ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇಶವಾನಂದ’ ನೆನಪಿನಲ್ಲಿ ಎನ್‌ಜೆಎಸಿ ವಿಮರ್ಶೆ

‘ಸಂವಿಧಾನಕ್ಕೆ ತಿದ್ದುಪಡಿ ತರುವ ಸಂಸತ್ತಿನ ಅಧಿಕಾರ ಅನಿರ್ಬಂಧಿತವೇ?’
Last Updated 20 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಐವರು ನ್ಯಾಯಮೂರ್ತಿಗಳಿದ್ದ ಪೀಠ ಇದರ ವಿಚಾರಣೆ ನಡೆಸಿತ್ತು. ತುರ್ತು ಪರಿಸ್ಥಿತಿಯನ್ನು ಯಾರೂ ಪ್ರಶ್ನಿಸುವಂತಿಲ್ಲ, ಅದನ್ನು ಹೇರಿರುವುದು ಕಾನೂನುಬಾಹಿರವಲ್ಲ ಎಂದು ಪೀಠದಲ್ಲಿದ್ದ ನಾಲ್ವರು ನ್ಯಾಯಮೂರ್ತಿಗಳು ತೀರ್ಪು ನೀಡಿದ್ದರು.

ಆದರೆ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಅವರು ಈ ನಿಲುವಿಗೆ ವಿರುದ್ಧವಾದ ತೀರ್ಪು ಬರೆದಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕೂಡ ಮೂಲಭೂತ ಹಕ್ಕುಗಳನ್ನು ಬದಲಾಯಿಸುವಂತಿಲ್ಲ ಎಂದು ಅವರು ಹೇಳಿದ್ದರು. ಇದು ಅಂದಿನ ಸರ್ಕಾರಕ್ಕೆ ವಿರುದ್ಧವಾದ ನಿಲುವಾಗಿತ್ತು. ಅದಾದ ಕೆಲವು ಕಾಲದ ನಂತರ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ, ನ್ಯಾಯಮೂರ್ತಿ ಖನ್ನಾ ಅವರ ಹಿರಿತನ ಮತ್ತು ಅರ್ಹತೆ ಕಡೆಗಣಿಸಿ, ಅವರಿಗಿಂತ ಕಿರಿಯರಾದವರೊಬ್ಬರನ್ನು ನೇಮಿಸಲಾಯಿತು. ಸರ್ಕಾರದ ಹಸ್ತಕ್ಷೇಪದಿಂದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತಿದೆ ಎಂಬ ಆತಂಕಗಳು ವ್ಯಕ್ತವಾದವು. ನಂತರದ ದಿನಗಳಲ್ಲೂ ಈ ಆತಂಕ ಹಲವು ಬಾರಿ ವ್ಯಕ್ತವಾಯಿತು.

1993ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಒಂದು ತೀರ್ಪು, ನ್ಯಾಯಮೂರ್ತಿಗಳನ್ನು ನ್ಯಾಯಮೂರ್ತಿಗಳ ಸಮಿತಿಯೇ (ಕೊಲಿಜಿಯಂ) ನೇಮಕ ಮಾಡುವ ವ್ಯವಸ್ಥೆಗೆ ಜನ್ಮ ನೀಡಿತು. ಅದಾದ ನಂತರದ ತೀರ್ಪುಗಳು ಕೊಲಿಜಿಯಂ ಬಗೆಗಿನ ಕೆಲವು ಅನುಮಾನಗಳನ್ನು ಪರಿಹರಿಸಿದವು. ಆದರೆ, ಕಾಲಾನಂತರದಲ್ಲಿ ಈ ವ್ಯವಸ್ಥೆಯಲ್ಲೂ ದೋಷಗಳು ಕಂಡುಬಂದವು. ಕೊಲಿಜಿಯಂ ವ್ಯವಸ್ಥೆ ಪಾರದರ್ಶಕವಾಗಿಲ್ಲ, ಅದು ಅನುಸರಿಸಬೇಕಾದ ನಿಯಮಗಳ ಬಗ್ಗೆ ಸ್ಪಷ್ಟತೆ ಇಲ್ಲ, ಪ್ರಜಾಸತ್ತಾತ್ಮಕವಾಗಿ ಇಲ್ಲ, ನೈಜ ಪ್ರತಿಭೆಯನ್ನು ಗುರುತಿಸಲು ಆಗುತ್ತಿಲ್ಲ, ಕೆಲವು ಭ್ರಷ್ಟರೂ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು ಎಂಬ ಮಾತುಗಳು ಕೇಳಿಬಂದವು. ಈ ಪರಿಸ್ಥಿತಿಯಲ್ಲಿ ಕೊಲಿಜಿಯಂ ವ್ಯವಸ್ಥೆಗೆ ಪರ್ಯಾಯ ಬೇಕು ಎಂಬ ಧ್ವನಿ ಕೇಳಿಬಂತು.

ನ್ಯಾಯಮೂರ್ತಿಗಳ ವಿರುದ್ಧ ಆರೋಪಗಳು ಕೇಳಿಬಂದಾಗ, ಅವರಿಗೆ ಶಿಕ್ಷೆ ವಿಧಿಸುವ ‘ವಾಗ್ದಂಡನೆ’ ಪ್ರಕ್ರಿಯೆ ತೀರಾ ಕ್ಲಿಷ್ಟಕರ. ಅದು ಪೂರ್ಣಗೊಳ್ಳಲು ಬಹಳ ಕಾಲ ಬೇಕು. ವಾಗ್ದಂಡನೆ ಪ್ರಕ್ರಿಯೆಯೂ ಸಮರ್ಪಕವಾಗಿಲ್ಲ ಎಂಬ ಮಾತುಗಳೂ ಕೇಳಿಬಂದವು. ಕೊಲಿಜಿಯಂ ಮತ್ತು ‘ವಾಗ್ದಂಡನೆ’ ಪ್ರಕ್ರಿಯೆಗೆ ಪರ್ಯಾಯ ವ್ಯವಸ್ಥೆ ರೂಪಿಸುವತ್ತ ಚಿಂತನೆ ನಡೆಯಿತು. ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ನೇತೃತ್ವದ ಸಂವಿಧಾನ ಪರಾಮರ್ಶೆ ಸಮಿತಿ ತನ್ನ ವರದಿಯಲ್ಲಿ, ನ್ಯಾಯಮೂರ್ತಿಗಳ ನೇಮಕಕ್ಕೆ ಸ್ವತಂತ್ರವಾದ ವ್ಯವಸ್ಥೆಯೊಂದು ಬೇಕು ಎಂದು ಹೇಳಿತು. ಇದು ಚರ್ಚೆಗೆ ಒಳಗಾಯಿತು. ನಂತರ ಯುಪಿಎ ಸರ್ಕಾರದ ಅವಧಿಯಲ್ಲಿ ಎರಡು ಮಸೂದೆಗಳನ್ನು ಸಂಸತ್ತಿನಲ್ಲಿಡಲಾಯಿತು. ಮೊದಲನೆಯದು ನ್ಯಾಯಮೂರ್ತಿಗಳ ನೇಮಕ ಮಸೂದೆ, ಎರಡನೆಯದು ನ್ಯಾಯಮೂರ್ತಿಗಳ ವಿಚಾರಣಾ ಮಸೂದೆ. ಅವುಗಳಿಗೆ ಅಂಗೀಕಾರ ದೊರೆತಿರಲಿಲ್ಲ.

ನಂತರ ಬಂದ ಎನ್‌ಡಿಎ ಸರ್ಕಾರ ಎರಡೂ ಮಸೂದೆಗಳನ್ನು ಹಿಂಪಡೆಯಿತು. ನ್ಯಾಯಮೂರ್ತಿಗಳ ನೇಮಕ, ವರ್ಗಾವಣೆ ಮತ್ತು ಬಡ್ತಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿತು. ಬೆಳಿಗ್ಗೆ ಮಂಡನೆಯಾದ ಈ ಮಸೂದೆಗೆ ಸಂಜೆ ವೇಳೆ ಅಂಗೀಕಾರ ದೊರೆಯಿತು! ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು ಇದರ ಸಾಂವಿಧಾನಿಕ ಮಾನ್ಯತೆಯನ್ನು. ಸಂವಿಧಾನದ 368ನೇ ಅನುಚ್ಛೇದದ ಅನ್ವಯ, ಸಂವಿಧಾನಕ್ಕೆ ತಿದ್ದುಪಡಿ ತರುವ ಅಧಿಕಾರ ಸಂಸತ್ತಿಗೆ ಇದೆ. ಈ ಅಧಿಕಾರ ಬಳಸಿ ಸಂಸತ್ತು ಸಂವಿಧಾನವನ್ನು ಹೇಗೆ ಬೇಕಿದ್ದರೂ ತಿದ್ದಬಹುದೇ? ಈ ಪ್ರಶ್ನೆ ಸುಪ್ರೀಂ ಕೋರ್ಟ್‌ ಎದುರು ಹಿಂದೊಮ್ಮೆ ಬಂದಿತ್ತು – ಕೇಶವಾನಂದ ಭಾರತಿ ಪ್ರಕರಣದಲ್ಲಿ. ಆವಾಗ, ಸುಪ್ರೀಂ ಕೋರ್ಟ್‌ ತನಗೆ ತಾನೇ ಕೆಲವು ಪ್ರಶ್ನೆಗಳನ್ನು ಕೇಳಿಕೊಂಡಿತು.

‘ತಿದ್ದುಪಡಿ ತರುವ ಸಂಸತ್ತಿನ ಅಧಿಕಾರ ಅನಿರ್ಬಂಧಿತವೇ? ದೇಶದ ಸಾರ್ವಭೌಮತೆಯನ್ನು ಹಾಳು ಮಾಡುವಂತಹ ತಿದ್ದುಪಡಿ ತರುವ ಅಧಿಕಾರ ಇದೆಯೇ? ಈ ದೇಶವನ್ನು ಇನ್ನೊಂದು ದೇಶದ ಭಾಗವನ್ನಾಗಿ ಮಾಡಬಹುದೇ? ಸಂಸದೀಯ ಪ್ರಜಾಪ್ರಭುತ್ವ ಕಿತ್ತೊಗೆದು, ರಾಜಪ್ರಭುತ್ವವನ್ನು ತರಬಹುದೇ? ದೇಶ ಒಡೆದು, ಹಲವಾರು ಸ್ವತಂತ್ರ ರಾಷ್ಟ್ರಗಳನ್ನು ರಚಿಸಬಹುದೇ? ಜಾತ್ಯತೀತ ಸ್ವರೂಪವನ್ನು ಹಾಳು ಮಾಡಿ, ಇಲ್ಲಿ ಧರ್ಮಾಧಾರಿತ ಸರ್ಕಾರ ಅಸ್ತಿತ್ವಕ್ಕೆ ತರಬಹುದೇ? ಜನರಿಗೆ, ಅಲ್ಪಸಂಖ್ಯಾತರಿಗೆ ನೀಡಿರುವ ಹಕ್ಕುಗಳನ್ನು ಮೊಟಕುಗೊಳಿಸಬಹುದೇ? ಲೋಕಸಭೆ,  ರಾಜ್ಯಸಭೆಗಳ ಅವಧಿ ಶಾಶ್ವತಗೊಳಿಸಬಹುದೇ? ಈಗ ಸಂವಿಧಾನಕ್ಕೆ ಒಂದು ತಿದ್ದುಪಡಿ ತಂದು, ಮುಂದೆಂದೂ ತಿದ್ದುಪಡಿ ತರಬಾರದು ಎಂದು ಸಂಸತ್ತು ಹೇಳಬಹುದೇ?’

ಇಂಥ ಪ್ರಶ್ನೆಗಳನ್ನು ಕೇಳಿಕೊಂಡ ಸುಪ್ರೀಂ ಕೋರ್ಟ್‌, ಸಂವಿಧಾನಕ್ಕೆ ತರುವ ಯಾವುದೇ ತಿದ್ದುಪಡಿ ಅದರ ಮೂಲ ಸ್ವರೂಪಕ್ಕೆ ಧಕ್ಕೆ ತರುವಂತಿರಬಾರದು ಎಂದು ಕೇಶವಾನಂದ ಭಾರತಿ ಪ್ರಕರಣದಲ್ಲಿ ಹೇಳಿತು. ಹಾಗಾದರೆ ಸಂವಿಧಾನದ ಮೂಲ ಸ್ವರೂಪ ಎಂದರೆ ಏನು? ಇಡೀ ಸಂವಿಧಾನವನ್ನು ಓದಿದಾಗ, ‘ಮೂಲ ಸ್ವರೂಪ’ ಎನ್ನುವ ಕೆಲವನ್ನು ಗುರುತಿಸಬಹುದು. ಕೇಶವಾನಂದ ಭಾರತಿ ಪ್ರಕರಣದಲ್ಲಿ ಕೋರ್ಟ್‌ ಇಂಥ ಕೆಲವು ಅಂಶಗಳನ್ನು ಪಟ್ಟಿ ಮಾಡಿತು. ನಂತರ ಬಂದ ಕೆಲವು ತೀರ್ಪುಗಳು ಇನ್ನಷ್ಟು ಅಂಶಗಳನ್ನು ಮೂಲ ಸ್ವರೂಪಗಳ ಪಟ್ಟಿಗೆ ಸೇರಿಸಿದವು.

ಜಾತ್ಯತೀತತೆ, ಸಾಮಾಜಿಕ ನ್ಯಾಯ, ನ್ಯಾಯಾಂಗದ ಸ್ವಾತಂತ್ರ್ಯ, ಸಹಜ ನ್ಯಾಯದ ಪಾಲನೆ, ಕಾಲಕಾಲಕ್ಕೆ ಚುನಾವಣೆ ನಡೆಸುವುದು... ಇವೆಲ್ಲ ನಮ್ಮ ಸಂವಿಧಾನದ ಮೂಲ ಸ್ವರೂಪಗಳು. ಕೇಶವಾನಂದ ಭಾರತಿ ಪ್ರಕರಣವನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು, ಸಂವಿಧಾನ ಮೂಲ ಸ್ವರೂಪಗಳಲ್ಲಿ ಒಂದಾದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಎನ್‌ಜೆಎಸಿ ಕಾಯ್ದೆ ಧಕ್ಕೆ ತಂದಿದೆಯೇ ಎಂದು ಸುಪ್ರೀಂ ಕೋರ್ಟ್‌ ಪರಿಶೀಲಿಸಿತು. ಈ ಕಾಯ್ದೆಯಲ್ಲಿ ಕಾರ್ಯಾಂಗಕ್ಕೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಅಂದರೆ, ಇದರಿಂದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳ ನೇಮಕಕ್ಕೆ ಸ್ವತಂತ್ರ ಆಯೋಗ ಬೇಕು ಎಂಬ ಮಾತು ಕೇಳಿಬಂದಿದ್ದು ಕೊಲಿಜಿಯಂ ವ್ಯವಸ್ಥೆಯಲ್ಲಿ ದೋಷಗಳಿವೆ ಎಂಬ ಕಾರಣಕ್ಕೆ. ಕೊಲಿಜಿಯಂ ದೋಷ ಪರಿಹರಿಸುವುದು ಹೇಗೆ ಎಂಬುದನ್ನು ಹೊಸ ವ್ಯವಸ್ಥೆ ಕಂಡುಕೊಳ್ಳಬೇಕಿತ್ತು. ಎನ್‌ಜೆಎಸಿಯು ಪ್ರಜಾಸತ್ತಾತ್ಮಕವಾಗಿ, ಪ್ರತಿಭೆಯನ್ನು ಎಲ್ಲ ಬಗೆಯಿಂದಲೂ ಗುರುತಿಸುವಂಥದ್ದಾಗಿರಬೇಕಿತ್ತು. ಆದರೆ, ಅದು ಹಾಗಿರಲಿಲ್ಲ. ಎನ್‌ಜೆಎಸಿ ಹೆಸರಿನಲ್ಲಿ ಕಾರ್ಯಾಂಗಕ್ಕೆ ಹೆಚ್ಚಿನ ಅಧಿಕಾರ ನೀಡುವ ಮಸೂದೆ ಮಂಡನೆಯಾಗಿ, ಅಂಗೀಕಾರ ಪಡೆದುಕೊಂಡಿತು. ಈ ಮಸೂದೆ ಕಾರ್ಯಾಂಗಕ್ಕೆ ಹೆಚ್ಚಿನ ಅಧಿಕಾರ ನೀಡುತ್ತದೆ ಎಂಬ ಮಾತು ಬಂದಾಗ, ಇದರಿಂದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ (ಅಂದರೆ ಸಂವಿಧಾನದ ಮೂಲ ಸ್ವರೂಪಕ್ಕೆ) ಧಕ್ಕೆ ಆಗುತ್ತದೆಯೇ ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂತು.

ಎನ್‌ಜೆಎಸಿ ಕಾಯ್ದೆ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ನಾನು ಅಲ್ಲೇ ಇದ್ದೆ. ಕಾನೂನಿನ ಜ್ಞಾನ ಇಲ್ಲದವರನ್ನೂ ಕೇಂದ್ರ ಸರ್ಕಾರ, ಕಾನೂನು ಸಚಿವರನ್ನಾಗಿ ನೇಮಿಸಬಹುದು. ಅದನ್ನು ತಡೆಯಲು ಕೋರ್ಟ್‌ಗಳಿಗೆ ಸಾಧ್ಯವಿಲ್ಲ. ಕಾನೂನಿನ ಗಂಧವೇ ಇಲ್ಲದವರು, ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ ಏನಾಗಬಹುದು? ಈ ಪ್ರಶ್ನೆ ಪ್ರಕರಣದ ವಿಚಾರಣೆ ವೇಳೆ ಉದ್ಭವ ಆಗಿತ್ತು. ಅಷ್ಟೇ ಅಲ್ಲ, ‘ಅಟಾರ್ನಿ ಜನರಲ್‌ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಾರೆ. ಅವರು ಕಾನೂನು ತಜ್ಞರೇ ಆಗಿರುತ್ತಾರೆ. ಕಾನೂನು ಸಚಿವರಿಗೆ ಪರ್ಯಾಯವಾಗಿ ಎನ್‌ಜೆಎಸಿಯಲ್ಲಿ ಅವರು ಇರಬಹುದಲ್ಲವೇ?’ ಎಂಬ ಮಾತು ಕೂಡ ವಿಚಾರಣೆ ವೇಳೆ ಕೇಳಿಬಂದಿತ್ತು.

ಇಬ್ಬರು ಹಿರಿಯ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಇರುವ ಸಮಿತಿ. ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕ (ಅಂದರೆ ಇಬ್ಬರು ರಾಜಕೀಯ ವ್ಯಕ್ತಿಗಳು) ಒಂದಾಗಿ ಇಬ್ಬರು ಹಿರಿಯ ವ್ಯಕ್ತಿಗಳನ್ನು ನೇಮಿಸುತ್ತಾರೆ. ಅದನ್ನು ತಡೆಯುವ ಸಾಮರ್ಥ್ಯ ಸಿಜೆಐಗೆ ಇರುವುದಿಲ್ಲ. ಈ ಇಬ್ಬರು ಹಿರಿಯ ವ್ಯಕ್ತಿಗಳು ನೇಮಕಾತಿ ಆಯೋಗದಲ್ಲಿ ವೀಟೊ ಅಧಿಕಾರ ಚಲಾಯಿಸಿ, ನೇಮಕಾತಿ ತಡೆದರೆ? ಅದರಿಂದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದೇ? ಹಿರಿಯ ವ್ಯಕ್ತಿಗಳು ಎಂದಷ್ಟೇ ಇರುವ ಬದಲು, ‘ಹಿರಿಯ ನ್ಯಾಯಶಾಸ್ತ್ರಜ್ಞರು’ ಎಂಬ ವ್ಯಾಖ್ಯಾನ ಕಾನೂನಿನಲ್ಲಿ ಇರಬೇಕಿತ್ತು.

ಈ ಕಾಯ್ದೆಗೆ ಸಂಸತ್ತಿನ ಬೆಂಬಲ, 20ಕ್ಕೂ ಹೆಚ್ಚು ರಾಜ್ಯಗಳ ವಿಧಾನಸಭೆಗಳ ಬೆಂಬಲ ಇತ್ತು. ಆದರೂ ಕಾಯ್ದೆ ಅಸಾಂವಿಧಾನಿಕ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್‌ ಜನಪ್ರತಿನಿಧಿಗಳ ಇಚ್ಛೆಗೆ ವಿರುದ್ಧವಾಗಿ ವರ್ತಿಸಿದೆ ಎಂಬ ಮಾತಿದೆ. ಆದರೆ, ಜನಪ್ರತಿನಿಧಿಗಳ ಇಚ್ಛೆ ಬೇರೆ, ಸಂವಿಧಾನದ ಆಶಯ ಬೇರೆ. ಜನಪ್ರತಿನಿಧಿಗಳ ಆಶಯ ಮತ್ತು ಸಂವಿಧಾನದ ಆಶಯಗಳ ನಡುವೆ ಭಿನ್ನಮತ ಎದುರಾದಾಗ, ಅಂತಿಮವಾಗಿ ಸಂವಿಧಾನದ ಆಶಯವೇ ಉಳಿದುಕೊಳ್ಳಬೇಕು. ಜನಪ್ರತಿನಿಧಿಗಳ ಆಶಯ ಯಾವತ್ತಿಗೂ ಸಂವಿಧಾನಕ್ಕೆ ಪೂರಕವಾಗಿಯೇ ಇರಬೇಕು.

ಕೊಲಿಜಿಯಂನಲ್ಲಿ ದೋಷಗಳಿವೆ. ಈಗ ಪುನಃ ಅದೇ ವ್ಯವಸ್ಥೆಗೆ ಮರಳುವುದು ಸರಿಯಲ್ಲ. ಹಾಗಾಗಿ, ಕೊಲಿಜಿಯಂ ವ್ಯವಸ್ಥೆಯನ್ನು ಸುಧಾರಿಸಲು, ಬಲಪಡಿಸಲು ಸಲಹೆ ನೀಡಿ ಎಂದು ವಕೀಲ ಸಮೂಹಕ್ಕೆ, ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. ಇದರ ವಿಚಾರಣೆ ನವೆಂಬರ್‌ 3ಕ್ಕೆ ನಿಗದಿಯಾಗಿದೆ. ಈ ವ್ಯವಸ್ಥೆಯಲ್ಲಿನ ದೋಷಗಳು ನಿವಾರಣೆ ಆಗಬೇಕು. ನಿರ್ದಿಷ್ಟ ನಿಯಮಗಳಿಗೆ ಅನುಗುಣವಾಗಿ ಕೊಲಿಜಿಯಂ ಕಾರ್ಯ ನಿರ್ವಹಿಸುವಂತೆ ಆಗಬೇಕು. ಈಗ ಬಂದಿರುವ ತೀರ್ಪು ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಸಂಘರ್ಷಕ್ಕೆ ಕಾರಣವಾಗಬಾರದು. ದೇಶ ಅಳವಡಿಸಿಕೊಳ್ಳುವ ಯಾವುದೇ ಪರ್ಯಾಯ ವ್ಯವಸ್ಥೆ ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಯಬೇಕು. ನ್ಯಾಯಮೂರ್ತಿಗಳನ್ನು ನೇಮಿಸುವ ಯಾವುದೇ ಸಂಸ್ಥೆ ಪಾರದರ್ಶಕವಾಗಿ, ಪ್ರಜಾಸತ್ತಾತ್ಮಕವಾಗಿ ಕೆಲಸ ಮಾಡಬೇಕು.

ಕೊಲಿಜಿಯಂನಲ್ಲಿರುವ ನ್ಯಾಯಮೂರ್ತಿಗಳ ಕಣ್ಣಿಗೆ ಕಾಣಿಸುವ ವಕೀಲರು ಮಾತ್ರವೇ ಬುದ್ಧಿವಂತರಲ್ಲ. ಸಮರ್ಥರು, ಅರ್ಹರು ಅನೇಕರಿದ್ದಾರೆ. ಅಂಥ ಪ್ರತಿಭೆಗಳನ್ನು ಗುರುತಿಸುವಂತೆ ಆಗಬೇಕು. ನ್ಯಾಯಮೂರ್ತಿಗಳ ನೇಮಕಾತಿಯಲ್ಲೂ ಬಹುತ್ವ, ಪ್ರಾತಿನಿಧ್ಯಕ್ಕೆ ಆದ್ಯತೆ ಬರಬೇಕು. ಮೀಸಲಾತಿಯೇ ಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಮಹಿಳೆಯರಿಗೆ, ವಿವಿಧ ಪ್ರದೇಶಗಳಿಗೆ, ಹಿಂದುಳಿದವರಿಗೆ, ಶೋಷಿತ ವರ್ಗಗಳಿಗೆ ಪ್ರಾತಿನಿಧ್ಯ ಸಿಗುವಂತೆ ಆಗಬೇಕು.

ಸ್ವಾತಂತ್ರ್ಯೋತ್ತರ ಭಾರತ ಕಟ್ಟಿದ ಅತ್ಯಂತ ಪ್ರಬಲ ಸಂಸ್ಥೆ ನ್ಯಾಯಾಂಗ. ನ್ಯಾಯಾಂಗ ತನ್ನ ಸ್ವಾತಂತ್ರ್ಯವನ್ನು ಕಾಯ್ದುಕೊಂಡಿರುವುದು ಕೂಡ ಅದು ಪ್ರಬಲವಾಗಿರುವುದಕ್ಕೆ ಕಾರಣ. ಈ ಸಂಸ್ಥೆಯ ಸಮಗ್ರ ಕೆಲಸವನ್ನು ನೋಡಿ ಜನ ಗೌರವ ಕೊಟ್ಟಿದ್ದಾರೆ, ವಿಶ್ವಾಸವಿಟ್ಟಿದ್ದಾರೆ. ನ್ಯಾಯಾಂಗವು ಕಾನೂನುಗಳನ್ನು ವ್ಯಾಖ್ಯಾನಿಸಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಶಾಸಕಾಂಗ ಕಾನೂನು ರೂಪಿಸಿದಾಗ, ಅದನ್ನು ಮುಲಾಜಿಲ್ಲದೆ ರದ್ದುಪಡಿಸಿದೆ. ನ್ಯಾಯಶಾಸ್ತ್ರದ ವಿಕಸನದಲ್ಲಿ ದೇಶದ ನ್ಯಾಯಾಂಗ ನೀಡಿರುವ ಕೊಡುಗೆ ಮಹತ್ವದ್ದು. ನ್ಯಾಯಶಾಸ್ತ್ರವನ್ನು ಕಟ್ಟುವಾಗ, ಹಿಂದೊಂದು ಕಾಲದಲ್ಲಿ ಭಾರತದ ನ್ಯಾಯಾಂಗ ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ ನ್ಯಾಯಾಂಗಗಳು ನೀಡಿರುವ ತೀರ್ಪುಗಳನ್ನು ಪೂರ್ವ ನಿದರ್ಶನಗಳನ್ನಾಗಿ ಉಲ್ಲೇಖಿಸುತ್ತಿತ್ತು. ಆದರೆ ಇವತ್ತು, ನಮ್ಮ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪುಗಳನ್ನು ಅಮೆರಿಕದ ನ್ಯಾಯಾಂಗ ಉಲ್ಲೇಖಿಸುತ್ತಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಬರೆದು ಹೇಳುವುದು ಮಾತ್ರವಲ್ಲ. ಮೌನವಾಗಿದ್ದು ಏನನ್ನೋ ಹೇಳುವುದು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲೇ ಬರುತ್ತದೆ. ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗಬೇಕಾಗಿರುವುದು ಜನರ ಹಕ್ಕು. ಜೀವಿಸುವ ಹಕ್ಕು ಎಂದರೆ, ಪ್ರಾಣಿಗಳಂತೆ ಬದುಕುವುದಲ್ಲ, ಘನತೆಯಿಂದ ಬದುಕುವುದು. ಗೌರವದಿಂದ ಅಂತಿಮ ಸಂಸ್ಕಾರ ಪಡೆದುಕೊಳ್ಳುವ ಹಕ್ಕು ಒಂದು ಶವಕ್ಕೂ ಇದೆ ಎಂಬಂತಹ ನ್ಯಾಯಶಾಸ್ತ್ರಗಳನ್ನು ನಿರ್ವಚಿಸಿದ ಹಿರಿಮೆ ನಮ್ಮ ನ್ಯಾಯಾಂಗಕ್ಕೆ ಇದೆ. ಇಂಥ ಸಂಸ್ಥೆಯ ಸ್ವಾತಂತ್ರ್ಯಕ್ಕೆ ಎಂದೂ ಧಕ್ಕೆ ಬರಬಾರದು.

ಲೇಖಕ ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಈಗ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT