ಮಂಗಳವಾರ, ಆಗಸ್ಟ್ 3, 2021
27 °C

ಚುರುಮುರಿ | ಮಂಗಳಾರತಿ

ಎಸ್.‌ರಾಮಮೂರ್ತಿ Updated:

ಅಕ್ಷರ ಗಾತ್ರ : | |

Prajavani

‘ಪದ್ದೀ, ಇವತ್ತು ಶುಕ್ರವಾರ. ದೇವಿ ದರ್ಶನ ಮಾಡಿಕೊಂಡು ಬಂದುಬಿಡ್ತೀನಿ, ತೆಂಗಿನಕಾಯನ್ನ ಬುಟ್ಟಿಗೆ ಹಾಕ್ಕೊಡು’.

‘ತೆಂಗಿನಕಾಯೀ? ನಿಮ್‌ ತಲೆಕಾಯಲ್ಲಿ ಏನು ತುಂಬಿಕೊಂಡಿದ್ದೀರಾ? ಅದ್ನೆಲ್ಲ ಒಳಗೆ ಬಿಡಲ್ಲಾರೀ’.

‘ಹೌದಾ? ಹೋಗಲಿ ಒಂದು ಬುಟ್ಟಿ ಕೊಡು. ಹೂವು, ಬಾಳೇಹಣ್ಣನ್ನಾದ್ರೂ ತಗೊಂಡು ಹೋಗ್ತೀನಿ’.

‘ಆಹಹಹಹ! ಹೌದಾಂತ ಗಿಣಿ ಕೇಳಿದ ಹಾಗೆ ಕೇಳ್ತೀರಲ್ರೀ. ಬೆಳಗಾಗೆದ್ದು ಎರಡು ಗಂಟೆ ಪೇಪರ್ ಹಿಡಕೊಂಡು, ಪತ್ರಿಕೆಯ ಹೆಸರಿನಿಂದ ಹಿಡಿದು ಪ್ರಿಂಟೆಡ್‌ ಅಂಡ್‌ ಪಬ್ಲಿಷ್ಡ್‌ ಬೈವರೆಗೂ ಓದ್ತೀರಾ. ತಲೆಗೆ ಹೋಗಲಿಲ್ವಾ ಈ ವಿಷಯ?’ ತಲೆ ತಲೆ ಚಚ್ಚಿಕೊಂಡ ಶಬ್ದವೇ ಅವಳ ಉತ್ತರವಾಯಿತು.

‘ಹೋಗಲಿ ಒಂದು ಕರ್ಪೂರ?’ ಹೆದರಿ ಹೆದರುತ್ತಲೇ ಕೇಳಿದೆ.

‘ಯಾವುದೂ ಇಲ್ಲಾರೀ. ಬರೀಕೈಲಿ ಹೋಗಬೇಕೂರೀ. ಮಾಸ್ಕ್‌ ಒಂದು ಹಾಕ್ಕೋಬೇಕಷ್ಟೆ’ ಅಂತಂದು ‘ದೇವರು ನಿಮಗೆ ಅದು ಯಾವಾಗ ಬುದ್ಧಿ ಕೊಡ್ತಾನೋ ಅವನಿಗೇ ಗೊತ್ತು’ ಎಂದು ಗೊಣಗಿದಳು. ತೆಪ್ಪಗಾದೆ ಬೇರೆ ಮಾರ್ಗವಿಲ್ಲದೆ.

ಎರಡು ಮೂರು ನಿಮಿಷ ಕಳೀತು. ಕೇಳಲೋ ಬೇಡವೋ ಅನ್ನೋ ಅನುಮಾನದಿಂದಲೇ ಧೈರ್ಯ ಮಾಡಿ ‘ಎರಡು ಡಬ್ಬೀನಾದರೂ ಕೊಡು. ಪಂಚಾಮೃತ ಪ್ರಸಾದಾನ್ನ ಹಾಕಿಸಿಕೊಂಡು ಬರ್ತೀನಿ’ ಅಂತ ಕೇಳುತ್ತಾ ಚಪ್ಪಲಿಗಳನ್ನು ಮೆಟ್ಟಿದೆ.

ಸಾಕ್ಷಾತ್‌ ದುರ್ಗೆಯಂತೆ ನನ್ನ ಕಡೆ ನೋಡಿದಳು, ಬೆವತುಹೋದೆ. ‘ರೀ, ಪಂಚಾಮೃತಾನೂ ಇಲ್ಲ ಪ್ರಸಾದಾನೂ ಇಲ್ಲ, ಬರೀ ಮಂಗಳಾರತಿ ಅಷ್ಟೇ’ ಅಂದಳು. ನಾನು ಹಾಗೇ ಸ್ಟಿಲ್‌ ಆದೆ. ಹೆಜ್ಜೆಗಳನ್ನ ಇಡಲಿಲ್ಲ. ‘ಯಾಕ್ರೀ ದೇವಸ್ಥಾನಕ್ಕೆ ಹೋಗಲ್ಲವಾ?’ ಕೇಳಿದಳು.

‘ಇಲ್ಲೇ ಆಯ್ತಲ್ಲ ಮಂಗಳಾರತಿ. ಇನ್ನು ಅಲ್ಲೀವರೆಗೂ ಯಾಕೆ ಹೋಗಲಿ?’ ಅಂದೆ ಮೆಟ್ಟಿದ್ದ ಚಪ್ಪಲಿಗಳನ್ನು ಬಿಡುತ್ತಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.