋಜನೆಗಳಿಂದ ಈ ಭಾಗದಲ್ಲಿ ಸಾವಿರಾರು ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತವೆ’ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಝವೊ ಜಿಂಗುಆಂಗ್‌ ಹೇಳುತ್ತಾರೆ.

ಆದರೆ, ಫೋಟೊನ್‌ ತನ್ನ ಕಾರ್ಖಾನೆ ನಿರ್ಮಾಣ ಕಾರ್ಯ ವಿಳಂಬ ಮಾಡಿದೆ.  ಯೋಜನೆ ಸದ್ಯಕ್ಕೆ ಸ್ಥಗಿತಗೊಂಡಿರುವುದರಿಂದ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಭರವಸೆಯೂ ಕಾರ್ಯಗತಗೊಂಡಿಲ್ಲ.

ಚೀನಾ ಸರ್ಕಾರ ಅಂಧಶ್ರದ್ಧೆಗಳನ್ನು ಖಂಡಿಸುವುದರಿಂದ, ಫೆಂಗ್‌ ಶುಯಿ ಕಾರಣಕ್ಕೆ ಸಂಸ್ಥೆಯು ಈ ಸ್ಥಳವನ್ನು ಆಯ್ಕೆ ಮಾಡಿಕೊಂಡಿದೆ ಎನ್ನುವ ಟೀಕೆಯನ್ನು ಝವೊ ಅಲ್ಲಗಳೆಯುತ್ತಾರೆ. ಆದರೆ, ‘ಇಲ್ಲಿ ನದಿ ಹರಿಯುತ್ತಿರುವುದರಿಂದ ಅದು ಉತ್ತಮ ಫೆಂಗ್ ಶುಯಿ’ ಎಂದೂ ಅಭಿಪ್ರಾಯಪಡುತ್ತಾರೆ.  ಸಂಸ್ಥೆಯ ಜತೆಗಿನ ಭೂಸ್ವಾಧೀನ ಒಪ್ಪಂದವು ಸ್ಥಳೀಯರಿಗೆ ಕಿಂಚಿತ್ತೂ ಸಮ್ಮತವಾಗಿಲ್ಲ.

ಕಾರ್ಖಾನೆಗಳು ಧಾರ್ಮಿಕ ಕೇಂದ್ರಗಳಿಂದ 500 ಮೀಟರ್‌ ದೂರದಲ್ಲಿ ಇರಬೇಕು ಎಂದು ಭೂಸ್ವಾಧೀನ ನಿಯಮಗಳು ನಿರ್ಬಂಧಿಸುತ್ತವೆ. ಇದು ಫೋಟೊನ್‌ ಕಾರ್ಖಾನೆಯ ಅರ್ಧದಷ್ಟು ನಿರ್ಮಾಣ ಚಟುವಟಿಕೆಗೆ ಅಡ್ಡಿಯಾಗಿದೆ. ಯಾತ್ರಾರ್ಥಿಗಳು ಗುಹೆಗಳಿಗೆ ತೆರಳಲು  45 ಅಡಿ ಅಗಲವಾದ ಸಂಪರ್ಕ ರಸ್ತೆಗಾಗಿ ರಾಜ್ಯದ ಲೋಕೋಪಯೋಗಿ ಇಲಾಖೆಯು ಜಾಗ ಮೀಸಲು ಇರಿಸಿದೆ.

ಸ್ಥಳೀಯರ ಭಾವನೆಗಳನ್ನು ಗೌರವಿಸಲು ಫೋಟೊನ್‌ ಕೈಗೊಂಡಿರುವ ಕೆಲ ಕ್ರಮಗಳ ಹೊರತಾಗಿಯೂ ಕಾರ್ಖಾನೆ ನಿರ್ಮಾಣ ಸ್ಥಳವು ದೇವಾಲಯಕ್ಕೆ ತುಂಬ ಹತ್ತಿರದಲ್ಲಿ ಇದೆ ಎಂದು ಗ್ರಾಮಸ್ಥರು ಮತ್ತು ಸಂತರು ದೂರುತ್ತಾರೆ. ಧಾರ್ಮಿಕ ಉತ್ಸವ ಸಂದರ್ಭಗಳಲ್ಲಿ ಇಲ್ಲಿ ಸೇರುವ  ಭಕ್ತಾದಿಗಳಿಗೆ ತಮ್ಮ ಟೆಂಟ್‌ಗಳನ್ನು ಹಾಕಿಕೊಳ್ಳಲು ಕೇವಲ ಅರ್ಧ ಎಕರೆಯಷ್ಟು ಮಾತ್ರ ಜಾಗ ಇದೆ.

ಭಾರತ ಮತ್ತು ಚೀನಾಗಳ ಸೇನಾ ಸಾಮರ್ಥ್ಯವು ಪರಸ್ಪರರಿಗೆ ಆತಂಕ ಉಂಟು ಮಾಡಿದ್ದರೂ, ತಮ್ಮ ಆರ್ಥಿಕ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲು ನಿರ್ಧರಿಸಿವೆ. ಫೋಟೊನ್‌ ತಯಾರಿಕಾ ಘಟಕ ಮತ್ತು ಕೈಗಾರಿಕಾ ಪಾರ್ಕ್‌ ನಿರ್ಮಾಣದ ₹ 2,000 ಕೋಟಿಗಳಷ್ಟು ಬಂಡವಾಳ ಹೂಡಿಕೆಯ ಈ ಯೋಜನೆಯು ಭಾರತದಲ್ಲಿನ ಚೀನಾದ ಅತಿದೊಡ್ಡ ಹೂಡಿಕೆಯ ಯೋಜನೆಗಳಲ್ಲಿ ಒಂದಾಗಿದೆ. ‘ದೂರದೃಷ್ಟಿ ಯಾವತ್ತೂ ಚಿಕ್ಕದಾಗಿರಬಾರದು. ಇಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮುನ್ನೋಟ ಇರಬೇಕು’ ಎಂದು ಝವೊ ಅಭಿಪ್ರಾಯಪಡುತ್ತಾರೆ.

ಶಿಂದೆ ಗ್ರಾಮದ ಸುತ್ತಮುತ್ತಲಿನ  ಪ್ರದೇಶದ ಭೂಮಿಯನ್ನು ಸರ್ಕಾರ ಖರೀದಿಸಿ ಫೋಟೊನ್‌ಗೆ ಗುತ್ತಿಗೆ ನೀಡಲಿದೆ ಎನ್ನುವ ಕಾರಣಕ್ಕೆ  ಮಧ್ಯವರ್ತಿಗಳು ಭೂಮಿಯ ಬೆಲೆಯನ್ನು ಗಗನಕ್ಕೆ ಏರಿಸಿದ್ದಾರೆ. ಆದರೆ, ಬಹುತೇಕ ಗ್ರಾಮಸ್ಥರು ತಮ್ಮ ಫಲವತ್ತಾದ ಭೂಮಿಯನ್ನು ಮಾರಾಟ ಮಾಡಲು ಸ್ಪಷ್ಟವಾಗಿ ಹಿಂದೇಟು ಹಾಕುತ್ತಿದ್ದಾರೆ.

ಅಂತಹ ರೈತರ ಪೈಕಿ ಕಾಳುರಾಮ್‌ ಕೇಂದಳೆ ಕೂಡ ಒಬ್ಬರು. ಈರುಳ್ಳಿ ಬೆಳೆಯುವ ಮತ್ತು ದನಕರು ಸಾಕಿಕೊಂಡಿರುವ ಇವರು ತಮ್ಮ ಭೂಮಿ ಮಾರಾಟಕ್ಕೆ ಮನಸ್ಸು ಮಾಡಿಲ್ಲ. ತಮ್ಮ ಕುಟುಂಬವು ತಲೆಮಾರುಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ 12 ಎಕರೆಗಳಷ್ಟು ಭೂಮಿಯಲ್ಲಿ 5 ಎಕರೆ ಭೂಮಿ ಮಾರಾಟ ಮಾಡಲು ರಾಜ್ಯ ಸರ್ಕಾರ ಇವರ ಮೇಲೆ ಒತ್ತಡ ಹೇರುತ್ತಿದೆ. ‘ಒಂದು ವೇಳೆ ನಾನು ಭೂಮಿ ಮಾರಾಟ ಮಾಡಿದರೆ ಅದು ಒಂದು ಬಾರಿ ಕೈಸೇರುವ ಮೊತ್ತವಾಗಿರುತ್ತದೆಯಷ್ಟೆ. ನನ್ನ ಭೂಮಿ ಫಲವತ್ತಾಗಿದ್ದು, ನನ್ನ ಕುಟುಂಬದ ಶಾಶ್ವತ ಆದಾಯದ ಮೂಲವಾಗಿದೆ’ ಎಂದು ಅವರು ಹೇಳುತ್ತಾರೆ.

ಮಣ್ಣಿನ ಗೋಡೆಗಳ  ಮನೆಯ, ಸೆಗಣಿಯಿಂದ ಸಾರಿಸಿದ ನೆಲದ ಮೇಲೆ ಓಡಾಡುತ್ತಲೆ ಬೆಳೆದಿರುವ ಛಾಯಾ ಶಿಂದೆ ಪ್ರತಿಭಾವಂತೆ. ಹಿಂದಿ ಮತ್ತು ಮರಾಠಿ ಭಾಷೆಗಳ ಓದು ಬರಹ ಬಲ್ಲವಳು. ಹಿರಿಯರಿಗೆ ನೆರವಾಗುವ ಸಾಮಾಜಿಕ ಕಾರ್ಯಕರ್ತೆಯಾಗಿ ತನ್ನ ಬದುಕು ರೂಪಿಸಿಕೊಳ್ಳಬೇಕೆಂಬ ಕನಸು ಕಾಣುತ್ತಿದ್ದಾಳೆ. ಹಳ್ಳಿಗೆ ಫೋಟೊನ್‌ ಕಾಲಿಟ್ಟ ನಂತರ ಆಕೆಯ ಕನಸು ನೂಚ್ಚು ನೂರಾಗಿದೆ.

ಭೂಮಾಲೀಕರು ತಮ್ಮ ಬಳಿಯಲ್ಲಿ ಇರುವ ಹೆಚ್ಚುವರಿ ಭೂಮಿ ಮಾರಾಟ ಮಾಡಿ ಕೈತುಂಬ ಹಣ ಎಣಿಸುತ್ತಿದ್ದಾರೆ. ಸಣ್ಣ ಹಿಡುವಳಿದಾರರಿಗೆ ಯಾವ ಪ್ರಯೋಜನವೂ ದೊರೆ ತಿಲ್ಲ. ಫೋಟೊನ್‌ ಇಲ್ಲಿಗೆ ಕಾಲಿಟ್ಟ ಮೇಲೆ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಲೇ ಇದೆ.

ಶಿಂದೆ ಕುಟುಂಬದ ಹೊಲದ ಹತ್ತಿರವೇ ಇರುವ ಇನ್ನೊಂದು ಶ್ರೀಮಂತ ಕುಟುಂಬ ತನ್ನ 58 ಎಕರೆ ಭೂಮಿಯನ್ನು  ಫೋಟೊನ್‌ ಕಾರ್ಖಾನೆ  ಸೇರಿದಂತೆ  ಇನ್ನೂ ಎರಡು ಕಾರ್ಖಾನೆಗಳಿಗೆ ಮಾರಾಟ ಮಾಡಿದೆ.  ಇದರಿಂದ ಬಂದ ಹಣದಲ್ಲಿ 10 ಮಲಗುವ ಕೋಣೆಗಳ ಬೃಹತ್‌ ವಿಲ್ಲಾ ನಿರ್ಮಿಸಿ ಐಷಾರಾಮಿಯಾಗಿ ಬದುಕುತ್ತಿದೆ.

ಆಹಾರ ಧಾನ್ಯಗಳನ್ನು ಬೆಳೆಯುವ ಛಾಯಾಳ ತಂದೆ, ಕೈಕೊಟ್ಟ ಮಳೆಯಿಂದಾಗಿ ನಷ್ಟಕ್ಕೆ ಗುರಿಯಾಗಿದ್ದಾರೆ.  ವರ್ಷದ ಹಿಂದೆಯೇ ಛಾಯಾ ಕಾಲೇಜ್‌ಗೆ ಹೋಗುವು ದನ್ನು ಬಿಟ್ಟಿದ್ದಾಳೆ. ಮಗಳ ಕಾಲೇಜ್‌ ವಿದ್ಯಾಭ್ಯಾಸ ಮುಂದುವರಿಸಲು ಆಕೆಯ ಅಪ್ಪನ ಬಳಿ ಹಣ ಇಲ್ಲ. ಮನೆಯಲ್ಲಿ ಕುಳಿತಿರುವ ಆಕೆಗೆ ಈಗ ಗಂಡು ನೋಡಿ ಮದುವೆ ಮಾಡಿಕೊಡಲು ಕುಟುಂಬದ ಸದಸ್ಯರು ಆಲೋಚಿಸುತ್ತಿದ್ದಾರೆ.

ಸದ್ಯಕ್ಕೆ ಆಕೆ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದು, ‘ಫೋಟೊನ್‌ ಸಂಸ್ಥೆ ಯಾವತ್ತೂ ಇಲ್ಲಿ ಕಾಲಿಡಬಾರದೆಂದು ನಾನು ಆಶಿಸುವೆ’ ಎಂದು ಹೇಳುತ್ತಲೇ  ಜೋಳದ ತೆನೆಯನ್ನು  ಕುಡುಗೋಲಿನಿಂದ ಕತ್ತರಿಸುತ್ತಾಳೆ. ‘ಉಳ್ಳ ವರು ಇನ್ನಷ್ಟು ಶ್ರೀಮಂತರಾಗುತ್ತಲೇ ಇದ್ದಾರೆ, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ’ ಎನ್ನುವ ಆಕೆಯ ಗೊಣಗಾಟ  ಯಾರ ಕಿವಿಗೂ ಬಿದ್ದಂತೆ ಕಾಣಿಸುತ್ತಿಲ್ಲ.
- ದಿ ನ್ಯೂಯಾರ್ಕ್‌ ಟೈಮ್ಸ್‌                                 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT