ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಯುಗಾದಿ ತೀರ್ಥ!

Last Updated 27 ಮಾರ್ಚ್ 2020, 20:30 IST
ಅಕ್ಷರ ಗಾತ್ರ

ವಾರದಿಂದ ಹೋಂ ಅರೆಸ್ಟ್ ಆಗಿ, ಹೋಂ ಮಿನಿಸ್ಟರ್ ವಹಿಸಿದ ಹೋಮ್‌ವರ್ಕ್‌ಗಳನ್ನೆಲ್ಲಾ ನಿಷ್ಠೆಯಿಂದ ಮಾಡುತ್ತಿದ್ದಂತೆ ಯುಗಾದಿ ಬಂದಿತ್ತು. ನ್ಯೂಸ್‌ಪೇಪರ್‌ ಎತ್ತಿಕೊಂಡು ದಿನಭವಿಷ್ಯ ನೋಡಿದರೆ ‘ಹೊರಗೆ ಹೋಗದಿರಿ, ಅಪಾಯ’ ಎಂದಿರಬೇಕೇ! ಟಿ.ವಿ. ಚಾನೆಲ್‌ಗಳೆಲ್ಲಾ ‘ಮನೆಯೊಳಗಿದ್ರೆ ಯುಗಾದಿ, ಹೊರಗೆ ಬಂದ್ರೆ ಸಮಾಧಿ!’ ಎನ್ನುತ್ತಿವೆ. ಅಷ್ಟರಲ್ಲಿ ಗ್ರಹಮಂತ್ರಿಗಳ ಕರೆ. ‘ಅಪ್ಪಣೆಯಾಗಲಿ, ಯಜಮಾನರ ಆಜ್ಞೆ ಪಾಲಿಸುವುದು ಸೇವಕರ ಕರ್ತವ್ಯವಲ್ವೇ?’ ಎಂದೆ.

‘ಅದ್ಯಾಕೆ ಹಾಗೆ ನೆಗೆಟಿವ್‌ ಆಗಿ ಮಾತಾಡ್ತೀರಿ? ಹೊತ್ತು ಹೊತ್ತಿಗೆ ನಿಮ್ಗೆ ಮಾಡಿ ಹಾಕ್ತಿಲ್ವೆ? ಹಾಗಂತ ಎಲ್ಲಿದೆ ರೂಲ್ಸು?’

‘ಈಗ ಪಾಸಿಟಿವ್ ಅನ್ನಂಗಿಲ್ಲ. ಕೊರೊನಾ! ಬಂದಿಗಳಿಗೆ ಊಟ ಹಾಕುವುದು ಕಡ್ಡಾಯ ಅಂತ ಜಿನೀವಾ ಒಪ್ಪಂದದಲ್ಲಿದೆ’.

‘ತಮಾಷೆ ಸಾಕು, ಕೈ ತೊಳ್ಕೊಂಡು ಪಾತ್ರೆ ತೊಳೀರಿ. ನಾನು ಪೂಜೆ ಮಾಡ್ತಿರ್ತೀನಿ. ನೀವು ದೇವಸ್ಥಾನದಿಂದ ತೀರ್ಥ– ಪ್ರಸಾದ ತಗೊಂಡ್ಬನ್ನಿ’.

ಹೋಮ್‌ವರ್ಕ್ ಮುಗಿಸಿ, ಸ್ಕೂಟರಿನಲ್ಲಿ ದೇವಸ್ಥಾನಕ್ಕೆ ಹೊರಟೆ. ರಸ್ತೆಯಲ್ಲಿ ಪೊಲೀಸ್ ವ್ಯಾನ್ ಪ್ರಚಾರ- ‘ಮನೇಲಿರೋದು, ಐಸಿಯು
ನಲ್ಲಿರೋದು, ಫೋಟೊದಲ್ಲಿ ಹಾರ ಹಾಕಿಸ್ಕೊಂಡಿರೋದು ನಿಮ್ಮ ಕೈಲೇ ಇದೆ’.

ಪೊಲೀಸಪ್ಪನ ಕಣ್ತಪ್ಪಿಸಿ ದೇವಸ್ಥಾನದ ಒಳಗೆ ಹೋದರೆ ಪೂಜಾರಪ್ಪ ನಾಪತ್ತೆ! ದೇವರ ಮುಂದಿನಿಂದ ಪ್ರಸಾದ, ತೀರ್ಥ ತಗೊಂಡು ಹೊರಬಂದರೆ, ಯಾರೋ ಸ್ಕೂಟರ್ ಟೈರ್ ಬ್ಲೋ ತೆಗೆದಿದ್ದಾರೆ! ಬಾಗಿ ನೋಡ್ತಿದ್ದಂತೆ ಬೆನ್ನ ಮೇಲೆ ರಪ್ಪಂತ ಲಾಠಿ ಏಟು! ‘ಏಯ್, ಲಾಕ್‌ಡೌನ್‌ ಇದ್ರೂ ಹೊರಗೆ ಬಂದಿದೀಯ? ನಡಿ ಸ್ಟೇಷನ್ಗೆ’.

ಕಾಡಿಬೇಡಿ ಅವನಿಂದ ಬಿಡಿಸಿಕೊಂಡು, ಬಿಸಿಲಲ್ಲಿ ಬೆವರಿಳಿಸುತ್ತಾ ಸ್ಕೂಟರ್ ತಳ್ಳಿಕೊಂಡು ಬಂದರೆ, ಮನೆಬಾಗಿಲಲ್ಲಿ ಮಹಾಮಂಗಳಾರತಿ!

‘ಹೋಗೋವಾಗ ಬ್ಲೋ ನೋಡ್ಕೊಳ್ಳೋದಲ್ವೇ? ಕೊಡಿ ತೀರ್ಥ– ಪ್ರಸಾದ’. ತೀರ್ಥ ಬಾಯಿ ಹತ್ತಿರ ಒಯ್ಯುತ್ತಿದ್ದಂತೆ ಆಕ್ರಂದನ- ‘ಇದೇನ್ರೀ, ಕೈ ತೊಳೆಯೋ ಸ್ಯಾನಿಟೈಸರ್!’ ನಡೆದದ್ದನ್ನು ವಿವರಿಸಿ ಅಂಗಲಾಚಿದೆ- ‘ಬಾಸುಂಡೆಗೆ ಕೊಬ್ರಿ ಎಣ್ಣೆ ಹಚ್ಚು’.

‘ಮೋದಿ ಅವ್ರು ಹೇಳಿಲ್ವೇ? ಕೊರೊನಾಗೆ ಸೋಷಿಯಲ್ ಡಿಸ್ಟೆನ್ಸಿಂಗೇ ಮದ್ದು. ಅಷ್ಟು ಹತ್ರ ಎಲ್ಲ ಬರೋಹಂಗಿಲ್ಲ, ಬೇಕಾದ್ರೆ ನೀವೇ ಹಚ್ಕೊಳ್ಳಿ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT