ಗುರುವಾರ , ಫೆಬ್ರವರಿ 25, 2021
29 °C

ಹಲೋ... ಸಿ.ಎಂ ಸಾಹೇಬ್ರಾ?

ಬಿ.ಎನ್‌. ಮಲ್ಲೇಶ್‌ Updated:

ಅಕ್ಷರ ಗಾತ್ರ : | |

Prajavani

‘ಹಲೋ... ಸಿ.ಎಂ ಸಾಹೇಬ್ರಿಗೆ ನಮಸ್ಕಾರ. ಹೆಂಗದೀರಿ? ಅಂತೂ ಹಟ ಸಾಧಿಸಿ ಗೆದ್ದು ಗದ್ದುಗೆ ಏರೇಬಿಟ್ರಿ. ಇರ‍್ಲಿ, ಆದ್ರೂ ನೀವು ನಮಗೆ ಇಂಥ ಅನ್ಯಾಯ ಮಾಡಬಾರದಿತ್ತು...’

‘ಯಾರಪ್ಪ ನೀನು? ನಿನಗೇನು ಅನ್ಯಾಯ ಆಗಿದೆ ಈಗ?’

‘ನಾನು ಈ ದೇಶದ ಪ್ರಜೆ, ತೆಪರೇಸಿ ಅಂತ. ನೀವು ಸಿ.ಎಂ ಆದ್ರಿ ಅಂತ ದಿಲ್‍ಖುಷ್ ಆಗಿ ಅವತ್ತು ಒಂದ್ ನೈನ್ಟಿ ಜಾಸ್ತಿನೇ ತಗಂಡಿದ್ದೆ. ಆದ್ರೆ ನೀವು ಇಂಥ ಅನ್ಯಾಯ ಮಾಡಬಾರದಿತ್ತು. ನಿಮ್ಮ ಸರ್ಕಾರ ನಡೀತಿರೋದೇ ನಮ್ಮಿಂದ... ನಾವೇ ನಡೆಸ್ತಿರೋದು ಗೊತ್ತಾ?’

‘ಹೌದಾ? ಅದೆಂಗೆ?’

‘ಅದು ಆಮೇಲೇಳ್ತೀನಿ. ನೀವು ನಮಗಷ್ಟೇ ಯಾಕ್ ಅನ್ಯಾಯ ಮಾಡ್ತಿದೀರಿ?’

‘ಏನು ಅನ್ಯಾಯ ಆಗಿದೆಯಪ್ಪ ನಿಂಗೆ?’

‘ಅಲ್ಲ ಸಾ, ಊರಾಗಿರೋ ಎಲ್ಲರದೂ ಸಾಲ ಮನ್ನಾ ಮಾಡ್ತೀರಿ. ನಾವೇನ್ ಮಾಡಿದ್ವಿ ನಿಮಗೆ? ವರ್ಷಕ್ಕೆ ಇಪ್ಪತ್ತು ಸಾವಿರ ಕೋಟಿ ನಮ್ಮಿಂದ ನಿಮ್ ಸರ್ಕಾರಕ್ಕೆ ಲಾಭ ಐತಿ. ನಮ್ಮ ಸಾಲ ಯಾಕೆ ಮನ್ನಾ ಮಾಡಲ್ಲ? ಏನ್ ನಿಮ್ಮ ಹಕೀಕತ್ತು?’

‘ನಿಮ್ಮ ಸಾಲನಾ? ಏನ್, ಯಾವ ಸಾಲ?’

‘ಅಲ್ಲ ಸಾ, ರೈತರ ಸಾಲ, ನೇಕಾರರ ಸಾಲ, ಲೇವಾದೇವಿ ಸಾಲ, ತಳ್ಳೋ ಗಾಡಿಯೋರ ಸಾಲ... ಎಲ್ಲ ಮನ್ನಾ ಮಾಡ್ತೀರಿ. ಅವರೇನು ಸರ್ಕಾರಕ್ಕೆ ದುಡಿದು ಕೊಡ್ತಾರಾ? ಟ್ಯಾಕ್ಸ್ ಕಟ್ತಾರಾ? ನಾವು ದುಡಿದು ಕೊಡದಿದ್ರೂ ಕುಡಿದು ಟ್ಯಾಕ್ಸ್ ಕಟ್ತೀವಿ. ದಿನಾ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಒಂದೊಂದು ಕ್ವಾಟ್ರು ಅಂದ್ರೆ ಎಷ್ಟಾತು... ನಾವೂ ಸಾಲ ಮಾಡಿದೀವಿ ಸಾ... ಅದನ್ನು ಯಾಕೆ ಮನ್ನಾ ಮಾಡಲ್ಲ ನೀವು?’

‘ಓ... ನೀವು ಆ ಗಿರಾಕಿನಾ? ಸರಿ ಈಗ ಎಷ್ಟು ತಗಂಡ್ರಿ?’

‘ಪೂಜಾ ಬಾರಲ್ಲಿ ಒಂದು ಕ್ವಾಟ್ರು ಆತು. ಈಗ ರಾಜಾ ಬಾರಲ್ಲಿ ನೈನ್ಟಿ ತಗೋತಿದೀನಿ. ಯಾಕೆ?’

‘ಏನಿಲ್ಲ ಮನೆಗೆ ಹೆಂಗ್ ಹೋಗ್ತೀರಿ?’

‘ಸ್ಕೂಟರಿದೆ, ಯಾಕೆ?’

‘ನೀವು ಯಾರಿಗೆ ಫೋನ್ ಮಾಡಿದೀರಿ ಗೊತ್ತಾ? ಪೊಲೀಸ್ ಸ್ಟೇಷನ್‍ಗೆ. ಅಲ್ಲೇ ಇರಿ, ಡ್ರಂಕ್ ಅಂಡ್ ಡ್ರೈವ್ ಕೇಸಲ್ಲಿ ಎತ್ತಾಕ್ಕಂಡ್ ಬರ್ತೀನಿ...’

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.