ಶುಕ್ರವಾರ, ನವೆಂಬರ್ 22, 2019
27 °C

ಪಾರುಮಾಡು ತಂದೆಯೇ!

Published:
Updated:
Prajavani

ದಶರಥನಿಗೆ ಒಳಗೆ ಬಹಳ ಕುದಿಯೆನ್ನಿಸಿ, ಸಮಾಧಿ ಒಳಗಿಂದೆದ್ದು ಹೊರಬಂದ. ಅಯೋಧ್ಯೆಯ ತುಂಬ ಎಲ್ಲಿ ನೋಡಿದಲ್ಲಿ ಕಾವಲುಭಟರು, ಸೈನಿಕರು, ಅವರ ಚಿತ್ರವಿಚಿತ್ರ ಸಮವಸ್ತ್ರಗಳು, ಎಂದೂ ಕಂಡಿರದ ಹತಾರಗಳು ಕೈಯಲ್ಲಿ.

‘ಇದು ನಮ್ಮ ಅಯೋಧ್ಯಾರಾಜ್ಯವೇ’ ಎಂದು ದಶರಥ ಗಾಬರಿಯಾಗಿಬಿಟ್ಟ. ಮೂಲೆಯಿಂದ ಯಾರೋ ‘ತಂದೆಯೇ...’ ಎಂದು ಕರೆದಂತಾಯಿತು. ಕರೆದವನ ಗುರುತು ಸಿಗಲಿಲ್ಲ. ದಶರಥನನ್ನೂ ಮೂಲೆಗೆ ಎಳೆದ ಹುಡುಗ ‘ತಂದೆಯೇ... ನಾನು ರಾಮಲಲ್ಲಾ... ನಿಮ್ಮ ಸುಪುತ್ರ’ ಎಂದು ಪಿಸುಗುಟ್ಟಿದ. ದಶರಥ ಇನ್ನಷ್ಟು ಕಕ್ಕಾಬಿಕ್ಕಿಯಾದ. ‘ನಾ ರಾಮಲಲ್ಲಾ, ಅಂದರೆ ಬಾಲರಾಮ. ನನ್ನ ಇಲ್ಲಿಂದ ಪಾರುಮಾಡು ತಂದೆಯೇ...’ ಎಂದು ಗೋಗರೆದ.

‘ಏನಿದು ಈ ಅವತಾರ? ಸೀತೆ, ಲಕ್ಷ್ಮಣ ರೆಲ್ಲಿ? ಇದೇನಿದು ನಿನ್ನ ಹುರಿಗಟ್ಟಿದ ಬಾಹುಗಳು... ನೀಯೇನು ಬಾಲರಾಮನೋ ಅಥವಾ ರಾಮಜಟ್ಟಿಯೋ’ ದಶರಥ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ. ‘ಹುಶ್... ಮೆತ್ತಗೆ... ಎಲ್ಲ ಕಡೆ ಕರ್ಫ್ಯೂ ಕಣ್ಗಾವಲು ಇದೆ, ನನ್ನ ಈ ಜನ್ಮಸ್ಥಾನದಲ್ಲಿ ಒಂದು ಪರ್ಮನೆಂಟ್ ದೇವಸ್ಥಾನ ಕಟ್ಟಿಸಬೇಕಂತ ಸುಪ್ರೀಂ ಆಜ್ಞೆ ಆಗಿದೆ. ಯಾರೂ ನನ್ನನ್ನ ಸೀತಾರಾಮ ಅಂತಲೂ ಕರೀತಿಲ್ಲ, ಈ ಬಿಲ್ಲು ಬಾಣ ಹೊತ್ತುಕೊಂಡು ನಿಂತೇ ಸಾಕಾಗಿದೆ’ ರಾಮಲಲ್ಲಾ ಅಲವತ್ತುಕೊಂಡ.

‘ಈಗೇನೂ ಯುದ್ಧಗಿದ್ಧ ಇಲ್ಲವಲ್ಲ, ಶಾಂತಿ ಕಾಲ ಅಲ್ಲವೇ, ಬಿಲ್ಲನ್ನು ಕೆಳಗಿಳಿಸು ಪುತ್ರಾ’ ದಶರಥ ಮೆತ್ತಗೆ ಹೇಳಿದ.

‘ಏನು ಹೇಳಲಿ ತಂದೆಯೇ... ನಾನೀಗ ಮೇಕ್ ಇನ್ ಇಂಡಿಯಾದ ಪ್ರಾಡಕ್ಟು. ಇದು ದೇಹದೊಳಗೇ ಸೇರಿಸಿದ ಬಿಲ್ಟ್ ಇನ್ ಬಿಲ್ಲು ಬಾಣ. ನೋಡಿಲ್ಲಿ... ಕೈಒಳಗೇ ಸೇರಿದೆ’ ರಾಮಲಲ್ಲಾ ತೋರಿಸಿದ.

ಒಂದಿಷ್ಟು ಕಾವಲುಭಟರು ಹತಾರಗಳನ್ನು ತಿರುವುತ್ತ ಅತ್ತಲೇ ಬರುವುದನ್ನು ಕಂಡ ದಶರಥ ಓಡೋಡಿ ಹೋಗಿ ತನ್ನ ಸಮಾಧಿಯೊಳಗೆ ತೂರಿಕೊಂಡ. ಸುಪ್ರೀಂ ಆಜ್ಞೆಯ ದೂಳಿನಲ್ಲಿ ರಹೀಮಭಕ್ತರೂ ದೂರವಾಗಿ ಸುತ್ತೆಲ್ಲ ರಾಮಭಕ್ತಾದಿಗಳೇ ತುಂಬಿರುವಾಗ, ಬಾಣ ಯಾರಿಗೆ ಬಿಡುವುದು ಹಾಗಿದ್ದರೆ ಎಂದು ತಿಳಿಯದೇ, ಬಿಲ್ಲು ಹಿಡಿದ ರಾಮಲಲ್ಲಾ ನಿಂತಲ್ಲೇ ನಿಂತ!

ಪ್ರತಿಕ್ರಿಯಿಸಿ (+)