ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಉಗ್ರಪ್ರತಾಪಿಗಳು

Last Updated 3 ಮೇ 2020, 19:45 IST
ಅಕ್ಷರ ಗಾತ್ರ

ಕೋವಿಡಣ್ಣ ಮತ್ತು ಸೋಪಿನ ನಡುವೆ ಯಾರು ದೊಡ್ಡವರೆಂಬ ವಾಗ್ವಾದ ಶುರುವಾಯಿತು. ‘ಮರಣರಂಗದೋಳ್ ಕೋವಿಡನಂ ಕೆಣಕಿ ಉಳಿದವರಿಲ್ಲ... ಟ್ರಂಪಣ್ಣನಿಗೂ ನಡುಕ ಹುಟ್ಟಿಸಿ, ವಿಶ್ವದೆಲ್ಲೆಡೆ ಎರಡೂವರೆ ಲಕ್ಷ ಜೀವಗಳ ಹರಣ ಮಾಡಿದ ನಾ ಉಗ್ರಪ್ರತಾಪಿ...’ ಎಂದು ಕೋವಿಡಣ್ಣ ಅರ್ಜುನನ ಅಟ್ಟಹಾಸದಿ ನಕ್ಕ.

‘ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ... ಮೂವತ್ತೇ ಸೆಕೆಂಡುಗಳು ಸಾಕೆನಗೆ ನಿನ್ನ ಶಿರವಂ ಚೆಂಡಾಡಲು’ ಎಂದು ಸೋಪು, ಬಬ್ರುವಾಹನನಂತೆ ಹ್ಞೂಂಕರಿಸಿದ.

‘ನನಗೊಂದು ಹೊರಗವಚದ ವರವ ನೀಡಿದ ಶಿವನಿಗೇ ಕೇಳೋಣ ನಮ್ಮೀರ್ವರಲ್ಲಿ ಯಾರು ದೊಡ್ಡವರೆಂದು’ ಕೋವಿಡಣ್ಣ ಸಲಹೆ ಮುಂದಿಟ್ಟ. ನಾಲ್ಕಡಿ ದೂರದ ದೈಹಿಕ ಅಂತರ ಕಾಯ್ದುಕೊಂಡು ಇಬ್ಬರೂ ಕೈಲಾಸಕ್ಕೆ ಹೋದರು. ದ್ವಾರಪಾಲಕರು ಶಿವನಿಗೆ ಇಂಟರ್‌ಕಾಂನಲ್ಲಿ ಸುದ್ದಿ ಮುಟ್ಟಿಸಲಾಗಿ, ಶಿವನು ಸೋಪಿಗಷ್ಟೇ ಒಳಗೆ ಕರೆದ. ಕೈಲಾಸದೊಳು ಎಲ್ಲರ ಕೈತೊಳೆದು ಹೊರಬಂದ ಸೋಪು ‘ತಿಳಿಯಿತೇ ಈಗಲಾದರೂ... ಚಂಡ ಪ್ರಚಂಡ ನೀನಲ್ಲ... ನಮೋ ಲಾಕ್‍ಡೌನಿಗೆ ಮಣ್ಣುಮುಕ್ಕಿದ ಶಿಖಂಡಿ ನೀನು’ ನಕ್ಕ.

‘ಶಿಖಂಡಿಯೆಂದಡಿಗಡಿಗೆ ನುಡಿಯಬೇಡೆಲೋ ಮೂಢ... ಭೂಲೋಕದೊಳು ಮತ್ತೆ ಬಾರಿಸುವೆನು ಮರಣಮೃದಂಗ’ ಕೋವಿಡಣ್ಣ ಹ್ಞೂಂಕರಿಸಿದ.

ಇಬ್ಬರೂ ಭೂಲೋಕಕ್ಕೆ ಮರಳುತ್ತಿರಲಾಗಿ... ಕೋವಿಡ್‌ ಸೈನಿಕರಾದ ವೈದ್ಯರು, ದಾದಿಯರನ್ನು ಗೌರವಿಸಲು ಆಗಸದಿಂದ ಆಸ್ಪತ್ರೆ ಮೇಲೆ ಹೂಮಳೆಗೈಯಲು ಭರತಮಾತೆಯ ಸುಪುತ್ರ ಸೇನಾಧಿಕಾರಿಯ ನೇತೃತ್ವದಲ್ಲಿ ಹೊರಟಿದ್ದ ವಾಯುಪಡೆಯವರನು ಕಂಡರು.

‘ನೋಡೀಗ, ಇವರೂ ತಮ್ಮ ಕರಗಳಿಗೆ ನನ್ನ ಮೆತ್ತಿಕೊಂಡೇ ವಿಮಾನವೇರುವರು’ ಎಂದ ಸೋಪು ತನ್ನ ಭಟರಾದ ಸ್ಯಾನಿಟೈಸರುಗಳನ್ನು ಅತ್ತ ಕಳಿಸಿತು. ಇತ್ತ ‘ಯಾವ ಸೋಪಿಗೂ ನಾ ಸೊಪ್ಪು ಹಾಕೆನು’ ಎನ್ನುತ್ತ ಒಂದಿಷ್ಟು ಭಟರನ್ನು ಟ್ರಂಪಣ್ಣನ ನಾಡಿಗೆ, ಯುರೋಪಿಗೆ ಕಳಿಸಿ, ಇನ್ನೊಂದಿಷ್ಟು ಭಟರನ್ನು ಭರತಮಾತೆಯ ಹಾಟ್‌ ಸ್ಪಾಟ್‌ ಪ್ರದೇಶಗಳಿಗೆ ಕಳಿಸಿದಕೋವಿಡಣ್ಣ ‘ತೋರುವೆನು ನಾನೀಗಲೇ ಉಗ್ರಪ್ರತಾಪ...’ ಎಂದು ಹ್ಞೂಂಕರಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT