ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಗಿನ ಚುನಾವಣೆ ಮತ್ತು ರಾಹುಲ್ ಗಾಂಧಿ ಆಯ್ಕೆ ಸುತ್ತಮುತ್ತ

Last Updated 24 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕಾಂಗ್ರೆಸ್ ಪಕ್ಷದ ಹೊಸ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಆರಂಭ ಆಗಿದೆ. ಪಕ್ಷದ ಆಂತರಿಕ ಚುನಾವಣೆಯಿದು. ಹೊರಗಿನವರ ಪಾತ್ರ ಇರುವುದಿಲ್ಲ. ತಮ್ಮ ಹೊಸ ಅಧ್ಯಕ್ಷರನ್ನು ಕಾಂಗ್ರೆಸ್ಸಿಗರು ತಾವೇ ಆರಿಸಿಕೊಳ್ಳುವರು. ಚುನಾವಣೆಯ ಅಧಿಸೂಚನೆ ಡಿಸೆಂಬರ್ ಒಂದರಂದು ಹೊರಬೀಳಲಿದೆ.

ನಾಮಪತ್ರ ವಾಪಸು ಪಡೆಯಲು ಡಿಸೆಂಬರ್ 11 ಕಡೆಯ ದಿನ. ಅಗತ್ಯ ಬಿದ್ದರೆ ಡಿ.16ರಂದು ಮತದಾನ. ಫಲಿತಾಂಶದ ಪ್ರಕಟಣೆ ಡಿ.19ರಂದು. ಅಂದರೆ, ಗುಜರಾತ್ ಮತ್ತು ಹಿಮಾಚಲ ವಿಧಾನಸಭಾ ಚುನಾವಣೆಗಳ ಫಲಿತಾಂಶ ಹೊರಬಿದ್ದ ಮರುದಿನ.

ರಾಹುಲ್ ಅಧ್ಯಕ್ಷರಾಗುವುದು ಖಚಿತವೇ?
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಆಯ್ಕೆ ಬಹುತೇಕ ಖಚಿತ. ಈ ವ್ಯಾಪಕ ನಿರೀಕ್ಷೆ ನಿಜವಾಗದೆ ಹೋದರೆ ಅದೇ ಬಹುದೊಡ್ಡ ಅಚ್ಚರಿ. ತಮ್ಮ ತಾಯಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಂದ ಈ ಸ್ಥಾನವನ್ನು ವಹಿಸಿಕೊಳ್ಳುವರು. 1998ರಲ್ಲಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದರು ಸೋನಿಯಾ. ಸತತ 19 ವರ್ಷಗಳ ಕಾಲ ಅಧ್ಯಕ್ಷ ಗಾದಿಯಲ್ಲಿದ್ದ ಏಕೈಕ ಮುಂದಾಳು ಇವರು. ರಾಹುಲ್ ಅವರಿಗೆ ಈಗ 47ರ ಪ್ರಾಯ. 2007ರ ಸೆಪ್ಟಂಬರ್ ನಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.

ಉಪಾಧ್ಯಕ್ಷರಾಗಿ ಬಡ್ತಿ ಪಡೆದದ್ದು 2013ರಲ್ಲಿ. ಮರು ವರ್ಷ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಭರ್ಜರಿ ಗೆಲುವು ಗಳಿಸಿತ್ತು. 2004 ಮತ್ತು 2009ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋನಿಯಾ ಯಶಸ್ಸಿನತ್ತ ಮುನ್ನಡೆಸಿದ್ದರು. ಆದರೆ 2014ರಲ್ಲಿ ಕೇವಲ 44 ಸ್ಥಾನಗಳಿಗೆ ಹೊಸ ಕುಸಿತ ಕಂಡಿತು.

ಮನ್ನಣೆ ಪಡೆದ ಪ್ರತಿಪಕ್ಷದ ಸ್ಥಾನದಿಂದಲೂ ವಂಚಿತ ಆಗುವಂತಹ ಹೀನಾಯ ಸೋಲು ಕೂಡ ಸೋನಿಯಾ ನೇತೃತ್ವದಲ್ಲೇ ಘಟಿಸಿತು. ಆ ನಂತರವೂ ಶತಾಯುಷಿ ಪಕ್ಷ ಸೋಲಿನ ಮಾಲೆಯನ್ನೇ ಧರಿಸಬೇಕಾಯಿತು. ನಾಯಕತ್ವವನ್ನು ರಾಹುಲ್ ಕೈಗೆ ಒಪ್ಪಿಸಬೇಕೆಂಬ ಕೂಗು ಕಾಂಗ್ರೆಸ್ಸಿನಲ್ಲಿ ಆಗಲೇ ಎದ್ದಿತ್ತು.

ಪಕ್ಷವನ್ನು ಸೋಲಿನ ಸುಳಿಯಿಂದ ಮೇಲೆತ್ತಬಲ್ಲರೇ ರಾಹುಲ್?
ಕಾಂಗ್ರೆಸ್ ಚುನಾವಣಾ ಸಾಧನೆ ಸದ್ಯಕ್ಕೆ ನೆಲಕಚ್ಚಿದೆ. ಅವರನ್ನು ‘ಪಪ್ಪೂ’ ಎಂದು ಹೀಗಳೆದು ಆತ್ಮವಿಶ್ವಾಸವನ್ನು ಕುಗ್ಗಿಸಿ ಹಿಮ್ಮೆಟ್ಟಿಸುವ ರಾಜಕೀಯ ಎದುರಾಳಿಗಳ ತಂತ್ರ ಫಲ ನೀಡಿಲ್ಲ. ಬದಲಾಗಿ ರಾಹುಲ್ ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚು ಆತ್ಮಸ್ಥೈರ್ಯ ಪ್ರಕಟಿಸಿದ್ದಾರೆ. ಮನ ಬಂದಂತೆ ಚಿಪ್ಪಿನಿಂದ ಹೊರಬರುವ ಮತ್ತೆ ಒಳಹೊಗುವ ಅವರ ಬೇಕಾಬಿಟ್ಟಿ ಧೋರಣೆ ತಗ್ಗಿದೆ. ಪ್ರಧಾನ ಎದುರಾಳಿ ಮೋದಿಯವರನ್ನು ಕೆಣಕುವ ಕೆಚ್ಚನ್ನೂ, ಕದನಕುತೂಹಲವನ್ನೂ ತೋರತೊಡಗಿದ್ದಾರೆ. ಅವರನ್ನು ಕುರಿತ ಜನಗ್ರಹಿಕೆ ನಿಧಾನವಾಗಿ, ಆದರೆ ನಿಶ್ಚಿತವಾಗಿ ಬದಲಾಗುತ್ತಿರುವ ಸೂಚನೆಗಳಿವೆ.

ಪ್ರಿಯಾಂಕಾ ಗಾಂಧಿ ರಾಜಕೀಯ ರಂಗಪ್ರವೇಶ ಸಾಧ್ಯತೆ ಇಲ್ಲವೇ?
ಹಾಗೆ ನೋಡಿದರೆ ರಾಹುಲ್ ಗಾಂಧಿ ಅವರಿಗೆ ಹೋಲಿಸಿದರೆ, ಅವರ ತಂಗಿ ಪ್ರಿಯಾಂಕಾ ಗಾಂಧಿಯೇ ಕಾಂಗ್ರೆಸ್ಸಿನ ಒಳಗೂ ಹೊರಗೂ ಹೆಚ್ಚು ಜನಪ್ರಿಯರು. ಅಜ್ಜಿ ಇಂದಿರಾಗಾಂಧಿಯನ್ನು ಹೋಲುತ್ತಾರೆ ಮತ್ತು ಅವರಂತೆಯೇ ಹೆಚ್ಚು ಆಕ್ರಮಣಕಾರಿ ಹಾಗೂ ವರ್ಚಸ್ವೀ ಎಂಬ ಕಾರಣಗಳಿಗಾಗಿ ಕಾಂಗ್ರೆಸ್ಸಿಗರ ಮೊದಲ ಆದ್ಯತೆ ಆಗಲೂ ಈಗಲೂ ಪ್ರಿಯಾಂಕಾ ಅವರೇ. ಆದರೆ ತಾಯಿ ಸೋನಿಯಾಗೆ ಮಗನ ಮೇಲೆ ಹೆಚ್ಚು ಮಮತೆ. ಪ್ರಿಯಾಂಕಾ ಜನಪ್ರಿಯತೆ ಕುರಿತು ಬಿಜೆಪಿಯಲ್ಲೂ ಅವ್ಯಕ್ತ ಗಲಿಬಿಲಿ ಉಂಟು.

ಪ್ರಬಲ ಪ್ರತಿಸ್ಪರ್ಧಿಯು ಕಣವನ್ನೇ ಪ್ರವೇಶಿಸದಂತೆ ಯಾವುದೇ ರಾಜಕೀಯ ಎದುರಾಳಿಗಳು ತಡೆಯುವುದು ಸ್ವಾಭಾವಿಕ. ಈ ಮಾತಿಗೆ ಪ್ರಿಯಾಂಕಾ ಮತ್ತು ಬಿಜೆಪಿ ಹೊರತಲ್ಲ. ಕಾಂಗ್ರೆಸ್ ಪಟ್ಟವನ್ನು ಪ್ರಿಯಾಂಕಾಗೆ ಕಟ್ಟಿದಲ್ಲಿ ಅವರ ಪತಿ ರಾಬರ್ಟ್ ವಾದ್ರಾ ಮೇಲಿನ ರಿಯಲ್ ಎಸ್ಟೇಟ್ ಆರೋಪಗಳ ದಾಳಿಯನ್ನು ಮಸೆದು ಚೂಪು ಮಾಡುವ ಪರೋಕ್ಷ ಧಮಕಿ ತೆರೆಮರೆಯಲ್ಲಿ ಕಾದಿರುವುದು ಸುಳ್ಳಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಿಯಾಂಕಾ ಪಾತ್ರ ಸದ್ಯ ಭವಿಷ್ಯದಲ್ಲಿ ಸೈಡ್ ವಿಂಗ್‌ಗೇ ಸೀಮಿತ ಆಗಲಿದೆ. ತಮ್ಮ ಹೆಗಲೇರುವ ಹೊಸ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ರಾಹುಲ್ ಕಣ್ಣಿಗೆ ಕುಕ್ಕುವ ವೈಫಲ್ಯವನ್ನು ಎದುರಿಸುವಂತಹ ದುಃಸ್ಥಿತಿ ಒದಗಿತೆನ್ನಿ, ಆಗ ಪ್ರಿಯಾಂಕಾ ಪ್ರವೇಶ ಅನಿವಾರ್ಯ ಆದೀತು.

ಮೋದಿಯವರಿಗೆ ಪರ್ಯಾಯವಾಗಿ ರೂಪುಗೊಳ್ಳಬಲ್ಲರೇ ರಾಹುಲ್?
ಜನಸಮೂಹಗಳೊಂದಿಗೆ ಆಕರ್ಷಕ ಸಂವಾದವೊಂದನ್ನು ಕಟ್ಟಬಲ್ಲ, ಇಲ್ಲವೇ ಮೋದಿ- ಬಿಜೆಪಿ ರೂಪಿಸತೊಡಗಿರುವ ಭಾರತದ ಪರಿಕಲ್ಪನೆಗೆ ಎದುರಾಗಿ ಬದಲಿ ಭಾರತವೊಂದರ ಪರಿಕಲ್ಪನೆಯನ್ನು ರೂಪಿಸಿ ಮಂಡಿಸುವ ಮಾತುಗಾರಿಕೆ ರಾಹುಲ್‌ಗೆ ಇನ್ನೂ ಸಿದ್ಧಿಸಿಲ್ಲ. ಯಶಸ್ಸು ಕೇವಲ ವಾಕ್ಚಾತುರ್ಯದ ಗುತ್ತಿಗೆಯಲ್ಲ. ಸರಳ ಪ್ರಾಮಾಣಿಕತೆಯೂ ಜನಮನವನ್ನು ಮುಟ್ಟಬಲ್ಲದು. ಅಂತಹ ಪ್ರಾಮಾಣಿಕತೆಯ ಸೇತುವೆಯನ್ನು ಮುಂಬರುವ ದಿನಗಳಲ್ಲಿ ರಾಹುಲ್ ಕಟ್ಟಬಲ್ಲರೇ ಎಂಬುದನ್ನು ಕಾದು ನೋಡಬೇಕಿದೆ.

ರಾಹುಲ್ ಆಯ್ಕೆಯು ಹೊಸ ಮತ್ತು ಹಳೆಯ ತಲೆಮಾರುಗಳ ತಾಕಲಾಟಕ್ಕೆ ದಾರಿ ಮಾಡುವುದೇ?
ಜ್ಯೋತಿರಾದಿತ್ಯ ಸಿಂಧ್ಯ, ಸಚಿನ್ ಪೈಲಟ್ ಮುಂತಾದವರನ್ನು ಒಳಗೊಂಡ ಪಕ್ಷದೊಳಗಿನ ಹೊಸ ಪೀಳಿಗೆಯನ್ನು ರಾಹುಲ್ ಪ್ರತಿನಿಧಿಸಲಿದ್ದಾರೆ. ಈ ಪೀಳಿಗೆ ಮುಂಚೂಣಿಗೆ ಬರುವುದು ನಿಶ್ಚಿತ. ಮನಮೋಹನ್ ಸಿಂಗ್, ಅಹ್ಮದ್ ಪಟೇಲ್, ಗುಲಾಂ ನಬಿ ಆಜಾದ್, ಎ.ಕೆ.ಆ್ಯಂಟನಿ, ಕಪಿಲ್ ಸಿಬಲ್, ಜೈರಾಂ ರಮೇಶ್, ಪಿ.ಚಿದಂಬರಂ, ದಿಗ್ವಿಜಯಸಿಂಗ್, ಕಮಲ್ ನಾಥ್, ಮೋತಿಲಾಲ್ ವೋರಾ, ಜನಾರ್ದನ ದ್ವಿವೇದಿ, ಅಂಬಿಕಾ ಸೋನಿ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ ಮುಂತಾದವರು ಹಳೆಯ ಪೀಳಿಗೆಯ ಹುದ್ದರಿಗಳು.

ಈ ಪೈಕಿ ಬಹುಮಂದಿ ನಾಯಕರಿಗೆ ಅಭದ್ರತೆ ಅನಿಶ್ಚಯತೆ ಕಾಡಿರುವುದು ಹೌದು. ಆದರೆ ರಾಹುಲ್ ಜೊತೆ ಸಂಘರ್ಷಕ್ಕೆ ಇಳಿಯುವ ಧೈರ್ಯ ಯಾರಿಗೂ ಇಲ್ಲ. ಸಾರಾಸಗಟಾಗಿ ಇವರೆಲ್ಲ ಮೂಲೆಪಾಲಾಗುವುದಿಲ್ಲ. ಸೋನಿಯಾ ಆಪ್ತವಲಯದಲ್ಲಿದ್ದ ಇವರನ್ನು ನಿರ್ಲಕ್ಷಿಸುವುದು ರಾಹುಲ್ ಅವರಿಗೆ ಕ್ಷೇಮವೂ ಅಲ್ಲ. ಇವರ ಪ್ರತಿಭೆ ವ್ಯರ್ಥವಾಗುವುದಿಲ್ಲ.

ಇಬ್ಬರು ಹಿರಿಯರು ರಾಹುಲ್ ಜೊತೆ ಮಾರ್ಗದರ್ಶಕರಾಗಿ ನಿಲ್ಲಲಿದ್ದಾರೆ. ಜೊತೆಗೆ ಅಧ್ಯಕ್ಷ ಪದವಿಯಿಂದ ಕೆಳಗಿಳಿದರೂ ಸೋನಿಯಾ ಹಿನ್ನೆಲೆಯಲ್ಲಿ ಮಗನಿಗೆ ಪೂರಕವಾಗಿ ಸಕ್ರಿಯ ಪಾತ್ರ ವಹಿಸಲಿದ್ದಾರೆ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು.

ವಂಶಪಾರಂಪರ್ಯ ಮುಂದುವರಿಕೆ
ರಾಹುಲ್‌ ಎಐಸಿಸಿ ಅಧ್ಯಕ್ಷರಾಗುವುದು ವಂಶಪಾರಂಪರ್ಯದ ಮುಂದುವರಿಕೆ ಎಂಬ ಮಾತನ್ನು ಯಾರೂ ತಳ್ಳಿ ಹಾಕಲು ಬರುವುದಿಲ್ಲ. ರಾಹುಲ್ ಆಯ್ಕೆ ದೊಡ್ಡ ಅಕ್ಷರಗಳ ಗೋಡೆ ಬರಹ. ಅವರೇ ಆಯ್ಕೆ ಆಗುತ್ತಾರೆಂಬುದನ್ನು ಎಲ್ಲರೂ ಬಲ್ಲರು. ಹೀಗಿರುವಾಗ ಚುನಾವಣೆ ಎಂಬ ಪದ ಬಳಕೆಯೇ ಸೋಗಿನದು.

ಮೋತಿಲಾಲ್ ನೆಹರೂ ಅವರಿಂದ ಆರಂಭಿಸಿ ಅವರ ವಂಶಕುಡಿಗಳಲ್ಲೇ ದಾಟುತ್ತ ಅವರ ಮರಿಮೊಮ್ಮಗನ ‘ಕೈ’ಗೆ ಬಂದು ತಲುಪಿದೆ ಕಾಂಗ್ರೆಸ್ ಪಕ್ಷದ ಚುಕ್ಕಾಣಿ. ಎಡಪಕ್ಷಗಳ ವಿನಾ ಎಲ್ಲ ಪಕ್ಷಗಳಿಗೂ ಬಡಿದಿರುವ ಪೀಡೆ ವಂಶಪಾರಂಪರ್ಯ ರಾಜಕಾರಣ. ಒಂದು ಪಕ್ಷದಲ್ಲಿ ತುಸು ಹೆಚ್ಚಿದ್ದೀತು. ಇನ್ನೊಂದು ಪಕ್ಷದಲ್ಲಿ ತುಸು ಕಡಿಮೆ ಇದ್ದೀತು ಅಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT