ಬುಧವಾರ, ಆಗಸ್ಟ್ 10, 2022
23 °C

ಚುರುಮುರಿ: ಫೋಟೊ ಫಿನಿಶ್!

ಗುರು ಪಿ.ಎಸ್.‌ Updated:

ಅಕ್ಷರ ಗಾತ್ರ : | |

Prajavani

‘ಏನ್ ಮುದ್ದಣ್ಣ ಅರ್ಜೆಂಟಾಗಿ ಎಲ್ಲೋ ಹೋಗ್ತಿದಿಯಾ... ಏನಿದು ಕೈಯಲ್ಲಿ ಇಷ್ಟೊಂದು ಫೋಟೊಗಳು’ ಕುತೂಹಲದಿಂದ ಕೇಳ್ದ ವಿಜಿ.

‘ಇವೆಲ್ಲ ನಮ್ಮ ಪೊಲಿಟಿಷಿಯನ್‌ಗಳ ಫೋಟೊಗಳು ಸರ್...’

‘ಫೋಟೊ ಸ್ಟುಡಿಯೊ ಏನಾದರೂ ಇಡಬೇಕು ಅಂತಿದೀಯೋ ಹೇಗೆ?’

‘ಏಯ್, ಇಲ್ಲ ಸರ್... ನಾನು ಪೋರ್ಚುಗಲ್‌ಗೆ ಹೋಗ್ತಿದೀನಿ ಅಂದೆ, ಅದಕ್ಕೆ ಅವರೆಲ್ಲ ಫೋಟೊ ಕೊಟ್ಟಿದ್ದಾರೆ’.

‘ಹಾಗಂದ್ರೆ ಏನಯ್ಯ? ಸ್ವಲ್ಪ ಬಿಡಿಸಿ ಹೇಳು’.

‘ನಾನು ಕ್ರಿಸ್ಟಿಯಾನೊ ರೊನಾಲ್ಡೊ ಅವರ ದೊಡ್ಡ ಅಭಿಮಾನಿ. ಅದಕ್ಕೆ ಪೋರ್ಚುಗಲ್‌ಗೆ ಹೋಗ್ತಿದೀನಿ. ಅವರು ಯಾವುದೋ ಕೂಲ್ ಡ್ರಿಂಕ್ಸ್ ಬಾಟಲನ್ನು ದೂರ ಸರಿಸಿ, ನೀರು ಕುಡಿಯಿರಿ ಅಂದಿದ್ದೇ ‘ಕೋಲಾ’ಹಲ ಸೃಷ್ಟಿ
ಯಾಗಿದೆಯಲ್ಲ ಸರ್. ಅದಾದ ಮೇಲೆ ಬಹಳಷ್ಟು ಜನ ಆ ಡ್ರಿಂಕ್ಸ್‌ನ ತಗೊಳೋದನ್ನೇ ಬಿಟ್ರಂತೆ. ಅದಕ್ಕೆ ಅವರಿಗೆ ವಿಶ್ ಮಾಡಿ, ಹಾರ ಹಾಕಿ ಬರೋಣ ಅಂದ್ಕೊಂಡಿದೀನಿ’.

‘ನಮ್ ಪೊಲಿಟಿಷಿಯನ್‌ಗಳ ಫೋಟೊ ಯಾಕಪ್ಪ ಅದಕ್ಕೆ...’ ಕೇಳ್ದ ವಿಜಿ.

‘ಆಳ್ತಿರೋರು, ಆಳಬೇಕು ಅಂತಿರೋರು, ಆಳ್ತಿರೋರನ್ನ ಬೀಳಿಸಬೇಕು ಅಂತಿರೋರು, ಇವರು ಬಿದ್ದ ತಕ್ಷಣ ನಾವೆದ್ದು ಬರಬೇಕು ಅಂತಿರೋ ವಿರೋಧ ಪಕ್ಷದವರದೆಲ್ಲ ಫೋಟೊಗಳು ಇದರಲ್ಲಿ ಇವೆ ಸರ್’.

‘ಪೋರ್ಚುಗಲ್‌ಗೆ ಹೋದ ತಕ್ಷಣ ರೊನಾಲ್ಡೊ ಕಡೆಯಿಂದ ನಾನು ಮತ್ತೊಂದು ಪ್ರೆಸ್ ಮೀಟ್ ಮಾಡಿಸಬೇಕಂತೆ. ಅವರ ಮುಂದೆ ಇವರೆಲ್ಲರ ಫೋಟೊ ಇಟ್ಟು, ಒಬ್ಬರದನ್ನು ಸೆಲೆಕ್ಟ್ ಮಾಡಿಸಬೇಕಂತೆ. ನನ್ನ ಫೋಟೊನೇ ಅವರ ಕೈಯಲ್ಲಿ ಹಿಡ್ಕೊಳಂಗೆ ಮಾಡು ಅಂತ ಎಲ್ರೂ ನನಗೆ ದುಡ್ಡು ಕೊಟ್ಟಿದ್ದಾರೆ ಸರ್...’ ಸೂಟ್‌ಕೇಸ್ ತೋರಿಸಿದ ಮುದ್ದಣ್ಣ.

‘ಅವರು ನೀರು ಕುಡೀರಿ ಅಂದಿದ್ದಕ್ಕೆ ಅದು ಮುಖ್ಯ ವಿಷಯವಾಯ್ತು. ಇವರೇನ್ ಮಾಡಿದ್ದಾರೆ?’

‘ಇವರೂ ನೀರು ಮಾತ್ರ ಕುಡಿಸ್ತಿದಾರಲ್ಲ ಸರ್, ಊಟ, ಕೆಲಸ ಕೊಡದೆ’ ವ್ಯಂಗ್ಯವಾಗಿ ಹೇಳ್ದ ಮುದ್ದಣ್ಣ.

‘ಇವರೆಲ್ಲರ ಫೋಟೊಗಳನ್ನೂ ರೊನಾಲ್ಡೊ ದೂರ ಸರಿಸಿಬಿಟ್ಟರೆ...’

‘ಎಲ್ಲರೂ ನೀರು ಕುಡಿತಾರಷ್ಟೇ...’

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.