ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಅಕ್ಷಯ ತೃತೀಯ

Last Updated 2 ಮೇ 2022, 19:31 IST
ಅಕ್ಷರ ಗಾತ್ರ

‘ಸಾ, ಅಕ್ಷಯ ತೃತೀಯ ಅಂತ ಚಿನ್ನದ ಅಂಗಡೀಲಿ ನೂಕುನುಗ್ಗಲಂತೆ!’ ತುರೇಮಣೆಗೆ ಸುದ್ದಿ ಮುಟ್ಟಿಸಿದೆ.

‘ಅಯ್ಯೋ ಬೊಡ್ಡಿಹೈದ್ರಾ, ಲಕ್ಸಗಟ್ಟಲೇ ಕಾಸು ಕೊಟ್ಟು ಗ್ರಾಮು ಚಿನ್ನ ತಕ್ಕೊಳ್ಳ ಕೋಯ್ತಾವ್ರ? ನಮ್ಮ ಕಾಲದೇಲಿ ಇವೆಲ್ಲಾ ಇರನೇ ಇಲ್ಲ. ಬಸವಣ್ಣೋರ ಸ್ಮರಣೆ ಮಾಡಿಕ್ಯತಿದ್ದೋ’ ಅಂದರು.

‘ಈವತ್ತು ತಕ್ಕಂದಿದ್ದೆಲ್ಲಾ ಡಬಲ್ಲಾಯ್ತದೆ ಅಂದವ್ರೆ ಟೀವಿ ಗುರುಗಳು!’ ನನ್ನ ಬುದ್ಧಿವಂತಿಕೆ ತೋರಿಸಿದೆ.

‘ದಿಟ ಕಲಾ. ಒಳ್ಳೇದೆಲ್ಲಾ ಉಳ್ಳೋರಿಗೆ ಹೋಯ್ತದೆ, ಕೆಟ್ಟುವೆಲ್ಲಾ ಎರಡು ಪಟ್ಟಾಗಿ ಜನದ ಹೆಗಲೇರ್ತವೆ’ ಅಂದ್ರು.

‘ಅದೇನೋ ಅರ್ಥಾಗದಂಗೆ ಹೇಳ್ತವ್ನೆ!’ ಯಂಟಪ್ಪಣ್ಣನಿಗೆ ಕನ್‌ಫ್ಯೂಸ್ ಆಯ್ತು.

‘ತಿಂಗಳಿಗೆರಡು ಹಗರಣ ಬಯಲಾದ್ರೂ ರಾಜಕೀಯದೋವು ಅದು ನಾವಲ್ಲ, ಅದು ನಾವಲ್ಲ ಅಂತ ಅಡ್ಡಗ್ಯಾನ ಮಾಡ್ಕ್ಯಂಡು ಮುಂದ್ಲ ಗಾಳಿಗಂಟಲಿಗೆ ರೆಡಿಯಾಯ್ತವೆ! ತಮ್ಮ ಹೆಸರು ಆಚೆಗೆ ಕಡದದೇನೋ ಅಂತ ಸೀನಿಯರ್ ಸರ್ ಚಿಂತೆ! ನಾವು 20 ಪರ್ಸೆಂಟು ಕಡಿತದ ಜಾಹೀರಾತಿಗೆ ಮರುಳಾದ್ರೆ ಯಾರೂ ನಮ್ಮ ಬೆನ್ನು ಕೆರೆಯಕೆ ಬರಂಗಿಲ್ಲ. ನಾವೇ ಕೆರಕಬಕು ಕಪ್ಪಾ!’ ಅಂದ್ರು ತುರೇಮಣೆ.

‘ಹಂಗಾದ್ರೆ ನಮ್ಮ ಗತಿ?’ ಅಂತ ಗಾಬರಿಯಾದೆ.

‘ದೇವರೇಗತಿ! ಅಕ್ರಮ ಗಿಲೀಟುಗಾರರು ಜೈಲಾಸ್ಪತ್ರೇಲಿ ರಾಜೋಪಚಾರ ತಕ್ಕೋತಿದ್ರೆ ‘ಸಮಗ್ರ ತನಿಖೆ’ ಅಂತ ಬಸಣ್ಣ, ಅರಗಣ್ಣ ಜೋಕ್ ಮಾಡ್ತವ್ರೆ! ಯವಸ್ಥೆ ಹದ್ದುಮೀರಿ ಹೋಯ್ತಾ ಅದೆ! ಜನದ ಕ್ವಾಟ್ಲೆ ಕೇಳೋರೆ ಇಲ್ಲ! ನಾವು ಏಟು ಜಂಜಾಟದಲ್ಲಿದ್ರೂ ಕೊನೆಗೆ ನಮಗೇ ನಿಷ್ಟೂರ’ ತುರೇಮಣೆ ಸಿಟ್ಟಾದರು.

‘ಹಂಗಾದ್ರೆ ಅಕ್ಷಯ ತೃತೀಯದ ಅರ್ಥ ಏನು ಸಾ?’ ನಾನು ಕೇಳಿದೆ.

‘ಈ ವೈ-ಶಾಖ ಮಾಸದೇಲಿ ಅರ್ಥ ಅಂದರೆ ನಮ್ಮ ಕಾಸು ಅಂಗಡಿಯ ಗಲ್ಲಾ ಸೇರಿಕ್ಯಂಡು ಅವರ ಸಂಪತ್ತು ಅಕ್ಷಯವಾಯ್ತದೆ. ನಮ್ಮ ಹಣೇಮ್ಯಾಲೆ ತೃತೀಯ ಅಂದ್ರೆ ಎರಡು ಬಿಳಿ ಒಂದು ಕೆಂಪು ನಾಮ ಬೀಳ್ತವೆ! ನಮಗೆ ಕುಲಸ್ವಾಮಿ, ಮನೆಸ್ವಾಮಿ ಪಾದವೇ ಗತಿ, ಗೋವಿಂದಾ!’ ಅಂತ ನಾಮ ತೇದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT