ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಮಂಕು ಬಡಿಯಿತು

Last Updated 7 ಜುಲೈ 2021, 19:31 IST
ಅಕ್ಷರ ಗಾತ್ರ

ಹೊಸದಾಗಿ ಪ್ರಾರಂಭವಾಗಿದ್ದ ಟಿ.ವಿ ಚಾನೆಲ್‍ಗೆ ರಿಪೋರ್ಟರ್ ಆಗಿ ಸೇರಿದ್ದ ಸೋಮು ಅತ್ಯುತ್ಸಾಹದಿಂದ ಕೆಲಸ ಮಾಡುತ್ತಿದ್ದ. ಕೋವಿಡ್ ಸಂಕಟದಲ್ಲಿ ಅಪಾಯವನ್ನು ಲೆಕ್ಕಿಸದೆ ಕೊರೊನಾ ಸೋಂಕಿತರ ಸಂದರ್ಶನ ಮಾಡಿದ್ದ. ಅಧಿಕಾರಿಗಳನ್ನು ಭೇಟಿ ಮಾಡಿ ಸೋಂಕಿತರು, ಬಿಡುಗಡೆಗೊಂಡವರು, ಮೃತರ ಸಂಖ್ಯೆಯನ್ನು ಕೊಡುತ್ತಿದ್ದ. ಅವನ ಚಾನೆಲ್‍ನ ಟಿಆರ್‌ಪಿ ಹೆಚ್ಚಿತ್ತು. ಅವನ ಸಂಪಾದಕರು ಸದ್ಯದಲ್ಲೇ ಅವನಿಗೆ ಬಡ್ತಿ ನೀಡುವ ಭರವಸೆಯನ್ನು ಕೊಟ್ಟಿದ್ದಾರೆಂದು ಹಿಂದಿನ ರಾತ್ರಿ ಹೆಂಡತಿಯಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದ.

ಆದರೆ ಇವತ್ತು ಯಾಕೋ ಮಂಕು ಬಡಿದವನಂತೆ ಕುಳಿತಿದ್ದುದನ್ನು ಕಂಡು ಹೆಂಡತಿ ಕೇಳಿದಳು- ‘ಕೊರೊನಾ ರೂಪಾಂತರಿ ಡೆಲ್ಟಾ ತಳಿ ನೂರು ದೇಶಗಳಲ್ಲಿ ಹರಡ್ತಿದೇಂತ ಚಿಂತೆ ಏನ್ರೀ?’

‘ಬರೀ ಡೆಲ್ಟಾ ಅಷ್ಟೇ ಅಲ್ಲ– ಆಲ್ಫಾ, ಬೀಟಾ, ಗಾಮಾ ಅಂತ ಇನ್ನೂ ಹಲವಾರು ಅಪಾಯಕಾರಿ ತಳಿಗಳಿವೆ’ ಎಂದ ಸೋಮು.

‘ನೀವು ಟೀವಿ ರಿಪೋರ್ಟರ್, ಸರ್ವಜ್ಞರಿದ್ದಂತೆ. ಯಾವ ತಳಿ ಆದ್ರೂ ಎಲ್ಲವನ್ನೂ ಏರಿದ ದನಿಯಲ್ಲಿ ಘೋಷಿಸ್ತೀರಿ. ನಾವೆಲ್ಲ ಅದನ್ನ ಬಾಯ್ಬಿಟ್ಟುಕೊಂಡು ನೋಡಿ ನಂಬ್ತೀವಲ್ಲಾ, ಯಾಕೆ ಚಿಂತೆ?’

‘ಅಲ್ಲ, ಅದಲ್ಲ’.

‘ಪೆಟ್ರೋಲ್, ಡೀಸೆಲ್ ಜೊತೆಗೆ ಅಡುಗೆ ಗ್ಯಾಸ್ ಸಿಲಿಂಡರ್ ಬೆಲೇನೂ ಹೆಚ್ಚಾಗಿದ್ದಕ್ಕಾ?’

‘ಉಹ್ಞೂಂ.

‘ಮತ್ತೆ ಯಾವ್ದುರೀ? ಬೀದಿನಾಯಿಗಳಿಗೆ ಆಹಾರ ಕೊಡ್ಬೇಕೂಂತ ದೆಹಲಿ ಹೈಕೋರ್ಟ್ ಆದೇಶ ನೀಡಿದೆಯಂತಾನಾ?’

‘ಮಹರಾಯ್ತಿ, ನಿಂಗೆ ಯಾವಾಗ್ಲೂ ತಮಾಷೇನೆ? ನೋಡಿಲ್ಲಿ...’ ಎಂದ ಸೋಮು ಪತ್ರಿಕೆ ಮುಂದೆ ಹಿಡಿದ– ‘ಸುದ್ದಿ ವೈಭವೀಕರಣ ಬೇಡ’ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ವಿವರಗಳಿದ್ದವು. ಲಖನೌ ಸಚಿವಾಲಯದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ರಕ್ಷಣೆಗೆ ಮುಂದಾಗದೆ, ಇಬ್ಬರು ಪತ್ರಕರ್ತರು ಅದರ ಚಿತ್ರೀಕರಣದಲ್ಲಿ ನಿರತರಾಗಿ ದ್ದುದನ್ನು ನ್ಯಾಯಾಲಯ ಖಂಡಿಸಿ ಅವರ ಜಾಮೀನು ಅರ್ಜಿಯನ್ನು ತಳ್ಳಿಹಾಕಿತ್ತು.

ಹೆಂಡತಿ ‘ಈ ಆದೇಶ ಪಾಲಿಸಿದರೆ ಸದ್ಯಕ್ಕಂತೂ ನಿಮಗೆ ಪ್ರೊಮೋಷನ್ ಇಲ್ಲ ಬಿಡಿ’ ಎಂದು ನಕ್ಕಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT